ಲಲಿತ’ಮ್ಮ’ ಪ್ರಸಂಗಗಳು: ದೇವದಾಸ್ ಸಿನೆಮಾ ಮತ್ತು ಚಪ್ಪಲಿ

ಶ್ಯಾಮಲಾ ಮಾಧವ 

ಬೆಂಗಳೂರಲ್ಲಿ ನೆಲಸಿರುವ ಹರಿಹರದ ಲಲಿತಮ್ಮ ಡಾ. ಚಂದ್ರಶೇಖರ್ ಅವರಿಂದ ಈ ಕೊರೊನಾ ಕಾಲದಲ್ಲಿ ದಿನವೂ ಬೆಳಿಗ್ಗೆ ಹನ್ನೊಂದು ಘಂಟೆಗೆ ಬರುವ ದೂರವಾಣಿ ಕರೆಗಳು ಹೊತ್ತು ತರುವ ಜೀವನಾನುಭವ ಕಥೆಗಳು ಅನೇಕ! ಎಂಬತ್ತೆಂಟರ ಪ್ರಾಯದ ಆ ಸ್ವರದ ಗಟ್ಟಿತನ, ಅಸ್ಖಲಿತ ಸ್ಪಷ್ಟ ಉಚ್ಚಾರ, ದಣಿವಿರದೆ ಓತಪ್ರೋತವಾಗಿ ಹರಿದು ಬರುವ ವಿಚಾರ ಲಹರಿ, ಪರಿಸರ ಕಾಳಜಿ, ಕೃತಿಗಳನ್ನೋದಿ ಮನದಲ್ಲುದಿಸಿದ ಭಾವಲಹರಿ, ಪುಸ್ತಕ ಪರಿಚಯ, ತಮ್ಮ ಸುದೀರ್ಘ ಜೀವನಯಾನದಲ್ಲಿ ನಡೆದ ಮರೆಯಲಾಗದ, ಮಥಿಸಬೇಕಾದ ಪ್ರಸಂಗಗಳು, ಸೇವಾಕ್ಷೇತ್ರದ, ಸಾಹಿತ್ಯಲೋಕದ ಹೊಳಹುಗಳು, ವೈದ್ಯನ ಮಡದಿಯಾಗಿ ಕಂಡುಂಡ ಜೀವನಾನುಭವಗಳು, ಸಾಹಿತ್ಯ ದಿಗ್ಗಜರೊಡನೆ ಬೆಸೆದ ಬಂಧದ ಘಟನಾವಳಿಗಳು ಎಲ್ಲವೂ ಇಸವಿ, ತಿಂಗಳುಗಳ ನಿಖರ ದಾಖಲಾತಿಯೊಂದಿಗೆ ಆ ಮಸ್ತಿಷ್ಕದಿಂದ ಹೊರಟು ನನ್ನ ಕಿವಿಗಳನ್ನು ತಲುಪುವ ಪರಿಗೆ ನಾನು ಅಕ್ಷರಶಃ ಬೆರಗಾಗಿದ್ದೇನೆ.

ವರ್ಷದ ಹಿಂದೆ ಲಲಿತಮ್ಮನವರ ಫೋನ್‍ಕರೆ ಪ್ರಥಮ ಬಾರಿಗೆ ಬಂದ ಬಳಿಕ, ಆಗೀಗ ಕರೆಗಳೂ, ಅವುಗಳ ಜೊತೆಗೇ ಸುದೀರ್ಘ ಪತ್ರಗಳೂ, ಪುಸ್ತಕಗಳೂ ಅಂಚೆ ಮೂಲಕ ನನ್ನನ್ನು ತಲುಪುತ್ತಿದ್ದುವು. ಕೊರೋನಾ ಪ್ರಭಾವದಿಂದ ಅಂಚೆ ನಿಂತು ಹೋದ ಬಳಿಕ, ಲಲಿತಮ್ಮ ನನಗೆ ಹೇಳಬೇಕಾದ ವಿಷಯಗಳಿಗಾಗಿ ಆರಿಸಿಕೊಂಡುದು, ಈ ಫೋನ್ ಕರೆಗಳು. “ಮುಂಜಾವ ನಾಲ್ಕೂವರೆಗೆ ಎದ್ದು, ಧ್ಯಾನ, ಓದು, ಬರಹ, (ಓದುವುದೂ, ಬರೆಯುವುದೂ ತುಂಬ ಇದೆ, ಅದಕ್ಕಾಗಿ ನೂರು ವರ್ಷಗಳ ವರೆಗಾದರೂ ಬದುಕಬೇಕು, ಎನ್ನುವವರು) ಕಾಫಿ, ತಿಂಡಿ ಎಲ್ಲ ಮುಗಿಸಿದ ಮೇಲೆ, ನನ್ನೊಳಗಿನ ದನಿ ಶ್ಯಾಮಲನೊಡನೆ ಮಾತನಾಡು, ಎನ್ನುತ್ತದೆ. ನಾನೇನು ಮಾಡಲಿ? ನೀವೇ ಹೇಳಿ”, ಎನ್ನುವ ಲಲಿತಮ್ಮ “ಇಷ್ಟು ಹೊತ್ತು ಮಾತನಾಡಿದರೆ ನಿಮಗೆ ತೊಂದರೆಯಾಗುವುದಿಲ್ವೇ, ಲಲಿತಮ್ಮಾ? ಗಂಟಲು ಆರಿದಂತಾಗುವುದಿಲ್ವೇ? ಆಯಾಸ ಅನಿಸುವುದಿಲ್ವೇ? ನಡುವೆ ನೀರು ಕುಡಿಯ ಬೇಕಾಗುವುದಿಲ್ವೇ?” ಎಂದು ಕೇಳಿದರೆ, “ಏನಿಲ್ಲ; ಹಿಂದೆಲ್ಲ ದಿನಾಲೂ ಎಂಬಂತೆ ಒಂದೂವರೆ ಗಂಟೆ ಭಾಷಣ ಮಾಡಿ ಅಭ್ಯಾಸ. ನನಗೆ ಏನೂ ತೊಂದರೆಯಾಗುವುದಿಲ್ಲ”, ಎಂಬ ಆಶ್ವಾಸ!

ಬಾಲ್ಯ ಕಳೆದ ತನ್ನೂರು ಜಾಲಮಂಗಲದ ಪ್ರಕೃತಿಯ ಬಗ್ಗೆ, ಅಲ್ಲಿ ತಾನು ಮೈಗೂಡಿಸಿಕೊಂಡ ಸೌಜನ್ಯದ ಸಹಬಾಳ್ವೆಯ ಬಗ್ಗೆ ಲಲಿತಮ್ಮನವರ ಮಾತುಗಳನ್ನು ನಾನು ಈಗಾಗಲೇ ಓದುಗರೆದುರು ಪ್ರಸ್ತುತ ಪಡಿಸಿರುವೆ. ಓತಪ್ರೋತವಾಗಿ ನನ್ನ ಕಿವಿಗಳಿಗಿಳಿದು ಮನದಲ್ಲಿ ಗುಡಿಕಟ್ಟಿದ ಮೌಲ್ಯಯುತ ಗಂಭೀರ ವಿಷಯ, ಸನ್ನಿವೇಶಗಳನ್ನು ಬರಲಿರುವ ಸುದಿನಗಳಿಗಾಗಿ ಕಾಪಿಟ್ಟು, ಹೆಚ್ಚು ಕಾಡಿಸದೆ ಮುದ ನೀಡುವ ಲಘು ಸನ್ನಿವೇಶಗಳನ್ನು ಲಲಿತ ಪ್ರಸಂಗಗಳು ಎಂಬ ಶೀರ್ಷಿಕೆಯಲ್ಲಿ ಒಂದೊಂದಾಗಿ ಓದುಗರೊಡನೆ ಹಂಚಿಕೊಳ್ಳುತ್ತಿರುವೆ.

ಪ್ರಸಂಗ – 1

ಹರಿಹರ ಮಹಿಳಾ ಸಮಾಜದ ಅಧ್ಯಕ್ಷೆಯಾಗಿದ್ದಾಗ ಆಗಿನ ವಿದ್ಯಾಮಂತ್ರಿ ನಾಗಮ್ಮ ಕೇಶವಮೂರ್ತಿ ಅವರನ್ನು ಕಾಣಲು ನಮ್ಮ ಸೆಕ್ರೆಟರಿ ಇಂದಿರಮ್ಮನೊಡನೆ ಹೋಗಿದ್ದೆ. ನಾಗಮ್ಮ ಇರಲಿಲ್ಲ; ಬರುವಾಗ ಎರಡು ಗಂಟೆಯಾಗಬಹುದು, ಅಂದರು. ಇನ್ನೂ ನಾಲ್ಕು ಗಂಟೆ ಸಮಯವಿತ್ತು. ತಿರುಗಿ ಹರಿಹರಕ್ಕೆ ಹೋಗಿ ಬರುವಷ್ಟು ಸಮಯವಿಲ್ಲ. ಎದುರಿಗಿದ್ದ ನಗರವಾಣಿ ಪತ್ರಿಕೆಯಲ್ಲಿ ವಸಂತಾ ಥಿಯೇಟರ್‍ನಲ್ಲಿ ದೇವದಾಸ್ ಸಿನೆಮಾ ಇದೆ, ಎಂದು ಕಂಡಿತು. ಹೋಗೋಣ, ಲಲಿತಮ್ಮ, ಅಷ್ಟು ಹೊತ್ತು ಇಲ್ಲೇ ಕುಳಿತೇನು ಮಾಡುವುದು, ಅಂದ್ರು ಇಂದಿರಾ. ಹೋದೆವು. ಹೌಸ್‍ಫುಲ್ ಆಗಿತ್ತು. ಮಹಡಿ ಮೇಲೆ ರೇಲಿಂಗ್ ಬಳಿಯಲ್ಲಿ ಎರಡು ಕಬ್ಬಿಣದ ಕುರ್ಚಿಯಲ್ಲಿ ಕುಳಿತು ದೇವದಾಸ್‍ನಲ್ಲಿ ಮುಳುಗಿ ಹೋದೆವು. ಆರಾಮವಾಗಿ ಕಾಲ್ಗಳನ್ನು ರೇಲಿಂಗ್ ಮೇಲಿಟ್ಟು ಕುಳಿತಿದ್ದೆ. ಚಿತ್ರದ ಭರಕ್ಕೆ ಸವೆದು ಹೋದ ಚಪ್ಪಲಿಗಳಲ್ಲೊಂದು ರೇಲಿಂಗ್ ಮೇಲಿಂದ ಜಾರಿ ಮಹಡಿ ಕೆಳಗೆ ಬಿದ್ದುಹೋಯ್ತು!

 

ಕೆಳಗೆ ಮೆಡಿಕಲ್ ಸ್ಟ್ಯೂಡೆಂಟ್ಸ್ ಕುಳಿತಿದ್ರು. ಚಪ್ಪಲಿ ಕಳಚಿಕೊಂಡು ಬಿದ್ದಾಗ, ಅವ್ರು ಸಿಳ್ಳೆ ಹಾಕಲಾರಂಭಿಸಿದರು. ಟಾರ್ಚ್ ಹಾಕಿ ನೋಡ್ತಿದ್ರು. ನಾನು ಸುಮ್ನೆ ಕೂತುಬಿಟ್ಟೆ. ಸಿನೆಮಾ ಮುಗಿದಾಗ, ಆ ಒಂದು ಚಪ್ಪಲಿಯನ್ನಲ್ಲೇ ಬಿಟ್ಟು ಎದ್ದು ನಡೆದೆ. ದೇವದಾಸ್ ನೋಡಿ ದುಃಖಭರದಿಂದ ಕಾಲಲ್ಲಿ ಒಂದೇ ಚಪ್ಪಲಿಯಿರುವುದನ್ನೂ ತಿಳಿಯದೆ ಇನ್ನೊಂದನ್ನು ಅಲ್ಲೇ ಬಿಟ್ಟು ನಡೆದಿದ್ದಾರೆ ಎಂದುಕೊಂಡ ಇಂದಿರಾ, ಇನ್ನೊಂದನ್ನು ಹಿಡಿದು ಬಂದು, “ಲಲಿತಮ್ಮಾ, ನೀವೆಷ್ಟು ಇನ್‍ವಾಲ್ವ್ ಆಗಿದ್ದಿರೆಂದರೆ, ಒಂದೇ ಚಪ್ಪಲ್ ಹಾಕಿ ನಡೀತಿದ್ದೀರಿ; ಇನ್ನೊಂದನ್ನು ಅಲ್ಲೇ ಬಿಟ್ಟು ಬಂದಿದ್ದಿರಿ, ತಕ್ಕೊಳಿ,” ಎಂದು ಮುಂದು ಮಾಡುವಾಗ, ಮೆಡಿಕಲ್ ಸ್ಟ್ಯೂಡೆಂಟ್ಸ್ ಇನ್ನೊಂದನ್ನು ಕೈಯಲ್ಲಿ ಹಿಡಿದು ಎದುರಾದರು! ನನ್ನ ಅವಸ್ಥೆ! ಏನ್ ಹೇಳ್ತೀರೀ?

ಪ್ರಸಂಗ – 2

1957ನೇ ಇಸವಿ. ನನಗೆ ನಾಲ್ಕು ಮಕ್ಕಳು. ಚಿಕ್ಕವಳು ಉಷಾಗೆ ಒಂದು ವರ್ಷ. ಮಕ್ಳಿಗೆಲ್ಲ ಎರಡು, ಒಂದೂವರೆ ವರ್ಷ ಅಂತರ. ನಮ್ ಡಾಕ್ಟ್ರು ಚಂದ್ರಶೇಖರ್ ರಾತ್ರಿ ಮನೆಗೆ ಬರುವಾಗ ಯಾವಾಗ್ಲೂ ಹತ್ತೂವರೆ ಗಂಟೆ. ಆ ದಿನ ಬಂದವ್ರು, ನಾಳೆ ಬೆಳಿಗ್ಗೆ ದಾವಣಗೆರೆಯಿಂದ ನನ್ನ ಫ್ರೆಂಡ್ಸ್ – ಗಂಡ, ಹೆಂಡತಿ ಇಬ್ರೂ ಡಾಕ್ಟರ್ಸ್ – ಬರ್ತಿದ್ದಾರೆ. ಬ್ರೇಕ್‍ ಫಾಸ್ಟಿಗೆ ಇರ್ತಾರೆ, ಅಂದ್ರು. ಅಷ್ಟು ರಾತ್ರಿ ನಾನೇನ್ ಮಾಡ್ಲಿ? ಸಾಲದ್ದಕ್ಕೆ ಈ ಚಿಳ್ಳೆ ಪಿಳ್ಳೆಗಳು – ಒಂದಕ್ಕೆ ಜ್ವರ, ಇನ್ನೊಂದಕ್ಕೆ ಹೊಟ್ಟೆ ಸರಿ ಇಲ್ಲ, ಹೀಗೆ ರಾತ್ರೆಯೆಲ್ಲ ನಿದ್ದೆ ಇಲ್ಲ. ಬೆಳಿಗ್ಗೆ ಎದ್ದು ಡಾಕ್ಟ್ರು ಯಾವಾಗಿನ ಹಾಗೇ ಟೆನಿಸ್ ಆಡೋಕೆ ಹೋದ್ರು. ಆಗೇನು, ಈವಾಗಿನ ಹಾಗೆ ಗ್ಯಾಸ್ ಸ್ಟೌವ್, ಮಿಕ್ಸರ್ ಎಲ್ಲ ಇದೆಯಾ? ನಾನು ಬೇಗ ಬೇಗ ಮಕ್ಳ ಕೆಲಸ ಮುಗಿಸಿ, ಒಲೆ ಉರಿಸಿ, ರವೆ ಹುರಿದ್ಕೊಂಡು, ಉದ್ದಿನ್‍ಬೇಳೆ, ಕಡ್ಲೆಬೇಳೆ, ಕಾಯಿ ಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು ಎಲ್ಲ ಹಾಕಿ ಉಪ್ಪಿಟ್ಟು ಮಾಡಿದೆ. ಮತ್ತೆ ಬೇರೆ ಬಾಣಲೆ ಇಟ್ಟು, ಪುನಃ ರವೆ ಹುರಿದು, ದ್ರಾಕ್ಷೆ, ಗೇರುಬೀಜ, ಏಲಕ್ಕಿ, ಕೇಸರಿ ಎಲ್ಲ ಹಾಕಿ ಕೇಸರಿಬಾತ್ ಮಾಡಿಟ್ಟೆ. ಕಾಫಿ ಡಿಕಾಕ್ಷನ್ ಹಾಕಿಟ್ಟು, ಹಾಲು ಕಾಯಿಸಿ ಆಗುವಾಗ, ನಮ್ ಡಾಕ್ಟ್ರೊಟ್ಟಿಗೆ ಅವ್ರು ಬಂದೇ ಬಿಟ್ರು. ಸೀರೆ ಬದಲಿಸ್ಲಿಕ್ಕೂ ನನಗೆ ಸಮಯವಿಲ್ಲ.

ಮನೇಲಿ ಕೆಲಸ ಮಾಡುವಾಗ ನಾನು ಹದಿನಾರು ಮೊಳದ ನೂಲಿನ್ ಸೀರೇನೇ ಉಡೋದು. ಮಕ್ಳು ಕೈಕಾಲಿಗೆ ತೊಡರಿ ಕೊಳ್ತಾವೆ ಅಂತ ನೆರಿಗೆ ಎತ್ತಿ ಸಿಕ್ಕಿಸಿದ್ದೆ. ಬೆಂಕಿ ಹತ್ರ ಕೆಲಸ ಅಂತ ಸೆರಗು ಸೊಂಟಕ್ಕೆ ಬಿಗಿದಿದ್ದೆ. ಆಯ್ತಲ್ಲ! ತಿಂಡಿ ಕಾಫಿ ಎಲ್ಲ ಜೋಡ್ಸಿ ಟೀಪಾಯಿಯಲ್ಲಿ ಇಡೋವಾಗ್ಲೂ ಈ ಮಕ್ಳು ಕೈ ಕಾಲಿಗೆ ಅಡ್ಡ ಬರೋವ್ರು. ಅಂತೂ ಎಲ್ಲ ಆಗಿ ಬಂದವ್ರು ಹೊರಟು ನಿಂತಾಗ, ಕೈ ಮುಗಿದೆ. ಅವ್ರು ನಮ್ ಡಾಕ್ಟ್ರಿಗೆ, ನಿಮ್ಮ ಮಿಸೆಸ್ ಅನ್ನು ಸ್ವಲ್ಪ ಕರೀರಿ, ಸಿಕ್ಲೇ ಇಲ್ಲ, ಅಂದ್ರು!

‍ಲೇಖಕರು nalike

May 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಲಲಿತಮ್ಮ ಚಂದ್ರಶೇಖರ್ ನನಗೆ ಹತ್ತಿರದ ಸಂಬಂಧದವರು. ಚಿಕ್ಕಂದಿನಿಂದಲೂ ಅವರ ಬರೆದ ಹಲವು ಪ್ರಸಂಗಗಳನ್ನು ಓದಿದ್ದೇನೆ.

    ಪ್ರತಿಕ್ರಿಯೆ
  2. Shyamala Madhav

    ಶ್ರವಣ ಕುಮಾರೀ, ಲಲಿತಮ್ಮ ಗೆ ಯಾರೆಂದು ತಿಳಿಯಲಿಲ್ಲ. ಸಾಧ್ಯವಾದರೆ ಅವರಿಗೆ ಕರೆ ಮಾಡಿ.ಫೋನ್ – 9741239328

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: