'ಅವಧಿ'ಗೆ 'ಅನಾಮಿಕಾ' ವಿದಾಯ

ನಾ ಬರತೇನಿನ್ನ ನೆನಪಿರಲಿ..
ಕಳೆದ ಮೂವತ್ತು ವಾರಗಳಲ್ಲಿ ಈ ಬರವಣಿಗೆ ಜೊತೆಗೆ, ಬರಹಕ್ಕಾಗಿ ಬದುಕನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಕ್ರಿಯೆಯ ಜೊತೆ ಒಂದು ಭಾವನಾತ್ಮಕ ಒಡನಾಟ ಬೆಳೆದು ಬಿಟ್ಟಿತ್ತು.
ಹಾಗಾಗಿ, ಈ ನಾಲ್ಕು ಮಾತುಗಳನ್ನ ನಾನು ನನಗೂ ಹೇಳಿಕೊಳ್ಳುತ್ತಿದ್ದೇನೆ…
ಸಂಬಂಧ, ವೃತ್ತಿ, ವ್ಯವಸ್ಥೆ… ಎಲ್ಲ, ಎಲ್ಲದರಲ್ಲೂ ಒಂದು ಕಾಲು ಹೊರಗಿಟ್ಟವಳಂತೆ ಆಡುವ ನಾನು, ವಿದಾಯವನ್ನ ಮಾತ್ರ ತುಂಬಾ ಅರ್ಥಪೂರ್ಣವಾಗಿ ಮಾಡುತ್ತೇನೆ ಎಂದಿವೆ ಜೊತೆಯಿರುವ ಜೀವಗಳೆಲ್ಲ (ಬಿಟ್ಟು ಹೋದ ಜೀವಗಳೂ).
ನಾನೂ ನಂಬಿದ್ದೇನೆ!!
ತಿಳಿಸಿ ಹೊರಡುವುದೇ ಅಥವಾ ಏಕ್ದಂ ಗಾಯಬ್ ಆಗುವುದೇ ಎಂದು ಯೋಚಿಸುವಾಗಲೆಲ್ಲ, ‘ಸಂಬಂಧ ಆಗಲಿ ಗಾಯ ಆಗಲಿ ಖುಲ್ಲಾ ಬಿಡಬಾರದು ಕೂಸೇ,’ ಎನ್ನುವ ಸಂಸ್ಕಾರ ಕಲಿಸಿದ ಬಡೆಮ್ಮಿಯ ಅಂತಃಕರಣ ನೆನೆಯುತ್ತ,
ಅನಾಮಧೇಯತೆಯ ವಿಶಾಲ ಅರ್ಥ ಮಾಡಿಸಿದ ಎಲ್ಲರಿಗೆ ವಂದಿಸುತ್ತ,
ನಾ ಬರತೇನಿನ್ನ ನೆನಪಿರಲಿ…

ಹ್ಯಾಮ್ಲೆಟ್‌ನ ತಾಯಿಯ ಪರಿಷ್ಕೃತ ಆವೃತ್ತಿಯಂಥವಳ ಒಂದು ಸ್ವಗತ…
‘‘ನಿನ್ನ ವಿಷಯವಾಸನೆಯ ಪ್ರಕಾರಗಳು ಎಷ್ಟು ಅಲೌಕಿಕ! ನಿನ್ನ ಸಮಸಮ ನಿನ್ನ ಮಗ ನಾನು ಜೀವಂತ ಇರುವಾಗ ನೀನು, ಹದಿಮೂರು ದಿವಸದೊಳಗಾಗಿಯೆ ಆ ಜಾರನ ಬೆನ್ನು ಹತ್ತಿದೆ. ನಿನ್ನ ಕಾಮವಾಸನೆಗೆ ಮಹಾಪೂರ ಬಂದ ಹಾಗಿದೆ! ಒಬ್ಬರನ್ನೊಬ್ಬರನ್ನು ಅಪ್ಪಿಕೊಳ್ಳಿರಿ, ಆಲಂಗಿಸಿರಿ, ಏಳು ಇಲ್ಲಿಂದ ನನಗೆ ಈ ನಿನ್ನ ಕಪ್ಪು ಮುಖ ತೋರಿಸಬೇಡ!’’
ಶೇಕ್ಸ್‌‌ಪಿಯರನ ‘ಹ್ಯಾಮ್ಲೆಟ್’ ನಾಟಕದ ನಾಲ್ಕನೇ ಅಂಕಿನ, ನಾಲ್ಕನೆಯ ಪ್ರವೇಶದಲ್ಲಿ ಬರುವ ಹ್ಯಾಮ್ಲೆಟ್ ಮತ್ತವನ ತಾಯಿಯ ನಡುವಿನ ಈ ಬಿರುಸಿನ ಸಂಭಾಷಣೆ ಓದುವಾಗಲೆಲ್ಲ ನನಗೆ ‘ಅವನು’, “ನೀನು ಹ್ಯಾಮ್ಲೆಟ್‌ನ ತಾಯಿಯ ಪರಿಷ್ಕೃತ ಆವೃತ್ತಿಯಂಥವಳು’’ ಎಂದು ಹಂಗಿಸಿದ್ದು ನೆನಪಾಗಿ ಮನಸ್ಸು ವಿಲವಿಲಗುಡುತ್ತದೆ.

ಮೊನ್ನೆ ಮಧ್ಯರಾತ್ರಿ ಫೋನು ಮಾಡಿದ ‘ಇನ್ನೊಬ್ಬ’, ‘‘ಹುಟ್ಟುಹಬ್ಬಕ್ಕೆ ವಿಷ್ ಮಾಡಲಿಲ್ಲವೆಂದಾಗಲಿ, ಉಡುಗೊರೆ ಕೊಡಲಿಲ್ಲವೆಂದಾಗಲಿ, ಮತ್ತೊಂದಕ್ಕಾಗಲಿ ಅತ್ತು ಕಾಡದೆ, ಮತ್ತೆ ಬೇಡದೆ, ತನ್ನನೆ ಮೀರಿ ತನ್ನನ್ನೇ ಕೊಡುವ ನಿನ್ನಂಥ ಹೆಣ್ಣು ಈ ಜಗತ್ತಿನಲ್ಲಿ ಮತ್ತೊಬ್ಬಳಿಲ್ಲ ಎಂದು ಹೇಳಲು ಕೆಲವು ಅಡ್ಡಿಗಳಿರಬಹುದು. ಆದರೆ ನಿನ್ನಂಥವಳು ನೀನೊಬ್ಬಳೆ. ಸ್ಪೆಷಲ್ ಎಡಿಷನ್ ಸಿಂಗಲ್ ಕಾಪಿ! ನಿನಗೆ ಬೇಕು ಎಂದಾಗ ಸಿಗಲು, ಸಮಯ ಕೊಡಲು ಸಾಧ್ಯವಾಗಲಿಲ್ಲ,’’ ತಪ್ಪಾಯಿತು ಎಂದು ಗೋಳಾಡುತ್ತಿದ್ದಾಗ, ಕಳುಹಿಸಿದ ಮೆಸೇಜ್‌ಗಳನ್ನು ಓದಿಯೂ ನಿಶ್ಯಬ್ದವಾಗುಳಿದು, ಮಾಡಿದ ಕರೆಗಳನ್ನು ನಿಷ್ಕಾರಣವಾಗಿ ಕಡಿದು, ನನ್ನ ಅಸ್ತಿತ್ವವನ್ನೇ ಅಲಕ್ಷಿಸಿದ ಅತ್ಯಹಮಿಕೆಯ ಕೃತ್ಯ ಎಸಗಿದವನ ಮೇಲೆ ಮುಯ್ಯಿ ತೀರಿಸಿಕೊಂಡ ಸಮಾಧಾನವುಂಟಾಗಿದ್ದಂತೂ ನಿಜ.
ಬೇರೆ ಅಗತ್ಯಗಳನ್ನು ಹೇಗಾದರೂ ಪೂರೈಸಿಕೊಳ್ಳಬಹುದು, ಭಾವನಾತ್ಮಕ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುವುದರ ಅರಿವಿಲ್ಲದ ಇಂಥವರ ಕೈಗೆ ಸಿಗದೆ ತಪ್ಪಿಸಿಕೊಳ್ಳಬೇಕೆನಿಸುತ್ತದೆ. ಮತ್ತೆ, ಧೀರ್ಘಕಾಲ ಒಬ್ಬನೊಟ್ಟಿಗೇ ಇರಬೇಕೆನ್ನುವ ಯೋಚನೆಯೇ ಬಹಳ ತೊಡಕಿನದು; ಜಟಿಲವಾದದ್ದು ನನಗೆ. ಆ ಭಾವ ಒಂದು ಕ್ಷಣ ಕಾಲಕ್ಕಷ್ಟೇ ಪ್ರಾಪ್ತಿಸಿದ್ದರೂ ಅದರಲ್ಲಿ ತಲ್ಲೀನಳಾಗಿದ್ದ ಅನುಭವ ಸುಮಾರು ದಿನವಿರುತ್ತದೆ. ಮುಂದೆ ತಿರುಗಿ ಅವನೊಟ್ಟಿಗೆ ಅಷ್ಟೇ ತಲ್ಲೀನತೆ ಉಳಿಯುವುದಿಲ್ಲ. ಕೊನೆ-ಕೊನೆಗೆ ಯಾಂತ್ರಿಕವಾಗುತ್ತದೆ. ಅದು ಯಾಂತ್ರಿಕವಾದಷ್ಟೂ ಹಿತ ಕಡಿಮೆಯಾಗಿ ಮತ್ತೆ ಹುಡುಕಾಟ ಶುರುವಾಗುತ್ತದೆ. ಬದುಕನ್ನು ವಿಶೇಷವಾಗಿ ಕೆರಳಿಸುವ ಹೊಸತನ ಬೇಕಿರುವುದರಿಂದ, ದೇಹದ ಹಸಿವನ್ನು ಮೀರಿದ ಕನಸುಗಳನ್ನು ಕಣ್ಣ ತುಂಬಿಸದವರಿಂದ ನಾನು ದೂರ ಬಂದಿದ್ದೇನೆ. ಇದರರ್ಥ ವ್ಯಕ್ತಿಗಳನ್ನು ಉಳಿಸಿಕೊಳ್ಳಲಿಲ್ಲ ಎಂದಲ್ಲ, ಬದುಕಿನ ಚಲನೆಯಲ್ಲಿ ಲವಲವಿಕೆ ಇಟ್ಟುಕೊಳ್ಳದೆ ನೌಕರಿ, ಸಂಬಳ, ಜವಾಬ್ದಾರಿಗಳ ಕಡೆಗೆ ದೃಷ್ಟಿನೆಟ್ಟು ತಮಗೆ ಬೇಕು ಎಂದಾಗ ಮಾತ್ರ ನನ್ನನ್ನು ಸಂಪರ್ಕಿಸುವ ಅವರ ಕ್ರಮ ರೇಜಿಗೆ ಹುಟ್ಟಿಸುತ್ತದೆ.
ಹಾಗಂತ ನನಗೆ ಯಾವ ಸಮಸ್ಯೆಗಳೂ ಇಲ್ಲವೆಂದಲ್ಲ. ಮೊನ್ನೆ ಫೋನು ಮಾಡಿದ ಅವ್ವ, “ನೀನು ನಮ್ಮನ್ನು ಸಾಕುತ್ತಿ ತಾನೇ?’’ ಎಂದು ಮತ್ತೆ ಖಚಿತ ಪಡಿಸಿಕೊಂಡಳು. ತನ್ನ ಮನೆ ತಾಪತ್ರಯಕ್ಕೆ ದೊಡ್ಡಕ್ಕ ನಾನು ಕೊಡಿಸಿದ್ದ ಬಂಗಾರದ ಓಲೆ‌ಗಳನ್ನು ಎರಡನೆಯ ಸಲವೂ ಮಾರಿದಳು. ಕಾಕಾನ ಮಗಳಿಗೆ ಮತ್ತೆ ಅಬಾರ್ಷನ್ ಆಯಿತು, ಕಸಿನ್ ಪ್ರೀತಿಸಿದ ಹುಡುಗನನ್ನು ಅವಳ ಅಪ್ಪ ಅಮ್ಮ ಒಪ್ಪದಿದ್ದಕ್ಕೆ ಕರೆ ಮಾಡಿ ಅತ್ತಳು. ಹೀಗೆ ಮುಗಿಯದ ಈ ಜಂಜಾಟಗಳಿಂದ ಮನಸು ಕುದಿವಾಗ, ಯಕ್ಷಿಣಿಗೆ ಒಳಗಾದಂತೆ ಕಾಲ-ದೇಶ ಮರೆತು ಬಿಡಲು ಸಾಧ್ಯವಾಗುವುದು ಬದುಕಿನ ಗುರಿ ಇರದ ತಿರುಗಾಟಗಳಲ್ಲಿ. ಇಲ್ಲಿ ಸಿಕ್ಕುವ ಹೃದ್ಯಶಾಂತಿಯಿಂದ ಮಾತ್ರ. ಕಾಲ್ನಡಿಗೆಯಾದರೂ ಸರಿ, ವಾಹನ ಪ್ರಯಾಣದಲ್ಲಾದರೂ ಸರಿ ನನಗೆ ಅಡ್ಡದಾರಿಯ ಹುಚ್ಚು. ದಾರಿಯಲ್ಲಿ ಬಾಣದ ಗುರುತಿದ್ದರೂ ಒಂದಷ್ಟು ದೂರ ತಪ್ಪುದಾರಿಯಲ್ಲಿ ಹೋಗಿ, ವಾಪಸ್ಸು ಬಂದ ಮೇಲೆಯೇ ಗಮನಿಸಿ ಸರಿಯಾದ ದಾರಿಯಲ್ಲಿ ತಿರುಗುತ್ತೇನೆ.
ಹಾದಿಯಲ್ಲಿನ ಒಂದೊಂದು ತಿರುವೂ ನಂಬಿಕೆ ಹುಟ್ಟಿಸುತ್ತದೆ. ತಿರುಗಿದೊಡನೆಯೆ ಪುನಃ ಮನೋವೇದನೆ, ದಣಿವು, ಅನಾವಶ್ಯಕ ತಳಮಳ ಎನ್ನುವುದು ಗೊತ್ತಿದ್ದರೂ ನನ್ನನ್ನು ನನ್ನನ್ನಾಗಿಸುವುದು ಇಂಥಹ ಅರ್ಥವಿಲ್ಲದ ಹುಚ್ಚು ಪಯಣಗಳೇ. ಇಂಥಹ ಪ್ರಯಾಣಗಳಲ್ಲಿ ಸಿಗುವ ಸಾಂಗತ್ಯದಿಂದ ದೊರಕುವ ನಶೆಯಂತಹ ಅನುಭೂತಿ ಬದುಕನ್ನು ಎದುರಿಸಲು ಬೇಕಾಗುವ ವಿಚಿತ್ರ ಅಮಲು ಕೊಡುತ್ತದೆ ನನಗೆ. ಬೋದಿಲೇರ್, ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು. ‘ಅದೊಂದೇ – ಒಂದೇ ಪರಿಹಾರ ಸಮಸ್ಯೆಗೆ! ಏನನ್ನು ಕುಡಿಯುವುದು? ವೈನ್, ಕಾವ್ಯ, ಋಜುತ್ವ… ಯಾವುದನ್ನಾದರೂ ಕುಡಿಯುತ್ತಿರಬೇಕು ಮಾತ್ರ..’ ಎಂದು ಹೇಳಿದ್ದೂ ಇದೇ ಕಾರಣಕ್ಕಿಬೇಕು ಎನಿಸುತ್ತದೆ.
ವ್ಯಕ್ತಿಗಳನ್ನು ಗೆಲ್ಲುವ ನನ್ನ ಸಾಮರ್ಥ್ಯದ ಬಗ್ಗೆ ನನಗೆ ಶಂಕೆಯೇ ಇಲ್ಲ ಎಂದು ಜಂಭದಿಂದ ಓಡುತ್ತಿರುವವಳಿಗೆ ವರ್ಷದ ನಂತರ ಮೊನ್ನೆ ಸಿಕ್ಕ ‘ಮತ್ತೊಬ್ಬ’, ‘‘ನಿನ್ನೆಗಿಂತ ಇಂದು ಚೆಂದವೆನಿಸುತ್ತೀ. ನಿನ್ನೆಡೆಗಿನ ಭಾವ ಬದಲಾಗುತ್ತಲೇ ಇಲ್ಲ. ಒಂದು ರಾತ್ರಿ ನಿನ್ನೊಂದಿಗೆ ಕಳೆಯಬೇಕು, ಬೆಳಗಿನವರೆಗೆ ನಿನ್ನ ಪ್ರೀತಿಸಬೇಕು. ನನ್ನ ಮೊದಲೇನಿದ್ದರೂ ನಿನ್ನೊಟ್ಟಿಗೆ. ಬೆನ್ನ ಹಿಂದೆ ಬಿದ್ದ ಹುಡುಗಿಯರನ್ನೆಲ್ಲ ಬಿಟ್ಟು, ನಿನಗೆಂದೇ ಮೀಸಲಿಟ್ಟವನ ಭಂಡಾರವನ್ನು ನೀನೇ ಒಡೆಯಬೇಕು,’’ ಎಂದು ಮಾತಿನಲ್ಲೇ ಬೆತ್ತಲಾಗಿ ನಿಂತವನಿಗೆ ಹೂಂ ಎನ್ನಲು ಸಾಧ್ಯವಾಗಲಿಲ್ಲ. ಕಾಲಕಾಲಕ್ಕೆ ಹೊಸತಿನ ಸೇರ್ಪಡೆಗೆ ಅವಕಾಶವಿಲ್ಲದ, ತಪ್ಪುಗಳೇ ಇಲ್ಲದ ನಿರ್ಜೀವ ಡಿಕ್ಷನರಿಯಂಥಹ ನಿಜದ ಪ್ರೀತಿ ಬೋರ್ ಹೊಡೆಸುತ್ತದೆ ನನಗೆ.
ಎಫ್ ಬಿ, ವಾಟ್ಸ್ಯಾಪ್, ಸಿರಿಯಲ್, ಒಡವೆ, ಶಾಪಿಂಗ್ ಊಂಹೂಂ ಇವು ಯಾವೂ ನನ್ನ ಮನಸಿಗೆ ಕವಿದ ಒಂಟಿತನವನ್ನು ಓಡಿಸುವಷ್ಟು ಶಕ್ತವಿಲ್ಲವಾದ್ದರಿಂದ ವ್ಯಕ್ತಿಗಳನ್ನು ಬದಲಾಯಿಸದೆ ಹೋದರೆ, ಸಾವಿನ ನಾಡಿನಲ್ಲೂ ಜೀವ ರಸದ ಹೊನಲು ಹರಿಸುವ ತಾಕತ್ತಿರುವ ನಾನು ಡಿಪ್ರೆಷನ್‌ಗೆ ಜಾರುತ್ತೇನೆ. ಎಲ್ಲರಿಗಿಂತ ತುಸು ಹೆಚ್ಚೇ ಗುಣದೋಷಗಳನ್ನು ಹೊಂದಿರುವ ನನಗೆ ಏಕವ್ಯಕ್ತಿ ಮತ್ತು ನಿಷ್ಠೆ ಎರಡನ್ನೂ ಸೇರಿಸಿ ಎರಡರ ಸಾಧ್ಯತೆಯನ್ನೂ ಕೆಡಿಸುವ ದಾರಿಗಿಂತ ಅವನ್ನು ಬೇರೆ ಬೇರೆಯಾಗಿ ನೋಡುವುದೇ ಸರಿ ಎನಿಸಿದೆ. ವ್ಯಕ್ತಿಗಳೊಟ್ಟಿಗಿನ ಈ ಕ್ರಮಿಸುವಿಕೆ ಮರುಧರೆ(ಮರಭೂಮಿ)ಯಂತಹ ಒಡಲನ್ನು ತಡವಿ, ತಣಿಸಿ ಮೋಡಿ ಹಿಡಿಸುವ ಬಣ್ಣದ ಕಣಜ ನನಗೆ.
ಗಾಢವಾಗಿ ಬದುಕಬೇಕು ಎನ್ನುವ ವಿಷಯದಲ್ಲಿ ನಾಳೆಗಳೇ ಇಲ್ಲ ಎನ್ನುವಂತೆ ಪ್ರೇರೆಪಿಸುವ ಶಕ್ತಿ ಯಾವುದು ಎನ್ನುವುದೂ ಗೊತ್ತಾಗಿಲ್ಲ. ಜೀವನವನ್ನು ವ್ರತವೆಂದು ಪರಿಗಣಿಸಿ, ನೇಮಗೆಡದೆ ಅವಡುಗಚ್ಚಿ ಜೀವಿಸುವುದೂ ನನ್ನಿಂದ ಸಾಧ್ಯವಿಲ್ಲ. ಆದರೆ, ಇದು ಸಾಧಿಸಿ ಮುಗಿಸಿ ಬಿಡುವ ಸಾಧೆನೆಯಂತಲ್ಲ. ಜತೆ-ಜತಗೆ ಸಾಗುತ್ತ, ಭಾವ -ಬುದ್ಧಿಗಳನ್ನು ವಿಕಸಿತಗೊಳಿಸಿಕೊಳ್ಳುತ್ತ, ವಿಕಾಸವಾಗುತ್ತ ಮುಂದುವರಿಯುತ್ತ ಹೋಗುವಂಥದು ಎನ್ನುವುದು ಅರ್ಥವಾಗಿದೆ. “ಹ್ಯಾಮ್ಲೆಟ್‌ನ ತಾಯಿಯ ಪರಿಷ್ಕೃತ ಆವೃತ್ತಿ” ಎನ್ನುವವರೂ ಅರ್ಥ ಮಾಡಿಕೊಂಡರೆ, “ಅರ್ಥೈಯಿಸುವ ಕ್ರಿಯೆ ಇನ್ನೂ ಸಮೃದ್ಧವಾಗಬಲ್ಲದು,’’ ಎಂದು ಮಾತ್ರ ಹೇಳಬಲ್ಲೆ.

‍ಲೇಖಕರು avadhi

May 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

6 ಪ್ರತಿಕ್ರಿಯೆಗಳು

  1. Pradee Jeeva

    ನಿಮ್ಮ‌ ಪ್ರತೀ ಅಂಕಣವೂ ನನಗೇ ಬರೆದಂತೆನಿಸಿ ಓದಿದ್ದಿದೆ. ಅದರ ಎಷ್ಟೋ ಸಂಗತಿಗಳು ನನ್ನ ನಿಜಜೀವನಕ್ಕೆ ಹತ್ತಿರ. ಅಂತೆಯೇ ನಿಮ್ಮ ಬರಹದ ಓದಿನ ಸುಖಕ್ಕಾಗಿ ಕಾದಿದ್ದಿದೆ, ಓದಿ ‘ಅರೆ, ನನ್ನದೇ ತುಮುಲಗಳು, ಭಾವನೆಗಳೆಲ್ಲ ಇವರಿಗೇಗೆ ತಿಳಿಯಿತು ಹೀಗೆ ಬರೆಯಲು’ ಎಂದು ಅಚ್ಚರಿಪಟ್ಟಿದ್ದಿದೆ. ವ್ಯಕ್ತಿ ಮತ್ತು ವಸ್ತುಗಳ ಮೋಹ ಈಗಷ್ಟೇ ಕಳಚಲಾರಂಭಿಸಿದೆ. ಏಕಕಾಲದಲ್ಲಿ ಅವಧಿಗೆ ನಿಮ್ಮ ವಿದಾಯ. ಸತ್ಯಕ್ ಹೇಳುದ; ಏಕೋ ಹೃದಯ ಕೊಂಚ ಭಾರವೆನಿಸುತ್ತಿದೆ. ಇಲ್ಲೇ ಇರಿ ಎಂದು ಹೇಳಲಾರೆ. ಸಿಗೋಣಲ್ಲ ಎಂದಾದರೂ… ಅಂತೂ ನಿಮ್ಮ ಅಂಕಣವನ್ನು ತುಂಬಾ ಮಿಸ್ ಮಾಡ್ಕೊಳ್ತೀನಿ…

    ಪ್ರತಿಕ್ರಿಯೆ
  2. Renuka Ramanand

    ಈ ನೀನು ನಮ್ಮನ್ನು ಸಾಕುತ್ತಿ ತಾನೆ ಎಂಬುದರ ಕುರಿತಾಗಿ ನನ್ನದೂ ಒಂದು ಪುರಾಣವಿದೆ..
    ಏನೇ ಇರಲಿ ಒಂದೆರಡು ಅವಸರದ ಕಂತುಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಬಹಳ ಚನ್ನಾಗಿತ್ತು ನಿಮ್ಮ ಎಲ್ಲಾ ಅಂಕಣ.. ಎಲ್ಲಿ ಹೋಗುವಿರಿ ಮತ್ತೆ ಬನ್ನಿ.. ಕಾಯುವೆವು

    ಪ್ರತಿಕ್ರಿಯೆ
  3. Nandini

    ಅನಾಮಿಕಾ….ನಿಮಗೊಂದು‌ಹೆಸರು ಕೊಟ್ಟು‌ನೋಡುವ ಬಯಕೆ ಇಲ್ಲ. ಆದರೆ ನೀವು ‌ಹೆಣ್ಣು‌ಕುಲಕ್ಕೆ ಮಾದರಿ ಎನಿಸ್ತೀರಿ…ಇನ್ನೂ ಎಮೋಷನಲ್ ಫೂಲ್ ಆಗಿಯೇ ಉಳಿದ ‌ನನ್ನಂಥವರು ನಿಮ್ಮ ಬರಹಗಳಿಂದ ಕಲಿಯಬೇಕಾದ್ದು ಬಹಳ ಇದೆ..

    ಪ್ರತಿಕ್ರಿಯೆ
  4. Nishi

    ಅನಾಮಿಕ, ನಿಮ್ಮ ಅಂಕಣಗಳನ್ನು ಓದುತ್ತಿದ್ದಾಗ, ನಾನು ಇಪ್ಪತ್ತೈದು ವರ್ಷಗಳ ಹಿಂದಿನ ನನ್ನ ಮನಸ್ಥಿತಿ, ನಾನು ಯೋಚಿಸುತ್ತಿದ್ದ, ಆಡುತ್ತಿದ್ದ ರೀತಿ ನೆನಪಾಯಿತು. ನಿಮ್ಮ”ಈ ಕಡೆ ಬಂದ್ರೆ ಮನೆಗೆ ಬನ್ನಿ” ಅಂಕಣ ಓದಿದಾಗ ಇಲ್ಲಿದೆ ನನ್ನ ಈಮೇಲ್, ನಿಮ್ಮ ವಿಳಾಸ ಕೊಡಿ. ಆ ಕಡೆ ಬಂದಾಗ ನಿಮ್ಮ ಮನೆಗೆ ಬರುತ್ತೇನೆ ಎಂದು ಕೊಂಡೆ ಕೂಡ.. ಮುಂದೆಯೂ ನಿಮ್ಮಿಂದ ಇನ್ನೂ ಬರಹಗಳು ಬರಲಿ ಎಂದು ಹಾರೈಸುತ್ತೇನೆ. Meanwhile, all the best to you.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: