ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ ಭಾಗ – 2

ಮೂಲ: ಎಲಿ ವೀಸೆಲ್
ಕನ್ನಡಕ್ಕೆ: ಜೆ ವಿ ಕಾರ್ಲೊ

(ಬೂನಾ ಶಿಬಿರಾದಿಂದ ಹೊರಟಾಗ ನಮ್ಮ ಡಬ್ಬಿಯಲ್ಲಿ ನೂರು ಜನ ಇದ್ದಲ್ಲಿ, ಈಗ ಕೇವಲ ಹನ್ನೆರಡು ಜನರು ಮಾತ್ರ ಜೀವಂತ ಉಳಿದಿದ್ದೆವು. ಈ ಹನ್ನೆರಡು ಜನರಲ್ಲಿ ನಾನು, ನನ್ನ ಅಪ್ಪನೂ ಇದ್ದೆವು. ನಾವು ಬುಕೆನ್ವಾಲ್ಡ್ ತಲುಪಿದ್ದೆವು…)

ಶಿಬಿರದ ಪ್ರವೇಶ ಧ್ವಾರದಲ್ಲಿ ಎಸ್ಸ್.ಎಸ್ಸ್. ಆಫಿಸರ್‌ಗಳು ನಮ್ಮನ್ನು ಎದುರುಗೊಳ್ಳಲು ಕಾಯುತಿದ್ದರು. ಅವರು ನಮ್ಮ ತಲೆಗಳನ್ನು ಎಣ ಸಿ, ಹಾಜರಿ ಕರೆಯುವ ಮೈದಾನದ ಕಡೆಗೆ ಹೋಗಲು ಧ್ವನಿವರ್ಧಕದ ಮೂಲಕ ಆದೇಶಿಸಿದರು.

“ಒಂದು ಹಿಂಡಿನಲ್ಲಿ ನೂರು ಜನರಂತೆ, ಸಾಲಿಗೆ ಐದು ಜನರಂತೆ ನಿಂತುಕೊಳ್ಳಿ..” ಎಂದು ಮತ್ತೊಮ್ಮೆ ಆದೇಶಿಸಿದರು. ಅಪ್ಪ ಎಲ್ಲಿ ನನ್ನಿಂದ ತಪ್ಪಿಸಿಕೊಳ್ಳುವರೋ ಎಂಬ ಭೀತಿಯಿಂದ ನಾನು ಅಪ್ಪನ ಕೈಯನ್ನು ಬಿಗಿಯಾಗಿ ಹಿಡಿದಿದ್ದೆ.

ನಾವು ನಿಂತಿದ್ದ ಜಾಗದ ಸನಿಹವೇ ಹೆಣಗಳನ್ನು ಸುಡುವ ಬೆಂಕಿ ಗೂಡಿನ ಹೊಗೆ ಕೊಳವೆಯು ಆಕಾಶಕ್ಕೆ ಬಾಯ್ದೆರೆದು ನಿಂತಿತ್ತು.

ಈ ಮೊದಲು ಬುಕೆನ್ವಾಲ್ಡ್ನ ಅತಿಥಿಯಾಗಿದ್ದವನೊಬ್ಬನು, ಎಲ್ಲಾ ಕೈದಿಗಳು ಸ್ನಾನ ಮಾಡಿದ ನಂತರ ಎಲ್ಲರಿಗೆ ಬೇರೆ ಬೇರೆ ಬ್ಲಾಕುಗಳಿಗೆ ಕಳಿಸುತ್ತಾರೆ ಎಂಬ ಮಾಹಿತಿಯನ್ನು ಕೊಟ್ಟ. ಬಿಸಿ ನೀರಿನ ಸ್ನಾನ ಎಂದು ಕೇಳಿದ ಕೂಡಲೇ ನನ್ನ ಮನಸ್ಸು ಪ್ರಫುಲ್ಲಿತಗೊಂಡಿತು. ಅಪ್ಪ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಅವರು ನನಗೆ ಕೇಳಿಸುವಷ್ಟು ಜೋರಾಗಿ ಉಸಿರಾಡುತ್ತಿದ್ದರು.

“ಅಪ್ಪಾ.., ಇನ್ನೇನು ಸ್ವಲ್ಪ ಹೊತ್ತು. ಆಮೇಲೆ ನೀನು ಆರಾಮವಾಗಿ ವಿಶ್ರಮಿಸಬಹುದು..” ನಾನೆಂದೆ.
ಅಪ್ಪ ಉತ್ತರಿಸಲಿಲ್ಲ. ನಾನೂ ಆಯಾಸಗೊಂಡಿದ್ದನಾದ್ದರಿ೦ದ ಅಪ್ಪನ ಮೌನದಿಂದ ಅಷ್ಟೊಂದು ವಿಚಲಿತನಾಗಲಿಲ್ಲ. ಯಾವಗೊಮ್ಮೆ ಮಲಗುತ್ತೇನೋ ಎಂಬ ಕಾತುರದಲ್ಲಿದ್ದೆ.

ಆದರೆ, ಸ್ನಾನದ ಮನೆಗೆ ತಲುಪುವ ಹಾದಿ ಅಷ್ಟು ಸಲೀಸಾಗಿರಲಿಲ್ಲ. ಹಾದಿಯುದ್ದಕ್ಕೂ ನೂರಾರು ಕೈದಿಗಳು ತುಂಬಿದ್ದರು. ಇವರನ್ನು ನಿಯಂತ್ರಿಸಲು ಅಲ್ಲಿದ್ದ ಕಾವಲುಗಾರರಿಗೆ ಆಗುತ್ತಿರಲಿಲ್ಲ. ಅವರು ಮನ ಬಂದ೦ತೆ ದೊಣ್ಣೆಗಳನ್ನು ಬೀಸುತ್ತಿದ್ದರಾದರೂ ಪ್ರಯೋಜನವಾಗುತ್ತಿರಲಿಲ್ಲ. ನಿಶ್ಶಕ್ತ ಕೈದಿಗಳಿಗೆ ಸ್ನಾನಗೃಹಗಳನ್ನು ಹೊಕ್ಕಲು ಸಾಧ್ಯವೇ ಆಗದಂತ ಪರಿಸ್ಥಿತಿ ಅಲ್ಲಿ ನಿರ್ಮಾಣಗೊಂಡಿತ್ತು. ಅಂತ ಕೈದಿಗಳು ನಿಂತಲ್ಲಿಯೇ ಹಿಮಚ್ಛಾದಿತ ಮೈದಾನದ ಮೇಲೆ ಕುಳಿತುಕೊಂಡರು. ಅಪ್ಪನೂ ಅದಕ್ಕಾಗಿಯೇ ಕಾಯುತ್ತಿದ್ದರು.

“ನನ್ನಿಂದ ಆಗುತ್ತಿಲ್ಲ ಮಗ, ನಾನು ಇಲ್ಲಿಯೇ ಸಾಯುತ್ತೇನೆ..” ಎಂದು ಅವರು ನರಳತೊಡಗಿದರು. ಅವರು ನನ್ನನ್ನು ಹಿಮದ ರಾಶಿ ಬಿದ್ದಿದ್ದ ಒಂದು ಜಾಗದ ಬಳಿಗೆ ಎಳೆದುಕೊಂಡು ಹೋದರು. ಆ ರಾಶಿಯೊಳಗಿನಿಂದ ಹರಕಲು ಕಂಬಳಿಗಳನ್ನು ಹೊದ್ದ ಮಾನವಾಕೃತಿಗಳು ಕಾಣ ಸುತ್ತಿದ್ದವು.

“ನನ್ನನ್ನು ಕ್ಷಮಿಸು ಮಗ.. ನನಗೆ ನಿಲ್ಲಲು ಆಗುತ್ತಿಲ್ಲ. ನನಗೆ ಇಲ್ಲೇ ಬಿಡು. ನನ್ನ ಸ್ನಾನದ ಸರದಿ ಬಂದಾಗ ಎಬ್ಬಿಸು.” ಎಂದರು.

ನಾನು ಸಿಟ್ಟಿನಿಂದ ಕೂಗಾಡಲು ಬಾಯ್ದೆರೆದೆ. ಇಷ್ಟೊಂದು ಹೋರಾಡಿ ಇಲ್ಲಿವರೆಗೆ ಬದುಕುಳಿದು ಒಂದು ಬಿಸಿ ಬಿಸಿ ಸ್ನಾನ ಮಾಡಿ ಆರಾಮವಾಗಿ ಮಲಗಿ ನಿದ್ದೆ ಹೋಗಲು ಅವಕಾಶವಿರುವಾಗ ಅಪ್ಪನನ್ನು ಸಾಯಲು ಬಿಡುವಷ್ಟು ಕಠೋರನೇ ನಾನು?

“ಅಪ್ಪಾ..ಅಪ್ಪಾ!” ನಾನು ಅವರನ್ನು ಹಿಡಿದು ಅಲ್ಲಾಡಿಸಿ ಕೂಗಿ ಹೇಳಿದೆ. “ಇಲ್ಲ, ಇಲ್ಲ. ಸುಮ್ಮಸುಮ್ಮನೆ ಜೀವ ಕಳೆದುಕೊಳ್ಳಬೇಡಿ..!”
ಅವರು ಬಿಕ್ಕತೊಡಗಿದರು.

“ಸಿಟ್ಟಾಗ ಬೇಡ ಮಗ. ನಿನ್ನ ಮುದಿ ಅಪ್ಪನ ಮೇಲೆ ತುಸು ಕರುಣೆ ತೋರಿಸು..ನಾನಿಲ್ಲಿ ಸ್ವಲ್ಪವೇ ಹೊತ್ತು ವಿಶ್ರಮಿಸಿಕೊಳ್ಳುತ್ತೀನಿ..ಸ್ವಲ್ಪವೇ ಹೊತ್ತು ಕಂದ. ನನಗೆ ತುಂಬಾ ಆಯಾಸವಾಗಿದೆ…ಮೈಯಲ್ಲಿ ಏನೂ ಶಕ್ತಿ ಇಲ್ಲ. ದಯವಿಟ್ಟು ಮಗಾ..” ಅವರು ಚಿಕ್ಕ ಮಗುವಿನಂತಾಗಿದ್ದರು. ಅಸಹಾಯಕ ಮಗು.
“ಅಪ್ಪಾ.. ಯಾಕೋ ನೀವು ಇಲ್ಲಿ ಇರುವುದು ನನಗೆ ಸರಿ ಕಾಣ ಸುತ್ತಿಲ್ಲ..” ಅವರ ಸುತ್ತ ಚದುರಿ ಬಿದ್ದಿದ್ದ ಹೆಣಗಳನ್ನು ತೋರಿಸುತ್ತಾ ನಾನು ಹೇಳಿದೆ.

“ನನಗೂ ಕಾಣ ಸುತ್ತೆ ಮಗ. ಅವರೂ ನನ್ನಂತೆಯೇ ಅಸಹಾಯಕರಾಗಿ ಮಲಗಿದ್ದಾರೆ. ಪಾಪ, ವಿರಮಿಸಿಕೊಳ್ಳಲಿ.”
“ಅಪ್ಪಾ!.. ನಾನು ಕಿರುಚಿದೆ. ಅವರು ವಿರಮಿಸಿಕೊಳ್ಳುತ್ತಿಲ್ಲ. ಅವರು ಸತ್ತಿದ್ದಾರೆ. ಅವರು ಮತ್ತೆಂದೂ ಏಳುವುದಿಲ್ಲ!.. ತಿಳಿಯಿತೇ?”

ನಂತರವೂ ನಮ್ಮಿಬ್ಬರ ಮಧ್ಯೆ ವಾಗ್ವಾದಗಳು ನಡೆದವು. ಅದು ಅಪ್ಪನೊಡನೆ ಎನ್ನುವುದಕ್ಕಿಂತ ಯಮದೂತನೊಡನೆ ಎನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ. ಅಪ್ಪ ಈಗಾಗಲೇ ಯಮನೊಂದಿಗೆ ರಾಜಿ ಮಾಡಿಕೊಂಡಿದ್ದರು.

ಸೈರನ್ ಮೊಳಗಲು ಆರಂಭವಾಯಿತು. ಶಿಬಿರದ ದೀಪಗಳೆಲ್ಲವೂ ಆರಿ ಕಗ್ಗತ್ತಲು ಆವರಿಸಿತು. ಕಾವಲುಗಾರು ನಮ್ಮನ್ನು ಕಟ್ಟಡ ಸಮುಚ್ಛಯಗಳೊಳಗೆ ತಳ್ಳತೊಡಗಿದರು. ಕೆಲವೇ ಕ್ಷಣಗಳಲ್ಲಿ ಮೈದಾನ ಖಾಲಿಯಾಯಿತು. ಮೈ ಕೊರೆಯುವ ಚಳಿಯಿಂದ ಪಾರಾಗಿದ್ದಿದ್ದಕ್ಕೆ ಖುಷಿಪಟ್ಟೆವು. ಕಟ್ಟಡದ ನೆಲದ ಮೇಲೆ ಕುಸಿದು ಬಿದ್ದವು. ಆ ಕೋಣೆಯ ಉದ್ದಕ್ಕೂ ಒಂದರ ಮೇಲೊಂದು ಜೋಡಿಸಿದ್ದ ಮಂಚಗಳ ಮೇಲೆ ಹಾಸಿಗೆಗಳಿದ್ದವು. ನಮಗೋ, ನೆಲಕ್ಕೆ ಮೈ ಚಾಚಿದರೂ ಸಾಕಿತ್ತು.

ನಾನು ಎಚ್ಚರಗೊಂಡಾಗ ಬೆಳಗಾಗಿತ್ತು. ತಕ್ಷಣ ಅಪ್ಪನ ನೆನಪಾಗಿ ನಾನು ಗಾಬರಿಗೊಂಡೆ. ಹಿಂದಿನ ದಿನ ಸೈರನ್ ಮೊಳಗಿದಾಗ ನಾನು ಅಪ್ಪನನ್ನು ಮರೆತು, ಕುರಿಯಂತೆ ಗುಂಪನ್ನು ಹಿಂಬಾಲಿಸಿ ಕಟ್ಟಡದೊಳಗೆ ನುಗ್ಗಿದ್ದೆ. ಅವರು ಸಂಪರ್ಣವಾಗಿ, ಪ್ರಾಣವನ್ನು ಚೆಲ್ಲುವಷ್ಟು ಕುಗ್ಗಿ ಹೋಗಿದ್ದರು. ಇದೆಲ್ಲಾ ಗೊತ್ತಿದ್ದೂ ನಾನು ಅವರನ್ನು ನಿರ್ಲಕ್ಷಿಸಿದ್ದರಿಂದ ನನಗೆ ಅತೀವ ಸಂಕಟವಾಗತೊಡಗಿತು.

ನಾನು ಗಡಬಡಿಸಿ ಎದ್ದು ಅಪ್ಪನನ್ನು ಹುಡುಕಲು ಹೊರಟೆ.
ಅಷ್ಟರೊಳಗೆ ನನ್ನ ಮನಸ್ಸಿನಲ್ಲಿ ಮತ್ತೊಂದು ವಿಚಾರ ಕೊರೆಯಲಾರಂಭಿಸಿತು.
ʼಒ೦ದು ವೇಳೆ ಅಪ್ಪ ಸಿಗದಿದ್ದರೆ?…ನನ್ನ ಹೆಗಲ ಮೇಲಿನ ಜವಬ್ದಾರಿಯೊಂದು ತಂತಾನೆ ಹಗುರವಾಗುವುದಿದ್ದರೆ ಸಂಪೂರ್ಣವಾಗಿ ನನ್ನ ಸುರಕ್ಷೆಯ ಕಡೆಗೆ ಗಮನ ಹರಿಸಬಹುದಲ್ಲವೇ?… ಅದೇ ಕ್ಷಣ ನನಗೆ ನನ್ನ ಮೇಲೆಯೇ ನನಗೆ ಅತ್ಯಂತ ಲಜ್ಜೆ ಉಂಟಾಯಿತು.. ಅದನ್ನು ಈಗಲೂ ನಾನು ಅನುಭವಿಸುತ್ತಿದ್ದೇನೆ.
ಅಪ್ಪನನ್ನು ಹುಡುಕುತ್ತಾ ನಾನು ಗಂಟೆಗಟ್ಟಳೆ ತಿರುಗಿದೆ. ಕೊನೆಗೆ ಮತ್ತೊಂದು ಬ್ಲಾಕಿನ ಕಟ್ಟಡಕ್ಕೆ ಹೋದೆ. ಅಲ್ಲಿ ಬ್ಲ್ಯಾಕ್ ಕಾಫಿಯನ್ನು ಹಂಚುತ್ತಿದ್ದರು. ಅದಕ್ಕಾಗಿ ಸಾಲಿನಲ್ಲಿ ನಿಂತಿದ್ದ ಕೈದಿಗಳು ಹೊಡೆದಾಡುತ್ತಿದ್ದರು.
ನನ್ನ ಹಿಂದಿನಿ೦ದ ಒಂದು ಕ್ಷೀಣ ದನಿ ಕೇಳಿಸಿತು:

“ಎಲಿಜಾರ್!…ಎಲಿಜಾರ್!!.. ನನ್ನ ಕಂದ! ನನಗೂ ಒಂದು ಲೋಟ ಕಾಫಿ ತೆಗೆದುಕೊಂಡು ಬಾ ಮಗಾ!”
ನಾನು ದನಿ ಕೇಳಿ ಬಂದ ಕಡೆಗೆ ಓಡಿ ಹೋದೆ.
“ಅಪ್ಪಾ!!!.. ನಾನು ಯಾವಾಗಿಂದ ನಿನ್ನನ್ನು ಹುಡುಕ್ತಾ ಇದೀನಿ!.. ನೀನು ಎಲ್ಲಿದ್ದಿ? ಎಲ್ಲಿ ಮಲಗಿದ್ದೆ? ಹೇಗಿದ್ದೀ ಅಪ್ಪಾ..” ನನ್ನ ಕಣ್ಣುಗಳಿಂದ ಬಳಬಳನೆ ಕಣ್ಣಿರು ಹರಿಯಿತು.

ಅಪ್ಪ ಜ್ವರದಿಂದ ಸುಡುತ್ತಿದ್ದರು. ನಾನು ಕಾಫಿ ಹಂಡೆಯ ಬಳಿ ಹೇಗೆ ತಲುಪಿದೆ ನನಗೇ ಗೊತ್ತಿಲ್ಲ! ಹೇಗೋ ಒಂದು ಲೋಟ ಕಾಫಿಯನ್ನು ಗಿಟ್ಟಿಸಲು ನಾನು ಸಫಲನಾದೆ. ಅದರಿಂದ ಒಂದು ಗುಕ್ಕನ್ನು ಹೀರಿ ಅಪ್ಪನಿಗೆ ಕೊಟ್ಟೆ.
ಕಾಫಿ ಲೋಟವನ್ನು ತುಟಿಗಳಿಗಿಡುತ್ತಿದ್ದಂತೆ ಅಪ್ಪನ ಮುಖದ ಮೇಲೆ ಹರಡಿದ ಮಂದಹಾಸ ನಾನು ಸಾಯುವವರೆಗೂ ಮರೆಯಲು ಸಾಧ್ಯವಿಲ್ಲ. ಅದೊಂದು ಥರ ಗಾಯಗೊಂಡ ಪ್ರಾಣ ಯ ಮುಖದ ಮೇಲೆ ಮೂಡುವ ಕೃತಜ್ಙತೆಯಂತಿತ್ತು. ಆ ಒಂದು ಕ್ಷಣದಲ್ಲಿ ನಾನು ಅಪ್ಪನಿಗೆ ಕೊಟ್ಟ ತೃಪ್ತಿ ಬಹಶಃ ನನ್ನ ಇಡೀ ಬಾಲ್ಯದಲ್ಲಿ ಕೊಟ್ಟಿರಲಿಕ್ಕಿಲ್ಲ!

ಅಪ್ಪ ನೆಲದ ಮೇಲೆ ಬಿದ್ದಿದ್ದರು. ಅವರ ತುಟಿಗಳು ಒಣಗಿ ಬೆಂಡಾಗಿದ್ದವು. ಕಣ್ಣುಗಳು ಬಾತಿದ್ದವು. ಅವರು ಸಣ್ಣಗೆ ಕಂಪಿಸುತ್ತಿದ್ದರು. ನಾನು ಹೆಚ್ಚು ಹೊತ್ತು ಅಪ್ಪನ ಜತೆ ಇರಲಿಕ್ಕಾಗಲಿಲ್ಲ. ನೆಲ ಒರೆಸಲು ಬಂದವರು ನಮ್ಮನ್ನು ಅಲ್ಲಿಂದ ಹೊರಗೆ ಕಳಿಸಿದರು. ಹುಶಾರಿಲ್ಲದವರಿಗೆ ಮಾತ್ರ ಒಳಗೆ ಉಳಿಯಲು ಅವಕಾಶವಿತ್ತರು.

ನಮಗೆ ಹೊರಗೆ ಐದು ತಾಸು ನಿಲ್ಲಿಸಲಾಯಿತು. ಅದಾದ ಮೇಲೆ ನಮಗೆ ಕುಡಿಯಲು ಸೂಪು ಕೊಟ್ಟರು. ಕೊನೆಗೆ ಒಳಗೆ ಹೋಗಲು ಅಪ್ಪಣೆ ದೊರಕುತಿದ್ದಂತೆ ನಾನು ಅಪ್ಪನ ಬಳಿ ಧಾವಿಸಿದೆ.
“ಅಪ್ಪ, ಊಟ ಮಾಡಿದೆಯಾ?” ನಾನು ಕೇಳಿದೆ.
“ಇಲ್ಲ.”
“ಯಾಕಪ್ಪಾ?”
“ನಮಗೆ ಕೊಡಲಿಲ್ಲ. ನೀವೆಲ್ಲಾ ಈಗಲೋ ಆಗಲೋ ಸಾಯುವವರು. ನಿಮಗೆ ಊಟ ಒಂದು ದಂಡ, ಎಂದರು. ನನ್ನಿಂದ ಆಗುತ್ತಿಲ್ಲ ಮಗಾ..”
ನನ್ನ ಕಪ್ಪಿನಲ್ಲಿ ಉಳಿದಿದ್ದ ಸೂಪನ್ನು ಅಪ್ಪನಿಗೆ ಮನಸಿಲ್ಲದ ಮನಸಿನಿಂದ ಕೊಟ್ಟೆ. ನನ್ನ ಹೃದಯ ಭಾರವಾಗಿತ್ತು.
ರಾಬ್ಬಿ ಎಲಿಯಾಹುವಿನ ಮಗನಂತೆ ನಾನೂ ಅನುತ್ತೀರ್ಣನಾಗಿದ್ದೆ.

ದಿನಗಳುರುಳಿದಂತೆ ಅಪ್ಪ ಕೃಶರಾಗುತ್ತಿದ್ದರು. ನೀರು ತುಂಬಿ ಬಾತಿದ್ದ ಕಣ್ಣುಗಳು. ಹಣ್ಣಾದ ಮುಖ ಬಣ್ಣಗೆಟ್ಟ ಎಲೆಯಂತೆ ಕಾಣ ಸುತ್ತಿತ್ತು. ಬುಕೆನ್ವಾಲ್ಡ್ಗೆ ಬಂದ ಮೂರನೆಯ ದಿನ ಎಲ್ಲರಿಗೂ ಮಿಂದು ಬರಲು ಹೇಳಲಾಯಿತು. ರೋಗಿಷ್ಟರಿಗೆ ಕೊನೆಗೆ.
ಮಿಂದು ಬಂದ ತರುವಾಯ, ನಮ್ಮ ಕೊಠಡಿಯನ್ನು ಸ್ವಚ್ಛಗೊಳಿಸಲೆಂದು ನಮಗೆ ಬಹಳ ಹೊತ್ತು ಹೊರಗೆ ಕಳಿಸಲಾಯಿತು.

ನನಗೆ ಅಪ್ಪ ದೂರದಿಂದ ಬರುತ್ತಿರುವುದು ಕಾಣ ಸಿತು. ನಾನು ಬೇಗ ಬೇಗ ಅವರನ್ನು ಎದುರುಗೊಳ್ಳಲು ಮುಂದಾದೆ. ಅವರು ನನ್ನನ್ನು ಗಮನಿಸಲೇ ಇಲ್ಲದಂತೆ ನೆರಳಿನಂತೆ ಮುಂದೆ ನಡೆದರು.
“ಅಪ್ಪಾ!!” ನಾನು ಕೂಗಿದೆ. ಅವರಿಗೆ ಕೇಳಿಸಲಿಲ್ಲ. ನಾನು ಅವರ ಹಿಂದೆ ಓಡತೊಡಗಿದೆ.
“ಅಪ್ಪಾ, ಇಷ್ಟೊಂದು ಅವಸವಸರದಿಂದ ಎಲ್ಲಿಗೋಗುತ್ತಿದ್ದೀರಿ” ನಾನು ಅವರನ್ನು ಹಿಡಿದು ಕೇಳಿದೆ. ಅವರು ಬಹಳ ಹೊತ್ತು ನನ್ನನ್ನೇ ಶೂನ್ಯ ದೃಷ್ಟಿಯಿಂದ ನೋಡುತ್ತ ನಿಂತರು. ಅವರ ಮನಸ್ಸು ಬೇರೆಲ್ಲೋ ಇತ್ತು. ಆ ಹೊತ್ತು ಅವರು ನನ್ನ ಅಪ್ಪ ಅಲ್ಲ, ಯಾರೋ ಬೇರೊಬ್ಬ ವ್ಯಕ್ತಿಯಂತೆ ಕಂಡರು.

ಅಪ್ಪನಿಗೆ ರಕ್ತ ಬೇಧಿ ಶುರುವಾಗಿ ಅವರು ಬೇರೆ ಐದು ರೋಗಿಗಳಂತೆ ಮಂಚಕ್ಕೆ ಅಂಟಿಕೊ೦ಡಿದ್ದರು. ನಾನು ಅವರ ಪಕ್ಕದಲ್ಲಿ ಕುಳಿತುಕೊಂಡಿದ್ದೆ. ಅವರಿಗೆ ನನ್ನ ಕೈಲಾದ ಸೇವೆ ಮಾಡುತ್ತಿದ್ದೆ. ಅವರಿಗೆ ಧೈರ್ಯ ಕೊಡುತ್ತಿದ್ದೆ.

ನಾನು ನನ್ನ ರೇಶನಿನ ಬ್ರೆಡ್ಡನ್ನು ವಿನಿಮಯ ಮಾಡಿಕೊಂಡು ಅಪ್ಪನ ಮಂಚದ ಮೇಲಿನ ಮಂಚವನ್ನು ಪಡೆದುಕೊಂಡೆ. ಮಾರನೆಯ ದಿನ ಶಿಬಿರದ ವೈಧ್ಯರು ಬಂದಾಗ ನಾನು ಅವರಿಗೆ ಅಪ್ಪನ ಕುರಿತು ಹೇಳಿದೆ.
“ಅವರಿಗೆ ಇಲ್ಲಿ ಕರೆದುಕೊಂಡು ಬಾ.” ಎಂದರು.

ಅಪ್ಪನಿಗೆ ನಡೆಯುವುದಿರಲಿ ಮಂಚದಿ೦ದ ಮೇಲೇಳಲೂ ಆಗುತ್ತಿಲ್ಲ ಡಾಕ್ಟ್ರೇ, ನೀವೆ ಸ್ವಲ್ಪ ಬನ್ನಿ ಎಂದು ಎಷ್ಟು ಅಂಗಲಾಚಿದರೂ ಅವರು ಕಿವಿಗೊಡಲಿಲ್ಲ. “ಇಲ್ಲಿಯೇ ಕರೆದುಕೊಂಡು ಬಾ.” ಎಂದು ಹಠ ಹಿಡಿದರು.

ನಾನು ಪ್ರಯಾಸಪಟ್ಟು ಅಪ್ಪನನ್ನು ಅವರ ಬಳಿ ಕರೆದುಕೊಂಡು ಹೋದೆ. ಅಪ್ಪನನ್ನು ತುಸು ಹೊತ್ತು ದಿಟ್ಟಿಸುತ್ತಾ,
“ಈಗ ನಿನ್ನ ಸಮಸ್ಯೆ ಏನು ಹುಡುಗಾ?” ಎಂದರು.
“ನನ್ನ ತಂದೆಗೆ…ರಕ್ತ ಬೇಧಿ..”
“ನಾನೊಬ್ಬ ಸರ್ಜನ್!!.. ಪಕ್ಕಕ್ಕೆ ಸರಿ. ಬೇರೆಯವರಿಗೆ ಅವಕಾಶ ಕೊಡು. ನನ್ನ ವೇಳೆ ಹಾಳು ಮಾಡಬೇಡ.” ಎಂದರು.
ನನ್ನ ಪ್ರತಿಭಟನೆಯಿಂದ ಏನೂ ಉಪಯೋಗವಾಲಿಲ್ಲ.

“ನನಗೆ ತಡ್ಕೊಳಕ್ಕೆ ಆಗ್ತಾ ಇಲ್ಲ ಮಗಾ. ನನ್ನನ್ನು ಮಂಚದ ಬಳಿ ಕರೆದುಕೊಂಡು ಹೋಗು.” ಎಂದರು ಅಪ್ಪ.
ನಾನು ಅವರನ್ನು ಮಂಚದ ಮೇಲೆ ಮಲಗಿಸಿದೆ. ಅವರು ವಿಪರೀತವಾಗಿ ನಡುಗುತ್ತಿದ್ದರು.
“ನಿದ್ದೆ ಹೋಗಲಿಕ್ಕೆ ಪ್ರಯತ್ನ ಮಾಡು ಅಪ್ಪ..” ನಾನು ಬಿಕ್ಕುತ್ತಾ ಹೇಳಿದೆ.
ಅವರು ಕಷ್ಟಪಟ್ಟುಉಸಿರಾಡುತ್ತಿದ್ದರು. ಆದರೂ ಮಾನಸಿಕ ಸ್ಥಿಮಿತ ಕಳೆದು ಕೊಂಡಿರಲಾರರು ಎಂದು ನಾನು ಧೃಡವಾಗಿ ನಂಬಿದ್ದೆ.

ನಮ್ಮ ವಾರ್ಡಿಗೆ ಮತ್ತೊಬ್ಬ ಡಾಕ್ಟರ್ ಬಂದರು. ಅಪ್ಪ ಮಂಚದ ಮೇಲಿಂದ ಏಳಲು ಕೇಳಲೇ ಇಲ್ಲ.
“ಈ ರೋಗಿಗಳೆಲ್ಲಾ ಸೋಮಾರಿಗಳು. ನಾಟಕ ಆಡುವುದರಲ್ಲಿ ನಿಸ್ಸೀಮರು!..” ಎಂದು ಡಾಕ್ಟರ್ ತೀರ್ಪು ಕೊಟ್ಟರು. ನನಗೆ ಅವರ ಕೊರಳು ಹಿಸುಕುವಷ್ಟು ಸಿಟ್ಟು ಬಂದಿತಾದರೂ ಅಸಹಾಯಕನಾಗಿದ್ದೆ.

ಬ್ರೆಡ್ಡನ್ನು ಹಂಚುತ್ತಿದ್ದರು. ನಾನು ವಾಪಸ್ಸು ಬರುವಾಗ ಅಪ್ಪ ಬಿಕ್ಕಿ ಬಿಕ್ಕಿ ಅಳುತ್ತಿದ್ದರು…
“ಮಗಾ, ಅವರು ನನ್ನನ್ನು ಹೊಡೀತಿದ್ದಾರೆ…” ಅಪ್ಪ ನನಗೆ ದೂರಿತ್ತರು.
“ಯಾರಪ್ಪಾ ಅದು?” ಅವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರಂತ ನನಗನಿಸಿತು.
“ಅವರೇ ಕಣಪ್ಪ..ಅದೇ ಫ್ರೆಂಚ್ನವನೊಬ್ಬ, ಮತ್ತೆ ಆ ಪೋಲೆಂಡಿನವನು..ನನಗೆ ಹೊಡಿಬೇಡಿ ಅಂತ ಅವರಿಗೆ ಹೇಳು ಮಗ.. ಅವರಿಗೆ ನಾನೇನು ಅನ್ಯಾಯ ಮಾಡಿದ್ದೇನಂತ?..”

ಮರುದಿನ ತನ್ನ ರೇಶನಿನ ಬ್ರೆಡ್ಡನ್ನು ಅವರು ಕದ್ದಿದ್ದಾರೆಂದು ಅಪ್ಪ ಅಳತೊಡಗಿದರು.
“ನೀವು ಮಲಗಿರುವಾಗಲಾ ಅಪ್ಪ?”
“ಇಲ್ಲ ಮಗಾ! ಅವರು ನನ್ನ ಮೇಲೆರಗಿ ನನ್ನ ಬ್ರೆಡ್ಡನ್ನು ಕಿತ್ತು ಕೊಂಡರು… ನನ್ನ ಮೇಲೆ ಹಲ್ಲೆ ಮಾಡಿದರು… ತಡೆಯೋಕಾಗ್ತಿಲ್ಲ.. ಸ್ವಲ್ಪ ನೀರು ಕೊಡು..”
ಅಪ್ಪನಿಗೆ ನೀರು ಕೊಡಬಾರದೆಂದು ಡಾಕ್ಟರ್ ಹೇಳಿದ್ದರು.
“ನೀನಾದರೂ ನನ್ನ ಮೇಲೆ ಸ್ವಲ್ಪ ಕರುಣೆ ತೋರಿಸಪ್ಪ!”
“ಕರುಣೆ ತೋರಿಸು!!!..
ಅಯ್ಯೋ, ಏನು ಮಾಡಲಿ? ನಾನು ಅವರ ಮಗ.”

ಒಂದು ವಾರ ಕಳೆಯಿತು.
“ಇವರು ನಿನ್ನ ತಂದೆಯಾ?” ವಾರ್ಡನ್ ಕೇಳಿದರು. “ಅವರು ತೀರಾ ಅಸ್ವಸ್ಥರಾಗಿರುವವರಂತೆ ಕಾಣ ಸುತ್ತಿದ್ದಾರೆ.”
“ಡಾಕ್ಟರ್, ಅವರನ್ನು ನೋಡಲು ನಿರಾಕರಿಸುತ್ತಿದ್ದಾರೆ.” ನಾನೆಂದೆ.

ಅವರು ನನ್ನನ್ನೇ ದಿಟ್ಟಿಸಿ ನೋಡತೊಡಗಿದರು. “ಡಾಕ್ಟರ್ ದೇವರಲ್ಲ. ನೀನೂ ಅಷ್ಟೇ!” ಅವರು ಹೇಳುತ್ತಾ, ತಮ್ಮ ರೋಮಭರಿತ ಕೈಗಳನ್ನು ನನ್ನ ಹೆಗಲ ಮೇಲಿಟ್ಟು : “ಹುಡುಗಾ, ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೋ. ಮೊದಲನೆಯದಾಗಿ, ನೀನೊಂದು ಹಾಸ್ಟೆಲಿನಲ್ಲಿಲ್ಲ. ಇಲ್ಲಿ, ನಾನು, ನನಗಾಗಿ! ಅಷ್ಟೇ!! ಅಪ್ಪ, ಅಣ್ಣ-ತಮ್ಮ, ಗೆಳೆಯ.. ಯಾರೇ ಆಗಿರಲಿ.. ನಿನ್ನದು ನೀನು ನೋಡು. ನಿನ್ನ ಬದುಕು ನಿನ್ನದೇ. ನೀನೇ ಬದುಕಬೇಕು! ನೀನೇ ಸಾಯಬೇಕು! ಇಂದಿನಿ೦ದ ನಿನ್ನ ತಂದೆಗೆ ಕೊಡುವ ಸೂಪು, ಬ್ರೆಡ್ಡು ನಿಲ್ಲಿಸು. ಏನೂ ಪ್ರಯೋಜನವಿಲ್ಲ ಕಣೋ ಹುಡುಗಾ!.. ನಿನಗಾದರೋ ಬದುಕುಳಿಯುವ ಅವಕಾಶಗಳಿವೆ..!”

ನಾನು ಏನೂ ಹೇಳದೆ ಸುಮ್ಮನಾದೆ. ಅವರು ಹೇಳುತ್ತಿರುವುದು ಸರಿ ಎಂದು ಅನಿಸಿದರೂ ಒಪ್ಪಿಕೊಳ್ಳುವಷ್ಟು ಧೈರ್ಯ ಸಾಲಲಿಲ್ಲ.

“ನಿನ್ನಪ್ಪನಿಗೆ ನೀನು ಏನೂ ಸಹಾಯ ಮಾಡಲು ಸಾಧ್ಯವಿಲ್ಲ. ಅವನ ಪಾಲಿನ ಸೂಪು, ಬ್ರೆಡ್ಡು..ನೀನೇ ತಿಂದು ಬದುಕಬಹುದು! ಯೋಚಿಸಿ ನೋಡೋ” ಎಂದರು.

ಇಂತಾ ಮನೆಹಾಳು ಯೋಚನೆಗಳು ನನ್ನ ಮನಸ್ಸಿಗೆ ಬಂದ ಮರು ಗಳಿಗೆಯಲ್ಲೇ ನನಗೆ ಅತೀವ ನಾಚಿಕೆಯಾಯಿತು.. ನಾನು ಅಲ್ಲಿಂದ ಓಡಿದೆ. ಸೂಪಿನ ಬಟ್ಟಲನ್ನು ಪಡೆದು ಅಪ್ಪನಿಗೆ ಕೊಟ್ಟೆ. ಸೂಪಿಗಿಂತಲೂ ಹೆಚ್ಚಾಗಿ ಅವರಿಗೆ ನೀರು ಬೇಕಿತ್ತು.

“ನನಗ್ಯಾಕೆ ಮಗಾ ಇಷ್ಟೊಂದು ಹಿಂಸಿಸುತ್ತಿದ್ದೀಯಾ? ನನ್ನ ಇಡೀ ಶರೀರ ಉರಿತಾ ಇದೆ. ನನಗೆ ನೀರು ಬೇಕು, ನೀರು..!”
ಅವರಿಗೆ ನೀರು ಕೊಟ್ಟು ನಾನು ಹಾಜರಿ ಮೈದಾನಕ್ಕೆ ಓಡಿದೆ. ಆದರೂ ನನಗೆ ಸಮಧಾನವಿರಲಿಲ್ಲ. ಹುಶಾರಿಲ್ಲದವರು ಮಾತ್ರ ಹಾಜರಿ ತೆಗೆದುಕೊಳ್ಳುವಾಗ ಗೈರುಹಾಜರಾಗಬಹುದಿತ್ತು. ಅಂದು ನಾನೂ ಹುಶಾರಿಲ್ಲವೆಂದು ಹಿಂದೆ ಬಂದು ಅಪ್ಪನ ಮಂಚದ ಮೇಲಿನ ಮಂಚದ ಮೇಲೆ ಬಿದ್ದುಕೊಂಡೆ. ಯಾಕೋ ಅಪ್ಪನೊಬ್ಬನನ್ನೇ ಬಿಟ್ಟು ಹೋಗಲು ಮನಸ್ಸಾಗಲಿಲ್ಲ.

ನನ್ನ ಸುತ್ತ ಮುತ್ತ ರೋಗಿಗಳ ನರಳಾಟ ಬಿಟ್ಟರೆ ಎಲ್ಲವೂ ಶಾಂತವಾಗಿತ್ತು. ವಾರ್ಡಿನ ಹೊರಗೆ ಎಸ್ಸ್. ಎಸ್ಸ್. ಆಫಿಸರ್‌ಗಳು ಕೈದಿಗಳ ಮೇಲೆ ಕೂಗಾಡುತ್ತಿರುವುದು ಕೇಳಿಸುತ್ತಿತ್ತು… ಅಷ್ಟರಲ್ಲಿ, ಒಬ್ಬ ಎಸ್ಸ್. ಎಸ್ಸ್. ಅಧಿಕಾರಿ ಒಳಗೆ ಬಂದ. ಅದೇ ಹೊತ್ತಿಗೆ ‘ನೀರು .. ನೀರು..ʼ ಎಂದು ಅಪ್ಪ ಅರಚಿಕೊಳ್ಳತೊಡಗಿದರು.

“ಸಾಯ್..ಲೆನ್ಸ್!…” ಆಫೀಸರ್ ಗದರಿದ.
“ಮಗಾ..ಎಲಿಜಾರ್..! ಒಂದು ಲೋಟ ನೀರು ತಂದು ಕೊಡಪ್ಪಾ..” ಅಪ್ಪ ಬೇಡಿಕೊಳ್ಳುವ ಹಂತಕ್ಕೆ ಮುಟ್ಟಿದ್ದರು.
ಆಫಿಸರ್ ಸಿಟ್ಟಿನಿಂದ ಕೆಂಪುಕೆ೦ಪಗಾಗಿ ಅಪ್ಪನ ಬಳಿಗೆ ಧಾವಿಸಿ ಬಂದು, “ಮುಚ್ಚೋ ಬಾಯಿ.” ಎಂದ.
ಅಪ್ಪನಿಗೆ ಅವನು ಹೇಳಿದ್ದು ಕೇಳಿಸಲಿಲ್ಲವೆಂದು ಕಾಣುತ್ತದೆ. ಅಪ್ಪ ಮತ್ತೊಮ್ಮೆ ನೀರಿಗಾಗಿ ಬೊಬ್ಬಿಡತೊಡಗಿದ. ಆಫೀಸರನೀಗ ನಿಜಕ್ಕೂ ರಾಕ್ಷಸನಾದ. ಅವನ ಕೈಯಲ್ಲಿ ಬೆತ್ತವಿತ್ತು. ಅದನ್ನು ಎತ್ತಿ ಬಲವಾಗಿ ಅಪ್ಪನ ತಲೆಯ ಮೇಲೆ ಬೀಸಿದ. ನಾನು ನಿಂತಲ್ಲೇ ಮರಗಟ್ಟಿ ಹೋದೆ. ಮತ್ತೊಂದು ಏಟು ಎಲ್ಲಿ ನನ್ನ ತಲೆಯ ಮೇಲೆ ಬೀಳುವುದೋ ಎಂಬ ಭಯದಿಂದ ಗಟ್ಟಿಯಾಗಿ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡೆ. ಅಪ್ಪ ಅಸ್ಪಷ್ಟವಾಗಿ, “ಎಲಿಜಾರ್…” ಎಂದರು. ಅವರು ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದರು.

ನಾನು ಅಲ್ಲಾಡಲಿಲ್ಲ. ಆಫೀಸರ್ ಅಲ್ಲಿಂದ ಹೋಗುತ್ತಲೇ ನಾನು ಕೆಳಗಿಳಿದೆ. ಅಪ್ಪ ಏನೇನೋ ಬಡಬಡಿಸುತ್ತಿದ್ದರು. ಅವರ ತುಟಿಗಳು ಮಾತ್ರ ಅಲ್ಲಡಾಡುತ್ತಿರುವುದು ಕಾಣ ಸುತ್ತಿತ್ತು. ತಲೆಯಿಂದ ಹರಿದು ಬಂದ ರಕ್ತ ಅಪ್ಪನ ಮುಖವನ್ನು ವಿವರ್ಣಗೊಳಿಸಿದ್ದ ಚಿತ್ರ ಈಗಲೂ ನನ್ನ ಮನೋಪಟಲದಲ್ಲಿ ಅಚ್ಚು ಮೂಡಿದಂತಿದೆ. ನಾನು ಅಸಹಾಯಕನಾಗಿ ಅಪ್ಪನ ಮಂಚಕ್ಕೆ ಒರಗಿಕೊಂಡು ಅಲ್ಲೇ ಸುಮಾರು ಒಂದು ತಾಸು ಒರಗಿ ನಿಂತಿದ್ದೆ.ನನಗೆ ನಿದ್ರೆ ಒತ್ತರಿಸಿಕೊಂಡು ಬರುತ್ತಿತ್ತು. ಏನೇ ಮಾಡಿದರೂ ತಡೆದುಕೊಳ್ಳಲಾಗಲಿಲ್ಲ. ನಾನು ನನ್ನ ಮಂಚವನ್ನೇರಿದೆ. ಅಪ್ಪ ಇನ್ನೂ ಜೀವಂತವಿದ್ದರು.

ಅ೦ದು ಜನವರಿ ೨೮, ೧೯೪೫.
ನನಗೆ ಬೆಳಗಿನ ಜಾವ ಒಮ್ಮೆಲೇ ಎಚ್ಚರವಾಯಿತು. ನಾನು ಆತಂಕಗೊAಡು ದಡಬಡಿಸಿ ಮೇಲಿಂದ ಅಪ್ಪನ ಮಂಚದ ಮೇಲೆ ಇಣುಕಿದೆ. ಅಲ್ಲಿ ಅಪ್ಪ ಇರಲಿಲ್ಲ! ಯಾರೋ ಬೇರೊಬ್ಬನೇ ಮಲಗಿದ್ದ! ದೇವರೇ!!.. ಅಪ್ಪ ಇನ್ನೂ ಜೀವಂತನೇ ಇದ್ದ!!.. ಅವರು ಅವನನ್ನು ರಾತ್ರಿಯೇ ಕೊಂಡೊಯ್ದರೋ ಹೇಗೆ?.. ನಾನು ಗಾಬರಿಯಾದೆ.
ಒಂದು ಪ್ರರ್ಥನೆ ಇಲ್ಲ!..

ಒಂದು ಮೋಂಬತ್ತಿ ಹಚ್ಚಲಿಲ್ಲ!..
“ಎಲಿಜಾರ್..!” ಇದೇ ಅವರ ಕೊನೆಯ ಮಾತಾಗಿತ್ತು. ಆದರೆ, ನಾನು?!!”.. ಅವರಿಗೆ ಓಗೊಡಲೂ ಆಗದಷ್ಟು ಪುಕ್ಕಲನಾಗಿದ್ದೆ.

ನನ್ನ ಕಣ್ಣುಗಳಲ್ಲಿ ಒಂದು ತೊಟ್ಟು ಕಣ್ಣಿರೂ ಒಸರಲಿಲ್ಲ. ಇದರಿಂದ ನನಗೆ ತುಂಬಾ ವೇದನೆಯಂತೂ ಆಯಿತು. ನನ್ನ ಕಣ್ಣಿರಿನ ಸೆಲೆ ಬತ್ತಿ ಹೋಗಿತ್ತು. ಆದರೆ ನನ್ನ ಅಂತರಾತ್ಮದೊಳಗೆ ಇಣುಕಿ ನೋಡಿದ್ದರೆ,
“ಕೊನೆಗೂ ಸ್ವತಂತ್ರನಾದೆ!” ಎಂಬ ಸಮಾಧಾನದ ನಿಟ್ಟುಸಿರು ಅಡಗಿಕೊಂಡಿದ್ದು ಕಾಣಬಹುದಿತ್ತೇನೋ?!

(ಏಪ್ರಿಲ್ ೧೧, ೧೯೪೫ ರಂದು ಮಿತ್ರಪಡೆಗಳು ಜರ್ಮನರಿಂದ ಬುಕೆನ್ವಾಲ್ಡನ್ನು ವಿಮೋಚನೆ ಮಾಡುವವರೆಗೂ ಲೇಖಕರು ಅಲ್ಲಿಯೇ ಇದ್ದರು.)

‍ಲೇಖಕರು Admin

October 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: