ವೈ ಎಂ ಯಾಕೊಳ್ಳಿ ಓದಿದ ‘ಪುಷ್ಪರಗಳೆ’

ಡಾ ವೈ ಎಂ ಯಾಕೊಳ್ಳಿ

ಮೂಲತಃ ಗುಳೇದಗುಡ್ಡದವರಾದ ಶ್ರೀ ಚಂದ್ರಶೇಖರ ಹೆಗಡೆಯವರು ಈಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಪರಿಚಿತವಾಗುತ್ತಿರುವ ಹೆಸರು.ಉತ್ತಮ ಕವಿಗಳು ಪ್ರಬಂಧಕಾರರೂ, ಸಾಹಿತ್ಯ ಚಿಂತಕರೂ ಆಗಿರುವ ಹೆಗಡೆಯವರು ತಮ್ಮ ವೈಚಾರಿಕ ಉಪನ್ಯಾಸಗಳಿಂದಲೂ  ಗುರುತಿಸಲ್ಪಡುವಂಥವರು. ಸದ್ಯಕ್ಕೆ ಸರಕಾರಿ ಪದವಿ ಮಹಾವಿದ್ಯಾಲಯ ಬೀಳಗಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರ ಹೊಸ ಪುಸ್ತಕ “ಪುಷ್ಪರಗಳೆ” ಇದೊಂದು ಲಲಿತ ಪ್ರಬಂಧಗಳ ಸಂಕಲನ. ಈಗಾಗಲೇ ಬರಹವೆಂಬ ನಿತ್ಯಧ್ಯಾನ (ರಾಗಂ ಸಾಹಿತ್ಯ ಅವಲೋಕನ ಕೃತಿ), ಭೌತವಾದ (ವಿಮರ್ಶೆ) ಸಂಕಲನ, ಭಾವದೊಳಗೊನ ನಿರ್ಭಾವ (ಕವನ ಸಂಕಲನ) ಇಂತಹ ಗಮನಾರ್ಹ ಸಾಹಿತ್ಯ ಕೃತಿಗಳನ್ನು ನಾಡಿಗೆ ನೀಡಿದ ಯುವ ಸಾಹಿತಿ ಡಾ ಚಂದ್ರಶೇಖರ ಹೆಗಡೆಯವರು. ತುಂಬ ಸಾಮಾನ್ಯ ಸಂಗತಿಗಳನ್ನು ಅವು ಮಹಾ ಮಹತ್ವದ ಸಂಗತಿಗಳೆಂಬಂತೆ ವರ್ಣಿಸುವ ವಿಶಿಷ್ಟ ಶೈಲಿಯೊಂದನ್ನು ದಕ್ಕಿಸಿಕೊಂಡಿದ್ದಾರೆ.

ಬಹುತೇಕ ಲಲಿತ ಪ್ರಬಂಧಗಳ ರಚನೆಯೇ ಕಡಿಮೆಯಾಗುತ್ತಿರುವ ಇಂದಿನ ಕಾಲದಲ್ಲಿ ನಿಜಕ್ಕೂ ತುಂಬ ವಿಶೇಷವಾದ ರಚನೆಗಳು ಇವು.ಲಲಿತ ಪ್ರಬಂಧಗಳನ್ನು ಬರೆಯುವುದಕ್ಕೆ ಒಂದು ವಿಶೇಷ ಗುಣ ಬೇಕು.ಅಲ್ಲೊಂದು ಭಾವಗೀತಾತ್ಮಕತೆಯ ಸೂತ್ರ ಉದ್ದಕ್ಕೂ ಹರಿಯುತ್ತಿರಬೇಕು. ಅಂತಹ ಭಾವಗೀತಾತ್ಮಕತೆ ಹೆಗಡೆಯವರ ಪ್ರಬಂಧಗಳ ಬಹು‌ ಮಹತ್ವದ ಲಕ್ಷಣವಾಗಿದೆ . ಹಿರಿಯರಾದ ಡಾ.ರಾಜಶೇಖರ ಬಸು ಪಟ್ಟದರವರು ಇದನ್ನು” ಬರಹವೆಂಬ ಕರಕುಶಲ ನೇಯ್ಗೆ” ಎಂದು ಕರೆದಿರುವುದು ಉಚಿತವಾಗಿದೆ.

ಮಣ್ಣಿನ ಮಾಳಿಗೆಯ ಮೇಲೆ ಕರಕಿ (ಹುಲ್ಲು) ಹಬ್ಬಿ ಬೆಳೆದ ಸಂಗತಿ ಹಳ್ಳಿ‌ಯಲ್ಲಿ ಮನೆ‌ ಮಾಡಿಕೊಂಡಿರುವವರಿಗೆ ಈಗಲೂ ಗೊತ್ತು. ಇದು ತುಂಬ ರಮ್ಯವಾಗಿ “ಹಬ್ಬಲಿ ಅವರ ರಸಬಳ್ಳಿ” ಎನ್ನುವ ಹೊಳೆದಂಡೆ ಮೇಲೆ ಹಬ್ಬುವ ಹುಲ್ಲುಗರುಕೆಯಲ್ಲ. ಮನೆಯ ಮಾಳಿಗೆಯನೇರಿ ಹಬ್ಬಿದ ಹುಲ್ಲು . ಹಾಗೆಯೇ ಬಿಟ್ಟರೆ ಅದು ಆಳವಾಗಿ‌ ಮಣ್ಣಿನ ಜಂತಿಯೊಳಗಿಳಿದು ಬೇರಿಡಿದು  ಮಳೆಗಾಲ ಬಂದಾಗ ನೀರು ಜಂಪಲಿಡಿಯುವ ಸಂಕಟ ಮಣ್ಣಿನ ಮಾಳಿಗೆಯ ಮನೆಯಲ್ಲಿ ವಾಸಿಸುವವರಿಗೆ ಮಾತ್ರ ಗೊತ್ತು. ಆದ್ದರಿಂದಲೇ ಲೇಖಕರ ಸಾಕಿ (ಅವರು ತಮ್ಮ‌ ಮಡದಿಯನ್ನು ಸಾಕಿ ಎಂದು ಕರೆಯುತ್ತಾರೆ)ಮನೆಯ ಮಾಳಿಗೆಯನೇರಿ ನಾಜೂಕಾಗಿ ಹುಲ್ಲನ್ನು ಕಿತ್ತೆಸೆಯುವ ಪರಿಯನ್ನು ಬಹಳ ಗಂಭೀರವಾಗಿಯೇ ಚಿತ್ರಿಸುತ್ತಾರೆ. ಇಲ್ಲಿನ ಗದ್ಯ ತುಂಬ ರಮ್ಯವೂ ಭಾವಗೀತಾತ್ಮಕವೂ ಆಗಿದೆ.

ಬಹಳ ಸುಂದರ ಗದ್ಯ ಇಲ್ಲಿನದು ಅವರು ಸಣ್ಣ ಸಂಗತಿಯನ್ನು‌ ಕುರಿತು ಎಷ್ಟು ರಮ್ಯ ವಾಗಿ ಬರೆಯುತ್ತಾರೆಂದರೆ ನಾವೆಲ್ಲ ದಿನಾಲು ಚಪ್ಪರಿಸುವ ಚಹಾ ಅವರಿಗೆ ಸಾಮಾನ್ಯ ಪೇಯವಲ್ಲ.ಅದೊಂದು ಭೂಲೋಕದ ಅಮೃತ.ಎರಡನೆಯ‌ ಪ್ರಬಂಧ ಆರಂಭವಾಗುವದೇ ಹೀಗೆ-“ಚಹಾ ನನ್ನ  ಪಾಲಿಗೆ ಕೇವಲ‌ ಕರ್ಮೋಪಚಾರಕ್ಕಾಗಿ ಸೇವಿಸುವ  ಭೌತಿಕ ದ್ರಾವಣವಲ್ಲ ಯಾಂತ್ರಿಕವಾಗಿ ಕ್ಷಣ ಮಾತ್ರ ಭುಝಿಸಿ ಮತ್ತೆ ಅರೆ ಗಳಿಗೆಯಲ್ಲಿ ‌ಮರೆತು ಬಿಡುವ ಹಾಲು ಸಕ್ಕರೆಗಳ ಚಹಾದ  ಮಿಶ್ರಣವಲ್ಲ,‌ ಕೇವಲ ಆಯಾಸ ಕಳೆದುಕೊಳ್ಳುವದಕ್ಕಾಗಿ ಇರುವ ಉಪಚಾರದ ಔಷಧಿಯೂ ಅಲ್ಲ. ಚಹಾ ಎಂದರೆ ನನ್ನೊಳಗೆ ಸದಾ ರಿಂಗಣಿದುವ ಪ್ರಣಯಗೀತೆ” ಹೀಗೆ ಚಹಾ ಕುರಿತ ಭಾವಗೀತೆಯಂತಹ ಸಾಲುಗಳು  ಗಮನ ಸೆಳೆಯುತ್ತವೆ.. ಮುಂದೆ ಪ್ರಬಂಧದ ಉದ್ದಕ್ಕೂ ಚಂದದ ಕವಿತೆಗಳಲ್ಲಿ ಚಹಾದ ಗುಣಗಾಣ ನಡೆಯುತ್ತದೆ. ‘ಚಹಾ ಬಿಡಿರಿ’ ಎಂದ ವೈದ್ಯರನ್ನು ತಿರಸ್ಕರಿಸಲು ಹಿಂದೆ ಸರಿಯುವದಿಲ್ಲ.

ಚಹಾದ ಕಾರಣಕ್ಕಾಗಿಯೇ ಸರ್ವ ಜನಾಂಗದ ತೋಟವಾಗುವ ತಮ್ಮೂರ ಮಾರುಕಟ್ಟೆಯ ಜಗತ್ತು ಅಲ್ಲಿ ದೊರಕುವ ತರಹೇವಾರಿ ಕರಿದ ಬಜಿ ಇವುಗಳ ಸುತ್ತ ಪ್ರಬಂದ ಬಿಚ್ಚಿಕೊಳ್ಳುತ್ತದೆ. ಚಹಾ ಬಡವರ ಬಂಧು, ಶ್ರಮಿಕರ ಔಷಧಿ ಶೋ,ಷಿತರ ಬದುಕಿನ ತೀರ್ಥ ಹೀಗೆಲ್ಲ ಅದನ್ನು ಬಣ್ಣಿಸುತ್ತಾರೆ.ಎಲ್ಲ ಚಹಾ ಪ್ರಿಯರಿಗೂ ತುಂಬ ಪ್ರಿಯ ವಾಗುವ ಪ್ರಬಂಧವಿದು .”ಅಲ್ಲಮನಿಗೆ ಮಾಯೆ ಕಾಡಿದಂತೆ ನನಗೆ ಚಹಾ ಮಾಯೆಯಾಗಿ ಕಾಡಿದೆ” ಎನ್ನುವ ಕವಿ ನಡು ನಡುವೆ ಹೆಣೆಯುವ ಪದ್ಯದ ತುಣುಕುಗಳು ಅನ್ಯ‌ಕವಿ ಉಕ್ತಿಗಳ ಉದ್ದರಣೆಗಳು ಅವರ ಪ್ರಬಂಧಗಳಿಗೊಂದು ಕಾವ್ಯಾತ್ಮಕ ಸೌಂದರ್ಯವನ್ನು ಒದಗಿಸುತ್ತವೆ.

‘ಹೊಂಬಿಸಿಲ ಕಥೆ’ ಎಂಬ‌ ಪ್ರಬಂಧ ಮಾತ್ರ ಏಕೋ ಶೀರ್ಷಿಕೆಗೂ ಪ್ರಬಂಧಕ್ಕೂ ಹೊಂದಿಕೆಯಾಗದೇ ಹೋಗುತ್ತದೆ. ಲೇಖಕರು ಹೇಳ ಹೊರಟದ್ದು ವೈಶಂಪಾಯನ‌ ರತ್ನಕಲೆಯರ ಕಥೆಯನ್ನು ,ಬಹುಶಃ ಅದು ತನ್ನ ಸಾಕಿಗೆ ಸಾಯಂಕಾಲ ಸೂರ್ಯ‌ ಬಿಸಿಲು ಮೂಡಿಸುವ ಸಮಯಕ್ಕೆ ನಿತ್ಯವೂ‌ ಸಾಕಿಯ‌ ಮಾತು ಕೇಳುತ್ತ ಸಾಕಿಗೊಂದು ಕಥೆ ಹೇಳುತ್ತ ಸಮಯ ಕಳೆಯುವ ಮಧುರ ಸಂಜೆಗಳ ಕಥೆಯಾಗಿದೆ. ಹೆಂಡತಿಯನ್ನು ಬಿಟ್ಟು ವ್ಯಾಪಾರಕ್ಕೆ ಹೋದ ವೈಶಂಪಾಯನ ಅವನಿಗಾಗಿ ಕಾತುರದಿಂದ ಕಾಯುವ ರತ್ನಕಲೆ ಈ ಕಥೆಯನ್ನು ಮುಸ್ಸಂಜೆಯಲ್ಲಿ ತನ್ನ ಹೆಂಡತಿಯ ಮುಂದೆ  ಹೇಳುವ ನಾಯಕ, ಅಲ್ಲಿ ಉಂಟಾದ ರಮ್ಯ ಸಂಜೆ ವರ್ಣನೆಯ ವೈಭವ ಇವೆಲ್ಲವೂ ನಮ್ಮ‌ಕಣ್ಣಿಗೆ ಕಟ್ಟುತ್ತವೆ. ಪ್ರಬಂಧಕಾರರ ಒಂದು ವಿಶೇಷವೆಂದರೆ ಇಲ್ಲಿ ಅವರ‌ ಮಡದಿ ಅವರಿಗೆ ನಿಜವಾದ ಸಾಕಿಯಾಗಿದ್ದಾಳೆ. ನಿಜವಾದ ಅರ್ಥದಲ್ಲಿ ಹೇಳಬೇಕೆಂದರೆ ಸಾಕಿ ಉರ್ದು ಕಾವ್ಯ ಪರಿಸರದ ಪದ. ಅಲ್ಲಿ ಗಜಲ್ ಕವಿಯ ಒಂಟಿತನಕ್ಕೊ ವಿರಹಕ್ಕೊ ಸಾಥು ನೀಡುವ ರಸಿಕ ಸಂಗಾತಿ ಸಾಕಿ. ಇಲ್ಲಿ ಆಕೆಯೆ ಲೇಖಕರ ಪತ್ನಿ.ನಿಜಕ್ಕು ಹೆಂಡತಿಯನ್ನು‌ ಕವಿ ಸಾಕಿ ಎಂಬ ಹೆಸರಿನಿಂದ ಒಂದೆರಡು ಪ್ರಬಂಧಗಳಲ್ಲಿ ತರುತ್ತಾರೆ. ಸಾಕಿ ಅವರ ಪ್ರಬಂಧಗಳ ನಾಯಕಿಯೇ ಸರಿ.ಅವಳೊಂದಿಗೆ ಮಾತನಾಡುವ ಮಹತಿಯನ್ನು  ಅವಳ ಕಥೆ ಹೇಳುವ ಕಲೆಯನ್ನು ಬಣ್ಣಿಸುವ ಪ್ರಬಂಧವೇ ಹೊಂಬಿಸಿಲ ಕಥೆ.ವಾಸ್ತವದಲ್ಲಿ ಸಾಕಿಯ ಬಾಯಿಂದ ವೈಶಂಪಾಯನ ರತ್ನ ಕಲೆಯರ ಪ್ರೇಮಕಥೆಯನ್ನು ಈ ಪ್ರಬಂಧ ಹೇಳುತ್ತದೆ.”

 ಸಾಕಿಯೊಂದಿಗಿನ ಹರಟೆಯೆಂದರೆ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡುವ ಪೊಳ್ಳು ಮಾತುಗಳ ಮಂಟಪವಲ್ಲ.ಕೇವಲ ಬಾಯಿಚಪಲಕ್ಕಾಗಿ ಆಕೆಯ ಬಾಯಿಂದ  ಹೊರಬೀಳುವ ಆಡಂಬರದ ನುಡಿಗಳರ ಮನೆಯಲ್ಲ…ಬದಲಾಗಿ ಮಾತೆಂಬುದು ಜ್ಯೋತಿರ್ಲಿಂಗವೆಂಬಂತೆ ಜೀವನ ಪರ್ಯಂತ ಜೀವಗಳ‌ ಕಾಯುವ ಅನುಭವಗಳ ಅನುಭಾವವದು” ಹೀಗೆ ಸಾಕಿಯ ಮಹಿಮೆಯನ್ನು ಪ್ರಬಂಧ ಬಿಡಿಸುತ್ತದೆ.   

ಮನುಷ್ಯ ಸಂಬಂಧಗಳನ್ನು ತೂಕಕ್ಕೆ ಹಾಕುವ ಸ್ಥಿತಿ ತಂದೊದಗಿದ್ದು ಆಯೇರಿ ಮಾಡುವ ಪದ್ದತಿ. ಹೇಗೆ ಜನ ತಮ್ಮ ಬಡಾಯಿಗೆ ಅಪಮಾನವಾದಾಗ ಅದನ್ನೇ ಬಂಧುಗಳ ಮೇಲೆ ತೋರಿಸಿಕೊಳ್ಳುವ ಸಂಗತಿಯನ್ನು ಬಹಳ ಸುಂದರವಾಗಿ ಕಟ್ಟಿಕೊಡುವ ಪ್ರಬಂಧ “ಕಾಣಿಕೆಯ ತೊಳಲಾಟ”. ಹೀಗೆ ಬೀಗರು ಬಿಜ್ಜರಿಗೆ ಮದುವೆ ಮುಂತಾದ ಸನ್ನಿವೇಶದಲ್ಲಿ ಕೊಡುವ ಆಹೇರಿ ಸಂಗತಿಗಳನ್ನೆತ್ತಿಕೊಂಡು ಪ್ರಬಂಧ ‘ಕಾಣಿಕೆಯ ತೊಳಲಾಟ’ವಾಗಿದೆ. ಇಲ್ಲಿನ ಮಹತ್ವದ ಪ್ರಬಂದಗಳಲ್ಲೊಂದು “ಅರ್ದಾಂಗಿಯ ಪುರಾಣ”. ನಾವು ಶೀರ್ಷಿಕೆಯನ್ನು ಓದಿ ಇಲ್ಲೇನಾದರೂ ಇವರು ತಮ್ಮ ಅರ್ಧಾಂಗಿಯ ಕಥೆ ವಿವರಿಸಿದ್ದಾರೆಯೊ ಎಂದು ಕುತೂಹಲದಿಂದ ಹೊರಟರೆ, ಅದು ಅವರ ಹಳೆಯ ಅಂಗಿಯ ಮೇಲಿನ ಮೋಹದ ಕಥೆ. ಪ್ರಬಂಧಕಾರರು ತಮ್ಮ ಕೃಶ ದೇಹವನ್ನೇ ಇಲ್ಲಿ ಮತ್ತೆ ಮತ್ತೆ ವಿಡಂಬನೆಗೆ ಬಳಸಿಕೊಳ್ಳುವದು ಒಂದು ಧನಾತ್ಮಕ ಅಂಶವೇ. ಏಕೆಂದರೆ ತನ್ನನ್ನೇ ತಾನು ಹಾಸ್ಯದ ವಸ್ತುವಾಗಿಸಿಕೊಂಡು ಓದುಗರಿಗೆ ಸಂತಸ ಕೊಡುವದು ನಮ್ಮ ಪ್ರಬಂಧಗಳ ಒಂದು ಪ್ರಸಿದ್ದ ಶೈಲಿಯೇ ಆಗಿದೆ.

ಆರಂಭದಲ್ಲಿ ಪ್ರಬಂಧ ವಿವರಿಸುವ ಲ್ಯಾವಿ ಗಂಟಿನ ಮಹಿಮೆ ಬಹಳ ಸುಂದರವೂ ವಿಶೇಷ ವಸ್ತುವೈವಿಧ್ಯದಿಂದ ಕೂಡಿರುವದೂ ಆಗಿದೆ. ತನ್ನ ಹಳೆಯ ಅಂಗಿಗಳ ಮೇಲಿನ ಪ್ರೀತಿಯಿಂದ ಹಳೆಯ ಅಂಗಿ ಗಿಡ್ಡವಾದರೂ ಅದನ್ನು ಧರಿಸಿ ಗಿಡ್ಡತನ ಕಾಣಬಾರದು ಎಂದು in shirt ಮಾಡಿ ದಿನವಿಡೀ ಫಜೀತಿ ಅನುಭವಿಸಿದ ರೀತಿಯ ಬಣ್ಣನೆ ಓದಿಯೇ ಸವಿಯಬೇಕು.

ಹೆಗಡೆಯವರ ಭಾಷೆ ತುಂಬ ಶ್ರೀಮಂತವೂ ವರ್ಣನಾ ವೈಭವದಲ್ಲಿ ಮಿಂದೇಳುವಂಥದೂ ಆಗಿದೆ. ನವೋದಯದ ಪ್ರಬಂಧಗಳ ಶೈಲಿಯನ್ನು ನೆನಪಿಸುವ ಬರಹದ ಶೈಲಿ ಅವರದು. ಉದಾಹರಣೆಗೆ ಲೇಖಕರು “ಬಣ್ಣಗಳ ಲೋಕದಲ್ಲಿ” ಪ್ರಬಂಧದಲ್ಲಿ  ಪೃಕೃತಿಯಲ್ಲಿ ಕಾಣುವ ರಂಗುಗಳ ಕುರಿತು “….. ಹಬ್ಬಕ್ಕೆ ಮೊದಲಾದ ವೈವಿಧ್ಯಮಯ ರಂಗುಗಳ ರಂಗದಲ್ಲಿ ಹೀಗೆ ಮೈದುಂಬಿ ಕುಣಿಯುತ್ತಿದ್ದ ನಿಸರ್ಗದ ನಾದಲಯಕ್ಕೆ ತಲೆದೂಗುತ್ತಿದ್ದ ತರುಲತೆಗಳ ಸೌಂದರ್ಯ ಹಬ್ಬದ ಬಣ್ಣ ಬಳಿದ ಪ್ರಕೃತಿಯ ಮುಖಕ್ಕೆ ದರ್ಪಣವಿಡಿದಂತೆ ಕಂಗೊಳಿಸುತ್ತಿತ್ತು. ಹಸಿರುಟ್ಟ ಗಿಡ ಮರ ಬಳ್ಳಿಗಳ ನೋಟ, ಬಣ್ಣ ಬಣ್ಣದ ರೆಕ್ಕೆಯುಳ್ಳ ಹಕ್ಕಿಗಳ ಹಾರಾಟ ,ಕೆಂದಳಿರ ಚಿಗುರಿನ ನಾಟ್ಯವಿಲಾಸ, ಸಾಲಾಗಿ ಹೊಂದಿಕೊಂಡ ಕೆಲವು ಹೊಲಗಳಲ್ಲಿ ತೆನೆಗಟ್ಟಿ ಎದೆಯುಬ್ಬಿಸಿ ನಿಂತ ಫಸಲಿನ ಬಂಗಾರ ವರ್ಣದ ಸರಸ,ಮುಂಜಾವಿನ ರಸಗಾನ ಕ್ಕೆ ತಲೆದೂಗುತ್ತಾ ತೊನೆಯುತ್ತಿರುವ ಕಲ್ಪವೃಕ್ಷಗಳ ಮೇಲಾಟ….” ಹೀಗೆ ಅವರ ಬಣ್ಣನೆಯ ವೈಖರಿ ಸಾಗುತ್ತಾ ನಿಲುಗಡೆಯಿಲ್ಲದೆ ಹೋಗುತ್ತದೆ. ‘ಬಣ್ಣಗಳ ಲೋಕದಲ್ಲಿ’ ಪ್ರಬಂಧ ಹೆಸರೇ ಸೂಚಿಸುವಂತೆ ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೆ ಸಂಬಂಧಿಸಿದ್ದೇ ಆದರೂ ಅದು ಹೋಳಿಯ ಮುನ್ನವೇ ಪೃಕೃತಿಯಲ್ಲಿ ಮೂಡುವ ಬಣ್ಣಗಳ ಕುರಿತು ವರ್ಣಿಸುತ್ತದೆ.ಮುಂದುವರಿದ ಪ್ರಬಂಧ ಹೋಳಿಯ ವೈಶಿಷ್ಟ್ಯಗಳನ್ನು ವಿವರಿಸುತ್ತದೆ. 

ಪೃಕೃತಿ ಬಣ್ಣನೆ ಇವರ ಪ್ರಬಂಧಗಳಲ್ಲಿ ದಟ್ಟವಾಗಿ ಕಾಣುವ ಅಂಶ. ಅದು “ಭೃಂಗದ ಬೆನ್ನೇರಿ ” ಪ್ರಬಂಧ ಜೇನು‌ಹುಳುಗಳು ಹೂವುಗಳಿಂದ ಮಧುವನ್ನು ಸಂಗ್ರಹಿಸಿ ಜೇನು ಕಟ್ಟುವ ವಿವರವನ್ನು ಅತಿರಮ್ಯವಾಗಿ ಬಣ್ಣಿಸುತ್ತದೆ. ಕವಿ ಏನೋ ಭಾವ ಜೀವಿ .ಅವನು ಆ ದುಂಬಿಗಳ ಮಧುವ ಹೀರುವಿಕೆ ನೋಡುತ್ತ ಸಂತಸ ಪಡುತ್ತಾನೆ ಆದರೆ ಮನೆಯವರು! ಅವರಿಗೆ ಜೇನುಗೂಡು, ಜೇನು ಬಿಡಿಸಿಕೊಂಡು ತಿನ್ನುವ ಒಂದು ಹುಟ್ಟಷ್ಟೇ. ಹೀಗಾಗಿ‌ ಕವಿಯ ಕನಸಿನ‌ ಲೋಕಕ್ಕೆ ಭಂಗ‌ಬರುವಂತೆ ಈತ ಸಂಜೆ ಮನೆಗೆ ಬರುವ ಹೊತ್ತಿಗೆ ಜೇನು ಬಿಡಿಸಿಕೊಂಡು ತಿನ್ನುವ ಚಿತ್ರ ಇವರಿಗೆ ಆಘಾತವನ್ನುಂಟು ಮಾಡುತ್ತದೆ.ಪ್ರಬಂಧದ ಕೊನೆಗೆ ಪ್ರಬಂಧಕಾರ ಹೇಳುವ ” ಪ್ರಕೃತಿಯಿಂದ ಬೇಡಿ ಪಡೆದದಕ್ಕಿಂತ ,ಕಿತ್ತುಕೊಂಡ ಕೊಳ್ಳೆ ಹೊಡೆದದ್ದೇ ಹೆಚ್ಚಲ್ಲವೇ? ” ಈ ಮಾತು ಮನುಷ್ಯನ ಸ್ವಾರ್ಥ ಬಿಚ್ಚಿಡುತ್ತದೆ.” ಮಧು‌ ಮೀಮಾಂಸೆ” ಪ್ರಬಂಧ ಒಂದಿಷ್ಟು ರಸವತ್ತಾಗಿ ಮಧುರಸದ ಆಹ್ಲಾದ ಬಣ್ಣಿಸುತ್ತದೆ.

ಪ್ರಬಂಧದ ಆರಂಭದಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ‘ ಮೂಗು ಮುರಿಯುವದರ’  ಬಗ್ಗೆ ಮಾಡಿದ ಹುಡುಗಾಟದ ಜಗಳದ ಚಿತ್ರವನ್ನು ರಸವತ್ತಾಗಿ ಚಿತ್ರಿಸಿದ್ದಾರೆ. ಪ್ರಬಂಧಕಾರರ ಭಾವಲಹರಿಗೆ ಈ ಸಂಕಲನದ ಶೀರ್ಷಿಕೆಯಾಗಿರುವ .ಪುಷ್ಪರಗಳೆ ಅತ್ಯುತ್ತಮ ಉದಾಹರಣೆ. ಹರಿಹರ ಕವಿಯನ್ನು ನೆನಪಿಸುವಂತೆ ಲೇಖಕರು ಹೂವಿನ ಲೋಕದ ಬಣ್ಣನೆ ಮಾಡುತ್ತಾರೆ.ದಾಸವಾಳ ಹೂವೇ ಅವರ ಪ್ರಬಂಧ ದ ಮೀಮಾಂಸೆಗೆ ಆಧಾರ ಭೂಮಿಕೆಯಾದ ಹೂವು.ಅದರ ಸೌಂದರ್ಯಕೆ ಮರುಳಾದ ಮೊಸರಿನ ಯಲ್ಲಮ್ಮ ಪ್ರಬಂಧಕಾರರ ವೈರಿಯಾಗಿ ಬಿಡುವ ಪ್ರಸಂಗವಂತೂ ತುಂಬ ಚೇತೋಹಾರಿಯಾಗಿದೆ. ಹರಿದ ದಾಸವಾಳದ ಅಳುವಿಕೆ ಪ್ರಬಂಧಕಾರನ ಒಳಗೂ ಸ್ಪುರಿಸಿ ಅವರ ಭಾವ ಶ್ರೀಮಂತಿಕೆಯನ್ನು ಪರಿಚಯಿಸುತ್ತವೆ.

ಮಣ್ಣಿನ ಮಾಳಿಗೆ ಶ್ರೀಯುತರ ಪ್ರಬಂಧಗಳಲ್ಲಿ‌ ಮತ್ತೆ ಮತ್ತೆ ವಸ್ತುವಾಗಿ ಬರುತ್ತದೆ. “ಮಣ್ಣಿನೊಳಗಣ ಧ್ಯಾನ ” ಪ್ರಬಂಧದಲ್ಲಿ‌ ಮಳೆಗಾಲಕ್ಕೆ ಮನೆ ಸೋರುವುದೆಂದು ಹಂಸನೂರಿನ ರೇವೆ ಮಣ್ಣು ತರಿಸಿ ಹಾಕಿ‌ ಮನೆ ಸೋರದಂತೆ ‌ಮಾಡಿದ ಚಿತ್ರವಿದೆ. ಹೀಗೆ ತನ್ನ ಸುತ್ತಲಿನ ಬದುಕನ್ನೇ ಪ್ರಬಂಧಕಾರರು ವಸ್ತುವಾಗಿಸಿಕೊಂಡು ಚಂದದ ಪ್ರಬಂಧ ಕಟ್ಟುತ್ತಾರೆ. ಮನೆಯ ಮಾಳಿಗೆ ಮೇಲೆ ಮಣ್ಣು ಹಾಕಿ ಸುಭದ್ರಗೊಳಿಸಿದ ಮೇಲೆ ಮನೆಯ ಯಜಮಾನಿಗಾದ ಸಂತಸವನ್ನು “ಲಾವಣ್ಯವತಿಯಾಗಿ ಕಂಗೊಳಿಸಿದ ಮಾಳಿಗೆಯವಳ ಮುಖ ದುಶ್ಯಂತನನ್ನು ಕಾಣಲು ಅಲೆದಾಡಿ ಕೊನೆಗೆ ದರ್ಶನ ಪಡೆದು ಒಲಿಸಿಕೊಂಡ ಶಕುಂತಲೆಯಂತಾಗಿತ್ತು” ಎನ್ನುವ ಬಣ್ಣನೆಯಂತೂ ಪುರಾಣಕಾಲದ ರೂಪಕಗಳನ್ನು ಸಮಕಾಲೀನಗೊಳಿಸುವಲ್ಲಿ ಪ್ರಬಂಧಕಾರರು ಎಷ್ಟು ಜಾಣರು ಎನ್ನುವದಕ್ಕೆ ಸಾಕ್ಷಿಯಾಗಿದೆ.

ಕುರುಕ್ಷೇತ್ರವೆಂಬ‌ ಪ್ರಬಂಧ ನಮಗೆ ರನ್ನನ ಪದ್ಯಗಳೊಂದಿಗೆ ಆರಂಭವಾದರೂ ಪ್ರಬಂಧಕಾರ ಹೇಳಹೊರಟಿರುವ ಕುರುಕ್ಷೇತ್ರ ಅವರು ಹತ್ತಿ ಹೊರಟ ಹೆದ್ದಾರಿಯೆಂಬ ಕುರುಕ್ಷೇತ್ರದ ಕುರಿತು ಎನ್ನುವದು ಕುತೂಹಲ ಕೆರಳಿಸುತ್ತದೆ. ಅವರು ಹೆದ್ದಾರಿಯನ್ನು ಬಣ್ಣಿಸುತ್ತಾ “ಸದಾ ಬಾಯಿ ತೆರೆದುಕೊಂಡು ತನ್ನ ಅದಮ್ಯ ದಾಹದ ಕರಿನಾಲಗೆಯನ್ನು ಚಾಚಿ ನಿಂತಿರುವ ಮಾರಿಯ ರಣರಂಗದಂತಿರುವ ಹೆದ್ದಾರಿಯನ್ನೊಮ್ಮೆ  ಸಂಜಯನಂತೆ ಪ್ರವೇಶಿಸಿ” ಎನ್ನುವುದನ್ನು ಓದುತ್ತ ಹೋದಾಗ‌ ಪ್ರಯಾಣಿಕರು, ಹೆದ್ದಾರಿಯೆಂಬ ರಣರಂಗದಲ್ಲಿ ಎದುರಿಸುವ ಆತಂಕಗಳ ಅನುಭವವಾಗುತ್ತದೆ.

ಹೆದ್ದಾರಿಯ ಮಧ್ಯೆ ಅನಾಥವಾಗಿ ಬಿದ್ದ ಎರಡು ಬಸವಗಳ ದಾರುಣ ಚಿತ್ರಣ ಮನ ಕಲಕುತ್ತದೆ. ಮಾರ್ಗ ಮದ್ಯೆ ಜೀವ ಕಳೆದುಕೊಂಡು ಕ್ಯಾನ್ವಾಸಿನಲಿ ಬಿಡಿಸಿಟ್ಟಂತೆ ಬಿದ್ದ ಅಳಿಲು ಇತ್ಯಾದಿಗಳು ಪ್ರಬಂಧಕಾರರ ದಯಾಗುಣದ ಬಿಂಬದಂತಿವೆ. ನಿಜಕ್ಕೂ‌ಪ್ರಬಂಧದ ಓದು‌ಮುಗಿಸಿದಾಗ ಹೆದ್ದಾರಿ‌ ನಿಜಕ್ಕೂ ಕುರುಕ್ಷೇತ್ರವೇ ಸರಿ ಎಂಬ ನಿರ್ಣಯಕ್ಕೆ ನಾವೂ ಬರುತ್ತೇವೆ. ಆಧುನಿಕ ಜಗತ್ತಿನ ಕೊಳ್ಳುಬಾಕತನದ ಹವ್ಯಾಸದಿಂದ ಪಾರಾಗಬೇಕೆಂಬ ಸತ್ಯವನ್ನು‌ ‘ನೀ ಮಾಯೆಯೊಳಗೋ’ ಪ್ರಬಂಧ ಪ್ರತಿಬಿಂಬಿಸಿದರೆ, ‘ಕಪ್ಪೆಗಳೊಂದಿಗೆ ಬಂದ ಶ್ರಾವಣ’ ಪ್ರಬಂಧ  ಲೇಖಕ ಕಪ್ಪೆಗಳನ್ನೂ ಗಮನಿಸಿದುದಕ್ಕೆ ಸಾಕ್ಷಿಯಾಗಿದೆ.ದೀಪಾವಳಿಯ ಹೂವಿನ ಸಂಭ್ರಮವನ್ನು, ಪ್ರಕೃತಿಗೂ ದೀಪಾವಳಿ ಹಬ್ಬಕ್ಕೂ ಇರುವ ಬಂಧವನ್ನು ವಿವರಿಸುತ್ತದೆ.

ಒಂದು ಕರ್ಚೀಪು ಕೂಡ ರಸಿಕ ಕವಿಯ ಬಣ್ಣನೆಯಲ್ಲಿ ಸುಂದರ ಪ್ರಬಂಧವಾಗಿ‌ ಮೂಡಿದ ಚಿತ್ರ‌ಣ “ನೀ ಸಿಗದೇ ಬಾಳೊಂದು ಬಾಳೆ” ಎನ್ನುವ ಪ್ರಬಂಧದಲ್ಲಿದೆ. ತಮ್ಮೂರಿನ ಜಾತ್ರಾ ವೈಭವವನ್ನು, ಜಾತ್ರಾ ನಿಮಿತ್ತ ನಡೆಯುವ ರಥಪೂಜೆಯ ಸಂದರ್ಭವನ್ನು ಬಣ್ಣಿಸಿದ  ಪ್ರಬಂಧಕಾರ ಐದೂ ದಿನದ ಜಾತ್ರೆಯನ್ನು ಬಣ್ಣಿಸುತ್ತಾನೆ. ಸಂಕಲನದ ಕೊನೆಯ ಪ್ರಬಂಧ “ರಥಾವತಾರ” ಅವರ ಊರಿನ ಐದು ದಿನಗಳ ಜಾತ್ರೆಗೆಂದು ತಯಾರಾಗುವ ರಥದ ಬಣ್ಣನೆಯಾಗಿದೆ. ರಥಮೋಹನ ,ರಥ ಅರಸ ಮುಂತಾಗಿ ಬಣ್ಣಿಸಿ ಅದನ್ನು ಎಳೆಯುವ ವೈಭವವನ್ನು ಸುಂದರವಾಗಿ ಬಣ್ಣಿಸುತ್ತಾರೆ. ಚಂದ್ರಶೇಖರ ಹೆಗಡೆಯವರದು ಸಮೃದ್ಧ ಬರಹ. ತುಂಬ ಬಣ್ಣನೆಯ ಬರಹ ಶೈಲಿ. ಚಿಕ್ಕ ವಿಷಯವನ್ನೂ ತಮ್ಮ ಬಣ್ಣನೆಯ‌ ಮೂಸೆಯಲ್ಲಿ ಕಲಾತ್ಮಕವಾಗಿ ವರ್ಣಿಸುತ್ತಾರೆ.

ಜೊತೆಗೆ‌ ಅವರು ಉಲ್ಲೇಖಿಸುವ ಉದ್ದರಣೆಗಳು, ನಡು ನಡುವೆ ತರುವ ಕಾವ್ಯದ ಉಲ್ಲೇಖಗಳು ಹಿತವೆನಿಸುವವಾದರೂ, ಒಮ್ಮೊಮ್ಮೆ ಲೇಖನಕ್ಕೆ ಹೊರೆಯೂ ಎನ್ನಿಸುತ್ತವೆ. ಅಂತಹ ಸಂದರ್ಭ ದಲ್ಲಿ ಅವರು ಎತ್ತಿಕೊಂಡ ವಸ್ತುವಿಗೂ ಬಳಸುವ ಉಲ್ಲೇಖಕ್ಕೂ ತಾಳ ಮೇಳವಿಲ್ಲದೆ ಒಂದಿಷ್ಟು ಮುಜುಗರವೆನ್ನಿಸದಿರದು.ಅದೂ ಎಲ್ಲೊ ಒಂದೆರಡು ಸಲ ಮಾತ್ರ. ಆದರೂ ಪ್ರಬಂದಕಾರರ ಬಣ್ಣನೆಯ ಮೋಹಕ್ಕೆ ನಾವೂ ಬಲಿಯಾಗದಿರೆವು. ಒಟ್ಟಾರೆ ಬಹಳ ಸುಂದರವಾದ ಪ್ರಬಂಧಗಳ ಸಂಗ್ರಹ “ಪುಷ್ಪರಗಳೆ”. ಲಲಿತ ಪ್ರಬಂಧಗಳೇ ಕಾಣೆಯಾಗುತ್ತಿರುವ ಇಂದಿನ ಓದುಗ ಬಳಗಕ್ಕೆ ಇಂತಹ ಸಮೃದ್ಧ ಪ್ರಬಂಧಗಳ ಗುಚ್ಚ ಒದಗಿಸಿದ ಚಂದ್ರಶೇಖರ ಹೆಗಡೆಯವರನ್ನು ಅಭಿನಂದಿಸಲೇಬೇಕು.

‍ಲೇಖಕರು Admin

October 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: