ಊರ್ಣನಾಭನ ನಾಭಿಯಿಂದ…

 ಶೀಲಾ ಶಿವಾನಂದ ಗೌಡರ

“ಅವ್ವಾ…! ಯಾಕ ಜಾಡಪ್ಪನ ಮನಿ ಕೆಡಸಾಕತ್ತೀದಿ? ಪಾಪಾ…! ಅದೇನ ಮಾಡೇತಿ ನಿನಗ? ಅದು ಎಷ್ಟ ಕಷ್ಟಾ ಪಟ್ಟು ಮನಿ ಕಟ್ಟಿತ್ತು. ಬರೇ ಹಿಂಗ ಮಾಡತೀಯಲ್ಲ? ನಿನ್ನ ಮನೀನೂ ಯಾರರ ಹಿಂಗ ಕೆಡಸಿದರ ಸುಮ್ನ ಇರತೀಯನ? ಮತ್ತ ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಅಂತ ದೊಡ್ಡ ಭಾಷಣ ಮಾಡತಿ!” ಎಂದು ಮನೆಯಲ್ಲಿ ಅಲ್ಲಲ್ಲಿ ನನ್ನ ಕಣ್ಣು ತಪ್ಪಿಸಿ ಕಟ್ಟಿದ್ದ ಜೇಡದ ಬಲೆಯನ್ನು ಮನೆಯ ಇಂಚಿಂಚನ್ನೂ ಕಣ್ಣಿನ ಕಾಂತಿಯ ಟಾರ್ಚನ ಸಹಾಯದಿಂದ ಹುಡುಕಿ ಹುಡುಕಿ, ಕಂಡ ತಕ್ಷಣ ಕೈಯಲ್ಲಿ ಹಿಡಿದಿದ್ದ ಉದ್ದನೆಯ ಕಸಬರಗೆಯನ್ನ ಎತ್ತಿ ಗುರಿಯಿಟ್ಟು, ನಿಲುಕದಿದ್ದರೆ ಎತ್ತರದ ಸ್ಟೂಲನ್ನು ಏರಿ ಬಲೆಯನ್ನ ಅದರ ಎಳ್ಳಷ್ಟೂ ಕುರುಹು ಉಳಿಯದಂತೆ ನಾನು‌ ಅದಮ್ಯ ಉತ್ಸಾಹದಲ್ಲಿ ಹೊಡೆಯುತ್ತಿದ್ದರೆ, ಕೆಳಗಡೆ ಇಲಿಮರಿಯಂತೆ ನುಸುಳಿ ಬಂದ ಚೋಟುದ್ದದ ನನ್ನ ಮಗಳು ಕೊಟ್ಟ ಭಾಷಣ ಕೇಳಿ, ಬಂದ ಸಿಟ್ಟಿಗೆ ಕಸಬರಿಗೆ ಜರ್ರೆಂದು ಮೇಲಿಂದ ಇಳಿದು ತನ್ನ ಗುರಿ ಬದಲಿಸಿತ್ತು!
ಮರುಕ್ಷಣವೇ ಅವಳ ಮಾತಿನ ಸತ್ಯ ನನ್ನ ಮನದ ಅಹಂಕಾರದ ಬಲೂನನ್ನು ಚುಚ್ಚಿ ಒಡೆದುಹಾಕಿತ್ತು.

ನನ್ನ ಯೋಚನಾ ಲಹರಿಯನ್ನೂ ಬದಲಿಸಿತ್ತು. ಪಾಪ! ತನ್ನ ಪಾಡಿಗೆ ತಾನು ತಾರಸಿಯ ಮೂಲೆಯಲ್ಲಿ ಹಾಯಾಗಿ
ಗೂಡನ್ನು ಕಟ್ಟಿಕೊಂಡು, ಹೊಟ್ಟೆಯ ಪಾಡಿಗಾಗಿ ಬೇಟೆ ಆಡಿಕೊಂಡು ಇರುವ ಜೇಡನೆಂದರೆ ನನಗೆ, ನನ್ನಅತ್ತೆಗೆ, ನನ್ನ ಅಮ್ಮನಿಗೆ ಯಾಕಿಷ್ಟು ಕೋಪ? ಇಂಥ ಹೊಸ ಪ್ರಶ್ನೆಯೊಂದನ್ನು ತಲೆಯಲ್ಲಿ ಹುಟ್ಟುಹಾಕಿದ್ದಳು ನನ್ನ ಮಗಳು. ನಾವು ಎಷ್ಟೇ ದುಂಬಾಲು ಬಿದ್ದು ಜೇಡದ ಬಲೆಯನ್ನ ಕಿತ್ತು ಹಾಕಿದರೂ, ಮಹಾಭಾರತದಲ್ಲಿ ವಸ್ತ್ರಾಪಹರಣ ಪ್ರಸಂಗ ನಡೆದಾಗ ಯಜ್ಞಸೇನಿಗೆ ಶ್ರೀ ಕೃಷ್ಣ ಹರಿ ಬಿಡುವ ಸೀರೆಯ ನಿರಂತರ ಧಾರೆಯಂತೆ ಜೇಡದ ನೂಲು ಮತ್ತೆ ಎರಡು ಮೂರು ದಿನದಲ್ಲಿ ಹಾಜರಾಗಲು ನಾವು ಸೀರೆ ಸೆಳೆದು ಸೆಳೆದು ಸುಸ್ತಾಗಿ ದೊಪ್ಪನೇ ಬೀಳುವ ದುರಹಂಕಾರಿ ದುಶ್ಯಾಸನನಂತೆ ಮತ್ತೆ ಮತ್ತೆ ಬಲೆಯನ್ನ ಕೆಡವಿ ಕೆಡವಿ ನಾವೂ ಸುಸ್ತಾಗಿ ಜೇಡವನ್ನು ಹೀಗಳೆಯುತ್ತೇವೆ. ಹೀಗೆ ತನ್ನ ಇರುವಿಕೆಯನ್ನ, ತನ್ನ ಕ್ರಿಯಾಶೀಲತೆಯನ್ನ, ಜೊತೆಗೆ ನಮ್ಮ ವಿರುದ್ಧ ತನ್ನ ಜಯವನ್ನು ಪ್ರದರ್ಶಿಸಲು ಹಾಜರಾಗುವ ಜೇಡ, ಜೇಡದ ಬಲೆ ನಮ್ಮ ಲ್ಲಿಯ ಸ್ವಚ್ಛತಾ ಪ್ರಜ್ಙೆಯ ಕೊರತೆಯನ್ನ ಎತ್ತಿ ಹಿಡಿಯುವಂತ ಮನಸ್ಥತಿ ಇಂದು ನಮ್ಮೆಲ್ಲರದ್ದಾಗಿದೆ.

ಕಛೇರಿಯಲ್ಲಿ ಕಾಣಸಿಗುವ ಜೇಡದ ಬಲೆ ಕಛೇರಿಯ ಸಿಪಾಯಿಯ ಕಾರ್ಯ ಕ್ಷಮತೆಯನ್ನ ಸೆಕೆಂಡಿನಲ್ಲಿ ಒರೆಗೆ
ಹಚ್ಚುತ್ತದೆ. ಹಾಗೆಯೇ ಮನೆಯಲ್ಲೂ ಇದು ಗೃಹಿಣಿಯರ ಕಾರ್ಯ ಕುಶಲತೆ, ಸಂಸ್ಕಾರದ ಪ್ರಶ್ನೆಯಾದ್ದರಿಂದ ನಮಗೆ ಜೇಡ ಎಂದರೆ ಅನಾದಿ ಕಾಲದಿಂದ ಪರಮ ಶತೃ ವಿನಂತೆ ಭಾಸವಾಗುತ್ತದೆ. ಹೀಗಾಗಿ ಜೇಡಗಳು ಮಾನವರ ವಾಸವಿಲ್ಲದ ಮನೆಗಳಲ್ಲಿ ಹಾಯಾಗಿ ಬಲೆ ಬೀಸಿಕೊಂಡು, ಬೇಟೆಯಾಡಿಕೊಂಡಿರುತ್ತವೆ. ಸಿನೇಮಾಗಳಲ್ಲೂ ದೆವ್ವ, ಭೂತಗಳ ಭಯಾನಕ ಸೀನುಗಳನ್ನು ಕ್ರಿಯೇಟ್ ಮಾಡುವಾಗ ಹಿನ್ನೆಲೆ ಸಂಗೀತದ ಜೊತೆಗೆ ಜೇಡಗಳು, ಬಾವಲಿಗಳೂ ತಮ್ಮ ಕೈಲಾದ ಮಹತ್ವದ ಪಾತ್ರವನ್ನೇ ವಹಿಸುತ್ತವೆ. ಹೀಗಾಗಿ ಜೀವ ವೈವಿಧ್ಯದಲ್ಲಿ ವಿಶೇಷ ಸ್ಥಾನವನ್ನ ಹೊಂದಿರುವ ಇಂಥ ಪ್ರಾಣಿಗಳು ಸಾಮಾಜಿಕವಾಗಿ ಅನೇಕರೀತಿಯಲ್ಲಿ ಶೋಷಣೆ ಅನುಭವಿಸುತ್ತವೆ. ಜೇಡದ ಬಲೆ ಎಂದರೆ ಅನಿಷ್ಟ, ಕೇಡು, ದಾರಿದ್ರ್ಯ ಎಂಬ ಅರ್ಥವನ್ನು ಸಮಾಜದಲ್ಲಿ ಕೊಡಲಾಗುತ್ತದೆ.

ವಿ,ಕೃ ಗೋಕಾಕ ಅವರು ತಮ್ಮ “ಊರ್ಣನಾಭ ಕವನ”ದಲ್ಲಿ ಈ ಊರ್ಣನಾಭನನ್ನು ಕೇಡಿನ ಪ್ರತೀಕವಾಗಿ ಬಳಸಿದ್ದಾರೆ.

“ಅಲ್ಲಿ ಹೋದಲ್ಲಿ, ಇಲ್ಲಿ ನಿಂತಲ್ಲಿ ಜೇಡ ತೂಗು ಹಾಕಿರುವ ಜಾಲ.
ನೋಡಿದಲ್ಲೆಲ್ಲ ಮುಗಿಲ ಮುಸುಕಿಹುದು ಧೂಮಕೇತು ಬೀಸಿರುವ ಜಾಲ.
ಅಂತಪಾರವಿಲ್ಲದಲೆ ನೊತ ಜೇಡಾವತಾರವೆತ್ತಿರುವ ಕಾಲ!”

ತಪ್ಪು ದಾರಿಯಲ್ಲಿ ನಡೆದು ಮತ್ತೆ ಮತ್ತೆ ಕೇಡಿಗೆ ಆಹ್ವಾನಕೊಡುವವರು ನಾವೇ…! ಆದ್ದರಿಂದ ತಪ್ಪು ದಾರಿ ಹಿಡಿಯುವುದು ಬೇಡ ಎಂದು ಜೇಡದ ರೂಪಕದೊಂದಿಗೆ ಕವಿ ಹೇಳಿದ್ದಾರೆ. “ಊರ್ಣನಾಭ”ದಲ್ಲಿ ಶೇಷಶಾಯಿಯ ತಲ್ಪವಾದ ಆದಿಷೇಶನ ಕೆಳಗೆ, ಹಾಲ್ಗಡಲಿನ ತಳದಲ್ಲಿ ಪಾಚಿಕಟ್ಟಿರುವ ಜಾಗದಲ್ಲಿ ಜೇಡ ಮನೆ ಮಾಡಿಕೊಂಡಿರುತ್ತದೆ. ಅದು ಮೇಲೆ ಬಂದು ಗಂಗಾಪಾನದಲ್ಲಿ, ದೈನಂದಿನ ಉಣಿಸಿನಲ್ಲಿ ಎಲ್ಲೆಡೆ ತನ್ನ ಬಲೆ ಹರಡಿ ಎಲ್ಲವನ್ನು ಭ್ರಷ್ಟಗೊಳಿಸುತ್ತದೆ. ಕೊನೆಗೆ ಅಹಿತಲ್ಪನ ಆಜ್ಞೆಯಂತೆ ವಾಯುದೇವನು ಜೇಡನ ಬಲೆಯನ್ನ ಚಲ್ಲಾಪಿಲ್ಲಿ ಮಾಡಿದಾಗ, ಜೇಡ ತನ್ನ ಮೂಲಸ್ಥಳಕ್ಕೆ ಮರಳುತ್ತದೆ.

ಇನ್ನು ಜೇಡ ಪಾಪ! ತನ್ನ ಹೊಟ್ಟೆಹೊರೆಯುವುದಕ್ಕಾಗಿ ಬಲೆಯನ್ನ ನೇಯ್ದು ಬೇಟೆಯಾಡಿದರೆ, ನಾವು ಜೇಡರ ಬಲೆಯನ್ನ ಮೃತ್ಯುಪಾಶವೆಂದು, ಕಪಟನಾಟಕದಿಂದ ಮೋಸಕ್ಕೆ ವ್ಯಕ್ತಿಯನ್ನ ಗುರಿಯಾಗಿಸುವ ಕಲೆಗೆ ಹೋಲಿಸುತ್ತೇವೆ.

ಇದನ್ನೇ ಪಂಜೆಮಂಗೇಶರಾಯರು ತುಂಬಾ ಮಾರ್ಮಿಕವಾಗಿ ತಮ್ಮ ಪದ್ಯದ ಸಾಲುಗಲ್ಲಿ ಹೇಳಿದ್ದಾರೆ.

“ಬಾ ನೊಣವೇ ಬಾ ನೊಣವೇ ಬಾ ನನ್ನ ಮನೆಗೆ
ಬಾನೊಳಗೆ ಹಾರಿ ಬಲು ದಣಿವಾಯ್ತು ನಿನಗೆ
ಆ ಮಾತಿಗೆ ನೊಣವು “ಎಲೆ ಬೇಡ ಜೇಡ!
ನಿನ್ನ ಮನೆ ಸುಖವೆನಗೆ, ಹಾ! ಬೇಡ ಜಾಡ!”

ನನ್ನ ಮಗಳ ಮಾತು ಕೇಳಿದ ನಂತರ ಜೇಡದ ಸುತ್ತ ಹೆಣೆದಿರುವ ಇಂತಹ ಕತೆ ಕವನಗಳನ್ನ
ಓದಿ ನನಗೆ ಈಗೀಗ ಅಯ್ಯೋ! ಪಾಪ! ಎನಿಸುತ್ತಿದೆ. ಜೇಡದ ಬಗ್ಗೆ ನಮ್ಮಲ್ಲಿರುವ ಕೆಟ್ಟ ಅಭಿಪ್ರಾಯಗಳ
ಬಗ್ಗೆಯೇ ನಾನು ಚಿಂತಿಸುತ್ತಿರುವಾಗ ಮುಖಪುಸ್ತಕದಲ್ಲಿ ಆತ್ಮೀಯರೊಬ್ಬರು ಹಾಕಿದ ಚುಟುಕು ನೋಡಿ
ಮತ್ತಷ್ಟು ಕುಸಿದು ಹೋದೆ. ಗೂಳಿ ಬಿದ್ದರೆ ಆಳಿಗೊಂದು ಕಲ್ಲಲ್ಲವೇ….!

“ಮಾತೂ ಇರಲಿ, ಮುನಿಸೂ ಇರಲಿ
ಮೌನ ಮಾತ್ರ ಬೇಡ!
ನಮ್ಮಿಬ್ಬರ ನಡುವೆ ಎಂದೂ
ಬಲೆ ನೇಯದಿರಲಿ ಜೇಡ!”

ಅಬ್ಬಾ! ದಾಂಪತ್ಯದ ಕುರಿತಾಗಿರುವ ಚುಟುಕು ತುಂಬಾ ಅರ್ಥಗರ್ಭಿತವಾಗಿದ್ದರೂ, ಓದಿದ ತಕ್ಷಣ ನನ್ನ ಮನಸ್ಸು “ಅಷ್ಟಪದೋದರಾ! ನೀ ಗಂಡ ಹೆಂಡತಿಯ ಮಧ್ಯ ಯಾಕೆ ಹೋದೆಯಪ್ಪಾ? ಬಲೆ ನೇಯಲು ನಿನಗೆ ಬೇರೆ ಜಾಗವೇ ಸಿಗಲಿಲ್ಲವೇ? ಎಲ್ಲಿ ಹೋಗಿ ಸಿಕ್ಕಿಹಾಕಿಕೊಂಡೆ ಮಾರಾಯಾ? ನೋಡು ಎಂಥಾ ಕುಖ್ಯಾತಿ ನಿನಗೆ! ತಿಳಿದೂ ತಿಳಿದೂ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದೇ? “ ಎಂದು ಮರ ಮರ ಮರುಗಿದೆ.

ಅಯ್ಯೋ ಇಷ್ಟಕ್ಕೇ ಮುಗಿಯದೇ ಡಿವಿಜಿಯವರ ಪದ್ಯವೊಂದರಲ್ಲಿ ಮತ್ತೆ ಶಲದಿ ಇಣುಕಬೇಕೆ….?

“ಮಾತು ನೂಲನು ಜೇಡ ಬಲೆಯಾಗಿ ನೇಯ್ದು
ವೋಟು ನೊಣಗಳ ಪಿಡಿವ ಹೂಟವನು ಹೂಡಿ
ಊಟಕ್ಕೆ ಬಾಯ್ದೆರೆವ ಮಾಟಗಾರರಿಗೆ ನಾಂ
ಚೀಟಿಯಾಗುವೆನೆ? ಈ ಕೋಟಲೆಯ ಹರಿಸೈ”

ದುಷ್ಟ, ಭ್ರಷ್ಟ ಜನನಾಯಕರ ಸುಳ್ಳಿನ ಮಾತುಗಳಿಗೆ ಮತ್ತೆ ಜೇಡರ ಬಲೆಯೇ ತೊಟ್ಟಿಲಾಗಬೇಕೆ? ಅಯ್ಯೋ ನಿನ್ನ ಕರ್ಮವೇ! ಬಹುಶಃ ನಿನಗೆ ನನ್ನ ಮತ್ತು ನನ್ನ ಮಗಳ ಇಬ್ಬರ ವೋಟು ಮಾತ್ರ ಸಿಕ್ಕು ಠೇವಣಿಯನ್ನೇ ಕಳೆದುಕೊಂಡು ಹೀನಾಯ ಸೋಲೇ ನಿನಗೆ ಗತಿಯಾಗಬಹುದು ಎಂದುಕೊಂಡು ಶಲದಿಗಾಗಿ ದುಃಖಿಸಿದೆ. ಅಷ್ಟರಲ್ಲೇ ಕನ್ನಡ ಪುಸ್ತಕ ಓದುತ್ತ ಬಂದ ನನ್ನ ಮಗ “ಅವ್ವಾ. ‘ರಾಮನಾಥ’ ಇದು ಯಾರ ಅಂಕಿತನಾಮ?” ಎಂದು ಕೇಳುತ್ತ ಬಂದ. “ದೇವರ ದಾಸಿಮಯ್ಯನದು” ಎಂದು ಉದಾಸೀನವಾಗೇ ಹೇಳುತ್ತಿದ್ದ ಹಾಗೇ ನನ್ನ ಮತಿಗೆ ಏನೋ ಮಂಗಳವಾಧ್ಯಗಳು ಸಂದೇಶ ರವಾನಿಸಿದಂತಾಗಿ ದೇಹದಲ್ಲಿ ಧನಾತ್ಮಕ ಶಕ್ತಿ ಸಂಚಲನವಾಯಿತು. ದೇವರ ದಾಸೀಮಯ್ಯನೆಂದರೆ ಜೇಡರದಾಸಿಮಯ್ಯನೇ. ಆದ್ಯ ವಚನಕಾರ ದಾಸಿಮಯ್ಯ ನೇಕಾರರಾದ್ದರಿಂದ ಅವರಿಗೆ ಜೇಡರದಾಸಿಮಯ್ಯ ಎಂಬ ಹೆಸರು ಬಂದಿದೆ ಎಂದು ಓದಿದ ನೆನಪು. ತಮ್ಮ ಸದ್ಗುಣಗಳಿಂದ ದೈವೀ ಶಕ್ತಿಯನ್ನ ಪಡೆದು ದೇವರ ಸ್ವರೂಪವಾದ ಜೇಡರ ದಾಸಿಮಯ್ಯನವರೇ , ದೇವರ ದಾಸಿಮಯ್ಯ ಎಂಬ ವಿಶ್ಲೇಷಣೆ ಓದಿ, ತನ್ನ ಸ್ವಂತ ಬಲದಿಂದ, ಯಾರಿಗೂ ಅನ್ಯಾಯ ಮಾಡದೇ, ತಾಳ್ಮೆಯಿಂದ ಮತ್ತು ನಿರಂತರ ಶ್ರಮದಿಂದ ಬಲೆ ಹೆಣೆಯುವ ತನ್ನ ಕಾಯಕದೊಳಗೆ ನಿರತವಾಗುವ ಜೇಡದ ಬಗ್ಗೆ ಪುರಾತನ ಕಾಲದಲ್ಲೇ ಮನ್ನಣೆ ದೊರೆತಿರುವುದಕ್ಕೆ ಸಮಾಧಾನವಾಯಿತು.

ಹೀಗೇ ಜೇಡರ ಬಲೆಯ ಜಾಡು ಹಿಡಿದ ಹೊರಟ ಎನಗೆ ಜೇಡದ ಬಗ್ಗೆ ವಿಸ್ಮಯಕಾರಿ ಅಂಶಗಳ ಖಜಾನೆಯೆ
ದೊರೆಯತೊಡಗಿತು. ಜಂಗಲ್ ಬುಕ್‌ನ ಮೂಗ್ಲಿ ಆಲದ ಬೇರುಗಳಿಗೆ ಜೋತುಬಿದ್ದು ನಮ್ಮ ಆಧುನಿಕ
ಪ್ಯಾರಾಚೂಟ್ಗಳನ್ನೇ ನಾಚಿಸುವಂತೆ ಚಂಗನೇ ಕ್ಷಣ ಮಾತ್ರದಲ್ಲಿ ಅಡವಿಯನ್ನ ಸುತ್ತುತ್ತಿದ್ದಂತೆ
ಕೆಲವೊಮ್ಮೆ ಈ ಜೇಡ ತನ್ನ ರೇಶ್ಮೆಯ ಎಳೆಯ ಪ್ಯಾರಾಚೂಟನ್ನು ತೆರೆದು, ಗಾಳಿಯಲ್ಲಿ ಬಸ್ ಎಂದು ತೇಲಿ
ಬಂದು ಮುಖದ ಮೇಲೆ ಆಕ್ರಮಣ ಮಾಡಿದಾಗ (ತನಗೆ ಅರಿವಿಲ್ಲದೇ ) “ಯೇ….!“ ಎಂದು ಚೀರಿ ಮುಖವನ್ನ
ಕೊಡವಿಕೊಂಡು, ಭಯಗೊಂಡು ಅದೆಷ್ಟೋ ಬಾರಿ ನಕ್ಕಿದ್ದೇನೆ. ಏಕಕೇಂದ್ರೀಯ ವೃತ್ತಗಳಂತೆ, ಏಕ
ಕೇಂದ್ರೀಯ ಬಹುಭುಜಗಳಂತೆ ಸೂಕ್ಷ್ಮವಾಗಿ ಅದು ಹೆಣೆದ ಬಲೆಯನ್ನ, ಅದು ಬೇಟೆಯಾಡುವ ರೀತಿಯನ್ನ
ಬೆರಗುಗಣ್ಣಿನಿಂದ ನೋಡಿದ್ದೇನೆ. ಜೇಡ ತನ್ನ ಅಂಟಿನ ದಾರದಿಂದ ಸ್ಕೇಲಿನ ಸಹಾಯವಿಲ್ಲದೆ
ಸರಳರೇಖೆಗಳನ್ನ ನೇರವಾಗಿ – ಸಮಾಂತರವಾಗಿ ಎಳೆದು, ಬಹುಭುಜಾಕೃತಿಗಳನ್ನ ನಿಖರವಾಗಿ
ರಚಿಸುತ್ತಿದ್ದರೆ ಗಣಿತ ಶಿಕ್ಷಕಿಯಾದ ನನಗೆ ಜೇಡದ ಬಗ್ಗೆ ಹೆಮ್ಮೆಯೋ ಹೆಮ್ಮೆ. ಆಗ ಜೇಡದ ಬಗ್ಗೆ
ನನಗೆ ನನ್ನ ನೆಚ್ಚಿನ ವಿಧ್ಯಾರ್ಥಿಗಳೊಂದಿಗೆ ಇರುವ ಆಪ್ತ ಭಾವವೇ ಮೂಡಿದ್ದಿದೆ.

ದೊಡ್ಡಗಾತ್ರದ ಜೇಡಗಳು ಕಂಡಾಗ, ಎಂಟುಕಾಲುಗಳಿಂದ ನಮಗೆ ಹೆದರಿ ಅವು ಓಡುತ್ತಿದ್ದರೂ ವಿಚಿತ್ರವನ್ನ
ಕಂಡಂತೆ ಮಕ್ಕಳು ಚೀರಿ ಮನೆತುಂಬಾ ಓಡಾಡಿದಾಗ ಅವರ ದೌರ್ಬಲ್ಯ ಅರಿತು, ಅವರು ಊಟಕ್ಕೆ ಮೊಂಡಾಟ
ಮಾಡಿದಾಗ “ನೋಡ ಮತ್ತ! ನೀ ಲೊಗು ಲೊಗು ಊಟಾ ಮಾಡಲಿಕ್ರ ಜಾಡಪ್ಪನ ಕೈಯಾಗ ಕೊಡತೇನಿ ನಿನ್ನ” ಅಂತ
ಗದರಿಸಿದ್ದೇನೆ. ಇಂದು ಅದೇ ಮಗಳ ಮಾತೇ ಜೇಡದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುಲು ಪ್ರೋತ್ಸಾಹ
ನೀಡಿದೆ.

ಬಲೆಯನ್ನು ಹೆಣೆದು, ತನ್ನ ಬೇಟೆಗಾಗಿ ದೂರದಲ್ಲಿ ಹೊಂಚು ಹಾಕಿ ಕುಳಿತು, ಬಲೆಯಲ್ಲಿ ಬೇಟೆ ಬಿದ್ದ ತಕ್ಷಣ
ತಕ್ಷಣ ಬಲೆಯ ಮೇಲೆ ತನ್ನ ಜಾದುವಿನ ಹೆಜ್ಜೆಗಳನ್ನ ಹಾಕುತ್ತ, ಬೇಟೆಯನ್ನ ಹೀರುವಾಗ, ಬೇರೆಯ ಹುಳಗಳನ್ನ ಸಿಕ್ಕಿಹಾಕಿಸುವ ಈ ಜಾದುವಿನ ಬಲೆ ಜೇಡಕ್ಕೆ ಹೇಗೆ ಸಾರಾಗವಾಗಿ ಹೋಗಲು ಬಿಡುತ್ತದೆ ಎಂದು ಹಲವು ಬಾರಿ ತಲೆ ಕೆರೆದುಕೊಂಡದ್ದುಂಟು. ಜೇಡದ ಬಗ್ಗೆ ಜಾಲಾಡಿಸಿದಾಗ ನನ್ನ ಹಾಗೆ! ಅಲ್ಲಲ್ಲ! ನನಗಿಂತ ಅದೆಷ್ಟೋ ಪಟ್ಟು ಹೆಚ್ಚು ತಲೆಕೆಡಿಸಿಕೊಂಡು ಜೇಡದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳ ಬಗ್ಗೆ ಜಿಜ್ಞಾಸೆ ಮೂಡಿತು.

ಆಕ್ಸಫರ್ಡ ವಿಶ್ವವಿದ್ಯಾಲಯದ ಲೊರೈನ್ ಲಿನ್, ಡೊನಾಲ್ಡ ಎಡ್ಮಂಡ್ಸ, ಮತ್ತು ಫ್ರಿಜ್ ವೊಲ್ರಾತ್ ಎಂಬ ವಿಜ್ಞಾನಿಗಳು ಹೈಸ್ಪೀಡ್ ವಿಡಿಯೋ ಕ್ಯಾಮರಾ, ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬಳಸಿ ಜೇಡರ ಬಲೆಯ ರಹಸ್ಯವನ್ನು ಎಳೆ ಎಳೆಯಾಗಿ ಬಿಡಿಸಿದರು. ಬಲೆಯ ಕೇಂದ್ರಬಿಂದುವಿನಿಂದ ಪರಿಧಿಯವರೆಗೆ ಅಶೋಕ ಚಕ್ರದ ಕಡ್ಡಿಗಳಂತೆ ಇರುವ ರೇಡಿಯಲ್ ಎಳೆಗಳು ಗಡುಸಾಗಿದ್ದು, ಬಲೆಗೆ ಬಿಗಿತನ ಬರುವಂತೆ ಮಾಡುತ್ತವೆ. ಇವಕ್ಕೆ ಶೇಕಡಾ
ಇಪ್ಪತ್ತರಷ್ಟು ಮಾತ್ರ ಹಿಗ್ಗುವ ಶಕ್ತಿ ಇರುತ್ತದೆಯಂತೆ. ಇವುಗಳೇ ಜೇಡದ “ರಾಜಮಾರ್ಗಗಳು”.

ಬಲೆಯಲ್ಲಿ ಬೇಟೆ ಬಿದ್ದಾಗ ಜೇಡಕ್ಕೆ ಈ ರೇಡಿಯಲ್ ಎಳೆಗಳೇ ತಮ್ಮ ಕಂಪನದ ಮೂಲಕ ಸಂದೇಶ ರವಾನಿಸುತ್ತವೆ. ಇನ್ನು ಈ ರೇಡಿಯಲ್ ಎಳೆಗಳನ್ನು ಬಳಸಿಕೊಂಡಿರುವ ಸುರುಳಿಯಾಕಾರದ ಎಳೆಗಳು 200% ಎಲಾಸ್ಟಿಕ್ ಆಗಿದ್ದು, ನೊಣ ಅಥವಾ ಕೀಟ ಬಲೆಯಲ್ಲಿ ಬಿದ್ದಾಗ ಬಲೆ ಕತ್ತರಿಸದಂತೆ ತಡೆದು, ಅವುಗಳು ಬಲೆಯಿಂದ ಪುಟಿದೆದ್ದು ತಪ್ಪಿಸಿಕೊಳದಂತೆ ತಮ್ಮ ಮಡಿಲಿನ ಜೋಕಾಲಿಯಲ್ಲಿ ಬಂಧಿಸಿಡುತ್ತವೆ. ಅಬ್ಬಾ! ಮಿಲಿಯನ್‌ಗಟ್ಟಲೇ ವರ್ಷಗಳ ಮೊದಲಿನಿಂದಲೇ ಜೇಡಕ್ಕೆ ಬಲೆ ಹೆಣೆಯುವ ಇಂಥಾ ವೈಜ್ಞಾನಿಕ ಜ್ಞಾನವಿದೆ! ಅಬಲೆಯಲ್ಲ! ಇಂಥಾ ವಿಸ್ಮಯಕಾರಿ ಬಲೆ ಹೆಣೆವ ಜೇಡ. ಬಲೆ ಹೆಣೆವ ಇದರ ಕಲೆಗೆ ಅನ್ನಲೇ ಬೇಕು “ಭಲೇ ಭಲೇ”! ಈ ಕಲೆಯಿಂದಲೇ ಇದು ಕಂಡುಕೊಂಡಿದೆ ವಿಶ್ವದಾದ್ಯಂತ ನೆಲೆ.

‘ಅರೇನಿ‘ ವರ್ಗಕ್ಕೆ ಸೇರಿದ ‘ಕೆಲಿಸೆರೆಟಾ’ ಉಪಸಂತತಿಯ ಸಂಧಿಪದಿಗಳಾದ ಇವು ತಮ್ಮ ನಾಭಿಯಲ್ಲಿ ಉದ್ಭವವಾಗುವ ನೂಲಿನ ಎಳೆಗಳನ್ನು ನೇಯುತ್ತ, ಅದನ್ನು ಗಾಳಿಯಲ್ಲಿ ತೇಲಿಬಿಟ್ಟು ಬಲೆಯನ್ನ ಹೆಣೆಯುತ್ತವೆ. ಅತ್ಯಂತ ಸೂಕ್ಮವಾಗಿರುವ ಅದರ ನೂಲು ಅದರ ದಪ್ಪಕ್ಕೆ ಹೋಲಿಸಿದರೆ ತುಂಬಾ ಬಲಿಷ್ಟವಾದುದಂತೆ. ಅಷ್ಟೇ ಸಪೂರವಾದ ಉಕ್ಕಿನತಂತಿ ಜೇಡಿನ ನೂಲಿಗಿಂತ ಕಡಿಮೆ ಬಲಹೊಂದಿರುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆಯಂತೆ. ನಿಜಕ್ಕೂ ಎಂಥ ವಿಸ್ಮಯ! ಚಿಕ್ಕವಳಿದ್ದಾಗ ಜೇಡದ ಬೇಟೆಯಾಡುವ ಕೌಶಲ್ಯವನ್ನು ವೀಕ್ಷಣೆಮಾಡುವುದು ತುಂಬಾ ಕುತೂಹಲವೆನಿಸುತ್ತಿತ್ತು.

ಜೇಡದ ಬಲೆಯಲ್ಲಿ ಇರುವೆಯೋ, ಸೊಳ್ಳೆಯೋ ಅಥವಾ ಯಾವುದೇ ಹುಳು ಬಿದ್ದದ್ದು ನಮ್ಮ ಕಣ್ಣಿಗೆ ಬಿದ್ದರೆ, ಆ
ಜೇಡ ಬರುವ ಮುಂಚೆಯೇ “ಯೇ! ಲೊಗು ಬರ್ರಿ, ಜಾಡದ ಬಲಿಯೊಳಗ ಹುಳಾ ಬಿದ್ದೇತಿ” ಎಂದು ಅಕ್ಕಪಕ್ಕದಲ್ಲಿರುತ್ತಿದ್ದ ಸ್ನೇಹ ಬಳಗವನ್ನ ಕೂಗಿ ಕರೆಯುತ್ತಿದ್ದೆವು. ಹುಳ ಬಲೆಯಲ್ಲಿ ಬಿದ್ದಾಗ ಬಲೆಯ ಕಂಪನದಿಂದ ಜಾಗೃತವಾಗುತ್ತಿದ್ದ ಜೇಡ ಸ್ವಲ್ಪವೂ ತಡಮಾಡದೇ ಓಡಿ ಬಂದು ಸಿಲುಕಿ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದ ಹುಳವನ್ನ ಸಂಪೂರ್ಣವಾಗಿ ಮತ್ತೆ ತನ್ನ ನೂಲಿನಿಂದ ಸುತ್ತಿ ಸುತ್ತಿ ಅದು ತಪ್ಪಿಸಿಕೊಂಡು ಹೋಗದಂತೆ ಬಿಗಿಯಾಗಿ ಸುತ್ತುತ್ತಿತ್ತು. ನಾವು ಹಾಗೇ ತದೇಕ ಚಿತ್ತವಾಗಿ ನೋಡುತ್ತ “ನೋಡ್ರಿ! ಈಗ ಆ ಹುಳಕ್ಕೆ ಚುಚ್ಚಿ ಅದರ ರಕ್ತ ಹೆಂಗ ಹೀರಕೊಂತೈತಿ !” ಎಂದು ಜೇಡ , ಹುಳವನ್ನು ಸಂಪೂರ್ಣವಾಗಿ ಹೀರಿ ಬಿಡುವವರೆಗೆ ತದೇಕ ಚಿತ್ತದಿಂದ ನೋಡುತ್ತಿದ್ದೆವು.

ಜೇಡ ಬಿಟ್ಟುಹೋದ ಮೇಲೆ ಆ ಹುಳ ದೇಹದ ಸತ್ವವನ್ನೆಲ್ಲ ಕಳೆದುಕೊಂಡು, ಕುಬ್ಜವಾಗಿ ಸೆಟೆದುಕೊಂಡು,
ಪುರಾತನ ಕಾಲದ ಅವಶೇಷಗಳಂತೆ ನೇತಾಡ ತೊಡಗುತ್ತಿದ್ದವು. ಆದರೆ ಜೇಡಗಳು ತಮ್ಮ ದೇಹದಲ್ಲಿ
ಉತ್ಪತ್ತಿಯಾಗುವ ವಿಷವನ್ನು ಹುಳಕ್ಕೆ ಹುಚ್ಚಿದಾಗ ಹುಳದ ಒಳ ಅಂಗಾಗಳೆಲ್ಲ ದ್ರವಾಗತೊಡಗುತ್ತವೆ.
ನಂತರ ಜೇಡರ ಹುಳುಗಳು ಆ ದ್ರವವನ್ನು ಹೀರುತ್ತವೆ ಎಂಬುದು ನನಗೆ ಜೇಡದ ಬಗ್ಗೆ ತಡಕಾಡಿದಾಗ ಸಿಕ್ಕ
ಮಾಹಿತಿ. ಜೇಡ ಹೀರುತ್ತಿದ್ದುದು ಕೇವಲ ರಕ್ತವನ್ನಲ್ಲ! ಸಂಪೂರ್ಣ ದೇಹವನ್ನೇ! ಎಂಬುದು ಈಗ
ತಿಳಿಯಿತು. ಆದರೆ ಬಹಳಷ್ಟು ಜೇಡಗಳ ವಿಷ ಸೌಮ್ಯವಾಗಿರುವುದರಿಂದ ಅದು ಮನುಷ್ಯರ ಮೇಲೆ ಪ್ರಭಾವ
ಬೀರುವುದಿಲ್ಲ.

ಆದರೆ ಜೇಡಕ್ಕೆ “ಕಪ್ಪು ವಿಧವೆ” ಎಂಬ ಪಟ್ಟ ಇರುವುದು ಕೇಳಿ ಬೇಸರವಾಯಿತು. ಲ್ಯಾಟ್ರೋಡಕ್ಟಸ್ ಪ್ರಬೇಧದ ಸುಮಾರು 30ಕ್ಕೂ ಹೆಚ್ಚು ಹೆಣ್ಣು ಜೇಡಗಳು ಮಿಲನದ ನಂತರ ಗಂಡು ಜೇಡವನ್ನೇ ಭಕ್ಷಿಸುವುದರಿಂದ ಈ ಕುಖ್ಯಾತಿ ಅದಕ್ಕೆ. ಈ ಜೇಡಗಳು ಗುಜರಾತಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಪಾಪ! ಅದರದೇನು ತಪ್ಪು! ಸೃಷ್ಟಿ ವೈಚಿತ್ರ್ಯದ ಮುಂದೆ ಯಾರ ಆಟವೂ ನಡೆಯುವುದಿಲ್ಲವಲ್ಲ. ಹೆಣ್ಣು ಜೇಡಗಳು ತುಂಬಾ ಹೊಟ್ಟೆಬಾಕ ಮತ್ತು ವ್ಯಾಪಕ ಶ್ರೇಣಿಯ ಬೇಟೆಯನ್ನು ಸೇವಿಸುತ್ತವೆ. ಆದ್ದರಿಂದ ಅನಿವಾರ್ಯವಾಗಿ ಹೆಣ್ಣುಜೇಡಗಳು ಮಿಲನದ ನಂತರ ತಮ್ಮ ಹಸಿವೆಯನ್ನ ತಾಳಲಾರದೇ ಗಂಡು ಜೇಡವನ್ನೇ ನುಂಗಿಬಿಡುತ್ತವೆ.

ಜೀವಜಗತ್ತಿನಲ್ಲಿ ವಿಚಿತ್ರವಾದರೂ ಸತ್ಯ! ಈ ಜಾತಿಯ ಜೇಡಗಳು ಹೆಚ್ಚು ವಿಷಕಾರಿಯಾಗಿದ್ದು ಮನುಷ್ಯರಿಗೂ ಅಪಾಯಮಾಡುತ್ತವೆ. ಸದ್ಯ ನಮ್ಮ ಕರ್ನಾಟಕದಲ್ಲಿ ಇವು ಕಾಣಸಿಗುತ್ತಿಲ್ಲ. ನಮ್ಮಲ್ಲಿ ಕಾಣಸಿಗುವ ಕೆಲವು ಸಾಮಾನ್ಯ ಜೇಡಗಳೆಂದರೆ ಹುಲಿ ಜೇಡ, ಕಳ್ಳಕಿಂಡಿ ಜೇಡ, ಕೆಂಜಿಗ ಜೇಡ, ಲಾಗಾ ಜೇಡ, ಚಂದದ ಪೇಟದ ಜೇಡ
ಮುಂತಾದವು. ಮಿಲನದ ನಂತರ ಸುಮಾರು 3000ದಷ್ಟು ಮೊಟ್ಟೆಗಳನ್ನಿಡುವ ಹೆಣ್ಣು ಜೇಡಗಳು ಆ ಎಲ್ಲ
ಮೊಟ್ಟೆಗಳನ್ನು ತಾನು ನೇಯ್ದ ರೇಷ್ಮೆಯ ಚೀಲದಲ್ಲಿ ಭದ್ರ ಪಡಿಸಿ, ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ಸದಾ ತಿರುಗುತ್ತದೆ. ಮೊಟ್ಟೆಗಳು ತಮ್ಮ ಎಲ್ಲಾ ಲಾರ್ವಾ ಹಂತಗಳನ್ನು ಆ ಮೊಟ್ಟೆಯ ಚೀಲದೊಳಗೆ ದಾಟಿ ಮರಿಗಳಾಗಿ ಹೊರಬರುತ್ತವೆ. ಅಬ್ಬಾ! ಜೇಡದ ತಾಯ್ತನವನ್ನ ಮೆಚ್ಚಲೇ ಬೇಕು.

ಜೇಡದ ಬಲೆ ಹೆಣೆಯುವ ವಿಶೇಷಗುಣ ಮತ್ತು ತನ್ನ ರೇಷ್ಮೆದಾರದ ಸಹಾಯದಿಂದ ದೂರ ದೂರದ ಪ್ರದೇಶಗಳಿಗೆ
ವಿಮಾನವೇರಿ ಹೊರಟಂತೆ ಕ್ಷಣ ಮಾತ್ರದಲ್ಲಿ ಜಿಗಿಯುವ ಕೌಶಲ್ಯದಿಂದ ಜೇಡ ಮಕ್ಕಳಿಗೆ ಬಲು ಅಚ್ಚುಮೆಚ್ಚು. ಆದ್ದರಿಂದ ಮಕ್ಕಳ ಚಲನಚಿತ್ರಗಳಲ್ಲಿ ಸ್ಪೈಡರ್ ಮ್ಯಾನ್ ಅತ್ಯಾಕರ್ಷಕವಾಗಿ ಹೊರ ಹೊಮ್ಮುತ್ತಾನೆ. ಹೊಂಚುಹಾಕಿ ಬೇಟೆಯನ್ನ ಬಲೆಯಲ್ಲಿ ಬಂಧಿಸಬಲ್ಲ ಜೇಡದ ಚಾಣಾಕ್ಷತೆ ಜೇಮ್ಸಬಾಂಡ್‌ಗಿಂತ ಕಡಿಮೆ ಏನಿಲ್ಲ! ಅದಕ್ಕಾಗಿ ಜೇಡದ ಹೆಸರಿನಲ್ಲಿ ಹೊರಬಂದ ಪತ್ತೇದಾರಿ ಕಾದಂಬರಿಗಳು, ಚಲನಚಿತ್ರಗಳಿಗೇನು ಕೊರತೆಯಿಲ್ಲ. 1968ರಲ್ಲಿ ತೆರೆಕಂಡ ಡಾ|| ರಾಜಕುಮಾರ ಮತ್ತು ಜಯಂತಿ ಅಭಿನಯದ ಚಲನಚಿತ್ರ “ಜೇಡರ ಬಲೆ” ಅದ್ಭುತವಾಗಿ ಮೂಡಿಬಂದಿದೆ. ಇನ್ನು ಸುದರ್ಶನ್ ದೇಸಾಯಿಯವರ “ಕೆಂಪು ಜೇಡ” ಪತ್ತೇದಾರಿ ಕಾದಂಬರಿಯಲ್ಲಿ ಕೂಡ ನಮ್ಮ ಜೇಡ ಅದ್ಭುತ ಕೆಲಸ ಮಾಡಿದೆ.

ಈ ಜೇಡದ ಬಲೆಯ ಪ್ರೇರಣೆಯೋ ಏನೋ! ಇಂದಿನ ತಾಂತ್ರಿಕ ಯುಗದಲ್ಲಿ ಕಂಪ್ಯೂಟರ್‌ಗಳೂ ವಿಶ್ವದಾದ್ಯಂತ ಒಂದಕ್ಕೊಂದು ಜೇಡದ ಸೂಕ್ಷ್ಮ ಎಳೆಗಳಂತ ವಿಕಿರಣಗಳಿಂದ ಸಂಬಂಧ ಹೊಂದಿ, ವಿಶ್ವದ ಯಾವುದೇ ಮೂಲೆಯ ಮಾಹಿತಿಯು ಕ್ಷಣಾರ್ಧದಲ್ಲಿ ಜೇಡದಂತೆ ತನ್ನ ನೂಲಿನ ಎಳೆಯನ್ನು ಹಿಡಿದು ಚಂಗನೇ ಜಿಗಿದು ನಮ್ಮ ಕಂಪ್ಯೂಟರಿನ ಪರದೆ ಮೇಲೆ ಬಂದು ಕೂಡುತ್ತದೆ. ಅದಕ್ಕೆ ಇದನ್ನು www ಅಂದರೆ world wide web ಎನ್ನುತ್ತಾರೆ. ಅಬ್ಬಾ! ಜೇಡದ ಸ್ಪೂರ್ಥಿ ಪಡೆದ ಮನುಕುಲ ಇಂದು ವಿಶ್ವವನ್ನೇ ಅಂಗೈಯಲ್ಲಿ ಹಿಡಿದು, ಬೆರಳತುದಿಗಳಲ್ಲಿ ಆಡಿಸುವಂತಾಗಿದೆ.

‍ಲೇಖಕರು Admin

October 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಬಸವನಗೌಡ ಹೆಬ್ಬಳಗೆರೆ

    ಜೇಡರ ಬಲೆ ಬರಹ ಉತ್ತಮವಾಗಿದೆ…

    ಪ್ರತಿಕ್ರಿಯೆ
  2. Chandrashekhar Hegde

    ಜೇಡರ ಬಲೆಯಲ್ಲಿರುವ ಸೂಕ್ಷ್ಮ ಸಂಗತಿಗಳನ್ನು ಎಳೆ ಎಳೆಯಾಗಿ ಕಟ್ಟಿ ಸಹೃದಯರಿಗೊಂದು ಸುಂದರ ಬಲೆಯನ್ನು ಹೆಣೆದಿದ್ದೀರಿ. ಮಗುವಿನ ಮುಗ್ಧತೆಯ ಮುಂದೆ ನಾವು ಜೇಡಕ್ಕಿಂತ ಚಿಕ್ಕವರು ಎಂಬುದನ್ನು ಮಾರ್ಮಿಕವಾಗಿ ಬಣ್ಣಿಸಿರುವಿರಿ. ವಿಜ್ಞಾನವನ್ನು ಬೆರೆಸಿ ಲಾಲಿತ್ಯದ ರಸಾಯನವನ್ನು ಉಣಬಡಿಸಿರುವ ತಮಗೆ ಅಭಿನಂದನೆಗಳು.

    ಪ್ರತಿಕ್ರಿಯೆ
    • Ranganath gollar

      ಜೇಡರ ಬಲೆಯ ಜೀವನ ಶೈಲಿ
      ನಿಮ್ಮ ಬರವಣಿಗೆ ಶೈಲಿಯೂ
      ತುಂಬಾ ಚೆನ್ನಾಗಿದೆ. ತಮಗೆ ಅಭಿನಂದನೆಗಳು,

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: