ಜಿ ಎನ್ ನಾಗರಾಜ್ ಅಂಕಣ: ಅಸಾಮಾನ್ಯ ಕೆರೆ ಇಂಜನಿಯರ್‌ಗಳಾದ ಮಣ್ಣೊಡ್ಡ, ಕಲ್ಲೊಡ್ಡರು.

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೆರೆಗಳಿವೆ. ಆಧುನಿಕ ಬೃಹತ್ ಅಣೆಕಟ್ಟುಗಳ ತಂತ್ರಜ್ಞಾನಕ್ಕೆ ಮೊದಲು ಇವುಗಳೇ ಭಾರತದ ಆಹಾರ ಭದ್ರತೆ, ನಗರಗಳ ಬೆಳವಣಿಗೆಯ ಆಧಾರ.  ಕೆರೆಗಳ ಕಟ್ಟೋಣಕ್ಕೆ ಸಿವಿಲ್ ಇಂಜಿನಿಯರಿಂಗ್‌ನ ಬಹಳ ಉನ್ನತ ತಂತ್ರಜ್ಞಾನ ಮತ್ತು ಅರಿವು ಅತ್ಯವಶ್ಯ. ಬೆಂಗಳೂರಿನ ಸ್ಯಾಂಕಿ ಟ್ಯಾಂಕ್‌ಗೆ ಹೆಸರು ನೀಡಿದ ಇಂಜನಿಯರ್ ಸ್ಯಾಂಕಿ, ಬಹಳ ಪ್ರಸಿದ್ಧರಾದ ವಿಶ್ವೇಶ್ವರಯ್ಯ, ಬಾಳೇಕುಂದ್ರಿಯವರಿಗೆ ದೊರಕಿದ ಆಧುನಿಕ ಇಂಜನಿಯರಿಂಗ್ ಶಿಕ್ಷಣದ ಅನುಕೂಲ ಇಲ್ಲದೆ ಇವುಗಳನ್ನೆಲ್ಲ ಕಟ್ಟಿದ್ದಾರಲ್ಲಾ! ಅದೂ ಸಾವಿರಾರು ವರ್ಷಗಳ ಹಿಂದಿನ ಕಡುಕಷ್ಟದ ಪರಿಸ್ಥಿತಿಗಳಲ್ಲಿ!

ಕೆರೆಗಳನ್ನು ಆಯ್ಕೆ ಮಾಡುವ ನೀರಿನ ಆಸರೆ, ಸೂಕ್ತ ಜಾಗದ ಆಯ್ಕೆ, ಏರಿಗಳ ಎತ್ತರ, ಉದ್ದ, ಬುಡದ ಅಗಲ, ಒಳಮೈ, ಹೊರಮೈಯ ಇಳಿಜಾರು, ಒಳಮಗ್ಗುಲಿಗೆ ಕಲ್ಲಿನ ರಕ್ಷಣೆ,  ಕೋಡಿಗಳ ಎತ್ತರ, ಅಗಲ, ಅದರ ಡಿಸೈನ್, ಏರಿಗಳ ಕೆಳಗಿಂದ ತೂಬುಗಳ ಮೂಲಕ ನೀರು ಹೊರಗೆಳೆಯುವುದು, ಪ್ರಧಾನ ಮತ್ತು ಉಪ ಕಾಲುವೆಗಳ ವಿನ್ಯಾಸ… ಇವುಗಳು ಬಹಳ ಸಂಕೀರ್ಣ. ಅವುಗಳು ಸಾವಿರಾರು ವರ್ಷಗಳ ಅನುಭವದ,  trial and errorಗಳ ಆಧಾರದ ಮೇಲೆ ರೂಪುಗೊಂಡವು. ಈ ಎಲ್ಲ ಅನುಭವ ಮತ್ತು ತಂತ್ರಜ್ಞಾನದ ಗಣಿ ಒಡ್ಡರು, ಅವರ ಮೇಸ್ತ್ರಿಗಳು. ಅವರ ಜೊತೆ ಮಣ್ಣ , ಕಲ್ಲು ಸರಬರಾಜು ಮಾಡಲು ಹೆಗಲು ಹಚ್ಚಿ ದುಡಿದ ಜೀತಗಾರರು, ಬಡ ಗೇಣಿದಾರ ರೈತರಿಗೂ ಒಂದಷ್ಟು ಅನುಭವ ದಕ್ಕಿರಬಹುದು.

ದೇವಾಲಯಗಳನ್ನು ಕಟ್ಟಿಸಿದಂತೆ ಅವುಗಳನ್ನು ಕಟ್ಟಿಸಿದವರು ರಾಜರು, ಸಾಮಂತರು, ಮಾಂಡಲಿಕರು ಎಂದು ʻಸ್ಥಾಪಿತ ಇತಿಹಾಸʼ ಶಾಸನಗಳನ್ನು ಉಲ್ಲೇಖಿಸುತ್ತಾ ನಮ್ಮ ಮುಂದಿಡುತ್ತಾ ಬಂದಿವೆ. ಆದರೆ ಇವರಲ್ಲಿ ಯಾರಿಗಾದರೂ ಅವುಗಳನ್ನು ಎಂತಹ ಜಾಗದಲ್ಲಿ, ಹೇಗೆ ಕಟ್ಟಬೇಕು ಎಂಬ ಬಗ್ಗೆ, ಅವುಗಳ ವಿವಿಧ ಅಂಗಗಳ ತಾಂತ್ರಿಕ ಅಗತ್ಯಗಳ ಬಗ್ಗೆ ಎಳೆಯಷ್ಟು ತಿಳುವಳಿಕೆಯಾದರೂ ಇತ್ತೇ? ದೇವಾಲಯಗಳ ಮೂರ್ತಿಗಳು, ಭಿತ್ತಿಶಿಲ್ಪಗಳು ಮೊದಲಾದ ಕೆಲ ಅಂಶಗಳ ಬಗ್ಗೆ ಪುರೋಹಿತರು, ರಾಜರುಗಳ ಒಂದಷ್ಟು ಪಾತ್ರ ಇರಬಹುದು. ದೇವಾಲಯ ನಿರ್ಮಿಸುವ  ಸ್ಥಪತಿಗಳು, ಶಿಲ್ಪಿಗಳು ಇವರಿಗೆ ಬೇರೆ ಯಾವ  ಕಟ್ಟೋಣ ಕಾಯಕದವರಿಗಿಂತ ಹೆಚ್ಚು ಮಾನ್ಯತೆ ಇತ್ತು. ರಾಜರು, ಪುರೋಹಿತರು ದೇವಾಲಯದ ಪ್ರಗತಿ ನೋಡಲು ಪದೇಪದೆ ಭೇಟಿ ಕೊಡುತ್ತಿದ್ದರು. ಆದರೆ ಕೆರೆ ಕಟ್ಟುವ ಒಡ್ಡರ ಬಳಿ ಸುಳಿಯುತ್ತಿದ್ದರೆ, ಅವರ ಕಾರ್ಯದ ವಿವಿಧ ಹಂತ, ಆಯಾಮಗಳನ್ನು ಅರಿಯುವ ಯೋಚನೆಯಾದರೂ ಮಾಡುತ್ತಿದ್ದರೇ ಇವರು!? ಇಲ್ಲಿ ಅಂತಹ ಉಸ್ತುವಾರಿ ಮಾಡುತ್ತಿದ್ದವರು ಸ್ಥಳೀಯ ಭೂ ಒಡೆಯರು.

ಶೇ.90ಕ್ಕಿಂತ ಹೆಚ್ಚು ಭಾಗದ ಕೆರೆಗಳನ್ನು ಕಟ್ಟುವ ತುರ್ತು ಅಗತ್ಯವನ್ನು ಹಾಗೂ ಅವುಗಳ ಕಟ್ಟುವ ಸಾಧ್ಯತೆಗಳನ್ನು ಮನಗಂಡವರು ಗ್ರಾಮೀಣ ರೈತ ಸಮುದಾಯ, ಭೂ ಒಡೆಯರುಗಳಾದರೆ, ಅವುಗಳನ್ನು   ರೂಪಿಸಿದವರು,  ಕಟ್ಟಿದವರು ಮಣ್ಣೊಡ್ಡ ಮತ್ತು ಕಲ್ಲೊಡ್ಡರು ಎಂಬ ಪ್ರತಿಭಾವಂತ ಇಂಜನಿಯರ್‌ಗಳು.

ಮದಗದ ಕೆರೆ, ಸೂಳೆಯಕೆರೆ ಯಾ  ಶಾಂತಿಸಾಗರ ಎಂಬ ಬೃಹತ್ ಕೆರೆಗಳು, ಇಂತಹ ಹಲವು ಕೆರೆಗಳು ಭಾರತದ, ಅದರಲ್ಲೂ ದಕ್ಷಿಣ ಭಾರತದ ಆ ಪ್ರಾಚೀನ ಇಂಜನಿಯರ್‌ಗಳು ದೇಶಕ್ಕೆ ತಂದ ವಿಶ್ವಪ್ರಸಿದ್ಧಿ. ಇಲ್ಲಿಯ ರೈತರಿಗೆ, ಜನರ ಆಹಾರ ಪೂರೈಕೆಗೆ ನೀಡಿದ ಕೊಡುಗೆ. ಯಾರೀ ಇಂಜನಿಯರ್‌ಗಳು?

ʻಮಾಯದಂತಾ ಮಳೆ ಬಂತಣ್ಣಾ ಮದಗಾದ ಕೆರೆಗೆ…ʼ ಎಂಬ ಜಾನಪದ ಗೀತೆ‌ ಎಲ್ಲರಿಗೂ ಗೊತ್ತಲ್ಲ. ಆ ಮದಗದ ಕೆರೆಯಂತಹ ನೀರಾವರಿ ಕಟ್ಟೋಣ ಮಾಡಲು ಅಲ್ಲಿಯವರೆಗಿನ ಯುರೋಪಿನ ತಂತ್ರಜ್ಞರಿಗೆ ಸಾಧ್ಯವಾಗಿರಲಿಲ್ಲ ಎಂದು 19ನೆಯ ಶತಮಾನದಲ್ಲಿ ಅದನ್ನು ನೋಡಿದ ಬ್ರಿಟಿಷ್ ತಂತ್ರಜ್ಞರು ಉದ್ಗರಿಸಿದ್ದಾರೆ.

ಸೂಳೆಯ ಕೆರೆ ಅಥವಾ ಶಾಂತಿಸಾಗರ ಎಂದು ಕರೆಯಲ್ಪಡುವ ಕೆರೆ ಕೂಡಾ ಆ ಕಾಲದಲ್ಲಿ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ನೀರಾವರಿ ನಿರ್ಮಾಣವೆಂದು ಹೆಸರಾಗಿದೆ.

1806ರಲ್ಲಿ ಮೈಸೂರು ಸಂಸ್ಥಾನದ ಕೆರೆಗಳ ಬಾಹುಳ್ಯ, ವ್ಯಾಪ್ತಿ, ವಿಸ್ತಾರದ ಬಗ್ಗೆ ಒಂದು ಬಹುದೊಡ್ಡ ಪ್ರಶಂಸೆ ಸಿಕ್ಕಿತು.  Back handed complement ಅಂತಾರಲ್ಲಾ ಹಾಗೆ ಅಪ್ರತ್ಯಕ್ಷವಾಗಿ.

ಬ್ರಿಟಿಷರು ಟಿಪ್ಪುವನ್ನು ಸೋಲಿಸಿ, ಹತ್ಯೆ ಮಾಡಿ 1799ರಲ್ಲಿ ಮೈಸೂರು ಸಂಸ್ಥಾನವನ್ನು ವಶಪಡಿಸಿಕೊಂಡ ಕೂಡಲೆ ಮೆಕೆಂಜಿ ಎಂಬ ಅಧಿಕಾರಿಯ ಮೂಲಕ ಮೈಸೂರು ಸಂಸ್ಥಾನದ ಸಮೀಕ್ಷೆ ಮಾಡಿಸಿದರು. ಈ ಸಂಸ್ಥಾನದಿಂದ ಏನು, ಎಷ್ಟು ಕಿತ್ತುಕೊಂಡು ಹೋಗಬಹುದು ಅಂತಾ ತಿಳಕೊಳ್ಳಬೇಕಲ್ಲಾ, ಅದಕ್ಕೆ.  ಮೈಸೂರು ಸಂಸ್ಥಾನ ಎಂಬ ಬೃಹತ್‌ ಆಸ್ತಿಯನ್ನು ವಶಪಡಿಸಿಕೊಂಡ ಕೂಡಲೇ ಅದರ ಎಲ್ಲ ಮೂಲೆ ಮುಡುಕುಗಳಲ್ಲಿಯೂ ಏನೇನಿದೆ ಎಂದು ಹುಡುಕಾಡುತ್ತಾರಲ್ಲಾ ಹಾಗೆ. ಅದರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಮೈಸೂರು ಪ್ರದೇಶದಲ್ಲಿ ಆ ವೇಳೆಗಾಗಲೇ ಕಟ್ಟಿದ್ದ ಕೆರೆಗಳ ಸಂಖ್ಯೆ.

ಇದರಿಂದ ಮದ್ರಾಸ್ ಪ್ರಾಂತ್ಯದ ಬ್ರಿಟಿಷ್ ಸರ್ಕಾರಕ್ಕೆ ಗಾಬರಿಯುಂಟಾಗುವ ಒಂದು ಸಂಗತಿ ಹೊರಬಿದ್ದಿತು. ಅದೇನೆಂದರೆ, ಮದ್ರಾಸ್ ಪ್ರಾಂತ್ಯದ ಜೀವಾಳವಾಗಿರುವ ಕಾವೇರಿ ನದಿಗೆ ನೀರನ್ನು ಹರಿಸಿ ತರುವ ಪ್ರತಿ ಹಳ್ಳ, ತೊರೆ, ಹೊಳೆಗಳ ಮೇಲೆ ಸಾವಿರಾರು ಕೆರೆಗಳನ್ನು ಕಟ್ಟಲಾಗಿದೆ. ಇದರಿಂದಾಗಿ ಮದ್ರಾಸ್ ಪ್ರಾಂತ್ಯಕ್ಕೆ ಪ್ರವೇಶಿಸುವ ವೇಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕುಗ್ಗಿ ಹೋಗುತ್ತದೆ. ಇದರಿಂದಾಗಿ ಸಾವಿರಾರು ವರ್ಷಗಳಿಂದ ಅಲ್ಲಿನ ಕಾವೇರಿ ನದಿ ಮುಖಜ ಭೂಮಿಯಿಂದ ಉತ್ಪಾದಿಸುವ ಅತ್ಯುತ್ತಮ ಅಕ್ಕಿ, ಸಕ್ಜರೆ, ಹತ್ತಿಗಳಿಗೆ ಕೊರತೆಯುಂಟಾಗುತ್ತದೆ. ಬ್ರಿಟಿಷರ ರಫ್ತು, ಕಂದಾಯ ಮೊದಲಾದ ಆದಾಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು.

ಮೈಸೂರು ಸಂಸ್ಥಾನದ ಸಣ್ಣ, ದೊಡ್ಡ ಕೆರೆಗಳು ಆ ಮಟ್ಟಿಗೆ ಅವರಿಗೆ ಗಾಬರಿ ಉಂಟು ಮಾಡುವಷ್ಟು ಇಲ್ಲಿ ಕೆರೆಗಳನ್ನು ಕಟ್ಟಿದವರಿಗೆ ಈ ಪ್ರಶಂಸೆ ಸಲ್ಲಬೇಕು.

ಭಾರತದಲ್ಲಿ ಈಗ 2,08,381 ಕೆರೆಗಳಿವೆ. ಇದರಲ್ಲಿ ದಕ್ಷಿಣ ಭಾರತದ ಕೇವಲ ಮೂರೇ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕಗಳಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚು – 1,12,650 ಕೆರೆಗಳಿವೆ.

ಇತರ ರಾಜ್ಯಗಳಲ್ಲಿನ ನದಿಗಳು, ಸಮತಟ್ಟಾದ ಮೆಕ್ಕಲು ಮಣ್ಣಿನ ಪ್ರದೇಶ ಕೆರೆಗಳನ್ನು ಕಟ್ಟುವುದಕ್ಕೆ ಸೂಕ್ತವಾಗಿರಲಿಲ್ಲ. ಅದೇ ಸಮಯದಲ್ಲಿ ಗುಡ್ಡ, ಬೆಟ್ಟ, ಕಣಿವೆಗಳ ಏರುಇಳಿವುಗಳ ದಕ್ಷಿಣ ಭಾರತ ಕೆರೆಗಳ ನಿರ್ಮಾಣ ಸೂಕ್ತವಾದದು. ಅಷ್ಟೇ ಅಲ್ಲ ಮುಂಗಾರು, ಹಿಂಗಾರು ಮಳೆಗಳ ಏರುಪೇರುಗಳ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಜನರ ಉಳಿವಿಗೆ ಅನಿವಾರ್ಯವಾಗಿತ್ತು ಕೂಡಾ.

ಇಂತಹ ಭೌಗೋಳಿಕ ಸನ್ನಿವೇಶದಲ್ಲಿ ಜನರ ಹಸಿವು ತಣಿಸಲು,  ಒಳ್ಳೆಯ ಬೆಳೆ ಪಡೆಯಲು ನೀರಿನ ಅಗತ್ಯವನ್ನು ಕೃಷಿಯ ಆರಂಭದ ದಿನಗಳಿಂದಲೇ ಮಾನವರು ಕಂಡುಕೊಂಡರು. ಅದಕ್ಕಾಗಿ ಮಳೆಯಾಗುವ ಕಾಲವನ್ನು ಗುರುತಿಸುವ ಕ್ಯಾಲೆಂಡರ್ ರೂಪಿಸಿಕೊಳ್ಳಲು ಗ್ರಹ, ನಕ್ಷತ್ರಗಳ ಗತಿಗಳು, ಇತರ ಸಾಧನಗಳನ್ನು ಕಂಡುಕೊಂಡರು. ಹಾಗೆಯೇ ಮಳೆ ಬೀಳುವ ಕಾಲದಲ್ಲಿ  ನೀರನ್ನು ಸಂಗ್ರಹಿಸಿ ಮಳೆಯಿಲ್ಲದ ಕಾಲದಲ್ಲಿ ಬಳಸುವ ವಿಧಾನಗಳನ್ನು ಹುಡುಕಲೇ ಬೇಕಾಯಿತು. ಅದಕ್ಕಾಗಿ ಸ್ವಾಭಾವಿಕವಾದ ತಗ್ಗುಪ್ರದೇಶಗಳಲ್ಲಿ ನಿಂತ ನೀರು ಅವರಿಗೆ ಕೆಲ ಪಾಠಗಳನ್ನು ಕಲಿಸಿತು. ಅಂತಲ್ಲಿ ಹೆಚ್ಚು ಕೃಷಿ ಮಾಡುವುದು ಒಂದು ದಾರಿಯಾದರೆ, ಭೂಮಿಯಲ್ಲಿ ತಗ್ಗು ತೋಡಿ ನೀರಿನ ಕುಂಟೆಗಳನ್ನು ರಚಿಸುವುದು ಮತ್ತೊಂದು ಸರಳ ಪ್ರಾಥಮಿಕ ವಿಧಾನ. ನೀರಿನ ಸಣ್ಣ ಸಣ್ಣ  ಝರಿಗಳು, ತೊರೆಗಳಿಗೆ ಸ್ವಾಭಾವಿಕವಾಗಿ ಸಿಗುವ ಕಲ್ಲಿನ ಬಂಡೆ, ಮಣ್ಣು, ಮರದ ರೆಂಬೆ ಕೊಂಬೆಗಳನ್ನು ಒರಟೊರಟಾಗಿ ಹಾಕಿ ಅಡ್ಡಗಟ್ಟುವುದು ಅದರ ಮುಂದಿನ ಹಂತ. ಮುಂದೆ ಬೃಹತ್‌ ಶಿಲಾಯುಗದಲ್ಲಿ ಒಡೆದು ಎಬ್ಬಿಸಿದ ಕಲ್ಲು ಚಪ್ಪಡಿಗಳನ್ನು ಬಳಸಿದರು.

ಆದರೆ ಬಿರುಮಳೆಯಿಂದ ಸೊಕ್ಕಿದ ಪ್ರವಾಹ ಈ ಎಲ್ಲವನ್ನು ಕಣಾರ್ಧದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಹಳಷ್ಟು ಅನುಭವ ಹಲವು ಪಾಠಗಳನ್ನು ಕಲಿಸಿತು. ಎರಡು ಗುಡ್ಡಗಳ ನಡುವೆ ಸಿಗುವ ಸೂಕ್ತ ಜಾಗವನ್ನು ಆರಿಸುವುದು, ಮಣ್ಣಿನ ಏರಿಯೇ ಕಲ್ಲಿನ ಕಟ್ಟಡಕ್ಕಿಂತ ಒಳ್ಳೆಯದು, ಆದರೆ ಏರಿಯ ಮಣ್ಣಿನೊಳಗೆ ನೀರು ಜಿನುಗದಂತೆ ಏರಿಯ ಕೆಳ ಭಾಗಕ್ಕೆ ಜಿಗುಟು ಮಣ್ಣನ್ನು ಹಾಕುವುದು, ಅದನ್ನು ನೀರು ಹಾಕಿ ತುಳಿದು ಗಟ್ಟಿ ಮಾಡುವುದು, ಕೆರೆಯಲ್ಲಿ ನಿಂತ  ನೀರಿನ ಅಲೆಗಳು ಬಡಿದು ಮಣ್ಣು ಕೊರೆದು ಹೋಗುವುದನ್ನು ತಪ್ಪಿಸಲು ಏರಿಯ ಕೆಳ ಭಾಗಕ್ಕೆ ಒರಟು ಸೈಜುಗಲ್ಲುಗಳ ಹೊದಿಕೆ, ಈ ಸೈಜುಗಲ್ಲುಗಳ ಹಿಂಭಾಗದಲ್ಲಿ ಒದ್ದೆ ಮಣ್ಣಿನ ಮೇಲೆ ಜಲ್ಲಿಕಲ್ಲುಗಳ, ನೊರಜು ಕಲ್ಲುಗಳ ಮತ್ತೊಂದು ಪದರ ಇವೆಲ್ಲ ಇಂಜನಿಯರಿಂಗ್‌ನ ಮುಖ್ಯ ಶೋಧಗಳಲ್ಲವೇ! ಹೀಗೆ ಸಾವಿರಾರು ವರ್ಷಗಳ ಕಾಲ ಹಲ ಹಲವು ಹೊಸ ಶೋಧಗಳನ್ನು ಮಾಡುತ್ತಾ ಮುಂದುವರೆದರು ನಮ್ಮ‌ ಮಣ್ಣೊಡ್ಡ, ಕಲ್ಲೊಡ್ಡ ಇಂಜನಿಯರ್‌ಗಳು.

ಈ ಶೋಧಗಳ ಸರಣಿಯಲ್ಲಿ ಮಹಾಶೋಧಗಳೆಂದರೆ ಕೋಡಿಯ ಪರಿಕಲ್ಪನೆ ಮತ್ತು ತೂಬುಗಳ ವಿನ್ಯಾಸ. ಇವು ಅದ್ಯಾವ ಮಹಾ ಒಡ್ಡರ ಸಾಮೂಹಿಕ ಶೋಧವೋ ಗೊತ್ತಿಲ್ಲ.

“ಅಕ್ಕಿಯೊಳಗನ್ನವನು ಮೊದಲಾರು ಕಂಡವರು, ಅಕ್ಕರದ ಬರಹಕ್ಕೆ ಮೊದಲಿಗನದಾರು, ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ”.

ಇಂದಿನ ದಿನಮಾನದಂತೆ ವಿಶ್ವಪ್ರಶಸ್ತಿಗೆ ಅರ್ಹವಾದ ಶೋಧಗಳಿವು. ಕೆರೆಗಳನ್ನು, ಅಣೆಕಟ್ಟುಗಳನ್ನು ನೋಡಿರುವವರು ಈ ಕೋಡಿ, ತೂಬುಗಳನ್ನು ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳಿ. ನಿಮ್ಮ ಕಲ್ಪನೆಗೆ ಬಾರದಿದ್ದರೆ ಮುಂದಿನ ಬಾರಿ ಕೆರೆಯೊಂದರ ಬಳಿ ಸಾಗುವಾಗ ಇವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ.

ಹೆಚ್ಚು ಮಳೆ ಬಂದು ಕೆರೆ ತುಂಬಿ ಹರಿಯುವಾಗ ಮಣ್ಣಿನ ಏರಿಯ ಮೇಲೆ ರಭಸದಿಂದ ಹರಿದು ಎಷ್ಟು ಕೆರೆಗಳನ್ನು ಕಟ್ಟಿದ ಶ್ರಮ ಹಾಳಾಗಿರಬಹುದು! ಇವುಗಳನ್ನು ನೋಡಿ, ನೋಡಿ  ಹೆಚ್ಚಾದ ನೀರು ಹೊರ ಹರಿಯಲು ಕಲ್ಲಿನ ಕೋಡಿಯ ಪರಿಕಲ್ಪನೆ; ಕೋಡಿಯ ಎತ್ತರ, ಅದರ ಅಗಲ, ದಪ್ಪ ಎಷ್ಟಿರಬೇಕು ಕೋಡಿಯ ಮುಂದೆ ಹಲವು‌ ಅಡಿಗಳ ದೂರ ಕಲ್ಲಿನ ಹಾಸು. ಈ ಶೋಧಗಳೆಲ್ಲ ಕೂಡಿದ ಕೋಡಿ ಎಂಬ ಸಂಕೀರ್ಣ, ಲಕ್ಷಾಂತರ ಕೆರೆಗಳು ಸಾವಿರಾರು ವರ್ಷಗಳ ಕಾಲ ಜನರ ಉಪಯೋಗಕ್ಕೆ ದಕ್ಕುವಂತೆ ಮಾಡಿವೆ.

ಕೋಡಿಯ ಶೋಧ ಕೇವಲ ಪ್ರಾಯೋಗಿಕ ಅನುಭವದ ಎಂಪಿರಿಕಲ್ ಶೋಧ ಮಾತ್ರ ಅಲ್ಲ. ಅದಕ್ಕೆ ನೀರಿನ ಪ್ರಮಾಣ, ಅದನ್ನು ಶೇಖರಿಸುವ ಸಾಧ್ಯತೆಗಳ ಬಗ್ಗೆ ತಾತ್ವಿಕ ತಿಳುವಳಿಕೆಯೂ ಅವಶ್ಯ.

ಹಾಗೆಯೇ ತೂಬಿನ ಪರಿಕಲ್ಪನೆ. ಕೆರೆಯ ಮಧ್ಯೆ ಅತ್ಯಂತ ಆಳವಾದ ಜಾಗದಲ್ಲಿ ಏರಿಯ ಬುಡದಲ್ಲಿ ಉದ್ದನೆಯ ಕಲ್ಲು ಚಪ್ಪಡಿಗಳನ್ನು ಹಾಸಿ ಅಕ್ಕಪಕ್ಕ ನಿಲ್ಲಿಸಿ ಮತ್ತು ಮೇಲೆಯೂ ಹೊದಿಸಿ ಎರಡು ಎರಡೂವರೆ ಅಡಿ ಚೌಕನಾದ ಬಾಯಿ ಇರುವಂತೆ ರೂಪಿಸಿದ ಬಾಕ್ಸ್ ಈ ತೂಬು. ಅದರ ಮೇಲೆ ಏರಿಯ ಮಣ್ಣು ಅದರ ಎತ್ತರಕ್ಕೂ ಬಿದ್ದಿರುತ್ತದೆ. ಈ ಕಲ್ಲಿನ ಬಾಕ್ಸ್‌ನಿಂದ ಕೆರೆಯ  ನೀರು ಹೊರಬಂದು ಕಾಲುವೆಗಳ ಮೂಲಕ ಗದ್ದೆ, ತೋಟಗಳಿಗೆ ನೀರು ಹರಿಯುತ್ತದೆ. ಅವಶ್ಯವಾದರೆ ಈ ಕಲ್ಲಿನ ಬಾಕ್ಸ್‌ನ ಒಳಗೆ ಒಬ್ಬ ಹುಡುಗ ತೂರಿ ಅದರೊಳಗೆ ನೀರಿನ ಹರಿವಿಗೆ ಅಡ್ಡವಾದ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವಂತೆ ಮಾಡಲಾಗಿರುತ್ತದೆ.

ಬಹಳ ಹಿಂದೆಲ್ಲಾ ತೂಬಿನಿಂದ ಯಾವಾಗಲೂ ನೀರು ಹರಿಯುವುದನ್ನು ನಿಲ್ಲಿಸಲು ಯಾವ ಉಪಾಯ ಕಂಡುಕೊಂಡಿದ್ದರೋ ಗೊತ್ತಿಲ್ಲ. ಆದರೆ ನಂತರದ ಕಾಲದಲ್ಲಿ ಈ ಬಾಯನ್ನು ಮುಚ್ಚಲು, ತೆಗೆಯಲು ಒಂದು ಜಾಣ ಶೋಧ ಮಾಡಿಕೊಂಡರು. ಕೆರೆಯ ಮಧ್ಯೆ ಎರಡು ಅಥವಾ ನಾಲ್ಕು ಕಲ್ಲು ಚಪ್ಪಡಿಗಳನ್ನು ನಿಲ್ಲಿಸಿ ಅದರ ಮಧ್ಯದಿಂದ ಒಂದು ಮರದ ಕೋಲಿಗೆ ಕೆಳಗಡೆ ತೂಬನ್ನು ಮುಚ್ಚುವಂತಹ ಸಾಧನ, ಮೇಲೆ ಆ ಕೋಲನ್ನು ಸ್ಕ್ರೂನಂತೆ ತಿರುಗಿಸಿ ಕೆಳಗಿಳಿಸಿ  ಮುಚ್ಚುವ ಅಥವಾ ತೆಗೆಯುವ ದಾರಿಯನ್ನು ಕಂಡುಕೊಂಡರು. ಈಗಂತೂ ಕಬ್ಬಿಣದ ರಾಡ್ ಬಳಸಲಾಗುತ್ತಿದೆ.

ಬಹಳಷ್ಟು ಕೆರೆಗಳಿಗೆ ಒಂದೇ ತೂಬು ಇರುತ್ತದೆ. ಈ ತೂಬು ಏರಿಯ ಹೊರಭಾಗಕ್ಕೆ ಬಂದ ಮೇಲೆ ಮತ್ತೆ ಕಲ್ಲಿನ ಚಪ್ಪಡಿಗಳ ದೊಡ್ಡ ಬಾಕ್ಸ್ ಮಾಡುವುದು ಅದರಿಂದ ಬಲಗಾಲುವೆ, ಎಡಗಾಲುವೆಗಳನ್ನು ತೆಗೆದು ನೀರು ಹರಿಸುವುದು ಸಾಮಾನ್ಯ‌. ಆದರೆ ದೊಡ್ಡ ಕೆರೆಗಳಿಗೆ ಎರಡು, ಮೂರು ತೂಬುಗಳೂ ಇರುತ್ತವೆ. ಬಹುದೊಡ್ಡ ಕೆರೆಗೆ ಏಳು ಎಂಟು ತೂಬುಗಳೂ ಇರುತ್ತಿದ್ದವಂತೆ.  ಮದಗದ ಕೆರೆಯಲ್ಲಿನಂತೆ ಮೇಲಿನ ತೂಬು, ಕೆಳಗಿನ ತೂಬು ಎಂಬಂತೆ ವಿವಿಧ ಎತ್ತರಗಳಲ್ಲಿಯೂ ಇರುತ್ತವೆ. ಹೀಗೆ ತೂಬಿನ ತಂತ್ರಜ್ಞಾನ ಮತ್ತು ಉಪಯೋಗ ಉತ್ತಮಗೊಳ್ಳುತ್ತಾ ಬಂದಿದೆ.

ಕೆರೆಯ ಈ ಪೂರ್ಣರೂಪ ಯಾವಾಗ ಪೂರ್ಣವಾಯಿತೋ ತಿಳಿಯದು. ಚಂದ್ರಗುಪ್ತನ ಕಾಲದ ಅಧಿಕಾರಿಯೊಬ್ಬ ಕ್ರಿಪೂ 350ರ ಸುಮಾರಿಗೆ ಗುಜರಾತಿನ ಜುನಾಗಡದಲ್ಲಿ ಕಟ್ಟಿಸಿದ ಸುದರ್ಶನ ಎಂಬ ದೊಡ್ಡ ಕೆರೆಯ ದಾಖಲೆ ಸಿಕ್ಕಿದೆ. ಈ ಕೆರೆಯನ್ನು ಅಶೋಕನ ಕಾಲದಲ್ಲಿ ಪುನರುಜ್ಜೀವನಗೊಳಿಸಲಾಯಿತಂತೆ. ಆದರೆ ಮತ್ತೆ ಶಕರ ಆಡಳಿತದ ಕಾಲಕ್ಕೆ ಅದು ಹಾಳಾಗಿ ಸುದರ್ಶನ ದುರ್ದರ್ಶನವಾಗಿ ಬಿಟ್ಟಿತ್ತು. ಅದನ್ನು ಶಕ ರಾಜ ರುದ್ರ ದಮನ ಕ್ರಿಶ 150ರ ಕಾಲದಲ್ಲಿ ಮೂರು ಪಟ್ಟು ಬಲಗೊಳಿಸಿ ಮತ್ತೆ ಕಟ್ಟಿಸಿದ ಎಂದು ಅವನ ಶಾಸನದಲ್ಲಿ ದಾಖಲಿಸಲಾಗಿದೆ. ಇದು ಕ್ರಿಸ್ತಪೂರ್ವದ ನಾಲ್ಕನೆಯ ಶತಮಾನದ ವೇಳೆಗಾಗಲೇ ಕೆರೆ ತನ್ನ ರೂಪ ಪಡೆದುಕೊಂಡಿದ್ದರ ಸೂಚನೆ ಇರಬಹುದು. ಅಶೋಕನ ಕಾಲದ ಪುನರುಜ್ಜೀವನ ಮತ್ತಷ್ಟು ಉತ್ತಮಪಡಿಸಿದ ತಂತ್ರಜ್ಞಾನವನ್ನು ಉಪಯೋಗಿಸಿದುದರ ದಾಖಲೆಯಾಗಿರಬಹುದು. ಹಿಂದಿನ ಕಾಲದ ತಂತ್ರಜ್ಞಾನದ ಸಾಧ್ಯತೆಗೆ ಅನುಗುಣವಾಗಿದ್ದ ಕೆರೆಯನ್ನು ರುದ್ರ ದಮನನ ಕಾಲಕ್ಕೆ ಮತ್ತಷ್ಟು ಉತ್ತಮಗೊಂಡ ತಂತ್ರಜ್ಞಾನ ಮತ್ತು‌ ಅನುಭವಸ್ಥ ಒಡ್ಡರ ಸ್ಥೈರ್ಯದೊಂದಿಗೆ ಗಟ್ಟಿಯಾಗಿ ದೊಡ್ಡ ಕೆರೆಯಾಗಿ  ಕಟ್ಟಿರಬಹುದು. ಈ ಕೆರೆ ಗುಪ್ತರ ಕಾಲವಾದ ನಾಲ್ಕನೆಯ ಶತಮಾನದವರೆಗೂ, ಅಂದರೆ ಸುಮಾರು 750 ವರ್ಷಗಳ ಕಾಲ ಅಸ್ತಿತ್ವದಲ್ಲಿ ಹಾಗೂ ಉಪಯೋಗದಲ್ಲಿತ್ತು ಎಂಬುದು ಕೆರೆ ಎಂಬ ಭಾರತೀಯ ಶೋಧ, ಆದಿಮ ಕೃಷಿಕರ ಮತ್ತು ಒಡ್ಡರೆಂದು ಮುಂದೆ ಕರೆಯಲಾದ ಆದಿ ಕುಶಲಕರ್ಮಿಗಳ ಶೋಧದ ಹೆಗ್ಗಳಿಕೆಯಾಗಿದೆ.

ಇಂತಹ ಪುನರುಜ್ಜೀವನಗಳು, ಏರಿಯನ್ನು, ಕೋಡಿಯನ್ನು ಎತ್ತರಿಸುವುದು, ದೊಡ್ಡದಾಗಿ ಕಟ್ಟುವುದು ಭಾರತದ ಸಾವಿರಾರು ಕೆರೆಗಳ ವಿಷಯದಲ್ಲಿ ನಡೆದಿದೆ.

ಕರ್ನಾಟಕದಲ್ಲಿ ಮೊದಲ ಕೆರೆಯ ದಾಖಲೆ ಬನವಾಸಿಯ ಕ್ರಿಶ ಎರಡು – ಮೂರನೆಯ ಶತಮಾನದ ಚುಟುಕುಲದ ರಾಜಮಾತೆಯೊಬ್ಬಳು ನಿರ್ಮಿಸಿದ ಕೆರೆಯ ಬಗೆಗಿನ ಶಾಸನ.‌ ಆ ಕೆರೆ ಈಗ ಅಸ್ತಿತ್ವದಲ್ಲಿಲ್ಲವಾದ್ದರಿಂದ ಯಾವ ಸ್ವರೂಪದ್ದೆಂದು ಹೇಳಲಾಗುತ್ತಿಲ್ಲ. ಮುಂದೆ ಕದಂಬರ ಮೊದಲ ದೊರೆ ಮಯೂರವರ್ಮ (ಕಂಚಿಯಲ್ಲಿ ಪಲ್ಲವರ ರಾಜಧಾನಿಯಲ್ಲಿ ವಿದ್ಯಾಭ್ಯಾಸ ಪಡೆದವರು, ರಾಜಕುಮಾರ್ ನಟಿಸಿದ ಮಯೂರ ಚಿತ್ರ ನೆನಪಿದೆಯೇ) ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯಲ್ಲಿ ಹಿಂದೆ ಇದ್ದ ಕೆರೆಯೊಂದನ್ನು ಕ್ರಿಶ 350ರಲ್ಲಿ ಪುನರುಜ್ಜೀವನಗೊಳಿಸಿದ ಬಗೆಗಿನ ಶಾಸನ ದೊರೆತಿದೆ. ಈ ಕೆರೆ ಇಲ್ಲಿಯವರೆಗೂ ಅಸ್ತಿತ್ವದಲ್ಲಿದೆ. ಸ್ವಾತಂತ್ರ್ಯಾನಂತರ ಮತ್ತೆ ಪುನರುಜ್ಜೀವನಗೊಂಡು ಉಪಯೋಗದಲ್ಲಿದೆ.  ಹಾಗೆಯೇ ಗಂಗರ ಮೊದಲ ದೊರೆ ಶಿವಮೊಗ್ಗ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾಗ ಅಲ್ಲಿ ಕೆರೆಯೊಂದನ್ನು ನೋಡಿ ಆಶ್ಚರ್ಯಪಟ್ಟಿದ್ದನಂತೆ. ಈ ಉದಾಹರಣೆಗಳು ಕರ್ನಾಟಕದಲ್ಲಿ ಮೊದಲ ರಾಜಪ್ರಭುತ್ವಗಳು ಸ್ಥಾಪನೆಯಾಗುವ ಹಾಗೂ ಶಾಸನಗಳೆಂಬ ದಾಖಲೆಗಳು ಸೃಷ್ಟಿಯಾಗುವ  ಬಹು ಮೊದಲೇ ಕೆರೆಗಳು ಅಸ್ತಿತ್ವದಲ್ಲಿ ಇದ್ದವೆಂಬುದು ತಿಳಿಯಬರುತ್ತದೆ.

ಗಂಗ, ಕದಂಬ, ಚಾಲುಕ್ಯರ ಕಾಲಕ್ಕಿಂತ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಅಂದರೆ 10-12ನೆಯ ಶತಮಾನದಲ್ಲಿ, ಹೊಯ್ಸಳರ ಕಾಲದಲ್ಲಿ ಬಹುಹೆಚ್ಚು ಕೆರೆಗಳು ಕಟ್ಟಲ್ಪಟ್ಟಿವೆ‌. ಆಗ ಕೆರೆಗಳ ನಿರ್ಮಾಣದಲ್ಲಿ ಮತ್ತಷ್ಟು ಹೊಸ ಶೋಧ, ಹೊಸ ಎತ್ತರದ ಶೋಧ ಸಾಧ್ಯವಾಗಿದೆ. ಅದು ಕರ್ನಾಟಕದಲ್ಲಿ ಕೆರೆಗಳ ಸರಣಿಯನ್ನೇ ಸೃಷ್ಟಿಸಿದೆ.

‍ಲೇಖಕರು admin j

June 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: