ಪ್ರತಿಭಾ ನಂದಕುಮಾರ್ ಹೊಸ ಅನುವಾದಿತ ಕವಿತೆ: ಗೋಡೆ ರಿಪೇರಿ

ಮೂಲ: ರಾಬರ್ಟ್ ಫ್ರಾಸ್ಟ್

ಪ್ರಧಾನಮಂತ್ರಿಗಳಿಗೆ ಅಮೆರಿಕಾದ ಅಧ್ಯಕ್ಷರು ರಾಬರ್ಟ್ ಫ್ರಾಸ್ಟ್‌ನ ಸಹಿ ಇರುವ ಮೊದಲ ಮುದ್ರಣದ ಪ್ರತಿ ಕೊಟ್ಟರಂತೆ. ಗಡಿಗಳನ್ನು ನಿರ್ಮಿಸಿಕೊಳ್ಳುವ ಮನುಷ್ಯನ ತೆವಲಿನ ಬಗ್ಗೆ ರಾಬರ್ಟ್ ಫ್ರಾಸ್ಟ್‌ನ ಒಂದು ಪ್ರಸಿದ್ಧ ಕವನ ಅನುವಾದಿಸಿದ್ದೇನೆ.

ಫ್ರಾಸ್ಟ್‌ನ ಅತ್ಯಂತ ಪ್ರಸಿದ್ಧ ಕವಿತೆಗಳಲ್ಲಿ ಒಂದಾದ ʻಮೆಂಡಿಂಗ್ ವಾಲ್ʼ ಕವನವು, ಮಾನವ ಜನಾಂಗದ ʻತನ್ನ ಪ್ರದೇಶದ ಗಡಿಗಳನ್ನು ಗುರುತಿಸುವʼ ಪುರಾತನ ತುಡಿತ ಕುರಿತದ್ದಾಗಿದೆ. ನಮ್ಮ ಮನೆಗಳು ಮತ್ತು ತೋಟಗಳಿಗೆ ಸ್ಪಷ್ಟವಾದ ಗಡಿಗಳನ್ನು ನಿರ್ಮಿಸಿಕೊಳ್ಳುವ ಚಪಲದ ಬಗ್ಗೆ. ಇಂತಹ ಗುರುತುಗಳು ಮನುಕುಲದ ಬೆಳವಣಿಗೆಯನ್ನು ಆದಿಕಾಲದ ಹಂತಕ್ಕೆ ಕೊಂಡೊಯ್ಯುತ್ತವೆ ಎಂದು ಫ್ರಾಸ್ಟ್ ನಂಬಿದ್ದರೆ, ಅವನ ನೆರೆಯವನ ನಂಬಿಕೆ “ಒಳ್ಳೆಯ ಬೇಲಿಗಳಿದ್ದರೆ ಒಳ್ಳೆಯ ನೆರೆಹೊರೆಯವರಾಗುತ್ತಾರೆ”.

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಗೋಡೆಯನ್ನು ಪ್ರೀತಿಸದ ಒಂದಿದೆ,

ಅದು ಗೋಡೆಯಡಿಯಲ್ಲಿ ಹೆಪ್ಪುಗಟ್ಟಿದ ನೆಲವನ್ನು ಉಬ್ಬಿಸುತ್ತದೆ,

ಮೇಲ್ಪದರದ ಬಂಡೆಗಳನ್ನು ಸೂರ್ಯನ ಬಿಸಿಲಿಗೆ ಒಡ್ಡುತ್ತದೆ;

ಇಬ್ಬರು ಹಾಯುವಷ್ಟು ದೊಡ್ಡ ಸಂದು ಉಂಟು ಮಾಡುತ್ತದೆ.

ಬೇಟೆಗಾರರ ಕೆಲಸ, ಅದು ಬೇರೆಯೇ ವಿಷಯ:

ಅವರನ್ನು ಹಿಂಬಾಲಿಸಿ ಹೋಗಿ ನಾನು ರಿಪೇರಿ ಮಾಡಿದ್ದೇನೆ.

ಅವರು ಒಂದು ಕಲ್ಲಿನ ಮೇಲೊಂದು ಕಲ್ಲನ್ನೂ ಬಿಡುವುದಿಲ್ಲ,

ಮೊಲವನ್ನು ಬಿಲದಿಂದ ಹೊರಬರುವಂತೆ ಮಾಡುತ್ತಾರೆ,

ಊಳಿಡುವ ನಾಯಿಗಳ ಸಂತೋಷಕ್ಕಾಗಿ. ಸಂದುಗಳೆಂದರೆ,

ಯಾರೂ ಅವುಗಳು ಹೇಗೆ ಆಗುತ್ತವೋ ನೋಡಿಲ್ಲ ಅಥವಾ ಕೇಳಿಲ್ಲ,

ಆದರೆ ಬೇಸಿಗೆಯ ರಿಪೇರಿ ಮಾಡುವ ಸಮಯದಲ್ಲಿ ಅಲ್ಲಿ ಸಂದು ಕಾಣುತ್ತದೆ.

ಬೆಟ್ಟದ ಆಚೆ ನನ್ನ ನೆರೆಯವರಿಗೆ ಸುದ್ದಿ ತಿಳಿಸುತ್ತೇನೆ;

ನಾವು ಬೇಲಿಸಾಲಿನಲ್ಲಿ ನಡೆಯಲು ಭೇಟಿಯಾದ ದಿನ

ನಮ್ಮ ನಡುವೆ ಗೋಡೆಯನ್ನು ಬಿಟ್ಟುಕೊಂಡು ಆಚೀಚೆ ನಡೆಯುತ್ತೇವೆ.

ನಮ್ಮ ಕಡೆಗೆ ಬಿದ್ದ ಬಂಡೆಗಳು ನಮನಮಗೇ.

ಕೆಲವು ಬ್ರೆಡ್ಡಿನಂತೆ ಆಯತಾಕಾರ, ಕೆಲವು ಸುಮಾರು ಚೆಂಡುಗಳು

ಅವುಗಳನ್ನು ಸಮತೋಲನಗೊಳಿಸಲು ನಾವೊಂದು ಮಂತ್ರ ಪಠಿಸಬೇಕು:

ʻನಮ್ಮ ಬೆನ್ನು ತಿರುಗಿಸುವ ತನಕ ನೀನಲ್ಲೇ ಇರು!ʼ

ಅವುಗಳನ್ನು ಸಮಾಳಿಸುವುದರಲ್ಲಿ ನಮ್ಮ ಬೆರಳುಗಳು ಒರಟಾಗುತ್ತವೆ.

ಓಹ್, ಇದು ಇನ್ನೊಂದು ರೀತಿಯ ಹೊರಾಂಗಣದ ಆಟ ಅಷ್ಟೇ,

ಒಂದು ಕಡೆಗೆ ಒಂದೊಂದು. ಅದಕ್ಕಿಂತ ಸ್ವಲ್ಪ ಹೆಚ್ಚು:

ಅಲ್ಲಿ ನಮಗೆ ಗೋಡೆಯ ಅಗತ್ಯವಿಲ್ಲದೆಡೆಯಲ್ಲಿ:

ಅವನು ಬರೀ ದೇವದಾರು, ನಾನು ಸೇಬುಹಣ್ಣಿನ ತೋಟ.

ನನ್ನ ಸೇಬುಮರಗಳು ಎಂದಿಗೂ ಬೇಲಿ ದಾಟಿ ಹೋಗಿ

ನಿನ್ನ ಮರದಡಿಯಲ್ಲಿ ದೇವದಾರು ಶಂಕು ತಿನ್ನುವುದಿಲ್ಲ ಎಂದು ಹೇಳುತ್ತೇನೆ ಅವನಿಗೆ. 

ʻಒಳ್ಳೆಯ ಬೇಲಿಗಳಿದ್ದರೆ ಒಳ್ಳೆಯ ನೆರೆಹೊರೆಯವರಾಗುತ್ತಾರೆʼ

ಎಂದು ಮಾತ್ರ ಹೇಳುತ್ತಾನೆ ಅವನು.

ವಸಂತದಲ್ಲಿ ನಾನು ಕಿಡಿಗೇಡಿಯಾಗುತ್ತೇನೆ. ಅವನ ತಲೆಯಲ್ಲಿ

ಒಂದು ಕಲ್ಪನೆಯನ್ನು ಹಾಕಲು ಸಾಧ್ಯವಾದರೆ ಎಂದುಕೊಳ್ಳುತ್ತೇನೆ:

ʻಬೇಲಿಗಳಿಂದ ಹೇಗೆ ಒಳ್ಳೆಯ ನೆರೆಹೊರೆಯವರಾಗುತ್ತಾರೆ? ಅಲ್ಲಿ ಹಸುಗಳಿವೆಯಲ್ಲವೇ?

ಆದರೆ ಇಲ್ಲಿ ಹಸುಗಳಿಲ್ಲ. ಗೋಡೆಯನ್ನು ನಿರ್ಮಿಸುವ ಮೊದಲು ನಾನು ಕೇಳಿ ತಿಳಿದುಕೊಳ್ಳುತ್ತೇನೆ

ನಾನು ಯಾವುದರ ಸುತ್ತ ಗೋಡೆ ಕಟ್ಟುತ್ತಿದ್ದೇನೆ ಅಥವಾ ಯಾವುದನ್ನು ಹೊರಗಿಡಲು?

ಮತ್ತು ಅದರಿಂದ ಯಾರಿಗೆ ನೋವಾಗುತ್ತದೆ?

ಗೋಡೆಯನ್ನು ಪ್ರೀತಿಸದ ಯಾವುದೋ ಒಂದಿದೆ,

ಅದು ಗೋಡೆಯನ್ನು ಬೀಳಿಸಲಿಚ್ಚಿಸುತ್ತದೆ.

ಅದು ʻಯಕ್ಷಿಣಿʼ ಎಂದು ನಾನು ಅವನಿಗೆ ಹೇಳಬಹುದು,

ಆದರೆ ಅದು ನಿಖರವಾಗಿ ಯಕ್ಷಿಣಿ ಅಲ್ಲ.

ಬೇಕಾದರೆ ಅವನೇ ತನಗೇ ಹೇಳಿಕೊಳ್ಳಲಿ. 

ಅವನನ್ನು ನೋಡುತ್ತಿದ್ದೇನೆ.

ಮೇಲಿನಿಂದ ಗಟ್ಟಿಯಾಗಿ ಕಲ್ಲನ್ನು ಹಿಡಿದು ತರುತ್ತಿದ್ದಾನೆ 

ಎರಡೂ ಕೈಗಳಲ್ಲಿ ಒಂದೊಂದು, ಶಿಲಾಯುಗದ ಅನಾಗರಿಕನಂತೆ.

ನನಗೇನೋ ಅವನು ಕತ್ತಲೆಯಲ್ಲಿ ಚಲಿಸುತ್ತಿರುವಂತೆ ತೋರುತ್ತಿದೆ,

ಕೇವಲ ಕಾಡಿನದು ಮಾತ್ರವಲ್ಲ, ಮರಗಳ ನೆರಳಲ್ಲೂ ಅಲ್ಲಾ.

ಅವನು ಅಪ್ಪ ಹೇಳಿದ ಮಾತಿಗೆ ಕಟ್ಟುಬಿದ್ದಿಲ್ಲಾ,

ತಾನೇ ಎಲ್ಲದರ ಬಗ್ಗೆ ಚೆನ್ನಾಗಿ ಆಲೋಚಿಸಿದ್ದೇನೆ ಎಂದುಕೊಳ್ಳಲು ಅವನಿಗಿಷ್ಟ.

ಅವನು ಮತ್ತೆ ಹೇಳುತ್ತಾನೆ, “ಒಳ್ಳೆಯ ಬೇಲಿಗಳಿದ್ದರೆ

ಒಳ್ಳೆಯ ನೆರೆಹೊರೆಯವರಾಗುತ್ತಾರೆ”.

‍ಲೇಖಕರು admin j

June 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: