ಸೌಗಂಧಿಕ ಚಂದ್ರು ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’

ಸೌಗಂಧಿಕ ಚಂದ್ರು

ಫೋಟೋ: ಅಬ್ದುಲ್ ರಶೀದ್ ಸಂಗ್ರಹದಿಂದ

ಅಬ್ದುಲ್ ರಶೀದ್ ರ ಅಂತಾರಾಷ್ಟ್ರೀಯ ಕುಂಬಳಕಾಯಿ ಕತೆಗಳು ಪುಸ್ತಕವನ್ನು ಕಳೆದ ವಾರ ಗೆಳೆಯ ಪೈಲೂರು ಪುತ್ತೂರಿಗೆ ಬರುವಾಗ ” ಓದಿರಿ” ಎಂದು ನನ್ನ ಕೈ ಗಿತ್ತರು. ಮುಖಪುಟ ನೋಡಿದಾಗ ಇದ್ಯಾವುದೋ ಝೆನ್ ಕಥಾ ಪುಸ್ತಕದಂತೆ ಇದೆಯಲ್ಲ ಎಂದುಕೊಂಡಿದ್ದೆ. ಕಳೆದ 30 ವರ್ಷಗಳ ಹಿಂದೆ sonangeri ಯಲ್ಲಿ ಭೇಟಿಯಾಗಿದ್ದ ರಶೀದರು ಶೇಖಾಲಿ ಚ್ಚನ ಹೋಟೆಲ್ ನಲ್ಲಿ ಚಹಾ ಕುಡಿಯುತ್ತಾ ಕುಳಿತಿದ್ದ ನೆನಪಾಗಿ ಈಗ ಇವರು ಯಾವ ಕುಂಬಳಕಾಯಿಯ ಬಗ್ಗೆ ಬರೆದಿರಬಹುದು? ಎನ್ನುವ ಕುತೂಹಲ ನನ್ನದು.

ಯಾರೋ ಓದಿಕೊಡುತ್ತೇನೆಂದು ಓದಲು ಹೋದ “ಮಾತಿಗೂ ಆಚೆ” ಪುಸ್ತಕ ಮರಳಿ ನನ್ನ ಕೈ ಸೇರದೆ ಇರುವಾಗ ಈ ಪುಸ್ತಕ ಹೊಸ ಸೇರ್ಪಡೆಯಾಗಿ ನೆಮ್ಮದಿ ಎನಿಸಿತು. ನನ್ನ ಪುಸ್ತಕಗಳಿರುವ ಕಪಾಟಿನ ಹಳೆಯ ಪೈಲುಗಳಲ್ಲಿ 90ರ ದಶಕದ ‘ಮುಂಗಾರು’ ಪತ್ರಿಕೆಯ ಕೆಲವು ಪ್ರತಿಗಳು ಇದೆ. ಅದರಲ್ಲಿ “ಮಾತಿಗೂ ಆಚೆ ” ಒಮ್ಮೊಮ್ಮೆ ಈಚೆಗೆ ಬಂದುಬಿಡುತ್ತದೆ.

ಇರಲಿ.
ಸಂಕಲನದಲ್ಲಿರುವ ಮೊದಲ ಕತೆ ಅಮಾವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು. ಕಥಾ ಪಾತ್ರಗಳು ಅನ್ಯ ಗ್ರಹಗಳಿಂದ ಬಂದಂತೆ ಗೋಚರಿಸಿ ಜೀವ ತುಂಬಿ ಇಲ್ಲೆಲ್ಲೋ ಓಡಾಡಿದ ಅನನ್ಯ ಅನುಭವ ನೀಡುತ್ತದೆ. ಮುತ್ತು ಕೋಯಾ ಮಾಡಿದ ರಾಷ್ಟ್ರ ಲಾಂಛನದ ನಾಸಿಕ ಭಂಗ ಪ್ರಹಸನ ಒಂದು ಗಂಭೀರ ಪ್ರಸಂಗವಾಗಿ ಮರುಕ ಹುಟ್ಟಿಸುತ್ತದೆ. (ಇತ್ತೀಚೆಗೆ ನೋಡಿದ ಒಂದು ಹಿಂದಿ ಸಿನಿಮಾದಲ್ಲಿ ಶೂರ್ಪನಕಿಯ ನಾಸಿಕವೂ ಇದೇ ರೀತಿ ಭಂಗವಾಗಿತ್ತು). ಅವಳಿ ಸಹೋದರರನ್ನು ಹುಡುಕುವ ರೂಪದರ್ಶಿ ಮರಳಿನಿಂದ ಮರುವಾಯಿ ಹೆಕ್ಕುವವರ ಕಥೆಯೊಂದಿಗೆ ಸೇರಿ ಮರಳು ಕಡಲು ನಕ್ಷತ್ರ ಹೂಗಳು ಹರಳುಗಳು ಸೇರಿ ಪ್ರತಿಯೊಂದು ವಸ್ತುಗಳು ಜೀವತಳೆದು ಮಾತನಾಡಿದ ಅನುಭವ ನೀಡುತ್ತದೆ. ಇಲ್ಲಿ ತಮ್ಮ ತಮ್ಮ ಪಾತ್ರಗಳೇನು ಎನ್ನುವುದನ್ನು ಕತೆಗಾರರು ನಿಚ್ಚಳವಾಗಿ ಅವುಗಳಿಗೆ ಸೂಚಿಸಿದಂತೆ. ಸ್ಪಷ್ಟ. ನಿರ್ದಿಷ್ಟ.

ಕಾಮ್ರೆಡ್ ಆಲಿ ರೈಟರ ಕೆಂಪು ಕಾರಿಡಾರು ಬದುಕಿನಲ್ಲಿ ಬರುವ ಏಳು ಬೀಳುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಹಂಬಲವುಳ್ಳ ಕಥಾವಸ್ತುವನ್ನು ಒಳಗೊಂಡಿದೆ. ಪ್ರೇಮ ಮತ್ತು ಭಾವುಕತೆಯ ಸಂಬಂಧದ ಪ್ರೀತಿಯನ್ನೊಳಗೊಂಡ ಭಾವ ತೀವ್ರತೆ ಕಥೆಯಲ್ಲಿದೆ.
ಅಂಗಮರ್ಧಕಿಯ ಜೀವನವನ್ನು “ಕಾರ್ತ್ಯಾಯಿನಿ” ಕಥೆಯಲ್ಲಿ ವಿಸ್ತರಿಸಿದ ರೀತಿ ಚಂದ. ಸಮಾಜದಲ್ಲಿರುವ ಸರ್ವರ ಸಾಮಾನ್ಯರ ಬದುಕಿನ ಒಳಹೊಕ್ಕಾಗ ಮಾತ್ರ ಇಂಥ ಕಥಾ ವಸ್ತುಗಳು ಲಭ್ಯವಾಗುವುದು ಪಾತ್ರಗಳು ಸೃಷ್ಟಿಯಾಗುವುದು . ಕಥಾ ಪಾತ್ರದ ದೃಶ್ಯಗಳು ಕೆಲವು ಬಾರಿ ಹಾಸ್ಯ ಸನ್ನಿವೇಶವನ್ನು ಸೃಷ್ಟಿಸಿದರೂ ಅವುಗಳು ಗಂಭೀರ ಸಂಗತಿಗಳಿಂದ ತುಂಬಿಕೊಂಡಿದೆ. ವಿಷಾದ ಮತ್ತು ಬದುಕಿನ ಪ್ರೀತಿ ಮಡುಗಟ್ಟಿದೆ.
“ಕವಿ ಸಾಮ್ರಾಟ ” ಭ್ರಮೆಯಲ್ಲಿ ಬದುಕನ್ನು ರೂಪಿಸಿಕೊಂಡು ಸುಖಿಸುವ ಮಂದಿಯ ಕಥನ. ಹಲವರಲ್ಲಿ ನಾವು ಕಂಡಿದ್ದೇವೆ.

ಸಂಕಲನದ ಕೊನೆಯ ಕಥೆ ಅಂತರಾಷ್ಟ್ರೀಯ ಕುಂಬಳಕಾಯಿ ತುಂಬಾ ವಿಶೇಷವಾದ ಕತೆ. ವಲಸೆ ಬಂದ ಡಿಸಿಲ್ವ ನ ಕುಟುಂಬದವರಿಂದ ಆರಂಭಗೊಂಡ ಈ ಕಥೆಯಲ್ಲಿ ಶಹನಾಜ್ ಬೇಗಂ, ಎಎಸ್ಐ ಮಾಲಿಂಗ ಭಟ್ಟರ ಪಾತ್ರಗಳು ಬಂದು ಮುಂದೆ ನಿಲ್ಲುತ್ತವೆ. ಕಥೆಗಳಿಗಾಗಿ ಕಥಾ ಪಾತ್ರವನ್ನು ಸೃಷ್ಟಿಸಿರುವ ರಶೀದರು ಆ ಪಾತ್ರಗಳ ಹಿನ್ನೆಲೆಯಲ್ಲಿ ಇನ್ನೊಂದು ದೊಡ್ಡ ಕಥೆಯನ್ನು ಆ ಪಾತ್ರಗಳ ಹಿಂದೆ ಇರುವಂತೆ ರಚಿಸಿರುವುದು ಬಹಳ ವಿಶೇಷವೆನಿಸುತ್ತದೆ. ಬಹುಶಃ ರಶೀದರ ಜೀವನ ಯಾತ್ರೆ ಈ ಪಾತ್ರಗಳಿಗೆ ಹೆಚ್ಚು ಚೈತನ್ಯ ನೀಡಿರಬಹುದು. ಕತೆ ಓದಿ ಮುಗಿದ ಬಳಿಕ ಮುಖಪುಟದ ಚಿತ್ರಗಳು ನನಗೆ ಬಹಳ ಇಷ್ಟವಾಗಿ ಕಲಾವಿದ ಪ್ರಕಾಶ್ ಬಾಬು ಅವರಿಗೊಂದು ನಮಸ್ಕಾರ.

ವರ್ಷವೊಂದರಲ್ಲಿಯೇ ಅನೇಕ ಹೊಸಬರ ಹಳಬರ ಕೃತಿಗಳನ್ನು ಪ್ರಕಟಿಸಿರುವ ‘ವೀರಲೋಕ’ ಪುಸ್ತಕದವರಿಗೂ ಮೂರು ವಾರಗಳಲ್ಲಿ ಈ ಐದು ಕಥೆಗಳನ್ನು ಬರೆಯಲು ಕಾರಣೀಕರ್ತರಾದ ವಿವೇಕ ಶಾನಭಾಗರಿಗೂ ಧನ್ಯವಾದಗಳು.

‍ಲೇಖಕರು avadhi

June 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: