ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾಗ್ರತ ಮನಸ್ಥಿತಿಯ ತೂಗುಯ್ಯಾಲೆಯಲ್ಲಿ ‘ಓಡುವ ಗಡಿಯಾರ’

ಗಾಯತ್ರಿ ರವಿ ಅವರ ಕವನ ಸಂಕಲನ ‘ಓಡುವ ಗಡಿಯಾರ’

ಈ ಕೃತಿಯ ಕುರಿತು ಸುನಂದಾ ಕಡಮೆ ಅವರ ಒಂದು ಬರಹ ಇಲ್ಲಿದೆ.

-ಸುನಂದಾ ಕಡಮೆ

‘ಮಂಜಿನ ಹನಿಗಳು’ ಎಂಬ ತನ್ನ ಮೊದಲ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಕ್ಷೇತ್ರಕ್ಕೆ ಪರಿಚಿತರಾದವರು ಗಾಯತ್ರಿ ರವಿ, ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಅಲ್ಲಿಯ ಅನುಭವವನ್ನು ಕಾವ್ಯವಾಗಿ ಮೂಡಿಸುವ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡವರು. ಅವರ ಪ್ರಕಟಿತ ಮೂರು ಕವನ ಸಂಕಲನಗಳನ್ನು ಒಟ್ಟಿಗೆ ಅವಲೋಕಿಸಿದಾಗ ಕಾವ್ಯದಿಂದ ಕಾವ್ಯಕ್ಕೆ ಗಾಯತ್ರಿಯ ಜಿಗಿತ ಮತ್ತು ಅವರದೇ ಆದ ಒಂದು ವಿಶಿಷ್ಟ ಕಾವ್ಯ ಭಾಷೆಯನ್ನು ಅವರು ಒಲಿಸಿಕೊಂಡಿರುವುದನ್ನು ನಾವು ಕಾಣಬಹುದು. ಗಾಯತ್ರಿಯ ಲಾಲಿತ್ಯಪೂರ್ಣ ಭಾಷೆಗೆ ಅದರೊಳಗೆ ಅವರು ತೋರುವ ದಿಟ್ಟ ಅಭಿವ್ಯಕ್ತಿಗೆ ಒಂದು ಮೆದುವಾದ ದನಿ ಇದೆ, ಅದು ತುಂಬಾ ಭಾವನಾತ್ಮಕವಾದದ್ದು ಮತ್ತು ಒಂದು ರೀತಿ ಮೌನದಲ್ಲೇ ಸಿದ್ಧಿಸಿದ ಚಿಂತನೆ ಅನ್ನಬಹುದು.

ಗಾಯತ್ರಿಯ ಹಲವು ಕವಿತೆಗಳಲ್ಲಿ ಒಂದು ನೋವಿನ ಲಯ ಇರುವುದನ್ನು ನಾವು ಗುರುತಿಸಬಹುದು. ಅವರೇ ಒಂದು ಕವಿತೆಯಲ್ಲಿ ಹೇಳಿದ ಹಾಗೆ ‘ಇದು ಸದ್ದು ಮಾಡದ ನೋವು!’ ನೋವಿಗೆ ಯಾವ ಸದ್ದೂ ಇರುವುದಿಲ್ಲ, ಅಳುವಿಗೆ ಸದ್ದಿರುತ್ತದೆ, ಬಿಕ್ಕಳಿಕೆಗೆ ಸದ್ದಿರುತ್ತದೆ, ಆದರೆ ನೋವಿಗೆ ಅದು ಅಗಾಧ ಮೌನದಲ್ಲಿ ಕಂಪಿಸುತ್ತಾ ಕುದಿಯುತ್ತಾ ಇರುವಂಥದ್ದು. ಇಂದಿನ ಹಲವರ ಮಹಿಳಾ ಕಾವ್ಯ ಈ ರೀತಿಯ ಆವರಣದಲ್ಲಿದ್ದದ್ದು ನಮಗೆ ನೋಡುತ್ತೇವೆ, ಅಂದರೆ ಇಂದಿನ ಆಧುನಿಕ ಕುಟುಂಬ ವ್ಯವಸ್ಥೆಯು ಹೆಣ್ಣು ಮಕ್ಕಳನ್ನು ಹೊರಗೆ ದುಡಿಯಲು ಅವಕಾಶ ಕಲ್ಪಿಸಿದ್ದರೂ ಸಹ ಅದು ತನ್ನ ‘ಸಾಂಪ್ರದಾಯಿಕ ನಿರೀಕ್ಷೆ’ಗಳನ್ನು ಬಿಟ್ಟು ಕೊಟ್ಟಿಲ್ಲ. ಹಾಗಾಗಿ ನಮ್ಮ ಉದ್ಯೋಗಸ್ಥ ಹೆಣ್ಣು ಮಕ್ಕಳು ಒಳಗೆ ಮತ್ತು ಹೊರಗೆ ವಿಚಿತ್ರ ದಿಗಿಲನ್ನು ಅನುಭವಿಸುತ್ತ ಬಂದಿದ್ದಾರೆ. ಆ ದಿಗಿಲಿಗೆ ಶೋಷಣೆ ಅಂತಲೇ ಹೆಸರು, ಅದಕ್ಕೆ ಮತ್ತೆ ಬೇರೆ ಪದ ಇಲ್ಲ.

ಗಾಯತ್ರಿಯ ಅಭಿವ್ಯಕ್ತಿಯಲ್ಲಿ ಬೂದಿ ಮುಚ್ಚಿದ ಕೆಂಡವಿದೆ ಮತ್ತದು ಅಲ್ಲಲ್ಲಿ ಕಿಡಿಯಾಗಿ ಸ್ಪೋಟವೂ ಗೊಂಡಿದೆ, ಅದನ್ನೇ ಸತೀಶ ಕುಲಕರ್ಣಿ ಸರ್ ಕೃತಿಯ ಬೆನ್ನುಡಿಯಲ್ಲಿ ‘ಬಂಧನ ಮತ್ತು ಬಿಡುಗಡೆಯ ಇಕ್ಕಟ್ಟಿನಲ್ಲಿ ಕಟ್ಟಿರುವ ಪ್ರತಿರೋಧದ ಕಾವ್ಯವಿದು’ ಅಂತ ಬರೆದದ್ದು. ನಮ್ಮ ಹೆಣ್ಣುಮಕ್ಕಳು ಮಾಡುವ ಮನೆಯೊಳಗಿನ ದುಡಿತವನ್ನು ದುಡಿತ ಅಂತಲೇ ಪರಿಗಣಿಸದ ಸ್ಥಿತಿ ಇದೆ ಮತ್ತು ಅವರ ಹೊರಗಿನ ದುಡಿಮೆಯನ್ನು ಅಗ್ಗವಾಗಿ ಪಡೆಯುವ ಸ್ಥಿತಿ, ತಾತ್ಸಾರ ಅಂರ‍್ತೆದಕ್ಕೆ ಸರಿಯಾದ ಪದವಲ್ಲ, ಅದು ಒಂದು ರೀತಿಯಲ್ಲಿ ಅಗ್ಗವಾಗಿ ನೋಡುವುದೇ ಆಗಿದೆ.

ಕುಟುಂಬದ ಮೂಲ ರಚನೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾದರೆ ಮಾತ್ರ ಅವಳು ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಳ್ಳಬಲ್ಲಳು, ಅದನ್ನು ಕುಟುಂಬ ಪ್ರಜಾಪ್ರಭುತ್ವ ಅಂತಲೂ ನಾವು ಕರೆಯಬಹುದು. ಈ ‘ಕುಟುಂಬ ಪ್ರಜಾಪ್ರಭುತ್ವ’ ಪದ ನನ್ನದಲ್ಲ. ಸತೀಶ ಕುಲಕರ್ಣಿಯವರು ನಾವು ಸಂಪಾದಿಸಿದ ‘ದಾಂಪತ್ಯ ನಿಷ್ಠೆ – ಪರಿಕಲ್ಪನೆ ಬದಲಾಗುತ್ತಿದೆಯೇ?’ ಎಂಬ ಕೃತಿಯ ತಮ್ಮ ಲೇಖನದಲ್ಲಿ ಬರೆದಂತಹ ಪದ ಇದು. ಈ ಕುಟುಂಬ ವ್ಯವಸ್ಥೆ ಹೆಣ್ಣಿನಿಂದ ಬಹಳಷ್ಟನ್ನು ಅಪೇಕ್ಷಿಸುತ್ತದೆ. ಮನೆಗೆಲಸ ಅಷ್ಟೇ ಅಲ್ಲ, ತ್ಯಾಗ ಸಹನೆ ಸೂಕ್ಷ್ಮತೆ ಮಿತವ್ಯಯ ಮನೆಯ ಅಂದ ಚೆಂದ ಮಕ್ಕಳ ಪಾಲನೆ ಇತ್ಯಾದಿ.. ಆದರೆ ಇದನ್ನೆಲ್ಲ ಸರಿದೂಗಿಸುವ ಮಹಿಳೆಗೆ ಕುಟುಂಬದಲ್ಲಿ ಅವಳ ಸ್ವಂತ ಬೆಳವಣಿಗೆಗೆ ಎಷ್ಟರಮಟ್ಟಿನ ಅವಕಾಶ ಇದೆ?

ಹೋಗಲಿ, ಅವಳ ಕೆಲಸಗಳಿಗೆ ಗೌರವವಾದರೂ ಇದೆಯಾ? ಅಥವಾ ಅವಳ ಸ್ವಂತದ ನೆಮ್ಮದಿಗೆ ಇದರಿಂದ ಪ್ರಯೋಜನವೇನು ? ಇಂಥ ಎಲ್ಲಾ ಪ್ರಶ್ನೆಗಳು ಮುನ್ನಲೆಗೆ ಬರುತ್ತವೆ. ಮಹಿಳೆಯರ ಬಗ್ಗೆ ಸಮಾಜದಲ್ಲಿ ಒಂದು ‘ನಿಶ್ಚಿತ ದೃಷ್ಟಿಕೋನ’ ಇದೆ, ಹಾಗಾಗಿ ಅವಳು ಎಲ್ಲವನ್ನೂ ಬರೆದುಕೊಳ್ಳಲು ಹಿಂಜರಿಯುತ್ತಾಳೆ. ಉದಾಹರಣೆಗಾಗಿ ‘ನಮ್ಮ ತಾಯ್ತನವೂ ನಮ್ಮ ಶೋಷಣೆಗೆ ಒಂದು ಕಾರಣ’ ಅಂತ ನಾನು ಹೇಳಿದರೆ, ಎಷ್ಟು ಜನ ಇದನ್ನು ಎಕ್ಸೆಪ್ಟ್ ಮಾಡುತ್ತಾರೆ ? ಇದು ಪ್ರಶ್ನೆ.

ಆದರೂ ಕುಟುಂಬದಿAದ ತನ್ನ ಬೆಳವಣಿಗೆಗೆ ಉಂಟಾಗುವ ತೊಡಕುಗಳನ್ನು ಗಾಯತ್ರಿ ಅಲ್ಲಲ್ಲಿ ಧೈರ್ಯದಿಂದ ಹೇಳುತ್ತಾ ಬಂದಿದ್ದಾರೆ. ‘ನೀನಿರುವುದು ಬೇಡ’ ಕವಿತೆಯಲ್ಲಿ ಹೀಗೊಂದು ಸಾಲು ಬರುತ್ತದೆ.

/ನಿನ್ನ ಗತ್ತಿನ ತೆಕ್ಕೆಯಲ್ಲಿ
ನನ್ನ ಬಂಧಿಸಬೇಡ
ಉಸಿರಾಡುವುದೇ ಕಷ್ಟವೆನಿಸೀತು /

‘ತಿಂಗಳಿ೦ದ ಕಾದಿದ್ದೆ’ ಕವಿತೆಯಲ್ಲಿ ಇನ್ನೊಂದು ಸಾಲು ಬರುತ್ತದೆ.

/ಮೈ ಮುಟ್ಟಿದಷ್ಟು
ಸುಲಭವಲ್ಲ ಬಿಡು
ಮನಸು ಮುಟ್ಟುವುದು/

ನೇರವಾಗಿಯೇ ಇದೆ ಚಾಟಿ, ಇದಕ್ಕೆ ಯಾವ ವಿಶ್ಲೇಷಣೆಯೂ ಬೇಡ.

ಇಲ್ಲಿ ಕುಟುಂಬ, ಪಿತ್ರಪ್ರಧಾನ ವ್ಯವಸ್ಥೆ, ವಿವಾಹ, ತಾಯ್ತನ, ಜೈವಿಕ ಸಮಸ್ಯೆ ಎಲ್ಲವೂ ನಮ್ಮ ಮಹಿಳೆಯರನ್ನು ಬಿಡಿಸಲಾಗದ ಒಂದು ಭಾವಕೋಶಕ್ಕೆ ಬಂಧಿಸಿವೆ. ಆ ಭಾವಕೋಶವು ಒಂದು ಮಟೀರಿಯಲಿಸಂನಷ್ಟು ಸುಲಭವಾಗಿ ಕಿತ್ತು ಬಿಸಾಡಿ ಹೋಗುವಂಥದ್ದಲ್ಲ, ಹೀಗಾಗಿ ನಮ್ಮ ಕಾವ್ಯದಲ್ಲಿ ಯಾವಾಗಲೂ ಒಂದು ಬಗೆಯ ತೀವ್ರವಾದ ಸಂಘರ್ಷ ಮೈದಾಳುತ್ತದೆ.

ಪ್ರಶ್ನೆ ಮತ್ತು ನಿವೇದನೆ ಎರಡನ್ನೂ ಗಾಯತ್ರಿ ಇಲ್ಲಿ ಒಟ್ಟೊಟ್ಟಿಗೆ ಮಾಡುತ್ತಾರೆ. ‘ನಾವು’ ಅನ್ನುವ ಕವಿತೆಯನ್ನು ನೋಡಿ,

/ಕೊರಳಿಗೆ ಕಲ್ಲು ಕಟ್ಟಿಸಿ ಕೊಂಡಿದ್ದೇವೆ
ಹಾಗಿದ್ದಾಗ ಮಲ್ಲಿಗೆ ಮುಡಿದು ಸಂಭ್ರಮಿಸುವುದು ಹೇಗೆ?/

/ಕಾಲಿಗೆ ಹಗ್ಗ ಬಿಗಿಸಿಕೊಂಡು ನಡೆಯಲಾಗದೆ ಎಡವುತ್ತಿದ್ದೇವೆ
ಕಿರು ಬೆರಳು ಬೆಸೆದು ಬಂದ ಅಂತಃಕರಣಕ್ಕಾದರೂ
ಮೊಳಕೆಯೊಡೆದ ಈ ಮನಸ್ಸನ್ನು ತುಳಿಯುವುದನ್ನು ನಿಲ್ಲಿಸು/

ನೀನು ಗುಲಾಮಳೇ ಅಂತ ನನ್ನನ್ನು ಭಾವಿಸಿದ್ದೀ ಹೌದು, ಆದರೆ ಕೊಂಚ ವಿವೇಕ ವಿವೇಚನೆ ಇರಲಿ ಎಂಬ ಒತ್ತಾಯವು ಇಲ್ಲಿ ನಮಗೆ ಕಾಣುತ್ತದೆ.

ಗಾಯತ್ರಿಗೆ ಇಲ್ಲಿ ನೋವು ಎಷ್ಟು ರೂಢಿಯಾಗಿದೆ ಎಂದರೆ

/ನೋವು ಮತ್ತು ನಾನು
ಇಬ್ಬರೂ ಜೊತೆಯಲ್ಲಿ ನಡೆಯುತ್ತಿದ್ದೇವೆ
ಹೆಗಲಿಗೆ ಕೈ ಹಾಕಿ ಕೊಂಡು /

ಸಚಿತ್ರ ಕಾವ್ಯ ಧ್ವನಿ ಇಲ್ಲಿ ನಮ್ಮನ್ನು ತಟ್ಟುತ್ತದೆ. ಆದರೆ ಇವೆಲ್ಲ ನೋವನ್ನು ತೊಳೆಯುವ ಕೆಲಸವನ್ನು ಗಾಯತ್ರಿ ಗಡಿಯಾರಕ್ಕೆ ಬಿಡುತ್ತಾರೆ. ಅದೇ ನಮ್ಮ ನಿಮ್ಮೆಲ್ಲರ ‘ಓಡುವ ಗಡಿಯಾರ!’

ಮುಂದೆ ಒಂದು ಆಶಾದಾಯಕ ನಿಲುವನ್ನು ಕೂಡ ಗಾಯತ್ರಿ ತೆಗೆದುಕೊಳ್ಳುತ್ತಾರೆ. ಅದೇನೆಂದರೆ, ನಾನಿಲ್ಲಿ ನನ್ನೊಳಗೆ ಹರಿದು ಹಂಚಿ ಹೋಗಿದ್ದೇನೆ ಸರಿ, ಆದರೆ

/ನಾನೇ ಹಾಕಿಕೊಂಡ ಗೆರೆಯನ್ನು ದಾಟಿ ಹೊರಬರಬೇಕಿದೆ
ದಡ ಕಾಣುವ ಖಾತ್ರಿ ನನ್ನದು/

ಹೀಗೆ ದಡ ಕಾಣುವ ಆತ್ಮವಿಶ್ವಾಸವಿದ್ದರೆ, ಸಮಸ್ಯೆ ಶೇಕಡಾ ೭೫ ಬಗೆಹರಿದಂತೆಯೇ ಸರಿ.

ಈ ಕೃತಿಗೆ ಮುನ್ನುಡಿ ಬರೆದ ಕವಿ ಆನಂದ್ ಋಗ್ವೇದಿ ಈ ತರಹದ ಭಾವನೆಗಳನ್ನೇ “ಇದೊಂದು ಪ್ರಜಾಸತ್ತಾತ್ಮಕ ಸ್ತ್ರೀ ದ್ವನಿ” ಅಂತ ಬರೆದಿದ್ದು. ಹೀಗೆ ಒಟ್ಟಾರೆ ಮಹಿಳಾ ಕಾವ್ಯ ಇವತ್ತು ತಾವು ಕಟ್ಟುವ ಕವಿತೆಗಳ ಮೂಲಕ ತಮ್ಮನ್ನು ತಾವು ಅರಿಯುವ ತಮ್ಮ ನೆಲೆಗಳನ್ನು ಗಟ್ಟಿಪಡಿಸಿಕೊಳ್ಳುವ ಹಾಗೂ ತಮ್ಮ ಕನಸುಗಳನ್ನು ಜಗಕ್ಕೆ ಸಾರುವ ಹಾದಿಯನ್ನಾಗಿಯೂ ಮಾಡಿಕೊಂಡಿರುವುದು ನಮ್ಮ ಗಮನಕ್ಕೆ ಬರುವಂತಿದೆ.

ಪದಲಾಲಿತ್ಯವನ್ನು ಮೆರೆಯುವ ಶಕ್ತಿ ಕೂಡ ಗಾಯತ್ರಿಗೆ ಇದೆ.

/ಬೆಂಕಿಗೊಡ್ಡಿಕೊಳ್ಳಬೇಕು
ಬೇಯಬೇಕು ಕೊನೆಗೆ
ಕಾಯ ಕರಕಲಾಗದಂತೆ ಕಾಯಬೇಕು/

ಇಲ್ಲಿ ಬರುವ ಪದಲಾಲಿತ್ಯ ಗಮನಿಸಿ. ಹೀಗೆ ನೋವು ಮತ್ತು ಜಾಗ್ರತ ಮನಸ್ಥಿತಿಯ ತೂಗುಯ್ಯಾಲೆಯಲ್ಲಿ ಕವಿತೆ ಧ್ವನಿಪೂರ್ಣವಾಗಿ ಕಟ್ಟಿಕೊಂಡಿದೆ. ಒಟ್ಟು ವ್ಯವಸ್ಥೆಯಲ್ಲಿ ಕಳೆದು ಹೋಗಿರುವ “ನಾನು” ಎಂಬುದನ್ನು ಹುಡುಕುವ ತೀವ್ರ ಪ್ರಯತ್ನವೇ ಇದು ಅನ್ನುವುದಕ್ಕೆ ಈ ಸಂಕಲನವೇ ಸಾಕ್ಷಿಯಾಗಿದೆ. ಸಮಾನತೆಯುಳ್ಳ ಆದರ್ಶ ರಾಜ್ಯ ನಿರ್ಮಾಣವಾದ ಕೂಡಲೇ ಮಹಿಳೆಯರ ಶೋಷಣೆಗಳು ತನ್ನಿಂದ ತಾನೇ ಕೊನೆಗೊಳ್ಳಬಹುದು ಅಂತ ನಾನು ನಂಬುತ್ತೇನೆ.

‘ಸ್ವಾತಂತ್ರ‍್ಯವಿಲ್ಲದೇ ನಾವು ನಿಜವಾದ ಕಲಾವಿದರಾಗಲು ಸಾಧ್ಯವಿಲ್ಲ’ ಅಂತ ವರ್ಜಿನಿಯ ವೂಲ್ಫ್ ಹೇಳುತ್ತಾಳೆ, ಅವಳು ಹೇಳಿದ್ದು ನಿಜ, ಇದಕ್ಕೆ ಗಂಡು ಹೆಣ್ಣಿನ ಬೇಧವಿಲ್ಲ, ಯಾರಾದರೊಬ್ಬರನ್ನು ಜೊತೆಯಲ್ಲಿ ಕಟ್ಟಿಕೊಂಡೇ ತಿರುಗಬೇಕಾದ ನಿರ್ಬಂಧ ಇದ್ದರೆ, ಲಿಂಗಬೇಧವಿಲ್ಲದೇ ಅವರ ಬದುಕಿನ ಪ್ರಮುಖ ಕ್ಷಣಗಳನ್ನು ಅದು ಹಲವಷ್ಟು ವಿಚಾರಗಳನ್ನು ತುಂಡರಿಸಬಹುದು ಅನಿಸುತ್ತದೆ.

ನಮ್ಮ ರೆಕ್ಕೆಗಳು ಜೋತು ಬೀಳಲಿಕ್ಕೆ ಇಷ್ಟು ಸಾಕಲ್ಲವೇ, ಇನ್ನುಳಿದಂತೆ ನಮ್ಮ ಬರವಣಿಗೆಯಲ್ಲಿ ಪಾತ್ರ ಸಂಭಾಷಣೆ ನಿರ್ವಹಣೆ ತಂತ್ರಗಳಲ್ಲಿ ಏಕತಾನತೆ ಇದೆ ಅಂದರೆ, ಅದನ್ನು ಸೃಷ್ಟಿಸುವ ನಮ್ಮ ಬದುಕಿನಲ್ಲಿ ಒಂದು ಏಕತಾನಂತೆ ಮತ್ತು ಸ್ಥಗಿತತೆ ಮನೆ ಮಾಡಿದೆ ಅಂತಲೇ ಅನ್ನಿಸುತ್ತದೆ ಅಂತ ಏಕತಾನತೆಯನ್ನು ಮೀರಿದ ಕೆಲವು ಕವಿತೆಗಳನ್ನು ನಾವಿಲ್ಲಿ ಹೆಸರಿಸಬಹುದು.

ತೆಂಗು ಮತ್ತು ಇರುವೆ, ಕಸ ಆಯುವ ಹುಡುಗಿ, ಆಸನಗಳು ಕಾಯುತ್ತಿವೆ, ಇಂತಹ ಕಲಾತ್ಮಕ ಕುಸುರಿಯುಳ್ಳ ಕವಿತೆಗಳು ಈ ಸಂಕಲನದಲ್ಲಿವೆ.

‘ಆಸನಗಳು ಕಾಯುತ್ತಿವೆ’ ಕವಿತೆಯಲ್ಲಿ

/ಮೈಕು ಗಂಟಲು ಸರಿಪಡಿಸಿಕೊಳ್ಳುತ್ತದೆ/

ಅನ್ನುತ್ತಾರೆ. ನನಗೆ ತುಂಬಾ ಇಷ್ಟವಾದ ಸಾಲು ಇದು. ಮೈಕಿಗೂ ಜೀವ ಇದೆ ಅನ್ನುವುದು ಒಂದು ಒಳ್ಳೆಯ ಇಮೇಜ್ ಕೂಡ. ಕವಿಯ ಪ್ರತಿಭೆಯ ದೃಷ್ಟಿಗೆ ಒಂದು ಅಂತರ೦ಗದ ಕಣ್ಣಿದೆ ಅನ್ನುತ್ತಾರಲ್ಲ, ಆ ಒಂದು ಅಂತರ೦ಗದ ಕಣ್ಣು ನನಗೆ ಈ ‘ಆಸನಗಳು ಕಾಯುತ್ತಿವೆ’ ಕವಿತೆಯಲ್ಲಿ ಕಂಡಿತು. ಅಂತರ೦ಗದ ಕಣ್ಣು ಯಾವುದೆಂದರೆ, ಈಗ ಒಬ್ಬ ತಾಯಿ ಒಂದು ಮಗುವಿಗೆ ಜನ್ಮ ಕೊಡುತ್ತಾಳೆ, ಅದು ೨೪ ಗಂಟೆಯೂ ಅವಳನ್ನು ಅವಲಂಭಿಸಿಕೊAಡಿರುವುದಿಲ್ಲ, ಹೊರತಾಗಿ ಅದು ತನ್ನಷ್ಟಕ್ಕೆ ತಾನು ಕೂಡ ಬೆಳೆಯುತ್ತಾ ಇರುತ್ತದೆ, ಕವಿತೆ ಕೂಡ ಹಾಗೆಯೇ ಬೆಳೆಯುತ್ತಿರಬೆಕು.

‘ನಾ ಕಂಡ ಗಾಂಧಿ’ ಕವಿತೆಯಲ್ಲಿ ಕೂಡ ಇಂಥ ಸಾಲುಗಳು ಇವೆ.

/ಅದೋ ಅಲ್ಲಿ
ಕಟ್ಟಿಗೆಯ ಚೌಕಟ್ಟಿನಲ್ಲಿ
ಗಾಂಧಿಯನ್ನು ಮಾರಾಟಕ್ಕಿಟ್ಟಿದ್ದಾರೆ/

ಅನ್ನುತ್ತಾರೆ ಗಾಯತ್ರಿ. ಇದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ, ಅಥವಾ ಇದು ವಿವರಣೆಗೆ ದಕ್ಕುವ ಸಂಗತಿಯೂ ಅಲ್ಲ, ಒಳ್ಳೆಯ ಕವಿತೆಗೆ ಮೌಲ್ಯಮಾಪನ ಸಾಧ್ಯ ಇಲ್ಲ. ಒಳ್ಳೆಯ ಕವಿತೆ ಯಾವಾಗಲೂ ವಿಶ್ಲೇಷಿಸಲಿಕ್ಕೆ ಸಾಧ್ಯ ಇಲ್ಲ. ಅದು ಅನುಭವಕ್ಕೆ ಮಾತ್ರ ದಕ್ಕುವ ಸಂಗತಿ. ಇಲ್ಲಿ ಗಾಂಧಿಯ ಉದಾತ್ತ ಮೌಲ್ಯಗಳ ಮಾರಾಟ ಅಷ್ಟೇ ಅಲ್ಲ, ಇನ್ನೇನೋ ಆಗಿ ಕಾಡುತ್ತವೆ ಈ ಸಾಲುಗಳು, ಕವಿ ಗಾಯತ್ರಿಗೂ ಅವರ ಕವಿತೆಗಳಿಗೂ ಒಳ್ಳೆಯದಾಗಲಿ.

‍ಲೇಖಕರು Admin

9 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading