ಮೂಲ : ರೇಮಂಡ್ ಕಾರ್ವರ್
ಕನ್ನಡಕ್ಕೆ : ದೇವೂ ಮಾಕೊಂಡ
ಆ ದಿನ ಬಲು ಬೇಗನೆ ಹವಾಮಾನ ಬದಲಾಯಿತು. ಹಿಮ, ಕರಗಿ ಕೊಳಕು ನೀರಾಗಿ ಹರಿಯತೊಡಗಿತ್ತು. ಹಿತ್ತಲ ಕಡೆ ಮುಖಮಾಡಿದ್ದ, ಭುಜದೆತ್ತರವಿದ್ದ ಸಣ್ಣ ಕಿಟಕಿಯ ಗಾಜಿನ ಮೇಲೆ ಹಿಮ ಕರಗಿದ ನೀರಿನ ಗೆರೆಗಳು ಕೆಳಗೆ ಜಾರುತ್ತಿದ್ದವು. ರಸ್ತೆಯಲ್ಲಿ ಕಾರುಗಳು ಕೆಸರ ನೀರನ್ನು ಸಿಡಿಸುತ್ತಾ ಸಾಗುತ್ತಿದ್ದವು. ಕತ್ತಲು ಆವರಿಸುತ್ತಿತ್ತು. ಜೊತೆಗೆ ಮನೆಯೂಳಗೂ ಕತ್ತಲು ಇಣುಕುತ್ತಿತ್ತು.
ಅವನು ಮಲಗುವ ಕೋಣೆಯಲ್ಲಿ ತನ್ನ ಬಟ್ಟೆಗಳನ್ನು ಸೂಟ್‌ಕೇಸ್‌ಗೆ ತುರುಕುತ್ತಿದ್ದಾಗ, ಅವಳು ಬಾಗಿಲ ಬಳಿ ಬಂದು ನಿಂತು…
‘ನೀನು ಹೊರಡುತ್ತಿರುವುದು ನನಗೆ ಸಂತೋಷ!
ತುಂಬಾ ಸಂತೋಷ!’ ಎಂದು ಅವಳು ಹೇಳಿದಳು.
ಮತ್ತೆ ಜೋರಾಗಿ ‘ಕೇಳಿಸುತ್ತಿದೆಯೇ?’ ಎಂದು ಕೇಳಿದಳು.
ಅವನು ತನ್ನ ಬಟ್ಟೆಗಳನ್ನು ಸೂಟ್‌ಕೇಸ್‌ಗೆ ತುಂಬುವುದನ್ನು ಮುಂದುವರಿಸಿದ.
‘ಹೇಯ್ ನೀಚ!
ನೀನು ಹೊರಡುತ್ತಿರುವುದಕ್ಕೆ ನನಗೆ ತುಂಬಾ ಖುಷಿ !’ ಎಂದು ಹೇಳುತ್ತಾ ಅವಳು ಅಳತೊಡಗಿದಳು. ‘ ಈಗ ನನ್ನ ಮುಖವನ್ನು ನೋಡಲು ನಿನಗೆ ಸಾಧ್ಯವಿಲ್ಲ.
ಅಲ್ಲವೇ?’ ಎಂದಳು ಮತ್ತೆ.
ಆಗ ಅವಳ ಕಣ್ಣಿಗೆ ಹಾಸಿಗೆಯ ಮೇಲಿದ್ದ ಮಗುವಿನ ಫೋಟೋ ಕಾಣಿಸಿತು. ತಕ್ಷಣ ಅವಳು ಅದನ್ನು ಎತ್ತಿಕೊಂಡಳು.
ಅವನು ಅವಳನ್ನು ನೋಡಿದ. ಅವಳೂ ಕಣ್ಣೀರನ್ನು ಒರೆಸಿಕೊಂಡು ಅವನನ್ನೇ ದಿಟ್ಟಿಸಿ ನೋಡಿದಳು. ನಂತರ ತಿರುಗಿ ಮತ್ತೆ ಕೋಣೆಗೆ ಹೋದಳು.
‘ಆ ಫೋಟೋ ವಾಪಸ್ ತಂದುಕೊಡು,’ ಎಂದು ಅವನು ಹೇಳಿದ.
‘ನಿನ್ನ ವಸ್ತುಗಳನ್ನೆಲ್ಲ ತೆಗೆದುಕೊಂಡು ಇಲ್ಲಿಂದ ಹೊರಡು,’ ಎಂದಳು.
ಅವನು ಉತ್ತರಿಸಲಿಲ್ಲ. ಸೂಟ್‌ಕೇಸ್‌ನ್ನು ಮುಚ್ಚಿದ. ಕೋಟು ಧರಿಸಿದ. ಸುತ್ತಲೂ ಒಮ್ಮೆ ಬೆಡ್ ರೂಮನ್ನು ನೋಡಿದ. ನಂತರ ದೀಪ ಆರಿಸಿ ಹೊರಬಂದ.
ಅವಳು ಚಿಕ್ಕ ಅಡುಗೆಮನೆಯ ಬಾಗಿಲಲ್ಲಿ ಮಗುವನ್ನೆತ್ತಿಕೊಂಡು ನಿಂತಿದ್ದಳು.
ಆಗ ‘ನನಗೆ ಮಗು ಬೇಕು,’ಎಂದ ಅವನು.
‘ನಿನಗೆ ಹುಚ್ಚೇ?’
‘ಇಲ್ಲ. ಆದರೆ ಈಗ ನನಗೆ ಮಗು ಬೇಕು. ಮಗುವಿನ ವಸ್ತುಗಳನ್ನು ತೆಗೆದುಕೊಂಡು ಬರಲು ನಂತರ ಯಾರನ್ನಾದರೂ ಕಳುಹಿಸುತ್ತೇನೆ’ ಎಂದನು.
‘ನೀನು ಮಗುವನ್ನು ಮುಟ್ಟಲು ಸಾಧ್ಯವಿಲ್ಲ,’ ಎಂದಳು ಅವಳು.
ಮಗು ಅಳತೊಡಗಿತ್ತು. ಆಗ ಅವಳು ಅದರ ತಲೆಯ ಸುತ್ತಲಿದ್ದ ಹೊದಿಕೆಯನ್ನು ಸ್ವಲ್ಪ ಸರಿಸಿದಳು.
ಅವನು ಅವಳ ಕಡೆಗೆ ನಿಧಾನ ಹೆಜ್ಜೆ ಹಾಕಿದ.
‘ಅಯ್ಯೋ, ಅಯ್ಯೋ,’ಎಂದು ಮಗುವನ್ನು ನೋಡುತ್ತಾ ಕೂಗಿದಳು.
‘ದೇವರೇ!’,
ಎಂದು ಕಿರುಚಿದ ಅವಳು ಅಡುಗೆಮನೆಯೊಳಗೆ ಒಂದು ಹೆಜ್ಜೆ ಹಿಂದೆ ಸರಿದಳು.
‘ನನಗೆ ಮಗು ಬೇಕು.’ ಎಂದು ರಂಪ ಮಾಡಿದನು ಆತ.
‘ಇಲ್ಲಿಂದ ಹೊರಗೆ ಹೋಗು!’ ಎಂದ ಅವಳು
ತಿರುಗಿ, ಮಗುವನ್ನು ಸ್ಟೋವ್ ಹಿಂದುಗಡೆಯ ಮೂಲೆಯಲ್ಲಿ ಅಡಗಿಸಿಡಲು ಪ್ರಯತ್ನಿಸಿದಳು.
ಆದರೆ ಅವನು ಅವಳ ಬಳಿಗೆ ಬಂದು ಸ್ಟೋವ್ ಮೇಲಿನಿಂದ ಕೈ ಚಾಚಿ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡು
‘ಅವನನ್ನು ಬಿಡು,’ ಎಂದನು.
‘ನೀನು ಹೋಗು,
ಹೊರಟು ಹೋಗು!’ ಎಂದು ಅವಳು ಕಿರುಚಿದಳು.
ಮಗು ಮುಖ ಕೆಂಪಗೆ ಮಾಡಿಕೊಂಡು ಒಂದೇಸಮನೆ ಜೋರಾಗಿ ಅಳುತ್ತಿತ್ತು.
ಆ ಇಬ್ಬರ ಹಗ್ಗಜಗ್ಗಾಟದಲ್ಲಿ ಸ್ಟೋವ್ ಹಿಂದುಗಡೆ ನೇತುಹಾಕಿದ್ದ ಹೂವಿನ ಕುಂಡ ಕೆಳಗೆ ಬಿದ್ದು ಒಡೆದುಹೋಯಿತು.
ಅವನು ಅವಳನ್ನು ಗೋಡೆಗೆ ತಳ್ಳಿ, ಮಗುವಿನ ಮೇಲಿನ ಅವಳ ಹಿಡಿತವನ್ನು ಬಿಡಿಸಲು ಪ್ರಯತ್ನಿಸಿದ. ಮಗುವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡು ತನ್ನೆಲ್ಲ ಶಕ್ತಿಯಿಂದ ಅವಳನ್ನು ಗೋಡೆಗೆ ನೂಕಿದ.
‘ಮಗುವನ್ನು ಬಿಡು,’ ಎಂದು ಜೋರು ಮಾಡಿದನು.
‘ಇಲ್ಲ, ಬಿಡಲ್ಲ.
ನೀನು ಮಗುವಿಗೆ ತೊಂದರೆ ಮಾಡುತ್ತಿದ್ದೀಯ,’ ಎಂದಳು.
‘ಇಲ್ಲ. ನಾನು ಮಗುವಿಗೆ ತೊಂದರೆ ಮಾಡುತ್ತಿಲ್ಲ,’ ಎಂದನು ಆತ.
ಅಡುಗೆಮನೆಯ ಕಿಟಕಿಯಿಂದ ಯಾವುದೇ ಬೆಳಕು ಒಳಬರುತ್ತಿರಲಿಲ್ಲ. ಆಗ ಕತ್ತಲು ಸಮೀಪಸುತ್ತಿತ್ತು. ಅವನು ತನ್ನ ಒಂದು ಕೈಯಿಂದ ಬಿಗಿಯಾಗಿ ಹಿಡಿದುಕೊಂಡಿದ್ದ ಅವಳ ಬೆರಳುಗಳನ್ನು ಒಂದೊಂದಾಗಿ ಬಿಡಿಸಲು ಪ್ರಯತ್ನಿಸುತ್ತಿದ್ದ. ಇನ್ನೊಂದು ಕೈಯಿಂದ ಮಗುವಿನ ಭುಜದ ಕೆಳಭಾಗವನ್ನು ಗಟ್ಟಿಯಾಗಿ ಹಿಡಿದಿದ್ದ.
ಅವಳು ತನ್ನ ಬೆರಳುಗಳು ಬಲವಂತವಾಗಿ ತೆರೆದುಕೊಳ್ಳುತ್ತಿರುವುದನ್ನು ಮತ್ತು ಮಗು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನೂ ಮನಗಂಡಳು.
ಒಟ್ಟಾರೆ ತನ್ನ ಕೈಗಳು ಸಡಿಲಗೊಂಡ ತಕ್ಷಣ
‘ಬೇಡ!’ ಎಂದು ಕಿರುಚಿದಳು. ಮತ್ತು ಅವಳು ಮಗುವಿನ ಇನ್ನೊಂದು ಕೈಯನ್ನು ಹಿಡಿಯಲು ಮುಂದಾದಳು. ಸಿಗಲಿಲ್ಲ.
ಕೊನೆಗೆ ಮಗುವಿನ ಮಣಿಕಟ್ಟನ್ನು ಹಿಡಿದು ಹಿಂದಕ್ಕೆ ವಾಲಿದಳು.
ಈಗ ಅವನು ಬಿಡಲಿಲ್ಲ.
ಮಗು ತನ್ನ ಕೈಗಳಿಂದ ಜಾರಿಹೋಗುತ್ತಿರುವುದು ಅವನಿಗೂ ಅನಿಸಿತು. ಆಗ ಆತ ಬಹಳ ಜೋರಾಗಿ ಹಿಂದಕ್ಕೆ ಎಳೆದ!.
ಅಂತಿಮವಾಗಿ ಇಬ್ಬರ ಹಗ್ಗಜಗ್ಗಾಟದ ವಿಷಯ ಹೀಗೆ ಸಮಾಪ್ತಿಯಿತು.






ಉತ್ತಮವಾದ ಕಥೆಯೊಂದನ್ನು ಅನುವಾದ ಮಾಡುದ್ದೀರಾ. ಅಭಿನಂದನೆಗಳು
ಚಿಕ್ಕ ಚೊಕ್ಕ ಗಾಢವಾಗಿ ಆವರಿಸಿಕೊಳ್ಳುವ ಕತೆ..
ಅನುವಾದ ತುಂಬಾ ಚನ್ನಾಗಿದೆ. ಅಭಿನಂದನೆ