ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಕಾಡುವ ಸಾವಿಗೆ ಕಾಲದ ಮುಲಾಮು…

ಚೈತ್ರಾ ಶಿವಯೋಗಿಮಠ

ಹೋದ ಕಡೆಯಲ್ಲೆಲ್ಲ
ಬೆನ್ನು ಹತ್ತಿ ಕಾಡಿದ ಈ
ಸಾವು ಎಂತಹದಿರಬೇಕು?
ಒಡಹುಟ್ಟಲಿಲ್ಲ ಒಡನಾಡಲಿಲ್ಲ
ಕಾಡಿ ಕಂಗೆಡಿಸಿದ ಈ ಸಾವು
ಅದೆಂತಹದಿರಬೇಕು?

ಪ್ರತಿ ಕ್ಷಣದ ಧ್ಯಾನ
ಮರುಕ್ಷಣದ ಮೌನ
ಎಲ್ಲದರಲೂ ಪಲುಕುತಿದೆ
ಅವನ ನ್ಯಾಯಾಲಯದಲ್ಲಿ
ಈ ಸಾವಿನ ವಕಾಲತ್ತು ವಹಿಸಿ
ವಿಧಿಯೆಂಬ ಅಪರಾಧಿಯನ್ನು
ಗಲ್ಲಿಗೇರಿಸಲು ವಾದಿಸಿದೆ ಮನ

ಅತಿಮೋಹಿಯಲ್ಲ, ಕಲಹಿಯಲ್ಲ
ತನ್ನ ಪಾಲಿನ ಬುತ್ತಿಯನೆ
ಹಂಚಿಕೊಂಡು ಉಂಡವನ ಪಾಲಿಗೆ
ಮೃತ್ಯು ಉಳಿದದ್ದು ಮಾತ್ರ ಖೇದ
ಅಸಂಖ್ಯರ ಉಡಿಯ ತುಂಬಾ
ಅಗಾಧ ಪ್ರೀತಿ ಚೆಲ್ಲಿದವನ
ಎಬ್ಬಿಸಿ ಹೊರಡಿಸಿದೆ ವಿಧಿ

ನೀಡಿದ ಕೈಯ ಆಯ
ಬೇಡಿದ ಕೈಗಳಿಗೂ ತಿಳಿಸದ
ವಿಶಾಲ ಅಂಗಳದಲ್ಲಿನ
ಮಿನುಗುವ ಧೃವತಾರೆ
ಬರಿದೆ ತಾರೆಯಾಗದೆ
ಅದೆಷ್ಟೊ ಜೀವನಗಳ
ಬೆಳಗಿದ ದಿನಕರನ
ಹರಸಿದ ಹಾರೈಕೆಗಳ
ಹುಸಿಹೋಗುವಂತೆ
ನುಂಗಿಕೊಂಡಿತು ಕಾಲ

ಈ ಕಾಡುವ ಸಾವಿನಿಂದ
ತಪ್ಪಿಸಿಕೊಳ್ಳಲು ಕಾಲದ
ಮುಲಾಮಲ್ಲದೆ ಮತ್ತಿನಾವ ಇಲಾಜು
ಇಲ್ಲವೆನಿಸಿದೆ!

‍ಲೇಖಕರು Admin

4 November, 2021

1 Comment

  1. T S SHRAVANA KUMARI

    ನಿಜ ಚೈತ್ರ, , ಕಾಲವೊಂದೇ ಈ ನೋವಿಗೆ ಮುಲಾಮು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading