ಶ್ರೀನಿವಾಸ ಪ್ರಭು ಅಂಕಣ – ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

24

ಕತೆ ಮುಂದುವರಿಸುತ್ತೇನೆ. ಎಲ್ಲೂ ಕೆಲಸ ಸಿಗದೆ ಎಲ್ಲಾ ದಾರಿಗಳೂ ಮುಚ್ಚಿಹೋದಂತಾದಾಗ ನಾನು ಅನುಭವಿಸಿದ ಸಂಕಟ—ಯಾತನೆ ಅಷ್ಟಿಷ್ಟಲ್ಲ. ಅಂಥ ಸಂದರ್ಭದಲ್ಲಿ ನನ್ನ ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡು ಬರಲು ನೆರವಾದ್ದು, ನಾನು ಸಂಪೂರ್ಣ ಖಿನ್ನತೆಗೆ ಜಾರದಂತೆ ತಡೆ ಹಿಡಿದದ್ದು ರಂಗಭೂಮಿ ಹಾಗೂ ನನ್ನ ಜಯನಗರದ ಆಪ್ತ ಮಿತ್ರಬಳಗ. ಮಾಧು, ನಾಗೇಶ, ರಮೇಶ, ದ್ವಾರಕಾ, ಬಾಲಾಜಿ, ವಿಜಿ, ಗೋಪಾಲಿ, ಲಕ್ಷ್ಮೀಶ… ಎಲ್ಲರೂ ನನಗೆ ಧೈರ್ಯ ತುಂಬುತ್ತಿದ್ದರು; ಕುಗ್ಗದಂತೆ ನೋಡಿಕೊಳ್ಳುತ್ತಿದ್ದರು.

ಮಾಧು-ನಾಗೇಶರ ಮನೆಗಳಂತೂ ನನ್ನ ಪಾಲಿಗೆ ನಮ್ಮ ಮನೆಯ ವಿಸ್ತೃತ ಭಾಗಗಳಂತೆಯೇ ಆಗಿಹೋಗಿದ್ದವು.

1976 ರ ಮಧ್ಯಭಾಗ… ಒಂದು ದಿನ ನಳಿನಿ ಅಕ್ಕ ಆಫೀಸ್ ನಿಂದ ಮನೆಗೆ ಬರುತ್ತಿದ್ದಂತೆ ನನ್ನನ್ನು ಕರೆದು ಹೇಳಿದಳು: ‘ಅಬ್ಬೂರು ಜಯತೀರ್ಥ ಅವರು ಹೊಸ ನಾಟಕ ಮಾಡಿಸ್ತಿದಾರೆ.. ‘ಮಾರೀಚನ ಬಂಧುಗಳು’ ಅಂತ. ನಾಳೆ ಕಲಾಕ್ಷೇತ್ರಕ್ಕೆ ನಿನಗೆ ಬರೋಕೆ ಹೇಳಿದಾರೆ. ನಿನಗೆ ಒಂದು ಒಳ್ಳೆಯ ಪಾತ್ರ ಇದೆಯಂತೆ.’ ಅಕ್ಕನ ಮಾತು ಕೇಳಿ ತುಂಬಾ ಖುಷಿಯಾಗಿ ಹೋಯಿತು. ಅಬ್ಬಾ! ನಾಟಕದ ಚಟುವಟಿಕೆಯಲ್ಲಿ ತೊಡಗಿಕೊಂಡುಬಿಟ್ಟರೆ ಒಂದಷ್ಟು ಹೊತ್ತು ಕಳೆಯುವುದಷ್ಟೇ ಅಲ್ಲ, ನಾಟಕ ಪ್ರಯೋಗದ ಕುರಿತಾಗಿ ಕಲಿಕೆಯೂ ಆಗುತ್ತದೆ.. ಜೊತೆಗೆ ದೊಡ್ಡ ದೊಡ್ಡ ಕಲಾವಿದರ-ನಿರ್ದೇಶಕರ ಜೊತೆ ಕೆಲಸ ಮಾಡುವ ಅಪೂರ್ವ ಅವಕಾಶವೂ ದೊರೆತು ಒಳ್ಳೆಯ ಅನುಭವವನ್ನೂ ಗಳಿಸಿಕೊಳ್ಳಬಹುದು ಎನ್ನಿಸಿ ಮನಸ್ಸು ಹಗುರಾಯಿತು. ಮರುದಿನ ಸಂಜೆಯಾಗುವುದನ್ನೇ ಕಾದಿದ್ದು ಕಲಾಕ್ಷೇತ್ರಕ್ಕೆ 5 ಗಂಟೆಗೇ ಹೋಗಿ ಮೆಟ್ಟಿಲ ಮೇಲೆ ಎಲ್ಲರ ಬರವಿಗೆ ಕಾಯುತ್ತಾ ಕುಳಿತೆ. ಈ ಕಲಾಕ್ಷೇತ್ರದ ಮೆಟ್ಟಿಲುಗಳು ಮುಂದಿನ ಹಲವಾರು ವರ್ಷಗಳ ಕಾಲ ನನ್ನ ನೆಚ್ಚಿನ ‘ಸಂಗಾತಿ’ಯೇ ಆಗಿಬಿಟ್ಟವು!

ಸಂಜೆ ಎಲ್ಲಾ ಕಲಾವಿದರೂ ಅವರವರ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಂದಮೇಲೆ ಅಬ್ಬೂರು ಜಯತೀರ್ಥ ಅವರು ರಿಹರ್ಸಲ್ ಆರಂಭಿಸಿದರು. ‘ಮಾರೀಚನ ಬಂಧುಗಳು’ ಅರುಣ್ ಮಹೋಪಾಧ್ಯಾಯ ಅವರ ಮೂಲ ಬಂಗಾಳಿ ನಾಟಕದ ಕನ್ನಡ ಅನುವಾದ; ಅನುವಾದಿಸಿದ್ದವರು ಬಿಂಡಿಗನವಿಲೆ ನಾರಾಯಣ ಸ್ವಾಮಿಯವರು. ನಾಟಕವನ್ನು ಎಲ್ಲ ಕಲಾವಿದರ ಸಮಕ್ಷಮದಲ್ಲಿ ಓದಿದ ನಾರಾಯಣ ಸ್ವಾಮಿಯವರು ಒಟ್ಟಾರೆ ನಾಟಕದ ಆಶಯವನ್ನು ಪರಿಚಯ ಮಾಡಿಕೊಟ್ಟರು.

ರಾವಣ—ಮಾರೀಚರ ಕಾಲದಿಂದ ಇಂದಿನ ಈ ದಿನದವರೆಗೂ ನಡೆದುಕೊಂಡೇ ಬಂದಿರುವ ಶೋಷಣೆಯ ವಿವಿಧ ಮಗ್ಗುಲುಗಳನ್ನು ಅತ್ಯಂತ ಪ್ರಭಾವಿಯಾಗಿ ಅನಾವರಣಗೊಳಿಸಿರುವ ಈ ನಾಟಕ, ಒಂದು ನೆಲೆಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಮತ್ತೊಂದು ನೆಲೆಯಲ್ಲಿ ಅವರನ್ನು ತಾತ್ತ್ವಿಕ ಚಿಂತನೆಗೂ ಗುರಿಪಡಿಸುತ್ತಾ ಹೋಗುತ್ತದೆ. ಮೂಲ ನಾಟಕದಲ್ಲಿ ಬಂಗಾಳದ ಜನಪ್ರಿಯ ಜಾತ್ರಾ ಪ್ರಕಾರದ ತಂತ್ರಗಳನ್ನು ಬಳಸಿಕೊಂಡು ನಾಟಕವನ್ನು ಕಟ್ಟಿಕೊಟ್ಟಿದ್ದರೆ ಅಬ್ಬೂರರು ಬೀದಿನಾಟಕ—ಬಯಲಾಟದ ಕೆಲ ತಂತ್ರಗಳನ್ನು ಬಳಸಿಕೊಂಡು ರಂಗ ಪ್ರಸ್ತುತಿಯನ್ನು ಸಿದ್ಧಗೊಳಿಸಿದ್ದರು.

ನಾಟಕದ ಓದು-ಪರಿಚಯದ ನಂತರ ಜಯಣ್ಣ (ಅಬ್ಬೂರು ಜಯತೀರ್ಥ) ಪಾತ್ರವರ್ಗವನ್ನು ಪ್ರಕಟಿಸಿದರು. ನನ್ನದು ಗ್ರೆಗರಿಯ ಪಾತ್ರ… ಸಾಕಷ್ಟು ಪ್ರಾಮುಖ್ಯತೆ ಇದ್ದ ಪಾತ್ರ. ಎಂ ಸಿ ಆನಂದ್, ಶಿವರುದ್ರಸ್ವಾಮಿ, ಸತ್ಯನಾರಾಯಣ ಭಟ್, (ಇವರು ಕ್ರಾಂತಿ ಬಂತು ಕ್ರಾಂತಿ ನಾಟಕದಲ್ಲೂ ನನ್ನೊಂದಿಗೆ ಅಭಿನಯಿಸಿದ್ದರು) ಮೊದಲಾದ ನುರಿತ ನಟರೊಂದಿಗೆ ನಟಿಸುವ ಅವಕಾಶ ದೊರೆತದ್ದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಮತ್ತೊಬ್ಬ ಹಿರಿಯ ಕಲಾವಿದ ಎಸ್ ಕೆ ಮಾಧವರಾವ್ ಅವರು ಸಂಗೀತ ಸಂಯೋಜನೆ ಮಾಡಿ ಮೇಳದ ಜವಾಬ್ದಾರಿಯನ್ನು ಹೊತ್ತಿದ್ದರು. ಸುಮಾರು ಒಂದು ತಿಂಗಳ ಕಾಲ ನಡೆದ ಈ ನಾಟಕದ ತಾಲೀಮು ನನ್ನ ಪಾಲಿಗೆ ಒಂದು ಅಪೂರ್ವ ಅನುಭವ.

ಈ ನಾಟಕದ ಮೊಟ್ಟ ಮೊದಲ ಪ್ರದರ್ಶನವಾದದ್ದು ರವೀಂದ್ರ ಕಲಾಕ್ಷೇತ್ರದಲ್ಲಿ. ಯಾವುದೋ ಉತ್ಸವದ ಅಂಗವಾಗಿ ನಡೆದ ಈ ಪ್ರದರ್ಶನಕ್ಕೆ ಕಿಕ್ಕಿರಿದು ಪ್ರೇಕ್ಷಕರು ಸೇರಿದ್ದರು. ನಾಟಕವೂ ರಂಗದ ಮೇಲೆ ಸೊಗಸಾಗಿ ಪ್ರಸ್ತುತಗೊಂಡು ಅಭೂತಪೂರ್ವವಾದ ಯಶಸ್ಸನ್ನು ಗಳಿಸಿತು. ಹೀಗೆ ರವೀಂದ್ರ ಕಲಾಕ್ಷೇತ್ರದ ಪ್ರತಿಷ್ಠಿತ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಕಲಾಸಂಘ ಅರ್ಪಿಸಿದ ‘ಮಾರೀಚನ ಬಂಧುಗಳು’ ನಾಟಕದ ಮೂಲಕ ನನ್ನ ಯಶಸ್ವೀ ‘ರಂಗಪ್ರವೇಶ’ವಾಯಿತು. ನಮ್ಮ ಆ ಪ್ರಯೋಗಕ್ಕೆ ಲೋಕೇಶ್, ಸಿ ಆರ್ ಸಿಂಹ ಮೊದಲಾದ ರಂಗ ದಿಗ್ಗಜರೆಲ್ಲಾ ಆಗಮಿಸಿ, ನಾಟಕ ನೋಡಿ ಅಭಿನಂದಿಸಿದ್ದು ಮತ್ತೊಂದು ಗರಿ ಮುಡಿಸಿದಂತಾಯಿತು.

ನಾಟಕದ ತಾಲೀಮಾಗಲೀ ಇತರ ಕೆಲಸಗಳಾಗಲೀ ಇಲ್ಲದಿದ್ದ ಸಮಯದಲ್ಲಿ ಪ್ರತಿಸಂಜೆ ನಾಗೇಶನ ಮನೆಯಲ್ಲಿ ಎಲ್ಲ ಗೆಳೆಯರೂ ಸೇರುತ್ತಿದ್ದೆವು. ನಾಗೇಶನ ಮನೆಗೆ ಆಗಾಗ್ಗೆ ಅವರ ತಾತ ಒಬ್ಬರು ಬರುತ್ತಿದ್ದರು. ಅವರ ಹೆಸರು ರಂಗಯ್ಯ. ಅವರಿದ್ದದ್ದು ತಿರುಪತಿಯಲ್ಲಿ; ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಾಗಲೆಲ್ಲಾ ಮಗಳ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ನಾವೆಲ್ಲಾ ತಾತ ಎಂದೇ ಅವರನ್ನು ಕರೆಯುತ್ತಿದ್ದರೂ ಅವರ ಹುರುಪು— ಜೀವನೋತ್ಸಾಹಗಳು ಹರಯದವರನ್ನೂ ನಾಚಿಸುವಂತಿದ್ದವು.

ನಮ್ಮ ಜೊತೆಯಲ್ಲಿ ಕುಳಿತು ಅವರು ಬ್ರಿಡ್ಜ್ , ಕೇರಂ, ಜಾಕಿ ಆಟ.. ಎಲ್ಲವನ್ನೂ ಆಡುತ್ತಿದ್ದರು. ಒಂದು ಸಂಜೆ ಅವರು ನನ್ನನ್ನು ಕೇಳಿದರು: ‘ಎರಡು ವರ್ಷದಿಂದ ನೀನು ಕೆಲಸಕ್ಕೆ ಅಲೀತಿರೋದರ ಬಗ್ಗೆ ನಾಗೇಶ ಹೇಳಿದಾನೆ. ನನ್ನದೊಂದು ಸಲಹೆ.. ಇಷ್ಟು ಬುದ್ಧಿವಂತನಾಗಿದ್ದುಕೊಂಡು ಹೀಗೆ ವೃಥಾ ಸಮಯ ಹಾಳು ಮಾಡೋದರ ಬದಲು ನೀನು ಯಾಕೆ ಇಂಗ್ಲೀಷ್ ಎಂ ಎ ಮಾಡಬಾರದು? ಬೆಂಗಳೂರು ಯೂನಿವರ್ಸಿಟಿಯವರೇ ಈ ವರ್ಷದಿಂದ correspondence course ಶುರು ಮಾಡ್ತಿದಾರೆ. Apply ಮಾಡು.

ಒಂದು ವೇಳೆ ಕೆಲಸ ಸಿಕ್ಕಿದರೂ ಓದು ಮುಂದುವರಿಸೋದಕ್ಕೇನೂ ತೊಂದರೆಯಾಗೋಲ್ಲ.. ಯೋಚನೆ ಮಾಡು.’ ನನಗೂ ಇದು ಒಳ್ಳೇ ವಿಚಾರವೇ ಅನ್ನಿಸಿತು. ‘ಆಗಲಿ ತಾತ, ಖಂಡಿತ ಈ ಬಗ್ಗೆ ಯೋಚನೆ ಮಾಡ್ತೀನಿ’ ಎಂದೆ. ಅಂದು ಅಲ್ಲಿಂದ ಹೊರಡೋ ಸಮಯದಲ್ಲಿ ತಾತ ನನ್ನನ್ನು ರೂಂ ಒಳಗೆ ಕರೆದು, ‘ನಿನ್ನ ಪರಿಸ್ಥಿತಿ ನನಗೆ ಗೊತ್ತು.. ತೊಗೋ.. ಈ 50 ರೂಪಾಯಿ ಇಟ್ಟುಕೋ.. application ತರೋದಕ್ಕೆ ಮತ್ತೊಂದಕ್ಕೆ ಬೇಕಾಗುತ್ತೆ. Course ಗೆ admission ಆದಮೇಲೆ ಮುಂದಿನ ವಿಚಾರ ಮಾಡೋಣ’ ಎಂದರು. ಅವರ ಪ್ರೀತಿ-ಕಾಳಜಿಗಳನ್ನು ಕಂಡು ನನಗೆ ಮಾತೇ ಹೊರಡದಂತಾಗಿಹೋಯಿತು. ‘ನಾಳೇನೇ ಹೋಗಿ application ತರ್ತೀನಿ ತಾತ’ ಎಂದು ಗದ್ಗದಿತನಾಗಿ ನುಡಿದು ಹಣ ತೆಗೆದುಕೊಂಡು ಅಲ್ಲಿಂದ ಹೊರಟೆ.

ಮನೆಗೆ ಹೋಗುತ್ತಿದ್ದಂತೆಯೇ ನಳಿನಿ ಅಕ್ಕ, ‘ನಾಳೆ ಬೆಳಿಗ್ಗೆ office ಹತ್ರಾನೇ ಬರೋಕೆ ಜಯಣ್ಣ ಹೇಳಿದಾರೆ. ಯಾವುದೋ ನಾಟಕದ ರಿಹರ್ಸಲ್ ಇದೆಯಂತೆ. ಒಂದು ಕೆಲಸ ಮಾಡು.. ನಾಳೆ ನಾನು office ಗೆ ಹೋಗೋವಾಗ ನನ್ನ ಜೊತೇಲೇ ಬಂದು ಜಯಣ್ಣನ ಜೊತೆ ಮಾತಾಡಿಕೊಂಡು ಬಾ’ ಅಂದಳು. ಅಂತೆಯೇ ಮರುದಿನ ಅವಳ ಜೊತೆಯಲ್ಲೇ ಏಜೀಸ್ ಆಫೀಸ್ ಗೆ ಹೋಗಿ ಜಯಣ್ಣನನ್ನು ಭೇಟಿ ಮಾಡಿದೆ. ಅದೇನೆಂದರೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ವತಿಯಿಂದ ನಮ್ಮ ಕನ್ನಡ ಸಾಹಿತ್ಯ ಕಲಾಸಂಘಕ್ಕೆ ನಾಲ್ಕಾರು ಪ್ರದರ್ಶನಗಳು ಮಂಜೂರಾಗಿದ್ದವು.

ಹಾಸನ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಒಂದು ನಾಟಕದ ಕೆಲ ಪ್ರದರ್ಶನಗಳನ್ನು ನಾವು ನೀಡಬೇಕಿತ್ತು. ಜೀತಪದ್ಧತಿಯಂತಹ ಒಂದು ಸಾಮಾಜಿಕ ಪಿಡುಗಿನ ಬಗ್ಗೆ ಇಲಾಖೆಯವರೇ ಕೊಟ್ಟಿದ್ದ ನಾಟಕವನ್ನು ಸಿದ್ಧಪಡಿಸಿಕೊಂಡು ಪ್ರದರ್ಶನ ನೀಡಬೇಕಿತ್ತು. ಅದರಲ್ಲಿಯೂ ಒಂದು ಮುಖ್ಯ ಭೂಮಿಕೆಯನ್ನು ನನಗೆ ಜಯಣ್ಣ ನೀಡಿದ್ದರು. ಎರಡೇ ದಿನದಲ್ಲಿ ನಾಟಕ ಸಿದ್ಧಪಡಿಸಿಕೊಂಡು ಪ್ರದರ್ಶನ ನೀಡಲು ಹೊರಡಬೇಕಿತ್ತು. ಈ ಗದ್ದಲದಲ್ಲಿ ಇಂಗ್ಲೀಷ್ ಎಂ ಎ ಅಪ್ಲಿಕೇಷನ್ ವಿಷಯ ಸಂಪೂರ್ಣವಾಗಿ ಮರೆತೇಹೋಯಿತು. ಎರಡು ದಿನಗಳು ಸತತವಾಗಿ ಅಭ್ಯಾಸ ಮಾಡಿಕೊಂಡು ನಾಟಕ ಪ್ರದರ್ಶನ ನೀಡಿ ಬರಲು ನಮ್ಮ ತಂಡ ಹೊರಟಿತು.

ಒಂದೊಂದೂ ಕಡೆಯಲ್ಲಿ ಮೊದಲು ಮುಕ್ಕಾಲು ತಾಸು ಸುಗಮ ಸಂಗೀತ ಕಾರ್ಯಕ್ರಮ.. ನಂತರ ಅರ್ಧತಾಸಿನ ನಮ್ಮ ನಾಟಕ.. ಹೀಗಿತ್ತು ನಮ್ಮ ಪ್ರಸ್ತುತಿಯ ರೂಪುರೇಷೆ. ನಮ್ಮ ಜೊತೆ ಸುಗಮ ಸಂಗೀತ ಕಾರ್ಯಕ್ರಮ ನೀಡಲು ಬಂದಿದ್ದವರು ಸುಗಮ ಸಂಗೀತದ ‘ದೊರೆ’ ಮೈಸೂರು ಅನಂತಸ್ವಾಮಿ ಹಾಗೂ ತಂಡದವರು! ಅವರೊಂದಿಗೆ ಕಳೆದ ಆ ದಿನಗಳ ನೆನಪಂತೂ ಎಂದೂ ಮಾಸದಂಥದ್ದು. ‘ದೊರೆ’ಯ ಎದುರಲ್ಲೇ ಕುಳಿತು ನಮ್ಮ ಮೆಚ್ಚಿನ ಅವರ ಸಂಯೋಜನೆಗಳನ್ನು ಮತ್ತೆ ಮತ್ತೆ ಹಾಡಿಸಿ ಸಂಭ್ರಮಿಸಿದೆವು. ‘ನಿಮ್ಮಂಥ ರಸಿಕ ಸಹೃದಯರು ದೊರೆಯುವುದೇ ಅಪರೂಪ’ ಎನ್ನುತ್ತಾ ಅವರೂ ಸಹಾ ಮತ್ತಷ್ಟು ಸ್ಫೂರ್ತಿಯಿಂದ ಮೈಮರೆತು ಹಾಡುತ್ತಿದ್ದರು. ಕನ್ನಡ ಭಾವಗೀತೆಗಳನ್ನು ಹಾಗೆ ಅವರು ಮನದುಂಬಿ ತನ್ಮಯರಾಗಿ ಹಾಡುವುದನ್ನು ಆಲಿಸುವುದೇ ಒಂದು ದಿವ್ಯ ರಸಾನುಭೂತಿ. ಅವರ ಗಾಯನದ ನಂತರದ ನಮ್ಮ ಪ್ರಚಾರ ನಾಟಕವೂ ಸಹಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಯಿತು.

ಪ್ರದರ್ಶನಾನಂತರ ಕೆಲ ಬೀರ್ ಪ್ರಿಯ ಕಲಾವಿದರು, ಬಾರ್ ಗೆ ಹೋಗುವಷ್ಟು ‘ಅರ್ಥವ್ಯವಸ್ಥೆ’ಯಿಲ್ಲದ ಪ್ರಯುಕ್ತ ಅಂಗಡಿಯ ಹಿಂಭಾಗದಲ್ಲೇ ಬೀರ್ ಕೇಸ್ ಗಳ ಮೇಲೇ ಆಸೀನರಾಗಿ ಬೀರ್ ಅನ್ನು ಗುಟುಕರಿಸುತ್ತಿದ್ದೆವು. ನೆಂಚಿಕೊಳ್ಳಲು ಏನಾದರೂ ಕೊಡಪ್ಪಾ ಎಂದು ಅಂಗಡಿಯವನನ್ನು ಕೇಳಿದರೆ ಅವನು ಒಂದು ತಟ್ಟೆಯಲ್ಲಿ ಒಂದಷ್ಟು ದ್ರಾಕ್ಷಿ ಹಣ್ಣುಗಳನ್ನು ತಂದು ಮುಂದಿಟ್ಟಿದ್ದ! ನಾವು ಚಕಿತರಾಗಿ ‘ಇದೇನು ಹೀಗೆ’ ಎಂದದ್ದಕ್ಕೆ ಅವನು ಹಲ್ಲು ಗಿಂಜುತ್ತಾ ‘ಇಲ್ಲೆಲ್ಲಾ ಹೀಗೇ!’ ಎಂದು ನುಡಿದು ತುಸು ದೂರದಲ್ಲಿ ಕುಳಿತವರನ್ನು ತೋರಿದ. ಅವರ ಮುಂದೂ ದ್ರಾಕ್ಷಿ ಹಣ್ಣಿನ ತಟ್ಟೆ! ‘ಇದೂ ಒಂದು ವಿಶಿಷ್ಟ ಅನುಭವವೇ ‘ ಎಂದುಕೊಂಡು ಬೀರ್ ಜೊತೆಗೆ ಹುಳಿ ದ್ರಾಕ್ಷಿ ತಿಂದು ಮುಖ ಹುಳ್ಳಗೆ ಮಾಡಿಕೊಂಡು, ಕಷ್ಟವಾದರೂ ಬಿಡದೆ ಬೀರ್ ಮುಗಿಸಿ ಹೊರಟೆವು. ಬೀರ್ ಕುಡಿದರೆ ದಪ್ಪಗಾಗುತ್ತಾರೆ ಎಂದು ಯಾರೋ ಗೆಳೆಯರು ಹೇಳಿದ ಮಾತು ಬೇರೆ ನನ್ನ ಮನಸ್ಸಿನಲ್ಲಿ ಭದ್ರವಾಗಿ ಕೂತುಬಿಟ್ಟಿತ್ತು. ಬಲು ಸಣ್ಣಗಿದ್ದು ಬರೋಬ್ಬರಿ 46 ಕೆ ಜಿ ತೂಗುತ್ತಿದ್ದ ನನಗೆ ಆ ಗೆಳೆಯರ ಮಾತು, ಬೀರ್ ಕುಡಿಯಲು ನನಗೆ ಅರ್ಹತೆಯಿದೆಯೆಂದು ಸಾರುವ ಒಂದು ಪರವಾನಗಿ ಪತ್ರದಂತಾಗಿಬಿಟ್ಟಿತ್ತು!

ಹೀಗೆ ನಾಟಕ ಪ್ರದರ್ಶನಗಳನ್ನು ಎಲ್ಲಾ ಕಡೆ ಮುಗಿಸಿ ಮರಳಿ ಮನೆಗೆ ಬರುವಷ್ಟರ ಹೊತ್ತಿಗೆ ಇಂಗ್ಲೀಷ್ ಎಂ ಎ ವಿಷಯ ನೆನಪಿನಿಂದಲೇ ಹಾರಿಹೋಗಿತ್ತು. ಅದು ನೆನಪಿಗೆ ಬಂದು ನಾನು ಕಾರ್ಯೋನ್ಮುಖನಾಗುವಷ್ಟರಲ್ಲಿ ಅಪ್ಲಿಕೇಷನ್ ಸಲ್ಲಿಸಲು ಇದ್ದ ಗಡುವು ಮುಗಿದುಹೋಗಿತ್ತು. ‘ಛೇ.. ಎಂಥ ಕೆಲಸವಾಗಿಹೋಯಿತು’ ಎಂದು ಹಳಹಳಿಸಿದೆ. ನಾಟಕ ಪ್ರದರ್ಶನಕ್ಕೆ ಹೋಗುವ ಮುನ್ನ ರಂಗಯ್ಯ ತಾತ ಕೊಟ್ಟಿದ್ದ 50 ರೂಪಾಯಿ ನೋಟ್ ಅನ್ನು ಒಂದು ಪುಸ್ತಕದಲ್ಲಿಟ್ಟು ಜೋಪಾನ ಮಾಡಿ ಹೋಗಿದ್ದೆ. ಅವರಿಗೆ ಹಣವನ್ನಾದರೂ ಮರಳಿಸಿಬಿಡೋಣ ಎಂದುಕೊಂಡು ಆ ನೋಟ್ ಅನ್ನು ತೆಗೆದುಕೊಂಡು ನಾಗೇಶನ ಮನೆಯತ್ತ ಹೊರಟೆ.

ಹಾದಿಯಲ್ಲಿ ಜಿಜ್ಞಾಸೆ ಶುರುವಾಗಿಯೇ ಬಿಟ್ಟಿತು: ‘ತಾತ ಹೇಗೂ ನನಗೆ ಹಣ ಕೊಟ್ಟಾಗಿದೆ. ಈಗಂತೂ ಅವರಿಗೆ ಈ ದುಡ್ಡಿನ ಅಗತ್ಯವಿಲ್ಲ.. ಇದ್ದಿದ್ದರೆ ಅವರು ನನಗೆ ಕೊಡುತ್ತಲೇ ಇರಲಿಲ್ಲ.. ನನಗಾದರೆ ಇದರ ಅಗತ್ಯ ತುಂಬಾ ಇದೆ.. ಹತ್ತಾರು ದಿನದ ಓಡಾಟ.. ಒಂದಷ್ಟು ಸಿನೆಮಾ-ನಾಟಕಗಳು… ಇತ್ಯಾದಿ ಇತ್ಯಾದಿ… ಜೊತೆಗೆ ಹಣ ಮರಳಿಸಿಬಿಟ್ಟರೆ ತಾತನಿಗೆ ತುಂಬಾ ನೋವಾಗುತ್ತದೆ.. ಆಗದೇ ಇರುತ್ತದೆಯೇ? ಖಂಡಿತಾ ನೋವಾಗುತ್ತದೆ.. ಅಷ್ಟು ಹಿರಿಯರ ಮನಸ್ಸಿಗೆ ನೋವು ಮಾಡುವುದು ಎಳ್ಳಷ್ಟೂ ಸರಿಯಲ್ಲ..’

ಹೀಗೆ ಪದೇ ಪದೇ ನನಗೆ ನಾನೇ ಹೇಳಿಕೊಂಡ ಮೇಲೆ ನಾನೇ ಅದನ್ನು ನಂಬುವಂತಾಗಿ ಸಮಾಧಾನವಾಗಿ ಹೋಯಿತು. ಒಂದೇ ಒಂದು ಚಿಕ್ಕ ಸುಳ್ಳು: ‘ಅಪ್ಲಿಕೇಷನ್ ಹಾಕಿಯಾಗಿದೆ!’ ಮುಗಿದೇಹೋಯಿತು! ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗಿಬಿಡುತ್ತವೆ! ತಾತನ ಮನಸ್ಸಿಗೂ ನೋವಾಗುವುದಿಲ್ಲ! ಇಷ್ಟು ಮನಸ್ಸಿಗೆ ಖಾತ್ರಿಯಾದ ಮೇಲೆ ಸೀದಾ ಒಂದು ಥಿಯೇಟರ್ ಗೆ ಹೋಗಿ ಕುಳಿತುಬಿಟ್ಟೆ. ಮರುದಿನ ನಾನು ನಾಗೇಶನ ಮನೆಗೆ ಹೋಗುವಷ್ಟರಲ್ಲಿ ತಾತ ತಿರುಪತಿಗೆ ಹೊರಟುಹೋಗಿದ್ದರು. ಸಧ್ಯ.. ಸುಳ್ಳು ಹೇಳಿದ ಪಾಪವೂ ತಲೆಗೆ ಸುತ್ತಿಕೊಳ್ಳಲಿಲ್ಲ. ಆದರೂ ಮನಸ್ಸು ಒಮ್ಮೆ ಸಣ್ಣಗೆ ಚೀರಿತು: ‘Sorry ತಾತಾ! Very very sorry!’

ಆಗಾಗ್ಗೆ ನಾನು ಸೆಂಟ್ರಲ್ ಕಾಲೇಜ್ ಗೆ ಹೋಗಿ ಲೈಬ್ರರಿಯಲ್ಲಿ ಕುಳಿತು ಏನನ್ನಾದರೂ ಒಂದಷ್ಟು ಓದಿಕೊಂಡು ಬರುತ್ತಿದ್ದೆ. ಒಂದುದಿನ ಹಾಗೆ ಸೆಂಟ್ರಲ್ ಕಾಲೇಜ್ ಗೆ ಹೋಗಿದ್ದಾಗ ಅಕಸ್ಮಾತ್ತಾಗಿ ಗೆಳೆಯ ರಾಮಯ್ಯನ ಭೇಟಿಯಾಯಿತು. ರಾಮಯ್ಯ ನನ್ನ ಸಹಪಾಠಿಯೇ ಆಗಿದ್ದವನು. ಅವನಿಗೂ ಆಗಿನ್ನೂ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಕೆಲಸ ಸಿಗುವ ಮುನ್ನವೇ ಮದುವೆ ಮಾಡಿಕೊಂಡಿದ್ದ ರಾಮಯ್ಯ ಚಾಮರಾಜಪೇಟೆಯ ಬಳಿ ಒಂದು ಪುಟ್ಟ ಕೊಠಡಿಯನ್ನು ಬಾಡಿಗೆಗೆ ಹಿಡಿದಿದ್ದ. ಅಂದು ಕಾಲೇಜ್ ನಲ್ಲಿ ಭೇಟಿಯಾದ ರಾಮಯ್ಯ ಯಾಕೋ ತುಂಬಾ ವ್ಯಾಕುಲನಾಗಿದ್ದ. ಸಾಮಾನ್ಯವಾಗಿ ನಗುನಗುತ್ತಾ ಖುಷಿಯಿಂದಿರುತ್ತಿದ್ದ ಈ ರಾಮನಿಗೇನಾಗಿದೆ ಇಂದು ಎಂದು ಯೋಚಿಸುತ್ತಲೇ ಅವನ ಖಿನ್ನತೆಯ ಕಾರಣವನ್ನು ಕೇಳಿದೆ.

‘ಏನೋ ಮಾಡಲಿ? ಕೈಯಲ್ಲಿ ಒಂದು ದುಡ್ಡಿಲ್ಲ.. ಅಕ್ಕಿ ಬೇಳೆ ತರೋಕೂ ಕಾಸಿಲ್ಲ.. ಸಾಯಬೇಕು ಅನ್ನಿಸಿಬಿಟ್ಟಿದೆ’ ಎಂದು ಬಿಕ್ಕಿದ. ಅವನನ್ನು ಎಂದೂ ಹಾಗೆ ಕಾಣದ ನನಗೆ ಸಂಕಟ ಒತ್ತರಿಸಿಕೊಂಡು ಬಂದಿತು. ನಾನಾದರೂ ಏನು ಮಾಡಲು ಸಾಧ್ಯವಿದೆ? ಸಾಧ್ಯವಿದ್ದ ಎರಡು ಸಮಾಧಾನದ ಮಾತಾಡಿ ಅವನಿಂದ ಬೀಳ್ಕೊಂಡೆ. ಮನೆಗೆ ಹೋದಮೇಲೂ ರಾಮಯ್ಯನ ಬಿಕ್ಕು ಹಿಂಬಾಲಿಸಿಕೊಂಡು ಬಂದು ಕಾಡುತ್ತಲೇ ಇತ್ತು. ಅವನ ಅಸಹಾಯಕತೆಗೆ ಮನಸ್ಸು ಮರುಗುತ್ತಿತ್ತು. ಅವನ ಚಿಂತೆಯಲ್ಲೇ ಮುಳುಗೇಳುತ್ತಿದ್ದವನಿಗೆ ತಟಕ್ಕನೆ ಒಂದು ಉಪಾಯ ಹೊಳೆಯಿತು. ಯಾರೂ ಹತ್ತಿರ ಇಲ್ಲದಿದ್ದ ವೇಳೆ ನೋಡಿಕೊಂಡು ಮೆಲ್ಲಗೆ ಹೋಗಿ ಮನೆಯ ಹಾಲ್ ನಲ್ಲಿದ್ದ ಕಬ್ಬಿಣದ ಬೀರುವಿನ ಬಾಗಿಲು ತೆರೆದೆ. ಅದರೊಳಗಿನ ಲಾಕರ್ ನ ಬಾಗಿಲು ತೆರೆದು ಅಮ್ಮ ಅದರಲ್ಲಿ ಜೋಪಾನವಾಗಿ ಇರಿಸಿದ್ದ, ಎಂ ಎ ಪರೀಕ್ಷೆಯಲ್ಲಿ ನಾನು ಗಳಿಸಿದ್ದ ಒಂದು ಚಿನ್ನದ ಮೆಡಲ್ ಅನ್ನು ತೆಗೆದುಕೊಂಡು ಜೇಬಿಗಿಳಿಸಿ ಮತ್ತೆ ಅನುಮಾನ ಬರದಂತೆ ಬೀರುವಿನ ಬಾಗಿಲುಗಳನ್ನು ಮುಚ್ಚಿ ಲಗುಬಗೆಯಿಂದ ಹೊರ ಹೊರಟುಹೋದೆ.

ಮನೆಯಿಂದ ಸೀದಾ ನಾನು ಹೋದದ್ದು ಹನ್ನೊಂದನೇ ಮುಖ್ಯ ರಸ್ತೆಯಲ್ಲಿದ್ದ ಗಿರವಿ ಅಂಗಡಿಗೆ! ಆ ರಸ್ತೆಯಲ್ಲಿ ಓಡಾಡುವಾಗ ಆ ಅಂಗಡಿಯನ್ನು ನೋಡಿದ್ದೆನೇ ಹೊರತು ಅಲ್ಲಿ ವ್ಯವಹಾರಗಳು ಹೇಗೆ ನಡೆಯುತ್ತವೆಂಬುದರ ಬಗ್ಗೆ ತೃಣದಷ್ಟೂ ತಿಳುವಳಿಕೆ ಇರಲಿಲ್ಲ ನನಗೆ. ಅಂಗಡಿಗೆ ಹೋದವನೇ ಮೆಡಲ್ ಅನ್ನು ತೆಗೆದು ಅವನಿಗೆ ತೋರಿಸಿ ‘ಇದನ್ನು ಗಿರವಿ ಇಟ್ಟುಕೊಂಡು ನನಗೆ ದುಡ್ಡುಕೊಡಿ’ ಎಂದೆ. ನನ್ನ ನಡುಕ.. ಮುಖದ ಮೇಲೆ ಸುರಿಯುತ್ತಿದ್ದ ಬೆವರು ನೋಡಿ ಅನುಮಾನಗೊಂಡ ಆ ಸೇಠ್ ಜೀ ನೂರು ಪ್ರಶ್ನೆ ಕೇಳತೊಡಗಿದ. ನನಗೂ ರೇಗಿಹೋಯಿತು. ‘ನೋಡ್ರೀ ಸೇಠ್ ಜೀ… ಇದು ನಂದೇ ಮೆಡಲು.. ನೋಡಿ. ಮೆಡಲ್ ಮೇಲೆ ನನ್ನ ಹೆಸರೂ ಬರೆದಿದೆ.. ಶ್ರೀನಿವಾಸ ಪ್ರಭು.. ಏನೋ ತುರ್ತಾಗಿ ಹಣ ಬೇಕಾಗಿತ್ತು ಅಂತ ಬಂದಿದೀನಿ.. ನಾನೇನೂ ಕಳ್ಳ ಅಲ್ಲ.. ತಿಳ್ಕೊಳಿ’ ಎಂದು ಬಡಬಡಿಸಿದೆ. ‘ಠೀಕ್ ಹೈ ಠೀಕ್ ಹೈ’ ಎನ್ನುತ್ತಾ ಮೆಡಲ್ ಕೈಗೆತ್ತಿಕೊಂಡ ಅವನು ಅದನ್ನು ಅಲ್ಲೇ ಇದ್ದ ಅವನ ಕಲ್ಲಿನ ಮೇಲೆ ಉಜ್ಜಿದ. ನನಗೋ ನನ್ನ ಹೃದಯವನ್ನೇ ಉಜ್ಜಿದಂತಾಗಿ, ‘ಮೆಲ್ಲಗೆ ಸೇಠ್ ಜೀ.. ಮೆಲ್ಲಗೆ’ ಎಂದುಸುರಿದೆ. ಅವನು ಪರೀಕ್ಷೆ ಮುಗಿಸಿ, ‘ದೇಖೋ ಭಾಯ್, ಇದಕ್ಕೆ 50 ರೂಪಾಯಿ ಕೊಡಬಹುದು ಅಷ್ಟೇ… ತಿಂಗಳಿಗೆ 4 ಪರ್ಸೆಂಟ್ ಬಡ್ಡಿ.. ಒಂದು ತಿಂಗಳ ಬಡ್ಡಿ ಮುರಕೊಂಡು 48 ರೂಪಾಯಿ ಕೊಡ್ತೀನಿ… ಪೂರ್ತಿ ದುಡ್ಡು ಜಮಾ ಮಾಡೋ ತಂಕ ತಿಂಗಳಾ ತಿಂಗಳಾ ಬಡ್ಡಿ ಕೊಡ್ತಿರಬೇಕು… ಆರು ತಿಂಗಳು ವಾಯಿದೆ’ ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿದ. ಸರಿ ಎಂದು ತಲೆಯಾಡಿಸಿ ಅವನು ಕೊಟ್ಟ ರಶೀದಿ ಹಾಗೂ 48 ರೂಪಾಯಿಗಳನ್ನು ಜೇಬಿಗಿರಿಸಿಕೊಂಡು ಮುಖದ ಬೆವರೊರೆಸಿಕೊಳ್ಳುತ್ತಾ ಹೊರ ನಡೆದೆ. ಅಲ್ಲಿಂದ ಸೀದಾ ರಾಮಯ್ಯನ ಕೋಣೆಯ ಬಳಿ ಹೋಗಿ ನೋಡಿದರೆ ಬೀಗ ಜಡಿದಿತ್ತು.

ಒಂದು ಕ್ಷಣ ಚಿಂತಿಸಿ, 25 ರೂಪಾಯಿಗಳನ್ನು ಒಂದು ಕವರ್ ಗೆ ಹಾಕಿ ಒಂದು ಚೀಟಿ ಬರೆದು ಅದರ ಜತೆಗಿಟ್ಟು ಬಾಗಿಲ ಸಂದಿಯಿಂದ ಕವರ್ ಅನ್ನು ಸಾಧ್ಯವಾದಷ್ಟೂ ಒಳತಳ್ಳಿ ಸಮಾಧಾನದ ನಿಟ್ಟುಸಿರು ಬಿಟ್ಟು ಉಮಾ ಥಿಯೇಟರ್ ನತ್ತ ಧಾವಿಸಿದೆ.. ಮ್ಯಾಟಿನಿ ಶೋ ನೋಡಲು. ಜೇಬಿನಲ್ಲಿ 23 ರೂಪಾಯಿ ಉಳಿದಿತ್ತಲ್ಲಾ! ನನ್ನ ಖರ್ಚಿಗೆಂದು ಉಳಿಸಿಕೊಂಡದ್ದು! ಆದರೂ ಒಂದು ಚಿಂತೆ ಕಾಡುತ್ತಿತ್ತು: ದುಡ್ಡು ರಾಮಯ್ಯನ ಕೈಸೇರಿತೋ ಇಲ್ಲವೋ… ಅವನು ಕವರ್ ಅನ್ನು ಗಮನಿಸಿರುವನೋ ಇಲ್ಲವೋ… ಮರುದಿನ ಸೆಂಟ್ರಲ್ ಕಾಲೇಜ್ ನಲ್ಲಿ ಮತ್ತೊಬ್ಬ ಗೆಳೆಯ ಸಿಕ್ಕು ರಾಮಯ್ಯ ಅವನಿಗೆ ಸಿಕ್ಕಾಗ ಹೇಳಿದ ಮಾತನ್ನು ನನಗೆ ಹೇಳಿದ: ‘ನೋಡ್ರಯ್ಯಾ.. ಎಂಥಾ ಸ್ನೇಹಿತರಿದಾರೆ ನಂಗೆ… ಕಷ್ಟ ಅಂತಿದ್ದ ಹಾಗೇ ದುಡ್ಡು ತಂದು ನಾನಿಲ್ಲದಿದ್ದರೂ ಬಾಗಿಲ ಸಂದೀಲಿ ತುರುಕಿ ಹೋಗ್ತಾರೆ!’ ಅದನ್ನು ಕೇಳಿ ಸಮಾಧಾನವೂ ಆಯಿತು… ಒಂದು ಚೂರು ಎದೆಯೂ ಉಬ್ಬಿತು. ಆದರೆ ಈ ಖುಷಿಯೂ ಹೆಚ್ಚು ಸಮಯ ಉಳಿಯಲಿಲ್ಲ! ಮನೆಯಲ್ಲಿ ಅಮ್ಮ ಏನೋ ಕಾರಣವಾಗಿ ಬೀರು ತೆಗೆದು ನೋಡಿದವರು ಒಂದು ಮೆಡಲ್ ಕಾಣೆಯಾಗಿರುವುದನ್ನು ಗಮನಿಸಿಯೇ ಬಿಟ್ಟಿದ್ದಾರೆ! ಛೆ! ಬೀರು—ಅಲ್ಮೇರಾ ತಡಕಲು ಈ ಸಮಯವೇ ಬೇಕಿತ್ತೇ ಅಮ್ಮನಿಗೆ! ‘ಅಯ್ಯೋ… ಪ್ರಭೂದು ಒಂದು ಗೋಲ್ಡ್ ಮೆಡಲ್ ಕಾಣ್ತಾ ಇಲ್ಲ… ಇಲ್ಲೇ ಬೀರು ಲಾಕರ್ ನಲ್ಲೇ ಇಟ್ಟಿದ್ದೆ’ ಎಂದು ಅಮ್ಮ ದುಃಖಿಸತೊಡಗಿದರು. ನನಗೋ ಜಂಘಾಬಲವೇ ಉಡುಗಿಹೋದಂತಾಯಿತು!

ಈಗ ಏನಾದರೂ ಹೇಳಿ ಸಮಸ್ಯೆಯನ್ನು ತಾತ್ಕಾಲಿಕವಾಗಿಯಾದರೂ ಬಗೆಹರಿಸಲೇಬೇಕು… ಇಲ್ಲದಿದ್ದರೆ ಅನಾವಶ್ಯಕವಾಗಿ ಕೆಲಸದವಳ ಮೇಲೆ ಅನುಮಾನದ ಕಣ್ಣು ಬೀಳುತ್ತದೆ… ಎಂದು ಯೋಚಿಸಿ ತಕ್ಷಣಕ್ಕೆ ಹೊಳೆದ ಸುಳ್ಳೊಂದನ್ನು ಒಗೆದೆ: ‘ನಾನೇ ತೊಗೊಂಡು ಹೋಗಿದೀನಮ್ಮಾ.. ಮಾಧು ಅಮ್ಮ, ‘ನಿನಗೆ ಬಂದಿರೋ ಗೋಲ್ಡ್ ಮೆಡಲ್ ಒಂದ್ಸಲ ತಂದು ತೋರಿಸೋ’ ಅಂತ ಕೇಳ್ತಿದ್ರು… ಅದಕ್ಕೇ ಅವರಿಗೆ ತೋರಿಸೋಕೆ ತೊಗೊಂಡು ಹೋಗಿದ್ದೆ.. ಅವರ ಮನೇಲೇ ಇದೆ… ಆ ಕಡೆ ಹೋದಾಗ ತರ್ತೀನಿ’ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿಬಿಟ್ಟೆ. ‘ಒಂದು ಮಾತು ಹೇಳಿ ತೊಗೊಂಡು ಹೋಗೋದಕ್ಕೇನು ಕಷ್ಟ ನಿಂಗೆ? ಎಷ್ಟು ಗಾಬರಿ ಆಗಿಬಿಟ್ಟಿತ್ತು ನಂಗೆ’ ಎಂದು ಅಮ್ಮ ನಯವಾಗಿ ಗದರಿದರು.

ಆ ಕ್ಷಣಕ್ಕೇನೋ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆ. ಆದರೆ ಮುಂದಿನ ಕಥೆ ಏನು? ತಲೆ ಕೆಟ್ಟುಹೋದಂತಾಗಿ ಮನೆಗೆ ವಿಪರೀತ ತಡವಾಗಿ ಹೋಗತೊಡಗಿದೆ. ಹಿಂಬಾಗಿಲಿನಿಂದ ಮೆಲ್ಲಗೆ ಒಳಗೆ ಹೋಗಿ ಬಾಗಿಲು ಹಾಕಿ ಹೊರಳುವಷ್ಟರಲ್ಲಿ ಅಮ್ಮನ ಪ್ರಶ್ನೆ ರಾಚುತ್ತಿತ್ತು: ‘ಮೆಡಲ್ ತಂದೆಯಾ?’ ‘ಇಲ್ಲಾಮ್ಮಾ.. ಆ ಕಡೆ ಹೋಗೇ ಇಲ್ಲ..’ ಮರುದಿನ ಮತ್ತದೇ ಪ್ರಶ್ನೆ: ‘ಮೆಡಲ್ ತಂದೆಯಾ?’ ಇಲ್ಲಮ್ಮಾ.. ಇವತ್ತು ಮರೆತುಹೋಯಿತು’..

ಮತ್ತೆ ಮರುದಿನ ಅದೇ ಪ್ರಶ್ನೆಗೆ ‘ಇವತ್ತು ಅವರ ಮನೇಲಿ ಯಾರೂ ಇರಲಿಲ್ಲ’… ಹೀಗೆ ದಿನಕ್ಕೊಂದು ಸಬೂಬು ಕೇಳಿ ಕೇಳಿ ಅಮ್ಮನಿಗೂ ರೋಸಿಹೋಯಿತೇನೋ..’ಹೋಗಲಿ ಬಿಡಪ್ಪಾ.. ನಾಳೆ ನಾನೇ ಅವರ ಮನೆ ಕಡೆ ಒಂದು ನಡೆ ಹೋಗಿ ಬಂದುಬಿಡ್ತೀನಿ’ ಎಂದರು ಒಂದು ದಿನ. ಅಯ್ಯಯ್ಯೋ! ಇನ್ನೇನು ಗತಿ? ಅಮ್ಮ ನಿಸ್ಸಂಶಯವಾಗಿ ಹಾಗೆ ಮಾಡುವವರೇ ಅನ್ನುವುದರಲ್ಲಿ ಅನುಮಾನವೇ ಇರಲಿಲ್ಲ ನನಗೆ… ‘ನೀವೇನೂ ಸುತ್ತಬೇಡಿ.. ನಾಳೆ ಗ್ಯಾರಂಟಿ ತರ್ತೀನಿ’ ಎಂದು ಆ ಹೊತ್ತಿಗೆ ಅವರನ್ನು ಸುಮ್ಮನಾಗಿಸಿದೆ.

ಮರುದಿನ ಸಂಜೆ ನಾಗೇಶನ ಮನೆಯಲ್ಲಿ ಕುಳಿತಿರುವಾಗಲೇ ನಮ್ಮ ತಂಡದ ಕ್ಯಾಪ್ಟನ್ ಮಾಧು ಬಂದ. ನನ್ನ ಮುಖ ನೋಡಿಯೇ ‘ಏನೋ ಸರಿಯಿಲ್ಲ’ ಎಂಬ ಅನುಮಾನ ಬಂದು ನೇರವಾಗಿಯೇ ಕೇಳಿದ: ‘ಯಾಕೋ ಪ್ರಜೆ, ಇಷ್ಟು dull ಆಗಿದೀಯಾ? ಏನು problemಉ?’. ಆಪ್ತಮಿತ್ರರ ಬಳಿ ಏನೂ ಮುಚ್ಚುಮರೆ? ಆಗಿದ್ದೆಲ್ಲವನ್ನೂ ಸಾದ್ಯಂತವಾಗಿ ವಿವರಿಸಿದೆ. ಎಲ್ಲವನ್ನೂ ಕೇಳಿದ ಮಾಧು ಒಂದು ಕ್ಷಣ ಸುಮ್ಮನೆ ಕುಳಿತಿದ್ದ. ನಂತರ ತಟಕ್ಕನೆ ಮೇಲೆದ್ದವನೇ ಒಂದೂ ಮಾತಾಡದೆ ಸೈಕಲ್ ಹತ್ತಿಕೊಂಡು ಹೊರಟುಹೋದ. ನನಗೆ ತುಂಬಾ ಅಳು ಬಂದಂತಾಗಿ ನಾಗೇಶನಿಗೆ, ‘ನಾನಿವತ್ತು ಮನೇಗೆ ಹೋಗೊಲ್ಲ ಕಣೋ… ಇಲ್ಲೇ ಇದ್ದುಬಿಡ್ತೀನಿ… ನಮ್ಮಮ್ಮನಿಗೆ ಹೇಳೋ ಅಂಥ ಸುಳ್ಳು ಯಾವುದೂ ಉಳಿದಿಲ್ಲ ಇನ್ನು’ ಎಂದು ತೊದಲಿದೆ. ಆ ವೇಳೆಗೆ ಮರಳಿ ಬಂದ ಮಾಧು ಹೊರಗಿನಿಂದಲೇ ನನ್ನನ್ನು ಕರೆದ. ಹೊರಬಂದ ನನ್ನನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹೊರಟ. ‘ಎಲ್ಲಿಗೋ’ ಎಂದೆ. ‘ಗಿರವಿ ಅಂಗಡಿಯವನು ಕೊಟ್ಟಿದ್ದ ರಶೀದಿ ಇಟ್ಟುಕೊಂಡಿದೀಯಾ?’ ‘ಇದೆ… ಮನೇಲಿ ಯಾರ ಕಣ್ಣಿಗಾದ್ರೂ ಬಿದ್ದುಬಿಟ್ರೆ ಕಷ್ಟ ಅಂತ ಜೇಬಲ್ಲೇ ಇಟ್ಟುಕೊಂಡು ಕಾಪಾಡ್ತಿದೀನಿ’. ಮತ್ತೇನೂ ಮಾತಾಡಲಿಲ್ಲ ಅವನು. ಸೀದಾ ಹೋಗಿ ಅಂಗಡಿಯ ಮುಂದೆ ಸೈಕಲ್ ನಿಲ್ಲಿಸಿ ನನ್ನ ಕೈಯಿಂದ ರಶೀದಿ ತೆಗೆದುಕೊಂಡು ಅಂಗಡಿಯ ಒಳಹೋದ. ನಾನೂ ತೆಪ್ಪಗೆ ಕುರಿಯಂತೆ ಹಿಂಬಾಲಿಸಿದೆ.

ರಶೀದಿಯನ್ನೂ 50 ರೂಪಾಯಿಗಳನ್ನೂ ಅಂಗಡಿಯವನಿಗೆ ಕೊಟ್ಟು ಮೆಡಲನ್ನು ವಾಪಸ್ ಪಡೆದುಕೊಂಡ. ‘ಇನ್ನೊಂದು ಸಲ ಇವನು ಮೆಡಲ್ ತಂದರೆ ಗಿರವಿ ಇಟ್ಟುಕೋಬೇಡಿ’ ಎಂದು ಸೇಠ್ ಜೀಗೆ ಹೇಳಿ ನನ್ನತ್ತ ತಿರುಗಿ, ‘ಹುಷಾರಾಗಿ ತೊಗೊಂಡು ಹೋಗಿ ಅಮ್ಮನ ಕೈಗೆ ಕೊಟ್ಟುಬಿಡು ಆ ಮೆಡಲ್ ನ್ನ.. ಇನ್ನು ಯಾವತ್ತೂ ಅದನ್ನ ಹೀಗೆಲ್ಲಾ ಹೊರಗೆ ತರಬೇಡ… ನಿನಗೆ ಯೂನಿವರ್ಸಿಟಿಯೋರು rank ಬಂದಿರೋದಕ್ಕೆ ಕೊಟ್ಟಿರೋ ಮರ್ಯಾದೆ ಅದು.. ಹೀಗೆಲ್ಲಾ ಅದನ್ನ ಮಾರಿಕೋಬಾರದು.. ನನಗೆ ಸ್ವಲ್ಪ ಬೇರೆ ಕೆಲಸ ಇದೆ.. ಬರ್ತೀನಿ.. ಆಮೇಲೆ ಸಿಕ್ತೀನಿ’ ಎಂದವನೇ ಸೈಕಲ್ ಏರಿ ಕ್ಷಣಾರ್ಧದಲ್ಲಿ ಮಾಯವಾಗಿಬಿಟ್ಟ. ಒಂದಷ್ಟು ಹೊತ್ತು ಸ್ತಂಭಿತನಾಗಿ ಅಲ್ಲೇ ನಿಂತಿದ್ದ ನಾನು ನಂತರ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕತೊಡಗಿದೆ. ಹಿಂದಿನ ದಿನವಷ್ಟೇ ಎಂಟನೆಯ ಬಾರಿ ನೋಡಿದ್ದ ‘ಶೋಲೆ’ ಚಿತ್ರದ ಹಾಡು ಮನಸ್ಸಿನಲ್ಲಿ ರಿಂಗಣಿಸುತ್ತಿತ್ತು: ‘ಏ ದೋಸತೀ.. ಹಮ್ ನಹೀ ತೋಡೇಂಗೇ.. ತೋಡೇಂಗೇ ದಮ್ ಮಗರ್, ತೇರಾ ಸಾಥ್ ನ ಛೋಡೇಂಗೇ…’

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: