ಪುರುಷೋತ್ತಮ ಬಿಳಿಮಲೆ ಮೆಚ್ಚಿದ ‘ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ’

ಮೈಸೂರು ವಿವಿ ಪ್ರಸಾರಾಂಗದ ಬಗ್ಗೆ ಒಳ್ಳೆಯ ಆಕರ ಪುಸ್ತಕ

ಪುರುಷೋತ್ತಮ ಬಿಳಿಮಲೆ

ಡಾ. ಆರ್ ಲೋಕೇಶರು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಬಗ್ಗೆ ಬರೆದ ಈ ಮಾಹಿತಿ ಪೂರ್ಣ ಕೃತಿಯು ಅನೇಕ ಕಾರಣಗಳಿಂದ ಬಹಳ ಮುಖ್ಯವಾಗಿದೆ. ಇವತ್ತು ಪ್ರಸಾರಾಂಗಗಳೆಲ್ಲ ತಮ್ಮ ಮಹತ್ವವನ್ನು ಕಳಕೊಂಡು ಜಡವಾಗಿರುವ ಹೊತ್ತು, ಈ ಪುಸ್ತಕವು ಜ್ಞಾನಾಭಿವೃದ್ಧಿಯಲ್ಲಿ ಪ್ರಸಾರಾಂಗವೊಂದು ನಿರ್ವಹಿಸಿದ ಪಾತ್ರವನ್ನು ಬಹಳ ಜತನದಿಂದ ಕಟ್ಟಿಕೊಡುತ್ತದೆ.

ಕುವೆಂಪು ಕನಸಿನ ಮೈಸೂರು ವಿವಿಯ ಪ್ರಸಾರಾಂಗವು ಪುಸ್ತಕ ಪ್ರಕಟಣೆ, ವಿಶೇಷ ಉಪನ್ಯಾಸಗಳ ಏರ್ಪಾಡು, ಸಂಶೋಧನಾ ಪತ್ರಿಕೆಯ ಪ್ರಕಟಣೆಯೇ ಮೊದಲಾದ ಹತ್ತು ಹಲವು ಚಟುವಟಿಕೆಗಳ ಮೂಲಕ ಒಂದು ಕಾಲಕ್ಕೆ ನಮ್ಮೆಲ್ಲರ ಹೆಮ್ಮೆಗೆ ಕಾರಣವಾಗಿತ್ತು. ಅದು ಅನೇಕ ಸಂಶೋಧಕರನ್ನು ಬೆಳೆಸಿತ್ತು. ತನ್ನ ನಿರಂತರ ಮತ್ತು ವೈವಿಧ್ಯಮಯ ಪ್ರಕಟಣೆಗಳ ಮೂಲಕ ಸಂಶೋಧನೆಯ ಗುಣಮಟ್ಟವನ್ನು ಅದು ಗಮನಾರ್ಹವಾಗಿ ಹೆಚ್ಚಿಸಿತ್ತು. ಕನ್ನಡ ಭಾಷೆಯು ಜಡವಾಗದಂತೆ ನೋಡಿಕೊಂಡಿತ್ತು.

ಪ್ರಸಾರಾಂಗದ ಜೊತೆ ಗುರುತಿಸಿಕೊಂಡ ಕನ್ನಡ ಸಂಶೋಧನೆಯ ಎರಡನೇ ಮತ್ತು ಮೂರನೇ ಹಂತದ ವಿದ್ವಾಂಸರು ಸಂಶೋಧನಾ ವಿಧಾನಗಳನ್ನು ಆಗಾಗ ಪರಿಷ್ಕರಿಸಿಕೊಳ್ಳುತ್ತಾ ಅವುಗಳನ್ನು ಸದಾ ಹೊಸದುಗೊಳಿಸುತ್ತಿದ್ದರು. ಕನ್ನಡ ಪ್ರಕಟಣೆಗಳ ಗುಣಮಟ್ಟ ಕುಸಿಯದ ಎಚ್ಚರವನ್ನು ತೋರಿಸುತ್ತಾ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತಾಗಿ ಗಂಭೀರವಾದ ಚರ್ಚೆಗಳನ್ನು ನಡೆಸಿ ಇಡೀ ಕರ್ನಾಟಕಕ್ಕೆ ಒಂದು ಸಂದೇಶ ನೀಡುವಲ್ಲಿ ಮೈಸೂರು ವಿವಿ ಪ್ರಸಾರಾಂಗವು ಯಶಸ್ವಿಯಾಗಿತ್ತು. ಇತಿಹಾಸ, ಶಾಸನ, ಹಸ್ತಪ್ರತಿ, ಗ್ರಂಥ ಸಂಪಾದನೆ, ಜಾನಪದ, ಛಂದಸ್ಸು, ಸ್ಥಳನಾಮ, ವಿಜ್ಞಾನ, ಮಾನವ ಶಾಸ್ತ್ರ ಮೊದಲಾದ ವಿಷಯಗಳ ಬಗ್ಗೆ ನಮ್ಮ ಅರಿವು ಹೆಚ್ಚಿದ್ದೇ ಪ್ರಸಾರಾಂಗದ ಪ್ರಕಟಣೆಗಳ ಮೂಲಕ.

ಈ ಪುಸ್ತಕ ರಚನೆಗೆ ಡಾ. ಲೋಕೇಶರು ಅಪಾರ ಶ್ರಮವಹಿಸಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ, ಅದಕ್ಕಾಗಿ ಸಾಕಷ್ಟು ಧೂಳು ತಿಂದಿದ್ದಾರೆ. ಸಂಗ್ರಹಿಸಿದ ಮಾಹಿತಿಗಳನ್ನು ಸಮರ್ಪಕವಾಗಿ ವರ್ಗೀಕರಿಸಿ ಮಂಡಿಸಿದ್ದಾರೆ. ಅವುಗಳ ಮಹತ್ವವನ್ನು ಅಲ್ಲಲ್ಲಿ ನಮ್ಮ ಗಮನಕ್ಕೆ ತಂದಿದ್ದಾರೆ. ಮೊದಲನೆಯ ಅಧ್ಯಾಯದಲ್ಲಿ ಪ್ರಸಾರಾಂಗದ ಉಗಮ ಮತ್ತು ವಿಕಾಸದ ಬಗ್ಗೆ ಅತ್ಯಂತ ಅಮೂಲ್ಯವಾದ ವಿವರಗಳನ್ನು ಕಲೆ ಹಾಕಿದ್ದಾರೆ. ಎರಡನೆಯ ಅಧ್ಯಾಯದಲ್ಲಿ ಪ್ರಸರಾಂಗವು ಒಂದು ಸಾಂಸ್ಥಿಕ ರೂಪವನ್ನು ಪಡೆದ ವಿವಿಧ ಹಂತಗಳನ್ನು ಪರಿಚಯಿಸಿದ್ದಾರೆ.

ಮೂರನೆಯ ಅಧ್ಯಾಯವು ಬಹಳ ಮುಖ್ಯವಾಗಿದ್ದು ಇದರಲ್ಲಿ ಪ್ರಸಾರಾಂಗವು ಪ್ರಕಟಿಸಿದ ಸುಮಾರು ೨೫೦೦ ಪುಸ್ತಕಗಳ ಸ್ವರೂಪ ಮತ್ತು ವಸ್ತು ವೈವಿಧ್ಯವನ್ನು ವಿಶ್ಲೇಷಿಸಿದ್ದಾರೆ. ನಾಲ್ಕನೇ ಅಧ್ಯಾಯದಲ್ಲಿ ನಿಯತಕಾಲಿಕೆಗಳ ಬಗ್ಗೆ ಅದರಲ್ಲೂ ಪ್ರಮುಖವಾಗಿ ನಮ್ಮ ಮೆಚ್ಚಿನ ಪ್ರಬುದ್ಧ ಕರ್ಣಾಟಕದ ಬಗ್ಗೆ ಅಪೂರ್ವ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಐದನೆಯ ಅಧ್ಯಾಯವು ಸ್ವಲ್ಪ ಹೊಸಬಗೆಯದಾಗಿದ್ದು ಅದರಲ್ಲಿ ಪ್ರಸಾರಾಂಗಕ್ಕೆ ಬೇರೆ ಬೇರೆ ಕಾಲಘಟ್ಟದಲ್ಲಿ ಭೇಟಿ ನೀಡಿದ ದೇಶ–ವಿದೇಶಗಳ ಗಣ್ಯರು, ವಿದ್ವಾಂಸರು, ರಾಷ್ಟ್ರನಾಯಕರು, ಕವಿಗಳು, ಲೇಖಕರು ಮತ್ತಿತರರ ಕುರಿತು ವಿವರಗಳಿವೆ. ಈ ಮಾಹಿತಿಗಳಿಗೆ ನಿಜಕ್ಕೂ ಐತಿಹಾಸಿಕ ಮಹತ್ವವಿದೆ.

ಕನ್ನಡಕ್ಕೆ ನಿಜವಾಗಲೂ ಇಂಥದ್ದೊಂದು ಪುಸ್ತಕದ ಅಗತ್ಯವಿತ್ತು. ಪ್ರಸಾರಾಂಗ ಎಂದರೆ ಬರೀ ಪುಸ್ತಕ ಪ್ರಕಟಿಸುವ ಸಂಸ್ಥೆಯಲ್ಲ, ಅದು ನಾಡು-ನುಡಿಯ ಬೆಳೆವಣಿಗೆಯ ಪ್ರೇರಕ ಶಕ್ತಿ. ಈ ಅಂಶವನ್ನು ಲೇಖಕರು ನಿರ್ವಿವಾದವಾಗಿ ಸಾಬೀತು ಪಡಿಸಿದ್ದಾರೆ. ಪುಸ್ತಕದ ಪ್ರಕಟಣೆಯೂ ಆಕರ್ಷಕವಾಗಿದೆ.

‍ಲೇಖಕರು Admin

November 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: