ಜಿಕೆಜಿ ಕಾರ್ನಾಡರನ್ನು ಸಂದರ್ಶಿಸಿದರು…

ಸಾಯಿಲಕ್ಷ್ಮಿ ಐಯ್ಯರ್

ನಾನು ಅದಾಗ ತಾನೆ ಹಾಸನ ಆಕಾಶವಾಣಿ‌ ಕೇಂದ್ರದಿಂದ ಮೂರು ವರುಷಗಳ ಸೇವಾವಧಿಯ‌ ನಂತರ ಬೆಂಗಳೂರು ನಿಲಯಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದೆ. ನನಗೆ ಇಂಗ್ಲೀಷ್ ಭಾಷಣಗಳ ಕಾರ್ಯಕ್ರಮ ನಿರ್ಮಿಸಿ ಅರ್ಪಿಸುವ ವಿಭಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು.

ರಿಪೋರ್ಟ್ ಆಗಿ ಎರಡು ದಿನವೂ ಕಳೆದಿರಲಿಲ್ಲ. ನಮ್ಮ‌ ಮೇಲಾಧಿಕಾರಿ ನನ್ನನ್ನು ಕರೆದು ದೆಹಲಿಯ ಆಕಾಶವಾಣಿ ನಿರ್ದೇಶನಾಲಯದಿಂದ ಬಂದಿದ್ದ ಪತ್ರದ ಪ್ರತಿ ಕೈಗಿತ್ತರು. ಅದರ ಡೇಟ್ ಆರು ತಿಂಗಳ ಹಿಂದಿನದು. ಅಲ್ಲಿಯವರೆಗೂ ಅದನ್ನು ಕಾರ್ಯಗತಗೊಳಿಸದ ಅವರು ನನ್ನ ಬರುವಿಗಾಗಿ ಕಾದಿದ್ದರೆನಿಸಿತು.

ಆ ಕಾಗದದಲ್ಲಿ ದೆಹಲಿಯ ಆಕಾಶವಾಣಿಯ ದ್ವನಿಭಂಡಾರದ ರೇಡಿಯೋ ಆಟೋಬಯಾಗ್ರಫಿಗಾಗಿ ಕಲಾವಿದ ಗಿರೀಶ ಕಾರ್ನಾಡ್ ಹಾಗು ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿರಂಗನ್ ಅವರ ಸಂದರ್ಶನದ ಧ್ವನಿಮುದ್ರಣವನ್ನು ಅತಿ ಶೀಘ್ರದಲ್ಲೆ ದೆಹಲಿಗೆ ಕಳಿಸಿಕೊಡಬೇಕೆಂಬ ಆದೇಶವಿತ್ತು.

ರೇಡಿಯೋ ಆಟೋಬಯಾಗ್ರಫಿ ಮೂರು ಗಂಟೆಗಳ ಸಮಯದ ರೆಕಾರ್ಡಿಂಗ್. ಇದಕ್ಕಾಗಿ ಎರಡು ದಿನಗಳನ್ನು ನಿಗದಿಪಡಿಸಬೇಕು. ಮುಕ್ಕಾಲು ಗಂಟೆ ಕಾಲಾವಕಾಶದ ಎರಡು ಕಂತು ಒಂದು ದಿನಕ್ಕೆ. ಇದರ ಭಾಗವಾಗಿ ಅತಿಥಿ ಮಹೋದಯರು ಮಾತಾಡಿ ದಣಿದಿರುವರೆಂದು ಆಯಾಸ ಪರಿಹಾರಕ್ಕಾಗಿ ಚಹಾ ವಿರಾಮವು ಸೇರ್ಪಡೆಯಾಗಿರುವುದು.

ವಿವಿಧ ರಂಗದ ಖ್ಯಾತನಾಮರೊಂದಿಗಿನ ವೃತ್ತಿ ಹಾಗು ವೈಯುಕ್ತಿಕ ಜೀವನಾನುಭವದ ದನಿಸಂಪತ್ತು ಇದಾಗಿದ್ದು ಆಕರ್ಷಕ ಸಂಭಾವನೆಯು ಅವರಿಗೆ ಸಲ್ಲಿಸಲಾಗುವುದು. ಬದುಕಿನ‌ ಪ್ರಮುಖ ಕಾಲಘಟ್ಟದ ತಿರುವುಗಳೇ ಈ ಸ್ವಾರಸ್ಯಕರ ಮಾತುಕತೆಯ ಮೂಲದ್ರವ್ಯ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು ತಮ್ಮನ್ನು ಸಂದರ್ಶಿಸಲು ನಿಕಟವರ್ತಿಗಳನ್ನು ಸೂಚಿಸುವುದು ಅಪೇಕ್ಷಣೀಯ. ಇದು ಆಕಾಶವಾಣಿಯು ನೀಡುವ ಬಹು ದೊಡ್ಡ ಗೌರವ. ಹಾಗೆಯೇ ಇದರ ಪ್ರಸಾರ ಭಾಗವಹಿಸುವ ಮಾನ್ಯರ ಜೀವಿತಾವಧಿಯ ನಂತರ. ಇದು ನಮ್ಮ ARCHIVES ಧ್ವನಿಮುದ್ರಣ ನಿಯಮ ಸಹ. ಆದರೆ ಸೌಜನ್ಯಕ್ಕಾಗಿ ಅವರಿಗೆ ತಿಳಿಯಪಡಿಸುವುದಿಲ್ಲ.

ಕಾರ್ನಾಡರನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ಸಂದರ್ಶಕರು ಯಾರಾಗಬಹುದು? ಎಂದಾಗ ಅವರು ಪ್ರೊ ಜಿ.ಕೆ.ಗೋವಿಂದ ರಾವ್ ಅವರ ಹೆಸರನ್ನು ಸೂಚಿಸಿದರು. ಈ ಇಬ್ಬರು ನಾವಿದ್ದ ಜಯನಗರದ ನಿವಾಸಿಗಳು. ಆಗೀಗ ಇವರ ದರ್ಶನವೂ ಆಗುತ್ತಿತ್ತು. ಗೋವಿಂದರಾಯರಿಗೆ ಕರೆಮಾಡುತ್ತಿದ್ದಂತೆ ‘ಮೇಡಂ ದಿನ ಸಂಜೆ ಲಕ್ಷ್ಮಣ ರಾವ್ ಪಾರ್ಕ್ ನಲ್ಲಿ ವಾಕ್ ಮಾಡ್ತೇನೆ. ತಮ್ಮ‌ಮನೆಯು ಅಲ್ಲೇ ಅಂದ ಮೇಲೆ ತಾವು ಸಂಜೆ ಅಲ್ಲಿಗೆ ಬಂದರೆ ಸಂದರ್ಶನದ ಸ್ವರೂಪದ ಬಗ್ಗೆ ವಿವರವಾಗಿ ಮಾತಾಡಬಹುದು’ ಎಂದರು. ಅವರು ವಾಕ್ ಮಾಡ್ತಾ ಮಾತಾಡಬೇಕಾದದ್ದು ಗಿರೀಶ ಕಾರ್ನಾಡ್ ರೊಂದಿಗೆ ಎಂದು ಸೂಕ್ಷ್ಮವಾಗಿ ಹೇಳಿದೆ. ನನಗೋ ಆಗ ಪುತ್ರಿಯರು ಚಿಕ್ಕವರು. ನಾನು ಆಫೀಸ್ ನಿಂದ ಮನೆಗೆ ಬರುತ್ತಿದ್ದಂತೆ ಗೃಹಕೃತ್ಯವೇ ನನ್ನ ಮೊದಲ ಆದ್ಯತೆ. ಆದರೆ ಅವರೆದುರು ಬಿಡಿಸಿ ಹೇಳಲಾಗುವುದೇ ಇವೆಲ್ಲ.

ಸಾಮಾನ್ಯವಾಗಿ ಇಂತಹ VIP Recording ಗೆ ನಾವು ಶನಿವಾರ, ಭಾನುವಾರಗಳೇ ಪ್ರಶಸ್ತವೆಂದು ಪರಿಗಣಿಸುತ್ತೇವೆ. ಆ ದಿನಗಳು ಸ್ಟುಡಿಯೋ ಹಿಡಿಯಲು ನಮ್ಮನಮ್ಮಲ್ಲಿ ಪೈಪೋಟಿಯಾಗಲಿ, ಒತ್ತಡವಾಗಲಿ ಇರುವುದಿಲ್ಲ. ಒಬ್ಬ ಸಹಾಯಕನನ್ನು ಆಗಾಗ ಕಾಫಿ, ಟೀ ತಂದು ವಿತರಿಸಲು ಡ್ಯೂಟಿ ಮೇಲೆ ಹಾಕಿಸಿದರಾಯಿತು. ನಮ್ಮ ಲಿಖಿತ ಕೋರಿಕೆಯ ಮೇರೆಗೆ ತಾಂತ್ರಿಕ ವಿಭಾಗದವರು ಸ್ಟುಡಿಯೋ ಚೆಕ್ ಮಾಡಿ ಮೈಕ್ ಸಿದ್ದವಾಗಿಟ್ಟಿರುತ್ತಾರೆ. ಟ್ರಾಫಿಕ್ ಹೆಚ್ಚಿಲ್ಲದ ಕಾರಣ ನಮ್ಮ ಡ್ರೈವರ್ ಗಳಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅತಿಥಿ ಕಲಾವಿದರನ್ನು ಕರೆತರಲು ಮನೆಗೆ ಮುಟ್ಟಿಸಲು ಸುಲಭ.

ಗೊತ್ತಾದ ಶನಿವಾರ ಬಂದ ಅತಿಥಿ ಮಹಾನುಭಾವರನ್ನು ಸ್ಟುಡಿಯೋ ಬಾಗಿಲಲ್ಲೇ ಬರಮಾಡಿಕೊಂಡೆ. ಕಾರ್ನಾಡ್ ಹಾಗು ಪ್ರೊ ಜಿ.ಕೆ ಪೂರ್ವಭಾವಿಯಾಗಿ ತಯಾರಾಗೇ ಬಂದಿದ್ದರು. ಕಾರ್ನಾಡರ ಮನೆಯ ಅಂದಿನ ಬೆಳಕು ಕಾಣದ ಬಾಲ್ಯದಿಂದ ಆರಂಭವಾದ ಸಂದರ್ಶನ ಅವರ ತಂದೆತಾಯಿಯತ್ತ ಹೊರಳಿತು. ಹಾಗೆಯೇ ಅವರ‌ ಒಡಹುಟ್ಟಿದವರ ಬಾಂಧವ್ಯದತ್ತ ತಿರುಗಿತು. ಮುಂದೆ ಅವರ ಓದು, ಧಾರವಾಡದ ಜಿ.ಬಿ.ಜೋಶಿಯವರ ಸಾಹಿತ್ಯದ ಅಟ್ಟ, ಕೂಟ, ಬರಹಗಾರನಾಗಿ ಮನೋಹರ ಗ್ರಂಥಮಾಲೆಯ ನಂಟು, ರಂಗಭೂಮಿಯ ಗೀಳು, ಸಿನಿಮಾದ ಆಕರ್ಷಣೆ, ಅನುಭವ, ಲಂಡನ್ ಜೀವನಕ್ರಮ ಇವೆಲ್ಲವನ್ನು ಸುತ್ತಿ ಮರಳಿತು.

ನಡುವೆ Tea Break. ಕಾರ್ನಾಡ್ ಹಾಗು ಜಿ.ಕೆ. ಆತ್ಮೀಯವಾಗಿ ಮಾತನಾಡುತ್ತ VIP Lounge ಗೆ ಬಂದು ಆಸೀನರಾದರು. ನಮ್ಮ ಸಹಾಯಕ ಫ್ಲಾಸ್ಕ್ ನಲ್ಲಿ ಟೀ ತಂದಿಟ್ಟು ಕಣ್ಮರೆಯಾಗಿದ್ದ. ನಾನೇ ಇಬ್ಬರಿಗೂ ಚಹಾ ನೀಡಿದೆ. ಕಾರ್ನಾಡ್ ರಿಗೆ ಪೀಕಲಾಟವಾಗಿದ್ದು ಖಾಲಿ ಕಪ್ ಯಾರಿಗೆ ಕೊಡುವುದೆಂದು. ಅವರು ಅತ್ತ ಇತ್ತ ಯಾರಾದರೂ ಬಂದಾರೆಂದು ಗಮನಿಸತೊಡಗಿದರು. ನಾನೇ ಕೈನೀಡಿ ಪಡೆವಾಗ ಅವರೆಂದರು.

‘ಏನು‌ ಮೇಡಂ, ನೀವು ತೆಗೋತಿದೀರಲ್ಲ. ನಿಮ್ಮ ಸಹಾಯಕ ಎಲ್ಲಿ?’
ಏನೆನ್ನಲಿ? ಅವ ಹೀಗೆ ಕಾಣದಂತೆ ಮಾಯವಾಗುವುದು ಮಾಮೂಲು ಎನ್ನಲೇ? ಕೂಡಲೆ ಹೇಳಿದೆ.
‘ನೀವು ನಮ್ಮನೆಗೆ ಬಂದಾಗ ಕಾಫಿ‌ ಕೊಟ್ಟ ಹಾಗೆ
ಇದು ನಮಗೆ ಇನ್ನೊಂದು‌ ಮನೆಯೇ ಅಲ್ವಾ?’
ನನ್ನ ಉತ್ತರಕ್ಕೆ ಕಾರ್ನಾಡ್ ರು ಮತ್ತು ಜಿ.ಕೆ ಅರ್ಥಗರ್ಭಿತ ಮಿಂಚಿನ‌ ನಗೆ‌ ವಿನಿಮಯ ಮಾಡಿಕೊಂಡರು.

ಜಿ.ಕೆ ಸಂದರ್ಶನದ ಉದ್ದಕ್ಕೂ ಗಿರೀಶ ಎಂದೇ ಸಂಭೋದಿಸುತ್ತಿದ್ದರು. ಅವರ ನಡುವಿನ ಸ್ನೇಹ, ಸಲಿಗೆ ಅಂತಹ ಆಪ್ಯಾಯಮಾನವಾಗಿತ್ತು.

ಗಿರೀಶ ಕಾರ್ನಾಡರಿಗೆ ಅಗಾಧ ಓದುವ ಹವ್ಯಾಸ ಹಾಗೆ ಮಹಾನ್ ನಡಿಗೆಪ್ರಿಯರು. ಅವರು ಅಂದು ವಿರಾಮದಲ್ಲಿ ಹೇಳುತ್ತಿದ್ದರು. ‘ಜಿ.ಕೆ, ನಾನು ಪಾರ್ಟಿ ಗೀರ್ಟಿ ಅಂತ ಹಿಂದಿನದಿನ ಹೋಗಿದ್ದರೆ ಮಾರನೆ ದಿನ ಹತ್ತು ಹದಿನೈದು ಮೈಲಿ ನಡೆದುಬಿಡ್ತೀನಿ’ ನನ್ನೊಡನೆ ಕಾರ್ನಾಡರು ಅಡಿದ ಮಾತಲ್ಲಿ ಪ್ರಾಮಾಣಿಕತೆ, ಗುಣಗ್ರಾಹಿತ್ವ ಎದ್ದುಕಾಣುತ್ತಿತ್ತು.

‘ನಾನೇನು ಅಂತಹ‌ ಒಳ್ಳೆಯ ನಟ ಅಲ್ಲ. ಸಿನಿಮಾಗಳಲ್ಲಿ‌ ಪಾತ್ರ ಮಾಡಿದೀನಿ. ಹಿಂದಿ ಸಿನಿಮಾರಂಗದಲ್ಲಿ ನನ್ನ ಅಭಿನಯಕ್ಕೆ ದೊಡ್ಡ ದುಡ್ಡು ಬಂತು. ನಟ ಅಂದರೆ ನಾನಾ‌ ಪಾಟೇಕರ್, ಓಂಪುರಿ ಇವರೆಲ್ಲ. ನಾನು ಬಹಳವಾಗಿ ಇವರನ್ನ ಮೆಚ್ಚಕೋತೀನಿ’.

ಮೊನ್ನೆ ಜಿ.ಕೆ. ಗೋವಿಂದ ರಾವ್ ವಿಧಿವಶರಾದಾಗ ಆ ದಿನ ಅವರು ಗಿರೀಶ ಕಾರ್ನಾಡ್ ಅವರೊಂದಿಗೆ ನಡೆಸಿದ ಈ ರೇಡಿಯೋ ಆಟೋಬಯಾಗ್ರಫಿಯ ರೆಕಾರ್ಡಿಂಗ್ ಸಂದರ್ಭ ಕಣ್ಣೆದುರು ಚಿತ್ರರೂಪದಲ್ಲಿ ಚಿತ್ರವಾಗಿ ನಿಂತಿದ್ದು ಈಗ ಚಿತ್ರಣವಾಯಿತು..

‍ಲೇಖಕರು Admin

November 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: