-ವನಜಾಕ್ಷಿ ಎಸ್ ಮರಳಕುಂಟೆ
ನಮ್ಮೂರ ಹಳ್ಳಿಗಳ ಕೆಲವು ಮನೆಗಳಲ್ಲಿ ಇಣುಕಿ ಹಾಕಿದಾಗ ನೀರವ ಮೌನ ಕತ್ತಲಿಗಿಂತ ಗಾಢವಾಗಿ ಆವರಿಸುತ್ತದೆ. ಹಿಂದೆಲ್ಲಾ ತುಂಬು ಕುಟುಂಬದಿಂದ ಮಕ್ಕಳ ಕಲರವದೊಂದಿಗೆ ಗದ್ದಲದಲ್ಲೇ ಬದುಕಿದ್ದ ಆ ಮನೆಯ ಗೋಡೆ ಹೆಂಚುಗಳೂ ಕಪ್ಪು ಬಣ್ಣದ ಛಾಯೆಯಲ್ಲಿ ನಿರುಮ್ಮಳವಾಗಿ ಮಲಗಿವೆ.
ಮಕ್ಕಳಿಗೆ ಶಿಕ್ಷಣ ದೊರೆತಂತೆ ಜೀವನ ನಿರ್ವಹಣೆಗೋ ಹೆಚ್ಚಿನ ವಿದ್ಯಾಭ್ಯಾಸಕ್ಕೋ ಹಳ್ಳಿ ಬಿಟ್ಟು ನಗರಕ್ಕೆ ಹೋದ ಮಕ್ಕಳು ಅಲ್ಲಿನ ಜೀವನಶೈಲಿಗೋ, ಅನುಕೂಲಗಳಿಗೋ ಹೊಂದಿಕೊಂಡು ಆಗೊಮ್ಮೆ ಈಗೊಮ್ಮೆಯಾದರೂ ಹಳ್ಳಿಗೆ ಬರಲು ಪೇಚಾಡಿಕೊಂಡು ಬರುವ ಸ್ಥಿತಿ ಉಂಟಾಗಿದೆ. ಇನ್ನು ತಮ್ಮ ಮನೆಯ ಯಜಮಾನನನ್ನು ಕಳೆದುಕೊಂಡ ಮನೆಗಳಲ್ಲಿ ಬದುಕುತ್ತಿರುವ, ಹಿಂದೆ ಸದಾ ಚೈತನ್ಯದ ಚಿಲುಮೆಯಂತಿದ್ದ ಮನೆಯೊಡತಿಯೂ ಜೀವನ ಸಾಕುಸಾಕಾದಂತೆ ಒಬ್ಬಂಟಿತನದ ಭಾವಕ್ಕೆ ಸಿಲುಕಿ ತನ್ನಿಡೀ ಬದುಕನ್ನು ಹೊಲ-ಮನೆ-ಮಕ್ಕಳಿಗಾಗಿ ಸವೆಸಿದ್ದನ್ನು ನೆನೆದು ಕಣ್ಣೀರಿಡುತ್ತಾಳೆ.
ಹೀಗೆ ಯಜಮಾನನೇ ಮೊದಲು ತೀರಿಕೊಂಡದರ ಬಗ್ಗೆ ನನಗೆ ಆಶ್ಚರ್ಯವೇನಿಲ್ಲ. ಹಿಂದೆಲ್ಲಾ ಮದುವೆಯಲ್ಲಿ ಗಂಡು-ಹೆಣ್ಣಿನ ವಯೋಅಂತರ (ಗಂಡು ಹೆಣ್ಣಿಗಿಂತ ಹತ್ತು ಹದಿನೈದು ವರ್ಷ ದೊಡ್ಡವರು) ಸಾಮಾನ್ಯವಾಗಿ ಮೊದಲು ಗಂಡಂದಿರೇ ತೀರಿಕೊಳ್ಳಲು ಬಹುಮುಖ್ಯ ಕಾರಣ. ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಗಂಡು ಮಕ್ಕಳಿಗೂ ಮದುವೆಯಾಗಿ ಉದ್ಯೋಗನಿಮಿತ್ತ ನಗರಗಳಲ್ಲಿದ್ದರೂ, ಮುಂದೊಂದು ದಿನ ಮರಳಿ ಹಳ್ಳಿಗೆ ಹಿಂತಿರುಗುವರೆಂಬ ಪ್ರಬಲ ಆತ್ಮವಿಶ್ವಾಸದೊಂದಿಗೆ ಅವರುಗಳು ಬರುವ ಸಮಯಕ್ಕೆ ಶಬರಿಯಂತೆ ಕಾಯುತ್ತಿರುತ್ತಾಳೆ.
ವಯೋಸಹಜ ನಿಶ್ಯಕ್ತಿ, ಅನಾರೋಗ್ಯ, ನಿರುತ್ಸಾಹಗಳಿಂದ ಇರುವ ಒಬ್ಬಳಿಗಾಗಿ ಬದುಕಬೇಕಾದ ಅನಿವಾರ್ಯತೆಗಾಗಿ, ಮನೆಯಲ್ಲಿ ಇರುವುದರಲ್ಲಿಯೇ ಏನೋ ಒಂದಿಷ್ಟು ಬೇಯಿಸಿ, ತಿಂದು ಉಳಿದದ್ದನ್ನು ಇದನ್ನೇ ರಾತ್ರಿಯೂ ತಿಂದರಾಯ್ತು ಎಂದು ಮುಚ್ಚಿಟ್ಟು ನಿಟ್ಟುಸಿರಿಡುವ ಮನೆಯೊಡತಿಗೆ ಈಗ ಮೊದಲಿನಂತೆ ಯಾವುದೇ ಕೆಲಸಗಳೂ ಇಲ್ಲ, ಮಾತುಗಳೂ ಇಲ್ಲ.
ಮಕ್ಕಳು-ಮೊಮ್ಮಕ್ಕಳು ಮನೆಗೆ ಬಂದಂದಿನ ಆಕೆಯಲ್ಲಿನ ಎಲ್ಲಾ ಮಾತುಗಳು ರೆಕ್ಕೆ ಬಂದಂತೆ ಹಾರಾಡುತ್ತಿರುತ್ತವೆ. ಬಂದವರಿಗೆ ಏನೂ ಕೊರತೆಯಾಗದಂತೆ ನೋಡಿಕೊಳ್ಳಲು ಅವಳು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಅವರು ಬರುವ ಮುನ್ನಾ ದಿನವೇ ಮನೆಯನ್ನು ಒಪ್ಪ ಮಾಡುವುದು, ಕಾಳುಕಡಿ, ಅಡುಗೆಗೆ ಬೇಕಾದವುಗಳನ್ನೆಲ್ಲಾ ತಾನೇ ಹೋಗಿ ಹೊರಲಾರದೆ ಹೊತ್ತು ತರುವುದು. ಅವರಿವರನ್ನು ಕಾಡಿ ಬೇಡಿ ಬೇಕರಿಯ ತಿಂಡಿ ತಿನಿಸುಗಳನ್ನು ಮಕ್ಕಳಿಗಂತಲೇ ತರಿಸುವುದು. ಎಲ್ಲವೂ ಬರುವವರ ಅನುಕೂಲಕ್ಕೆ ಅಣಿಯಾದ ಕೂಡಲೆ ಮನೆ ಮುಂದಿನ ಜಗುಲಿಗೆ ಬಂದು ಕಾಯುತ್ತಾ ಕೂರುವುದು ಅವಳ ಸಂಭ್ರಮದ ಮುನ್ನುಡಿಗೆ ಸಾಕ್ಷಿ.
ಹಳೆಯ ಮನೆಯ ಮುಂದೆ ಕಾರಿನಿಂದಿಳಿಯುವ ತನ್ನವರನ್ನು ನೋಡುವ, ಮುದ್ದಿಸುವ, ಲಾಲಿಸುವ ಅವಳ ಇಳಿಸಂಜೆಯ ಕಣ್ಣುಗಳಲ್ಲಿ ಸಾವಿರ ನಕ್ಷತ್ರಗಳು ಹೊಳೆಯುತ್ತವೆ. ಅವರಿದ್ದಷ್ಟು ಕಾಲ ಅವಳ ಮನೆಯೊಂದು ಮಿನಿ ಮೀನಿನ ಮಾರ್ಕೆಟ್ಟಿನ ಹಾಗೆ ಯಾವಾಗಲೂ ಗಲಗಲವಾಗಿರುತ್ತದೆ. ಇನ್ನು ಅವರೆಲ್ಲ ಹೊರಡುವ ದಿನ ಸನ್ನಿಹಿತವಾಗುತ್ತಲೇ ಮುದುಕಿ ಶಕ್ತಿಹೀನಳಂತಾಗುತ್ತಾಳೆ.
ಮನೆಯಲ್ಲಿರಲು ಬೇಸರವಾದಾಗೆಲ್ಲ ಹಳ್ಳಿಯ ಸುತ್ತಿ ತಂದ ಜೋಳ, ಹುಣಸೆ, ಕಡಲೆಕಾಯಿ, ಗೇರುಬೀಜ, ಹುರುಳಿಕಾಳು, ಹಂಚಿಕಡ್ಡಿಯ ಪೊರಕೆಗಳನ್ನೆಲ್ಲ ಚೊಕ್ಕ ಮಾಡಿ ಒಣಗಿಸಿಟ್ಟು ಮಕ್ಕಳು ಬಂದಾಗ ಖುಷಿಯಿಂದ ಅವುಗಳನ್ನೆಲ್ಲ ಕೊಟ್ಟು ಅವರುಗಳ ಸಂತೋಷ ನೋಡುವುದು ಅವಳಿಗೆ ಇಷ್ಟದ ಕೆಲಸ. ಸ್ವರವೇ ಬಾರದ ಗಂಟಲಿಂದ ಇವನ್ನೆಲ್ಲ ತಗೊಂಡೋಗಿ ನಿಮಗೇ ಅಂತಲೇ ಇಟ್ಟಿದ್ದೆ. ನನ್ನೊಬ್ಬಳಿಗ್ಯಾಕೆ ಇಷ್ಟೊಂದೆಲ್ಲ ಎಂದೆನ್ನುವಾಗ ಅವಳಿಗಾಗುವ ದುಃಖ ಅರ್ಥವಾದರೂ ಅನಿವಾರ್ಯತೆಯಿಂದ ಎಲ್ಲರೂ ಹೊರಟುಬಿಡುತ್ತಾರೆ.
ಆ ಸಂಜೆ ಅಕ್ಷರಶಃ ಅವಳ ಮನೆಯಲ್ಲಿ ಮನದಲ್ಲಿ ಹೊಯ್ದಾಡುತ್ತಿರುವ ಚಿಮಣಿ ದೀಪವಷ್ಟೆ ಬೆಳಗುತ್ತಿರುತ್ತದೆ.






ಹಳ್ಳಿಯ ಅಮ್ಮನನ್ನು ವರ್ತಮಾನದ ಸತ್ಯಗಳೊಂದಿಗೆ ಕಥನಗೊಳಿಸಿದ್ದೀರಿ. ವಾಸ್ತವವೇ ಹೀಗಿದೆ. ನಗರ ಬೆಳೆದಂತೆಲ್ಲಾ ಹಳ್ಳಿಗಳು ಹಾಗೂ ನೆನಪುಗಳು ಆಕಸ್ಮಿಕಗಳೇ ಆಗಿವೆ