ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ ಸಾಯುತ್ತದೆ..

-ಎಂ ವಿ ಶಶಿಭೂಷಣ ರಾಜು

ಸತ್ತವನ ಕಾಲ

ಕಾಲ ಸಾಯುತ್ತದೆ ಸತ್ತವನಿಗೆ,
ಇಲ್ಲಾ
ಅತೀ ವೇಗ ಪಡೆದುಕೊಳ್ಳುತ್ತದೆ

ಚಿಟುಕೆ ಹೊಡೆಯುವುದರಲ್ಲಿ
ಮಕ್ಕಳು, ಮೊಮ್ಮಕ್ಕಳು
ದೇಶ, ವಿಶ್ವ, ಗ್ರಹಗಳು, ನಕ್ಷತ್ರಗಳು
ಬ್ರಹ್ಮಾಂಡವು ಸಾವ ಸೇರಿಕೊಳ್ಳುತ್ತವೆ

ಬದುಕಿರುವತನಕ,
ಸಾವ ದೂರತಳ್ಳುವ ಸನ್ನಾಹ
ಮೊದಲು ಸಾವನಪ್ಪಿದರೆ ಏನೋ
ಕಳೆದುಕೊಳ್ಳುವ ಭಯ
ಜಗವೆಲ್ಲ
ಸದಾ ಇರುವಂತೆ ಭ್ರಮೆ,
ತಾನೊಬ್ಬನಿಲ್ಲದೆ

ಸತ್ತವನಿಗೆ ಯುಗಗಳೂ ಕ್ಷಣದಂತೆ
ಎಲ್ಲ ಅವತಾರಗಳೂ
ತಳೆದು ಅಳಿಯುತ್ತವೆ
ಎರಡು ಪೀಳಿಗೆ ಕಳೆಯುವಷ್ಟರಲ್ಲಿ
ಹೆಸರೂ ಕಳೆದುಹೋಗುತ್ತದೆ
ಮುಖ ಮಾಸುತ್ತದೆ

ಭೂಮಿ ಉರಿದು ಹೋಗಿರುತ್ತದೆ ,
ಸೂರ್ಯ ತಂಪಾಗಿ ದಿಕ್ಕಿತಪ್ಪಿ ಅಳೆಯುತ್ತಾನೆ
ಆಕಾಶಗಂಗೆಗಳು ಮಿಲನಗೊಂಡು
ಕಪ್ಪು ರಂಧ್ರಗಳ ಸೃಜಿಸುತ್ತವೆ
ಗಿಡಮರ, ಪ್ರಾಣಿ, ದೇವರು, ದೆವ್ವ ಎಲ್ಲವೂ
ಮರೆಯಾಗುತ್ತವೆ

ಆದರೆ,

ಎಲ್ಲೋ ಒಂದು ಕಡೆ ಜೀವಿಗಳು ನಲಿಯುತ್ತಿರುತ್ತವೆ
ಹುಟ್ಟಿ ಸಾಯುತ್ತಿರುತ್ತವೆ
ಭ್ರಮೆ, ವಿರಹ, ವಿರಸ, ಕೋಪ, ತಾಪ
ಮೇಲು ಕೀಲಿನ ವೃತ್ತದಲ್ಲಿ ಸುತ್ತುತ್ತಿರುತ್ತವೆ
ಒಂದು ದಿನ ಇಲ್ಲವಾಗುತ್ತವೆ

ಎಲ್ಲೆಡೆ ಇದೇ ಪ್ರಕ್ರಿಯೆ
ಹುಟ್ಟುವುದು ಸಾಯುವುದು
ಜೀವಿಗಳೇ ಅಲ್ಲ
ಬ್ರಹ್ಮಾಂಡಗಳೂ ಕೊಡ

‍ಲೇಖಕರು Admin

20 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading