-ನಾಗರಾಜ ಬಿ ನಾಯ್ಕ
ತಾಕುವುದು
ಎಂದರೆ ಎಷ್ಟೆಲ್ಲಾ ಘಟನೆಗಳು
ಮಡಿಕೆಯಾಗಿ ಮನಸಿನ ಪುಟ
ಸೇರುತ್ತದೆ ಒಮ್ಮೊಮ್ಮೆ
ದೋಣಿ ದಡವ
ತಾಕುತ್ತಿದ್ದರೆ ಸಾಕು
ದಡ ಮುಟ್ಟಿತು ಎನ್ನುವ
ಸಾಲುಗಳು ಅವ್ಯಕ್ತವಾಗಿ ನಮ್ಮೊಳಗೆ
ಮನಸು ಮುಟ್ಟುತ್ತದೆ
ಆಡಿದ ಮಾತು
ಹೃದಯದಿ ಉಳಿದು
ಮನ ತುಂಬಿದರೆ
ತಾಕಿದ ಭಾವ ಚಿತ್ರಗಳ
ಬಿಡಿಸಿ ಹೋದಂತೆ
ಕಿಟಕಿಯಂಚಿಗೆ ಕುಳಿತ
ನೋಟಕೆ ಹಕ್ಕಿಯೊಂದು ಹಾರಿ
ಬಂದು ಕುಳಿತರೆ
ನಮ್ಮದೆಂಬ ಮನಸು ಕುಣಿಯುತ್ತದೆ
ಅಪರಿಚಿತ ನಕ್ಕ
ನಗುವಿನ ಒಳಪುಟ
ನಗುವಿಗೆ ನೇಯಿಗೆಯ
ಪೋಣಿಸಿ ಜಗಕೆ
ಹೇಳುತ್ತದೆ ಕಾಣುವ
ನೋಟವೇ ಒಂದು ಚೆಂದದ
ಬದುಕೆಂದು
ಪುಟಾಣಿ ಮಗುವೊಂದು
ನಕ್ಕ ನಗು ತಾಕಿದರೆ
ಸಾಕು ಸಗ್ಗ ಸೇರಿದ
ಬದುಕು ಕರೆದಂತೆ
ಉಸಿರಿನ ಗಾಳಿ
ಬೆಳಕು ತಾಕಿದರೆ ಸಾಕು
ಗಾಳಿ ಬೆಳಕಿಗೆ
ಹೂವು ಅರಳುವುದಂತೆ
ಅಂದವಾದ ದಿನಕ್ಕೆ
ಚಿತ್ರ ಬರೆದು
ನೋಟ ಕಾಣುವುದಂತೆ
ತಾಕುವುದು ಎಂದರೆ
ಸೂಕ್ಷ್ಮ ಮನಸ್ಸಿನ ಮೇಲೆ
ಮಲ್ಲಿಗೆ ಹರಡಿದ ಸರಿಗಮ
ತಂಗಾಳಿಗೆ ಹಾರುವ
ಕೂದಲು ತಲುಪಿದ ನವಿರು ಭಾವ
ಒಲವಿನ ಗಾನಕೆ
ತಾಕುವ ಒಲವಿನ ಹಾಡು
ಬದುಕ ಪಲ್ಲವಿಯ ನುಡಿಯಂತೆ






0 Comments