ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಸ್ತಿತ್ವ..

-ಹೆಚ್ ಆರ್ ಲೀಲಾವತಿ

ಅದೊಂದು ಬಹು ಮಹಡಿಗಳ ದೊಡ್ಡ ಸಮುಚ್ಚಯ. ಅಂತಹ ಒಂದು ಮನೆಯಲ್ಲಿ ಅವಳ ವಾಸ. ಅಲ್ಲಿಗೆ ಅವಳು ಬಂದು ನಾಲ್ಕಾರು ತಿಂಗಳುಗಳಾಗಿರಬಹುದಷ್ಟೆ. ತಾನಾಯ್ತು ತನ್ನ ಪಾಡಾಯ್ತು ಎಂದಿರುತ್ತಿದ್ದಳವಳು. ಯಾರೊಂದಿಗೂ ಹೆಚ್ಚು ಮಾತಿಲ್ಲ ಕತೆಯಿಲ್ಲ. ಎದುರಿಗೆ ಯಾರಾದರೂ ಕಂಡರೆ ಒಂದು ಮುಗುಳ್ನಗೆಯಷ್ಟೆ. ಅವಳನ್ನು ಕಂಡ ಹೆಂಗೆಳೆಯರೆಲ್ಲಾ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದುದುಂಟು. “ಎಂಥಾಚೆಲುವೆ. ಎಂಥಾ ಆಕರ್ಷಕ ಬೊಗಸೆಗಂಗಳು. ಇಳಿಬಿಟ್ಟಅವಳಉದ್ದನೆಯ ಕೂದಲಿನಲ್ಲಿ ಅಲ್ಲೊಂದು ಇಲ್ಲೊಂದು ಬಿಳಿಕೂದಲಷ್ಟೆ.
ನಡು ವಯಸ್ಸಿರಬೇಕು.ಒಳ್ಳೇ ಸಿನಿಮಾ ನಟಿ ಇದ್ದ ಹಾಗಿದ್ದಾಳೆ.

ತಾನಾಯ್ತು ತನ್ನ ಮನೆಯಾಯ್ತು ಎಂದಿರುತ್ತಾಳೆ. ಯಾರೊಂದಿಗೂ ಮಾತೇ ಆಡಲ್ಲ”ಎಂದು ಹೀಗೇ ಹೆಂಗಸರ ಕುತೂಹಲ ತಣಿಯದ ಮಾತುಗಳು.
ಹೌದು ಅವಳು ಒಂಟಿಯಾಗಿದ್ದಳು. ಅವಳ ಮನೆಯಿಂದ ಆಗೊಮ್ಮೆ ಈಗೊಮ್ಮೆ ಸಣ್ಣದಾಗಿ ಹಾಡುವಧ್ವನಿಕೇಳಿಸುತ್ತಿತ್ತು. ಬೆಳಗಿನ ಝಾವ ಮಾತ್ರ ವಾಯುಸೇವನೆಗೆ ಹೋಗುತ್ತಾಳೆಂದು ಕಂಡವರು ಹೇಳುತ್ತಿದ್ದರು. ದಿನಗಳುರುಳಿದಂತೆ ಹೆಚ್ಚು ಹೆಚ್ಚು ಹೊರಗೆ ಕಾಣಿಸತೊಡಗಿದಳು. ಕಂಡರೂ ಎಲ್ಲರೊಂದಿಗೂ ಒಂದು ಮುಗುಳ್ನಗೆಯಲ್ಲದೆ ಬೇರೆ ಮಾತು ಕತೆಗೆ ಅವಳು ಅವಕಾಶವನ್ನೇನೀಡುತ್ತಿರಲಿಲ್ಲ. ಎಲ್ಲರ ಪಾಲಿಗೂ ನಿಗೂಢವಾಗಿಯೇ ಉಳಿದುಬಿಟ್ಟಳು.

ಒಂದು ದಿನ ಅವಳೊಂದು ಫೋಟೋ ಸ್ಟುಡಿಯೋಗೆ ಹೋದಳು. ಆ ಸ್ಟುಡಿಯೋದ ಮಾಲೀಕ ಒಬ್ಬ ಹೆಸರಾಂತ ಛಾಯಾ ಚಿತ್ರಗ್ರಾಹಕ. ಆ ಸ್ಟುಡಿಯೋದಲ್ಲಿ ವಿಧವಿಧ ಭಂಗಿಯ ಅನೇಕ ಚಲನಚಿತ್ರ ನಟ ನಟಿಯರ ದೊಡ್ಡ ದೊಡ್ಡ ಫೋಟೋಗಳನ್ನು ಪ್ರದರ್ಶಿಸಿದ್ದರು. ಆ ಛಾಯಾಗ್ರಾಹಕ ಹೇಳತೊಡಗಿದ “ನೋಡಿ ಮೇಡಂ ನಿಮ್ಮದೂ ಇಂಥದೇ ಒಂದು ಚಿತ್ರವನ್ನು ತೆಗೆದುಕೊಡುತ್ತೇನೆ. ನಾನು ಬಾಂಬೆಯಲ್ಲಿ ಚಲನಚಿತ್ರ
ಛಾಯಾಗ್ರಾಹಕನಾಗಿದ್ದಾಗ ಎಂಥೆಂಥ ಹೆಸರಾಂತ ಚಿತ್ರ ನಟನಟಿಯರ ಫೋಟೋಗಳನ್ನು ತೆಗೆದಿದ್ದೇನೆ. ನಾನು ಬೆಂಗಳೂರಿಗೆ ಬರುವ ಪರಿಸ್ಥಿತಿ ಬರದಿರುತ್ತಿದ್ದರೆ ಇನ್ನೂ ಹೆಚ್ಚು ಹೆಚ್ಚು ಚಲನ ಚಿತ್ರ ನಟ ನಟಿಯರ ಚಿತ್ರಗಳನ್ನು ತೆಗೆಯಬಹುದಿತ್ತು” ಎಂದು ಹೆಮ್ಮೆಯಿಂದ ಹೇಳುತ್ತ, ಅಲ್ಲಿ ತೂಗಿ ಹಾಕಿದ್ದ ಒಂದೊಂದು ಫೋಟೋವನ್ನೂ ತೋರಿಸುತ್ತಾ ಯಾವ ಫೋಟೋ ಎಲ್ಲಿತೆಗೆದದ್ದು ಎಂದು ವಿವರಿಸುತ್ತ ಹೋಗಿ ಒಂದು ಫೋಟೋ ಕಡೆ ಬೆರಳು ಮಾಡಿತೋರಿಸುತ್ತ ಒಂದು ಕ್ಷಣ ಹಾಗೇ ನಿಂತುಬಿಟ್ಟ.

“ನೋಡಿ ಮೇಡಂ ಎಂಥಾ ಚೆಲುವೆ ಈಕೆ. ತುಂಬಾ ಪ್ರತಿಭಾವಂತ ನಟಿ.ಹಲವಾರು ಚಿತ್ರಗಳಲ್ಲಿ ನಟಿಸಿದ್ದಾಳೆ. ಗಂಭೀರ ಸ್ವಭಾವದ ಈಕೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ನನ್ನ ಅಚ್ಚುಮೆಚ್ಚಿನ ನಟಿ ಸುನಯನಾ” ಎಂದು ಇನ್ನೂ ಏನೇನೋ ಹೇಳುತ್ತಲೇ ಇದ್ದ. ಅಷ್ಟರಲ್ಲೇ ಅಲ್ಲಿ ನಿಲ್ಲದೆ ಮನೆಗೆ ಓಡಿ ಬಂದವಳೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು ಸುನಯನಾ.

‍ಲೇಖಕರು Admin

21 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading