– ವಿಶಾಲ್ ಮ್ಯಾಸರ್
ನಾನು ಇಷ್ಟಪಡುತ್ತೇನೆ
ಸೇಬು ಹಣ್ಣುನ್ನು
ಉದುರುವ ಬೇವಿನ ಮರದ ಎಲೆಗಳನ್ನು
ಪಕಳೆಯ ತುಂಬ ಪ್ರೀತಿ ಹೊತ್ತ
ಗುಲಾಬಿ ಹೂವುಗಳನ್ನು
ಮನೆಯ ಮೇಲೆ ನಿಂತು ನೋಡುವ
ಸೂರ್ಯನ ಚಲನೆಗಳನ್ನು
ಗುಡಿಸಲಿಗೆ ನೆರಳೀವ ತೆಂಗಿನ ಗರಿಗಳನ್ನು
ಹಾಗೂ ಇಷ್ಟೇ ಇನ್ನೇನು ಇಲ್ಲ
ಹೀಗೆ ಲಿಸ್ಟು ಮಾಡುತ್ತಾ ಹೋದಂತೆ
ಉದ್ದ ಬೆಳೆಯುವ ಪಟ್ಟಿ
ಇದು ಹೇಗೆಂದರೆ
ಪೇಸ್ಟ್ ಎಂದಕೂಡಲೇ ಕೋಲ್ಗೇಟ್
ಶಾಂಪೂ ಎಂದಕೂಡಲೇ
ಕ್ಲಿನಿಕ್ ಪ್ಲಸ್
ಸೋಪ್ ಎಂದಕೂಡಲೇ
ಲೈಫ್ಬಾಯ್
ನೂಡಲ್ಸ್ ಎಂದಕೂಡಲೇ
ಮ್ಯಾಗಿ
ಕೊನೆಗೆ ಅಲ್ಲಲ್ಲಿ ಇಣುಕುವ
ಸೆಕೆಂಡ್ ಕಾಪಿ ಪತಂಜಲಿ ಬ್ರಾಂಡ್
ಎಲ್ಲದಕ್ಕೂ ನಮಗೆ ದಕ್ಕುವ
ಒಂದೊಂದು ವಸ್ತುಗಳನ್ನು ಬ್ರಾಂಡ್ ಮಾಡುತ್ತೇವೆ
ಹಿಂಗೆ ಹಿಡಿದು
ಹಂಗೆ ಬಡಿದು
ವಿಭಾಗಿಸಿ
ಇದು ನಮಗೆ
ಪ್ರಿಯ
ಅದು ನಮಗೆ
ಅಪ್ರಿಯ
ಅಪ್ರಿಯಂ ಸತ್ಯಂ ನಾ ಬೃಹೇತ್!
ಚಹಾದ ಅಂಗಡಿಯಲ್ಲಿ ಬೆಳ್ಳಂಬೆಳಿಗ್ಗೆ ಹಾಕುವ ಲೋಬಾನದ ಹೊಗೆಗೂ
ಮತ್ತೆ ದಿನವಿಡೀ ಅಲ್ಲಿ ಸುಳಿದಾಡುವ ಹೊಗೆಗೂ
ಅದೆಷ್ಟು ವ್ಯತ್ಯಾಸ
ಒಂದು ಪವಿತ್ರ ಇನ್ನೊಂದು ಅಪವಿತ್ರ
ಅನ್ನುವ ಲೋಕದ ಸತ್ಯ
ಇವತ್ತು,ನಾಳೆ, ನಾಡಿದ್ದು
ಆಚೆ ನಾಡಿದ್ದು
ಇವೆಲ್ಲದರ ನಡುವೆ
ಏನೆಲ್ಲಾ ಬೇರೆ ಮಾಡಬಹುದು ನೀವೇ ಹೇಳಿ?
ಒಂದು ಸಾರ್ವಕಾಲಿಕ ಸತ್ಯವನ್ನು ನಾನು ಕೇಳಲು ಬಯಸುತ್ತೇನೆ
ಅದೆಂದರೆ ಯುದ್ಧ ಎಂದಕೂಡಲೇ
ಮನಸಿಗೆ ಬರುವ ದೇಶ ಯಾವುದು?
ದೇಶಭಕ್ತ ಎಂದಕೂಡಲೇ ಕಣ್ಣೆದುರಿಗೆ ನಿಲ್ಲುವ ವ್ಯಕ್ತಿ ಯಾವನು?






0 Comments