ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಾನತೆಯೇ ಕೇಂದ್ರ ಕಾಳಜಿಯಾಗುಳ್ಳ ಕಥೆಗಳು..

ಶ್ರೀಧರ ಗಸ್ತಿ ಅವರ ಕಥಾಸಂಕಲನ ‘ಕೆಂಡದ ಧೂಳೋ’

ಈ ಕೃತಿಯನ್ನು ‘ಪುಸ್ತಕ ಮನೆ’ ಪ್ರಕಾಶನ ಪ್ರಕಟಿಸಿದೆ.

ಈ ಕೃತಿಗೆ ಸುನಂದಾ ಕಡಮೆ ಅವರು ಬರೆದ ಮುನ್ನುಡಿ ಇಲ್ಲಿದೆ.

-ಸುನಂದಾ ಕಡಮೆ

ಇಲ್ಲಿ ಒಂಬತ್ತು ಕತೆಗಳಿದ್ದು ಶೀರ್ಷಿಕೆಗಳು ಒಂದಕ್ಕಿ೦ತ ಒಂದು ಆಕರ್ಷಕವಾಗಿವೆ ಮತ್ತು ಹೆಚ್ಚಾಗಿ ಗ್ರಾಮೀಣ ಭಿತ್ತಿಯ ಜನಜೀವನ ಇಲ್ಲಿ ಸೆರೆಹಿಡಿಯಲ್ಪಟ್ಟಿದೆ. ಸಮಾನತೆಯ ಹುಡುಕಾಟ ಎಲ್ಲ ಕಥೆಗಳ ಕೇಂದ್ರ ಕಾಳಜಿಯಾಗಿದೆ. ಹಳ್ಳಿಗಳಲ್ಲಿ ಕಾಣುವ ಜಾತಿ, ಅಂತಸ್ತು, ಸಣ್ಣತನ, ಪ್ರೀತಿ-ಪ್ರೇಮ, ನಿರುದ್ಯೋಗ, ಭಾವನಾತ್ಮಕ ಸಂಬ೦ಧಗಳು, ಮಾನಸಿಕ ಕ್ಷೋಭೆ, ಅಮಾಯಕ ಮಹಿಳೆಯರ ಮೇಲಾಗುವ ಅತ್ಯಾಚಾರ, ಪೆನ್‌ ಡ್ರೈವ್ ಪ್ರಕರಣ, ದುರ್ನಡತೆಯವರ ನಿಗೂಢ ಹತ್ಯೆ, ಅನಾಥ ಮಕ್ಕಳ ಬದುಕು, ರಾಜಕೀಯ ಧುರೀಣರ ಅನೀತಿ, ಪಟ್ಟಣದಲ್ಲಿ ಬೆಳೆದು ನಿಂತ ವೇಶ್ಯಾಗೃಹಗಳು, ಈ ಎಲ್ಲ ಸಂಗತಿಗಳು ಇವರ ಕತೆಗಳಲ್ಲಿ ಮತ್ತೆ ಮತ್ತೆ ಕಾಣುತ್ತ ನಮ್ಮನ್ನು ತಲ್ಲಣಿಸುವಂತೆ ಮಾಡುತ್ತವೆ.

ಇಲ್ಲಿಯ ‘ದಡ ಸೇರದ ಅಲೆಗಳು’ ಕಥೆಯಲ್ಲಿ ‘ಸ್ವಾತಂತ್ರ್ಯ ಗೀತಂತ್ರ ಎಲ್ಲಾ ನಮ್ಮಂಥೋರಿಗಲ್ಲಪಾ, ಅದು ಉಳ್ಳವರಿಗೆ ಮಾತ್ರ’ ಎಂಬ ಮಾತು ಬರುತ್ತದೆ. ಚೋಮ ತನ್ನ ಸಾಕು ಮಕ್ಕಳಿಗೆ ಹೇಳುವ ಮಾತಿದು. ಸ್ವಾತಂತ್ರö್ಯ ಸಿಕ್ಕು ಎಂಬತ್ತು ವರ್ಷಗಳಾದರೂ ಇವತ್ತಿನ ವಾಸ್ತವವನ್ನು ಚೋಮ ಇಲ್ಲಿ ಅನೂಚಾನ ಪುನರುಚ್ಚರಿಸುತ್ತಾನೆ. ಅನಾಥ ಮಕ್ಕಳಿಗೆ ಆಸರೆಯಾಗಿದ್ದ ಚೋಮ ಮತ್ತು ಮೈನಾವತಿ, ಬುಡಕಟ್ಟು ಜನಾಂಗದ ಅಭಿವೃದ್ಧಿ ನಿಗಮದ ಯೋಜನೆಯಡಿ ಸ್ವ-ಉದ್ಯೋಗ ಮಾಡಿ ಊಹಿಸಲಾರದ ರೂಪದಲ್ಲಿ ಹಣ-ಹೆಸರು ಎರಡನ್ನೂ ಪಡೆದುಕೊಳ್ಳುತ್ತಾರೆ. ತದನಂತರ ಕತೆ ಪತ್ತೆದಾರಿ ಅಂಶವನ್ನು ಒಡಲಲ್ಲಿಟ್ಟುಕೊಂಡು ಬೆಳೆಯುತ್ತದೆ. ಅಂತೆಯೇ ಕುತೂಹಲ ಹೆಚ್ಚಿಸಿಕೊಳ್ಳುತ್ತ ಹೋಗುತ್ತದೆ.

ಸಾವಕಾರ ದೊಡ್ಡಯ್ಯನ ನೀಚತನವನ್ನು ಹೇಳುವ ಕಥೆ ‘ಕೆಂಡದ ಧೂಳೋ’ ಅದರಲ್ಲಿಯೂ ‘ಗೋಲ್ಡ್ ಮೆಡಲ್ ಕೊಟ್ಟ ವ್ಯವಸ್ಥೆ ಒಂದು ನೌಕರಿ ಕೊಡಲು ವಿಫಲವಾಗಿದೆ’ ಎಂಬ ಮಾತು ಬರುತ್ತದೆ. ಪಿಎಚ್ಡಿ ಪದವೀಧರ ಅರುಣ ಕೆಲಸವಿಲ್ಲದೇ ಪಂಚಾಯ್ತಿಯ ವಾಟರ್ ಮ್ಯಾನ್ ಕೆಲಸಕ್ಕಾದರೂ ಹೋಗುವ ಸ್ಥಿತಿ ಇರುತ್ತದೆ, ಆದರೆ ಅವನ ಕ್ಲಾಸ್‌ಮೇಟ್ ಒಬ್ಬ ‘ಗೋಲ್ಡ ಮೆಡಲ್ ಎಗ್‌ರೈಸ್ ಸೆಂಟರ್’ ತೆಗೆದು ಹೊಟ್ಟೆಹೊರೆಯುತ್ತಾನೆ, ಧರ್ಮವೇ ಮುಖ್ಯವಾದ ಇಂದಿನ ರಾಜಕೀಯ ಪ್ರೇರಿತ ಸಮಾಜದಲ್ಲಿ ಇದು ಸಹಜ ಎಂಬ೦ತೆ ತೋರಿಬರುತ್ತಿದೆ. ಪ್ರಭುತ್ವಕ್ಕೆ ಪದವಿಗಳನ್ನು ನೀಡುವುದು ಗೊತ್ತೇ ಹೊರತು ಪದವೀಧರರಿಗೆ ಉದ್ಯೋಗ ನೀಡುವುದರ ಬಗ್ಗೆ ಚಿಂತನೆಯಿಲ್ಲ. ಇದು ವಾಸ್ತವ.

ಕೊಲೆ ಸುಲಿಗೆ ಅತ್ಯಾಚಾರಗಳು ಸಮಾಜದಲ್ಲಿನ ಶಾಂತಿಯನ್ನು ಕದಡಲು ಕಾರಣವಾದ ಚಿತ್ರವನ್ನು ಕಟ್ಟಿಕೊಡುವ ಕತೆ ‘ನೀಲಿ ಕಣ್ಣಿನ ಹುಡುಗಿ’ ಇದೊಂದು ಪತ್ತೇದಾರಿ ಅಂಶವನ್ನು ಹೊಂದಿದAತಹ ಕತೆ, ಇದು ಮೈಸೂರಿನಲ್ಲಿ ನಡೆವ ಘಟನೆ, ನೀಲಿ ಕಣ್ಣಿನ ಹುಡುಗಿಯೊಬ್ಬಳನ್ನು ಹುಡುಕಿ ಹೋಗುವ ಪ್ರಾಮಾಣಿಕ ಪತ್ರಕರ್ತ ಅರ್ಜುನ ಶರ್ಮಾನ ಪಯಣ ಎಲ್ಲೆಲ್ಲೋ ಹೋಗಿ ತಲುಪುತ್ತದೆ. ಪತ್ರಕರ್ತರ ದುಗುಡ ದುಮ್ಮಾನಗಳನ್ನೂ ಕೂಡ ಈ ಕತೆ ಹಿಡಿದಿಡುತ್ತದೆ. ಹಳೆಯ ಪುಸ್ತಕಗಳ ಅಂಗಡಿಯಲ್ಲಿ ಸಿಕ್ಕ ಡೈರಿಯಲ್ಲಿರುವ ತಿರುವು ಮುರುವಾದ ಅಕ್ಷರಗಳನ್ನು ಕನ್ನಡಿಯಲ್ಲಿ ಕಂಡು ಗುರುತಿಸುತ್ತ ಆ ಸಂಜ್ಞೆಯ ಬೆನ್ನು ಹತ್ತಿ ಹೋಗುವ ಈ ನಿಗೂಢ ದಾರಿಯಲ್ಲಿ ಪತ್ನಿಯೇ ಡಾನ್ ಆಗಿರುವ ವಿಸ್ಮಯವೊಂದು ಪರಿಣಮಿಸುತ್ತದೆ.

ಇಂದು ಹಳ್ಳಿಯಲ್ಲಿ ತಮ್ಮ ಅರ್ಹತೆಗೆ ತಕ್ಕ ಕೆಲಸವಿಲ್ಲವೆಂಬ ಭ್ರಮೆಯಲ್ಲಿ ಊರು ಬಿಟ್ಟು ಶಹರ ಸೇರುವ ನಿರುದ್ಯೋಗಿಗಳು ಅಲ್ಲಿ ಯಾವ ಕೆಲಸದಲ್ಲಿ ತೊಡಗಿಕೊಂಡು ಹೊಟ್ಟೆಹೊರೆದುಕೊಳ್ಳುತ್ತಾರೆ ಎಂದು ತಿಳಿಯುವುದು ಬಹಳ ಕಷ್ಟ. ಇಲ್ಲಿಯ ‘ಪವಾಡಿ’ ಕತೆಯಲ್ಲಿ ನಾಯಕ ವೈಶ್ಯಾಗ್ರವೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ತನ್ನ ಬಾಲ್ಯದ ಗೆಳತಿ ತೇಜಸ್ವಿನಿಯನ್ನು ಕಾಪಾಡಿ ಊರಿಗೆ ಕರೆತರುತ್ತಾನೆ, ಆದರೆ ಅವಳ ಆ ಪರಿಸ್ಥಿತಿಗೆ ಕಾರಣ ಈತನ ಗೆಳೆಯ ಕಪಿಲನೇ ಕಾರಣನಾಗಿರುತ್ತಾನೆ ಎಂದು ನಂತರ ತಿಳಿಯುತ್ತದೆ, ನಂತರ ಕತೆ ಸಿನಿಮೀಯ ಅಂತ್ಯ ಪಡೆದುಕೊಂಡರೂ, ಇಲ್ಲಿ ಒಳ್ಳೆಯ ಗೆಳೆಯನೊಬ್ಬನನ್ನು ಇಂಥ ದುರಾಚಾರಕ್ಕೆ ತಳ್ಳುವ ಸಂದರ್ಭವು ಮನುಷ್ಯ ಸ್ವಭಾವದ ವಿಚಿತ್ರ ಸತ್ಯವನ್ನು ಬಗೆದುಕೊಡುತ್ತಿದೆ.

ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣವನ್ನು ಜ್ಞಾಪಿಸುವ ಕತೆ ‘ಗೋರಿಯೊಳಗಿನ ಗುಲಾಬಿ’ ಇಲ್ಲಿ ಪಲ್ಲವಿಯಾಗಿ ಮೈತಳೆದು ಬಂದಿದ್ದಾಳೆ. ಹಿಂದು ಮುಸ್ಲಿಂ ಸಹಜ ಪ್ರೇಮ ವಿವಾಹಗಳು ಇಂದು ಲವ್ ಜಿಹಾದ್ ರೂಪ ಪಡೆದುಕೊಳ್ಳುತ್ತಿರುವ ರಾಜಕೀಯ ಹುನ್ನಾರದ ಕುರಿತು ಇಲ್ಲಿ ಪ್ರಸ್ತಾಪವಿದೆ. ನೂರ್ ಎಂಬ ವಿದ್ಯಾರ್ಥಿಯಿಂದ ಕಾಲೇಜು ಕಂಪೌ೦ಡಿನಲ್ಲೇ ಹತ್ಯೆಯಾದ ವಿದ್ಯಾರ್ಥಿನಿ ಪಲ್ಲವಿಗೆ ಕ್ಯಾನ್ಸರ್ ಇದ್ದು, ಅದನ್ನು ತಿಳಿದ ಅವಳ ಪ್ರೊಫೆಸರ್ ಸಮಾಧಾನ ಹೇಳುತ್ತಿರುವ ದೃಶ್ಯ ಕಂಡ ನೂರ್ ತಪ್ಪು ಭಾವಿಸಿ ಅವಳ ಹತ್ಯೆಗೆ ಮುಂದಾಗುತ್ತಾನೆ ಎಂಬ ಕತೆಗಾರರ ಕಲ್ಪನೆ ಒಂದು ಪತ್ತೇದಾರಿ ಅಂಶವನ್ನು ಹೊರಚೆಲ್ಲುತ್ತಿದ್ದರೂ, ಇಲ್ಲಿ ಮನುಷ್ಯನ ಸ್ವಭಾವವು ಪಡೆದುಕೊಳ್ಳುವ ವಿಲಕ್ಷಣ ಸ್ತರಗಳ ಕುರಿತು ಒಂದು ಸಣ್ಣ ಚರ್ಚೆಗೆ ಆಸ್ಪದಕೊಡುವಂತಿದೆ.

ಶ್ರೀಧರ ಅವರ ಹಲವು ಕತೆಗಳಲ್ಲಿರುವ ವಸ್ತು-ವಿಸ್ತಾರವು ಒಂದು ಕಾದಂಬರಿಗಾಗುವಷ್ಟು ಪರಿಕರಗಳನ್ನು ಹೊತ್ತುಕೊಂಡಿರುವುದು ನಮಗೆ ಅಲ್ಲಲ್ಲಿ ಕಾಣಸಿಗುತ್ತದೆ. ಆ ರೀತಿಯ ಕಥೆಗಳಲ್ಲೊಂದು ‘ಪಡಿಯಾ’. ಮಹಿಳೆಯರ ಮೇಲಿನ ಅತ್ಯಾಚಾರ, ರಾಜಕಾರಣಿಗಳ ಭ್ರಷ್ಟಾಚಾರ, ಕಂಟ್ರಾಕ್ಟುದಾರರ ಅಟ್ಟಹಾಸ ಇವು ಕತೆಯ ತುಂಬ ಕಂಪಿಸುತ್ತಿವೆ. ಅಷ್ಟೇ ಅಲ್ಲದೇ ಪೆನ್ ಡ್ರೈವ್‌ಕೂಡ ಸ್ಥಾನ ಪಡೆದಿದೆ. ಜನರೇ ಸೇರಿ ಅನ್ಯಾಯವೆಸಗಿದವರನ್ನು ಮುಗಿಸಿಬಿಡುತ್ತಾರೆ. ಐದು ಕೊಲೆಗಳು ಒಂದೇ ತಿಂಗಳಲ್ಲಿ ನಡೆಯುವುದು ಒಂದು ಸಿನೆಮಾ ನೋಡಿದ ಅನುಭವ ತರುತ್ತದೆ. ಚೆಲುವಿ ಎಂಬ ಮಹಿಳೆ ಡಿ.ಸಿ ಆಗುವ ಪ್ರಕ್ರಿಯೆ, ಪಡಿಯಾ ನ ತಾಯಿ ಮತ್ತು ಚೆಲುವಿ ಇಬ್ಬರೂ ಒಂದೇ ತರಹ ಕಾಣುವುದು, ಮತ್ತು ಪಡಿಯಾ ತನ್ನ ತಾಯಿಯ ಅತ್ಯಾಚಾರಕ್ಕೆ ಕಾರಣರಾದ ಎಲ್ಲರನ್ನೂ ಮುಗಿಸುವುದು ಇತ್ಯಾದಿ ವಿವರಗಳು ಸಿನಿಮೀಯ ವಿಸ್ತಾರವನ್ನು ಪಡೆದುಕೊಂಡಿದೆ.

ಇಲ್ಲಿಯ ಹಲವು ಕಥೆಗಳಲ್ಲಿ ಅತ್ಯಾಚಾರದ ಸಂಗತಿಗಳು ಮತ್ತೆ ಮತ್ತೆ ಕಥಾ ವಸ್ತುವಾಗಿ ಹೊಡಮರಳಿ ಬಂದಿವೆ. ಆ ಕೃತ್ಯವನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ನಡೆಸಿರುತ್ತಾರೆ. ಅವುಗಳಲ್ಲಿ ‘ದೀಪದ ಬೆಳಕಿನಲ್ಲಿ’ ಕತೆ ಕೂಡ ಹೌದು, ಇಲ್ಲಿ ಸುಳಿಚಕ್ರ ಎಂಬ ಕಾದಂಬರಿ ಬರೆದ ಸದಾಶಿವಂ ಎಂಬ ಲೇಖಕನ ಮೇಲೆ ಅಪವಾದ ಹೊರಿಸುವ ಸಾನಿಯಾ, ‘ನೀವು ಪ್ರಶಸ್ತಿ ಪುರಸ್ಕಾರ ತೆಗೆದುಕೊಳ್ಳಲೋಸುಗ ಹೆಣ್ಣು ಮಕ್ಕಳ ದೇಹದ ಅಂಗಾ೦ಗ ವರ್ಣಿಸುತ್ತೀರಿ, ಅತ್ಯಾಚಾರಿಗಳು ತಮ್ಮ ಕೆಲಸ ಮುಗಿಸಿ ಹೊರಡುವಾಗ ನಿಮ್ಮ ಕಾದಂಬರಿಯನ್ನು ನನ್ನ ಮೇಲೆ ಬಿಸಾಕಿ ಹೋದರು’ ಎಂದು ನೋವು ತೋಡಿಕೊಳ್ಳುತ್ತಾಳೆ. ಲೇಖಕರು ಮುಗ್ಧ ಓದುಗರನ್ನು ಪ್ರಚೋದಿಸುವಂತೆ ಬರೆಯಬಾರದು ಎಂಬ ಕಿವಿಮಾತನ್ನು ಕೂಡ ಕಥೆಗಾರರು ಇಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.

ಅಂತರ್ಜಾತಿ ವಿವಾಹ ಮತ್ತದರ ವಿರೋಧಕ್ಕೆ ಸಂಬ೦ಧಿಸಿದ ದಾರುಣವಾದೊಂದು ಕತೆ ‘ಜಾತಕ-ಜೋಳಿಗೆ’. ಜೋಯಿಸರ ಮಗಳು ಶರ್ಮಿಳಾ, ದಲಿತರ ಕೇರಿಯ ಹುಡುಗ ಅನಂತು ಇಬ್ಬರೂ ಪ್ರೀತಿಸಿ ಮನೆಯಲ್ಲಿ ಹೇಳಲಾಗದೇ ಓಡಿ ಹೋಗುವ ತಯಾರಿ ನಡೆಸಿರುತ್ತಾರೆ, ಆ ದಿನ ದಂಡೆಯಲ್ಲಿ ಕಾಯುತ್ತಿದ್ದ ಶರ್ಮಿಳಾ ನಿರಾಶಳಾಗಿ ಹಿಂತಿರುಗುವಾಗಲೇ ಜೋಯಿಸರಿಂದಲೇ ಅನಂತುವಿನ ಕೊಲೆಯಾದ ಸಂಗತಿ ತಿಳಿಯುತ್ತದೆ. ನಂತರ ಅವಳು ದಲಿತರ ಕೇರಿಗೇ ಹೋಗಿ ಅವರೊಂದಿಗೆ ಬದುಕುತ್ತಾಳೆ, ಕೊನೆಯಲ್ಲಿ ಅನಂತುವಿನ ತಾಯಿ ಶಂಕ್ರವ್ವನ ಮೇಲೆ ಜೋಯಿಸ ಎಸಗಿದ ಅನೈತಿಕ ದುರಾಸೆಯಿಂದಲೇ ಅನಂತು ಹುಟ್ಟಿದ್ದು ಎಂಬುದು ಬಹಿರಂಗವಾಗುತ್ತದೆ, ಹಾಗಾಗಿ ಸಂಬAಧದಲ್ಲಿ ಅಣ್ಣ-ತಂಗಿಯರ ಮದುವೆಯನ್ನು ತಪ್ಪಿಸಲು ಆ ಜೋಯಿಸ ಮಗನನ್ನೇ ಹತ್ಯೆಗೈಯುವ ದುರಾಲೋಚನೆಗೆ ಮುನ್ನುಡಿ ಬರೆದಿರುವುದು ಕಾಣಿಸುತ್ತದೆ. ಜಾತಿ ತಾರತಮ್ಯಗಳು ಹೇಗೆ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಎಂಬ ರೀತಿಯಲ್ಲಿ ತನ್ನ ಕರಾಳ ಹಸ್ತ ಚಾಚಿವೆ ಎಂಬುದನ್ನು ತಿಳಿಸುವ ಈ ಕತೆ ವಿಷಾದದಲ್ಲೇ ಮೀಯುತ್ತಿದೆ.

ಗ್ರಾಮೀಣ ಭಾಗದ ಗೌಡರು ತನ್ನ ಮಗನನ್ನು ಎಂಜಿನಿಯರಿAಗ್ ಓದಿಸಿ ಪಟ್ಟಣಕ್ಕೆ ಅಟ್ಟುವುದು ಈಗ ಎಲ್ಲೆಡೆ ನಡೆಯುತ್ತಿರುವ ಸಂಗತಿ. ಆದರೆ ಇಲ್ಲಿಯ ‘ಮನೆ ಮಾರಾಟಕ್ಕಿದೆ’ ಕತೆಯಲ್ಲಿ ಇನ್ನೂ ಹೆಚ್ಚಿನ ದುರಾಸೆಗೆ ಬೀಳುವ ಮಗನು ಒಲ್ಲದ ತನ್ನ ತಂದೆ-ತಾಯಿಗಳನ್ನೂ ಪಟ್ಟಣಕ್ಕೆ ಕರೆತಂದು, ಹಿರಿಯರು ಬಾಳಿ ಬದುಕಿದ ಹಳ್ಳಿಯ ಮನೆಯನ್ನು ಒತ್ತಾಯಪೂರ್ವಕ ಮಾರಾಟಕ್ಕಿಡುತ್ತಾನೆ. ಅದರಿಂದ ನೊಂದ ತಂದೆ-ತಾಯಿಗಳು ಭಾವನಾತ್ಮಕ ಸಂಬ೦ಧ ಕಳೆದುಹೋಗುವ ವಿಚಿತ್ರ ತಳಮಳವನ್ನು ಅನುಭವಿಸುತ್ತಾರೆ. ನೆಲೆ ಕಳೆದುಕೊಳ್ಳುವ ಅವರ ಅಂತರ೦ಗ ಅನಾಥ ಪ್ರಜ್ಞೆಗೆ ವಾಲುತ್ತದೆ. ಇದನ್ನು ತಿಳಿದ ಆ ಊರಿನ ಜನರೇ ಒಟ್ಟಾಗಿ ಮಾರಾಟಕ್ಕೆ ತಡೆಯೊಡ್ಡಿ ಯಶಸ್ವಿಯಾಗುತ್ತಾರೆ. ಇಲ್ಲಿ ಊರ ಗೌಡರ ಮೇಲಿರುವ ಗೌರವದ ಭಾವ ಹಾಗೂ ಊರಿನವರೆಲ್ಲರೂ ಒಂದೇ ಕುಟುಂಬ ಎಂಬ ನಂಬಿಕೆ ಕತೆಯನ್ನು ಆಶಾದಾಯಕ ಹಂತದಲ್ಲಿ ಸೌಹಾರ್ದತೆಯನ್ನು ಸಾರುತ್ತದೆ.

ಇಲ್ಲಿಯ ಕಥೆಗಳಲ್ಲಿ ಅಲ್ಲಲ್ಲಿ ನಾಟಕೀಯ ಅಂಶಗಳು ಹೆಚ್ಚಾಗಿ ಬಂದಿವೆ. ಯಾಕೆಂದರೆ ಕತೆಗಾರರು ದೃಶ್ಯ ಮಾಧ್ಯಮಕ್ಕೆ ಸೂಕ್ತವಾಗುವ ಘಟನೆಗಳನ್ನು ಪೋಣಿಸಿ ಇಲ್ಲಿಯ ಕತೆಗಳ ಪಾತ್ರಪೋಷಣೆ ಮಾಡಿದ್ದಾರೆ. ಸಂಭಾಷಣೆಗಳಲ್ಲೇ ಕಟ್ಟಿಕೊಳ್ಳುವ ಶ್ರೀದರ ಗಸ್ತಿಯವರ ಕತೆಗಳು ಅಲ್ಲಲ್ಲಿ ಮೌನದ ಅನುಸಂಧಾನವನ್ನು ಬಯಸುತ್ತಿದೆ. ಕತೆಯೊಳಗಿನ ಹೇಳಲಾರದ ಅಂಶಗಳನ್ನು ಗ್ರಹಿಸಲು ಓದುಗರಿಗೆ ಒಂದು ಸ್ಪೇಸ್ ಒದಗಿಸುವ ನಿಟ್ಟಿನಲ್ಲಿ ಇಲ್ಲಿಯ ಕತೆಗಳು ತುಡಿದರೆ, ಬೇರೆ ಹಂತವನ್ನೇ ತಲುಪುವ ಸಾಧ್ಯತೆ ಈ ಎಲ್ಲ ಕತೆಗಳಿಗೂ ಇವೆ. ವಸ್ತುವನ್ನು ನಿರ್ವಹಿಸುವ ತಂತ್ರಗಳು ಶ್ರೀಧರ ಅವರಿಗೆ ಈಗಾಗಲೇ ಒಲಿದಿದೆ. ಇಲ್ಲಿಯ ಕತೆಗಳು ನಮ್ಮ ಸುತ್ತಮುತ್ತಲೇ ನಡೆಯುತ್ತಿರುವ ಸಹಜ ಭಾವವನ್ನು ಹುಟ್ಟಿಸುತ್ತಿವೆ, ಮತ್ತು ಇಲ್ಲಿಯ ಎಲ್ಲ ಪಾತ್ರಗಳು ಸತ್ಯದ ತಲೆಯ ಮೇಲೆ ಹೊಡೆದಂತೆ ನಮ್ಮ ಕಣ್ಣೆದುರೇ ಓಡಾಡಿಕೊಂಡಿವೆ ಅನಿಸುತ್ತದೆ. ಸಮಾನತೆಯನ್ನು ಆಶಯವಾಗಿಟ್ಟುಕೊಂಡ ಇಂಥ ಕತೆಗಳು ಇನ್ನೂ ಹೆಚ್ಚು ಹೆಚ್ಚು ಇವರಿಂದ ಪಡಿಮೂಡಲಿ. ಕಥೆಗಾರ ಶ್ರೀಧರ ಗಸ್ತಿಯವರಿಗೆ ಈ ಕಥಾ ಪಯಣಕ್ಕೆ ಅಕ್ಕರೆ ತುಂಬಿ ಶುಭಕೋರುವೆ.

‍ಲೇಖಕರು Admin

21 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading