-ಸುಕುಮಾರ್ ಎಸ್ ರಘುರಾಂ
ಅಸ್ತಿತ್ವ
ಬ್ರಾಹ್ಮೀ ಮುಹೂರ್ತದ
ಕತ್ತಲಿನಲ್ಲಿ
ಬೆಳಕ ಹುಡುಕುತ್ತಿರುವ
ನನ್ನ ಅಂತರಾಳ
ನನ್ನದಲ್ಲದ ಗೋತ್ರದ
ಅಪ್ಪನಿಗೆ
ಮತ್ತೊಮ್ಮೆ
ಎಳ್ಳು ನೀರು ಬಿಟ್ಟು
ಸ್ತಬ್ಧವಾಯಿತು
ಕಂಡರಿಯದ ಅಜ್ಜ
ಕೇಳರಿಯದ ಮುತ್ತಜ್ಜ
ನನ್ನ ನೆತ್ತರಲ್ಲದ
ನೆತ್ತರಿಗೆ
ಮುಕ್ತಿ ಬಯಸುವ
ನನ್ನಾತ್ಮ
ನನ್ನ ಅಸ್ತಿತ್ವದ ಪ್ರಶ್ನೆಯನ್ನು
ಇನ್ನೊಮ್ಮೆ ಕೆದಕಿ
ಮೂಕವಾಯಿತು
ಮತ್ತದೇ ಚೈತ್ರ
ಮತ್ತೆ ವಸಂತ
ಸ್ನಿಗ್ಧ ಸೌಂದರ್ಯ
ಮುಗ್ಧ ಮನಸಿನ
ನನ್ನ ರೂಪ
ಕನ್ನಡಿ ನೋಡಲು ಹೆದರಿ
ಯಾರಾದರೇನು
ಅಹಂ ಬ್ರಹ್ಮಾಸ್ಮಿಯೆಂದು
ನಿಟ್ಟುಸಿರಿಟ್ಟಿತು






0 Comments