ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಿಸಿಕೊಂಡು ಹೋಗುವ ಪುಸ್ತಕ..

ವಿಕ್ರಮ್ ಬಿ ಕೆ ಅವರ ಅನುಭವ ಕಥನ ‘ಬೆಲ್ ವೆಲ್’

ಈ ಕೃತಿಯನ್ನು ‘ತ್ರಿಲೋಕ ಬರಹ’ ಪ್ರಕಾಶನ ಪ್ರಕಟಿಸಿದೆ.

ಈ ಕೃತಿಯ ಕುರಿತ ರತೀಶ್ ಬಿ ಆರ್ ಅವರು ಬರೆದ ಬರಹ ಇಲ್ಲಿದೆ.

-ರತೀಶ್ ಬಿ ಆರ್

ನೀವು ಯಾಕೆ ಇಷ್ಟೊಂದು ದುಡುಕಿದಿರಿ? ಆತ್ಮಕತೆಯನ್ನು ಬರೆಯುವ ಅವಸರ ನಿಮಗೇನಿತ್ತು? ನೀವೇನೋ ಅನುಭವ ಕಥನ ಎಂದು ಹೇಳಿದ್ದೀರಿ, ಆದರೆ ಇದು ಅನುಭವ ಕಥನವಲ್ಲ, ಆತ್ಮಕತೆಯೂ ಅಲ್ಲ, ಆತ್ಮರತಿ ಅಷ್ಟೇ! ಅರವತ್ತು ದಾಟಿದವರು, ನೂರೆಂಟು ಸಾಧನೆ ಮಾಡಿದವರು ಇಷ್ಟೊಂದು ಅವಸರಕ್ಕೆ ಬಿದ್ದು ಬರೆದುಕೊಳ್ಳುವುದನ್ನು ನಾನು ನೋಡಿಲ್ಲ. ನಲವತ್ತೂ ಮುಟ್ಟಿರದ ನಿಮಗೇನು ಅವಸರವಿತ್ತು? ನಾವಿಬ್ಬರೇ ಗುಬ್ಬಿ, ಕೇಳುಮನಸೇ ಇಂದಾಗಿ ನಾನು ನಿಮ್ಮನ್ನು ತುಂಬಾ ಸೂಕ್ಷ್ಮ ಹಾಗೂ ಸಮಾಜದ ಬಗ್ಗೆ ಅಷ್ಟೇ ಜವಾಬ್ದಾರಿ ಇರುವ ವ್ಯಕ್ತಿ ಅಂದುಕೊಂಡಿದ್ದೆ. ಕನ್ನಡ ಸಾಹಿತ್ಯದಲ್ಲಿ ಕನ್ನಡದ ಯುವಕರು ಏನೇನೆಲ್ಲಾ ಸಾಧಿಸಬೇಕಿದೆ ಎಂದು ಗಂಟೆಗಟ್ಟಲೆ ನಿಮ್ಮ ಜೊತೆ ಮಾತನಾಡಿದ್ದೆ. ಅವೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣು ಕಿವುಚಿದಂತಾಗಿದೆ ಎಂದು ನನಗೆ ಬೇಸರವಾಗಿದೆ. ಅವಸರದಿಂದ ನೀವು ಈ ಪುಸ್ತಕ ಬರೆದು, ಆತ್ಮರತಿಯ ಸಾಹಿತ್ಯಕ್ಕೆ ಮುನ್ನುಡಿ ಹಾಕಿದ್ದೀರಿ. ನಿಮ್ಮಿಂದ ಇದನ್ನು ಬಯಸಿರಲಿಲ್ಲ!… ಎಂದೆಲ್ಲಾ ನಿಮಗೆ ಬೈದು ಬರೆಯಬೇಕು ಅಂದುಕೊಂಡಿದ್ದೆ. ನಿಮ್ಮ ಪುಸ್ತಕ ಬಿಡುಗಡೆಗೆ ಬಂದು, ಹೀಗೆ ಒಂದೆರಡು ಪುಟ ತಿರುವಿ ನೋಡುತ್ತಿದ್ದಾಗ, ನಿಮ್ಮ ಜರ್ಮನಿ ಪ್ರಯಾಣದ ಎರಡು ಸಾಲು, ಆಫೀಸಿನಿಂದ ಈಜಿಪ್ಟ್ ಪ್ರಯಾಣಕ್ಕೆ ಕಳಿಸಿದ್ದ ಎರಡು ಸಾಲುಗಳು ಕಣ್ಣಿಗೆ ಬಿದ್ದವು. ಅಯ್ಯೋ, ತನ್ನ ಬಗ್ಗೆಯೇ ಬರೆದುಕೊಂಡ ಕಥನವೇ ಎಂದು ಅನಿಸಿಬಿಟ್ಟಿತ್ತು. ನಿಮ್ಮ ಪುಸ್ತಕ ಬಿಡುಗಡೆಯಿಂದೆ ಮರಳಿ ಬರುತ್ತಿದ್ದವನು ಮೇಲೆ ಹೇಳಿದೆಂತೆಲ್ಲಾ ವಿಕ್ರಮ್‌ಗೆ ಬರೆಯಬೇಕು, ನನ್ನ ಸಿಟ್ಟನ್ನೆಲ್ಲಾ ಹೊರಗೆ ಹಾಕಿಬಿಡಬೇಕು ಅಂದುಕೊಂಡಿದ್ದೆ. ಮನೆಗೆ ಬಂದವನಿಗೆ ಏನನ್ನಿಸಿತೋ, ಇಡೀ ಪುಸ್ತಕವನ್ನು ಓದದೇ ಒಂದೆರಡು ಸಾಲು ಓದಿ ನಾನೇಕೆ ಈ ತೀರ್ಮಾನ ಮಾಡುತ್ತಿರುವೆ ಅನಿಸಿತು. ಓದಲು ಹಿಡಿದೆ…

ಒಂದೆರಡು ಚಾಪ್ಟರ್ ಓದುತ್ತಿದ್ದಂತೆ, ಇದು ಯಾವ ಬಗೆಯ ಪ್ರಯತ್ನ ಎಂದು ತಿಳಿದು ಹೋಯಿತು. ವಾವ್ ಅನಿಸಿತು. ಕನ್ನಡದ ಮಟ್ಟಿಗೆ ಇದು ನಿಜವಾಗಿಯೂ ಹೊಚ್ಚಹೊಸ ಪ್ರಯತ್ನ. ಇಂತಹ ಪ್ರಯತ್ನಗಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಆ ಪ್ರೀತಿಯನ್ನೆಲ್ಲಾ ಹೊರಹಾಕಿ ಉದ್ದವಾದ ಈ ಪತ್ರ ಬರೆಯುತ್ತಿರುವೆ. ತಡೆದುಕೊಂಡು ಬಿಡಿ. ಮೊದಲನೆಯದಾಗಿ ಈ ಅನುಭವ ಕಥನ ಅದ್ಭುತ! ನಿಮ್ಮದೇ ಬದುಕಿನ ಸನ್ನಿವೇಶಗಳನ್ನು ಹೇಳುವಲ್ಲಿ ನಿಮ್ಮ ಕತೆ ಕಟ್ಟುವ ಶೈಲಿ ನಿಜವಾಗಿಯೂ ಚೆನ್ನಾಗಿದೆ. ಜೊತೆಗೆ ಜೀವನಪಾಠಗಳನ್ನು ಸೇರಿಸಿರುವುದು ತೂಕವನ್ನು ಹೆಚ್ಚಿಸಿದೆ. ಇದು ಕತೆಯೂ ಹೌದು, ವ್ಯಕ್ತಿತ್ವ ವಿಕಸನದ ಪುಸ್ತಕವೂ ಹೌದು, ಭಾವನೆಗಳನ್ನು ಕೆರಳಿಸುವ ಸನ್ನಿವೇಶಗಳ ಕಟ್ಟೂ ಹೌದು! ಪುಟಗಟ್ಟಲೇ ವ್ಯಕ್ತಿತ್ವ ವಿಕಸನದ ಬರಹಗಳನ್ನು ಅದರ ಹಾಳೆಗಳಷ್ಟೇ ಒಣ ಒಣವಾಗಿ ಬರೆಯುವ ಬದಲು, ಹೀಗೆ ತನ್ನದೇ ಬದುಕಿನ ಕತೆ ಹೇಳುತ್ತಾ, ನಿಮ್ಮ ಬದುಕನ್ನು ಸಂಭ್ರಮಿಸಿ ಎಂದೆನ್ನುತ್ತಾ, ಹುರಿದುಂಬಿಸುವ ಪರಿ ನಿಜವಾಗಿಯೂ ಪರಿಣಾಮಕಾರಿಯಾದದ್ದು.

ಸಂತೆಯಲ್ಲಿ ನಿಲ್ಲಿ ಇಂಗ್ಲಿಷ್ ಕಲಿಯಿರಿ ಎನ್ನುತ್ತಾ ನಿಧಾನವಾಗಿ ಓದುಗನನ್ನು ಒಳಗೆ ಎಳೆದುಕೊಳ್ಳುವ ನೀವು, ಪಾರ್ಲೆಜಿ, ಸಾಲುಮರಗಳ ಕತೆ ಹೇಳುತ್ತಾ ನಮ್ಮನ್ನು ಭಾವುಕರನ್ನಾಗಿಸಿ, ಡ್ಯಾನ್ಸ್ ರಾಜ ಡ್ಯಾನ್ಸ್ ಹೊತ್ತಿಗೆ “How to be effective in work and life, How to win?” ಹೀಗೆ ಹಲವಾರು “How to…” ಹೆಸರುಗಳನ್ನು ಹೊತ್ತ ವ್ಯಕ್ತಿತ್ವ ವಿಕಸನದ ಪುಸ್ತಕಗಳು ಹೇಳುವ ಪಾಠಗಳನ್ನು ಓದುಗನಿಗೆ ಅರಿವಾಗದಂತೆ ಅವನೆದೆಗೆ ಇಳಿಸಿದ್ದೀರಿ. ಅದು ಈ ಪುಸ್ತಕದ ಎಲ್ಲಾ ಚಾಪ್ಟರ್‌ಗಳಲ್ಲೂ ಸಿಗುವುದು ವಿಶೇಷ. ಸಮಾಜದ ಬಗ್ಗೆ ಕಳಕಳಿಯನ್ನು, ದುಡಿಮೆಯ ಮಹತ್ವವನ್ನು ನೀವು ಎತ್ತಿ ಹಿಡಿದಿದ್ದೀರಿ. ನನಗೆ ನಿಜವಾಗಿಯೂ ಹಿಡಿಸಿದ್ದು, ನೀವು ಎಲ್ಲಿಯೂ ಪವಾಡಗಳಾಗುತ್ತವೇ ಎಂದಿಲ್ಲ. ದುಡಿಯಿರಿ ಎಂದಿದ್ದೀರಿ, ನಿಮ್ಮ ಪ್ರಾಮಾಣಿಕ ಮಾತುಗಳಿಂದ ದುಡಿಮೆಯೊಂದೇ ದಾರಿ ಎಂದು ಸಾರಿದ್ದೀರಿ. ಅದು ನನಗೆ ಹೆಚ್ಚು ಹಿಡಿಸಿದ್ದು. ವಲಸೆ ಬಗ್ಗೆ ಮಾತನಾಡುವಾಗ, ನಮ್ಮ ಕರ್ನಾಟಕದಲ್ಲಿ ಆಗುತ್ತಿರುವ ಅತಿಯಾದ ವಲಸೆಯ ಬಗ್ಗೆ ಮಾತನಾಡಿದ್ದೀರಿ, ತಿವಿದಿದ್ದೀರಿ. ವ್ಯಕ್ತಿತ್ವ ವಿಕಸನದ ಪುಸ್ತಕಗಳು ಹೆಚ್ಚಾಗಿ ತನ್ನಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾತ್ರ ಹೇಳುತ್ತವೆ, ಆದರಿಲ್ಲಿ ನೀವು ವಲಸೆ, ನಿರಾಳ, ಸಮಾನತೆಯ ಸೀಮಂತ, ಹೀಗೆ ಹಲವಾರು ಚಾಪ್ಟರ್‌ಗಳಲ್ಲಿ ತಾನಷ್ಟೇ ಅಲ್ಲ ಸಮಾಜದ ಬಗ್ಗೆಯೂ ಏನೆಲ್ಲಾ ಚಿಂತಿಸಬೇಕು ಎಂದು ನಯವಾಗಿ ಹೇಳಿರುವುದು ಸೊಗಸಾಗಿದೆ. ಒಬ್ಬ ಬರಹಗಾರ ಮಾಡಬೇಕಿರುವುದು ಇದನ್ನೇ ತಾನೇ?

ವಿಕ್ರಮ್, ನಿಮ್ಮ ಪುಸ್ತಕದ ಪುಟಗಳನ್ನು ತಿರುವುತ್ತಾ ಮುಂದೆ ಹೋದಂತೆಲ್ಲಾ ನನ್ನ ಬದುಕಿನ ಹಿಂದಿನ ಪುಟಗಳು ತೆರೆದುಕೊಂಡವು! ನಾವಿಬ್ಬರೂ ಹೆಚ್ಚುಕಡಿಮೆ ಒಂದೇ ವಯಸ್ಸಿನವರಾದ್ದರಿಂದಲೋ, ಹಳ್ಳಿಯಿಂದ ಪೇಟೆಗೆ ವಲಸೆ ಬಂದದ್ದರಿಂದಲೋ, ಕುಟುಂಬದ ಆರ್ಥಿಕ ಸ್ಥಿತಿಗತಿಗಳು ಹೆಚ್ಚುಕಡಿಮೆ ಹೋಲುವುದರಿಂದಲೋ, ಹಳ್ಳಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ಕೊನೆಗೆ ಇಂಜಿನಿಯರಿಂಗ್ ಮಾಡಿ, ದೇಶ ವಿದೇಶ ತಿರುಗಿದ್ದರಿಂದಲೋ, ನಿಮಗಾದ ಹೆಚ್ಚಿನ ಅನುಭವಗಳು ನನ್ನಲ್ಲಿಯೂ ಮಾರ್ದನಿಸುತ್ತವೆ. ಮಲೆನಾಡಿನ ಜಡಿಮಳೆಗಾಲದಲ್ಲಿ ನಾನು ಹುಟ್ಟಿದೆನಂತೆ, ಸೂರಿನಿಂದ ತೊಟ್ಟಿಕ್ಕುವ ನೀರನ್ನು ನಿಲ್ಲಿಸಲು, ಬಾಣಂತಿ ಮಲಗಿದ್ದ ಜಾಗದಲ್ಲಿ ನೀರು ಚಿಮ್ಮದಿರುವಂತೆ ತಡೆಯಲು, ಸೂರಿನ ತೂತುಗಳಿಗೆಲ್ಲ ಸೋಪಿನ ಕವರ್‌ಗಳು, ಪ್ಲಾಸ್ಟಿಕ್ ತೊಟ್ಟೆಗಳನ್ನು ಸಿಕ್ಕಿಸಿದ್ದರಂತೆ. ಇದೊಂದು ಅಂದಿನ ಚಿತ್ರಣವಷ್ಟೇ. ಇಂದು ಅದೇ ಊರಿನಲ್ಲಿ ಉಪ್ಪರಿಗೆಯ ಮನೆ ಇದೆ. ಈ ಹಂತಕ್ಕೆ ಬೆಳೆಯಲು ಸಾಧ್ಯವಾದದ್ದು, ಇಂದಿಗೂ ಈ ಬೆಳವಣಿಗೆಯ ನಾಯಕ ನಾಯಕಿ ಆಗಿರುವ ಅಪ್ಪ-ಅಮ್ಮನಿಗೆ ಬದುಕಿನ ಮೇಲಿದ್ದ ಗಟ್ಟಿನಂಬಿಕೆಯಿಂದ, ದುಡಿಮೆಯಿಂದ, ತಾವು ಓದದಿದ್ದರೂ ಅವರು ಮಕ್ಕಳ ಓದಿನ ಮೇಲೆ ಇಟ್ಟಿದ್ದ ಅಪಾರ ನಂಬಿಕೆಯಿಂದ. ನಿಮ್ಮ ಕಥನವನ್ನು ಓದುವಾಗ, ನನಗಿದೆಲ್ಲಾ ಮೆಲುಕು ಹಾಕುವಂತಾಗಿ, ನಮ್ಮ ಸುಂದರ ಬದುಕಿಗೆ ನಾಂದಿ ಹಾಕಿಕೊಟ್ಟ ತಂದೆ ತಾಯಿಯ ಮೇಲೆ ಪ್ರೀತಿ ಗೌರವ ದುಪ್ಪಟ್ಟಾಗುವಂತೆ ಮಾಡಿದೆ. ಒಂದು ಪುಸ್ತಕ ಮಾಡಬೇಕಾದ ಕೆಲಸ ಇದೇ ತಾನೇ?

‘ಮಗು ಹುಟ್ಟಿತು’ ಚಾಪ್ಟರ್ ನನ್ನನ್ನು ಕದಲಿಸಿದೆ. ತಿಂಗಳುಗಟ್ಟಲೆ ಮಕ್ಕಳನ್ನು ಆಸ್ಪತ್ರೆಯ ಐಸಿಯುಗಳಲ್ಲಿ ಹಾಕಿಕೊಂಡು ನರಳುವ ತಂದೆ-ತಾಯಂದಿರ ಬಗ್ಗೆ ನನಗೆ ಇನ್ನಿಲ್ಲದ ಕರುಣೆಯಿದೆ, ಕನಿಕರವಿದೆ. ಇದರ ಅನುಭವ ಕೂಡ ನನಗೆ ಚೆನ್ನಾಗಿದೆ. ಎಲ್ಲವೂ ಒಳ್ಳೆಯದಾಗಿ ಹೊರಬಂದಾಗ ನಮಗೆ ಆಗುವ ನಿರಾಳತೆ ಇದೆಯಲ್ಲಾ ಅದನ್ನು ಯಾವ ಬಗೆಯಲ್ಲೂ ಬಣ್ಣಿಸಲು ಆಗುವುದಿಲ್ಲ. ಇಡೀ ಸನ್ನಿವೇಶ ನಮ್ಮನ್ನು ಕುಗ್ಗಿಸುತ್ತದೆ. ಒಂದು ವೇಳೆ ಅದರಿಂದ ಪಾರಾಗಿ ಹೊರಬಂದರೆ ನಮಗೆ ಬದುಕಿನ ಮೇಲೆ ಹುಟ್ಟುವ ಒಂದು ನಂಬಿಕೆಯನ್ನು ಮುಂದೆ ಯಾವ ಸುಂಟರಗಾಳಿಯು ಅಲುಗಾಡಿಸುವುದು ಕಷ್ಟ. ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಆಗಿರುವ ವಿಜ್ಞಾನದ ಹೊಸಬೆಳವಣಿಗೆಯ ಮೇಲೆ ನನಗೆ ಅಪಾರ ಗೌರವ ಮೂಡಿದೆ. ನನ್ನ ಅನುಭವದಲ್ಲಂತೂ ಅದು ನನಗೆ ಹಲವನ್ನು ದಕ್ಕಿಸಿಕೊಟ್ಟಿದೆ. ನೀವಂದಂತೆ, ಮಕ್ಕಳಿಗೆ ಯಾವಾಗಲೂ ತೊಂದರೆ ಆಗಬಾರದು. ಒಂದು ವೇಳೆ ಆದರೆ, ಅದನ್ನು ಸಹಿಸಿಕೊಳ್ಳಲು ಎಷ್ಟು ಗುಂಡಿಗೆ ಇದ್ದರೂ ಸಾಲದು ನಮಗೆ.

ಮೊದಲೇ ಹೇಳಿದಂತೆ, ಹೆಚ್ಚಿನ ಚಾಪ್ಟರ್‌ಗಳು ನನ್ನಲ್ಲಿ ಮಾರ್ದನಿಸಿವೆ. ದೇವರು ಕೊಟ್ಟ ತಾಯಿ ಚಾಪ್ಟರ್‌ನಲ್ಲಿ ಜೋಗತಿ ಅವರ ಬಗ್ಗೆ ಸ್ವಲ್ಪ ಹೆಚ್ಚು ತಿಳಿಯುವಂತಾಯಿತು. ಹಿಜಡಾಗಳ ಸುತ್ತಾ ನನಗಿರುವ ಅನುಭವ ಅಷ್ಟೇನು ಒಳ್ಳೆಯದಾಗಿಲ್ಲ. ಟ್ರೇನಿನಲ್ಲಿ, ಬೀದಿಯಲ್ಲಿ, ಹಲವಾರು ಬಾರಿ ಸುತ್ತುವರೆದು ದುಡ್ಡು ಕಿತ್ತುಕೊಂಡು ಹೋದ ಅನುಭವವಗಳೇ ಇರುವುದು. ಆದರೂ ನನಗೆ ಅವರ ಮೇಲೆ ಯಾವುದೇ ಬೇಸರವಿಲ್ಲ. ಆದರೆ ಒಂದು ಸಂದರ್ಭದಲ್ಲಿ, ಓಡಾಡುವ ಜನರಿಗೆ ತೊಂದರೆ ಕೊಟ್ಟು ದುಡ್ಡುಕೀಳುವ ದಂಧೆಯಲ್ಲೂ ಪೊಲೀಸರಿಗೆ ಒಂದು ಮಾಮೂಲಿ ಹೋಗುತ್ತದಂತೆ ಎಂದು ಕೇಳಿ ನಮ್ಮ ಪೊಲೀಸ್ ವ್ಯವಸ್ಥೆಯ ಮೇಲೆ ಕೆಟ್ಟ ಕೋಪ ಬಂದಿದೆ. ಈಗಲೂ ಹಿಜಡಾಗಳು ಯಾರದದ್ದಾರೂ ದುಡ್ಡುಕೀಳುತ್ತಿದ್ದರೆ ನನಗೆ ಕೋಪ ಬರುವುದು ಪೊಲೀಸ್ ವ್ಯವಸ್ಥೆಯ ಮೇಲೆಯೇ. ಆದರೆ ಈ ವಿಷಯದ ಮೇಲೆ ನಾನು ಹೆಚ್ಚು ಯೋಚಿಸಲು ಹೋಗಿಲ್ಲ, ತೊಡಗಿಯೂ ಕೊಂಡಿಲ್ಲ.

ಒಟ್ಟಾರೆಯಾಗಿ, ಒಳ್ಳೆಯ ಪುಸ್ತಕ ವಿಕ್ರಮ್. ಈ ವಯಸ್ಸಿಗೆ ಆತ್ಮಕತೆಯ ತರಹದ್ದು ಬೇಕಾ ಎಂದು ನಿಮಗೆ ಬೈದುಕೊಂಡಿದ್ದವನಿಗೆ, ನಿಮ್ಮಂತಹ ವ್ಯಕ್ತಿಗಳು ಪ್ರತಿ ಹತ್ತು ವರ್ಷಕ್ಕೊಮ್ಮೆ ಆತ್ಮಕತೆಯ ಅಥವಾ ಅನುಭವ ಕಥನಗಳನ್ನು ಹೊರತರಬೇಕು ಅನಿಸಿತು. ಜಗತ್ತನ್ನು ನೀವು ನೋಡುವ ಬಗೆಯೇ ಬೇರೆ ಆಗಿದೆ. ಹಾಗೆ ನೋಡುವುದೂ ಈ ಹೊತ್ತಿಗೆ ಬೇಕಾಗಿದೆ. ಹಾಗಾಗಿ, ಪ್ರತಿ ಹತ್ತು ವರ್ಷದಲ್ಲಿ ನಿಮ್ಮ ಅರಿವು, ಅನುಭವದಲ್ಲೂ ಒಂದಷ್ಟು ಬದಲಾವಣೆ, ಬೆಳವಣಿಗೆ ಆಗುತ್ತದೆ. ಅದನ್ನೂ ಬರೆದುಬಿಡಿ. ಎಷ್ಟು ಉದ್ದ ಪತ್ರ ಬರೆದೆನೋ ಗೊತ್ತಿಲ್ಲ. ಇಲ್ಲಿಯವರೆಗೂ ಓದಿದ್ದರೆ ಒಳ್ಳೆಯದು, ಇಲ್ಲವಾದರೂ ಪರವಾಗಿಲ್ಲ, ನಾನು ಹೇಳಬೇಕು ಅಂದುಕೊಂಡದ್ದನ್ನು ಹೇಳಿ, ನಿರಾಳನಾಗಿದ್ದೇನೆ. ನೀವೇ ಹೇಳಿದಂತೆ ನಾನು ಬದುಕನ್ನು ಸಂಭ್ರಮಿಸುವವನು. ನಿಮ್ಮ ಪುಸ್ತಕದ ಓದಿನಿಂದಲೂ ಕಲಿತು, ಸಂಭ್ರಮಿಸುತ್ತಿದ್ದೇನೆ. ಕಡೆಯದಾಗಿ ನನಗಿಷ್ಟವಾದ ನಿಮ್ಮ ಸಾಲನ್ನು ಹೇಳಿ ಮುಗಿಸುತ್ತಿದ್ದೇನೆ. ಇಲ್ಲಿಯವರೆಗೂ ಓದುತ್ತಿದ್ದರೆ ನೀವೂ ನಿಟ್ಟುಸಿರು ಬಿಟ್ಟು ನಿರಾಳರಾಗಬಹುದು.

ಬದುಕು ಹುಟ್ಟು ಸಾವುಗಳ ತುದಿಯಲ್ಲಿಲ್ಲ. ನಡುವಿನ ದಾರಿಯಲ್ಲಿದೆ. ಬದುಕನ್ನು ಸಂಭ್ರಮಿಸೋಣ.

‍ಲೇಖಕರು Admin

20 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading