ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿರಳೆ-ತರಲೆ(ಳೆ) ಮತ್ತು ಫ್ರೆಂಚ್ ಸಾಹಿತ್ಯ!

-ಎಂ ಆರ್ ಕಮಲ

ಈ ಪದದ ಬಳಕೆಯೇ ನನಗಿಷ್ಟವಿಲ್ಲ. ಊರಿನಲ್ಲಿದ್ದಾಗ ಅಮ್ಮ ಇದನ್ನು ತೊಂಡಂಗಿ’ ಎಂದು ಕರೆಯುತ್ತಿದ್ದಳು. ಯಾರಾದರೂ ಕೆಟ್ಟ ಮುಖ ಹಾಕಿಕೊಂಡು ಕುಳಿತಿದ್ದರೆತೊಂಡಂಗಿ ಮುಖ’ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದರು. ಈ ತೊಂಡಂಗಿ’ಗಳು ಹಗಲು ಹೊತ್ತಿನಲ್ಲಿ ಕಂಡಿದ್ದು ಕಮ್ಮಿ. ರಾತ್ರಿಯಾದರೆ ಅಡುಗೆಮನೆಯಿಂದ ಹಾದು ಬಚ್ಚಲಿಗೆ ಹೋಗಲು ಭಯವಾಗುವಂತೆ ಬಾಗಿಲ ಮೇಲೆ ಕುಳಿತಿರುತ್ತಿದ್ದವು.

ನನ್ನ ಮಗಳಿಗೂ ಅಷ್ಟೇ. ಆದರೆ ಸೂಕ್ಷ್ಮ ಜೀವಶಾಸ್ತ್ರ(Micro Biology) ತೆಗೆದುಕೊಂಡಿದ್ದ ಅವಳಿಗೆ ಈ ಜಿರಲೆಯನ್ನು ಡಿಸೆಕ್ಟ್ ಮಾಡುವುದು ಅನಿವಾರ್ಯವಾದಾಗ ಜಗತ್ತೇ ಬಿದ್ದು ಹೋದವಳಂತೆ ಆಡಿದ್ದಳು!ಭಯ, ಹಾಗೆಂದರೆ?’ ಎಂಬ ಮಯೂರ ಚಿತ್ರದ ಡೈಲಾಗ್ ಹೇಳಿಕೊಂಡು ಓಡಾಡುವ ನಾವಿಬ್ಬರೂ ಈಗಲೂ ಮನೆಯಲ್ಲೊಂದು ಜಿರಳೆಯನ್ನು ಕಂಡರೆ ನಡುಗಿ, ಹತ್ತು ಮನೆಗಳಿಗೆ ಕೇಳುವ ಹಾಗೆ ಕೂಗುತ್ತೇವೆ. ಮಂಚದ ಮೇಲೆ ಹತ್ತಿ ತಿಲ್ಲಾನವಾಡುತ್ತೇವೆ. ಮೆಟ್ಟಿಲನ್ನು ಹತ್ತುವಾಗ `ಮಂಡಿ ನೋವು’ ಎಂದು ಮೇಲೆ ಹೋಗದೆ ಕುಳಿತುಕೊಳ್ಳುವ ನಾನು ಜಿರಳೆಯನ್ನು ಕಂಡಾಕ್ಷಣ ಹಾರಿ ಮಂಚದ ಮೇಲೆ ನಿಲ್ಲುವುದು ಹೇಗೆ ಎಂಬ ಪ್ರಶ್ನೆಗೆ ಗಂಡನಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ನಾನು ಹೈ ಸ್ಕೂಲಿನಲ್ಲಿದ್ದಾಗ ಎದುರು ಮನೆಯ ವಿಜಯಣ್ಣ ಯಾವುದೋ ಸಿನಿಮಾ ಟೆಂಟಿನಿಂದ ಆಯ್ದು ತಂದ ರೀಲ್ ತುಂಡುಗಳನ್ನು ತೋರಿಸುತ್ತೇನೆ ಎಂದು ಒಂದು ದಿನ ಕರೆದ. ರಾತ್ರಿ ಏಳು ಗಂಟೆಯ ಸಮಯವಾಗಿರಬಹುದು. ಒಂದೇ ಅಂಗಳದಲ್ಲಿದ್ದ ಎದುರು ಬದುರು ಮನೆಗಳು. ಸಿನಿಮಾ ಹುಚ್ಚಿಯಾಗಿದ್ದ ನನಗೆ ರೀಲ್ ನೋಡುವುದು ಖುಷಿಯ ವಿಚಾರವಾಗಿತ್ತು. ಒಂದು ಕೈ ಎತ್ತುವುದಕ್ಕೆ ಹತ್ತಾರು ಚಿತ್ರಗಳು! ಕುಣಿದು ಕೊಂಡು ಅವರ ಮನೆಯ ಬಾಗಿಲ ಬಳಿ ಹೋದೆ. ಬೆನ್ನ ಹಿಂದೆ ಏನನ್ನೋ ಬಚ್ಚಿಟ್ಟುಕೊಂಡಿದ್ದಾನಲ್ಲ, ಅದು ರೀಲ್ ಇರಬಹುದೆಂದುಕೊಂಡಿದ್ದೆ. ಅವನು ಇದ್ದಕ್ಕಿದ್ದಂತೆ ನನ್ನ ಮುಖದ ಮುಂದೆ ಜಿರಲೆಯೊಂದರ ಮೀಸೆ ಹಿಡಿದು ತೂಗುಯ್ಯಾಲೆ ಆಡಿಸಿದ. ನಾನು ಕೆಳಗೆ ಬಿದ್ದು ಹೋದೆ. ಮೂರ್ಛೆ ಹೋಗಿದ್ದನಂತೆ! ನನ್ನ ತಂದೆ ಅಲ್ಲಿಗೆ ಬಂದು ಅವನಿಗೆ ಬುದ್ಧಿ ಹೇಳಿದರು. ನಮ್ಮ ಮನೆಯಲ್ಲಿ ಯಾರೂ ಯಾರನ್ನು ಹೆದರಿಸುವಂತಿಲ್ಲ ಎಂಬ ಅಲಿಖಿತ ನಿಯಮವಿತ್ತು. ಹೀಗಾಗಿಯೇ ನಾವು ಭಯವಿಲ್ಲದೆ ಬೆಳೆದೆವು.

ಇಷ್ಟು ಹಿನ್ನೆಲೆ ಯಾಕೆಂದರೆ ನಾನು ಬೆಂಗಳೂರಿಗೆ ಬಂದು, ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ತಳೆದು ಕವಿತೆಗಳನ್ನು ಓದಲು ಆರಂಭಿಸಿದೆನಲ್ಲ! ಆಗ ನವ್ಯದ ಉಚ್ಛ್ರಾಯ ಕಾಲ. ದುರಂತವೆಂದರೆ ನವ್ಯ ಕಾವ್ಯದಲ್ಲಿ ಜಿರಳೆಗಳು ತರಳೆಗಳಿಗೆ ಪ್ರಾಸವಾಗಿ ಬಹಳ ಕಡೆ ಕಾಣಿಸಿಕೊಂಡವು. ಕಾವ್ಯದಲ್ಲಿ ಜಿರಳೆ, ಕತೆಯಲ್ಲಿ ಜಿರಳೆ, ಕಾದಂಬರಿಯಲ್ಲಿ ಜಿರಳೆ, ವಿಚಾರ ಸಾಹಿತ್ಯದಲ್ಲಿ ಜಿರಳೆ! ಹೋಗಿ ಹೋಗಿ ಈ ಕೀಟದ ವ್ಯೂಹಕ್ಕೆ ಸಿಕ್ಕಿಕೊಂಡೆನಲ್ಲ ಎಂದು ವ್ಯಥೆಯಾಯಿತು. ಯಾಕಿಷ್ಟು ಸಾಹಿತ್ಯದಲ್ಲಿ ಹೀಗಿದನ್ನು ಬಳಸುತ್ತಿದ್ದಾರೆ ಎನ್ನುವುದು ಅರ್ಥವೇ ಆಗಿರಲಿಲ್ಲ. ಜಿರಳೆ ಎಂಬ ಪದವಿರುವ ಯಾವ ಸಾಹಿತ್ಯವನ್ನು ಓದಬಾರದೆಂದು ಪ್ರತಿಜ್ಞೆ ಮಾಡಿದೆ! ಎಂ. ಎ. ಸೇರುವ ಹೊತ್ತಿಗೆ ಸಾಹಿತ್ಯ ಜಿರಳೆಗಳ ಕಾಟದಿಂದ ಮುಕ್ತವಾಗಿತ್ತು!

ನಾನು ಫ್ರೆಂಚ್ ತರಗತಿಗಳಿಗೆ ಹೋಗುತ್ತಿದ್ದಾಗ ಇದರ ಒಗಟು ಒಡೆಯಿತು. ನಮ್ಮ ನವ್ಯರು ಫ್ರೆಂಚ್ ಸಾಹಿತ್ಯದಿಂದ ಪ್ರಭಾವಿತರಾದವರಲ್ಲವೇ? ನಾವು ಮಂಕಾದಾಗ, ಖಿನ್ನರಾದಾಗ ಒಂದು ವಾಕ್ಯವನ್ನು ಬಳಸುತ್ತೇವೆ ಎಂದು ನಮ್ಮ ಆಲ್ಜಿರಿಯಾದ ಮೇಷ್ಟ್ರು ತರಗತಿಯಲ್ಲಿ ಹೇಳಿದರು. j ‘ai le cafard ‘ ಅಂದರೆನನ್ನ ಹತ್ತಿರ ಜಿರಲೆಯಿದೆ” ಎಂದರ್ಥ.

`j ‘ai le cafard ‘ ಅಂದಾಗಲೇ ನಾನು ಹೌಹಾರಿಹೋಗಿದ್ದೆ! ನಾನು ಪಾಠ ಮಾಡುತ್ತಿದ್ದಾಗಲೂ ಹೀಗೆ! ಇದ್ದಕ್ಕಿದ್ದಂತೆ ಒಂದು ಜಿರಳೆ ತರಗತಿಯನ್ನು ಪ್ರವೇಶಿಸಿ ಗುಲ್ಲೆಬ್ಬಿಸುತ್ತಿತ್ತು. ಬೆಂಚಿನ ಮೇಲೆ ಹತ್ತಿ, ನೆಗೆದು ಹುಡುಗಿಯರು ಕಿರುಚುವಾಗ ನಾನೂ ಅವರೊಂದಿಗೆ ಸೇರಿಕೊಳ್ಳುತ್ತಿದ್ದೆ. ಕೆಲವು ವೀರಾಧಿವೀರ ಹುಡುಗರು ಅದನ್ನು ಹೊಡೆದು ನನ್ನ ಮುಂದೆ ಮೀಸೆ ಹಿಡಿದು ತರುತ್ತಿದ್ದರು!

j ‘ai le cafard ‘ ನುಡಿಗಟ್ಟಿಗೆ ಸಾಹಿತ್ಯದ ಹಿನ್ನೆಲೆಯಿದೆಯಂತೆ! ಇದು ಪ್ರಾಚೀನ ಕಾಲದಿಂದಲೂ ಫ್ರೆಂಚ್ ಸಾಹಿತ್ಯದಲ್ಲಿ ಬಳಸಿದ್ದಾರೆ. ಫ್ರೆಂಚಿನ ಪ್ರಸಿದ್ಧ ಕವಿ ಬೋದಿಲೇರ್ ಸಾಮಾನ್ಯವಾಗಿ ಇಷ್ಟಪಡುತ್ತಿದ್ದ ಪದಗಳೆಂದರೆ ಮಬ್ಬುಗತ್ತಲು, ವಿಷಣ್ಣತೆ, ಮಂಕು ಇತ್ಯಾದಿಗಳು. ಸಾಮಾನ್ಯವಾಗಿ ನಕಾರಾತ್ಮಕ ಆಲೋಚನೆಗಳು ರಾತ್ರಿಯ ಸಮಯದಲ್ಲಿ ನಮ್ಮ ಮನಸ್ಸನ್ನು ಆಕ್ರಮಿಸುತ್ತವೆ, ಅವು ರಾತ್ರಿಯಲ್ಲಿ ಹರಿದಾಡುವ ಜಿರಳೆಗಳಂತೆ, ಹಿಡಿಯುವುದು ಕಷ್ಟ, ಉದಾಸೀನ ಮಾಡುವುದು ಸಹ ಕಷ್ಟ ಎನ್ನುತ್ತಾನೆ. ಹೀಗಾಗಿ ಅವನು ಈ ನುಡಿಗಟ್ಟನ್ನು ತನ್ನ ಪದ್ಯದಲ್ಲಿ ಬಳಸುತ್ತಾನೆ. ಆದರೆ ಈ ಹಳೆಯ ಮಾತಿಗೆ ಬೋದಿಲೇರ್ ಎಲ್ಲಮಬ್ಬುಗಳನ್ನು’ ಒಟ್ಟಿಗೆ ಸೇರಿಸಿ ನನ್ನ ಬಳಿ ಜಿರಲೆಯಿದೆ ಎನ್ನುತ್ತಾನೆ.

ಜಿರಲೆಯನ್ನು ಕಂಡರಾಗದ ನನಗೆ ಇದ್ಯಾವುದು ಬಾಲ್ಯದಲ್ಲಿ ಗೊತ್ತಿರಲಿಲ್ಲ. ಅಂಗಾತ ಬಿದ್ದು ಒದ್ದಾಡುತ್ತಿದ್ದರೆ `ಅಮ್ಮ, ಅದನ್ನು ಸರಿ ಮಾಡಿ ಮನೆಯಿಂದ ಅಟ್ಟು’ ಎಂದು ಕೂಗುತ್ತಿದ್ದೆ. ಈಗಲೂ ಅವು ಮನೆಯಲ್ಲಿ ಕಂಡರೆ ಖಿನ್ನವಾಗುತ್ತೇನೆ. ಇಲ್ಲ, je n ‘ai pas le cafard ‘ (ನನ್ನ ಬಳಿ ಜಿರಳೆಯಿಲ್ಲ) ಎಂದು ಹೇಳಿಕೊಂಡು ಸದಾ ಗೆಲುವಾಗಿರಲು ಯತ್ನಿಸುತ್ತೇನೆ. ನಿಮ್ಮ ಬಳಿ ಇವೆಯೇ? ಇದ್ದರೆ ಇಲ್ಲವಾಗಿಸಿಕೊಂಡು ನಿರಾಳವಾಗಿರಿ.

‍ಲೇಖಕರು Admin

19 April, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading