ಗೋವಿಂದ ಹೆಗಡೆ ಹೊಸ ಕವಿತೆಗಳು ಇಲ್ಲಿವೆ..

ಹೊಸ ಹುಟ್ಟು

 ಡಾ. ಗೋವಿಂದ ಹೆಗಡೆ

ಯಾವುದಕ್ಕೂ ಸಂಬಂಧವೇ
ಇಲ್ಲದಂತೆ ಚೆಲ್ಲಾಪಿಲ್ಲಿ ಹರಡಿದ್ದ
ನೆನಪುಗಳ ಮಧ್ಯೆ
ಇರುವೆಯಂತೆದ್ದ ಕನಸುಗಳ ಮಧ್ಯೆ
ಅಸ್ತವ್ಯಸ್ತ ನಾನು
ಆಗಲೇ ಬಂದಿದ್ದು
ಮೊದಲು ಹನಿಹನಿಯಾಗಿ
ಇಳಿಯುತ್ತ ಮಳೆಯಾಗಿ

ಆಕಾಶ ನೆಲಕ್ಕೆ ಭೇದವಿಲ್ಲದಂತೆ
ಸಮನಾಗಿ ಬಳಿದ ಬೂದು ಬಣ್ಣ
ಹಸಿರು ಕೆಂಪು ನೀಲಿಗಳೆಲ್ಲ
ಮಳೆಯಲ್ಲಿ ಕಲಸಿ


ಆಗೆಲ್ಲ ಮಳೆಯಲ್ಲಿ ಕಾಗದದ
ದೋಣಿ ಮಾಡಿ ಸೂರಿನಿಂದ ಇಳಿದು
ಹರಿವ ನೀರಿನಲ್ಲಿ ತೇಲಿ ಬಿಟ್ಟು
ನೀರಗುಂಟ ಓಡುವ ಓಡಿ ನಿಲ್ಲುವ
ದೋಣಿಯನ್ನು ಮತ್ತೆ ಮತ್ತೆ ಎತ್ತಿ
ನೀರಲ್ಲಿಳಿಸಿ-ಬೆರಗೇ ಮೈಯಾಗಿದ್ದು

ಈಗ ನೆನಪಿನ ದೋಣಿ ಯಾನ
ಹೊರಡುತ್ತದೆ ಎಲ್ಲೆಲ್ಲೋ ಸಾಗಿ
ಮುಳುಗೇ ಹೋದಂತೆ ಮತ್ತೆ
ತೇಲುತ್ತ ಸೇರುವುದು ಮಾತ್ರ
ನಿನ್ನ ಬಂದರಿಗೆ.ಲಂಗರಿಳಿಸಿ ನಿಲ್ಲುತ್ತದೆ
ಮುಂದೆ ನಡೆ ಎಂದರೆ ಕಬ್ಬಿಣದ
ಕಾಲು ಅದಕ್ಕೆ

ನಿನ್ನ ಧಕ್ಕೆಯಲ್ಲೋ ತೆಕ್ಕೆ
ಸೇರಿದಂತೆ ಎಷ್ಟೊಂದು ಹಡಗುಗಳು
ದೋಣಿಗಳು
ಯಾವುದನ್ನು ಕರೆಯುತ್ತೀ
ಯಾವುದನ್ನು ಮರೆಯುತ್ತೀ
ನಿನಗೂ ಗೊತ್ತಿಲ್ಲದೆ ಒಂದೊಂದರ
ಯಾನ-ವೇಳಾಪಟ್ಟಿ


ಕಣ್ಣ ಸುಳಿಯಲ್ಲಿ ಕಂಡ ಆಯಾಸದಲ್ಲಿ
ಕೊನೆಗೂ ಆವರಿಸಿದ ದೀರ್ಘ
ವಿಸ್ಮೃತಿಯಲ್ಲಿ
ಆ ಮಳೆ ಆ ಬಣ್ಣ ಆ ದೋಣಿ
ಆ ನೆನಪು ಎಲ್ಲ ವಿಲಯಿಸುವಾಗ

ಕವಿದ ಕತ್ತಲಿನಲ್ಲಿ
ನಾನು ಕುಳಿತೇ ಇರುತ್ತೇನೆ
ಸುಳಿಯಲ್ಲಿ ಕಣ್ಣುನೆಟ್ಟು
ಕಾಯುತ್ತ ಕಿವಿ ಕೀಲಿಸಿ
ಅಲೆ ಮುರಿವ ಸದ್ದಿಗಾಗಿ

 

ಹಾರು ಗರಿಬಿಚ್ಚಿ

ಏನಾದರೂ ಆಗಬೇಕು
ಬಾಂಬಿನಂತಹ ಏನೋ ಒಂದು
ಸ್ಫೋಟಿಸಿ ಹೊಗೆಯಲ್ಲಿ ಅಥವಾ
ಅಗ್ನಿಗೋಲದಲ್ಲಿ ಮರೆಯಾಗಿ
ಬೇಡ, ಚಾಚಿದ ಕಾಲಿಗೆ ಅಲ್ಲೆಲ್ಲೋ
ಮರಳಲ್ಲಿ ಓಡುವ ಇರುವೆ
ಕಚ್ಚಿ ‘ಹ್ಹಾ’ ಎಂದು

ಏನಾದರೂ ನಡೆಯಲಿ ಇಲ್ಲಿ ಈ
ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು

 

ನಿಷ್ಕ್ರಿಯತೆ ನಿರಾಕರಣೆಯೇ
ಅನುಭವವೇ ಆಭಾಸವೇ
ಅಲ್ಲೆಲ್ಲೋ ಕೋಗಿಲೆ ಕೂಗಿದೆ
ಹಕ್ಕಿ ಜೋಡಿ ಸಂಜೆ ಆಗಸವ
ಸೀಳಿ ಹಾರಿವೆ
ಎಲೆಯೊಂದು ಟಕ್ಕೆಂದು ತೊಟ್ಟು ಕಳಚಿದೆ
ತುಸು ಆಲಿಸಿದರೆ ಕೊಂಬೆಯೊಳಗೆ ಹರಿವ
ಜೀವರಸದ ಸದ್ದೂ ಕೇಳಬಹುದು


ಆದರೂ ಐಸಿಯು ನಲ್ಲಿರುವ ಬಾಲೆಯ
ಸ್ತಬ್ಧ ಕಣ್ಣುಗಳ ಶೂನ್ಯ ನೋಟ ಮಾತ್ರ…

 

ಸೂರ್ಯ ಎಂದಿನಂತೆ ಬೆಳಗುತ್ತ
ಈ ಗಿಡ ಮರ ಎಲ್ಲ ಹಸಿರುಟ್ಟು ಬೀಗುತ್ತ
ಹೊಂಗೆ ಮತ್ತಾವುದೋ ಗಿಡ ಹೂತೇರು
ಕಟ್ಟಿ

ನಾನು ನಾಲ್ಕು ಗೋಡೆಗಳ ಒಳಗೆ
ಹರಿವ ನೀರಿಗೆ ಬಿಚ್ಚಿ ಹಾರಲಾರೆ
ಗುಡ್ಡ ಹತ್ತಲಾರೆ ಮರ ಏರಲಾರೆ
ಬಯಲಲ್ಲಿ ಕುಣಿಯಲಾರೆ
ಆಜೀವ ಶಿಕ್ಷೆಗೆ ಪಕ್ಕಾದ ಕೈದಿಯಂತೆ
ಗೋಡೆ ಬಾಗಿಲುಗಳ ನಿರುಕಿಸುತ್ತ..

 

ಬೋಳು ರಸ್ತೆಗಳು ಹೆಜ್ಜೆ ಸದ್ದಿಗೆ
ತವಕಿಸಿರಬಹುದು ಪುಚ್ಚ ಕುಣಿಸಿ ಹಾರುವ
ಹಕ್ಕಿ ಓಡುತ್ತ ಏರುವ ನಡುವೆ ಗಕ್ಕನೆ ನಿಂತ
ಅಳಿಲಿಗೆ ಇರಬಹುದು ಅಗತ್ಯ
ನನ್ನ ನೋಟವೊಂದರ ಸಾಂಗತ್ಯ

ಮತ್ತೆ ಚಕ್ರ ತಿರುಗಿ ರಸ್ತೆ ಕಲಕಲ ಎನ್ನುವಾಗ
ಮರೆಯದೆ ಐಸಿಯು ನ ಆ ಬಾಲೆಯ
ಕೈಯಲ್ಲಿ ಕೈಯಿಡಬೇಕು
ಹೂರೆಪ್ಪೆಗಳ ಮೇಲೆ ಹಗೂ‌♪ರ
ಬೆರಳಾಡಿಸಿ ಪಿಸುಗುಡಬೇಕು

“ಏಳು ಮಗೂ, ಸರಿದಿದೆ ಮೋಡ
ಕಾದಿದೆ ಬಾನು ಹೋಗು ಹಾರು
ಗರಿ ಬಿಚ್ಚಿ…”

‍ಲೇಖಕರು nalike

July 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sriprakash

    ಎರಡು ಕವನಗಳೂ ಸೊಗಸಾಗಿವೆ.ಹಾರು ಗರಿಬಿಚ್ಚಿ ಹೆಚ್ಚು ಇಷ್ಟವಾಯ್ತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: