ಗಣೇಶ ಅಮೀನಗಡ ಮೆಚ್ಚಿದ ‘ಲಂಡನ್ ಟು ವ್ಯಾಟಿಕಾನ್ ಸಿಟಿ’

ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕಾನ್ ಸಿಟಿ’ ವಿಶಿಷ್ಟ ಪ್ರವಾಸ ಕಥನ

ಇದೇ ಭಾನುವಾರದಂದು ಕೃತಿ ಬಿಡುಗಡೆಯಾಗಲಿದೆ.

ಸಾಹಿತಿ, ಪತ್ರಕರ್ತ ಗಣೇಶ ಅಮಿನಗಡ ಈ ಕೃತಿಗೆ ಬರೆದಿರುವ ಮುನ್ನುಡಿ ಇಲ್ಲಿದೆ.

ತ್ರಾಸು ಕೊಡದ ತ್ರಾಸಿ ಪಯಣ…

ಗಣೇಶ ಅಮೀನಗಡ

ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಕುರಿತ ಕೃತಿಗಳು ಸಮೃದ್ಧವಾಗಿವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಅಮೆರಿಕದಲ್ಲಿ ಗೊರೂರು’, ಎ.ಎನ್.ಮೂರ್ತಿರಾಯರ ‘ಅಪರವಯಸ್ಕನ ಅಮೆರಿಕ’, ಜಿ.ಎಸ್.ಶಿವರುದ್ರಪ್ಪ ಅವರ ಇಂಗ್ಲೆಂಡ್, ಅಮೆರಿಕ, ರಷ್ಯಾ ಹಾಗೂ ಹಿಮಾಲಯ ಕುರಿತ ಕೃತಿಗಳು, ಓ.ಎಲ್.ನಾಗಭೂಷಣಸ್ವಾಮಿ ಅವರ ‘ನನ್ನ ಹಿಮಾಲಯ’ ಅಲ್ಲದೆ ಎಚ್.ಎಸ್.ರಾಘವೇಂದ್ರ ರಾವ್ ಅವರ ಪಶ್ಚಿಮ ಬಂಗಾಳ ಹಾಗೂ ಓರಿಸ್ಸಾ ಕುರಿತ ‘ಜನಗಣಮನ’ ಕೃತಿ ಗಮನಾರ್ಹ.

ಇಂಥ ಅನೇಕ ಕೃತಿಗಳು ಉಲ್ಲೇಖಾರ್ಹ. ಕುಟುಂಬದೊಟ್ಟಿಗೆ ಇಲ್ಲವೆ ಪ್ಯಾಕೇಜ್ ಟೂರ್ ಮೂಲಕ ಕೈಗೊಂಡ ಪ್ರವಾಸ ಕುರಿತ ಕೃತಿಗಳು ಪ್ರಕಟಗೊಳ್ಳುತ್ತಿವೆ. ಹೀಗೆಯೇ ಗೆಳೆಯರಾದ ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕಾನ್ ಸಿಟಿ’ ಎಂಬ ಪ್ರವಾಸ ಕಥನ ವಿಶಿಷ್ಟವಾಗಿದೆ. ಎಂಟು ದೇಶ- ನೂರೆಂಟು ವಿಶೇಷ ಎಂಬ ಅಡಿಬರಹ ಹೊತ್ತ ಈ ಕೃತಿಯು ಪ್ರವಾಸಿಗರಿಗೆ, ಪ್ರವಾಸ ಆಸಕ್ತರಿಗೆ ಕೈಪಿಡಿಯಾಗಲಿದೆ. ಸಾಮಾನ್ಯವಾಗಿ ವಿದೇಶ ಪ್ರವಾಸ ಎಂದೊಡನೆ ಮೋಜುಮಸ್ತಿ ಎಂದೇ ತಿಳಿದುಕೊಂಡು ಸುತ್ತಾಡಿ, ಬರುವಾಗ ಶಾಪಿಂಗ್ ಕೈಗೊಂಡು ಬರುವವರೇ ಹೆಚ್ಚು. ಆದರೆ ಗೋಪಾಲ ತ್ರಾಸಿ ಅವರು ಸುತ್ತಾಡಿಯೂ, ಖರೀದಿಸಿಯೂ ಈ ಪ್ರವಾಸ ಕಥನ ಕಟ್ಟಿಕೊಟ್ಟಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುವೆ.

ಈಗಾಗಲೇ ಕವನ ಸಂಕಲನ, ಕಥಾ ಸಂಕಲನ ಹಾಗೂ ಅಂಕಣ ಬರಹ ಪ್ರಕಟಿಸಿರುವ ಗೋಪಾಲ ಅವರು ಈ ಕೃತಿಯ ಉದ್ದಕ್ಕೂ ಕೊಡುವ ವಿವರಗಳು, ಸಂಗ್ರಹಿಸಿರುವ ಮಾಹಿತಿ ಗಮನಾರ್ಹ. ಹೀಥ್ರೋ ವಿಮಾನ ನಿಲ್ದಾಣದಿಂದ ಪ್ರತಿದಿನ ಸುಮಾರು ೧೩೦೦ ವಿಮಾನಗಳು ಸಂಚರಿಸುತ್ತವೆ ಎನ್ನುವುದರ ಜೊತೆಗೆ ಪ್ರತಿ ೪೫ ಸೆಕೆಂಡಿಗೆ ಒಂದು ವಿಮಾನ ಹೋಗಿ-ಬರುತ್ತದೆ ಎನ್ನುವ ಕುತೂಹಲಕರ ಅಂಶವಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತ್ರಾಸಿ ಎಂಬ ಪುಟ್ಟ ಹಳ್ಳಿಯಿಂದ ಬಂದ ಅವರು, ಮುಂಬೈನಲ್ಲಿ ನೆಲೆ ನಿಂತು ಬದುಕು ಕಟ್ಟಿಕೊಂಡವರು.

ಇದರೊಂದಿಗೆ ತಮ್ಮ ತಂದೆ ಶಾಲೆ ಕಲಿತ ಬಗೆಯನ್ನು ಅವರು ಹೇಳುವುದು ಹೀಗೆ – ‘ನನ್ನ ಅಪ್ಪ ಐಗಳ ಶಾಲೆ ಅಂದರೆ ಅಂಗಳದಲ್ಲಿ ಕುಳಿತು ಹೊಯಿಗೆ ಮೇಲೆ ಬೆರಳಾಡಿಸುತ್ತ ತಮ್ಮ ಹೆಸರು ಬರೆಯುವಷ್ಟು ವಿದ್ಯೆ ಪಡೆದವರು. ನನ್ನಮ್ಮ ನಾಲ್ಕೋ ಐದೋ ತರಗತಿ ತನಕ ಓದಿದವಳು. ನಾನು ನಮ್ಮ ಇಡೀ ಕೂಡು ಕುಟುಂಬದ ಹತ್ತಾರು ಪರಿವಾರಗಳಲ್ಲಿ ಮೊದಲ ಪದವೀಧರ! ಅಂದು ನಮ್ಮವರನ್ನು ಗುಲಾಮರಂತೆ ಕಂಡ ಅದೇ ಬ್ರಿಟಿಷ್ ಸರ್ಕಾರ ಇಂದು ಸಾಮಾನ್ಯನಾದ ನನ್ನನ್ನು ಪ್ರವಾಸಿಗನೆಂಬ ಗೌರವದೊಂದಿಗೆ ಸ್ವಾಗತಿಸುತ್ತಿದೆ! ಅಕ್ಷರಶಃ ಕಣ್ಣಾಲಿಗಳು ತೇವಗೊಂಡಿದ್ದವು’ ಈಮೂಲಕ ಸ್ಥಿತ್ಯಂತರಗಳನ್ನು ಅವರು ಕಂಡಿರಿಸಿದ್ದಾರೆ.

ಇನ್ನು ‘ಶಿಸ್ತಿನ ಸಾಮ್ರಾಜ್ಯ ಲಂಡನ್’ ಕುರಿತ ಅಧ್ಯಾಯದಲ್ಲಿ ಷೇಕ್ಸ್ಪಿಯರ್ ಕುರಿತು ಪ್ರಸ್ತಾಪಿಸುತ್ತಾರೆ. ಷೇಕ್ಸ್ಪಿಯರ್‌ನ ನಾಟಕ ಕಂಪನಿಯ ಗ್ಲೋಬ್ ಥಿಯೇಟರ್ ಕುರಿತು ಹೇಳುತ್ತಲೇ ‘ಷೇಕ್ಸ್ ಪಿಯರ್ ಅನಂತ ಧ್ಯಾನವನ್ನು, ಅವನು ಸೃಷ್ಟಿಸಿದ ಅಮರ ಪಾತ್ರಗಳ ಪಿಸುಧ್ವನಿಯನ್ನು; ರೋಮಿಯೊ- ಜೂಲಿಯಟ್ ಅಲೌಕಿಕ ಪ್ರೇಮಯಾನವನ್ನು, ಯಕ್ಷಿಣಿಯರ ಕಿಂಕಿಣಿಯನ್ನು ಈ ಗಾಳಿ ಈ ಬೆಳಕು ಹೊತ್ತು ನಿರಂತರ ಜೋಕಾಲಿ ಜೀಕುತ್ತಿರಬಹುದೆ? ಒಥೆಲ್ಲೊ, ಕಿಂಗ್ ಲಿಯರ್, ಮ್ಯಾಕ್‌ಬೆತ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್ ಈ ತರಹದ ದಿಗ್ಭ್ರಮೆ ಹುಟ್ಟಿಸುವಂತಹ ಪಾತ್ರಗಳ ಮೂಲಕ ವಿಶ್ವ ರಂಗಭೂಮಿಗೆ ಹೊಸ ಭಾಷ್ಯ ಬರೆದ, ದಿಕ್ಕು ದಿಶೆ ತೋರಿಸಿದ ಷೇಕ್ಸ್ಪಿಯರ್‌ನ ಸೃಜನಶೀಲ ಶ್ರಮ, ಬೆವರು, ಕನಸುಗಳನ್ನು ಇಂದಿಗೂ ಜಗತ್ತಿಗೆ ಸಾರಿ ಸಾರಿ ಹೇಳುವಂತಿದೆ ಈ ರಂಗಾಧ್ಯತ್ಮ ಸ್ಥಳ’ ಎನ್ನುವ ಮೂಲಕ ಷೇಕ್ಸ್ಪಿಯರ್‌ಗೆ ನಮನ ಸಲ್ಲಿಸುತ್ತಾರೆ. ಈಮೂಲಕ ಗೋಪಾಲ ಅವರೊಳಗಿನ ಲೇಖಕ, ಷೇಕ್ಸ್ಪಿಯರ್‌ನನ್ನು ಹುಡುಕಿಕೊಂಡು ಹೋಗಿ ಅಲ್ಲಿದ್ದಷ್ಟು ಹೊತ್ತು ಆತನ ಕೊಡುಗೆಯನ್ನು ಸ್ಮರಿಸಿದ್ದು ಶ್ಲಾಘನೀಯ.

ಹೀಗೆಯೇ ಹಾಲೆಂಡ್ ಕುರಿತು ವಿವರಿಸುತ್ತ ವುಡನ್ ಷೂ ಫ್ಯಾಕ್ಟರಿ ಬಗ್ಗೆ ಉಲ್ಲೇಖಿಸುತ್ತಾರೆ. ಮರದ ತುಂಡೊಂದು ವಿವಿಧ ಹಂತ ಹಾದು ಅಂತಿಮ ಚಪ್ಪಲಿಯಾಗಿ ಪಾಲಿಷ್ ಪಡೆದು, ಬಣ್ಣ ಬಳಿದುಕೊಂಡು ಮಾರಾಟಕ್ಕೆ ಸಿದ್ಧವಾಗುವವರೆಗಿನ ಪ್ರತಿ ಹಂತವನ್ನು ಕುತೂಹಲದಿಂದ ವೀಕ್ಷಿಸಿರುವುದನ್ನು ಗೋಪಾಲ ಹೇಳುತ್ತಾರೆ. ಇದರೊಂದಿಗೆ ಕ್ಯಕೊನ್ಹಾಫ್‌ನ ಟುಲಿಪ್ ಪುಷ್ಪಧಾಮಕ್ಕೆ ಭೇಟಿ ನೀಡಿದಾಗ ಅವರ ಪತ್ನಿ ಸವಿತಾ ಅವರು ಅಮಿತಾಬ್ ಹಾಗೂ ರೇಖಾ ಅಭಿನಯದ ‘ಸಿಲ್‌ಸಿಲಾ’ ಸಿನಿಮಾ ಹಾಡಿನ ಚಿತ್ರೀಕರಣಗೊಂಡಿದ್ದನ್ನು ಮೆಲುಕು ಹಾಕುತ್ತಾರೆ.

ಹೀಗೆಯೇ ವಿವಿಧ ಪ್ರವಾಸಿತಾಣಗಳನ್ನು ಕಂಡಾಗ ಹಿಂದಿ ಸಿನಿಮಾಗಳು ಚಿತ್ರೀಕರಣಗೊಂಡಿರುವುದನ್ನೂ ಸ್ಮರಿಸುತ್ತಾರೆ. ಜೊತೆಗೆ ಸ್ವಿಝರ್‌ಲ್ಯಾಂಡಿನಲ್ಲಿ ೧೯೬೪ರಲ್ಲಿ ಬಿಡುಗಡೆಗೊಂಡ ರಾಜ್‌ಕಪೂರ್ ಬ್ಯಾನರಿನ ‘ಸಂಗಮ್’ ಮೊದಲ ಹಿಂದಿಯ ಇಲ್ಲವೆ ಮೊದಲ ಭಾರತೀಯ ಸಿನಿಮಾ ಎಂಬುದನ್ನೂ ಉಲ್ಲೇಖಿಸುತ್ತಾರೆ. ಹಾಗೆಯೇ ಸ್ವಿಝರ್‌ಲ್ಯಾಂಡಿನ ಬೆಳಗೆಂದರೆ ಶುದ್ಧ ಕೊಳದ ತಿಳಿನೀರು ಎಂದು ಬಣ್ಣಿಸಿ ಬೇಂದ್ರೆಯವರ ‘ಬೆಳಗು’ ಕವಿತೆಯನ್ನು ಗುಣುಗುಣಿಸುತ್ತಾರೆ.

ಮುಂದೆ ಐಫಿಲ್ ಟವರ್ ನೋಡಿಕೊಂಡ ನಂತರ ಅಲ್ಲಿ ಸ್ಮರಣಿಕೆ ಮಾರುವ ಕಪ್ಪು ಜನರೊಂದಿಗೆ ಒಡನಾಡಿದ್ದನ್ನು, ವೆನಿಸ್ಸಿನ ಮುರಾನೊ ಎಂಬ ಗಾಜಿನ ಕಾರ್ಖಾನೆಯಲ್ಲಿ ಗಾಜರಳಿ ಹೂವಾಗುವ ಸೋಜಿಗವನ್ನು ಲೇಖಕರು ಸೊಗಸಾಗಿ ನಿರೂಪಿಸುತ್ತಾರೆ.

ಹೀಗೆ ಪ್ರವಾಸದುದ್ದಕ್ಕೂ ಮಲಗುವ ಮುನ್ನ ತಿರುಗಾಟದ ಸನ್ನಿವೇಶ, ಘಟನೆಗಳ ಟಿಪ್ಪಣಿ ಮಾಡಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದರಿಂದ ಗೋಪಾಲ ಅವರು ಯಾವುದೇ ಗೊಂದಲಗಳಿಲ್ಲದೆ ಸಂಯಮದಿಂದ ಪ್ರವಾಸಿ ಸ್ಥಳಗಳ ಕುರಿತು ಮಾಹಿತಿ ನೀಡುತ್ತಾರೆ. ಒಟ್ಟು ಹನ್ನೆರಡು ರಾತ್ರಿ, ಹದಿಮೂರು ದಿನಗಳಲ್ಲಿ ಕಂಡ ಬೆರಗನ್ನು, ಬೆಡಗನ್ನು ಬಣ್ಣಿಸುತ್ತ ಪ್ಯಾಕೇಜ್ ಟೂರ್ ಕುರಿತ ಮಿತಿಯನ್ನೂ ತಿಳಿಸುತ್ತಾರೆ- ‘ನಮಗೆ ಇಷ್ಟವಾದ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ. ಬೇಡವಾದ ಸ್ಥಳ ವೀಕ್ಷಣೆಗೆ ಹೋಗದೆ ಇರುವಂತೆಯೂ ಇಲ್ಲ. ಹಾಗಾಗಿ ಎಷ್ಟೋ ಪ್ರದೇಶಗಳನ್ನು ನೋಡಬೇಕೆಂಬ ಕುತೂಹಲ ಉಳಿದೇ ಬಿಟ್ಟಿತು’. ಇದರೊಂದಿಗೆ ‘ಪ್ರವಾಸಕ್ಕೆ ಸ್ಥಳ ಮುಖ್ಯವೇ ಅಲ್ಲ. ಹೊಸ ಗಾಳಿ, ಹೊಸ ಪರಿಸರ, ಹೊಸ ಜನರು, ಭಿನ್ನ ಆಚಾರ- ವಿಚಾರಗಳನ್ನು ನೋಡಿ ತಿಳಿದುಕೊಳ್ಳಬೇಕೆಂಬ ಮನಸ್ಸು ಮುಖ್ಯ’ ಎನ್ನುವ ಸಲಹೆ ಅವರದು.

ಲಂಡನ್, ಹಾಲೆಂಡ್, ಬೆಲ್ಜಿಯಂ, ಪ್ಯಾರಿಸ್, ಜರ್ಮನಿ, ಸ್ವಿಝರ್‌ಲ್ಯಾಂಡ್, ಇಟಲಿ, ವ್ಯಾಟಿಕನ್… ಹೀಗೆ ಒಟ್ಟು ಎಂಟು ದೇಶಗಳ ಕುರಿತು ಮಾಹಿತಿ ಒಳಗೊಂಡ ತ್ರಾಸಿ ಅವರ ಈ ಕೃತಿ ಹೆಚ್ಚು ತ್ರಾಸು ಕೊಡದೆ ಓದಿಸಿಕೊಂಡು ಹೋಗುತ್ತದೆ. ಓದುವ ಖುಷಿ ನಿಮ್ಮದಾಗಲಿ.

‍ಲೇಖಕರು Admin

December 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: