‘ನಿರುತ್ತರ’ ಮತ್ತು ರಾಜೇಶ್ವರಿ…

ರಹಮತ್‌ ತರೀಕೆರೆ

ಒಂದು ದಿನ, ತಮ್ಮನಾದ ಕಲೀಮ ‘ರಾಜೇಶ್ವರಿಯವರನ್ನು ಮಾತನಾಡಿಸಿಕೊಂಡು ಬರೋಣ, ಬರ್ತೀಯಾ’ ಎಂದ. ಅವನು ತೇಜಸ್ವಿಯವರ ಕಟ್ಟಾಭಿಮಾನಿ. ಅವರ ಸಾಹಿತ್ಯದ ಮೇಲೆ ಪಿಎಚ್.ಡಿ., ಮಾಡಿದವನು. ಅವರಂತೆಯೇ ವೈಲ್ಡ್ ಲೈಫ್ ಫೊಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡವನು. ಅವನಿಗೆ ತಾನು ಸಂಗ್ರಹಿಸಿದ ತೇಜಸ್ವಿ ಲೇಖನಗಳನ್ನು ರಾಜೇಶ್ವರಿಯವರಿಗೆ ತಲುಪಿಸುವ ಕೆಲಸವಿತ್ತು.

ಸಾಮಾನ್ಯವಾಗಿ ನಾನು ನನ್ನಿಷ್ಟದ ಲೇಖಕರನ್ನು ಭೇಟಿಮಾಡುವುದಕ್ಕೆ ಮುಂದೊಡಗುವುದಿಲ್ಲ. ಅವರ ಕೃತಿಗಳ ಮೂಲಕವೇ ಸಂಬಂಧ ಇಟ್ಟುಕೊಳ್ಳುವುದಕ್ಕೆ ಬಯಸುತ್ತೇನೆ. ಆದರೂ ಅನೇಕ ಸಾಧಕರ ಸಂದರ್ಶನ ಮಾಡಿ ಪ್ರಕಟಿಸಿರುವ ಕುಖ್ಯಾತಿಯುಳ್ಳ ನನಗೆ, ತೇಜಸ್ವಿಯವರ ಜತೆಗೂ ಮಾತುಕತೆ ಮಾಡುವ ಆಸಕ್ತಿಯಿತ್ತು. ಮಹಾಮೂಡಿಯಾದ ಅವರು ಒಪ್ಪುವರೊ ಇಲ್ಲವೊ, ಮಾತುಕತೆಯಲ್ಲಿ ಹೇಗೆ ವರ್ತಿಸುವರೊ ಎಂಬ ಶಂಕೆಯಿಂದ ಹಿಂಜರಿದುಕೊಂಡಿದ್ದೆ. ಒಮ್ಮೆ ಗುರುಗಳಾದ ಜಿ.ಎಚ್.ನಾಯಕರ ಮನೆಯಲ್ಲಿ ಅವರನ್ನು ಕಾಣುವ ಅವಕಾಶ ಸಿಕ್ಕಿತು.

ಜನಸುಳಿವನ್ನು ಕಂಡೊಡನೆ ವನ್ಯಮೃಗಗಳು ಹಳುವಿನಲ್ಲಿ ನುಸುಳಿ ಮರೆಯಾಗುವಂತೆ, ಅಪರಿಚಿತರೆದುರು ತೇಜಸ್ವಿ ಅತಿಸೆನ್ಸಿಟಿವ್ ಆಗಿಬಿಡುತ್ತಾರೆ ಅಥವಾ ಅವರು ಬಂದು ಬಹಳ ಹೊತ್ತಾಗಿರಬೇಕು. `ನಾಯಕರೇ ಬರ್ತೀನಿ’ ಎಂದು ಹೊರಟುಬಿಟ್ಟರು. ಇದಾದ ಬಳಿಕ ಬಾಬಾಬುಡನಗಿರಿ ಕುರಿತ ನನ್ನ ಲೇಖನ ಓದಿ ಮೆಚ್ಚಿಕೊಂಡು ಬರೆದಿದ್ದರು. ಅದನ್ನು ಕರ್ನಾಟಕದ ಯುವಕರು ಓದುವಂತೆ ಶಿಫಾರಸ್ಸನ್ನೂ ಮಾಡಿದ್ದರು. (ಶ್ವಾನಪ್ರಿಯರಾದ ಅವರಿಗೆ ಆ ಲೇಖನ ಇಷ್ಟವಾಗಿದ್ದು ನನ್ನ ಸಂಶೋಧನ ಪಾಂಡಿತ್ಯದಿಂದಲ್ಲ; ದತ್ತಾತ್ರೇಯನ ಸುತ್ತ ಇರುವ ನಾಲ್ಕು ನಾಯಿಗಳಿರುವ ಚರ್ಚೆಯಿಂದ ಎಂದು ನನ್ನ ಶಂಕೆ.)

ಒಮ್ಮೆ ತಮ್ಮ ಆಪ್ತರೊಬ್ಬರ ಮೂಲಕ ನನಗೆ ಬರಹೇಳಿದ್ದರು. ಹೋಗಬೇಕು ಎಂದುಕೊಂಡಿರುವಾಗಲೇ ಸಾವಿನ ಸುದ್ದಿ ಬಂದು ಬಡಿಯಿತು. ಮನಸ್ಸು ಕಲ್ಲೇಟು ತಿಂದ ಹಕ್ಕಿಯಂತೆ ಮನಸ್ಸು ತೇಜಸ್ವಿ ತೇಜಸ್ವಿ ಎಂದು ಚಡಪಡಿಸಿತು. ಅವರ ಮನೆಗೆ ಹೋಗುವ ಅವಕಾಶ ಬಂದಿದೆ. ಆದರೆ ಅವರೇ ಇಲ್ಲ. ಶಿವ-ಶಿವಾಣಿಯರಂತೆ ಸದಾ ಜತೆಯಲ್ಲಿರುತ್ತಿದ್ದ ತೇಜಸ್ವಿ-ರಾಜೇಶ್ವರಿ ಜೋಡಿಯನ್ನು ಮೊದಲು ಕಂಡಿದ್ದು, ಕುಪ್ಪಳಿಯಲ್ಲಿ. ಅದು ಕುವೆಂಪು ಜನ್ಮ ಶತಮಾನೋತ್ಸವದ ಕಾರ್ಯಕ್ರಮ.

ಕುವೆಂಪು ಸಮಾಧಿಯನ್ನು ರಾಜಘಾಟಿನ ಸಮಾಧಿಯಂತೆ ಹೂಗಳಿಂದ ಸಿಂಗರಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳಾದ ನಾವು ಬಿಡಿಹೂವನ್ನು ಸಮಾಧಿಯ ಮೇಲೆ ಚೆಲ್ಲಿ ಶ್ರದ್ಧಾಂಜಲಿ ಸೂಚಿಸುವುದಿತ್ತು. ನಾವು ಹಾಗೆ ಮಾಡುವಾಗ, ತೇಜಸ್ವಿ-ರಾಜೇಶ್ವರಿ ಸಂಬಂಧವಿಲ್ಲದಂತೆ ದೂರ ನಿಂತು ನಮ್ಮೊಳಗೆ ಅಪರಾಧಿಭಾವ ಹುಟ್ಟಿಸುತ್ತಿದ್ದರು. ಕುವೆಂಪು ಶತಮಾನೋತ್ಸವ ಕಾರ್ಯಕ್ರಮಕ್ಕೆ ಹಂಪಿಗೆ ಬಂದಾಗಲೂ ಅಷ್ಟೆ. ಸಭೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ದಾರಿತಪ್ಪಿ ಬಂದ ಗಂಧರ್ವರಂತೆ ಕನ್ನಡ ವಿವಿಯ ಕಾಡು ಕ್ಯಾಂಪಸ್ಸಿನಲ್ಲಿ ಅಡ್ಡಾಡಿಕೊಂಡಿದ್ದರು.

ಎಲ್ಲ ಪರಿಯ ಅಧಿಕೃತ-ಔಪಚಾರಿಕತೆಗಳನ್ನು ತಮ್ಮ ಮಾತು-ವರ್ತನೆಗಳಿಂದ ಗೇಲಿಗೊಳಿಸಬಲ್ಲವರಾಗಿದ್ದ ತೇಜಸ್ವಿ, ಈಗ ಮನೆಯೊಳಗಿಲ್ಲ ಎಂಬುದು ಧೈರ್ಯವಾದರೆ, ಅವರಿಲ್ಲದ ಮನೆಗೆ ಹೋಗುವುದು ಸಂಕಟ. ವರ್ಷ ಕಳೆದರೂ ಸೂತಕದ ಭಾವವಿನ್ನೂ ಮಲೆನಾಡಿನ ಮಾಗಿಯ ಮಂಜಿನಂತೆ ಆವರಿಸಿಕೊಂಡಿತ್ತು. ಜಾತಿಮತಗಳಾಚೆ ನಿರ್ಮಾಣಗೊಳ್ಳುವ ಈ ಬಂಧುತ್ವ ರಕ್ತ ಸಂಬಂಧಕ್ಕಿಂತ ಅದೆಷ್ಟು ಗಾಢ? ಕೈಮರದಲ್ಲಿಳಿದು `ನಿರುತ್ತರ’ದ ಗೇಟು ತೆರೆದು ನಮ್ಮನ್ನು ದಬ್ಬಿಕೊಂಡು ಹೋಗುವಂತಿದ್ದ ಇಳಿಜಾರಲ್ಲಿ, ಸೊಕ್ಕಿಬೆಳೆದ ಕಾಫಿಗಿಡಗಳ ನಡುವೆ ರೈಲುಹಳಿಯಂತಿದ್ದ ಎರಡು ಪಟ್ಟೆಯ ಜೀಪುದಾರಿಯಲ್ಲಿ ನಡೆದವು.

ಕಾಫಿಗಿಡಗಳು ಚಾಚಿದ ತೋಳಗೆಲ್ಲುಗಳಲ್ಲಿ ಕೆಂಪು-ಹಸಿರು ಹಣ್ಣನ್ನು ಕೋದುಕೊಂಡು ನಿಂತಿದ್ದವು. ತೋಟ ಹಕ್ಕಿಗಳ ಜಾತ್ರೆಯಂತಾಗಿ ಕಲರವ ಹೊಮ್ಮುತ್ತಿತ್ತು. ಕೊಂಚ ದೂರ ನಡೆದ ಬಳಿಕ ಕೆಂಪ್ಹಂಚಿನ ಮನೆಯ ಮಾಡು ಕಾಣಿಸಿತು. ಮನೆಯೊಳಗಿಂದ ರಾಜೇಶ್ವರಿಯವರ ಮಾತು ಕೇಳಿಸಿತು. ಯಾರೊ ಅತಿಥಿಗಳು ಬಂದಿರಬೇಕು. ಅವರು ಹೊರಬಂದ ಮೇಲೆ ಹೋಗೋಣ ಎಂದು, ಪಕ್ಕದಲ್ಲಿದ್ದ ಶೆಡ್ಡಿನತ್ತ ಹೋದೆವು. ಅಲ್ಲಿದ್ದ ಸೌದೆ ಒಟ್ಟಲಿನ ಪಕ್ಕ ತೇಜಸ್ವಿಯವರ ಸ್ಕೂಟರ್ ನಿಂತಿತ್ತು. ರೈಲಿನಲ್ಲಿ ಪಾರ್ಸೆಲ್ ಮಾಡಲು ಪ್ಯಾಕ್ ಮಾಡಿದಂತೆ, ಗೋಣಿಯ ಬ್ಯಾಂಡೇಜನ್ನು ಬಿಗಿಸಿಕೊಂಡಿತ್ತು.

ಧೂಳುಹಿಡಿದ ಅದರ ಹ್ಯಾಂಡಲನ್ನು ನವಿರಾಗಿ ಮುಟ್ಟಿದೆ. ಅಲುಗಾಡಿತು.ಕಣದಲ್ಲಿ ಕಾಫಿಬೀಜ ಒಣಗಲು ಹರಡಲಾಗಿತ್ತು. ಕೆಲಸಗಾರನೊಬ್ಬ ಕಣ ಕೆತ್ತುತ್ತಿದ್ದ. ಒಬ್ಬಾಕೆ, ಸೀರೆಯ ಮೇಲೆ ಹಳೆಯ ಶರಟು ತೊಟ್ಟು, ಕಣದ ಮಣ್ಣನ್ನು ಪುಟ್ಟಿಯಲ್ಲಿ ತುಂಬುತ್ತಿದ್ದಳು. ಇವನ್ನೆಲ್ಲ ನೋಡುತ್ತ ನಿಂತಿರುವಾಗ ಗಾಜಿನ ಕಿಟಕಿಯ ಮೂಲಕ ನಮ್ಮ ಸುಳಿದಾಟ ಕಂಡವರೇ ರಾಜೇಶ್ವರಿ ತಟ್ಟನೆ ಹೊರಬಂದು ಸ್ವಾಗತಿಸಿದರು. ೭೦ ದಾಟಿದ್ದರೂ ಅಜ್ಜಿಯೆನಿಸದಂತೆ ಚಟುವಟಿಕೆಯಿಂದ ತುಡಿಯುತ್ತಿದ್ದರು. ಕುಪ್ಪಳಿಯಲ್ಲಿ ನಡೆದ ಕುವೆಂಪು ಕಾರ್ಯಕ್ರಮದಲ್ಲಿ ನನ್ನ ನೋಡಿದ್ದನ್ನು ನೆನಪಿಸಿಕೊಂಡರು. ಅಲ್ಲಿದ್ದ ಸಸ್ಯವಿಜ್ಞಾನಿ ಮಲಿಕರನ್ನು ಪರಿಚಯಿಸಿದರು. ಅವರ ಚರ್ಚೆಯಿನ್ನೂ ಮುಗಿದಂತಿರಲಿಲ್ಲ.

ನಾವು `ತೋಟ ಅಡ್ಡಾಡಿ ಬರುತ್ತೇವೆ’ ಎಂದು ಹೊರಟೆವು. ಮನೆ ಪಕ್ಕದ ಸಣ್ಣಕೆರೆಗೆ ಮೇಲಿಂದ ಸಣ್ಣಗಿನ ಝರಿ ಜುಳುಜುಳು ಹರಿದು ಸೇರುತ್ತಿತ್ತು. ಬೆಟ್ಟದ ಮೇಲಿಂದ ಬರುವ ಝರಿಯು ಸಣ್ಣಕೆರೆಗೆ ನೀರು ತುಂಬಿಸಿ ದೊಡ್ಡಕೆರೆಗೆ ಚಲಿಸುತ್ತಿತ್ತು. ನೀರೊಳಗೆ ಮೀನುಗಳು ಕಪ್ಪನೆ ನೆರಳುಗಳಂತೆ ಚಲಿಸುತ್ತಿದ್ದವು. ಕೆರೆದಂಡೆಗೆ ಅಂಚುಕಟ್ಟಿದಂತೆ ಹುಲ್ಲು ದಟ್ಟವಾಗಿ ತೇಜಸ್ವಿಯವರ ಗಡ್ಡದಂತೆ ಎರ‍್ರಾಬರ‍್ರಿ ಬೆಳೆದಿತ್ತು. ಅದರ ಮೇಲೆ ಬಣ್ಣಬಣ್ಣದ ಹೆಲಿಕ್ಯಾಪ್ಟರ್ ಚಿಟ್ಟೆಗಳು. ದಡದಲ್ಲಿ ಕೆಲಸಗಾರರ ಗೂಡುಗಳಂತಹ ಕಿರುಮನೆಗಳ ಲೈನು.

ತೋಟದ ತುಂಬ ಕಳೆಯಂತೆ ಬೆಳೆದ ಸುವಾಸನೆಯ ದವನ. ಸಂಪಿಗೆ ಮರದಡಿ ಹಕ್ಕಿಫೋಟೊ ತೆಗೆಯಲು ಕಟ್ಟಿಕೊಂಡ ಸೊಳ್ಳೆಪರದೆಯಂತಹ ಮರಸು. ಕೆಳಗೆ ಜಿಗ್ಗಿನಲ್ಲಿ ಅಡಕೆತೋಟ. ಕಪ್ಪು ಹಸುರಿನಿಂದ ಕೂಡಿ ಹೊನ್ನಬಣ್ಣದ ಫುಟ್ಬಾಲಿನಂತಹ ಹಣ್ಣುಗಳನ್ನು ಜಗ್ಗಿಸಿಕೊಂಡು ನಿಂತ ಚಕೋತ ಮರ. ಅದರ ಹಿಂದೆ ಬಾಳೆಯ ದೊಡ್ಡಗಿಡವೊಂದು ಕಿರಿಯ ಕಂದುಗಳಿಂದ ಸುತ್ತುವರೆದು, ಮನೆಯ ಮಕ್ಕಳು ಮೊಮ್ಮಕ್ಕಳ ಜತೆ ಕುಟುಂಬವೊಂದು ಗ್ರೂಪ್ ಫೋಟೊಗೆ ನಿಂತಂತಿತ್ತು.

ಕಿಟಕಿ ಪಕ್ಕದಲ್ಲಿ ಬೆಳೆದಿದ್ದ ಫರ್ನ್ ಜಾತಿಯ ಗಿಡದ ತುದಿಗೆ ಹಕ್ಕಿಯೊಂದು ಗೂಡುಕಟ್ಟುತ್ತಿತ್ತು. ಕಾಮಗಾರಿ ಮುಗಿದಿರಲಿಲ್ಲ. ಝರಿ, ಕೆರೆ, ಕಾಡು, ಉದ್ಯಾನ, ತೋಟ, ಅಂಗಳ, ಕಣ, ಮನೆ ಎಲ್ಲವೂ ಎಕಾಲಜಿಕಲ್ ಅದ್ವೈತದಲ್ಲಿ ಗಡಿಗಳನ್ನು ಕಲಸಿಕೊಂಡು ಒಂದಾಗಿದ್ದವು. ಇವನ್ನೆಲ್ಲ ನೋಡುತ್ತ ನಮಗೆ ಮನೆಯೊಳಗೆ ಹೋಗುವ ಖಬರೇ ಇಲ್ಲ. ಮಾಲಿಕರನ್ನು ಕಳಿಸಿದ ಬಳಿಕ ರಾಜೇಶ್ವರಿ ನಮ್ಮನ್ನು ಮನೆಯೊಳಕ್ಕೆ ಕರೆದರು. ಹಾಲಲ್ಲಿ ಕೂತೆವು. ಗಾಜಿನ ಮನೆಯೊಂದನ್ನು ಅನಾಮತ್ತಾಗಿ ತಂದು ದಟ್ಟಕಾಡಿನಲ್ಲಿ ಇಟ್ಟಿರುವಂತೆ ಭಾಸವಾಯಿತು.

ನಾನು ಚಕ್ಕೋತ ಮರ ಕಾಣುವಂತೆ ಕೂತೆ. ರಾಜೇಶ್ವರಿ ಅಕ್ಕರೆಯಿಂದ ‘ಏನು ಕೊಡಲಿ?’ ಎಂದರು. ‘ಕಾಫಿ’ ಎಂದೆವು. “ತರ್ತೇನೆ. ಅಲ್ಲೀತನಕ ಈ ಹಣ್ಣು ತಿನ್ನಿ. ಇದು ತೇಜಸ್ವಿ ನೆಟ್ಟ ಮರದ್ದು” ಎನ್ನುತ್ತ ಕಿತ್ತಳೆಯ ಬುಟ್ಟಿಯನ್ನು ಮುಂದಿಟ್ಟರು. ಹಸಿರು ಉಂಡೆಗಳಂತಿದ್ದ ಅವನ್ನು ಸುಲಿದು ತಿಂದೆವು. ತೊಳೆ ಕೊಂಚ ಹುಳಿಯಾಗಿದ್ದವು. ತೇಜಸ್ವಿ ಕೆಲಸ ಮಾಡುತ್ತಿದ್ದ ಮಹಡಿರೂಮನ್ನು ನೋಡಿದೆವು. ನೂರಾರು ಯೋಜನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದ ಅವರು, ಮಾಡುತ್ತಿದ್ದ ಕೆಲಸಗಳನ್ನು ಅಷ್ಟಕ್ಕೆ ಬಿಟ್ಟು ಸಾವಿನ ಕರೆಗೆ ಓಗೊಟ್ಟು ಹೋದಂತಿತ್ತು. ಕಿಟಕಿ ಪಕ್ಕದಲ್ಲೇ ಒಂದು ಒಣಕೊಂಬೆ ಸಿಕ್ಕಿಸಿ, ಅಲ್ಲಿ ಕಾಳು ನೀರು ಇಟ್ಟು ಹಕ್ಕಿಗಳು ಬರುವಂತೆ ಉಪಾಯ ಮಾಡಿಕೊಂಡಿದ್ದರು. ಆದರೀಗ ಹಕ್ಕಿ ಬಂದರೂ ತೆಗೆಯುವ ಪಟಗಾರನಿಲ್ಲ. ಅಲ್ಲಿಂದ ಕಣಿವೆಯಂತಹ ದಟ್ಟಕಾಡಿನ ಭಾಗ ಕಾಣುತ್ತದೆ. ಅಲ್ಲೊಂದು ಝರಿಯಿದೆ.

`ಒಂದು ಝರಿಯ ಜಾಡು’ ಕತೆಗೆ ಕಾರಣವಾದ ಝರಿ ಅದೇ ಇರಬೇಕು. ಕೃತಿಯ ಮೂಲಕ ನನ್ನಲ್ಲೇ ರೂಪುಗೊಂಡಿದ್ದ ಝರಿಯ ಚಿತ್ರ ಅಲುಗಿದಂತಾಯಿತು. ಲೇಖಕರ ಬರೆಹದಲ್ಲಿರುವ ವ್ಯಕ್ತಿ ಅಥವಾ ತಾಣಗಳ ಮೂಲಶೋಧ ಮಾಡಬಾರದೆನಿಸಿತು.ಕಾಫಿಯ ಜತೆ ಬಂದ ರಾಜೇಶ್ವರಿ ಒಂದೇ ಸವನೆ ಮಾತಾಡುತ್ತ ಹೋದರು. ಕೇಳಿಸಿಕೊಳ್ಳುತ್ತ ಹೋದೆವು. ಅರ್ಧಶತಮಾನದ ನೆನಪು ಕಡಲ ಅಲೆಗಳಂತೆ ಉಕ್ಕುಕ್ಕಿ ಬರುತ್ತಿದ್ದವು. ಎಲ್ಲವನ್ನು ಇಸವಿ ಸಮೇತ ಕರಾರುವಾಕ್ಕಾಗಿ ಹೇಳುತ್ತಿದ್ದರು. ಸಿರಿವಂತ ಕುಟುಂಬದಲ್ಲಿ ಹುಟ್ಟಿಬೆಳೆದ ತೇಜಸ್ವಿಯವರ ಸರಳತೆಗೆ ಬಗ್ಗೆ ಅವರಿಗೆ ಅಪಾರ ಅಭಿಮಾನ.

ಒಮ್ಮೆ ಮದುವೆಗೆ ಮುಂಚೆ ತಮ್ಮ ಮನೆಗೆ ತೇಜಸ್ವಿಯವರು ಬಂದಾಗ, ಅಲ್ಯುಮಿನಿಯಂ ತಟ್ಟೆಯಲ್ಲಿ ಊಟ ಕೊಟ್ಟರಂತೆ. ಅದರ ಬಗ್ಗೆ ಗಮನವೇ ಇಲ್ಲದೆ ತೇಜಸ್ವಿ ಉಂಡರಂತೆ. ಅದನ್ನು ಕಂಡು ರಾಜೇಶ್ವರಿಯವರಿಗೆ ಈ ವ್ಯಕ್ತಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಅನಿಸಿಬಿಟ್ಟಿತಂತೆ. ತೇಜಸ್ವಿ ಸಾಹಿತ್ಯದ ಗಂಭೀರ ವಿದ್ಯಾರ್ಥಿನಿಯಂತಿದ್ದ ರಾಜೇಶ್ವರಿ, ಸಾಲುಗಳನ್ನೆಲ್ಲ ನೆನಪಿಟ್ಟಿದ್ದರು. ‘ಹೀಗೆ ಯೋಚಿಸಲು ಯಾರಿಗೆ ಬರುತ್ತೆ? ನಿಮಗಾಗುತ್ತಾ? ನನಗಾಗುತ್ತಾ?’ ಎನ್ನುತ್ತ ತಮ್ಮ ತೇಜಸ್ವಿ ಎಷ್ಟು ಅನನ್ಯ ಎಂದು ವಿವರಿಸುತ್ತಿದ್ದರು; ಜಗತ್ತಿನ ಯಾವುದೇ ವಿದ್ಯಮಾನದ ಮೇಲೆ ಮಾತಾಡಿದರೂ ಅದು ಬಂದು ತೇಜಸ್ವಿಯವರಿಗೆ ಲಗತ್ತಾಗಿ ಮುಗಿಯುತ್ತಿತ್ತು.

ಹಕ್ಕಿ ಫೋಟೊಗಾಗಿ ಮರಸಿನಲ್ಲಿ ಕೂತಿದ್ದ ತೇಜಸ್ವಿಯವರಿಗೆ ಊಟಕ್ಕೆ ಕೂಗಿ ಕರೆದೊ, ಒಗ್ಗರಣೆಗೆ ಕರಿಬೇವಿನಸೊಪ್ಪು ತರಲೆಂದು ಹೋಗಿ ಹಕ್ಕಿಯನ್ನು ಓಡಿಸಿಯೊ ಬೈಸಿಕೊಂಡಿದ್ದನ್ನು ನೆನೆದರು-ಈಗ ಹಾಗೆ ಬೈಯುವವರಿಲ್ಲ ಎಂಬ ಕೊರಗಿನಲ್ಲಿ. ಪ್ರೀತಿಯ ನಾಯಿ ಪ್ರಾಣ ಬಿಡುವಾಗ, ತೇಜಸ್ವಿಯವರು ಅದನ್ನು ಮಗುವಿನಂತೆ ತಬ್ಬಿಕೊಂಡು ತೋಟದ ಮೂಲೆಮೂಲೆಗೆ ಒಯ್ದು, ‘ನೋಡೊ ನೋಡೋ, ಇದು ನೀನು ಓಡಾಡಿದ ನೆಲ. ಕೊನೆಯ ಸಲ ನೋಡಿಕೊ’ ಎಂದು ಹುಚ್ಚರಂತೆ ಓಡಾಡಿದ್ದನ್ನು ನೆನೆದರು. ಈಗ ಕೊರಳು ತುಂಬಿಬಂತು. ಮಾತು ನಿಂತಿತು.

ಬೆರಳುಗಳನ್ನು ಕನ್ನಡಕದೊಳಗೆ ತೂರಿಸಿ ಕಣ್ಣುಗಳ ಮೇಲಿಟ್ಟು ಸುಮ್ಮನಾದರು. ಆದರೆ ಕಣ್ಣುಗಳಿಗೆ ಹರಿವ ಕಂಬನಿ ತಡೆಯಲಾಗಲಿಲ್ಲ. ಅಗಲಿಕೆಯ ನೋವು ಎಷ್ಟು ಹಸಿಯಾಗಿದೆ- ವರ್ಷ ತುಂಬಿದರೂ! ಬಹುಶಃ ಅದು ಮಾಯದ ಗಾಯ. ತೇಜಸ್ವಿ ತಮ್ಮನ್ನು ಅಲೆಮಾರಿ ಎಂದು ಕರೆದುಕೊಂಡರು. ಆದರೆ ಹೆಂಡತಿ ತೋಟಮನೆ ಬಿಟ್ಟು ಹೊರಗೆ ಹೆಚ್ಚು ಹೋಗದ ಅವರಂತಹ ‘ಗೃಹಸ್ಥ’ಬೇರೆಯಿಲ್ಲ.

ಅರ್ಧಶತಮಾನ ಕಾಲ ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿಯ ಜತೆ ನಿರಂತರವಾಗಿ ಸಮಯ ಕಳೆದ ಈ ಜೀವ, ಇದ್ದಕ್ಕಿದ್ದಂತೆ ಅಗಲಿ ವೇದನೆ ಅನುಭವಿಸುತ್ತಿದೆ-ರಾಮಾಯಣದ ಮಿಥುನಕ್ರೌಂಚದಂತೆ. ಮಧ್ಯಾಹ್ನವಾಗುತ್ತಿತ್ತು. ಹೊರಗೆ ಹಕ್ಕಿಗಳ ದನಿಯಿಲ್ಲ. ಅವು ಎಲ್ಲೋ ಅಡಗಿ, ಇಡೀ ವಾತಾವರಣ ಮೌನದಿಂದ ನಿರುತ್ತರವಾಗಿತ್ತು. ಊಟವಾದ ಬಳಿಕ, ಮತ್ತೆ ಮಾತು. ಮತ್ತೆ ಕಾಫಿ. ಹಗಲು ಇಳಿಯತೊಡಗಿತು. ಮಧ್ಯಾಹ್ನದ ನೀರವತೆಯನ್ನು ಮುರಿವಂತೆ, ನಿಸರ್ಗದ ಚಟುವಟಿಕೆ ಮತ್ತೆ ಆರಂಭ. ರಾಜೇಶ್ವರಿ ಮನೆಯೊಳಗೆ ಕತ್ತಲಮೂಲೆಯಲ್ಲಿ ಇಟ್ಟಿದ್ದ ಚಕ್ಕೋತವನ್ನು ಸುಲಿದು ಎಲ್ಲರಿಗೂ ಕೊಡುವಂತೆ ಕೆಲಸದಾಳು ದೇವಕಿಗೆ ಕೊಟ್ಟರು.

ದೇವಕಿ ಬಾಗುಗತ್ತಿ ತೆಗೆದುಕೊಂಡು, ಗೊಮ್ಮಟನನ್ನು ಕಟೆದು ತೆಗೆವ ಶಿಲ್ಪಿಯಂತೆ, ಚಕ್ಕೋತದ ಹಳದಿ ಸಿಪ್ಪೆಯನ್ನೂ, ಅದಕ್ಕೆ ಹತ್ತಿಕೊಂಡಿದ್ದ ಹತ್ತಿಯಂತಹ ದಪ್ಪನಾದ ಮೆತ್ತೆಯನ್ನೂ ಕತ್ತರಿಸಿ, ಒಂದಕ್ಕೊಂದು ತಬ್ಬಿಕೊಂಡು ಪವಡಿಸಿದ್ದ ತಿಳಿಗುಲಾಬಿ ತೊಳೆಗಳನ್ನು ಅನಾವರಣಗೊಳಿಸಿದಳು. ಅವು ತೇಜಸ್ವಿ ತರಹ ಒಗರಿನಿಂದ ತುಂಬಿದ್ದವು. ಚಕ್ಕೋತವನ್ನು ಗಿಡದಿಂದ ಕಿತ್ತಕೂಡಲೇ ತಿನ್ನಬಾರದಂತೆ. ಅದನ್ನು ಕತ್ತಲಮೂಲೆಯಲ್ಲಿ ಕಳಿಯಲು ಬಿಡಬೇಕಂತೆ. ತೇಜಸ್ವಿಯವರಂತಹ ನಿರಂಕುಶಮತಿಯ ಹುಚ್ಚು ಪ್ರಯೋಗಗಳ ಜತೆ ಪಯಣಿಸಿರುವ ರಾಜೇಶ್ವರಿ ಅನುಭವಗಳಿಂದ ಮಾಗಿದ್ದರು. ತೇಜಸ್ವಿ ತೀರಿದ ಬಳಿಕ ಅವರು ಲೇಖಕಿಯಾಗಿ ಹೊಮ್ಮಿದರು.

ತೇಜಸ್ವಿ ಮತ್ತು ತಾರಿಣಿಯವರು ಕುವೆಂಪು ಅವರ ಬೇರೊಂದೇ ಮುಖಗಳನ್ನು ಕಟ್ಟಿಕೊಟ್ಟಂತೆ, ರಾಜೇಶ್ವರಿಯವರು ಕುವೆಂಪು ಮತ್ತು ತೇಜಸ್ವಿಯವರನ್ನು ತಮ್ಮ ಹೆಂಗಣ್ಣಿನ ಮೂಲಕ ಕಟ್ಟಿಕೊಟ್ಟರು. ಸರಳವೂ ಮುಗ್ಧವೂ ನೇರವೂ ಆಗಿರುವ ಅವರ ಬರೆಹ ಆಗಷ್ಟೆ ಮೂಡಿದ ಕೊನರಿನಂತೆ ತಾಜಾ ಆಗಿದೆ. ಆಪ್ತವಾಗಿದೆ. ತೇಜಸ್ವಿಯಂತಹ ಕಣ್ಕೋರೈಸುವ ಬೆಳಕಿನ ಜತೆ ಬದುಕಿದ ಅವರಲ್ಲಿ ಸಹಜವಾಗಿ ಅಭಿಮಾನ ತುಳುಕುತ್ತಿದೆ. ಅದುವೇ ತೇಜಸ್ವಿ ಚಿತ್ರವು ತನ್ನ ಮಾನುಷ ಸಹಜ ಮಿತಿಗಳ ಸಮೇತ ಮೂಡದಂತೆ ಮಾಡಿದೆಯಾ ಎಂದೂ ಅನಿಸಿತು. (ಈ ಪ್ರಶ್ನೆ ಲಂಕೇಶರನ್ನು ವಿಮರ್ಶಾತ್ಮಕವಾಗಿ ಚಿತ್ರಿಸುವ ಇಂದಿರಾ ಅವರ `ಹುಳಿಮಾವು ಮತ್ತು ನಾನು’ದ ಜತೆಯಿಟ್ಟು ನೋಡುವಾಗ ಹುಟ್ಟುತ್ತದೆ.)

ಬಾಳನ್ನೆಲ್ಲ ತೇಜಸ್ವಿಯವರ ಓದುಗರಿಗೂ ಗೆಳೆಯರಿಗೂ ಉಪಚರಿಸಿ ದಣಿದಂತಿರುವ ಅವರಿಗೆ, ಈಗ ತೇಜಸ್ವಿಯವರನ್ನು ಪ್ರೀತಿಸುವ ಜನ ಇರುವೆಗಳಂತೆ ಬರುತ್ತಿರುವುದು ಸಂತೋಷ. ಆದರೆ ಸಂದರ್ಶಕರ ಭೇಟಿಯಿಂದ ತಮಗೆ ಬರೆಹ ಮುಗಿಸಲು ಆಗುತ್ತಿಲ್ಲ ಎಂದು ಚಡಪಡಿಕೆ ಕೂಡ. ಇವತ್ತಂತೂ ಬಹಳ ಮಾತಾಡಿ ಸುಸ್ತಾಗಿದ್ದರು. ಹೊರಳು ಸೂರ್ಯನ ಬೆಳಕಲ್ಲಿ ನಿಂತಿದ್ದ ಅವರಿಗೆ ನಮಿಸಿ ಹೊರಟೆವು. ರಾಜೇಶ್ವರಿ ನಮಗೆ ನವಿಲುಗರಿ ಕೊಟ್ಟರು. ನಾನೊಂದು ಬಳ್ಳಿಯ ಚೂರನ್ನು ಹಿತ್ತಲಲ್ಲಿ ನೆಡಲು ಕೇಳಿ ಪಡೆದುಕೊಂಡೆ. ಈಗ `ನಿರುತ್ತರ’ಕ್ಕೆ ಹೋದರೆ ಮಾತಾಡಲು ರಾಜೇಶ್ವರಿಯವರೂ ಇಲ್ಲದಂತಾಯಿತು. (ಹಳೆಯ ಲೇಖನದ ಪರಿಷ್ಕೃತ ಆವೃತ್ತಿ: ನ್ಯಾಯಪಥದಲ್ಲಿ ಪ್ರಕಟ)

‍ಲೇಖಕರು Admin

December 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಈ ಬರಹ ಕಾಪಿಡುವಂತಿದೆ . ನೆನಪುಗಳು ತಾಜಾತಾಜಾ ಎನಿಸುತ್ತವೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: