ಗುಂಡುರಾವ್ ದೇಸಾಯಿ ಮಕ್ಕಳ ಕಥೆ- ನಾನೇ ಫಸ್ಟ್…!

ಗುಂಡುರಾವ್ ದೇಸಾಯಿ

ಮೊದಲಿನಿಂದಲೂ ರಾಮು ಓದುವುದರಲ್ಲಿ ಮುಂದು… ಅವನಪ್ಪ ಕೊಡಿಸಿದ್ದ ಟ್ಯಾಬು ಕಂಪೂಟರ್ ಅವನ ಬುದ್ಧಿಯನ್ನು ಮತ್ತಿಷ್ಟು ಬಲಿಸಿದ್ದವು. ಅವನು ಅದನ್ನು ಸದುದ್ದೇಶಕ್ಕೆ ಬಳಸಿಕೊಂಡು ಸ್ವಯಂ ಅರ್ಜಿತ ಜ್ಞಾನದಿಂದ ಜಾಣನಾಗಿದ್ದ. ಹಾಗೆ ಆಗಿ ನಾಲ್ಕು ಜನಕ್ಕೆ ಅನಕೂಲವಾಗಿದ್ದರೆ ಚಿಂತಿ ಇರಲಿಲ್ಲ… ತಾನು ಗಳಿಸಿಕೊಂಡ ಜ್ಞಾನವನ್ನು ಇನ್ನೊಬ್ಬರ ಹಿಯಾಳಿಕೆಗೆ ಶಿಕ್ಷಕರ ಪರೀಕ್ಷೆಗೆ ಬಳಸತೊಡಗಿದ. ಅವನ ಅಹಂಮಿಕೆ ಬರಬರುತ್ತಾ ಎಲ್ಲೆ ಮೀರಿ ಹೋಗಿತ್ತು.

ಶಿಕ್ಷಕರು ಹೇಳುವಾಗ ಶಿಕ್ಷಕರಿಗೆ ಕಠಿಣವಾದ, ಪಠ್ಯಕ್ಕೆ ಸಂಬಂಧವಿರದ ಪ್ರಶ್ನೆಗಳನ್ನು ಕೇಳುತ್ತಿದ್ದ. ಉತ್ತರಿಸಲಾಗದೆ ತತ್ತರಿಸುತ್ತಿದ್ದ ಗುರುಗಳು ನಾಳೆ ಹೇಳುವ ಭರಸೆ ನೀಡಿ ವಾರವಾದರೂ ಶಾಲೆಗೆ ಹಾಯುತಿರಲಿಲ್ಲ. ಬರಬರುತ್ತಾ ಉತ್ತರಿಸದ ಶಿಕ್ಷಕರ ಬಗ್ಗೆ ಲಘುವಾಗಿ ಮಾತನಾಡಲು ಆರಂಭಿಸಿದ. ಈ ಗುಣ ಶಿಕ್ಷಕರಲ್ಲಿ ರಾಮುವಿನ ಬಗ್ಗೆ ಇದ್ದ ಸದ್ಭಾವನೆ ಹೊರಟು ಹೋಯಿತು. ಯಾವಗ ಇವನ ಓದು ಮುಗಿದು ತೊಲಗತಾನೋ ಅನ್ನುವ ಭಾವ ಎಲ್ಲರಲ್ಲೂ ಮೂಡಿತು. ಮನೆಯವರಿಗೆ ತಿಳಿಸಬೇಕೆಂದರೆ ಅವರ ಅಪ್ಪ ರಾಜಕೀಯ ಧುರಿಣರು.. ಒಳ್ಳೆಯವರಿದ್ದರು ಹೇಳಬಹುದಾಗಿತ್ತಾದರೂ ‘ಏನ್ರಿ ಮೇಷ್ಟ್ರೆ ಸಣ್ಣಪುಟ್ಟವಕ್ಕೆಲ್ಲ ನಮ್ಮತ್ರ ಬರೋದಾ?’ ಎಂದು ಹಿಂದೊಮ್ಮೆ ನುಡಿದಿದ್ದರು. ಬೆಕ್ಕಿಗೆ ಗಂಟೆಕಟ್ಟೋರಾರು ಅನ್ನುವಂತಹ ಸ್ಥಿತಿ ಶಿಕ್ಷಕರದ್ದು.

ಶಾಲೆಯಲ್ಲಿ ಸ್ವಲ್ಪ ಅಂಜುತ್ತಿದ್ದುದು ದಿನಕರ ಮೇಷ್ಟ್ರಿಗೆ ಅಷ್ಟೆ. ಎಲ್ಲಾ ಶಿಕ್ಷಕರು ಅವರ ಮುಂದೆ ರಾಮುವಿನ ಅಹಂ ಕಡಿಮೆ ಮಾಡುವ ಮಾರ್ಗೊಪಾಯಗಳನ್ನು ತಿಳಿಸಲು ಹೇಳಿದರು. ‘ನಾನು ಗಮನಿಸಿದ್ದೇನೆ..ಎಚ್ಚರಿಸಿದ್ದೇನೆ ಅವನು ಕೇಳುತ್ತಿಲ್ಲ… ಏನೆ ಹೇಳಿದ್ರೂ ಉಪಯೋಗವಿಲ್ಲ..ಮತ್ತೊಬ್ಬ ಸ್ಪರ್ಧಿಯನ್ನು ರೆಡಿಮಾಡೋಣ’ ಎಂದು ಒಂದು ಉಪಾಯ ಹೇಳಿದರು. ಎಲ್ಲರೂ ಅದಕ್ಕೆ ಸಮ್ಮತಿಸಿದರು. ಮರುದಿನ ತರಗತಿಯಲ್ಲಿ ಬಂದು ಸಹಜವಾಗಿ ‘ಈ ವರ್ಷದಿಂದ ಫಸ್ಟ ಬಂದೋರಿಗೆ ಎರಡು ಸಾವಿರ ರೂಪಾಯಿ ಬಹುಮಾನ ಶಾಲೆಯಿಂದ ಘೋಷಿಸ್ತಾ ಇದ್ದೇವೆ. ಯಾರು ಪ್ರಯತ್ನ ಮಾಡತೀರಿ’ ಎಂದ್ರು.. ಎಲ್ಲರೂ ಮೌನವಾದರೂ ರಾಮನೂ ಮೌನವಾಗಿದ್ದ..

‘ಯಾಕೆ ರಾಮು ನೀನು ಮಾಡಲ್ವಾ..? ಕೈ ಎತ್ತಲಿಲ್ಲ…’ ಎಂದ್ರು.
‘ಈ ಶಾಲೆಯಲ್ಲಿ ನನ್ನ ಬಿಟ್ಟರೆ ಯಾರಿದ್ದಾರೆ ಸರ್?’ ಎಂದ ಸೊಕ್ಕಿನಿಂದ
‘ಎತ್ತಬೇಕಲ್ಲಪ್ಪ ಕೈಯನ್ನಾದರೂ…ಅಷ್ಟು ಆಗೋಲ್ವೆ?’
‘ಹೋಗಿ ಸಾರ್….ಎತ್ತಿದ್ರು ಅದಕ್ಕೆ ಬೆಲೆ ಇರಬೇಕು’ ಎಂದು ಉಡಾಫೆ ಮಾಡಿದ.
‘ಸರಿ ಬಿಡಪ, ಹೌದು… ಅವನಿಗೆ ಕಾಂಪಿಟೇಟರ್ ಯಾರೂ ಇಲ್ವಾ ಶಾಲೆಯಲ್ಲಿ? ಇಷ್ಟೊಂದು ದುಡ್ಡು ನಿಮಗ್ಯಾರಿಗೂ ಬೇಕಾಗಿಲ್ವಾ!’ ಎಂದು ದಿನಕರ ಸರ್ ಮಕ್ಕಳಿಗೆ ಆಸೆ ತೋರಿಸಿದಾಗ ಗಿರಿ ‘ಸರ್ ನಾನು ಪ್ರಯತ್ನ ಮಾಡತೀನಿ ಸರ್’ ಎಂದು ಕೈ ಎತ್ತಿದ… ರಾಮುಗೆ ಸಿಟ್ಟು ಏರಿತು.. ಎದ್ದುನಿಂತು. ‘ನೀನು ಮಾಡತೀಯಾ? ಮಾಡು ನೋಡತೀನಿ..ನಿನ್ನತ್ರ ಏನಿದೆ..ನನ್ನತ್ರ ಎಲ್ಲಾ ಅನುಕೂಲ ಇದೆ?’ ಎಂದಾಗ ಗಿರಿ ‘ಗೆಳೆಯ ಹೀಗೇಕೆ ಮಾತಾಡುವೆ. ಗುರುಗಳ ಬಹುಮಾನ ನನಗೆ ಹಲವು ಕಾರ್ಯಕ್ಕೆ ಬೇಕಾಗುತ್ತದೆ, ಹಾಗಾಗಿ ನಾನು ಹೇಳಿದೆ. ಪ್ರಯತ್ನ ಮಾಡೋದ್ರಲ್ಲಿ ತಪ್ಪೇನಿದೆ?’ ಎಂದ. ಅದುವರೆಗೂ ಕೊಬ್ಬಿನಿಂದ ಮಾತಾಡುತ್ತಿದ್ದ ರಾಮಗೆ ಏನಾಯ್ತೊ.. ಅವನ ಉತ್ತರಕ್ಕೆ ಹೌಹಾರಿದೆ. ಇಬ್ಬರ ನಡುವೆ ಮಾತು ಬೆಳೆಯುತ್ತಿರುವಾಗ ದಿನಕರ ಮೇಷ್ಟ್ರು ಸಂಧಾನ ಮಾಡಿ ನಿಲ್ಲಿಸಿದರು.

ರಾಮುವಿಗೆ ಹಿಂದ ಇದ್ದ ಏಕಾಗ್ರತೆಯಲ್ಲ ಹೋಯಿತು. ಗಿರಿಯ ಮೇಲೆ ಹೇಗಾದರೂ ಮಾಡಿ ಜಗಳ ತೆಗೆಯಬೇಕೆನ್ನುವ ದ್ವೇಷ ಉಕ್ಕಿತು.. ಬೇಕಂತಲೆ ಕಾಲುಕೆರೆದು ಜಗಳ ತೆಗೆಯುತ್ತಿದ್ದ. ತನ್ನ ಪಟಾಲಂ ಗೆಳೆಯರಿಗೂ ತಿಳಿಸುತ್ತಿದ್ದ. ಮಾತು ಮಾತು ಬೆಳೆದರೆ ಜಗಳ ಧೀರ್ಘಕ್ಕೆ ಹೋಗುವುದು ತಾನೆ ಅದನ್ನು ನಿರ್ಲಕ್ಷಿಸಿದರೆ ಯಾವುದೆ ಸಮಸ್ಯೆ ಇರದೆಂದು ಮನಗಂಡಿದ್ದ ಗಿರಿ ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಇವನ ಮೌನ ನಗು ರಾಮುವಿನ ಮನಸ್ಥಿತಿಗೆ ಸವಾಲಾಗುತ್ತ ಹೋಯಿತು… ‘ಏನು ಇವನ ಗುಟ್ಟು.? ಬರೀ ನಗುತ್ತಾನಲ್ಲ!’ ಹಗಲು ಇರಳು ಗಿರಿಯ ಚಿಂತೆಯಲ್ಲೆ ಕಳೆಯಲಾಂಭಿಸಿದ.

ಒಮ್ಮೆ ನೇರವಾಗಿ ಗಿರಿಗೆ ಕೇಳಿಯೆ ಬಿಟ್ಟ.. ‘ಅಲ್ಲ ನನ್ನ ಮೇಲೆ ಸ್ಪರ್ಧೆ ಮಾಡೋಕೆ ತಾಕತ್ತು ಇದೆನಾ?’
‘ಮತ್ತೆ ಅದೆ ಪ್ರಶ್ನೆನಾ? ಪ್ರಯತ್ನ ಮಾಡಬಾರದ ರಾಮು?’
‘ನಿನ್ನ ಯೋಗ್ಯತೆ ಏನು?ನೀನು ಬಡವ..ನಿನ್ನ ಹತ್ತಿರ ಏನಿದೆ?’
‘ಹಾಗೆನ್ನಬೇಡ..ದುಡ್ಡಿದ್ದವರಷ್ಟೆ ಯೋಗ್ಯರಲ್ಲ…ಹಾಗೆ ಆಗಿದ್ದರೆ ಈ ದೇಶದಲ್ಲಿ ಅಂಬೇಡ್ಕರ್, ವಿಶ್ವೇಶ್ವರಯ್ಯ ,ಕಲಾಂ ಅಂತಹವರು ಸಾಧನೆ ಮಾಡಲು ಆಗತಿರಲಿಲ್ಲ. ಬುದ್ಧಿ, ಆಸಕ್ತಿ, ಶ್ರಮದ ಮುಂದೆ ಎಲ್ಲವೂ ಶೂನ್ಯ’
‘ಲೇ ಬಾಡಕೊ ಬೀಡೊ ಅದನ್ನೆಲ್ಲಾ..ನೀನು ಹೇಳು ನನ್ನನ್ನ ಮೀರಿಸ್ತೀಯಾ….?’
‘ಮೀರಿಸಲು ನಾನ್ಯಾರು…ಕಷ್ಟಪಟ್ಟ ಓದಿದವರು ಯಾರಾದರೂ ಮೀರಿಸಬಹುದು?’
‘ನನ್ನಲ್ಲಿ ಎಲ್ಲಾ ಸೌಲಭ್ಯ ಇದೆ…ಟ್ಯಾಬ್ ಇದೆ..ಪಿಸಿ..ಇದೆ…ಹೆಚ್ಚು ಪುಸ್ತಕಗಳಿವೆ’
‘ಅಲ್ಲಿರೋದು ಪುಸ್ತಕದಲ್ಲಿರೋದಲ್ವಾ..ಪುಸ್ತಕದನ್ನು ಬಿಟ್ಟು ಬೇರೆ ಕೇಳ್ತರಾ ಪರೀಕ್ಷೆಲಿ?
‘ಯು ಇಡಿಯಟ್…! ನೋಡ್ತೀನಿ ನೀನು ಹೇಗೆ ಫಸ್ಟ ಬರತಿಯಾ ಅಂತ?’
‘ಸಾಧನೆಗೆ ಅಸಾಧ್ಯವಾದರೆ ಯಾವುದು ಇಲ್ಲ ಗೆಳೆಯ..ನಿನ್ನ ಸಾಧನೆ ನನಗೂ ಪ್ರೇರಣೆ’
‘ನನಗೆ ಉಪದೇಶ ಕೊಡತಿಯೇನೊ?’
‘ನಿನಗೆ ಉಪದೇಶ ಕೋಡಾಕ ನಾನೆಷ್ಟರವನು..ಗುರುಗಳು ಏನೊ ಬಹುಮಾನ ಇಟ್ಟಿದ್ದಾರೆ ಅದನ್ನ ಪಡಿಬೇಕು ಅಂತ ಆಸೆ ಅಷ್ಟೆ. ಅದಕ್ಕಾಗಿ ಪ್ರಯತ್ನ ಹೊರತು ನಿನ್ನ ಜೊತೆಗಲ್ಲ’
‘ನಾನು ಆ ಹಣ ಕೊಡತಿನಿ ನೀನು ಯತ್ನ ಮಾಡಬೇಡ..’
‘ಏನೊ ಹೇಳುತಿ ಗೆಳೆಯ ಒಬ್ಬ ಮೆರಿಟ್ ಸ್ಟುಟೆಂಟ್ ಆಗಿ. .ಅವಕಾಶ ಸಿಕ್ಕಿದೆ..ನನ್ನ ಸಾಮರ್ಥ್ಯನೂ ತೋರಸ್ತಿನಿ’ ಎಂದಿದ್ದೆ ಮತ್ತಷ್ಟು ಚಿಂತೆಗೆ ಕಾರಣವಾಯಿತು.

ನಾರ್ಮಲ್ ಆಗಿದ್ದ ರಾಮು ಆ ಕ್ಷಣದಿಂದ ಮತ್ತಷ್ಟು ಅಬ್ ನಾರ್ಮಲ್ ಆದ. ಹೇಗೆ ಎದುರಿಸೋದು ಸಂಕಟಪಡಹತ್ತಿದ…ಕೆಲ ಮಿತ್ರರಿಗೂ ಹೇಳಿದ..ಅವರೊ ‘ನೀನೆಲ್ಲಿ ಅವನೆಲ್ಲಿ..ನಿನ್ನ ಬೆರಳಿಗೆ ಸಮ..ಸುಮ್ಮನೆ ಮಾತಾಡಿ ಬಿಟ್ರ ಆಯ್ತಾ?’ ಅಂದರೂ ಸಮಾಧನಾವಿಲ್ಲ… ತರಗತಿಯಲ್ಲಿ ಕುಳಿತಾಗ ಹೊರಗೆ ಆಡುವಾಗ..ಹೋಗುವಾಗ ಗಿರಿ ಬೀರುತ್ತಿದ್ದ ಮುಗುಳ್ನಗೆ ಅವನ ನಿದ್ದೆ ಗೆಡಿಸುತ್ತಿತ್ತು..’ ಇಲ್ಲೊ ಅವ ಏನೊ ನಡಿಸಾನ..ಹೀಂಗ ಧೈರ್ಯವಾಗಿ ಇರೋಕೆ ಸಾಧ್ಯನ ಇಲ್ಲ…’ ಎಂದು ಗೆಳೆಯರಿಗೆ ನಿತ್ಯ ಕಾಡವ. ಅವರಿಗೂ ರಾಮುವಿನ ಸಹವಾಸ ಸಾಕಾಗಿ ದೂರವಾಗ ಹತ್ತಿದರು.
ಗಿರಿ ಮಾತ್ರ ಯಾವುದನ್ನು ಹಚ್ಚಿಕೊಳ್ಳದೆ..ಏನೆಲ್ಲ ತೊಂದರೆ ಕೊಟ್ಟರು ಲಕ್ಷಿಸಿದೆ..ಎಲ್ಲವನ್ನು ಅಲಕ್ಷಿ ಸಹಜವಾಗಿದ್ದ..ಆದರೆ ಅವನ ಬಗೆ ಚಿಂತೆ ಮಾಡಿ ಮಾಡಿ ರಾಮು ಸೊರಗಿದ..

ಕೊನೆಯ ಎರಡು ಕಿರು ಪರಿಕ್ಷೆಗಳಲ್ಲೂ ಗಿರಿ ರಾಮುವಿಗೆ ಸಮನಾಗಿ ಅಂಕ ತೆಗೆದುಕೊಂಡ. ರಾಮು ಗುರುಗಳೊಂದಿಗೆ ಜಗಳವಾಡಿ ಪಕ್ಷಪಾತ ಮಾಡಿರುವಿರೆಂದು ಅಂಕಪತ್ರಗಳನ್ನು ಪರಿಶೀಲಿಸಿದ.. ಸರಿಯಾಗಿಯೆ ಇದ್ದುದ್ದನ್ನು ಗಮನಿಸಿದಾಗ ಅವಮಾನವಾದಂತಾಯಿತು.. ಹಗಲಿರುಳು ಅದೆ ಚಿಂತೆಯಲ್ಲಿಯೆ ಕೊರಗಿದ. ಗಿರಿಯ ನಗು, ನಾನು ಸ್ಪರ್ಧೆ ಮಾಡುತ್ತೇನೆ ಎನ್ನುವ ವಿಚಾರಗಳೆ ಅವನ ಮನಸ್ಸಿಗೆ ಕಾಡ ಹತ್ತಿದವು.. ಅದರ ಮಧ್ಯವೂ ಓದಲು ತೊಡಗಿದ.

ಮನಸ್ಸು ಕೇಂದ್ರಿಕೃತ ಗೊಳ್ಳುತ್ತಿರಲಿಲ್ಲ. ಕೊನೆಯಲ್ಲಿ ಪರೀಕ್ಷೆ ಬಂತು.. ಮುಗಿಯಿತು ಫಲಿತಾಂಶವೂ ಬಂದಿತ್ತು.. ರಾಮ ಚೆನ್ನಾಗಿಯೆ ಬರೆದಿದ್ದ.. ಫಲಿತಾಂಶ ಪಟ್ಟಿ ಲಗತ್ತಿಸಿದಾಗ ಇಬ್ಬರೂ ಸಮಾನ ಅಂಕ ಪಡೆದಿದ್ದರು. ಮತ್ತೆ ಜಗಳ ತೆಗೆದದ್ದರಿಂದ ಉತ್ತರ ಪತ್ರಿಕೆ ನೋಡಲು ಕೊಡಲಾಯಿತು. ತನ್ನ ಅಂಕಗಳನ್ನು ಕೌಂಟ ಮಾಡಿದ ಸರಿಯಾಗಿದ್ದವು. ಗಿರಿಯ ಅಂಕ ಕೌಂಟ ಮಾಡಿದ..ಮತ್ತೊಮ್ಮೆ ಎಣಿಸಿದ..ಎಣಿಸುತ್ತಾ ಎಣಿಸುತ್ತಾ ಅವನ ಕಣ್ಣುಗಳು ತೇವವಾದವು.. ಅಹಂಮಿಕೆ ಕಣ್ಣೀರಿನ ರೂಪದಲ್ಲಿ ಇಳಿದು ಹೋಗುತ್ತಿತ್ತು. ‘ನಾನು ಗುರುಗಳಿಗೆ ಎಷ್ಟೆ ತೊಂದರೆ ಕೊಟ್ಟರು ಅವರು ಗಿರಿಯೂ ಮೊದಲ ಸ್ಥಾನ ಬರುವಂತಿದ್ದರೂ ತನಗೆ ನೋವಾಗಬಾರದೆಂದು ಇಬ್ಬರನ್ನು ಸಮಗೊಳಿಸಿ ನನ್ನನ್ನು ಹತಾಶನಾಗದಿರುವಂತೆ ಮಾಡಿದ್ದಾರೆ. ಛೇ ಎಂತಹ ತಪ್ಪು ಮಾಡಿಬಿಟ್ಟೆ?’ ಎಂದು ಬಿದ್ದು ಬಿದ್ದು ಅಳತೊಡಗಿದ.

ದಿನಕರ ಗುರುಗಳು ‘ಯಾಕೊ ಏನಾಯ್ತು ರಾಮ.. ಸಮಾಧಾನವಾಗಲಿಲ್ಲವೆ..?ಚಿಂತೆ ಬೇಡ ಇಬ್ಬರೂ ಸೇಮ್ ತೊಗೊಂಡಿದ್ದೀರಿ.. ಜಾಲಿಯಾಗಿರು’ ಎಂದರು. ರಾಮು ಪಾದಕ್ಕೆ ಬಿದ್ದು ‘ಕ್ಷಮಿಸಿ ಸರ್.. ಎಲ್ಲರೂ ಕ್ಷಮಿಸಿ ಇನ್ನು ಮುಂದೆ ನಾನು ಎಲ್ಲರ ಮೆಚ್ಚಿನ ವಿದ್ಯಾರ್ಥಿ ಗೆಳೆಯರ ಪ್ರೀತಿಯ ಸ್ನೇಹಿತನಾಗಿರಲು ಪ್ರಯತ್ನಿಸುವೆ.’ ಎಂದು ಹೊರಗಿದ್ದ ಗಿರಿಯನ್ನು ಕರೆದುಕೊಂಡು ಬಂದು ‘ಸರ್..ಇವನೆ ಫಸ್ಟ ಬಂದಿದ್ದಾನೆ..ಬಹುಮಾನ ಇವನಿಗೆ ನೀವು ನೀಡಬೇಕೆಂದು’ ಗುರುಗಳಲ್ಲಿ ವಿನಂತಿಸಿದ.

ರಾಮುವಿನ ಬದಲಾದ ವರ್ತನೆಗೆ ಎಲ್ಲರೂ ಖುಷಿ ಪಟ್ಟರು.ಗುರುಗಳೆಲ್ಲರ ಆತಂಕವೂ ಸರಳವಾಗಿ ನಿರಾಳವಾಯಿತು. ಕೊನೆಯಲ್ಲಿ ರಾಮು ಗಿರಿಗೆ ಕೇಳಿದೆ ‘ಹೌದು..ನಿನ್ನ ಗೆಲುವಿನ ಗುಟ್ಟು ಏನು?’ ಎಂದು ‘ಮೂರು ಹೊತ್ತು ನನ್ನ ಬಗ್ಗೆ ನೀನು ಚಿಂತಿಸಿದ್ದಕಾಗಿ.. ಹೀಗೆ ಮುಂದುವರೆದರೆ ಮುಂದಿನ ವರ್ಷ ನಾನೆ…ಫಸ್ಟ’ ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು… ‘ಯೂ ನಾಟಿ…ಗೊ ಅಹೆಡ್’ ಎಂದು ಅವನೂ ನಗುವಿನಲ್ಲಿ ಒಂದಾದ

‍ಲೇಖಕರು Admin

December 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: