ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಡಿಯೊಳಗೇ ಸಿಕ್ಕಿ ಸೆಣಸಾಡುವುದು..

-ಜಿ ಪಿ ಬಸವರಾಜು

ಕೊನೆ ಎಂಬುದು…

ಗೋಡೆಗಳೊ ಕನ್ನಡಿಗಳೊ ತಿಳಿಗೊಳಗಳೊ,
ಗೋಡೆಯ ಒಡೆದರೆ ಕಾಣುವುದಿಲ್ಲ ನೀನು
ಕನ್ನಡಿಯು ಚೂರಾದರೆ ನೂರು ಬಿಂಬ,
ನಿನ್ನ ನಗುವಿನ ಹಿಂದೆ ನಗುವೇ ಇರುವುದಿಲ್ಲ
ಎಲ್ಲವನ್ನೂ ತಳ್ಳಿಹಾಕಿದರೆ ಉಳಿದಿರುವುದು
ಗಾಳಿ, ನೇರಾನೇರ ಎಂದರೂ ಮಾತು ಒಡಪು

ತಿಳಿಗೊಳದಲ್ಲಿ ಇರಬಹುದು ನೂರು ಜೀವ
ಜೀವಕೊಂದು ಭಾವ, ಭಾವಕೆಷ್ಟೋ ಸುಳಿ
ಸುಳಿಯಲ್ಲಿ ಸಿಕ್ಕಿದರೆ ಮತ್ತೆ ತಿರುಗುವುದು
ಗಿರಿಗಿಟ್ಲೆ, ಎಷ್ಟು ಸುತ್ತು, ಯಾವ ದಿಕ್ಕು ದೆಸೆ

ನಂಬಲಾಗದು: ಮಾತೆಂಬುದು ಜ್ಯೋತಿರ್ಲಿಂಗ
ಬೆಳಕಿನ ಒಡಲಲ್ಲಿ ಕತ್ತಲು, ಕತ್ತಲ ಒಡಲಲ್ಲಿ
ಬೆಳಕಿನ ಬೀಜ, ಯಾವುದು ನಿಜ, ಯಾವುದು ಭ್ರಮೆ

ಮಾತೆಂಬುದು ನೇರ ದಾರಿಯಲ್ಲ, ಸರಳ ರೇಖೆಯಲ್ಲ
ತಿರುವು ತಿಟ್ಟು ಏರು ಇಳಿವು ಸುಡುಗಾಡ ದಾರಿ ಸಲೀಸಲ್ಲ
ಮಾತಿಗೆಷ್ಟು ಅರ್ಥ, ಎಷ್ಟು ಗೂಢ, ಚಕ್ರಬಿಂಬನ ಕೋಟೆ
ಒಳಾರ್ಥಗಳು ತಿಳಿಯುವುದಿಲ್ಲ, ಹೊಸ ಅರ್ಥ ಹುಟ್ಟುತ್ತ
ಮರಿಗೆ ಮರಿ, ಮೊಟ್ಟೆಯ ಹೊಟ್ಟೆಯಲಿಹುದೊಂದು ಜೀವ

ಇವಳೆಂದರೆ ಒಳ ಸುಳಿಗಳು, ಇವನೆಂದರೆ ತಿರುಗಣಿ ಮಡುವು
ಎತ್ತಲೋ ತಿರುಗುವಾಗ ಎಂಥದೋ ಗಳಿಗೆಯಲ್ಲಿ ಇವರಿಬ್ಬರು
ಸಂಧಿಸಿದ್ದೊಂದು ಅಪೂರ್ವ ಸಿದ್ಧಿ, ಯಾವ ಗ್ರಹದ ಸೆಳೆತವೊ
ಯಾವ ಗುರುತ್ವಾಕರ್ಷಣೆಯೊ, ಸರಳ ಸಂಗತಿಯಲ್ಲ ಹೇಳಲು
ಜೀವ ಜೀವದ ಗುಟ್ಟು ಒಡೆಯಲಾಗದು ಬಿಡಿಸಲಾಗದು ಸುಮ್ಮನೆ

ಪದರು ಪದರುಗಳನು ತೆಗೆದೆಸೆದರೂ ಬೆತ್ತಲಾಗುವುದಿಲ್ಲ ಕಾಯ
ಬೆತ್ತಲೆಂಬುದು ಭ್ರಮೆ ಬಯಲೆಂಬುದು ಮತ್ತೊಂದು ಭ್ರಮೆ
ತಳವಿರದ ಆಕಾಶ ನೀಲಿಗಟ್ಟುವುದೊಂದು ಭ್ರಮೆ; ಭ್ರಮಾಧೀನ
ಜೀವವೇ ಕೇಳು, ಭ್ರಮೆಯ ಗಡಿರೇಖೆ ದಾಟುವುದೂ ಒಂದು ಭ್ರಮೆ

ಗಡಿಯೊಳಗೇ ಸಿಕ್ಕಿ ಸೆಣಸಾಡುವುದು ಮನಸು ತುಡಿಯುತ್ತ
ಮಿಡುಕುತ್ತ ಚಡಪಡಿಸುತ್ತ ಮತ್ತೆ ಮತ್ತೆ ತನ್ನ ಬಲೆಯನು
ತಾನೆ ಹೆಣೆಯುತ್ತ, ಒಳ-ಹೊರಗು ಮರೆಯುತ್ತ ಮರೆಯುತ್ತ
ಬಲೆ ಹರಿಯದು ಆಟ ಮುಗಿಯದು ಕೊನೆ ಎಂಬುದು ಸುರು-
ಬಿನ ಬಿಂದು, ಮತ್ತೆ ಮುನ್ನುಗ್ಗಬೇಕು ಹೊಸದೊಂದು ಆಟಕ್ಕೆ

‍ಲೇಖಕರು Admin

30 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading