–ವೆಂಕಟೇಶ ಚಾಗಿ
ಅಂದು ಮನೆಯ ಮುಂದೆ ಆಟವಾಡುತ್ತಿರುವಾಗ ಮನೆಯ ಮುಂದಿನ ಮರದಲ್ಲಿ ಹುಳಗಳ ಸದ್ದು ಕೇಳಿಸಿತು. ಗುಂಯ್ ಎನ್ನುವ ಸತ್ತು ಮನೆಯ ಮುಂದೆ ಆಟವಾಡುತ್ತಿದ್ದ ಪದ್ದು ಹಾಗೂ ಅವನ ಸ್ನೇಹಿತರ ಮನ ಸೆಳೆಯಿತು. ಎಲ್ಲರೂ ಪದ್ದುವಿಗೆ “ಪದ್ದು ನೋಡು.. ನಿಮ್ಮ ಮರದ ಮೇಲ್ಗಡೆ ಹುಳಗಳು ಎಷ್ಟೊಂದು ಬಂದಿವೆ. ಎಲ್ಲವೂ ಗುಂಯ್ ಎನ್ನುತ್ತಿವೆ ನೋಡು ಬಾ ” ಎಂದು ಅವನ ಸ್ನೇಹಿತರು ಕರೆದರು.
ಪದ್ದು ಹಾಗೂ ಅವನ ಸ್ನೇಹಿತರು ಎಲ್ಲರೂ ಮರದ ಮೇಲ್ಗಡೆ ಹಾರಾಡುತ್ತಿದ್ದ ಹಲವಾರು ಹುಳುಗಳನ್ನು ನೋಡುತ್ತಾ ನಿಂತರು.
“ಇವು ಜೇನು ಹುಳುಗಳು” ಎಂದು ಅವರಲ್ಲೊಬ್ಬ ಅಂದ.
ಮತ್ತೊಬ್ಬ “ಅಲ್ಲ ..ಅಲ್ಲ .. ಅವು ಹೂವಿನ ಮೇಲೆ ಹಾರುವ ಸಣ್ಣ ಹುಳಗಳು” ಎಂದ.
“ಅಲ್ಲ.. ಅಲ್ಲ.. ಅವುಗಳು ಜೇನು ಹುಳುಗಳೇ.. ಅವುಗಳನ್ನು ನಾವು ನೋಡುತ್ತಾ ನಿಂತರೆ ಅವು ಹಾರಿ ಬಂದು ನಮ್ಮನ್ನು ಕಚ್ಚಿಬಿಡುತ್ತವೆ. ಆ ಹುಳುಗಳಿಗೆ ಬೆರಳನ್ನು ತೋರಿಸಬಾರದು. ಅವು ಬೆರಳನ್ನು ನೋಡಿದರೆ ಹಾರಿ ಬಂದು ನಮ್ಮನ್ನು ಕಚ್ಚಿಬಿಡುತ್ತವೆ. ನನಗೆ ನನ್ನ ಸ್ನೇಹಿತನೊಬ್ಬ ಹೇಳಿದ್ದ” ಎಂದನು ಗಣೇಶ.
ಮತ್ತೊಬ್ಬ “ಇಲ್ಲ.. ಇವು ಜೇನು ಹುಳುಗಳು ಇದ್ದರೂ ಇವು ಕಚ್ಚುವುದಿಲ್ಲ. ಏಕೆಂದರೆ ಇವು ಸಣ್ಣ ಹುಳುಗಳು . ಇವು ಸುಮ್ಮನೆ ಗಿಡದಿಂದ ಗಿಡಕ್ಕೆ ಹಾರಿ ಮುಂದೆ ಹೋಗುತ್ತವೆ” ಎಂದನು.
ಅಷ್ಟರಲ್ಲಿ ಪದ್ದುವಿನ ಅಣ್ಣ ರಾಜೇಶನು ಬಂದನು. ಅವನು ತನ್ನ ಸೈಕಲನ್ನು ಅದೇ ಮರದ ಕೆಳಗೆ ನಿಲ್ಲಿಸಿ ಎಲ್ಲರಿಗೂ “ಇಲ್ಲಿ ಜೇನು ಹುಳುಗಳು ಬಂದಿವೆ. ಇವು ಬಹಳ ಅಪಾಯ ಎಲ್ಲರೂ ಹೋಗಿ.. ನಿಮ್ಮ ನಿಮ್ಮ ಮನೆಗೆ ಹೋಗಿಬಿಡಿ. ಪದ್ದು ..ಮನೆ ಒಳಗೆ ಹೋಗು, ಜೇನು ಹುಳಗಳು ಹೋದ ನಂತರ ಮತ್ತೆ ಆಟ ಆಡಲು ಬರುವೆಯಂತೆ.. ಈಗ ಮನೆಗೆ ಹೋಗಿ” ಎಂದು ರಾಜೇಶ ಹೇಳಿ ಎಲ್ಲಾ ಮಕ್ಕಳನ್ನು ಅವರ ಮನೆಗಳಿಗೆ ಕಳುಹಿಸಿದನು.
ಪದ್ದು ಮನೆಯೊಳಗೆ ಬಂದು ಕಿಟಕಿಯ ಮೂಲಕ ಜೇನು ಹುಳುಗಳನ್ನು ನೋಡುತ್ತಾ ನಿಂತನು. ಜೇನು ಹುಳುಗಳು ಮರದ ಮೇಲ್ಗಡೆ ಗುಂಯ್ ಎಂದು ಸುತ್ತುತ್ತಾ ಇರುವುದು ಹಾಗೂ ಕೆಲವು ಜೇನು ಹುಳುಗಳು ಮರದ ಮೇಲೆ ಇದ್ದ ಹೂಗಳ ಮೇಲೆ ಕುಳಿತು ಸ್ವಲ್ಪ ಹೊತ್ತಿನ ನಂತರ ಮತ್ತೆ ಬೇರೆ ಹೂಗಳತ್ತ ಹಾರುತಿದ್ದವು. ಕೆಲವು ಹೂಗಳು ಮರದ ಒಂದು ಟೊಂಗೆಯ ಸುತ್ತ ಸುತ್ತುತ್ತಾ ಅಲ್ಲಿ ಏನೋ ಮಾಡುತ್ತಿದ್ದವು. ಹುಳುಗಳು ಮರದಿಂದ ಕೆಳಗೆ ಬರಲೇ ಇಲ್ಲ. ಆದರೂ ಮರದ ಕೆಳಗೆ ಯಾರೂ ಬರದಂತೆ ಪದ್ದು ಅಲ್ಲಿ ಬಂದವರಿಗೆ “ಗಿಡದಲ್ಲಿ ಜೇನು ಹುಳಗಳಿವೆ. ಇಲ್ಲಿ ಯಾರು ಬರಬೇಡಿ ಹೋಗಿ” ಎಂದು ಕಿಟಕಿಯ ಮೂಲಕ ಹೇಳುತ್ತದ್ದ.
ಮನೆಯ ಒಳಗೆ ಕೆಲಸ ಮಾಡುತ್ತಿದ್ದ ನಿಖಿಲರ ಅಮ್ಮ ಬಂದು ” ಪದ್ದುಏನು ಮಾಡುತ್ತಿರುವೆ..? ಎಂದರು . ಆಗ ಪದ್ದು “ಅಮ್ಮ ಅಲ್ಲಿ ನೋಡು ಮರದಲ್ಲಿ ಜೇನು ಹುಳುಗಳು ಬಂದಿವೆ. ಅವು ತುಂಬಾ ಅಪಾಯಕಾರಿಯಂತೆ. ನೀನು ಹೊರಗಡೆ ಹೋಗಬೇಡ ನಿನಗೆ ಜೇನು ಹುಳುಗಳು ಕಚ್ಚಿ ಬಿಡುತ್ತವೆ.” ಎಂದನು.
ಆಗ ಅಮ್ಮ ಹೊರಗಡೆ ನೋಡಿ “ಹೌದು ಜೇನುಗಳು ತುಂಬಾ ಇವೆ . ನೀನು ಹೊರಗಡೆ ಹೋಗಬೇಡ . ನಾನು ಪಕ್ಕದ ಮನೆಗೆ ಹೋಗಿ ಬರುವೆ . ನನಗೆ ಕೆಲಸವಿದೆ. ನೀನು ಮನೆಯಿಂದ ಹೊರಗೆ ಹೋಗಬೇಡ. ಇಲ್ಲೇ ಹೋಂ ವರ್ಕ್ ಮಾಡುತ್ತಾ ಇರು” ಎಂದು ಅಮ್ಮ ಮನೆಯ ಹೊರಗೆ ಹೊರಟು ಹೋದರು.
ಪದ್ದು ಬಾಗಿಲನ್ನು ಹಾಕಿಕೊಂಡು ಕಿಟಕಿಯಲ್ಲಿ ಜೇನು ಹುಳುಗಳನ್ನು ನೋಡುತ್ತಾ ತನ್ನ ಹೊಂ ವರ್ಕ್ ಮಾಡುತ್ತಾ ಕುಳಿತುಕೊಂಡ.
ಆ ದಿನ ಪೂರ್ತಿ ಪದ್ದು ಜೇನು ಹುಳುಗಳ ಬಗ್ಗೆ ಯೋಚನೆ ಮಾಡತೊಡಗಿದ. ಅವು ಎಲ್ಲಿಂದ ಬಂದವು? ಇಲ್ಲೇ ಏಕೆ ಬಂದವು ? ಅವು ಏನು ಮಾಡುತ್ತವೆ? ಅವು ಏನು ತಿನ್ನುತ್ತವೆ ? ಅವು ಎಲ್ಲಿಗೆ ಹೋಗುತ್ತವೆ ? ಹೀಗೆ ಹಲವಾರು ಪ್ರಶ್ನೆಗಳು ಪದ್ದು ವಿನ ತಲೆಯಲ್ಲಿ ಮೂಡಿದವು. ಆ ಎಲ್ಲ ಪ್ರಶ್ನೆಗಳಿಗೆ ಪದ್ದು ತನ್ನ ಅಣ್ಣ , ಅಮ್ಮ ಹಾಗೂ ತಂದೆಯವರೊಂದಿಗೆ ಚರ್ಚಿಸುತ್ತಾ ಸಮಾಧಾನಕರವಾದ ಉತ್ತರಗಳನ್ನು ಪಡೆದುಕೊಂಡ. ಆ ದಿನ ರಾತ್ರಿ ಮಲಗುವಾಗಲೂ ಅವನಿಗೆ ಜೇನು ಹುಳಗಳದೇ ಯೋಚನೆಯಾಗಿತ್ತು. ರಾತ್ರಿ ಊಟ ಮಾಡಿ ಮಲಗಿದ ನಂತರ ಅವನು ಜೇನು ಹುಳಗಳ ಬಗ್ಗೆ ಕನಸು ಕಂಡ.
ಮರುದಿನದ ಬೆಳಗಾಗುತ್ತಿದ್ದಂತೆ ಪದ್ದುವಿಗೆ ಜೇನು ಹುಳುಗಳನ್ನು ನೋಡುವ ಮನಸಾಯಿತು. ಬೆಳಗ್ಗೆ ಎದ್ದ ತಕ್ಷಣ ಮನೆಯ ಹೊರಗಡೆ ಬಂದು ಮರದ ಮೇಲೆ ನೋಡಿದ ಅಲ್ಲಿ ಜೇನು ಹುಳಗಳು ಇರಲಿಲ್ಲ.
“ಅರೇ ಜೇನುಹುಳ ಇಲ್ಲವಲ್ಲ. ಜೇನು ಹುಳುಗಳು ಎಲ್ಲಿ ಹೋದವು..? ಅವುಗಳನ್ನು ಯಾರು ಓಡಿಸಿದರು….?” ಎಂದು ಯೋಚಿಸಿದ. ನೇರವಾಗಿ ಅಮ್ಮನ ಬಳಿ ಬಂದು, “ಅಮ್ಮ ಜೇನುಹುಳುಗಳು ಕಾಣುತ್ತಿಲ್ಲವಲ್ಲ.. ಅವು ಎಲ್ಲಿ ಹೋದವು..?” ಎಂದು ಕೇಳಿದ. ಆಗ ಅಮ್ಮ “ಜೇನು ಹುಳಗಳ ಬಗ್ಗೆ ನನಗೇನು ಗೊತ್ತು..? ಅವು ಎಲ್ಲಿಗೆ ಹೋಗಿವೆ ಎಂಬುದು ನನಗೆ ಗೊತ್ತಿಲ್ಲ. ಅವೇನು ನನಗೆ ಹೇಳಿ ಹೋದವೇ ಅಥವಾ ಅವುಗಳು ಎಲ್ಲಿ ಹೋಗುತ್ತವೆ ಎಂಬುದನ್ನು ನಾನು ನೋಡುತ್ತಾ ಇದ್ದೆನೆ..? ನಿನ್ನ ಅಣ್ಣನಿಗೆ ಗೊತ್ತಿರಬಹುದು ಕೇಳಿ ನೋಡು” ಎಂದರು. ಪದ್ದು ಅಣ್ಣನ ಬಳಿ ಬಂದು, “ಅಣ್ಣ… ಅಣ್ಣ.. ನಿನ್ನೆ ಜೇನು ಹುಳುಗಳು ಮರದಲ್ಲಿ ಇದ್ದವಲ್ಲ ಅವು ಈಗ ಕಾಣಿಸುತ್ತಿಲ್ಲ . ಎಲ್ಲಿ ಹೋದವು..? ನಿನಗೆ ಗೊತ್ತೇ..?” ಎಂದನು. “ಅವು ಎಲ್ಲಿ ಹೋದ ವೆಂದು ನನಗೇನು ಗೊತ್ತು. ನಾನು ಅವುಗಳನ್ನು ನೋಡುತ್ತಾ ಇದ್ದೇನೆ..? ನನಗೆ ನೂರೆಂಟು ಕೆಲಸಗಳಿವೆ ನನಗೆ ಗೊತ್ತಿಲ್ಲ.” ಎಂದನು.
ಪದ್ದು ಮನೆಯ ಹೊರಗೆ ಬಂದು ಮರವನ್ನೇ ನೋಡುತ್ತಾ “ಜೇನುಹುಳುಗಳು ಎಲ್ಲಿ ಹೋಗಿರಬಹುದು..?” ಎಂದು ಯೋಚಿಸುತ್ತಾ ನಿಂತ. ಆಗ ಅವನ ಸ್ನೇಹಿತರು ಬಂದು ಪದ್ದುವಿಗೆ “ಏನು ಹುಡುಕುತ್ತಿರುವೆ..?” ಎಂದು ಕೇಳಿದರು. “ನಿನ್ನೆ ಮರದಲ್ಲಿ ಹಲವಾರು ಜೇನು ಹುಳುಗಳು ಬಂದಿದ್ದವಲ್ಲ ಅವೆಲ್ಲ ಎಲ್ಲಿ ಹೋದವು..? ಎಲ್ಲಿಯೂ ಕಾಣುತ್ತಿಲ್ಲವಲ್ಲ ಎಂದು ನೋಡುತ್ತಿರುವೆ” ಎಂದನು. ಆಗ ಅವನು ಸ್ನೇಹಿತರು ಕೂಡ ಆ ಜೇನು ಹುಳಗಳನ್ನು ನೆನಪಿಸಿಕೊಂಡು “ಹೌದಲ್ಲ .. ನಿನ್ನೆ ಹುಳುಗಳು ಇದ್ದವಲ್ಲ ಎಲ್ಲಿ ಹೋದವು ..? ಎಲ್ಲೋ ಬೇರೆ ಕಡೆಗೆ ಹೋಗಿರಬೇಕು. . ರಾತ್ರಿ ಆದಮೇಲೆ ಅವುಗಳೆಲ್ಲ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿರಬೇಕು” ಎಂದು ತಮ್ಮ ತಮ್ಮಲ್ಲೇ ಮಾತನಾಡುತ್ತಾ ನಿಂತುಕೊಂಡರು .
ಅಷ್ಟರಲ್ಲಿ ಪದ್ದುವಿಗೆ ಮರದಲ್ಲಿ ಒಂದು ಟೊಂಗೆಯ ಎಲೆಗಳ ನಡುವೆ ಒಂದು ಕಪ್ಪಾದಂತಹ ಆಕೃತಿ ಕಾಣಿಸಿತು. ಆಗ ತನ್ನ “ಸ್ನೇಹಿತರಿಗೆ ಅಲ್ಲಿ ನೋಡ್ರೋ ..ಅದೇನು ಕಪ್ಪಾಗಿರುವಂತ ವಸ್ತು ಕಾಣಿಸ್ತಿದೆ. ಅದೇನಿರಬಹುದು..? ಎಂದನು. ಅವರು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಗ ಅವರಲ್ಲೊಬ್ಬ “ಅದು ಜೇನುಗೂಡು ಜೇನುಗಳೆಲ್ಲ ಸೇರಿ ಗೂಡು ಕಟ್ಟಿಕೊಂಡಿವೆ. ನಿಮ್ಮ ಮರದಲ್ಲಿ ಜೇನು ಹುಳಗಳು ಗೂಡು ಕಟ್ಟಿವೆ ನೋಡು” ಎಂದನು. ಪದ್ದು ಸೂಕ್ಷ್ಮವಾಗಿ ಗಮನಿಸುತ್ತಲೇ “ಹೌದು ..ಅದು ಜೇನುಗೂಡು ನಮ್ಮ ಮರದಲ್ಲಿ ಜೇನುಗೂಡು ಕಟ್ಟಿಕೊಂಡಿದೆ” ಎಂದು ಖುಷಿಯಿಂದ ಕುಣಿದಾಡಿದನು.
ಪದ್ದು ಹಾಗೂ ಅವನ ಸ್ನೇಹಿತರು ಎಲ್ಲರೂ ಸೇರಿ ಊರಿನ ಎಲ್ಲಾ ಸ್ನೇಹಿತರ ಬಳಿ ಹೋಗಿ ಪದ್ದುವಿನ ಮನೆಯ ಮುಂದೆ ಮರದಲ್ಲಿ ಜೇನುಗೂಡು ಕಟ್ಟಿರುವ ವಿಷಯವನ್ನು ಎಲ್ಲರಿಗೂ ತಿಳಿಸಿದರು. ಪದ್ದುವಿನ ಹಲವಾರು ಸ್ನೇಹಿತರು ಮನೆಯ ಬಳಿ ಬಂದು ಎಲ್ಲರೂ ಸೇರಿ ಜೇನುಗೂಡನ್ನು ನೋಡತೊಡಗಿದರು. ಪದ್ದು ಮನೆಯ ಜೇನುಗೂಡು ಆ ದಿನದ ಪ್ರಮುಖ ಆಕರ್ಷಣೆಯಾಯಿತು. ಊರಿನಲ್ಲಿ ಇದ್ದ ಎಲ್ಲಾ ಮಕ್ಕಳು ಮರದಲ್ಲಿ ಜೇನುಗೂಡು ಕಟ್ಟಿರುವುದನ್ನು ಎಲ್ಲರಿಗೂ ಹೇಳಿದರು. ಆ ದಿನ ಪದ್ದುವಿಗೆ ತನ್ನ ಎಲ್ಲಾ ಸ್ನೇಹಿತರಿಗೆ ಜೇನುಗೂಡು ತೋರಿಸುವುದೇ ಕಾರ್ಯವಾಯಿತು. ಕೆಲವರಂತೂ “ಈ ಜೇನುಗೂಡು ದೊಡ್ಡದಾದ ಮೇಲೆ ಇದರಲ್ಲಿ ಜೇನು ದೊರೆಯುತ್ತದೆ. ಇದು ತುಂಬಾ ರುಚಿಕರವಾಗಿರುತ್ತದೆ” ಎಂದರು. ಜೇನು ಎಂದು ತಕ್ಷಣ ಪದ್ದುವಿನ ಬಾಯಲ್ಲಿ ನೀರೂರಿತು. ನಾನು ಜೇನು ಸವಿಯುವೆ ಎನ್ನುತ್ತಾ “ನಿಮಗೂ ಕೂಡ ಜೇನು ಕೊಡುವೆ” ಎಂದನು. ಎಲ್ಲರೂ ಸೇರಿ ಜೇನು ಸವಿಯುವ ಕನಸು ಕಂಡರು.
ಪದ್ದುವಿನ ಗಿಡದಲ್ಲಿ ಜೇನು ಕಟ್ಟಿರುವುದು ಅಕ್ಕಪಕ್ಕದ ಮನೆಯವರಿಗೆಲ್ಲ ತಿಳಿಯಿತು. ಜನರು ವಾಸಿಸುವ ಸ್ಥಳದಲ್ಲಿ ಜೇನುಗೂಡು ಇರುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟರು . ಮೂರನೇಯ ಮನೆಯ ಅಜ್ಜಿ “ಅಯ್ಯೋ ಜೇನು ಸಣ್ಣ ಮಕ್ಕಳಿಗೆ ಕಚ್ಚಿದರೆ ತುಂಬಾ ತೊಂದರೆ ಜೇನು ಬಿಡಿಸಬೇಕು” ಎಂದು ಪದ್ದುವಿನ ತಂದೆಗೆ ಹೇಳಿದರು. ಪದ್ದುವಿನ ತಂದೆ ಎಲ್ಲರ ಅಭಿಪ್ರಾಯಗಳನ್ನು ಕೇಳಿ ಆ ದಿನ ರಾತ್ರಿಯೇ ಜೇನು ಬಿಡಿಸಬೇಕು ಎಂದು ತೀರ್ಮಾನಿಸಿದರು.
ಅದೇ ದಿನ ರಾತ್ರಿ ಎಲ್ಲರೂ ಮಲಗಿದ್ದಾಗ ಮುದ್ದುವಿಗೆ ಗೊತ್ತಾಗದಂತೆ ಅವನ ತಂದೆ ಹಾಗೂ ಅಣ್ಣ ಸೇರಿಕೊಂಡು ಒಂದು ಪಂಜು ತೆಗೆದುಕೊಂಡು ರಾತ್ರಿಯೇ ಜೇನು ಓಡಿಸಿದರು.
ಬೆಳಗು ಆಗುತ್ತಿದ್ದಂತೆ ಪದ್ದು ಎದ್ದು ಬಂದು ಜೇನುಗೂಡು ನೋಡಿದ. ಆದರೆ ಆ ಜಾಗದಲ್ಲಿ ಜೇನುಗೂಡು ಇರಲಿಲ್ಲ. ಅಮ್ಮನ ಬಳಿ ಬಂದು “ಅಮ್ಮ ಜೇನುಗೂಡು ಕಾಣುತ್ತಿಲ್ಲವಲ್ಲ..?” ಎಂದನು. ಆಗ ಪದ್ದುವಿನ ಅಣ್ಣ “ನಾನು ಮತ್ತು ಅಪ್ಪ ಸೇರಿ ನಿನ್ನೆ ರಾತ್ರಿ ಜೇನು ಹುಳುಗಳನ್ನು ಹೋಡಿಸಿದ್ದೇವೆ. ಜೇನು ಹುಳುಗಳು ಬೇರೆಡೆ ಹಾರಿಹೋಗಿವೆ. ಇನ್ನು ಮುಂದೆ ನಮಗೆ ಅಪಾಯವಿಲ್ಲ” ಎಂದು ಹೇಳಿದ. ಪದ್ದುವಿಗೆ ತುಂಬಾ ದುಃಖವಾಯಿತು. ಜೇನುಗೂಡಿನ ಬಗ್ಗೆ ತಾನು ಕಟ್ಟಿಕೊಂಡಿದ್ದ ಕನಸುಗಳೆಲ್ಲ ನುಚ್ಚು ನೂರಾದವು. ಪದ್ದುವಿನ ಮನದಲ್ಲಿ ದುಃಖ ತುಂಬಿಕೊಂಡಿತು. ಕಣ್ಣಿನಲ್ಲಿ ನೀರು ಚಿಮ್ಮಿತು.






0 Comments