ಸರಸ್ವತಿ ಭೋಸಲೆ ಅವರ ಮಕ್ಕಳ ಕಥಾ ಸಂಕಲನ ‘ದೇವರ ದುಡ್ಡು‘
ಈ ಕೃತಿಯ ಕುರಿತ ಶ್ರೀಧರ ಗಸ್ತಿ ಅವರ ಬರಹ ಇಲ್ಲಿದೆ.
–ಶ್ರೀಧರ ಗಸ್ತಿ
ಮಕ್ಕಳ ಮನಸ್ಸು ಎಂದರೆ ಒಂದು ಅದ್ಭುತ ಲೋಕ. ಅದು ಗಾಜಿನಂತೆ ಪಾರದರ್ಶಕ, ಮಣ್ಣಿನಂತೆ ಮೃದು. ಅಲ್ಲಿ ಏನು ಬಿತ್ತಿದರೂ ಅದು ಪ್ರೀತಿಯಿಂದ ಮೊಳಕೆಯೊಡೆಯುತ್ತದೆ. ಮುದ್ದಾದ ನಗುವಿನಿಂದ ಕಣ್ಣೀರಿನ ತೇವದವರೆಗೆ, ಆಟದ ಕಿಲಿಕಿಲಿಯಿಂದ ಗಂಭೀರ ಚಿಂತನೆಯವರೆಗೂ—ಮಕ್ಕಳ ಜಗತ್ತು ಸದಾ ಜೀವಂತ, ಚಲನವಲನಗಳಿಂದ ತುಂಬಿದ ಜಗತ್ತು. ಆ ಜಗತ್ತಿಗೆ ಬಣ್ಣ ನೀಡುವುದು ಕಥೆಗಳು. ಕಥೆಗಳು ಮಕ್ಕಳ ಕಲ್ಪನೆಗೆ ರೆಕ್ಕೆಗಳನ್ನು ಕೊಟ್ಟು, ಅವರ ಹೃದಯದಲ್ಲಿ ಮಮತೆಯ ಬೀಜವನ್ನು ಬಿತ್ತುತ್ತವೆ. ಬಾಲ್ಯದ ಬಾಗಿಲನ್ನು ತೆರೆದು ಬೆರಗಿನ ಬಂಗಾರದ ದಿನಗಳನ್ನು ನೆನಪಿಸಿ ಪುಳಕಿಸಿ ಮನಸ್ಸಿಗೆ ಅಹ್ಲಾದವನ್ನುಂಟು ಮಾಡುತ್ತವೆ. ಆ ದಿಸೆಯಲ್ಲಿ ಹಿರಿಯ ಲೇಖಕಿ ಶ್ರೀಮತಿ ಸರಸ್ವತಿ ಭೋಸಲೆಯವರು ಸಾಹಿತ್ಯ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರು. ಅವರು ಮಕ್ಕಳ ಸಾಹಿತ್ಯದ ಹತ್ತು ಕಥೆಗಳಿಗೆ ಮುನ್ನುಡಿ ಬರೆಯಲು ವಿನಂತಿಸಿಕೊಂಡಾಗ ಒಲ್ಲೆ ಅನ್ನಲು ಮನಸ್ಸಾಗಲಿಲ್ಲ. ಅವರು ಮಕ್ಕಳ ಕಥಾಸಂಕಲನ ಹೊರತರುವ ಕಂಕೈರ್ಯಕ್ಕೆ ಕೈ ಹಾಕಿದ್ದು ತುಂಬಾ ಸಂತೋಷ. ಮಕ್ಕಳ ಮನಸ್ಸಿನ ಬಯಲು ದಾರಿಯಲ್ಲಿ ಮೌಲ್ಯಗಳ ಬೆಳಕು ಚೆಲ್ಲಿ ಅವರ ವ್ಯಕ್ತಿತ್ವ ವಿಕಾಸಕ್ಕೆ, ಕ್ರಿಯಾಶೀಲತೆಗೆ ಸಾಹಿತ್ಯದ ಗಮಲು ಹರಿಸಿರುವ ಶಿಸು ಸಂಗಮೇಶ, ಎಚ್ಎಸ್ ವೆಂಕಟೇಶಮೂರ್ತಿ, ಆನಂದ ಪಾಟೀಲ, ಬಸು ಬೇವಿನಗಿಡದ, ವೈ ಜಿ ಭಗವತಿ, ತಮ್ಮಣ್ಣ ಬೀಗಾರ, ಶಿವಲಿಂಗಪ್ಪ ಹಂದಿಹಾಳ ಹೀಗೆ ಹತ್ತು ಹಲವರ ಹೆಸರುಗಳು ಕೇಳಿ ಬರುತ್ತವೆ. ಅವರ ಸಾಲಿಗೆ ಸರಸ್ವತಿ ಭೋಸಲೆಯವರೂ ಸಹ ಸೇರುವ ಪ್ರಯತ್ನದಲ್ಲಿದ್ದಾರೆ. ಅವರ ಈ ಪ್ರಯತ್ನದಲ್ಲಿ ಹೊರಬಂದ ಕಥೆಗಳು ಮಕ್ಕಳಿಗೆ ಹತ್ತಿರವಾಗುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. “ಸುಂದ್ರಜ್ಜಿ”, “ಕೋಳಿ ಪಿಳ್ಳಿ”, “ಗೆಳೆತನ”, “ಭರಮಪ್ಪಾ”, “ಅಜ್ಜಿಯ ಗಿಫ್ಟ್”, “ಸುಂದ್ರೀ”, “ಬಾಳೆಗಿಡ”, “ರಾಮೂ ಮತ್ತು ಮಂಗಣ್ಣ” “ದೇವರ ದುಡ್ಡು”, “ಬಾಲಾಯ ತಸ್ಮೈ ನಮಃ”— ಇವುಗಳೆಲ್ಲ ಮಕ್ಕಳ ಬದುಕಿನ ಸಿಹಿ-ಕಹಿ ಕ್ಷಣಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಓದುವಾಗ ನಮ್ಮ ಮನಸ್ಸು ಮತ್ತೆ ಬಾಲ್ಯಕ್ಕೆ ಹಾರಿ ಹೋಗುತ್ತದೆ.
“ಸುಂದ್ರಜ್ಜಿ” ಕಥೆಯಲ್ಲಿ ಪಿಂಟೂ ಮತ್ತು ಅವನ ಅಜ್ಜಿಯ ನಡುವಿನ ಮಮತೆಯ ಬಾಂಧವ್ಯ ತುಂಬಾ ನೈಸರ್ಗಿಕವಾಗಿ ಮೂಡಿಬಂದಿದೆ. ಅಜ್ಜಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಹೋಗುವಾಗ ಪಿಂಟೂ ಅನುಭವಿಸುವ ಅಸಹಾಯಕತೆ, ಆ ನೋವನ್ನು ತನ್ನ ಮುದ್ದಾದ ಆಮೆ “ರಾಣಿ”ಯೊಂದಿಗೆ ಹಂಚಿಕೊಳ್ಳುವ ನಿರಪರಾಧಿತನ—ಇವು ಎಲ್ಲವೂ ಓದುಗನ ಹೃದಯ ತಟ್ಟುತ್ತವೆ. ಕೊನೆಯಲ್ಲಿ ಅಜ್ಜಿ ಮನೆಗೆ ಮರಳುವ ಸಂತೋಷದ ಕ್ಷಣ, “ಅಜ್ಜಿ ಬಂದಳು, ಮನೆಗೆ ಬೆಳಕು ತಂದಳು” ಎಂಬ ಸಾಲು, ಮನೆಯ ಹಿರಿಯರ ಸಾನ್ನಿಧ್ಯವೇ ಬದುಕಿನ ಬೆಳಕು ಎಂಬ ಸಂದೇಶವನ್ನು ಮೃದುವಾಗಿ ನೆನಪಿಸುತ್ತದೆ.
“ಕೋಳಿ ಪಿಳ್ಳಿ” ಕಥೆ ಹೃದಯಕ್ಕೆ ಹತ್ತಿರವಾಗುವಷ್ಟು ಮುದ್ದಾಗಿದೆ. ಗಿರಿಜವ್ವ, ಅವಳ ಮಗ ಶೀನಿ ಮತ್ತು ಲಚ್ಚಿ ಎಂಬ ನಾಟಿಕೋಳಿಯ ಸುತ್ತ ಕಥೆ ಸಾಗುತ್ತದೆ. ಶೀನಿಯ ಕುತೂಹಲ, ಪಿಳ್ಳಿಯ ಆಟಗಳು, ಬೆಕ್ಕು–ಹದ್ದು–ಮುಂಗುಸಿಗಳ ಜೊತೆ ನಡೆಯುವ ಮೋಜಿನ ಘಟನೆಗಳು ಮಕ್ಕಳ ಬದುಕಿನ ನೈಜ ಕ್ಷಣಗಳನ್ನು ನೆನಪಿಸುತ್ತವೆ. ತಾಯಿಯ ಕಾಳಜಿ, ಮಗನ ಆಟದ ಬಯಕೆ, ಪಿಳ್ಳಿಯ ನಿರಪರಾಧಿತನ—ಇವು ಎಲ್ಲವೂ ಸೇರಿ ಮಾತೃಸ್ನೇಹ ಮತ್ತು ಬಾಲ್ಯಸೌಂದರ್ಯದ ಸುಂದರ ಚಿತ್ರಣವನ್ನು ಕೊಡುತ್ತವೆ. ಕಥೆಯ ಅಂತ್ಯ ಸ್ವಲ್ಪ ದೀರ್ಘವಾಗಿದ್ದರೂ ಅದರ ನಿರಪರಾಧ ಭಾವನೆ ಮಕ್ಕಳಿಗೆ ಹತ್ತಿರವಾಗುತ್ತದೆ.
“ಗೆಳೆತನ” ಕಥೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಸಾದಿಕ್ ಮತ್ತು ಸಂಕೇತ ಎಂಬ ಇಬ್ಬರು ಮಕ್ಕಳ ಸ್ನೇಹ ಕೇವಲ ಆಟ-ಪಾಠಗಳಲ್ಲ, ಅದು ಧರ್ಮ-ಸಂಸ್ಕೃತಿಗಳ ಅಂತರವನ್ನು ಮೀರಿ ಬೆಸೆಯುವ ಹೃದಯಸ್ಪರ್ಶಿ ಬಾಂಧವ್ಯವಾಗಿದೆ. ಹಬ್ಬ-ಹರಿದಿನಗಳಲ್ಲಿ ಪರಸ್ಪರ ಪಾಲ್ಗೊಳ್ಳುವ ಸಂಭ್ರಮ, ಬಣ್ಣ ಬಣ್ಣದ ಹಬ್ಬದ ಸೊಗಸು, ಸ್ನೇಹದ ತ್ಯಾಗ—ಇವೆಲ್ಲವೂ ಕಥೆಗೆ ಆಳ ನೀಡುತ್ತವೆ. ವಿಶೇಷವಾಗಿ, ಸಾದಿಕ್ ಅನಾರೋಗ್ಯದಿಂದ ರೋಜಾ ಹಿಡಿಯಲಾಗದ ಸಂದರ್ಭದಲ್ಲೂ ಸಂಕೇತ ಅವನ ಪರವಾಗಿ ಉಪವಾಸ ಮಾಡುವ ಘಟನೆಯು ಸ್ನೇಹದ ನಿಜವಾದ ಅರ್ಥವನ್ನು ತೋರಿಸುತ್ತದೆ. ಮಕ್ಕಳ ಕಣ್ಣಲ್ಲಿ ಧಾರ್ಮಿಕ ಸಹಬಾಳ್ವೆಯ ಸೌಂದರ್ಯವನ್ನು ನೋಡುವ ಅವಕಾಶವನ್ನು ಈ ಕಥೆ ನೀಡುತ್ತದೆ.
“ಭರಮಪ್ಪಾ” ಕಥೆ ಮಕ್ಕಳ ಮನಸ್ಸಿನ ನಿರಪರಾಧ, ನಂಬಿಕೆ ಮತ್ತು ದೇವರ ತತ್ತ್ವಗಳನ್ನು ಮನಮುಟ್ಟುವಂತೆ ತೋರಿಸುವ ಪ್ರಯತ್ನ ಈ ಕಥೆಯಲ್ಲಿ ಅಡಕವಾಗಿದೆ. ಬಡತನದಲ್ಲಿ ಬೆಳೆದ ಕೇಶವ, ತನ್ನ ಅಜ್ಜ-ಅಜ್ಜಿಯ ನೋವು ಕಡಿಮೆಯಾಗಲಿ ಎಂದು ದೇವರ ಭಕ್ತಿಯಲ್ಲಿ ಮುಳುಗುತ್ತಾನೆ. ಹಾವು ರೂಪದಲ್ಲಿ ಭರಮಪ್ಪ ದರ್ಶನ ಕೊಟ್ಟು, ಗುಡ್ಡದ ಮೇಲಿನ ನಾಗರಹೂವನ್ನು ಪ್ರತಿದಿನ ತಂದು ಪೂಜಿಸುವಂತೆ ಹೇಳುವುದು, ಆ ಪೂಜೆಯಿಂದ ಅಜ್ಜನಿಗೆ ದೃಷ್ಟಿ, ಅಜ್ಜಿಗೆ ಆರೋಗ್ಯ ಸಿಗುವುದು—ಇವೆಲ್ಲವು ಭಕ್ತಿಯ ಶಕ್ತಿ ಮತ್ತು ಮಕ್ಕಳ ಮನಸ್ಸಿನ ಶ್ರದ್ಧೆಯನ್ನು ಮೃದುಸ್ಪರ್ಶಿಯಾಗಿ ಚಿತ್ರಿಸುತ್ತವೆ.
“ಅಜ್ಜಿಯ ಗಿಫ್ಟ್” ಕಥೆ ಮುದ್ದಾದ ಸೋನು ಮತ್ತು ಅವನ ಅಜ್ಜಿಯ ಪ್ರೀತಿ-ಪರಿವೆಯ ಕಥೆ. ಅಜ್ಜಿ ಕೊಟ್ಟ ಸೈಕಲ್ ಕೇವಲ ಆಟದ ಸಾಧನವಲ್ಲ, ಅದು ಪ್ರೀತಿಯ ಸಂಕೇತ. ಮಧ್ಯದಲ್ಲಿ ಬರುವ ಮಾಯಾಲೋಕದ ಸಾಹಸ, ಗಿಳಿ-ರಾಕ್ಷಸ ಪರಿವರ್ತನೆ, ಸಂಗೀತ ಲೋಕ—ಎಲ್ಲವೂ ಮಕ್ಕಳ ಕಲ್ಪನೆಗೆ ಬಾಗಿಲು ತೆರೆಯುತ್ತವೆ. ಕಥೆಯ ಆಳ ಸ್ವಲ್ಪ ಜಾಸ್ತಿಯಾದರೂ, ಅಂತಿಮವಾಗಿ “ಅಜ್ಜಿಯ ಪ್ರೀತಿ ಶಾಶ್ವತ” ಎಂಬ ಸಂದೇಶ ತಲುಪುತ್ತದೆ.
“ಸುಂದ್ರೀ” ಕಥೆ ಸಮರ್ಥ ಮತ್ತು ಅವನ ಮುದ್ದಾದ ಕರುವಿನ ಸುತ್ತ ಹರಿದಾಡುತ್ತದೆ. ಮಕ್ಕಳ ಪ್ರೀತಿ, ಪ್ರಾಣಿಗಳ ಮೇಲಿನ ಕಾಳಜಿ, ಕಳೆದುಕೊಂಡ ಬಳಿಕವೂ ನೆನಪುಗಳನ್ನು ಉಳಿಸಿಕೊಳ್ಳುವ ಮನಸ್ಸು—ಎಲ್ಲವನ್ನೂ ಈ ಕಥೆ ಜೀವಂತಗೊಳಿಸುತ್ತದೆ. ಸುಂದ್ರೀ ಸತ್ತುಹೋದ ಬಳಿಕ ಸಮರ್ಥನು ಅದರ ಸಮಾಧಿಯ ಬಳಿ ಮಾವಿನ ಗಿಡ ನೆಡುವುದು, ಪ್ರೀತಿಯ ನಿರಂತರತೆಯನ್ನು ಪ್ರಕೃತಿಯ ಮೂಲಕ ಬದುಕಿಸುವುದು—ಇದು ಕಥೆಯ ಅತ್ಯಂತ ಹೃದಯಸ್ಪರ್ಶಿ ಭಾಗ.
“ಬಾಳೆಗಿಡ” ಕಥೆಯಲ್ಲಿ ಜಯಣ್ಣ ಮತ್ತು ನಿಮ್ಮಿ ತಮ್ಮ ಅಜ್ಜಿಯ ಹಿತ್ತಲಲ್ಲಿ ಕಂಡ ಬಾಳೆಗಿಡವನ್ನು ಮನೆಗೆ ತಂದಾಗ ಅದು ಕೇವಲ ಗಿಡವಲ್ಲ, ಅವರ ಕನಸುಗಳಾಗುತ್ತದೆ. ಪ್ರತಿದಿನ ಅದನ್ನು ಬೆಳೆಸುವಲ್ಲಿ ಮಾಡಿದ ಪರಿಶ್ರಮ, ಫಲ ಸಿಗುವ ನಿರೀಕ್ಷೆ, ಹಣ್ಣು ಕೈ ಸೇರುವ ಹೊತ್ತಿಗೆ ಅದು ಮಾಯವಾದಾಗ ಉಂಟಾಗುವ ನೋವುಗಳು ಜೀವನದ ಮೊದಲ ಪಾಠಗಳಾಗುತ್ತವೆ. ತಾಯಿಯ ಸಾಂತ್ವನ, ಮತ್ತೆ ಹೊಸ ಕನಸು ಕಾಣಲು ಕಲಿಸುವುದೇ ಈ ಕಥೆಯ ಬಲ.
“ರಾಮೂ ಮತ್ತು ಮಂಗಣ್ಣ” ಕಥೆ ಮಕ್ಕಳ ಕಲ್ಪನಾಶಕ್ತಿಯನ್ನು ಕರೆದೊಯ್ಯುತ್ತದೆ. ಮಂಗ ಮತ್ತು ಬಾಲಕನ ನಡುವಿನ ಹಾಸ್ಯದ ಮಾತುಕತೆ, ನಂತರ ಮೂಡುವ ಸ್ನೇಹ, ಮಂಗ ತನ್ನ ಬಾಲದ ಮೇಲೆ ರಾಮೂವನ್ನು ಕುಳ್ಳಿರಿಸಿ ಕಪಿಲೋಕಕ್ಕೆ ಕರೆದೊಯ್ಯುವ ಮಾಯಾಲೋಕದ ಚಿತ್ರಣಗಳು ಮಕ್ಕಳ ಮನಸ್ಸಿಗೆ ಉಲ್ಲಾಸವನ್ನು ತರುತ್ತವೆ. ಮನುಷ್ಯ-ಪ್ರಾಣಿಗಳ ನಡುವಿನ ಸ್ನೇಹ, ಜೀವನದಲ್ಲಿ ಚುರುಕು-ಸಂತೋಷದ ಪಾಠಗಳು ಕಥೆಯ ಹೆಣೆಯುವಿಕೆಗೆ ಸಹಾಯಕವಾಗುತ್ತವೆ.
“ದೇವರ ದುಡ್ಡು” ಕಥೆಯಲ್ಲಿ ಮದ್ಯಪಾನಿ ತಂದೆಯ ಹಿಂಸೆ, ಬಡತನದಲ್ಲಿ ಬದುಕುತ್ತಿರುವ ತಾಯಿ–ಮಗನ ಕಷ್ಟ, ಹಾಗೂ ಬಾಲಕನ ನಿರ್ದೋಷಿ ಆಸೆ ಚಿತ್ರಿತವಾಗುತ್ತದೆ. ಗೋಬಿ ಮಂಚೂರಿ ತಿನ್ನಬೇಕೆಂಬ ಹಂಬಲದಿಂದ ಪರಮೇಶಿ ದೇವರ ದಕ್ಷಿಣೆ ಹಾಗೂ ಮನೆಯ ಹಣ ಕದ್ದುಬಿಡುತ್ತಾನೆ. ಇದರಿಂದ ತಾಯಿಗೆ ಹಾನಿ ಉಂಟಾದಾಗ ಅವನಿಗೆ ಅಪರಾಧ ಭಾವನೆ ಕಾಡುತ್ತದೆ. ತಾಯಿಯ ಬುದ್ಧಿವಾದದಿಂದ ಅವನು ತಪ್ಪು ಅರಿತು ದೇವರ ಮುಂದೆ ಕ್ಷಮೆ ಕೇಳಿ, ಮತ್ತೆ ಕಳ್ಳತನ ಮಾಡದಿರಲು ಸಂಕಲ್ಪ ಮಾಡುತ್ತಾನೆ.
“ಬಾಲಾಯ ತಸ್ಮೇ ನಮ:” ಕಥೆ ಪ್ರಾಣಿಗಳ ಸಂಭಾಷಣೆಯ ಮೂಲಕ ಮಾನವ ಜೀವನದ ಮಹತ್ವದ ಪಾಠವನ್ನು ಹೇಳುತ್ತದೆ. ಮಂಗ, ನಾಯಿ ಮತ್ತು ಬೆಕ್ಕು ತಮ್ಮ ತಮ್ಮ ರೂಪ–ಗುಣಗಳನ್ನು ಹೋಲಿಸಿಕೊಂಡು ಕೆಲವೊಮ್ಮೆ ಹೆಮ್ಮೆ, ಕೆಲವೊಮ್ಮೆ ಬೇಸರ ವ್ಯಕ್ತಪಡಿಸುತ್ತವೆ. ಆದರೆ ಕೊನೆಗೆ ದೇವರು ಕೊಟ್ಟದರಲ್ಲೇ ತೃಪ್ತಿಯಿಂದ ಬದುಕಬೇಕು ಎಂಬ ಅರಿವು ಬರುತ್ತದೆ. ಮನುಷ್ಯರು ತಮ್ಮ ದೋಷಗಳನ್ನು ಪ್ರಾಣಿಗಳ ರೂಪಕಗಳಲ್ಲಿ ಬಳಸುವ ವಿಧಾನವನ್ನು ಕಥೆ ಸೂಕ್ಷ್ಮವಾಗಿ ತೋರಿಸುತ್ತದೆ. ಜೀವನದಲ್ಲಿ ಹೋಲಿಕೆ, ಅಸಮಾಧಾನ, ಇತರರಂತಾಗಬೇಕೆಂಬ ಹಂಬಲ ಅವಶ್ಯಕವಲ್ಲ; ಬದಲಾಗಿ ಸ್ವಭಾವ–ಗುಣಗಳಲ್ಲಿ ಸಮಾಧಾನ ಕಂಡರೆ ಶಾಂತಿ ದೊರೆಯುತ್ತದೆ ಎಂಬುದು ಈ ಕಥೆಯ ಸಾರ.
ಒಟ್ಟಿನಲ್ಲಿ, ಈ ಸಂಕಲನದಲ್ಲಿರುವ ಪ್ರತಿಯೊಂದು ಕಥೆಗಳು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆಯೇ, ದೊಡ್ಡವರಿಗೂ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಕೆಲವೊಂದು ಕಥೆಗಳಲ್ಲಿ ವಾಕ್ಯಗಳು ದೀರ್ಘವಾಗಿರುವುದು, ಕೆಲವೊಂದು ಸ್ಥಳಗಳಲ್ಲಿ ಸಂಕ್ಷಿಪ್ತಗೊಳಿಸುವ ಅಗತ್ಯವಿದ್ದರೂ, ಕಥೆಗಳ ಹೃದಯಸ್ಪರ್ಶಿ ಭಾವನೆಗಳು ಅದಕ್ಕಿಂತ ಮೇಲಾಗಿವೆ. ಮಕ್ಕಳ ಕಥೆಗಳು ಅಂದಾಗ ಯಾವ ಹಂತದ ಮಕ್ಕಳಿಗೆ ಇದನ್ನು ಕೊಡುತಿದ್ದೇವೆ ಎಂಬುದು ಮುಖ್ಯವಾಗಿರುತ್ತದೆ. ಬರಹದ ಶೈಲಿಯೂ ಸಹ ಮಕ್ಕಳ ಮಟ್ಟಕ್ಕೆ ಅನುಗುಣವಾಗಿರಬೇಕು. ಆ ದಿಸೆಯಲ್ಲಿ ಶ್ರೀಮತಿ ಸರಸ್ವತಿ ಭೋಸಲೆಯವರ ಪ್ರಯತ್ನ ಮೆಚ್ಚಬಹುದಾಗಿದೆ. ಮಕ್ಕಳ ಹೃದಯ ಮಣ್ಣಿನಂತೆ—ಅದರೊಳಗೆ ಬಿತ್ತುವ ಪ್ರೀತಿ, ಮಮತೆ, ಸ್ನೇಹ, ಭಕ್ತಿ, ಸಹಾನುಭೂತಿಗಳು ಮೊಳಕೆ ಒಡೆಯುತ್ತವೆ. ಆ ಮಣ್ಣಿನೊಳಗೆ ಬಿತ್ತಿದ ಅಮೂಲ್ಯ ಬೀಜಗಳು. ಮಕ್ಕಳಿಗೂ, ದೊಡ್ಡವರಿಗೂ ಒಂದೇ ರೀತಿಯಾಗಿ ಹೃದಯಕ್ಕೆ ಹತ್ತುವಂತಹ ಈ ಸಂಕಲನ ಬದುಕಿನಲ್ಲಿ ಮಮತೆ, ಸ್ನೇಹ, ನಂಬಿಕೆ, ಸಹಬಾಳ್ವೆ ಎಂಬ ಮೌಲ್ಯಗಳನ್ನು ನೆನಪಿಸುವ ಕನ್ನಡಿಯಾಗಿದೆ.






0 Comments