
-ವಿಜಯಕ್ಕ ಅಜ್ಜಿಮನೆ
ಪ್ರಿಯ ಕ್ಯಾನ್ಸರ್,
ಇದುವರಿಗೂ ಯಾರೂ ನಿನ್ನನ್ನು ಪ್ರಿಯ ಅಂತ ಹೇಳೆರೋದು ಡೌಟ್. ನನ್ನ ಕೆಲವು ಅಭ್ಯಾಸಗಳನ್ನು ಬಿಡೋದು ಕಷ್ಟದ ವಿಷಯ.
ಹಳೆಯ ಹಿಂದಿ, ಕನ್ನಡ ಸಿನಿಮಾಗಳು ನಿನ್ನನ್ನು ಭಯಂಕರವಾಗಿ ತೋರಿಸಿ ನೀನು ಅಂದರೆ ಸಾವು ಅನ್ನೋದನ್ನು ಎಲ್ಲರ ತಲೆಗೆ ತುರುಕಿಯಾಗಿದೆ.
1970-71 ದಶಕದಲ್ಲಿ ಕ್ಯಾನ್ಸರ್ ಬಗ್ಗೆ ಕೇಳಿದ್ದು ಮೊದಲು ಸಿನಿಮಾದಲ್ಲೇ. ಈಗಂತೂ ಕ್ಯಾನ್ಸರ್ ಬೆಳೆದಷ್ಟೇ ವೇಗವಾಗಿ ಸುಸಜ್ಜಿತ ಆಸ್ಪತ್ರೆಗಳು, ವೈದ್ಯಕೀಯ ಜಗತ್ತು ಜೊತೆ ಜೊತೆಯಲ್ಲೇ ಬೆಳೆದಿದೆ. ಮನುಷ್ಯರಲ್ಲಿರುವ ಭಾಷೆ, ಜಾತಿ, ಬೇರೆ ಬೇರೆ ವ್ಯಕ್ತಿತ್ವದ, ಹಾಗೆ ನೀನು ದೇಹದ ಪ್ರತಿ ಯೊಂದು ಪಾರ್ಟ್ ನಲ್ಲಿ ಕಾಣಿಸುತ್ತಿದ್ದಿ. ಸಾವಿರಾರು ಜನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯೂ ನಲ್ಲಿದ್ದಾರೆ. ಅದೆಷ್ಟು ಹೆಸರುಗಳು! ಬ್ರೆಸ್ಟ್ ಕ್ಯಾನ್ಸರ್ ! ಬೇಕಾದಷ್ಟು ಪ್ರಯೋಗಗಳಾಗಿವೆ, ಔಷದಿ ಇದೆ, ಗುಣಮುಖರಾದವರ ಸಂಖ್ಯೆಯೇ ದೊಡ್ಡದು. ಲಂಗ್ , ಕೊಲನ್, brain,stomoc, blood,liver, ಬಹಳಷ್ಟು ಮಂದಿ ಇದ್ದರು ಅಬ್ಬಬ್ಬಾ! 20 ವರ್ಷದ ಹಿಂದೆ ಇದೆಲ್ಲಾ ಕೇಳಿರಲಿಲ್ಲ. ಹಾಸ್ಪಿಟಲ್ ಲ್ಲಿ ಕೇಳಿದ ಹೆಸರುಗಳಿವು. ನಿನ್ನ ಹೆಸರೇ ಇಲ್ಲ! !
ನೀನು ನನ್ನಲ್ಲಿ ಕಾಣಿಸಿಕೊಂಡ ಬಗ್ಗೆ ವೈದ್ಯೆ ನನ್ನಲ್ಲಿ ಹೇಳಿದ ದಿನ, ಸ್ವಲ್ಪ ಹೊತ್ತು ಇಡೀ ಪ್ರಪಂಚ ಸ್ಥಬ್ದವಾದ ಅನುಭವ. ಜೊತೆಗೆ ಬಂದ ನನ್ನ ತಂಗಿಯತಿದ್ದ ಸ್ನೇಹಿತೆ ಅಳುತಿದ್ದರೆ, ನನ್ನಲ್ಲಿ ಮಾತುಗಳು ಇಲ್ಲವಾಗಿತ್ತು. ನಿನ್ನನ್ನು ಗುರುತಿಸಿದ್ದೆ 4 ನೇ ಸ್ಟೇಜ್ ಅಲ್ಲಿ. ಥೈರಾಯಿಡ್ enlarge ಆಗಿ ಆಪರೇಷನ್ ಅದನಂತರ ಬಂದ ಬಯಪ್ಸಿ ರಿಪೋರ್ಟ್. ಬೇರೆ ಯಾವುದೇ ದೈಹಿಕ ಸಮಸ್ಯೆಗಳಿಲ್ಲದೆ ಇದ್ದ, ಆರಾಮವಾಗಿ ಒಬ್ಬಳೇ ಊರೂರು ಸುತ್ತೂತ್ತ, ಸಮಯ ಸಿಕ್ಕಾಗ ಸಿಹಿ ಮಾರುತಿದ್ದವಳನ್ನು ನೀನು ಹಿಡಿದು ಬಿಟ್ಟೆ.
ನೀನು ಅಪರೂಪದ, ತುಂಬಾ ಅಗ್ರೆಸ್ಸಿವ್, ಪ್ರತಿ ದಿನ ಬೆಳೆಯುತ್ತಾ ಹೋಗುವ, ಸಾವಿರದಲ್ಲಿ ಒಬ್ಬರಿಗೆ ಬರುವಂತದ್ಫು #anaplastic ಕ್ಯಾನ್ಸರ್ ಅಂತೆ. ಅದ್ಯಾರ್ ನಿಂಗೆ ಹೆಸರು ಕೊಟ್ರೋ ಅಪರೂಪದ ಎಲ್ಲವನ್ನೂ ಇಷ್ಟಪಡುತ್ತಿದ್ದ ನನಗೆ, ಅಪರೂಪದ ನೀನು ನನ್ನನ್ನೇ ಹುಡುಕಿ ಬಂದಿದ್ದರ ಕಾರಣ ಡಾಕ್ಟರ್ ಗೂ ಗೊತ್ತಿಲ್ಲ.
ನೀನು ಬಂದ ನಂತರ ಬದುಕು ಸಂಪೂರ್ಣ ಬದಲಾದದ್ದು.
70 ರ ಹತ್ತಿರದ ನನಗೆ, ನೀನು ನನ್ನೊಳಗೆ ಬಂದಿದ್ದಿ ಅಂದಾಗ ಭಯ ಆಗಲಿಲ್ಲ ಅಂದ್ರೆ ನಂಬಬೇಕು ನೀನು.
ಅರವತ್ತರ ನಂತರದ ಬದುಕು ಬೋನಸ್ ಅಂತ ಗಟ್ಟಿಯಾಗಿ ನಂಬಿದವಳಿಗೆ, ಭೂತಾನಿನ ಟೈಗರ್ ನೆಸ್ಟ್ ಹತ್ತಿ ಇಳಿಯುವಾಗ ಸುರಿದ ಮಳೆ ನನ್ನನ್ನು ಬಹಳಷ್ಟು ಸಲ ಜಾರಿಸಿದಾಗ, ಮೊದಲ ಸಲ ಕಾಶ್ಮೀರಕ್ಕೆ ಹೋದಾಗ ಹಿಂದಿನ ದಿನ ನಾನು ಕೂತ ಜಾಗದಲ್ಲೇ ಮಾರಾನೇದಿನ ಆತಂಕ ವಾದಿಗಳು ಗುಂಡು ಹಾರಿಸಿ ಪ್ರವಾಸಿಗರನ್ನು ಕೊಂದಾಗ, ಎಲ್ಲಿ ಹೋಗಿ ಸಾಯ್ತಿನೋ ಅಂದುಕೊಂಡಿದ್ದೆ. ಹೊರಡುವ ಮುಂಚೆ ಮನೆಯಲ್ಲಿ ಚೀಟಿ ಬರೆದಿಟ್ಟು ಬರುತ್ತಿದ್ದೆ ‘ ಅಕಸ್ಮಾತ್ ನಾನು ಬರದೇ ಇದ್ದಲ್ಲಿ ’.. ಮನೆ ತಲುಪಿದ ನಂತರ ಹರಿದು ಹಾಕುತಿದ್ದೆ. ಅಂದರೆ ಒಂದು ದಿನ ಸಾವು ಇದೆ ಯಾವಾಗ ಅಂತ ಗೊತ್ತಾದ್ರೆ ಎಷ್ಟು ಒಳ್ಳೆದಿತ್ತು. ಎಷ್ಟೆಲ್ಲಾ ಪ್ಲಾನ್ ಮಾಡಬಹುದಿತ್ತು ಅಂತ ಅಂದುಕೊಳ್ಳುವಷ್ಟರಲ್ಲಿ ದೇವರು ತಥಾಸ್ತು ಅಂದಿರಬೇಕು ಅನಿಸಿದ್ದು ಬಯಪ್ಸಿ ರಿಪೋರ್ಟ್ ನಂತರ ವೈದ್ಯರು ಹಾಗೂ ಗೂಗಳಣ್ಣ 3 ತಿಂಗಳ exist date ಹೇಳಿದಾಗ.
ಆಗಸ್ಟ್ ಲ್ಲಿ ಆಪರೇಷನ್ ಆಗಿ, ಕ್ಯಾನ್ಸರ್ ಅಂತ ಗೊತ್ತಾದದ್ದು, ಆಗಸ್ಟ್ ಲ್ಲಿ ಅಂದರೆ ನವೆಂಬರ್ ತಿಂಗಳು ನಂಗೆ ಲಾಸ್ಟ.
ಸೆಪ್ಟೆಂಬರ್ ಲ್ಲಿ ಟ್ರೀಟ್ಮೆಂಟ್ ಶುರುವಾಯ್ತು. ಅಪರೂಪದ ಕ್ಯಾನ್ಸರ್ ಆಗಿರುವ ನಿನಗೆ ಪಕ್ಕಾ ಔಷದಿ ಮೊದಲೇ ಹೇಗಿರುದಕ್ಕೆ ಸಾಧ್ಯ? ಪ್ರಾರಂಭಿಕ ರೋಗ ಚಿನ್ಹೆ ಗಳೂ ಗೊತ್ತಿಲ್ಲ, ಯಾರದೋ ಅನುಭವವನ್ನು ತೆಗೆದುಕೊಳ್ಳುವ ಹಾಗೂ ಇಲ್ಲವಲ್ಲೊ! ನೀನು ಬಂದ ನಂತರ ನನ್ನ ದೇಹ, ರೂಪ, ಸ್ವಭಾವ ಎಲ್ಲವೂ ಬದಲಾದುದಲ್ಲದೆ, ಇಡೀ ದಿನ ನನ್ನ ಬಗ್ಗೆ ಮಾತ್ರ ನೋಡಿ ಕೊಳ್ಳುವ ಹಾಗಾಯ್ತು. ಬೇರೆ ಟೆನ್ಷನ್ ಅನ್ನೋದೇ ಇಲ್ಲ. ನನ್ನ ಸುತ್ತಲೂ ನನ್ನನ್ನು ಪ್ರೀತಿಸುವ ಜನ! ನೀನು ಸಿಕ್ಕಾಪಟ್ಟೆ ದುಬಾರಿ, ಪ್ರತಿ ಸೆಶನ್ ಗೆ ಕರಗುವ ಹಣದಲ್ಲಿ ಅದೆಷ್ಟು ಊರು / ಫಾರಿನ್ ಸುತ್ತಬಹುದಿತ್ತು ಅಂದುಕೊಳ್ಳುತ್ತಲೇ ಇದ್ದೆ. ಪರಿಣಿತ ವೈದ್ಯರ ಟೀಮ್ ನನ್ನ ಜೊತೆ ಇತ್ತು. ಒಂದಿಪ್ಪತ್ತು ವರ್ಷದ ಹಿಂದೆ ‘ಚಿಕನ್ ಗುನ್ಯಾ ’ಬಂದಾಗ ನಡೆಯುವ ಶಕ್ತಿ ಇಲ್ಲವೆನಿಸಿದಾಗ, ಅಯ್ಯೋ ಅದೆಷ್ಟು ಜಾಗಕ್ಕೆ ಹೋಗಬೇಕೆಂದಿದ್ದೆ pls ಒಮ್ಮೆ ಹುಷಾರು ಮಾಡು ಎಲ್ಲಾ ಸುತ್ತಿ ಬರ್ತೀನಿ ಅಂತ ಬೇಡಿದಾಗಲೂ ತಥಾಸ್ತು ‘ ಆಗಿ ಅಲ್ಲಿಂದ ಪ್ರಾರಂಭವಾದ ಟೂರ್ ಮೊನ್ನೆ ಮೊನ್ನೆ ನೀನು ಹಿಡಿಯುವ ತನಕ ಇತ್ತು. 5 ವರ್ಷದ ಹಿಂದೆ ಬಂದ ಬಿಪಿ ಒಂದು ಮಾತ್ರೆಯ ಕಂಟ್ರೋಲ್ ನಲ್ಲಿದ್ದು, ನನ್ನೊಂದಿಗೆ ಟೂರ್ enjoy ಮಾಡತಿತ್ತು .
Pet scan ರಿಪೋರ್ಟ್, ನೀನು ಬೆಳೆಯದೇ, ಎಲ್ಲೂ ಹರಡದೆ, ಕರಗುತ್ತಿರುವ ಬಗ್ಗೆ ಹೇಳಿದಾಗ ಸಮಾಧಾನ ಆಯ್ತು. ಆಗಸ್ಟ್ ತನಕ ಪ್ರತಿ 21 ದಿನಕ್ಕೆ immune theraphy ನಡಿಯುತ್ತೆ.
ನೀನು ಮತ್ತೆ ಸಾವಿರದಲ್ಲಿ ಒಬ್ಬರನ್ನು ಹುಡುಕಿ ಹೋಗ್ಬೇಡ.






0 Comments