ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉತ್ತರಾ..

ಮೂಲ: ಪಕ್ಕಿಯನಾಥನ್ ಅಹಿಲನ್

ಡಾ. ಪಕ್ಕಿಯನಾಥನ್ ಅಹಿಲನ್ ಅವರು ಕವಿ, ಬರಹಗಾರ, ಕಲಾ ಇತಿಹಾಸಕಾರ, ಸಾಂಸ್ಕೃತಿಕ ವಿದ್ವಾಂಸ, ಕಲಾ ಸಂಯೋಜಕ ಮತ್ತು ಕಲಾಪ್ರದರ್ಶಕರು ಆಗಿದ್ದಾರೆ. ಶ್ರೀಲಂಕಾದ ಜಾಫ್ನಾದ ಪರಂಪರೆ, ಗುರುತು ಮತ್ತು ಕಲಾತ್ಮಕ ಅಭಿವ್ಯಕ್ತಿಯ ಪ್ರಶ್ನೆಗಳೊಂದಿಗೆ ಆಳವಾಗಿ ತೊಡಗಿಸಿಕೊಂಡಿಸಿಕೊಂಡಿದ್ದಾರೆ. ಅವರು ಜಾಫ್ನಾ ವಿಶ್ವವಿದ್ಯಾಲಯದಲ್ಲಿ ಕಲಾ ಇತಿಹಾಸದಲ್ಲಿ ಹಿರಿಯ ಉಪನ್ಯಾಸಕರು ಮತ್ತು ಲಲಿತಕಲಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅಹಿಲನ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಕಲೆ ಮತ್ತು ಸೌಂದರ್ಯಶಾಸ್ತ್ರದಲ್ಲಿ ಪಿಎಚ್‌ಡಿ ಮತ್ತು ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ಕಲಾ ವಿಮರ್ಶೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತಮಿಳಿನಲ್ಲಿ ಬರೆಯುತ್ತಾ, ಅವರು ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: ಪಡುಂಕುಳಿ ನಾಟ್ಕಜ್ (ಬಂಕರ್ ಡೇಸ್), ಮದರ್ (ಅಮ್ಮೈ), ಸರಮಕವಿಕಜ್ (ಲ್ಯಾಮೆಂಟ್) ಮತ್ತು ರೈನ್ ಇನ್ ಡೀಪ್ ಸೀ. ಅವರು ಕವಿ ಗೀತಾ ಸುಕುಮಾರನ್ ಮತ್ತು ಕಲಾವಿದರಾದ ವೈದೇಕಿ ಅವರೊಂದಿಗೆ ಟೀ: ಎ ಕನ್ಕಾಕ್ಷನ್ ಆಫ್ ಡಿಸ್ಸೋನೆನ್ಸ್, ಕಾವ್ಯ ಮತ್ತು ಕಲೆಯ ಸಂಯೋಜಿತ ಕೃತಿ ನಿರ್ಮಾಣದಲ್ಲಿ ಸಹಕಾರ ಹಾಗೂ ಸಹಭಾಗಿತ್ವ ನೀಡಿದ್ದಾರೆ. ಅವರ ಕವಿತೆಗಳನ್ನು ಗೀತಾ ಸುಕುಮಾರನ್ ಅವರು ದೆನ್ ದೇರ್ ಆರ್ ನೋ ವಿಟ್ನೆಸಸ್ ಮತ್ತು ಎ ಸಿಮಿಲ್ ಡ್ರಾಯಿಂಗ್ ಆನ್ ಎ ವೈನ್ ಎಂಬ ಸಂಪುಟಗಳಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಕನ್ನಡಕ್ಕೆ: ದಾದಾಪೀರ್ ಜೈಮನ್

೧.ಉತ್ತರಾ

ಉದ್ಯಾನದೊಳಗಿನ
ಕೇದಿಗೆಯ ಬುಟ್ಟಿಯೊಳಗೆ
ಚಂದಿರನ ಬೆಳಕು ಸುರಿಯುತ್ತಿರುವುದ ಅವಳು ಕಂಡಳು
ದೂರದಲ್ಲಿ
ಕಾವಲುಗೋಪುರಗಳ ಸುತ್ತಿದ ಬೆಂಕಿಯ ಉಂಗುರಗಳು
ಚುಕ್ಕೆಗಳಂತೆ ಕಂಡವು
ಭಯಾನಕವಾಗಿತ್ತು ಆ ಸ್ಮಶಾನ ಮೌನ
ತೀಕ್ಷ್ಣವಾಗಿ ದಿಟ್ಟಿಸಿದಳು ಎಂದಿನಂತೆ
ಭಗ್ನಗೊಂಡ ಅರಮನೆಯ
ಉದ್ದನೆಯ ಎತ್ತರದ ನೆರಳುಗಳನ್ನು
ತನ್ನ ಮೊಂಡುತನದಿಂದ ಜಲಪಾತದ ಧಾರೆಯಂತೆ
ಮುಂದುಕ್ಕುತ್ತಿದ್ದ ಗುಂಗುರು ಮುಂಗುರುಳನ್ನ ಪಕ್ಕಕ್ಕೆ ಸರಿಸುತ್ತಾ
ಕಾಯುತ್ತಾ
ಅವನ ಬರುವಿಕೆಗೆ
ಹರಿಯಬಿಟ್ಟಳು ಆಳವಾದ ನಿಟ್ಟುಸಿರೊಂದನ್ನು..
ಜನಸಮೂಹ ಚದುರಿಹೋಗಿತ್ತು
ನೋಡಿಕೊಂಡಳು ಕನ್ನಡಿಯೊಳಗೆ ತನ್ನನ್ನು
ಓ ವಿರಾಟರಾಜನ ಕನಸೇ
ಓ ಅಭಿಮನ್ಯುವಿನ ಸೌಂದರ್ಯರಾಣಿಯೇ
ಇದು ನೀನಲ್ಲ, ಬೇರೆ ಯಾರೋ..
ಹಸ್ತಿನಾಪುರದ ಹದಿಹರೆಯದ ವಿಧವೆಯರ
ಜನಸಮೂಹದಲ್ಲಿ ಒಬ್ಬಳು
ಶೋಕಿಸುತ್ತಾ ಹೊರಗಡೆ ನೋಡಿದಳು
ನಿರ್ಜನ ಬೀದಿಗಳಲ್ಲಿ
ಯಾರೂ ಇರಲಿಲ್ಲ
ಯಾರೂ ಇರಲಿಲ್ಲ
ಆ ನಿರ್ಜನ ಬೀದಿಗಳಲ್ಲಿ…

೨.ಕಾವ್ಯ, ಪದಗಳ ಮರೆ

ನೀನು ಕೇಳುತ್ತೀಯಾ, ಕಾವ್ಯವೆಂದರೇನು?
ನಾನು ಹೇಳುತ್ತೇನೆ, ಜೀವನ ವಿಧಾನ
ನೀನು ಕೇಳುತ್ತೀಯಾ, ಕಾವ್ಯ ಯಾವುದರಿಂದ ಮಾಡಲ್ಪಟ್ಟಿದೆ?
ನಾನು ಹೇಳುತ್ತೇನೆ, ಪದಗಳಿಂದಲ್ಲದ್ದರಿಂದ
ಕಾವ್ಯ ಎಲ್ಲಿಂದ ಬಂದಿದೆ, ನೀನು ಕೇಳುತ್ತೀಯಾ
ನಾನು ಹೇಳುತ್ತೇನೆ, ಯಾವ ಗುಹೆಯೊಳಗಿಂದ
ಉಸಿರು ಬಿಡುಗಡೆಯ ಕಾಣುವುದೋ ಆ ಎತ್ತರಗಳಿಂದ
ಯಾಕೆ ಕಾವ್ಯ ಮಹಾಕಾವ್ಯ, ಕೇಳುತ್ತೀಯ ನೀನು
ಯಾತ್ರೆಗೆ, ಹೇಳುತ್ತೇನೆ ನಾನು
ಕಾವ್ಯದೊಳಗಿನ ತರ್ಕದ ಕುರಿತು ನೀನು ಕೇಳುತ್ತೀಯಾ
ತರ್ಕದ ತರ್ಕಹೀನತೆ ಕಾವ್ಯ, ನಾನು ಹೇಳುತ್ತೇನೆ
ನೀನು ಕೇಳುತ್ತೀಯಾ, ನೀನು ಕವಿತೆ ಬರೆಯುತ್ತಿದ್ದೀಯಾ ಎಂದು
ಇಲ್ಲ, ನಾನು ಹೇಳುತ್ತೇನೆ, ಕಾವ್ಯವ ಕಾಣುವ ಭಾಗ್ಯ ನನಗೆ ಸಿಕ್ಕಿತ್ತಷ್ಟೇ ಎಂದು
ಯಾವುದು ನಿನ್ನ ಪ್ರಕಾರರೂಪ, ನೀನು ಕೇಳುತ್ತೀಯಾ
ನಾನು ಹೇಳುತ್ತೇನೆ, ಕಾವ್ಯ
ನೀನೊಬ್ಬ ಕವಿಯಾ, ನೀನು ಕೇಳುತ್ತೀಯಾ
ನಾನು ಹೇಳುತ್ತೇನೆ, ನಾನೊಬ್ಬ ಪರದೇಶಿಯಾಗಬಯಸುವ ಕಳ್ಳ
ಈ ಕಾವ್ಯ ಸತ್ಯವಾ? ನೀನು ಕೇಳುತ್ತೀಯಾ
ನಾನು ಹೇಳುತ್ತೇನೆ, ಅದು ಸತ್ಯದ ಸತ್ಯ, ಸುಳ್ಳಿನ ಸುಳ್ಳು
ನೀನು ಮತ್ತು ಈ ಕಾವ್ಯ ಯಾರು? ನೀನು ಕೇಳುತ್ತೀಯಾ
ನಾನು ಹೇಳುತ್ತೇನೆ, ಶೂನ್ಯತೆ
ಕೇಳುತ್ತಿದ್ದೇನೆ ನಾನೀಗ ಮತ್ತೊಮ್ಮೆ
ಕಾವ್ಯ ಎಂದರೇನು? ಹೇಳು ನೀನು ಹೇಳು
ಹೇಳುತ್ತೇನೆ ನಾನು
ಕಾವ್ಯವೆಂದರೆ,
ಒಂದು ವಿಸ್ತಾರ ಉಗುಳುತ್ತಿರುವ ಮತ್ತೊಂದು ವಿಸ್ತಾರ

‍ಲೇಖಕರು Admin

25 May, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading