
ಕುಶ್ವಂತ್ ಕೋಳಿಬೈಲು
ಕೊಡಗು ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಮೂರು ಪುಸ್ತಕಗಳು ಲೋಕಾರ್ಪಣೆಯಾದವು. ಡಾ ಪ್ರಭಾಕರ ಶಿಶಿಲರ ‘ಬೆಳೆಕಿನೆಡೆಗೆ’ ಕಥಾಸಂಕಲನ, ಸ್ಮಿತಾ ಅಮೃತ್ ರಾಜ್ ಅವರ ಲಲಿತ ಪ್ರಬಂಧಗಳ ಸಂಕಲನ ‘ನೆಲದಾಯ ಪರಿಮಳ’ ಮತ್ತು ಸಹನಾ ಕಾಂತಬೈಲುರವರ ‘ಇದು ಬರೀ ಮಣ್ಣಲ್ಲ’ ಎಂಬ ಲಲಿತ ಪ್ರಬಂಧಗಳ ಸಂಕಲನ.
‘ಇದು ಬರೀ ಮಣ್ಣಲ್ಲ’ ಪುಸ್ತಕವನ್ನು ಬಿಡುಗಡೆ ಮಾಡಲು ಮತ್ತು ಅದರ ಕುರಿತು ಮಾತನಾಡಲು ಲೇಖಕಿಯಾದ ಸಹನಾ ಕಾಂತಬೈಲು ಅವರು ಕೋರಿದ ಕಾರಣ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೆ.. ಅಲ್ಲಿ ನಾನಾಡಿದ ಮಾತುಗಳನ್ನು ಇಲ್ಲಿವೆ..
ಸ್ನೇಹಿತರೇ …
ಈ ರೀತಿಯ ಸಾಹಿತ್ಯದ ಸಮಾರಂಭಗಳಿಗೆ ಬರಲು ನನ್ನೊಳಗೆ ಸಣ್ಣ ಮಟ್ಟಿಗಿನ ಹಿಂಜರಿಕೆಯಿದೆ, ಏಕೆಂದರೆ ನಾನು ಜಾಸ್ತಿ ಬರೆದವನೂ ಅಲ್ಲ ಮತ್ತು ಜಾಸ್ತಿ ಸಾಹಿತ್ಯ ಓದಿಕೊಂಡವನೂ ಅಲ್ಲ. ಬರವಣಿಗೆಗಿಂತ ಬದುಕಿನ ಬಗ್ಗೆ ಜಾಸ್ತಿ ಆಸಕ್ತಿಯಿರುವ ನನ್ನಂತಹ ಹವ್ಯಾಸಿ ಬರಹಗಾರನನ್ನು ಸಹನಕ್ಕ ಕಾಂತಬೈಲುರವರ ಪ್ರೀತಿಯಿಂದ ಕರೆದ ಕಾರಣ, ಓಗೊಟ್ಟು ನಾನಿಲ್ಲಿಗೆ ಬಂದಿದ್ದೇನೆ..
“ಇದು ಬರಿಯ ಮಣ್ಣಲ್ಲ” ಪುಸ್ತಕ ಲಲಿತ ಪ್ರಬಂಧಗಳ ಸಂಕಲವೆನ್ನುವುದಕ್ಕಿಂತ ಇದನ್ನು ಒಬ್ಬ ರೈತ ಮಹಿಳೆಯ ಆತ್ಮಕಥೆ ಅಂತ ಹೇಳಿದ್ರೆ ಹೆಚ್ಚು ಸೂಕ್ತ. ಹಾಗಾಗಿ ಈ ಲಲಿತ ಪ್ರಬಂಧಗಳು ಇಷ್ಟವಾಗುವವರಿಗೆ,ಒಬ್ಬ ವ್ಯಕ್ತಿಯಾಗಿ ಕೂಡ ಸಹನಾ ಕಾಂತಬೈಲುರವರು ಹೆಚ್ಚು ಆಪ್ತರಾಗ್ತಾರೆ. ಈ ಪುಸ್ತಕದಲ್ಲಿ ತೆರೆದುಕೊಳ್ಳುವ ಅವರ ಜೀವನ ಶೈಲಿ ,ಅದರಲ್ಲಿರುವ ಸವಾಲುಗಳು ಮತ್ತು ಅವರ ಜೀವನೋತ್ಸಹ ಕೂಡ ನಮಗೆ ಹೆಚ್ಚು ಆಪ್ತವಾಗುತ್ತಾ ಹೋಗುತ್ತದೆ. ಹಾಗಾಗಿ ಲೇಖಕಿಯಾಗಿ ಓದುಗರ ಹೃದಯದಲ್ಲಿ ಒಂದು ಸಣ್ಣ ಸಿಂಪಥಿ..ಸಿಂಪಥಿ ಎನ್ನುವುದಕ್ಕಿಂತ ಒಂದು empathy ಯನ್ನು ಸೃಷ್ಟಿಸಿಕೊಳ್ಳುವ ಶಕ್ತಿ ಸಹನಾ ಕಾಂತಬೈಲುರ ಲೇಖನಿಗೆ ಇದೆ. ಅದೇ ಅವರ USP..
ಬಹುಶಃ ಆ ಶಕ್ತಿ ಅವರಿಗೆ ಇಲ್ಲದೆ ಇದ್ರೆ , ಅವರ ಮೊದಲ ಪುಸ್ತಕ ‘ಆನೆ ಸಾಕಲು ಹೊರಟವಳು’ ಇಷ್ಟೊಂದು ಜನಪ್ರೀಯವಾಗ್ತಾ ಇರಲಿಲ್ಲ.

ಡಾ ಹಾಮಾ ನಾಯಕ್ ಅಂಕಣ ಬರಹ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಮತ್ತು ಅದಕ್ಕೆಲ್ಲಕ್ಕಿಂತ ದೊಡ್ಡ ಪ್ರಶಸ್ತಿಯಾದ ಕನ್ನಡದ ಸಹೃದಯಿ ಓದುಗರ ಪ್ರೀತಿ ಸಹನಾ ಕಾಂತಬೈಲು ಅವರಿಗೆ ಸಿಗುತ್ತಿರಲಿಲ್ಲ.
ಕವಿತೆ , ಕಥೆ , ಲಲಿತ ಪ್ರಬಂಧಗಳು , ಅಥವಾ ಕಾದಂಬರಿ ಇರಬಹುದು.. ಇದು ಸಾಹಿತಿಯ medium of expression. ಸ್ಮಿತಾ ಅಮೃತರಾಜ ಅವರ ಅಭಿವ್ಯಕ್ತಿ ಮಾಧ್ಯಮ ಕವಿತೆಯಾಗಿದ್ರೆ ಶಿಶಿಲರದು ಕಥೆಯಾಗಿರಬಹುದು. ಆದರೆ ಲಲಿತ ಪ್ರಬಂಧಗಳನ್ನು ಸಹಸಾ ಕಾಂತಬೈಲುರವರಿಗೆ ಬಹಳ effective ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿ ಕೊಳ್ಳುವ ಕಲೆ ಒಲಿದಿದೆ..
ಒಂದು ಒಳ್ಳೆಯ ಅಡುಗೆ ಸ್ವಲ್ಪ ಉಪ್ಪು ಕಮ್ಮಿಯಾದ್ರೆ ಅಥವಾ ಖಾರ ಜಾಸ್ತಿಯಾದ್ರೆ ಹಳ್ಳ ಹಿಡಿಯುತ್ತದೆ. ಈ ಲಲಿತ ಪ್ರಬಂಧದ ವಿಷಯದಲ್ಲಿ, ಎಷ್ಟು ಮಸಾಲೆ ಹಾಕಬೇಕು, ಯಾವ ಒಗ್ಗೆರಣೆ ಕೊಡಬೇಕು ಮತ್ತು ಯಾವಾಗ ಗ್ಯಾಸ್ ಆಫ್ ಮಾಡಬೇಕು ಎಂಬ ಎಲ್ಲಾ ವಿಷಯಗಳ ಬಗ್ಗೆ ಸ್ಪಷ್ಟವಾದ ಅರಿವು ಸಹನಾ ಕಾಂತಬೈಲುರವರಿಗೆ ಇದೆ. ಹಾಗಾಗಿ “ಇದು ಬರೀ ಮಣ್ಣಲ್ಲ” ಪುಸ್ತಕ ಬಹಳ ಸೊಗಸಾಗಿ ಓದಿಸಿಕೊಂಡು ಹೋಗ್ತದೆ ಮತ್ತು ಒಂದು ಒಳ್ಳೆಯ ಊಟ ಮಾಡಿದ ಸಂತೃಪ್ತಿಯನ್ನು ನೀಡುತ್ತದೆ.
ವಿಭಿನ್ನ ಹಿನ್ನಲೆಯಿಂದ ಮತ್ತು ಅನುಭವಗಳಿಂದ ಬಂದಿರುವಂತವರು ಸಾಹಿತ್ಯ ರಚನೆ ಮಾಡಿದಾಗ ಈ ಸಾಹಿತ್ಯ ಕ್ಷೇತ್ರ ಹೆಚ್ಚು ಶ್ರೀಮಂತವಾಗುತ್ತದೆ ಎಂದು ನಾನು ನಂಬಿದ್ದೇನೆ. ಹಾಗಾಗಿ ವಿಶ್ವವಿದ್ಯಾಲಯದ ಕೊಠಡಿಗಳಲ್ಲಿ ಹುಟ್ಟುವ ಬರಹಗಳಿಗಿಂತ ಹೆಚ್ಚು ಸಾರ ಮತ್ತು ಸ್ವಂತಿಕೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಸಹನಾ ಕಾಂತಬೈಲುರಂತಹ ಬರಹಗಾರರು ತಂದಿದ್ದಾರೆ..
ಬಹುಶಃ ನನ್ನ ಇಷ್ಟು ಹೊತ್ತಿನ ಭಾಷಣದಲ್ಲಿ ಸಹನಾ ಕಾಂತಬೈಲುರವರಿಗಿದ್ದ ಹೊಗಳಿಕೆಯ ಕೋಟಾ ಮುಗಿದಿದೆ. ಯಾರನ್ನಾದರು ಮರ ಹತ್ತಿಸಿದ ಮೇಲೆ ಅವರನ್ನು ಅಲ್ಲಿಯೆ , ಮರದ ಮೇಲೆಯೆ ಬಿಟ್ಟು ಹೋಗುವಂತಹ ಕಲ್ಲು ಹೃದಯದ ವ್ಯಕ್ತಿ ನಾನಲ್ಲ..
ಹಾಗಾಗಿ ಒಬ್ಬ ಪ್ರೀತಿಯ ತಮ್ಮನಾಗಿ ಒಂದೆರಡು ಎಚ್ಚರಿಕೆಯ ಮಾತುಗಳನ್ನು ಕೂಡ ನಾನು ಇದೇ ಸಂದರ್ಭದಲ್ಲಿ ಸಹನಾ ಕಾಂತಬೈಲುರವರಿಗೆ ಹೇಳುವ ಸಾಹಸ ಮಾಡುತ್ತೇನೆ. ಅವರ ಮೊದಲ ಲಲಿತ ಪ್ರಬಂಧ ‘ಆನೆ ಸಾಕಲು ಹೊರಟವಳು’ ಪುಸ್ತಕದಿಂದ ಅವರು ತಮ್ಮದೇ ಆದ ಒಂದು ಓದುಗ ವರ್ಗವನ್ನು ಏನು ಸೃಷ್ಟಿ ಮಾಡಿಕೊಂಡಿದ್ದಾರೆ, ಅದು ಹೊಗಳುವ ಮತ್ತು ಸನ್ಮಾಸಿಸುವ ನಮ್ಮಂತಹ ಜನಗಿಂತ ಬಹಳ ಮುಖ್ಯವಾದ ಆಸ್ತಿ. ನೀವು ಹೆಚ್ಚು ಗಂಭೀರವಾಗಿ ತಗೆದುಕೊಳ್ಳಬೇಕಾದದ್ದು ಅವರನ್ನೆ..
ಜಾತಿ ನೋಡಿ ಅಥವಾ ಬರೆದವರು ಯಾವ ಇಸಂಗೆ ಸೇರಿದವರೆಂದು ಎಂದು ನೋಡಿ ಚಪ್ಪಾಳೆ ತಟ್ಟಬೇಕಾ? ಬೇಡ್ವಾ? ಎಂದು ನಿರ್ಧಾರ ಮಾಡಿಕೊಳ್ಳುವ ಈ ಕಾಲದಲ್ಲಿ ನಿಮ್ಮ ವೈಯುಕ್ತಿಕ ಪರಿಚಯವಿಲ್ಲದ ಅನೇಕ ಅಪರಿಚಿತರಿಗೆ ನೀವು ನಿಮ್ಮ ಪುಸ್ತಕ ಮೂಲಕ ತಲುಪಿದ್ದೀರಿ. ನೀವು ಹೀಗೆ ಸಂಪಾದಿಸಿರುವ ಓದುಗರ ಜೊತೆ ಸಂಪರ್ಕ ಮತ್ತು ಸಂವಾದವನ್ನು ಇಟ್ಟುಕೊಳ್ಳಿ ನಮ್ಮ ವಿಮರ್ಶೆಗಳು ಇತ್ಯಾದಿಗಳು ಊಟಕ್ಕೆ ಉಪ್ಪಿನಕಾಯಿ ಮಾತ್ರ.. ನಿಮಗೆ ನಾವ್ಯಾರೂ ನಿಮ್ಮ ಓದುಗರಷ್ಟು ಮುಖ್ಯ ಅಲ್ಲ.

ಹಾಗಾಗಿ ನಿಮ್ಮ ಹೆಚ್ಚಿನ ಜೀವನ ಅನುಭವದ ಸರಕುಗಳು ಈ ಲಲಿತ ಪ್ರಬಂಧಗಳಲ್ಲಿ ಖಾಲಿಯಾದ ನಂತರ ನೀವು ಏನು ಬರಿಯುತ್ತೀರಿ ಎಂಬ ಕುತೂಹಲ ನಿಮ್ಮ ಒಬ್ಬ ಓದುಗನಾಗಿ ನನಗಿದೆ. ನಿಮ್ಮ ಲಲಿತ ಪ್ರಬಂಧಗಳನ್ನು ನಾನು ರೈತ ಮಹಿಳೆಯೊಬ್ಬಳ ಆತ್ಮಕಥೆ ಎಂದಷ್ಟೆ ಹೇಳಿ ನಿಲ್ಲಿಸಿದ್ರೆ ಅದು ಸ್ವಲ್ಪ ಅಪೂರ್ಣವಾಗಬಹುದು. ಅಸಲಿಗೆ
ನಿಮ್ಮ ಅನೇಕ ಲಲಿತ ಪ್ರಬಂಧಗಳಿಗೆ ಒಂದೊಳ್ಳೆ ಕಥೆಯಾಗುವ ಶಕ್ತಿಯಿದೆ..
ಇಂದಿನ ದಿನ ಕನ್ನಡದಲ್ಲಿ ಬರೆಯುವವರು compete ಮಾಡುತ್ತಿರುವುದು ಬೇರೆ ಭಾಷೆಯ ಪುಸ್ತಕಗಳ ಜೊತೆ / ಅಥವಾ ಬೇರೆ ಸಾಹಿತಿಗಳ ಪುಸ್ತಕದ ಜೊತೆ ಅಲ್ಲ.. ನಮ್ಮ ಓದುಗರು Netflix, amazon prime, Facebook, Whatsap ಮತ್ತು IPl ಗಳನ್ನು ಬಿಟ್ಟು ಒಂದು ಕನ್ನಡದ ಪುಸ್ತಕವನ್ನು ಎತ್ತಿಕೊಳ್ಳಬೇಕು ಅಂದ್ರೆ ಅದರಲ್ಲಿ ಕಂಟೆಂಟ್ ಮತ್ತು ಹೊಸತನ ಇರಬೇಕು. ಅದು ಸಹನಾ ಕಾಂತಬೈಲು ಅವರ ಲಲಿತ ಪ್ರಬಂಧಗಳಿಗೆ ಇದೆ…
ಆನೆ ಸಾಕಲು ಹೊರಡುವ ಧೈರ್ಯವಿರುವ ಸಹನಾ ಕಾಂತಬೈಲು ಅವರಿಗೆ ಸಾಹಿತ್ಯದ ವಿವಿಧ ಪ್ರಕಾರಗಳತ್ತ ಹೊರಳುವುದು ದೊಡ್ಡ ಸವಾಲಾಗುವುದಿಲ್ಲವೆಂದು ಭಾವಿಸುತ್ತೇನೆ. ನೀವು ಮುಂದೆ ಲಲಿತ ಪ್ರಬಂಧಗಳನ್ನು ಬರೀತೀರಾ ಅಥವಾ ಕಥೆಗಳನ್ನು ಬರಿತೀರಾ ಎಂಬ ವಿಚಾರವನ್ನು ನಿಮಗೆ ಮತ್ತು ನಿಮ್ಮನ್ನು ಸ್ವೀಕರಿಸಿದ ಓದುಗರಿಗೆ ಬಿಟ್ಟುಬಿಡುತ್ತೇನೆ.. ನೀವುಂಟು.. ಅವರುಂಟು.
ಕೊನೆಯದಾಗಿ.. ಬಹುಶಃ ನಿಮ್ಮ ‘ಆನೆ ಸಾಕಲು ಹೊರಟವಳು’ ಪುಸ್ತಕಕ್ಕೆ ದೊರಕಿದ ಪ್ರೀತಿ ‘ಇದು ಬರೀ ಮಣ್ಣಲ್ಲ’ ಪುಸ್ತಕಕ್ಕೆ ಸಿಗಲಿ ಎಂದು ಹಾರೈಸುತ್ತೇನೆ..






0 Comments