ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಕೆನಿಸದೆ ನಿನಗಿನ್ನೂ..

 ಶ್ರೀಕಾಂತ್ ಎ ವಿ 

ಸಾಕೆನಿಸದೆ ನಿನಗಿನ್ನೂ ಮನುಕುಲವ ಕಾಡಿದ್ದು?
ಕೊಲ್ಲುತಿರುವೆಯಾ ಇಲ್ಲದೆ ಮದ್ದುಗುಂಡುಗಳ ಸದ್ದು?
ನಿಲ್ಲಿಸಬಾರದೆ ಇನ್ನಾದರೂ ನಿನ್ನ ಮರಣಮೃದಂಗವ,
ಕಂಪಿಸಿದೆ ನರನಾಡಿ ಕಂಡು ನಿನ್ನ ಭೀಕರ ರೂಪವ,
ಎಲ್ಲರ ಕಂಗಳಲಿ ಬರಿ ಸೂತಕದ ಛಾಯೆ,
ಹಸಿದ ಹೊಟ್ಟೆಗೆ ವಿಷವಾಗಿಹ ನೀ ಅದ್ಯಾವ ಮಾಯೆ?
ಮುಸುಕಿನ ಹಿಂದೆ ಮಸುಕಾಗಿದೆ ಬದುಕು,
ಅಯ್ಯೋ… ಬರಬಾರದೆ ಇನ್ನಾದರೂ ಭರವಸೆಯ ಬೆಳಕು,
ಇದ್ದವರು, ಇರದವರು ಎಲ್ಲರೂ ಒಂದೇ,
ಅವರ ಕನಸುಗಳನೆಲ್ಲ ಒಮ್ಮೆಗೇ ಕೊಂದೆ,
ಸೇವಿಸುವ ಗಾಳಿಯೂ ವಿಷವಾಯ್ತು ನಿನ್ನಿಂದ,

ಕೆಲವರು ಹೇಳುವರು ನೀ ಬಂದದ್ದೆ ನಮ್ಮಿಂದ,
ಇಂದು ಇದ್ದವರು ನಾಳೆ ಕಾಣುತ್ತಿಲ್ಲ,
ಜವರಾಯನ ದಂಡಯಾತ್ರೆ ಸಾಗುತ್ತಿದೆಯಲ್ಲ,
ಸಾವಿನ ಮನೆಯಲಿ ಕಣ್ಣೀರ ಒರೆಸುವ ಕೈಗಳಿಲ್ಲ,
ಮರಣಿಸಿದವರನೊತ್ತೊಯ್ಯಲು ನಾಲ್ಕು ಹೆಗಲಿಲ್ಲ,
ನೀ ಸೃಷ್ಟಿಯ ಶಾಪವೋ?
ಕುತಂತ್ರಿಗಳ ಶಿಶುವೋ? ಬಲ್ಲವರು ಯಾರು?
ವೈದ್ಯನೋ? ದೈವನೋ?
ನಮ್ಮನ್ನು ಕಾಯುವವರು ಯಾರು?
ವೈದ್ಯನೂ ಬಳಲಿಹನು, ದೈವನೂ ಬಂಧಿಯಾಗಿಹನು,
ಇನ್ನಾದರೂ ವಹಿಸಿ ಜಾಗ್ರತೆಯ,
ಇಲ್ಲದಿರೆ ನಿನ್ನ ನಂಬಿದವರ ಬದುಕು ಅಯೋಮಯ.

‍ಲೇಖಕರು Admin

3 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading