
ಪಾರ್ವತಿ ಐತಾಳ
‘ಬಾಳಿಕೆಯಿಂದ ಕೆನಡಾಕ್ಕೆ’ ನನ್ನ ಅಣ್ಣ ರಾಮ ಭಟ್ ಬರೆದಿರುವ ಅನುಭವ ಕಥನ. ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಸಮೀಪದ ಬಾಳಿಕೆಯಲ್ಲಿ ಜನಿಸಿ ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿರುವ ಅವರು ತಮ್ಮ ಈ ಕೃತಿಯಲ್ಲಿ ಹಳ್ಳಿಯಲ್ಲಿ ಕಳೆದ ಬಾಲ್ಯದ ಸುಂದರ ದಿನಗಳನ್ನು ಹಿತವಾಗಿ ನೆನಪಿಸಿಕೊಳ್ಳುತ್ತಾರೆ. ತಮ್ಮ ಪ್ರಿಯವಾದ ಪೊಸಡಿ ಗುಂಪೆ ಗುಡ್ಡದ ತುದಿಗೇರಿ ತಾವು ಅಂದು ಕಂಡ ಕನಸುಗಳನ್ನು ಉಲ್ಲೇಖಿಸುತ್ತಾರೆ.
ಮುಂದೆ ಕೆನಡಾದಲ್ಲಿ ತಾವು ಕಂಡ ಹಲವಾರು ಘಟನೆಗಳನ್ನೂ ಸನ್ನಿವೇಶಗಳನ್ನೂ ಆಗ ತಮ್ಮ ಮನಃಪಟಲದಲ್ಲಿ ಹಾದು ಹೋದ ವಿಚಾರಗಳನ್ನೂ ಬಣ್ಣಿಸುತ್ತಾರೆ. ಕೆನಡಾದಲ್ಲಿ ನೆಲೆಸಿ ನಲವತ್ತು ವರ್ಷಗಳೇ ಕಳೆದರೂ ತಮ್ಮ ಮಾತೃಭಾಷೆ ಹಾಗೂ ಸಂಸ್ಕ್ರತಿಗಳನ್ನು ಅವರು ಕುಟುಂಬದೊಳಗೆ ಜತನದಿಂದ ಕಾಪಾಡಿಕೊಂಡು ಸಮೃದ್ಧವಾಗಿ ಬೆಳೆಸಿದ್ದು ಈ ಕೃತಿಯ ಇಂಚು ಇಂಚಿನಲ್ಲೂ ವ್ಯಕ್ತವಾಗಿದೆ.

ರಾಮಣ್ಣನ ಈ ಕೃತಿ ನನ್ನ ಮೂಲಕ ಕುಂದಾಪುರದ ಜನಪ್ರತಿನಿಧಿ ಪ್ರಕಾಶನದಿಂದ ಪ್ರಕಟವಾಗಿದೆ. ಇದಕ್ಕೆ ಪ್ರಸಿದ್ಧ ಲೇಖಕರೂ ಭಾಷಾ ವಿದ್ವಾಂಸರೂ ಆದ ಡಾ.ಎನ್.ಟಿ.ಭಟ್ ಮುನ್ನುಡಿ ಬರೆದಿದ್ದಾರೆ. ನನ್ನ ಅಳಿಯ ಡಾ.ಹರ್ಷಿತ್ ಕ್ರಮಧಾರಿಯವರು ಇದಕ್ಕೆ ಅಂದವಾದ ಮತ್ತು ಅರ್ಥಪೂರ್ಣವಾದ ಮುಖಚಿತ್ರವನ್ನು ಬರೆದು ಕೊಟ್ಟಿದ್ದಾರೆ. ಇವತ್ತು ನನ್ನ ರಾಮಣ್ಣನ 79ನೆಯ ಹುಟ್ಟುಹಬ್ಬ. ಅವರಿಗೆ ದೇವರು ಆಯುರಾರೋಗ್ಯ ಕರುಣಿಸಲೆಂದು ಪ್ರಾರ್ಥಿಸುತ್ತ ಈ ಕೃತಿಗಾಗಿ ಅವರನ್ನು ಅಭಿನಂದಿಸಿ ಶುಭಾಶಯಗಳನ್ನು ಹೇಳುತ್ತೇನೆ.






“ಬಾಳಿಕೆಯಿಂದ ಕೆನಡಾಕ್ಕೆ” – ಕೃತಿ ಜನಮೆಚ್ಚುಗೆ ಗಳಿಸಲಿ.