ಕಾಸು ಕುಡಿಕೆ:‘ಮ್ಯೂಚುವಲ್ ಫಂಡ್ ಕಾ ಫಂಡಾ – ೨’

ಕಾಕು 19
-ಜಯದೇವ ಪ್ರಸಾದ ಮೊಳೆಯಾರ

A business exists because the consumer is willing to pay you his money. You run a business to satisfy the consumer. . . . . . .Peter Drucker.
ಒಬ್ಬ ಗ್ರಾಹಕ ತನ್ನ ಹಣವನ್ನು ನಿಮಗೆ ಕೊಡಲು ತಯಾರಿರುವ ಕಾರಣಕ್ಕೇ ಬಿಸಿನೆಸ್ ಇದೆ. ಆದ್ದರಿಂದ ಗ್ರಾಹಕನನ್ನು ಸಂತುಷ್ಟಿಗೊಳಿಸುವಂತಹ ಬಿಸಿನೆಸ್ ಮಾಡು. . . . . .  ಪೀಟರ್ ಡ್ರಕ್ಕರ್.
‘ಸರ್ಪಸುತ್ತು’ ಎಂಬ ಭಯಂಕರ ಹೆಸರಿನ ನಾಟ್-ಸೋ-ಭಯಂಕರ ಬಿಮಾರಿ ನನ್ನನ್ನು ವಸ್ತುಶಃ ಆವರಿಸಿಕೊಂಡಿರಬೇಕಾದರೆ ಸುಕನ್ಯಾ ಕಳಸ ಅವರು ಹಿಂದೆ ಸರ್ಪಸುತ್ತಿನ ಬಗ್ಗೆ ಬರೆದಿದ್ದ ಒಂದು ಲೇಖನವನ್ನು ‘ನಡುಮನೆ’ ಸಾಹಿತ್ಯ ಸಮಾರಂಭದಲ್ಲಿ ನನಗಾಗಿ ‘ಹರ್ಪಿಸಿ’ದ್ದಾರೆ. ಅಷ್ಟರಲ್ಲಿ, ಸರ್ಪಸುತ್ತಿನ ವೆಟೆರನ್ ಖಿಲಾಡಿ ಹಯಗ್ರೀವ ನಗರದ ಡಾ| ಶ್ರೀನಿವಾಸ ಉಪಾಧ್ಯಾಯರು ನನಗೆ ಒಂದು ಉದ್ದದ ಪಥ್ಯ ಪಟ್ಟಿಯನ್ನೇ ನೀಡಿದ್ದಾರೆ – “ಊರೂರು ಸುತ್ತುವಂತಿಲ್ಲ, ಗುರುಗುಂಟಿರಾಯರೊಟ್ಟಿಗೆ ಕುಳಿತು ಮಸಾಲೆ ದೋಸೆ ತಿನ್ನುವಂತಿಲ್ಲ, ಮಹಿಳೆಯರ ಬಳಿ ಚಿನ್ನದ ಬಗ್ಗೆ ರಂಗು ರಂಗಿನ ಮಾತನಾಡಿ ಓಸಿ ಜಿಲೆಬಿ ಮೆಲ್ಲುವಂತಿಲ್ಲ

, ಎಲ್ಲಾ ಬಿಟ್ಟು ಡಯಾನ ಹೋಟೆಲ್ ಕಡೆ ತಲೆ‌ಇಟ್ಟು ಕೂಡಾ ಮಲಗುವಂತಿಲ್ಲ!”  ಆಯ್ಯೊ ದೇವ್ರೇ, ಯಾಕಾ
ದ್ರೂ ಬಂತಪ್ಪಾ ಈ ಸರ್ಪಸುತ್ತು?
ಹಾಗಾಗಿ ಶ್ರೀಮಾನ್ ಗುರುಗುಂಟಿರಾಯರೆ,
ಈ ಬಾರಿ ನಿಮಗಿದೋ ದೋಸಾಲೆಸ್, ಕಾಫಿಲೆಸ್, ಸಾದಾ ಭಾಷಣ.
ತೆಗೆದುಕೊಳ್ಳಿ ಮ್ಯೂಚುವಲ್ ಫಂಡಿನ ಬಗ್ಗೆ ಹೆಚ್ಚುವರಿ ಗುಣಗಾನ.
NFO (New Fund Offer) – ಹೊಸತಾಗಿ ಬಿಡುಗಡೆಯಾಗಿ ಬರುವ ಫಂಡ್! ಈಗ ಫಂಡ್ ರೂ ೧೦ ಕ್ಕೆ ಎಂದು ಹೇಳಿ ಕೋಟ್ಯಾನುಗಟ್ಟಲೆ ಹಣ ಸಂಗ್ರಹ ಮಾಡುತ್ತಾರೆ ಮ್ಯೂಚುವಲ್ನಫಂಡ್ ವರು. ನಾವು ರುಪಾಯಿ ಹತ್ತರಂತೆ ಒಂದು ಯುನಿಟ್ ಕೊಂಡರೂ ಫಂಡ್ ನವರು ಹೋಗಿ ಕಂಪನಿ ಶೇರುಗಳನ್ನು ತತ್ಕಾಲದ ಮಾರುಕಟ್ಟೆಯ ಬೆಲೆಯಲ್ಲಿಯೇ ಕೊಂಡುಕೊಳ್ಳಬೇಕು.
NFO ಎಂಬುದು ಹೊಸ ಕಂಪೆನಿಯ IPO (Initial Public Offer) ತರಹ ಅಲ್ಲ, ಆದುದರಿಂದ, ಒಂದು ಹೊಸ ಫಂಡ್ ಅಥವಾ ಚಾಲ್ತಿಯಲ್ಲಿರುವ ಹಳೆ ಫಂಡ್‌ಗಳೆರಡರ ನಡುವೆ ಈ ನಿಟ್ಟಿನಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಆದರೂ ಜನರಿಗೆ ಹೊಸತೊಂದು ಆರಂಭವಾಗುವಾಗ ಅದು ಶೂನ್ಯದಿಂದ ಆರಂಭವಾಗುತ್ತದೆ ಹಾಗೂ ಬೇಗನೆ ಅದರೊಳಗೆ ಸೇರಿಕೊಂಡರೆ ಗರಿಷ್ಠ ಪ್ರತಿಫಲ ಎಂಬ ಭ್ರಮೆ. ಫಂಡ್ ಹೌಸ್‌ಗಳು ಇಂತಹ ಭ್ರಮೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತವೆ.
‘ಸಿಪ್’ (Systematic Investment Plan) ಎನ್ನುವುದು ಈಗಿನ ಹೊಸ ಮಂತ್ರ. ಇದು ಒಂದು ಉತ್ತಮ ವಿತ್ತೀಯ ಶಿಸ್ತು ಎನ್ನುವುದರಲ್ಲಿ ಸಂಶಯವಿಲ್ಲ. ಪ್ರತಿ ತಿಂಗಳೂ ಕಂತು ಕಂತಾಗಿ ಹೂಡುವುದರಿಂದ ಯುನಿಟ್‌ಗಳು ನಮಗೆ ಒಂದು ಸರಾಸರಿ ಬೆಲೆಯಲ್ಲಿ ದೊರಕುತ್ತವೆ. ಅಂದರೆ ಅತ್ಯಂತ ಕಡಿಮೆಯೂ ಅಲ್ಲದ ಅತ್ಯಂತ ಹೆಚ್ಚೂ ಅಲ್ಲದ ಒಂದು ಸರಾಸರಿ ಬೆಲೆ. ಇದು ಸತ್ಯ. ಆದರೆ ಯಾವ ಸೀಮೆಯ ಲೆಕ್ಕದಲ್ಲೂ ಕೂಡಾ ಇಂತಹ ಪ್ರಸಂಗಗಳಲ್ಲಿ ಬರುವ ಪ್ರತಿಫಲ ಗರಿಷ್ಠವಾಗಲು ಸಾಧ್ಯವೇ ಇಲ್ಲ. ಊಹುಂ. ಅದು ಕೂಡಾ ಸರಾಸರಿಯೇ. ರಿಸ್ಕ್ ಸರಾಸರಿ; ಪ್ರತಿಫಲವೂ ಸರಾಸರಿ. ಸಿಪ್ ಎಂಬುದು ‘ಕನಿಷ್ಠ ರಿಸ್ಕ್ ಹಾಗೂ ಗರಿಷ್ಠ ರಿಟರ್ನ್’ ಎಂಬ ವಾದವನ್ನು ಬಹಳ ಜನ ನಂಬಿದ್ದಾರೆ. ಅದು ಸರಿಯಲ್ಲ. ಅಷ್ಟೇ ಅಲ್ಲದೆ, ಒಂದು ಬಾರಿ ಸಿಪ್‌ಗೆ ಸಹಿ ಹಾಕಿ ಕೊಟ್ಟರೆ ಮುಗಿಯಿತು; ನಿಗಧಿ ಪಡಿಸಿದ ದಿನಾಂಕದಂದು ಸ್ವಯಂಚಾಲಿತವಾಗಿ ಯುನಿಟ್ಟುಗಳು ನಿಮ್ಮ ಹೆಸರಿನಲ್ಲಿ ಖರೀದಿಸಲ್ಪಡುತ್ತಲೇ ಇರುತ್ತವೆ. ಆ ದಿನ ಮಾರ್ಕೆಟ್ ಮೇಲೆಯೋ, ಕೆಳಗೋ ಅದು ನಿಮ್ಮ ಪ್ರಾರಬ್ಧ- ಯಾವುದೇ ವಿವೇಚನೆಯನ್ನು ಬಳಸಲಾಗುವುದಿಲ್ಲ. ಇದು ಕೂಡಾ ಸಿಪ್‌ನ ಇನ್ನೊಂದು ದೌರ್ಬಲ್ಯ. ಡೈಲಿ ಸಿಪ್ ಒಳ್ಳೆಯದೇನೋ? ಇದನ್ನು ಅರಿತುಕೊಂಡು ಮುಂದಡಿಯಿಟ್ಟರೆ ನನ್ನ ಅಭ್ಯಂತರವಿಲ್ಲ.
ಮಾರ್ಕೆಟ್ ಮೇಲೇರುವಾಗ ಮಾತ್ರ ನೂರಾರು ಫಂಡ್ ಗಳು ಜನ್ಮತಾಳುತ್ತವೆ. ಮಾರ್ಕೆಟ್ ನೆಲಗಚ್ಚಿದಾಗ ಯಾರೂ ತುಟಿ ಪಿಟಿಕ್ ಎನ್ನುವುದಿಲ್ಲ. ತಾರ್ಕಿಕವಾಗಿ ನೋಡಿದರೆ ಇದು ತದ್ವಿರುದ್ಧವಾಗಬೇಕು. ಆದರೂ ಹೊಸ ಹೊಸ ಫಂಡ್ ಗಳು ಮಾರ್ಕೆಟ್ ಮೇಲೇರುವಾಗ ಬರುತ್ತವೆ ಯಾಕೆಂದರೆ ಬುಲ್ ಮಾರ್ಕೆಟ್‌ನಲ್ಲಿ ಫಂಡ್ ಮಾರಾಟ ಸುಲಭವಾಗಿರುತ್ತದೆ. ಏರುತ್ತಿರುವ ಮಾರುಕಟ್ಟೆ ಹಾಗೂ ‘ಇದುವರೆಗಿನ ಸಾಧನೆಯ ಕೋಷ್ಟಕ’ ಜನರಿಗೆ ನಶೆ ಹತ್ತಿಸುತ್ತದೆ. (ಶಾಸನ ವಿಧಿಸಿದ ಎಚ್ಚರಿಕೆಯನ್ನು ಗಾಳಿ ತೂರುತ್ತೇವೆ) ಗ್ರಾಹಕರಾದ ನಾವು ಎಚ್ಚರವಹಿಸಿ ಯಾವಾಗ ಹಣ ಹೂಡಬೇಕೆಂದು ಸ್ವಂತ ನಿರ್ಧಾರ ತಗೊಳ್ಳಬೇಕಾಗುತ್ತದೆ. ಜಾಹೀರಾತಿನ ಪ್ರಭಾವಕ್ಕೊಳಗಾಗಿ ಕಣ್ಣು ಮುಚ್ಚಿ ನಿಶ್ಚಿಂತೆಯಿಂದ ಹೂಡುವುದಲ್ಲ. ಹೂಡುವಾಗ ಮಾರ್ಕೆಟ್ ಯಾವ ಮಟ್ಟದಲ್ಲಿದೆ ಎಂಬುದು ಅತಿಮುಖ್ಯ. ಮಾರ್ಕೆಟ್ ಕೆಳಮಟ್ಟದಲ್ಲಿದ್ದಷ್ಟೂ ಪ್ರತಿಫಲದ ಅವಕಾಶ ಜಾಸ್ತಿ ಹಾಗೂ ಮೇಲೆ ಇದ್ದಷ್ಟೂ ಅವಕಾಶ ಕಡಿಮೆ.
ಇನ್ನು ಪ್ರತಿಫಲದ ಬಗ್ಗೆ ಒಂದೆರಡು ಮಾತು. ಮ್ಯೂಚುವಲ್ ಫಂಡುಗಳು ೩೦, ೫೦ ಶತಮಾನ ಅಥವ ಅದಕ್ಕೂ ಮೀರಿ ಡಿವಿಡೆಂಡುಗಳನ್ನು ಘೋಷಿಸಿ ಭಾರೀ ಅಬ್ಬರದ ಪ್ರಚಾರ ನೀಡುತ್ತವೆ. ಮಾರುಕಟ್ಟೆ ಏರಿದಂತೆಲ್ಲಾ ಫಂಡಿನ ನೆಟ್ ಎಸೆಟ್ ವಾಲ್ಯೂ ಅಥವ N.A.V ಜಾಸ್ತಿಯಾಗಿ ಅದರಲ್ಲಿ ಒಂದಂಶವನ್ನು ಡಿವಿಡೆಂಡ್ ಆಗಿ ನೀಡಲಾಗುತ್ತದೆ. ಇದು ಯಾವುದೇ ಹುಟ್ಟುವಳಿಯಿಲ್ಲದೆ ಬರೇ ಮಾರುಕಟ್ಟೆಯ ಸಧ್ಯದ ಬೆಲೆಯಿಂದ ಕಸಿದು ಕೊಡುವಂತಹ ಡಿವಿಡೆಂಡ್. ಡಿವಿಡೆಂಡ್ ಕೊಟ್ಟಾಕ್ಷಣ ನೆಟ್ ಎಸೆಟ್ ವಾಲ್ಯು ಕೂಡಾ ಅಷ್ಟೇ ಪ್ರಮಾಣದಲ್ಲಿ ಕೆಳಗಿಳಿಯುತ್ತದೆ. MIP Monthly Income Plan ಅಂದಾಕ್ಷಣ ಪ್ರತಿ ತಿಂಗಳೂ ಆದಾಯ ಬರುತ್ತದೆ ಎಂದೇನೂ ಗ್ಯಾರಂಟಿ ಇಲ್ಲ. ಒಂದು ವೇಳೆ ಆ ರೀತಿ ಕೊಡಬೇಕಿದ್ದರೆ ಅಸಲಿನಿಂದ ಕಡಿದು ‘ಮಂಥ್ಲಿ ಇನ್ಕಂ’ ಕೊಟ್ಟೇನು ಪ್ರಯೋಜನ? ಈ ರೀತಿ ನೀಡುವ ಡಿವಿಡೆಂಡುಗಳಿಗೆ ಸೀಮಿತ ಅರ್ಥವಿರುವುದನ್ನು ಹೂಡಿಕೆದಾರರು ಮನಗಾಣಬೇಕು. ಅಲ್ಲದೆ, ಎಲ್ಲಾ ಡಿವಿಡೆಂಡುಗಳು ಮುಖಬೆಲೆಯ ಮೇಲೆ ನೀಡಲಾಗುತ್ತದೆಯಲ್ಲದೆ ತಾವು ಕೊಂಡ ಮಾರುಕಟ್ಟೆಯ ಬೆಲೆಯ ಮೇಲೆ ಅಲ್ಲ ಎಂಬ ವಿಷಯವೂ ಅನೇಕರಿಗೆ ತಿಳಿದಿಲ್ಲ.
ಇನ್ನು ಮ್ಯೂಚುವಲ್ ಫಂಡುಗಳಲ್ಲಿ ಮೂಲಭೂತವಾಗಿ ಎರಡೇ ಎರಡು ವೆರೈಟಿ. ಒಂದು ಸಾಲಪತ್ರಗಳಲ್ಲಿ ಹೂಡುವ  ಡೆಟ್ ಫಂಡುಗಳು ಹಾಗೂ ಇನ್ನೊಂದು ಶೇರುಗಳಲ್ಲಿ ಹೂಡುವ ಇಕ್ವಿಟಿ ಫಂಡುಗಳು. ಇವುಗಳ ಹಲವು ಅವತಾರಗಳಿವೆ. ಅಲ್ಲದೆ, ಅವುಗಳ ಮಿಶ್ರಣದಿಂದಲೂ ಹಲವು ಬಗೆಯ ಫಂಡುಗಳು ಉದ್ಭವವಾಗಿವೆ. ಒಟ್ಟಿನಲ್ಲಿ, ELSS (Equity linked savings scheme) Index funds, sectoral funds, ಬಾಲನ್ಸ್ಡ್ ಫಂಡ್, ಲಿಕ್ವಿಡ್ ಫಂಡ್, ಇನ್ಕಂ ಫಂಡ್, ಮಂಥ್ಲಿ ಇನ್ಕಂ ಪ್ಲಾನ್,  ಮಚ್ಯೂರಿಟಿ ಪ್ಲಾನ್, ಕಾಪಿಟಲ್ ಪ್ರೊಟೆಕ್ಶನ್ ಫಂಡ್, ಬಾಂಡ್ ಫಂಡ್, ಗಿಲ್ಟ್ ಫಂಡ್, ಶಾರ್ಟ್ ಟರ್ಮ್ ಫಂಡ್, ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್ ಎಂಬಿತ್ಯಾದಿ ಕಬ್ಬಿಣದ ಕಡಲೆಗಳಿಂದ ಆವೃತ್ತವಾದ ನೂರಾರು ವೇಷಗಳಲ್ಲಿ ಮ್ಯೂಚುವಲ್ ಫಂಡುಗಳು ಅವತರಿಸಿವೆ. ಸಾಲದ್ದಕ್ಕೆ ಈ ಎಲ್ಲಾ ಫಂಡುಗಳ ನಡುವೆ ದುಡ್ಡು ಹೂಡುವ ‘ಫಂಡ್ ಆಫ್ ಫಂಡ್ಸ್’ ಕೂಡಾ ಅವತರಿಸಿದೆ. (ಸೆಬಿ ಮಧ್ಯೆ ಪ್ರವೇಶಿಸಿ ‘ಎಂಟ್ರಿ ಲೋಡ್’ ತೆಗೆಯದಿದ್ದರೆ ಇನ್ನೆಷ್ಟು ಫಂಡುಗಳು ಬರುತ್ತಿದ್ದವೋ? ಎಂಟ್ರಿ ಲೋಡ್ ತೆಗೆದಾಕ್ಷಣ ಹೊಸ ಫಂಡುಗಳು ಬರುವುದೇ ನಿಂತು ಹೋಯಿತು.) ಸಧ್ಯದಲ್ಲೇ ಮ್ಯೂಚುವಲ್ ಫಂಡಿನ ಸಹಸ್ತ್ರ ನಾಮಾವಳಿ ಬಿಡುಗಡೆಯಾಗಲಿದೆ- ‘ಕಾಕು ಪಬ್ಲಿಕೇಶನ್ಸ್’ ವತಿಯಿಂದ. ಈ ಸಹಸ್ತ್ರಾವತಾರಗಳಲ್ಲಿ ನಮಗೆ ಯಾರು ಹಿತವರೋ? ಆರು ಬಲ್ಲ?
ಇಷ್ಟು ಕನ್ಫ್ಯೂಶನ್ ಸಾಲದು ಎಂದಿದ್ದರೆ ಮುಂದೆ ಕೇಳಿ. . .
ಮ್ಯೂಚುವಲ್ ಫಂಡುಗಳು ಇನ್ಸುರನ್ಸ್ ಅಥವ ಜೀವ ವಿಮೆಯೊಡನೆ ಮಿಳಿತವಾಗಿ ಬಂದರೆ ಯುಲಿಪ್ (ULIP – Unit linked Insurance Plan) ಅಥವ ಪೆನ್ಶನ್ ಜೊತೆ ಮಿಳಿತವಾಗಿ ಬಂದರೆ ULPP (Unit Linked Pension Plan) ಮತ್ತು ಅವುಗಳಲ್ಲೂ ನೂರಾರು ವೆರೈಟಿಗಳು. ಅವುಗಳ ಸಂಪೂರ್ಣ ವಿವರಗಳು ಅವುಗಳ ಏಜೆಂಟರಿಗೂ ಕೂಡಾ ಗೊತ್ತಿರುವುದಿಲ್ಲ. ಒಟ್ಟಿನಲ್ಲಿ ಕಳೆದ ದಶಕದಲ್ಲಿ ಮಾರ್ಕೆಟಿಂಗ್ ಅನ್ನು ಸಂಪೂರ್ಣವಾಗಿ ಬಳಸಿಕೊಂಡು ಮೇಲೆ ಬಂದ ಒಂದು ಉದ್ದಿಮೆಯಿದ್ದರೆ ಅದು ಮ್ಯೂಚುವಲ್ ಫಂಡ್ ಇಂಡಸ್ಟ್ರಿ ಎಂದು ಧಾರಾಳವಾಗಿ ಹೇಳಬಹುದು.
ರಾಯರೆ, ಶೇರುಗಳ ಮೇಲೆ ಹೂಡುವಾಗ ಎಷ್ಟು ಅಧ್ಯಯನದ ಅಗತ್ಯವಿದೆಯೋ ಮ್ಯೂಚುವಲ್ ಫಂಡಿನಲ್ಲಿ ಹೂಡುವಾಗಲೂ ಅಷ್ಟೇ ಅಧ್ಯಯನದ ಅಗತ್ಯವಿದೆ. ಹೂಡಿಕೆ ಎನ್ನುವುದು ಬೆಕ್ಕು ಹಾಲು ಕುಡಿದಂತೆ ಕಣ್ಣು ಮುಚ್ಚಿ ಮಾಡುವ ಕೆಲಸವಲ್ಲ.
* * *
ಇಷ್ಟೆಲ್ಲಾ ಉದ್ದುದ್ದದ ಭಾಷಣ ಕೇಳಿದ ಗುರುಗುಂಟಿರಾಯರಿಗೆ ಸಿಟ್ಟು ತಡೆಯಲಾಗಲಿಲ್ಲ. ಸಿಟ್ಟಿನಿಂದ ಮುಖ ಕೆಂಪೇರತೊಡಗಿತು. ‘ನಾನು ಏನು ಹೇಳಿದರೂ ಉಂಟಲ್ಲ ಈ ಮಳೆರಾಯನ ಕಿರಿಕಿರಿ’ ಅಂತ ಮುಖ ಸಿಂಡರಿಸಿದರು. ಕೈಯಲ್ಲಿ ಹಿಡಿದ ಮ್ಯೂಚುವಲ್ ಫಂಡಿನ ಕರಪತ್ರಗಳನ್ನು ಸುರುಳಿ ಸುರುಳಿಯಾಗಿ ಸುತ್ತಿ ಅದನ್ನು ಒಂದು ಕೋಲಿನಂತೆ ಮೇಲೆ ಕೆಳಗೆ ಬೀಸತೊಡಗಿದರು. ಕಣ್ಣುಗಳನ್ನು ದೊಡ್ಡದಾಗಿ ಅರಳಿಸಿ, ಕೆಂಪು ಕೆಂಪಾಗಿಸಿ ದಲಾಲ್ ಸ್ಟ್ರೀಟಿನಿಂದ ತಪ್ಪಿಸಿಕೊಂಡು ಬಂದ ಗೂಳಿಯಂತೆ ನನ್ನ ಮೇಲೆ ಹಾಯತೊಡಗಿದರು.
“ನಾನು ಯಾವ ಸ್ಕೀಂ ತಗೊಂಡುಬಂದರೂ ನಿಮಗೆ ಆಗೋಲ್ಲ. ಹಾಗಿದ್ರೆ ನೀವೇ ಹೇಳಿ ನಮ್ಮಂತವರಿಗೆ ಒಂದು ಸುಲಭವಾದ, ಸೇಫ್ ಆದ, ಹೈ ರಿಟರ್ನ್ ಉಳ್ಳ ಸ್ಕೀಂ. ಹೇಳಿ ನೋಡುವಾ. . . .” ಅಂತ ಏದುಸಿರುಬಿಡತೊಡಗಿದರು.
“ಅಂತಹ ಸ್ಕೀಂ ಯಾವುದೂ ಇಲ್ಲ” ಅಂದೆ ತಣ್ಣಗೆ.
“ಅಂದ್ರೆ ಏನರ್ಥ. . . .?” ಗುರುಗುಂಟಿರಾಯರದ್ದು ಸ್ವರವೇರಿತು.
“ಅಂದ್ರೆ ಅದೇ ಅರ್ಥ. ಆ ಎಲ್ಲಾ ಗುಣಗಳೂ ಉಳ್ಳ ಸ್ಕೀಂ ಯಾವುದೂ ಇಲ್ಲ. ಮುಂದೆಯೂ ಇರಲಾರದು” ಅಂದೆ. ನಮ್ಮ ನಮ್ಮ ದುಡ್ಡನ್ನು ಜೋಪಾನವಾಗಿ ಇಟ್ಟುಕೊಳ್ಳಲು ನಾವು ನಾವೇ ಶ್ರಮವಹಿಸಬೇಕು ತಾನೆ? ಸುಮ್ನೆ ಇನ್ನೊಬ್ಬರ ಕೈಯಲ್ಲಿ ಕೊಟ್ಟು ಎಲ್ಲವೂ ಆಗಬೇಕು ಅಂದರೆ ಆದೀತೇ? ಪ್ರತಿಯೊಂದು ಯೋಜನೆಯಲ್ಲೂ ಅದರದ್ದೇ ಆದ ಗುಣ ದೋಷಗಳು ಇದ್ದೇ ಇವೆ. ಯಾವುದೂ ಸರ್ವರೋಗ ನಿವಾರಿಣಿ, ಸಂಜೀವಿನಿ, ಅಲ್ಲವೇ ಅಲ್ಲ. ಇದನ್ನು ಅರಿತು ಸ್ಕೀಂಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ದುಡ್ಡು ಹೂಡವ ಅಭ್ಯಾಸವನ್ನು ಇಟ್ಟುಕೊಳ್ಳೋಣ, ರಾಯರೆ”
೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯೯
ಅಟ್ಯಾಚ್‌ಮೆಂಟ್:
ಬಡ್ಡಿ ದರ, ಶೇರುಗಳಿಂದ ಆರಂಭಗೊಂಡ ಕಾಸು-ಕುಡಿಕೆಯ ಚರ್ಚೆ ನಿಧಾನವಾಗಿ ಮ್ಯೂಚುವಲ್ ಫಂಡ್ ಕಡೆಗೆ ತಿರುಗಿದ್ದು ಬಹಳ ಜನರಿಗೆ ಖುಶಿ ಕೊಟ್ಟಿದೆ. ಕಳೆದ ವಾರ ಕೊಟ್ಟ ಮಾಹಿತಿಗಳ ಬಗ್ಗೆ ಹಲವು ಓದುಗರು ಆಶ್ಚರ್ಯ ಹಾಗೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ‘ಇದೆಲ್ಲ ನಮಗೆ ಗೊತ್ತೇ ಇರಲಿಲ್ಲ’ ಎಂಬುದು  ಸಾಮಾನ್ಯವಾಗಿ ಕೇಳಿಬಂದ ಉದ್ಗಾರ. ಅದು ಹೌದು. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಅದರಿಂದ ಒಂದಲ್ಲ ಒಂದು ರೀತಿಯಿಂದ ಪ್ರಯೋಜನ ಪಡೆಯುವವರೇ ಆಗಿದ್ದಾರೆ. ಯಾವ ಕನ್ಯಾ ಪಿತೃ ಕೂಡಾ ‘ನನ್ನ ಮಗಳು ಬಹಳ ಒಳ್ಳೆಯ ಹುಡುಗಿ, ಸಿಟ್ಟು ಬಂದಾಗ ಮಾತ್ರ ಎದುರಿನವನ ಮುಸುಡು ಮೊದಲಿದ್ದಂತೆ ಇರ್ಲಿಕ್ಕೆ ಬಿಡ್ಲಿಕ್ಕಿಲ್ಲ’ ಅಂತ ಹರಿಶ್ಚಂದ್ರ ಸ್ಟೈಲಿನಲ್ಲಿ ಹೇಳ್ಕೊಂಡು ತಿರುಗುವುದಿಲ್ಲ. ಅದೇನಿದ್ರೂ ಮದುವೆಯಾಗುವವನೇ ಅಲ್ಲಿಲ್ಲಿ ಕೇಳಿ ತಿಳಿದುಕೊಂಡು ಜಾಗ್ರತೆ ಮಾಡಬೇಕಾದದ್ದು. ಮಾಡ್ದಿದ್ರೆ ಮತ್ತದು ಅವನ ಪ್ರಾರಬ್ಧ. ಅಲ್ವೆ? ಆದ್ದರಿಂದ ಇನ್ನು ಮುಂದಾದರೂ ದಳ್ಳಾಳಿ ತೋರಿಸಿದ ಹುಡುಗಿಗೆ ಹೋಗಿ ಹಾರ ಹಾಕುವ ಬದಲು ಸ್ವಂತ ಬುದ್ಧಿ ಉಪಯೋಗಿಸಿ ‘ಮ್ಯೂಚುವಲ್ ಫಂಡುಗಳಲ್ಲಿ ದುಡ್ಡು ವಿನಿಯೋಗಿಸಬೇಕೇ ಬೇಡವೇ? ಬೇಕೆಂದಿದ್ದರೆ ಯಾವ ಫಂಡು? ಎಷ್ಟು ಹಣ’ ಇತ್ಯಾದಿ ಕೂಲಂಕುಷವಾಗಿ ವಿವೇಚಿಸಿ ಮುಂದುವರಿಯಿರಿ ಎಂಬುದೇ ನಮ್ಮ ಆಶಯ.

‍ಲೇಖಕರು avadhi

July 19, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. satish B T

    Jayadev…Mutual fund well explained.
    Normally most of us think that Mutual fund is like “Kalpa Vruksha” it always grows. Fortunately or unfortunatley I think most of them have got good returns hence they speak about mutual funds.
    But a Good article.
    Thanks.

    Regards,

    Satish B.Telsang

    ಪ್ರತಿಕ್ರಿಯೆ
  2. mohanjavagal

    ಜಯದೇವರಿಗೆ ಧನ್ಯವಾದಗಳು.
    ನನಗೂ ಹೀಗೆ Mutual fund ಗಳು ಎಂದೂ ಮುಗ್ಗರಿಸಿ ಬೀಳದ ಕುದುರೆಗಳು ಎಂದು ನಂಬಿಸಿ ಹಣ ಹೂಡಿಸಿದ ಗೆಳೆಯರಿದ್ದಾರೆ.ಉತ್ಸಾಹದಿಂದ ಕುದುರೆ ಏರಿದ ನಾನು ಅನುಭವಿಸಿದ ಪೆಟ್ಟು ನನಗೊಬ್ಬನಿಗೆ ಗೊತ್ತು.ಯಾರೇ ಆಗಲಿ ಪಳಗಿಸದೆ,ಯಾವ ಕುದುರೆಯನ್ನು ಏರಬಾರದು.

    ಪ್ರತಿಕ್ರಿಯೆ
  3. Sreedhar

    ಜಯದೇವ್ ಸರ್,

    ಕಾಕು ತು೦ಬಾ ಉಪಯುಕ್ತವಾದ ಅ೦ಕಣ.ನಿಮ್ಮ್ಮ ಚಿ೦ತನೆ ಆಕ್ಟೋಪಸ್ ನ ಬಾಹುಗಳ೦ತೆ ಎಲ್ಲಾ ವಿಚಾರಗಳ ಕಡೆಗೂ ಹರಿಯುತ್ತದೆ ಎ೦ದು ಆಶಿಸುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: