ಗೋಕುಲದಿಂದ ಮಧುರೆಗೆ, ಕೊಳಲಿನಿಂದ ಅಳಲಿಗೆ..

-ಜೋಗಿ
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಬಗ್ಗೆ ತುಂಬ ಪ್ರೀತಿ ಇಟ್ಟುಕೊಂಡಿದ್ದ, ಅವರ ಜೊತೆಯಲ್ಲಿ ಸರಸದಿಂದ ಮಾತಾಡಬಲ್ಲವರಾಗಿದ್ದ ವೈಎನ್‌ಕೆ, ಪು.ತಿ.ನ. ಅಂದರೆ ಪುಟ ತಿರುಗಿಸಿ ನಡಿ’ ಎಂದು ತಮಾಷೆಯಾಗಿ ನುಡಿದಿದ್ದರು. ಅದು ಪುತಿನ ಅವರಿಗೂ ಗೊತ್ತಾಗಿ ಮನಸಾರೆ ನಕ್ಕಿದ್ದರು. ನಾನು ಪುತಿನ ಅವರನ್ನು ಭೇಟಿಯಾದದ್ದು ಜಯನಗರದ ಅವರ ಮನೆಯಲ್ಲಿ. ಅಲ್ಲಿಗೆ ಕರೆದುಕೊಂಡು ಹೋದವರೂ ವೈಎನ್‌ಕೆಯೇ. ಅಲ್ಲಿ ತನಕ ನಾನು ಪುತಿನ, ಕಟ್ಟುನಿಟ್ಟಿನ, ಶ್ರದ್ಧಾಭಕ್ತಿಗಳಿಂದ ನೋಡಬೇಕಾದ, ಆಚಾರವಂತರು ಎಂದುಕೊಂಡಿದ್ದೆ.
ಕೆಲವು ಲೇಖಕರ ಬಗ್ಗೆ ನಮಗೆ ವಿನಾಕಾರಣ ಒಂದು ಪೂರ್ವಗ್ರಹ ಬೆಳೆದಿರುತ್ತೆ. ತೇಜಸ್ವಿ ಅಪಾರ ಸಿಟ್ಟಿನ ವ್ಯಕ್ತಿ, ಲಂಕೇಶರು ಯಾರ ಜೊತೆಗೂ ಮಾತಾಡುತ್ತಿರಲಿಲ್ಲ, ಕುವೆಂಪು ಮನೆಗೇ ಬಿಟ್ಟುಕೊಳ್ಳುತ್ತಿರಲಿಲ್ಲ, ಶಿವರಾಮ ಕಾರಂತರು ಏನು ಹೇಳಿದರೂ ಸಾಕ್ಷ್ಯ ಕೇಳುತ್ತಿದ್ದರು, ಭೈರಪ್ಪ ಶಿಸ್ತಿನ ಸಿಪಾಯಿ, ಬೇಂದ್ರೆ ಮನೆಗೆ ಹೋಗಿ ಅವರನ್ನು ಹೊಗಳಿದವರನ್ನು ಅವಮಾನ ಮಾಡುತ್ತಿದ್ದರು ಎಂಬಿತ್ಯಾದಿ ಜನಪ್ರಿಯ ಮಿಥ್’ಗಳ ಹಾಗೇ, ಪುತಿನ ಮಡಿವಂತರು ಎಂಬುದೂ ಒಂದು ಮೂಢನಂಬಿಕೆ ಎಂದು ಆಮೇಲೆ ಗೊತ್ತಾಯಿತು.
ಪುತಿನ ಕುರಿತು ತುಂಬ ಜನಪ್ರಿಯವಾಗಿರುವ ಒಂದು ತಮಾಷೆಯಿದೆ. ಕೆ ಎಸ್ ನರಸಿಂಹಸ್ವಾಮಿ ಆಗಷ್ಟೇ ಮೈಸೂರ ಮಲ್ಲಿಗೆ’ ಕವನ ಸಂಕಲನ ಹೊರತಂದಿದ್ದರು. ಅದರಲ್ಲಿ ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು’ ಎಂಬ ಪದ್ಯವಿದೆ. ಅದನ್ನು ಓದಿ ಪುತಿನ ಹೇಳಿದ್ದರಂತೆ: ಎಂಥ ಅರಸಿಕನಯ್ಯ ನೀನು? ಕನಸಿನಲ್ಲೂ ಹೆಂಡತೀನೇ  ಬರಬೇಕೇನು?’.
ಪುತಿನ ಅವರ ಕವಿತೆಗಳ ಪೈಕಿ ಥಟ್ಟನೆ ನೆನಪಿಗೆ ಬರುವುದು

ಯಾವ್ಯಾವುದು ಎಂದು ಯೋಚಿಸಿದರೆ, ಅವರ ಗೀತನಾಟಕಗಳೇ ಕಣ್ಣೆದುರು ಸುಳಿಯುತ್ತವೆ. ಕುವೆಂಪು, ಬೇಂದ್ರೆ, ಕೆಎಸ್‌ನ, ಅಡಿಗ, ಕಣವಿಯವರ ಥರ ಪುತಿನ ನೆನಪಾಗುವುದಿಲ್ಲ.
ಅವರು ಕನ್ನಡ ಕಾವ್ಯದಲ್ಲಿ ಒಂದು ದ್ವೀಪದ ಹಾಗೆ ಉಳಿದುಬಿಟ್ಟವರು ಎನ್ನುತ್ತಾರೆ ಎಚ್ ಎಸ್ ರಾಘವೇಂದ್ರರಾವ್. ಅದಕ್ಕೆ ಅವರು ಕೊಡುವ ಕಾರಣ ಕನ್ನಡ ಕಾವ್ಯದ ಸ್ಥಿತ್ಯಂತರಗಳ ಬಗ್ಗೆ ಅವರು ತೋರಿದ ಅನಾಸಕ್ತಿ.  ನವೋದಯದಿಂದ ನವ್ಯದತ್ತ ಕಾವ್ಯ ಹೊರಳಿಕೊಳ್ಳುತ್ತಿದ್ದರೂ, ಪುತಿನ ಬದಲಾಗಲಿಲ್ಲ. ಅವರ ಕವಿತೆಗಳ ಭಾವ ನಮ್ಮನ್ನು ತಟ್ಟುವಂತಿದ್ದರೂ, ಅವರು ಬಳಸುವ ಪದಗಳು
ಎಷ್ಟೋ ಬಾರಿ ಅರ್ಥವೇ ಆಗುವುದಿಲ್ಲ.
ನನಗೆ ತಕ್ಷಣ ನೆನಪಿಗೆ ಬರುವುದು ಟಿ ಎನ್ ಸೀತಾರಾಮ್ ಕತೆಗಾರ’ ಧಾರಾವಾಹಿಗೆ
ಬಳಸಿಕೊಂಡು ಜನಪ್ರಿಯಗೊಳಿಸಿದ ಒಂದು ಪದ್ಯ. ವೆತೆಗಳ ಕಳೆಯುವ ಕತೆಗಾರ, ನಿನ್ನ ಕಲೆಗೆ
ಯಾವುದು ಭಾರ? ಆವುದು ವಿಸ್ತರ, ಯಾವುದು ದುಸ್ತರ, ನಿನಗೆಲೆ ಹರ್ಷದ ಹರಿಕಾರ?’ ಎಂಬ ಕವಿತೆಯಲ್ಲಿ ಅವರು ಕತೆಗಾರನ ಕಲ್ಪನಾಶಕ್ತಿಯನ್ನು ಕೊಂಡಾಡುತ್ತಾರೆ. ಅಸಾಧ್ಯವಾದದ್ದನ್ನು ಕತೆಯಲ್ಲಿ ಸಾಧ್ಯವಾಗಿಸುವ ಕವಿಶಕ್ತಿಯನ್ನು ಹೀಗೆ ಹೊಗಳುತ್ತಾರೆ: ಕಪಿ ಹಾರಿತು ಹೆಗ್ಗಡಲನು ಎಂಬೆ, ಕಡಲನೆ ಕಡೆದರು ಬೆಟ್ಟದೊಳೆಂಬೆ, ನಿನ್ನೂಹೆಯ ಹೇರಾಳವ ತುಂಬೆ, ಸೃಷ್ಟಿಕರ್ತನಿಗೂ ಅರಿದೆಂಬೆ’. ಹನುಮಂತ ಕಡಲನ್ನು ಹಾರಿ ದಾಟಿದ್ದು, ಸ
ಮುದ್ರಮಥನದ ಕತೆಯಲ್ಲಿ ಮಂದರಗಿರಿ ಬೆಟ್ಟವನ್ನಿಟ್ಟುಕೊಂಡು ಕಡಲನ್ನು ಕಡೆದದ್ದು- ಇಂಥ ಕಲ್ಪನೆ ಸೃಷ್ಟಿಕರ್ತನಿ
ಗೂ ಬರಲಿಕ್ಕೆ ಸಾಧ್ಯವಿಲ್ಲ. ಹೀಗೆ ಹೇಳಿಯೂ ನಂಬಿಸುವ ಶಕ್ತಿ ಕಲೆಗಾರ, ಕತೆಗಾರನಿಗೆ ಮಾತ್ರ ಇರುವುದಕ್ಕೆ ಸಾಧ್ಯ ಎನ್ನುತ್ತದೆ ಈ ಕವಿತೆ.
ನಮ್ಮ ಕಾಲದ ತಲ್ಲಣವನ್ನು, ಬಹುಶಃ ಈ ಹೊತ್ತಿಗೆ ಹೊಂದಿಕೆಯಾಗುವ ನಾಟಕವೊಂದನ್ನು ಪುತಿನ ಶ್ರೀಕೃಷ್ಣನ ಬದುಕಿನ ಒಂದು ಚಿತ್ರವನ್ನಿಟ್ಟುಕೊಂಡು ರಚಿಸಿದರು.  ಆ ಗೀತನಾಟಕದ ವಸ್ತು ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು, ಇಲ್ಲಿನ ಜಂಜಡದಲ್ಲಿ ಸಿಲುಕಿಹಾಕಿಕೊಂಡ ಎಲ್ಲರನ್ನೂ ಪ್ರತಿನಿಧಿಸುವಂಥದ್ದು. ನಮ್ಮ ಬಹುತೇಕ ಕಥೆಗಳು, ಕಾದಂಬರಿಗಳು, ಸಿನಿಮಾಗಳು ಈ ವಸ್ತುವನ್ನೇ ಆಧರಿಸಿದ್ದು. ಗೋಕುಲ ನಿರ್ಗಮನ’ ಎಂಬುದು ಹಳ್ಳಿಯಿಂದ ಪಟ್ಟಣಕ್ಕೆ ಬಂದ ಎಲ್ಲರ ಪಾಲಿಗೂ ಒಪ್ಪುವಂಥ ರೂಪಕ. ಬಿವಿ ಕಾರಂತರು ಈ ನಾಟಕವನ್ನು ಅತ್ಯದ್ಭುತವಾಗಿ ರಂಗಕ್ಕೆ ತಂದಿದ್ದಾರೆ. ಈ ನಾಟಕದ ಹಾಡುಗಳೂ ಅತ್ಯಂತ ಜನಪ್ರಿಯ.
ಗೋಕುಲದಲ್ಲಿ ಗೋಪಿಕೆಯರ ಜೊತೆ ಆಟವಾಡುತ್ತಾ, ರಾಧೆಯ ಪ್ರೇಮದಲ್ಲಿ ಬಂದಿಯಾಗಿ
ದ್ದ ಕೃಷ್ಣನ ಬದುಕಿನಲ್ಲಿ ನಡೆದ ಒಂದು ಆಕಸ್ಮಿಕ ಸಂಗತಿ, ಹೇಗೆ ಅವನ ಇಡೀ ಬದುಕನ್ನೇ ಬದಲಾಯಿಸಿತು
ಎನ್ನುವುದು ಇಲ್ಲಿಯ ಕಥಾವಸ್ತು. ಆ ರೂಪಾಂತರವನ್ನು ಪುತಿನ ನಾಲ್ಕೇ ಸಾಲುಗಳಲ್ಲಿ ಹೇಳುತ್ತಾರೆ.  ಹಾಗೇ ಹೇಳುವುದಕ್ಕೆ ಇಡೀ ನಾಟಕವನ್ನು ಭೂಮಿಕೆಯನ್ನಾಗಿ ಮಾಡಿಕೊಳ್ಳುತ್ತಾರೆ.
ಆ ಗೋಕುಲವಾದರೂ ಹೇಗಿತ್ತು? ಯಮುನೆಯ ತೆರೆತೆರೆ ತಾಳವ ಹೊಯ್ದು, ತೀರದ ಗಿಡಮರ ಅಭಿನಯಗೆಯ್ದು, ಲತೆಲತೆ ಬಳುಕಿ, ಗಾಳಿಗೆ ತಳುಕಿ, ಕೊಳಲಿಗೆ ಒಲೆಯುತ್ತಿದ್ದ ತಾಣ ಅದು. ಆ ಪರಿಸರವನ್ನು ಪ್ರಭಾವಿಸಿ ಮರುಳು ಮಾಡುತ್ತಿದ್ದದ್ದು ಕೊಳಲನಾದ. ಎಲ್ಲರ ಮನಸ್ಸನ್ನು ಹಗುರಾಗಿಸುತ್ತಿದ್ದದ್ದೂ
ಆ ಮುರಳೀಗಾನವೇ. ಗೋಪಿಕೆಯರಿಗೂ ಗೋಪಾಲಕರಿಗೂ ಅದೇ ಗುಂಗು. ಕೃಷ್ಣನ ಕೊಳಲಿನ ಕರೆ, ತೊಟ್ಟಿಲಿನ ಹಸುಗೂಸ ಮರೆ, ಪಕ್ಕದ ಗಂಡನ ತೊರೆ, ಬೃಂದಾವನಕೆ ತ್ವರೆ ಎಂದು ಎಲ್ಲವನ್ನೂ ಬಿಟ್ಟು ಬೃಂದಾವನಕ್ಕೆ ಓಡುವ ಗೋಪಿಕೆಯರದು ದಿಟ್ಟ ನಿರ್ಧಾರ. ಅವರ ಅನಿಸಿಕೆ ಇದು: ಹೊರೆಗೆಲಸ ಮಿಕ್ಕರೆ ಮಿಗಲಿ, ನೆರೆಹೊರೆ ನಕ್ಕರೆ ನಗಲಿ ಎಂದು ಹೊರಟೇ ಬಿಡುತ್ತಾರೆ. ಅಲ್ಲಿಗೆ ಬರುವ ರಾಧೆ. ಪಾಲಿಗಂತೂ ಕೃಷ್ಣನೇ ಜಗತ್ತು. ನಿನ್ನೊಳು ನಾ, ನನ್ನೊಳು ನೀ. ಒಲಿದ ಮೇಲಿಂತೆ ನಾ ನೀ’. ಅಲ್ಲಿ ಎಲ್ಲಿ ನೋಡಿದರೂ ಅದೇ ದೃಶ್ಯ- ಅಕ್ಕೋ ಶ್ಯಾಮ, ಅವಳೇ ರಾಧೆ, ನ
ಲಿಯುತಿಹರು ಕಾಣಿರೇ. ಹಾಗಂತ ಗೋಪಿಕೆಯರಿಗೆ ಮತ್ಸರವಿಲ್ಲ. ಅವರು ಕೂಡ ರಾಧೆಯೊಂದಿಗೆ ತಾದಾತ್ಯ್ಮ ಹೊಂದಿದವರೇ: ನಾವೇ ರಾಧೆ, ಅವನೆ ಶ್ಯಾಮ, ಬೇರೆ ಬಗೆಯ ಮಾಣಿರೇ.
ಕೃಷ್ಣ ಕೇವಲ ಗೋಪಿಕೆಯರನ್ನಷ್ಟೇ ರಂಜಿಸುವುದಿಲ್ಲ. ಆ ಊರಿನ ಮುದುಕರ ಪಾಲಿಗೂ ಅವನು ಜೀವಜಲ. ಅವರ ಮುಂದೆ ಕೃಷ್ಣ ಕೊಳಲೂದುತ್ತಾನೆ. ಮುಪ್ಪಿನ ಕೆಪ್ಪಿನ ಕಿವಿ ಅದನ್ನು ಕೇಳಿಸಿಕೊಳ್ಳುತ್ತದೆ. ಮತ್ತಷ್ಟು ಹಾಡೆಂದು ಬೇಡುತ್ತದೆ. ನಾಗರಹಾವು ಪುಂಗಿಯ ಓಲಾಟಕ್ಕೆ ತಲೆದೂಗುವಂತೆ, ಆ ಹಿರಿಜೀವಗಳೂ ಕೃಷ್ಣನ ಕುಣಿತಕ್ಕೆ ಸೋಲುತ್ತವೋ, ಗಾನಕ್ಕೆ ಸೋಲುತ್ತವೋ ಯಾರಿಗೆ ಗೊತ್ತು. ಆದರೆ ಅವರೆಲ್ಲರ ಒಕ್ಕೊರಲ ಬೇಡಿಕೆ ಒಂದೇ: ಕೊಳಲನೂದು ಗೋವಿಂದ, ಮುಪ್ಪಿಗಾಗಲಿ ಆನಂದ. ಮೈಯ ಮುಪ್ಪು ಕಾರುವಂತೆ, ಮನಕೆ ಚಿಂತೆ ಸೇರದಂತೆ, ಹರೆಯದ ಹುರುಪಿಂದ ನಾವು, ಹಗುರು ಹೆಜ್ಜೆಯಿಡುವಂತೆ ಕೊಳಲನೂದು’ ಎನ್ನುವ ಆ ಮುದುಕರ ಪಾಡು ಕರ್ಣಕಠೋರ. ಅವರೇ ಹೇಳಿಕೊಳ್ಳುವ ಹಾಗೆ ಮುಪ್ಪು ದಿನದಿನಕೂ ಬೆಳೆವ ಘೋರ. ಬಾಗಿದ ಬೆನ್ನಿನ ಮೇಲೆ ಕಾಲದ ಭಾರ’.
ಹೀಗೆ ತನ್ನ ಹಳ್ಳಿಯ ಎಲ್ಲರನ್ನೂ ಪ್ರೀತಿಸುತ್ತಾ, ಮೆಚ್ಚಿಸುತ್ತಾ, ರಂಜಿಸುತ್ತಾ, ಓಲೈಸುತ್ತಾ, ಮುದ್ದಿಸುತ್ತಾ ಅದೇ ಜಗತ್ತು, ಅದರಾಚೆಗೆ ಏನೂ ಇಲ್ಲ ಎಂದು ಓಡಾಡಿಕೊಂಡಿದ್ದ ಕೃಷ್ಣನೆಂಬ ಗೊಲ್ಲರ ಹುಡುಗ ಮುಂದೇನಾಗುತ್ತಾನೆ? ಆ ಗೊಲ್ಲರ ಹಾಡಿ, ಹಾಡಿನಿಂದ ತುಂಬಿ ತುಳುಕುತ್ತಿದ್ದ ಹಾಡಿ ಏನಾಗುತ್ತದೆ? ಉತ್ತರವೂ ಅಲ್ಲೇ ಕಾದಿದೆ. ಬಂದೇ ಬರುತ್ತದೆ  ಮಧುರೆಯ ಕರೆ, ಕೇಡಿನ ಕರೆ.
ಪುತಿನ ಇಲ್ಲಿ ದಿಗ್ಭ್ರಮೆಗೊಳಿಸುವ ಹಾಗೆ ಕೃಷ್ಣ ಮತ್ತು ಬಲರಾಮರ ನಡುವೆ ಅಭಿಪ್ರಾಯ ಬೇಧ ತಂದಿಡುತ್ತಾರೆ. ಕೊಳಲೂದುತ್ತಾ, ರಂಜಿಸುತ್ತಾ, ಹಾಡುತ್ತಾ, ಜಗದ ಪರಿವೆಯೇ ಇಲ್ಲದಂತೆ ಇರುವ ಕೃಷ್ಣ, ಏನಾದರೂ ಸಾಧಿಸಲೇಬೇಕು ಎಂದು ಪಣತೊಟ್ಟವನಂತೆ ಕಾಣುವ ಬಲರಾಮ. ಅವನಿಗೆ ಊರು ಸಾಕಾಗಿದೆ. ಅವನಂತೆ ಅನೇಕ ಹುಡುಗರಿಗೆ ಊರಿನ ರಗಳೆ ಬೇಡ ಅನ್ನಿಸಿದೆ. ದೂರದ ನಗರ, ರಾಜಧಾನಿ ಕರೆಯುತ್ತಿದೆ:
ಬನ್ನಿರೋ ನಾವೆಲ್ಲ ಮಧುರೆಗೆ
ಬಿಲ್ಲಹಬ್ಬಕೆ ಹೋಗುವ
ಹಳುವಹಳ್ಳಿಯ ಬಿಡುತ
ಸೊಗಸಿನ ಹೊಳಲಜಾತ್ರೆಗೆ ಹೋಗುವ
ಎಂದು ಬಲರಾಮ ಹುಡುಗರನ್ನೆಲ್ಲ ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ, ತನ್ನವರ ಬಗ್ಗೆ ಅವನಿಗಿರುವ ನಿರ್ಲಕ್ಷ್ಯವೂ ಇಲ್ಲಿ ಎದ್ದು ಕಾಣುವಂತಿದೆ:
ಹೈ ಹಚಚ್ಚಾ ಎಂದು ತುರುಗಳ ಹಣ್ಣುಮುದುಕರೆ ಕಾಯಲಿ
ಹಟ್ಟಿಯೊಳೆ ನಿಟ್ಟುಸಿರನಿಡುತ ಹೆಂಗಳುಳಿಯಲಿ ಊರಲಿ
ಎನ್ನುವ ಬಲರಾಮ ಕೃಷ್ಣನನ್ನೂ ಬಿಡುವುದಿಲ್ಲ. ನಿನ್ನ ಹೆಣ್ಣುಗಳ ಹುಚ್ಚು ಸಾಕು, ಕೊಳಲು ಎಸೆಯಾಚೆ. ನಡೆ ಮಧುರೆಗೆ ಎನ್ನುತ್ತಾನೆ. ಕೃಷ್ಣ ತಾನು ಬರುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳುತ್ತಾನೆ.  ಆದರೆ ಬಲರಾಮ ಮತ್ತು ಇದರ ಗೋಪಬಾಲರ ಒತ್ತಾಯಕ್ಕೆ ಅವನು ಮಣಿಯುತ್ತಾನೆ. ಈ ಹಳ್ಳಿಯಲ್ಲಿ ಬದುಕಿಲ್ಲ, ಭವಿಷ್ಯವಿಲ್ಲ, ನಾಳೆಗಳಿಲ್ಲ, ಎತ್ತರಕ್ಕೇರುವ ಸಾಧ್ಯತೆಯಿಲ್ಲ, ನಡೆ ಹೋಗೋಣ. ಅಲ್ಲಿ ಸಾಧಿಸುವಂಥದ್ದು ಸಾಕಷ್ಟಿದೆ ಎಂಬ ಮಹತ್ವಾಕಾಂಕ್ಷೆಯ ಮಾತುಗಳು ಕೃಷ್ಣನ ಊರಲ್ಲೇ ಉಳಿಯುವ ನಿರ್ಧಾರವನ್ನು ಸಡಿಲಿಸುತ್ತವೆ. ಬಲರಾಮ ಅವನ ಕೊಳಲನ್ನು ಕಿತ್ತು ಎಸೆಯುತ್ತಾನೆ.
ಕೃಷ್ಣ ಹೋಗಿ ಬಿಲ್ಲ ಹಬ್ಬ ಮುಗಿಸಿ ಮತ್ತೆ ಬರುತ್ತೇನೆ ಎಂದು ಮಾತು ಕೊಟ್ಟು ಹೊರಡುತ್ತಾನೆ. ಮರಳಿ ಬರಲಾಗುವುದಿಲ್ಲ ಎಂದು ಅವನಿಗೂ ಗೊತ್ತಿದೆ. ರಾಧೆ ಮರುಗುತ್ತಾಳೆ, ಗೋಪಿಕೆಯರು ಬೇಡಿಕೊಳ್ಳುತ್ತಾರೆ. ಇನ್ನು ಹಂಬಲವ ಬಿಡಿ, ಹರಕೆಯಿಂದ ಬೀಳುಕೊಡಿ’ ಎಂದು ಹೇಳಿ ಕೃಷ್ಣ ಹೊರಡುತ್ತಾನೆ.
ಕೊಳಲನ್ನು ಕೆಳಗಿಟ್ಟು, ತನ್ನವರನ್ನು ಬಿಟ್ಟು, ರಾಧೆಗೆ ಕೈ ಕೊಟ್ಟು ಹೊರಡುವ ಕೃಷ್ಣನನ್ನು ಒಲಿಸಿ ಕರೆದೊಯ್ಯುತ್ತಾನೆ ಅಕ್ರೂರ. ಮತ್ತೆ ಮರಳಿ ಬಂದು ಕೊಳಲನ್ನು ಕೈಗೆತ್ತಿಕೊಳ್ಳುತ್ತೇನೆ, ರಾಧೆಯನ್ನು ರಮಿಸುತ್ತೇನೆ, ಗೋಪಿಕೆಯರ ಜೊತೆ ನಲಿದಾಡುತ್ತೇನೆ ಎಂಬ ಕೃಷ್ಣನ ನಿರ್ಧಾರ ಎಂದೂ ಕೈಗೂಡುವುದೇ ಇಲ್ಲ.
ಮುಂದಾದದ್ದೇ ಬೇರೆ. ಕೊಳಲ ಹಿಡಿದ ಕೈ ಪಾಂಚಜನ್ಯವನ್ನು ಹಿಡಿಯಬೇಕಾಗುತ್ತದೆ. ದನಗಳ ಮೇಯಿಸುತ್ತಿದ್ದವನು ಸಾರಥಿಯಾಗುತ್ತಾನೆ. ತನ್ನವರ ಜೊತೆಗಿದ್ದವನು, ತನಗೇ ಸಂಬಂಧವೇ ಇಲ್ಲದ ಧರ್ಮರಕ್ಷಣೆಯೆಂಬ ಕಾರ್ಯವನ್ನು ಕೈಗೆತ್ತಿಕೊಂಡು, ಯುದ್ಧಭೂಮಿಯಲ್ಲಿ ತಂತ್ರಗಳ ಹೂಡುತ್ತ, ಶತ್ರುಗಳ ಕೊಲ್ಲುತ್ತಾ, ಕೊಳಲನ್ನೂ ತನ್ನವರ ಅಳಲನ್ನೂ ಮರೆತು, ರಾಜ್ಯಕ್ಕಾಗಿ ಹೊಡೆದಾಡುವ ಚಕ್ರವರ್ತಿಗಳ ನಡುವೆ ಸಿಲುಕಿಕೊಂಡು, ಕಳೆದುಹೋಗುತ್ತಾನೆ.
ಯಾವ ಕೃಷ್ಣ ನಮಗಿಷ್ಟ? ಅವನು ಗೋಕುಲದಲ್ಲೇ ಉಳಿದಿದ್ದರೆ ಏನಾಗುತ್ತಿತ್ತು? ಎಲ್ಲ ಹುಡುಗರ ಹಾಗೆ ಅನಾಮಧೇಯನಾಗಿ ಉಳಿದುಬಿಡುತ್ತಿದ್ದನಾ? ಮಧುರೆಗೆ ಹೋಗಿ ಗೆದ್ದು, ಎದ್ದು ನಿಂತದ್ದರಿಂದ ಅವನಿಗೆ ಏನಾಯಿತು? ಅವನ ಹಳ್ಳಿಗೇನಾಯಿತು? ಅವನ ರಾಧೆಗೇನಾಯಿತು? ಅವಿವೇಕದಿಂದ ಕಾದಾಟಕ್ಕೆ ನಿಂತ ದಾಯಾದಿಗಳ ನಡುವೆ ಅವನು ಅನಗತ್ಯವಾಗಿ ಸಿಕ್ಕಿಹಾಕಿಕೊಂಡನೇ?
******
ಪುತಿನ ಇಷ್ಟೆಲ್ಲ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಕೃಷ್ಣನ ಕುರಿತು ನಮಗಿರುವ ದರ್ಶನವೇ, ಕಲ್ಪನೆಯೇ ಬದಲಾಗುವಂತೆ ಮಾಡುತ್ತಾರೆ. ನಾವು ನೋಡಿದ ಕೃಷ್ಣ ಬಾಲ್ಯದಲ್ಲೇ ವೀರನೂ ಧೀರನೂ ಆಗಿದ್ದ. ಅವನು ಎಲ್ಲ ಭಾವುಕತೆಗಳನ್ನು ಮೀರಿದವನಾಗಿದ್ದ. ಅವತಾರವಾಗಿದ್ದ. ಅವನನ್ನು ಗೊಲ್ಲರ ಹುಡುಗ, ಕೊಳಲೂದುವ ಮುಗ್ಧ, ರಾಧೆಯ ಪ್ರೇಮಿ, ಮುಪ್ಪಿನ ಮಂದಿಯ ಗೆಳೆಯನನ್ನಾಗಿ ಮಾಡುವ ಮೂಲಕ ಅವನ ವ್ಯಕ್ತಿತ್ವಕ್ಕೆ ಮತ್ತೊಂದು ಆಯಾಮ ಕೊಟ್ಟದ್ದು ಪುತಿನ ನಾಟಕ.
ಅದು ಗ್ರಾಮೀಣ ಪ್ರದೇಶ ಮತ್ತು ನಗರದ ನಡುವೆ ಯಾವುದನ್ನು ಆರಿಸಿಕೊಳ್ಳಬೇಕು ಎಂಬ ಹೊಯ್ದಾಟವೂ ಹೌದು. ನಮ್ಮೊಳಗಿನ ತಳಮಳವೂ ಹೌದು. ಈ ಕಾಲದ ಈ ದೇಶದ ಕತೆಯೂ ಹೌದು.
ಕೊಳಲು ಕಳೆದುಹೋಗಿದೆ. ಪಾಂಚಜನ್ಯದ ಸದ್ದು ಯಾರನ್ನೂ ಬೆಚ್ಚಿಬೀಳಿಸುತ್ತಿಲ್ಲ. ರಾಧೆ ಕಣ್ಮರೆಯಾಗಿದ್ದಾಳೆ. ಮುಪ್ಪಿನ ಮಂದಿ ಮರೆಯಾಗಿದ್ದಾರೆ. ಬಲರಾಮನಿಗೆ ಭ್ರಮನಿರಸನವಾಗಿದೆ. ಮಧುರೆಗೆ ಕರೆದುತಂದ ಅಕ್ರೂರ, ಕ್ರೂರಿಯೆಂಬಂತೆ ಭಾಸವಾಗುತ್ತಿದ್ದಾನೆ.

‍ಲೇಖಕರು avadhi

July 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚೈತನ್ಯ ಮಜಲುಕೋಡಿ

    ತುಂಬ ಚೆನ್ನಾಗಿದೆ ಸಾರ್….. ನಾನು ಪ್ರತೀ ವಾರ ವಿ.ಕ ದಲ್ಲಿ ನಿಮ್ಮ ಲೇಖನಕ್ಕಾಗಿ ಹಂಬಲಿಸಿದ್ದೇನೆ. ಕೆಲವೊಂದನ್ನು ನಾನು ನೋಡಲಾಗಲಿಲ್ಲ. ನೀವು ಇಲ್ಲಿ ಅದನ್ನು ತೆರೆದಿಟ್ಟಿದೀರ ಅಂತ ಇವತ್ತೇ ಗೊತ್ತಾಗಿದ್ದು. ಆಕಸ್ಮಿಕವಾಗಿ ಏನೋ ನೋಡಲಿಕ್ಕೆ ಹೊರಟವನು ನಿಮ್ಮ ರೇಖೆಯನ್ನ ನೋಡಿದೆ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: