ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯ ಅನ್ನೋ ಧರ್ಮಕ್ಕೆ ಒಲಿದ ಕವಿ

ಮೂಡ್ನಾ ಕೂಡು ಚಿನ್ನಸ್ವಾಮಿ ಅವರ ಸಂಕಲನ ‘ಆ ಮಹಾ ಮುಗುಳು ನಗೆ ‘

ಈ ಕೃತಿಯ ಕುರಿತ ದೇವರಾಜ್ ಹುಣಸಿಕಟ್ಟಿ ಅವರ ಬರಹ ಇಲ್ಲಿದೆ.

-ದೇವರಾಜ್ ಹುಣಸಿಕಟ್ಟಿ

ಸತ್ಯ ಮತ್ತು ಸೌಂದರ್ಯವನ್ನು ನಿರಂತರ ಶೋಧಿಸುತ್ತ, ನಿರಂತರ ಹುಡುಕಾಡುತ್ತ ಹೊರಡುವ ದಾರಿ ಹೋಕನಿಗೆ ಒಲಿದಂತೆ ಇಲ್ಲಿಯ ಕವಿತೆಗಳಿವೆ. ಪ್ರಸಕ್ತ ಭಾರತಕ್ಕೆ ಕನ್ನಡಿ ಹಿಡಿಯುವ ಅವರ ಕವಿತೆಯ ಸಾಲುಗಳು…

” ಸತ್ಯವನ್ನು ಖಜಾನೆಯಲ್ಲಿ ಬಂಧಿಸಿ…
ಸುಳ್ಳಿನ ಬೀಗ ಜಡಿದಿದ್ದಾರೆ
ಕೀಲಿ ಕೈ ಕಳೆದು ಹೋಗಿದೆ
ಪೋಲಿಸ್ ಠಾಣೆಗಳಲ್ಲಿ, ನ್ಯಾಯ ಮಂದಿರಗಳಲ್ಲಿ
ಪಾರ್ಲಿಮೆಂಟಿನ ಅಂಗಳದಲ್ಲೆಲ್ಲೋ “

ಜಗತ್ತಿನ ಅನೇಕ ದರ್ದುಗಳಿಗೆ ಸ್ಪಂದಿಸಿರುವ ಕವಿ.ಬೀಡು ಬೀಸಾದ ಭಾಷೆಯ ಕಾರಣಕ್ಕೂ ಗಮನ ಸೆಳೆಯುವ ಕವಿತೆಗಳು ಇಲ್ಲಿವೆ.ಏನೋ ಘನವಾದದ್ದನ್ನು ಹೇಳ ಹೊರಟಿದ್ದೇನೆ ಅನ್ನುವ ಉಮೇದು ಇಲ್ಲದೇ ಜನರ ಬದುಕು ದುಸ್ತರ ಗೊಂಡ ಬಗ್ಗೆ ವಿಷಾದ ವ್ಯಕ್ತ ಪಡಿಸಿತ್ತ ಆಪ್ತವಾಗುವ ಕವಿತೆಗಳು ಕಾಣ ಸಿಗುತ್ತವೆ. ಉದಾಹರಣೆಗೆ…

“ಸಂಸಾರವಂತೂ ಸಾಗುತ್ತಿದೆ
ಕುಂಟತ್ತಾ, ತೆವಳುತ್ತಾ, ಮುಗ್ಗರಿಸುತ್ತಾ
ಸುಳ್ಳುಗಳ ಬಿತ್ತಿ, ಭ್ರಮೆಗಳ ಬೆಳೆ ತೆಗೆಯುತ್ತಾ…
ಗೋ ಮಾತೆಯನ್ನು ರಕ್ಷಿಸುತ್ತಾ, ಮನುಷ್ಯರನ್ನು ಕೊಲ್ಲುತ್ತಾ “

ದಲಿತ ಸಂವೇದನಯ ಕವಿ ಇಲ್ಲಿ ನಡೆಯುವ ಕ್ರೂರತೆ, ಶೋಷಣೆ, ಅತ್ಯಾಚಾರ ಕೇಂದ್ರೀತ ಕವಿತೆಗಳ ಬರೆದಿದ್ದಾರೆ, ಕವಿಯ ಮಾನವೀಯಸೆಲೆ ದೊಡ್ಡದು,ಅವು ನಮ್ಮನ್ನು ತಲ್ಲಣ ಗೊಳಿಸುತ್ತವೆ.ಉದಾಹರಣೆಗೆ…

“ಹತ್ರಾಸದ ಹೆಣ್ಣು ಮಗಳೆ
ಕಾಮುಕರ ಮುಷ್ಠಿಗೆ ಸಿಲುಕಿ
ನರಳಿದ ಗಿಳಿ ಮರಿಯೆ
ಅಸ್ಪ್ರಶ್ಯನ ಮಗಳು
ಭಾರತದ ಮಗಳಲ್ಲ
ಬೇಲಿಯ ಮೇಲೆ ಬೆಳೆದ
ಉಂಡು ಬಿಸಾಡುವ ಎಲೆ “

ಅತ್ಯಂತ ಸೂಕ್ಷ್ಮ ನೋಟದ ಕವಿ.. ತೀಕ್ಷಣ ವ್ಯಂಗ್ಯ,ಅಣುಕ ಅಷ್ಟೇ ಸರಳ ಭಾಷೆಯಲ್ಲಿ ಕವಿತೆಗಳ ಮೂಲಕ ಸಮಾಜದ ದ್ವಂದ್ವಗಳಿಗೆ ಕೈ ಗನ್ನಡಿ ಹಿಡಿದು ಒಳ ನೋಟ ದಾಟಿಸಿದ್ದಾರೆ. ಉದಾಹರಣೆಗೆ…

“ಅವರು ಭೂಮಿತೂಕದ ಗೆಯ್ಮೆ ಮಾಡಿ
ಬೆವರು ಬಸಿದು
ಬಾಯಾರಿದಾಗ ನೀರು ಸಿಗದ ಜನರಿರುವ ನಾಡೇ
‘ ವಸುದೈವ ಕುಟುಂಬಕಂ ‘

ಇಲ್ಲಿಯ ಅನೇಕ ಕವಿತೆಗಳು ಓದುಗನಿಗೆ ಪ್ರಶ್ನೆಗಳ ಎಸೆಯುತ್ತ, ಚಿಂತನೆಗೆ ಹಚ್ಚುತ್ತವೆ. ಅವರೇ ಹೇಳುವಂತೆ ಕಾವ್ಯದಿಂದ ಪರಸ್ಪರರಲ್ಲಿ ಸಹನೆ, ಪ್ರೀತಿ ರೂಢಿಗತ ಗೊಳಿಸುವ ಆಶಯ ಹೊಂದಿವೆ.ಆದ್ರೆ ಅಷ್ಟರ ಮಧ್ಯಯು ಶೋಷಿತರ ದನಿ ಢಾಳವಾಗಿ ಇವರ ಕವಿತೆಗಳು ಚರ್ಚಿಸುತ್ತವೆ..ಉದಾಹರಣೆ ಗೆ..

“ಪಾರಿವಾಳಗಳಿಗೆ ಕಾಳು ಹಾಕುತ್ತಾರೆ
ಗೋವಿಗೆ ಹಣ್ಣು ಹಂಪಲು ನೀಡುತ್ತಾರೆ
ವಿಷದ ಹಾವಿಗೂ ಹಾಲೆರೆಯುತ್ತಾರೆ…
ತಮ್ಮ ಹಿತ್ತಲಲ್ಲಿ ಸಂಡಾಸು
ತೊಳೆದು ದಣಿದವನಿಗೆ ನೀರು
ಕೊಡಲು ನಿರಾಕರಿಸುತ್ತಾರೆ “

ಇಷ್ಟಾಗಿಯೂ ಜನರ ವಿಚಾರ ಶಕ್ತಿಯ ಮಿತಿಯ ಬಗ್ಗೆ ಕವಿಗೆ ಒಂದು ಪ್ರಶ್ನೆ ಸದಾ ಕಾಡಿದೆ. ಅದನ್ನ ಕೂಡ ಆಕ್ರೋಶವಿಲ್ಲದ ಅವರು ತಣ್ಣನೆಯ ಶಬ್ದಗಳಲ್ಲಿ ತೆರೆದಿಡುತ್ತಾರೆ..ಹೀಗೆ

” ಜನ ಸಾಮಾನ್ಯರು
ಅಂದರೆ ಇವರೇನಾ?
ಕವಿಯನ್ನು ಯಂತ್ರವೆಂದು ತಿಳಿದವರು
ಮಠಾಧೀಶರನ್ನು ದೇವರೆಂದು ಗಣಿಸುವ ಹಾಗೆ “

ಇಲ್ಲಿ ವ್ಯಕ್ತಿ ಚಿತ್ರ ಕೊಡಬಲ್ಲ ಅನೇಕ ಕವಿತೆಗಳು ಕೂಡ ಗಮನ ಸೆಳೆಯುತ್ತವೆ.ಬಾ ಬಾ ಸಾಹೇಬ, ಸುಬ್ಬು ಹೋಲಿಯಾರ ಕುರಿತು ಬರೆದ ಬೆಂಕಿಯ ಕವಿ, ಗೌರಿ ಕುರಿತು ಬರೆದ ಬ್ರಾಹ್ಮಣ್ಯವೂ ಗೌರಿ ಹತ್ಯೆಯೂ,ಗಾಂಧಿ ಎಂಬುವನೊಬ್ಬ ಇರಲೇ ಇಲ್ಲ ಹೀಗೆ ಅನೇಕ ಕವಿತೆಗಳು ನಮ್ಮನ್ನ ಇನ್ನಷ್ಟು ಚಿಂತನೆಗೆ ಹಚ್ಚುತ್ತವೆ.

ಈ ಸಂಕಲನದ ಇನ್ನೊಂದು ಮಗ್ಗಲು ಅದು ಬೌದ್ಧ ತಾತ್ವಿಕ ಚಿಂತನೆ ಅವು ಕಲ್ಲಿನ ನ್ಯಾಯ, ಆ ಮಹಾ ಮುಗುಳು ನಗೆ ಇತ್ಯಾದಿ ಕವಿತೆಗಳಲ್ಲಿ ಕಾಣಸಿಗುತ್ತದೆ.

ಈ ಸಂಕಲವನ್ನು ಆಕೃತಿ ಪುಸ್ತಕ ಪ್ರಕಾಶನ ಪ್ರಕಟಿಸಿದೆ. ಈ ಸಂಕಲವನ್ನು ಮೂಡ್ನಾ ಕೂಡು ಚಿನ್ನಸ್ವಾಮಿ ಅವರು ದಲಿತ ಕವಿ ಸಿದ್ದಲಿಂಗಯ್ಯನವರಿಗೆ ಅರ್ಪಿಸಿದ್ದಾರೆ.

ಕಾವ್ಯ ಅನ್ನೋ ಕಡಲಲ್ಲಿ ದಕ್ಕುವ ಇಂತಹ ಸಂಕಲನಗಳು ಖಂಡಿತ ಮನುಷ್ಯನಲ್ಲಿಯ ಮನುಷ್ಯತ್ವವನ್ನು ಜಾಗೃತ ಗೊಳಿಸಲು ಸಹಕಾರಿಯಾಗುತ್ತವೆ ಅನ್ನಿಸುತ್ತೆ.

-ಶುಭಾಶಯಗಳೊಂದಿಗೆ..

‍ಲೇಖಕರು Admin

2 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading