ಪಾಲಹಳ್ಳಿ ವಿಶ್ವನಾಥ್
(ಡೆನ್ಮಾರ್ಕ್‌ನ ರಾಜಧಾನಿ ಎಲ್ಸಿನೋರ್‌ನಲ್ಲಿ ದುರಂತವೊಂದು ಸಂಭವಿಸಿತ್ತು. ದೊಡ್ಡ ರಾಜ ಹ್ಯಾಮ್ಲೆಟ್ ಹಠಾತ್ತಾಗಿ ಮರಣಹೊಂದಿದ್ದ. ಅವನ ಸಾವಿನ ದುಃಖ ಆರುವ ಮುನ್ನವೇ, ಅವನ ತಮ್ಮ ಕ್ಲಾಡಿಯಸ್ ಸಿಂಹಾಸನವನ್ನೇರಿ ಅತ್ತಿಗೆ ಗರ್ಟ್ರೂಡ್‌ಳನ್ನೇ ಮದುವೆಯಾಗಿದ್ದ. ಹೊರ ಊರಿನಲ್ಲಿ ಓದುತ್ತಿದ್ದ ರಾಜಕುಮಾರ ಹ್ಯಾಮ್ಲೆಟ್ ರಾಜಧಾನಿ ಎಲ್ಸಿನೋರ್‌ಗೆ ವಾಪಸ್ ಬಂದು ಚಿಂತಾಕ್ರಾಂತನಾಗಿ ಸಮಯ ಕಳೆಯುತ್ತಿದ್ದಾನೆ!)
ಎಲ್ಸಿನೋರ್ ಕೋಟೆಯ ಮೇಲೆ ಕೊರೆವ ಚಳಿ. ಮಧ್ಯರಾತ್ರಿಯ ಕತ್ತಲಲ್ಲಿ ಕಾವಲುಗಾರರಾದ ಬರ್ನಾರ್ಡೊ ಮತ್ತು ಮಾರ್ಸೆಲಸ್ ಜೊತೆ ಹ್ಯಾಮ್ಲೆಟ್‌ನ ಸ್ನೇಹಿತ ಹೊರೇಶಿಯೋ ನಿಂತಿದ್ದ. ಹಿಂದಿನ ಎರಡು ರಾತ್ರಿಗಳಿಂದ ಕೋಟೆಯ ಮೇಲೆ ದೊಡ್ಡ ರಾಜ ಹ್ಯಾಮ್ಲೆಟ್‌ನ ದೆವ್ವ ಕಾಣಿಸಿಕೊಳ್ಳುತ್ತಿದೆ ಎಂದು ಕಾವಲುಗಾರರು ಹೇಳಿದ್ದನ್ನು ಹೊರೇಶಿಯೋ ನಂಬಿರಲಿಲ್ಲ. ಆದರೆ, ಹಠಾತ್ತಾಗಿ ಯುದ್ಧದ ಕವಚ ಧರಿಸಿದ ಹಳೆಯ ರಾಜನ ಆತ್ಮ ಕಣ್ಣಮುಂದೆ ಬಂದಾಗ ಹೊರೇಶಿಯೋ ಆಶ್ಚರ್ಯಚಕಿತನಾದ. ದೆವ್ವದ ಜೊತೆ ಮಾತನಾಡಲು ಹೊರೇಶಿಯೋ ಪ್ರಯತ್ನಿಸಿದರೂ, ಅದು ಏನನ್ನೂ ಹೇಳದೆ ಮಾಯವಾಯಿತು. ಹೊರೇಶಿಯೋ ಈ ವಿಚಾರವನ್ನು ಯುವರಾಜ ಹ್ಯಾಮ್ಲೆಟ್‌ಗೆ ತಿಳಿಸಿ ಮುಂದಿನ ರಾತ್ರಿ ಕೋಟೆಯ ತುದಿಗೆ ಕರೆದುಕೊಂಡು ಬಂದ.
ಅಲ್ಲಿ ಬಂದ ದೆವ್ವವು ಹ್ಯಾಮ್ಲೆಟ್‌ನನ್ನು ಪ್ರತ್ಯೇಕವಾಗಿ ಕರೆದೊಯ್ದು, ತನ್ನ ಕೊಲೆಯ ಭೀಕರ ರಹಸ್ಯವನ್ನು ಬಿಚ್ಚಿಟ್ಟಿತು: “ನಾನು ಉದ್ಯಾನವನದಲ್ಲಿ ಮಲಗಿದ್ದಾಗ ನನ್ನ ಸ್ವಂತ ತಮ್ಮ ಕ್ಲಾಡಿಯಸ್ ಕಿವಿಗೆ ವಿಷ ಸುರಿದು ಕೊಂದಿದ್ದಾನೆ!!” ಎಂದು ಗುಡುಗಿತು. ಹ್ಯಾಮ್ಲೆಟ್ ಆತಂಕದಿಂದ, “ಅಪ್ಪಾ, ನಿಮ್ಮ ಕಥೆ ಕೇಳಿ ನನ್ನ ರಕ್ತ ಕುದಿಯುತ್ತಿದೆ” ಎಂದು ಹೇಳಿದನು. ದೆವ್ವ ಮತ್ತೆ, “ನನ್ನ ಕೊಲೆಯ ಸೇಡನ್ನು ತೀರಿಸಿಕೊ ಮಗನೇ” ಎಂದಿತು. ಈ ಮಾತು ಮುಗಿಯುತ್ತಿದ್ದಂತೆ ಸೂರ್ಯೋದಯವಾಗತೊಡಗಿತು. ಸಾಂಪ್ರದಾಯಿಕವಾಗಿ ದೆವ್ವ ಮಾಯವಾಗಬೇಕಿತ್ತು. ಆದರೆ ಬೆಳಗಾಗುತ್ತಿದ್ದರೂ ದೆವ್ವ ಅಲ್ಲಿಯೇ ಇದ್ದಿತು. ಅದರ ಬಗ್ಗೆ ಹ್ಯಾಮ್ಲೆಟ್ ಕೇಳಿದಾಗ ದೆವ್ವ, “ಹೌದು, ಬೆಳಗಾಗುತ್ತಿದೆ. ಆದರೆ ಕೋಳಿಯ ಸದ್ದೇ ಇಲ್ಲವಲ್ಲ” ಎಂದಿತು. ದೆವ್ವ ಗಂಭೀರ ಮುಖಭಾವವನ್ನು ಬದಲಿಸಿ, ನಿಟ್ಟುಸಿರು ಬಿಡುತ್ತಾ ಮುಂದುವರಿಸಿತು: “ಎಲ್ಲಿಗೆ ಹೋಗುವುದು ಮಗನೇ? ನರಕದ ನಿಯಮದ ಪ್ರಕಾರ ನಮಗೆ ಸೂರ್ಯೋದಯ ಮುಖ್ಯವಲ್ಲ, ಕೋಳಿ ಕೂಗುವುದು ಮುಖ್ಯ! ಕೋಳಿ ಕೂಗಿದರೆ ಮಾತ್ರ ನರಕದ ಬಾಗಿಲುಗಳು ತೆರೆಯುತ್ತವೆ. ಆದರೆ ಇಂದು ಕೋಳಿ ಕೂಗುತ್ತಿಲ್ಲವಲ್ಲ!” “ಹಾಗೆ ಏಕೆ ತಂದೆಯೇ? ಕೋಳಿ ಏಕೆ ಕೂಗಬೇಕು?” ಎಂದು ಕೇಳಿದ ಮಗನಿಗೆ ದೆವ್ವ ಹೇಳಿತು, “ಮಗು, ನಮ್ಮ ನರಕಾಧಿಪತಿಗಳಿಗೆ ಕಣ್ಣು ಕಾಣಿಸುವುದಿಲ್ಲ, ಹಿಂದಿನಿಂದಲೂ ಹಾಗೇ ಅಂತೆ. ಆದರೆ ಕಿವಿ ಚುರುಕಾಗಿದೆಯಂತೆ. ಆದ್ದರಿಂದ ಕೋಳಿ ಕೂಗದಿದ್ದರೆ ಅವರಿಗೆ ಅದು ಕತ್ತಲೆ! ಅವರು ನರಕದ ಬಾಗಿಲು ತೆಗೆಯುವುದಿಲ್ಲ!”
ಪಕ್ಕದಲ್ಲೇ ನಿಂತಿದ್ದ ಹೊರೇಶಿಯೋ ಆಶ್ಚರ್ಯದಿಂದ, “ಕೋಳಿ ಯಾಕೆ ಕೂಗುತ್ತಿಲ್ಲ? ಆ ಮುದುಕಿ ಎಲ್ಲಿ ಹೋದಳು?” ಎಂದು ಕೇಳಿದ. ದೆವ್ವ, “ಈಗ ನನಗೆ ತಿಳಿಯುತ್ತಿದೆ. ಅರಮನೆಯ ಹಿತ್ತಲಲ್ಲಿ ಆ ಮುದುಕಿ ಇದ್ದಳಲ್ಲ, ಆಕೆಯ ಕೊಟ್ಟಿಗೆಯಲ್ಲಿದ್ದ ಕೋಳಿ ಅದು! ಆ ಮುದುಕಿಗೆ ಒಂದು ನಂಬಿಕೆ ಇತ್ತು—’ತನ್ನ ಕೋಳಿ ಕೂಗಿದರೆ ಮಾತ್ರ ಜಗತ್ತಿಗೆ ಬೆಳಕಾಗುತ್ತದೆ, ಸೂರ್ಯ ಹುಟ್ಟುತ್ತಾನೆ’ ಎಂದು!” ಎಂದಿತು.
“ನಂಬಿಕೆಯೋ? ಭ್ರಮೆಯೋ?”
“ಬಿಡು, ಹೊರೇಶಿಯೋ! ಎಲ್ಲರಿಗೂ ಒಂದಲ್ಲ ಒಂದು ಭ್ರಮೆ ಬೇಕಾಗುತ್ತದೆ. ನಾನಿದ್ದಾಗ ಅವಳ ಹೆಮ್ಮೆಯನ್ನು ನೋಡಿಕೊಂಡು ಸುಮ್ಮನಿದ್ದೆ. ಈಗ ಯಾರೋ ರೇಗಿಸಿರಬೇಕು, ಅದರಿಂದ ಕೋಪಗೊಂಡ ಮುದುಕಿ, ಇಡೀ ಊರಿಗೆ ಸೂರ್ಯನೇ ಹುಟ್ಟಬಾರದು ಎಂದು ತನ್ನ ಕೋಳಿಯನ್ನು ಬುಟ್ಟಿಯಲ್ಲಿ ಮುಚ್ಚಿಟ್ಟುಕೊಂಡು ಅವಳ ಹಳ್ಳಿಗೆ ಹೊರಟುಹೋಗಿದ್ದಾಳಂತೆ. ಇಲ್ಲಿ ಕಾವಲುಗಾರರು ಮಾತನಾಡಿಕೊಳ್ಳುತ್ತಿದ್ದರು.”
ಹೊರೇಶಿಯೋ ಆಶ್ಚರ್ಯದಿಂದ, “ಅಂದರೆ ಪ್ರಭುಗಳೇ, ಕೋಳಿ ಕೂಗುವವರೆಗೆ ನರಕದ ಬಾಗಿಲು ತೆರೆಯುವುದಿಲ್ಲವೇ?” ಎಂದು ಕೇಳಿದ. “ಖಂಡಿತ ಇಲ್ಲ! ಹಾಗಾಗಿ ಸೋಮವಾರ ಬೆಳಿಗ್ಗೆ ನಿಜವಾದ ಕೋಳಿ ಕೂಗುವವರೆಗೂ ನನಗೆ ಈ ಭೂಮಿಯ ಮೇಲೆಯೇ ‘ಲಾಕ್‌ಡೌನ್’!” ಎಂದಿತು ದೆವ್ವ. ಹೊರೇಶಿಯೋ ಗಲಿಬಿಲಿಯಾಗಿ, ತನ್ನ ಎರಡೂ ಕೈಗಳನ್ನು ಬಾಯಿಗೆ ಅಡ್ಡವಾಗಿಟ್ಟುಕೊಂಡು, “ಕೊಕ್ಕೊರೊಕೋ…!” ಎಂದು ನಕಲಿ ಕೂಗು ಕೂಗಿದ. ದೆವ್ವ ಕಿವಿ ಮುಚ್ಚಿಕೊಳ್ಳುತ್ತಾ, “ಹೊರೇಶಿಯೋ, ನಿನ್ನ ನಕಲಿ ‘ಕೊಕ್ಕೊರೊಕೋ’ ಹಾಸ್ಯಾಸ್ಪದವಾಗಿದೆ. ಇಂತಹ ಕೂಗುಗಳಿಗೆಲ್ಲ ನರಕದ ಬಾಗಿಲು ತೆರೆಯುವುದಿಲ್ಲ. ಇರಲಿ, ಹಗಲುಪೂರ್ತಿ ನಾನು ಅಲ್ಲಿ ಇಲ್ಲಿ ಅವಿತುಕೊಳ್ಳುವ ಬದಲು ಅರಮನೆಯ ಒಳಗೆ ಹೋಗಿ ಕ್ಲಾಡಿಯಸ್ ಮತ್ತು ಗರ್ಟ್ರೂಡ್‌ಗೆ ಕಾಟ ಕೊಟ್ಟು ಬರುತ್ತೇನೆ!” ಎಂದು ಅರಮನೆಯ ಒಳಗೆ ಹೋಯಿತು.
ಮಧ್ಯಾಹ್ನ ಒಂದೂವರೆಯ ಸಮಯ. ಅರಮನೆಯ ಒಳಗೆ ದೆವ್ವವು ವಿಚಿತ್ರವಾದ ಕಣ್ಣಮುಚ್ಚಾಲೆ ಆಟ ಪ್ರಾರಂಭಿಸಿತು! ಮೊದಲು ಗರ್ಟ್ರೂಡ್ ಭೋಜನ ಶಾಲೆಯಲ್ಲಿ ಒಬ್ಬಳೇ ಕುಳಿತು ಬಿಸಿ ಸೂಪ್ ಕುಡಿಯಲು ಹೋದಾಗ, ದೆವ್ವವು ಆಕೆಯ ಕಣ್ಣಮುಂದೆ ಪ್ರತ್ಯಕ್ಷವಾಗಿ ನಿಂತಿತು. ಗರ್ಟ್ರೂಡ್ ಭಯದಿಂದ, “ಅಯ್ಯೋ! ದೆವ್ವ! ರಾಜಾ ಕ್ಲಾಡಿಯಸ್, ಬೇಗ ಬನ್ನಿ!” ಎಂದು ಗಂಟಲು ಹರಿದುಕೊಳ್ಳುವಂತೆ ಚೀರಿದಳು. ಕ್ಲಾಡಿಯಸ್ ಓಡೋಡಿ ಬರುವಷ್ಟರಲ್ಲಿ ದೆವ್ವವು ಕ್ಲಾಡಿಯಸ್‌ನ ಹಿಂಭಾಗದಲ್ಲಿ ನಿಂತುಕೊಂಡಿತು! ಗರ್ಟ್ರೂಡ್ ತಡವರಿಸುತ್ತಾ, “ಅಲ್ಲಿ… ನಿಮ್ಮ ಹಿಂದೆ ರಾಜನ ದೆವ್ವ ನಿಂತಿದೆ!” ಎಂದಳು. ಕ್ಲಾಡಿಯಸ್ ಹಿಂತಿರುಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲ. ಕ್ಲಾಡಿಯಸ್ ನಗುತ್ತಾ, “ಅಯ್ಯೋ ಗರ್ಟ್ರೂಡ್, ನಿನಗೆ ಸುಮ್ಮನೆ ಭ್ರಮೆಯಾಗಿದೆ! ಇಲ್ಲಿ ಯಾವ ದೆವ್ವವೂ ಇಲ್ಲ” ಎಂದ.
ಮರುಕ್ಷಣವೇ ದೆವ್ವವು ಕ್ಲಾಡಿಯಸ್‌ಗೆ ಮಾತ್ರ ಕಾಣಿಸಿಕೊಳ್ಳಲು ಶುರುಮಾಡಿತು! ದೆವ್ವವು ಗಂಭೀರವಾಗಿ, “ಇನ್ನೊಬ್ಬರ ಕಿರೀಟ ಮತ್ತು ಪತ್ನಿಯನ್ನು ಕದಿಯುವುದು ತಪ್ಪಲ್ವೇ ತಮ್ಮ?” ಎಂದು ಅವನ ಕಿವಿಯಲ್ಲೇ ಗುಡುಗಿತು. ಕ್ಲಾಡಿಯಸ್ ಗಾಬರಿಯಾಗಿ, “ಅಯ್ಯೋ! ಗರ್ಟ್ರೂಡ್, ಬೇಗ ಬಾ! ಇಲ್ಲಿ ನಿಜವಾಗಿಯೂ ದೆವ್ವ ಇದೆ!” ಎಂದು ಚೀರಿದ. ಗರ್ಟ್ರೂಡ್ ಓಡಿಬಂದು ನೋಡಿದಾಗ ದೆವ್ವ ಮಾಯವಾಗಿತ್ತು! ಕೊನೆಗೆ ದೆವ್ವವು ಇಬ್ಬರಿಗೂ ಒಟ್ಟಿಗೆ ಪ್ರತ್ಯಕ್ಷವಾಗಿ ನಿಂತು ವಿಕಟವಾಗಿ ನಕ್ಕಾಗ, ಇಬ್ಬರೂ ಹೆದರಿ ಒಬ್ಬರನ್ನೊಬ್ಬರು ತಬ್ಬಿಕೊಂಡು, ಟೇಬಲ್ ಕೆಳಗೆ ನುಗ್ಗಿ ಬೆಡ್‌ಶೀಟ್ ಹೊದ್ದು ಕುಳಿತರು!
ಸಂಜೆ ಐದು ಗಂಟೆಗೆ, ಅರಮನೆಯ ಹಿತ್ತಲಿನ ತೋಟದಲ್ಲಿ ರಾಜನ ದೆವ್ವವು ಇನ್ನೆರಡು ದೆವ್ವಗಳ ಜೊತೆ ಚಹಾ ಕೂಟ ನಡೆಸುತ್ತಿತ್ತು. “ಅಂತೂ ನೀವುಗಳೂ ಬಂದಿರುವುದು ಬಹಳ ಸಂತೋಷ! ನಮ್ಮ ಓದುಗರಿಗೆ ನಿಮ್ಮ ಪರಿಚಯ ಮಾಡಿಕೊಳ್ಳಿ” ಎಂದು ಹ್ಯಾಮ್ಲೆಟ್ ದೆವ್ವ ಹೇಳಿತು. ಮೊದಲನೆಯ ದೆವ್ವ, “ಸರಿ, ನಾನು ಜೂಲಿಯಸ್ ಸೀಸರಿನ ದೆವ್ವ. ನಾನು ರೋಮಿನ ನಾಯಕನಾಗಿದ್ದೆ…” ಹ್ಯಾಮ್ಲೆಟ್ ದೆವ್ವ, “ಬಹಳ ವಿವರಣೆ ಬೇಡ ಸೀಸರ್ ಪ್ರಭುಗಳೇ! ನಾನೇ ಹೇಳಿಬಿಡುತ್ತೇನೆ – ಇವರು ರೋಮನ್ ಮಹಾನಾಯಕ ಸೀಸರ್. ಇವರ ಸಂಸದರೇ ಇವರನ್ನು ಚೂರಿಹಾಕಿ ಕೊಂದರು. ಹತ್ತಿರದ ಗೆಳೆಯರೂ ಕೂಡ! …ಗೊತ್ತು, ಆಗ ‘ಬ್ರೂಟಸ್ ನೀನೂ ಕೂಡಾ?’ ಎಂದು ಹೇಳಿದಿರಿ. ಇವರು ಸ್ಕಾಟ್‌ಲ್ಯಾಂಡಿನವರು, ರಾಜ ಬ್ಯಾಂಕೊ! ಅವರ ಗೆಳೆಯ ಮ್ಯಾಕ್‌ಬೆತ್‌ನ ಆಕಾಂಕ್ಷೆಗೆ ಬಲಿಯಾದವರು! ರೋಮ್‌ನ ಜೂಲಿಯಸ್ ಸೀಸರ್ ಮತ್ತು ಸ್ಕಾಟ್‌ಲ್ಯಾಂಡ್‌ನ ಬ್ಯಾಂಕೊ’! ಸುಸ್ವಾಗತ, ಅಂತೂ ನೀವುಗಳು ಕೂಡ ನಿಮ್ಮ ನಿಮ್ಮ ಊರಿನ ಮುದುಕಿಯರಿಗೆ ಪುಸಲಾಯಿಸಿ ಅವರನ್ನು ಅವರವರ ಹಳ್ಳಿಗೆ ಕಳಿಸಿಬಿಟ್ಟಿರಿ. ಅಂತೂ ನಾವೆಲ್ಲರೂ ನರಕವಾಸದಿಂದ ಒಂದು ದಿನ ತಪ್ಪಿಸಿಕೊಂಡೆವು. ಈಗ ಚಹಾ ಕುಡಿಯೋಣ”.
ಈ ಮೂವರೂ ಸೇರಿ ಹರಟೆ ಹೊಡೆಯಲು ಪ್ರಾರಂಭಿಸಿದವು. ಕೊಲೆಯಾದವರ ದೆವ್ವಗಳ ಹೊಸ ಸಂಘವೊಂದನ್ನು ರೂಪಿಸುವ ಬಗ್ಗೆ ಸುದೀರ್ಘ ಚರ್ಚೆಗೆ ಇಳಿದರು. ಸೀಸರ್ ಉತ್ತೇಜಿತನಾಗಿ, “ಅತ್ಯುತ್ತಮ ಆಲೋಚನೆ! ನಮ್ಮ ಬೇಡಿಕೆಗಳು ಸ್ಪಷ್ಟವಾಗಿರಬೇಕು. ಮೊದಲನೆಯದಾಗಿ, ಮಧ್ಯರಾತ್ರಿ ೧೨ರಿಂದ ಮುಂಜಾನೆಯವರೆಗೆ ಮಾತ್ರ ದೆವ್ವಗಳು ಕೆಲಸ ಮಾಡಬೇಕು” ಎಂದರು. ಬ್ಯಾಂಕೊ, “ಲೇಖಕರು ನಮ್ಮನ್ನು ಚಿಲ್ಲರೆ ಪಾತ್ರಧಾರಿಗಳನ್ನಾಗಿ ಮಾಡಬಾರದು” ಎಂದರು. ಹಾಗೇ ಮಾತನಾಡುತ್ತ ಕಡೆಯಲ್ಲಿ ವಿದಾಯ ಹೇಳಿ ಸೀಸರ್ ಮತ್ತು ಬ್ಯಾಂಕೊ ಅವರವರ ಊರಿಗೆ ಹೋದರು.
ರಾತ್ರಿ ಕಳೆದು ಮರುದಿನ ಮುಂಜಾನೆ ೫:೪೫ರ ಸಮಯ. ಸೂರ್ಯೋದಯದ ಕೆಂಪು ಬಣ್ಣ ಮೂಡುವ ಮುನ್ನ, ದೊಡ್ಡ ರಾಜರ ದೆವ್ವವು ಮತ್ತೆ ಕೋಟೆಯ ತುದಿಗೆ ಹಿಂತಿರುಗಿತು. ಅಲ್ಲಿ ಹ್ಯಾಮ್ಲೆಟ್ ಮತ್ತು ಹೊರೇಶಿಯೋ ನಿಂತು ಉತ್ತರ-ಪಶ್ಚಿಮದ ಆಕಾಶದಲ್ಲಿ ಪ್ರಕಾಶಮಾನವಾಗಿ ಮಿನುಗುತ್ತಿದ್ದ ಅಪರೂಪದ ನಕ್ಷತ್ರವನ್ನು ದಿಟ್ಟಿಸುತ್ತಿದ್ದರು. ಹ್ಯಾಮ್ಲೆಟ್ ಆಕಾಶದತ್ತ ಬೆಟ್ಟು ಮಾಡಿ, “ಅಪ್ಪಾ, ಈ ಹಿಂದಿನ ರಾತ್ರಿಗಳಿಂದಲೂ ಆಕಾಶದಲ್ಲಿ ಮಿನುಗುತ್ತಿರುವ ಈ ಅದ್ಭುತ ನಕ್ಷತ್ರ ಯಾವುದು? ಜನ ಇದನ್ನು ರಾಜ್ಯಕ್ಕೆ ಬರಲಿರುವ ಕೇಡನ್ನು ಸೂಚಿಸುತ್ತದೆ ಎನ್ನುತ್ತಿದ್ದಾರಲ್ಲ?” ಎಂದು ಕೇಳಿದ. ರಾಜನ ದೆವ್ವ ಗಂಭೀರವಾಗಿ ಮಂದಹಾಸ ಬೀರುತ್ತಾ, “ಮಗನೇ ಹ್ಯಾಮ್ಲೆಟ್, ಯಾವ ನಕ್ಷತ್ರವೂ ಯಾರಿಗೂ ಕೇಡು ಬಯಸುವುದಿಲ್ಲ. ಇಂದಲ್ಲ ನಾಳೆ ಇದರ ರಹಸ್ಯ ಮನುಷ್ಯನಿಗೆ ತಿಳಿಯುತ್ತದೆ. ನಮ್ಮ ಡೆನ್ಮಾರ್ಕ್‌ನ ಶ್ರೇಷ್ಠ ಖಗೋಳವಿಜ್ಞಾನಿ ಹಾಗೂ ದೂರದ ಸಂಬಂಧಿ ಟೈಕೋ ಬ್ರಾಹೆ ಈ ನಕ್ಷತ್ರವನ್ನು ಪ್ರತಿ ರಾತ್ರಿಯೂ ವೀಕ್ಷಿಸಿ ಅಧ್ಯಯನ ಮಾಡುತ್ತಿದ್ದಾನೆ. ಇದು ಮುಂದೆ ‘ಟೈಕೋ ಸೂಪರ್‌ನೋವಾ’ ಎಂದು ಖ್ಯಾತಿಗಳಿಸುತ್ತದೆ” ಎಂದು ದೆವ್ವ ವಿವರಿಸಿತು.
ಅಷ್ಟರಲ್ಲಿ ದೂರದ ರಸ್ತೆಯಲ್ಲಿ ಆ ಮುದುಕಿ ತನ್ನ ಕೋಳಿಯ ಜೊತೆ ಊರಿಗೆ ಹಿಂತಿರುಗುತ್ತಿದ್ದಳು. ಆಕೆಯ ಬುಟ್ಟಿಯೊಳಗಿದ್ದ ಕೋಳಿ ಒಮ್ಮೆಲೇ ಗಂಭೀರವಾಗಿ ಕೂಗಿತು: “ಕೊಕ್ಕೊರೊಕೋ…! ಕೊಕ್ಕೊರೊಕೋ…!” ರಾಜನ ದೆವ್ವ ನಿಟ್ಟುಸಿರು ಬಿಡುತ್ತಾ, “ಆಹಾ! ಕೊನೆಗೂ ಆ ಮುದುಕಿ ಕೋಳಿ ಸಮೇತ ಹಿಂತಿರುಗಿದಳು. ನರಕದ ಬಾಗಿಲುಗಳು ತೆರೆಯುತ್ತಿವೆ,” ಎಂದಿತು. ನಂತರ ಹ್ಯಾಮ್ಲೆಟ್‌ನ ಕಡೆಗೆ ತಿರುಗಿ, “ನೋಡು ಹ್ಯಾಮ್ಲೆಟ್, ನನಗೆ ನಿನ್ನ ಸ್ವಭಾವ ಗೊತ್ತು! ನೀನು ಪ್ರತಿಯೊಂದಕ್ಕೂ ಯೋಚನೆ ಮಾಡುತ್ತಾ, ದಿನ ಮುಂದೂಡುವ ಸ್ವಭಾವದವನು. ‘ಮಾಡಬೇಕೋ, ಬೇಡವೋ’ ಎಂದು ತತ್ವಶಾಸ್ತ್ರ ಮಾತನಾಡುತ್ತಾ ಕಾಲ ವ್ಯರ್ಥ ಮಾಡುವವನು! ಈ ಕೆಲಸವನ್ನು ತಕ್ಷಣವೇ ಮುಗಿಸು! ಈ ನಾಟಕಕಾರರ ಮೆದುಳಿನಿಂದ ಹೊರಗೆ ಬಂದು ನಾವು ನಮ್ಮ ಜೀವನ ನಡೆಸಬೇಕು. ಅವನು ಬರೆದ ಹಾಗೆ ನಾವು ಅದರ ತರಹವೇ ನಡೆಯಬೇಕಿಲ್ಲ. ನಾಳೆ, ನಾಳೆ ಎಂದು ಸಮಯ ಹಾಳುಮಾಡಬೇಡ” ಎಂದಿತು.
ಕೋಳಿ ಮತ್ತೆ ಗಟ್ಟಿಯಾಗಿ ಕೂಗಿದ ತಕ್ಷಣ, ದೆವ್ವವು ಹೊಗೆಯೊಂದಿಗೆ ಆಕಾಶದ ನಕ್ಷತ್ರಮಂಡಲದತ್ತ ಮಾಯವಾಯಿತು. ಹೊರೇಶಿಯೋ ನಿಟ್ಟುಸಿರು ಬಿಡುತ್ತಾ, “ಅಬ್ಬಾ! ಕೊನೆಗೂ ಕೋಳಿ ಕೂಗಿತು, ದೊಡ್ಡ ರಾಜರು ವಾಪಸ್ ನರಕಕ್ಕೆ ಹೊರಟರು. ಬನ್ನಿ ರಾಜಕುಮಾರ ಹ್ಯಾಮ್ಲೆಟ್, ಸ್ವಲ್ಪ ವಿಶ್ರಾಂತಿ ಪಡೆಯೋಣ!” ಎಂದನು.






0 Comments