-ಡಾ. ಎನ್.ವಿ. ವಾಸುದೇವಶರ್ಮಾ
ಗೋಡೆಗಳ ಕಿವಿ ಕತ್ತರಿಸೆಸೆಯಲು ಬಂತು ರಾಜಾಜ್ಞೆ.
ಅರಮನೆಯ ಗೋಡೆಗಳಿಗೆ ತಜ್ಞರ ಶಸ್ತ್ರಕ್ರಿಯೆ.
ಹಾದಿಬೀದಿಯ ಗೋಡೆಗಳ ಮೇಲೆ ಸಾಮೂಹಿಕ ಕೊಡಲಿ ಏಟು.
ರಕ್ತದ ಕೋಡಿ ಹರಿದದ್ದು ಎಲ್ಲಿಯೂ ಸುದ್ದಿಯಾಗಲಿಲ್ಲ.
ಈಗ ಅರಮನೆಯಲ್ಲಿ ಪಿಸುಮಾತಿಲ್ಲ.
ಗುರುಮನೆಯಲ್ಲಿ ಗುಸುಗುಸುವಿಲ್ಲ.
ನೆರೆಮನೆಗಳಲ್ಲಿ ಅಂತೆಕಂತೆಯಿಲ್ಲ.
ಒಟ್ಟು ನಿಶ್ಶಬ್ದ.
ರಾಜನಿಗೆ ನೆಮ್ಮದಿ. ಮಂತ್ರಿಗೆ ರಜೆ.
ಯಾವ ಗುಟ್ಟೂ ಸ್ಫೋಟವಾಗುವುದಿಲ್ಲ. ಯಾವ ಅವಿಚಾರವೂ ಹರಡುವುದಿಲ್ಲ.
ರಾಜ್ಯವೆಲ್ಲ ಮೌನದ ಕಂಬಳಿ ಹೊದ್ದಂತೆ.
ಆದರೆ ಇಂದು ರಾಜ ತುರ್ತು ಸಭೆ ಕರೆದ.
“ಒಂದು ಅನುಮಾನ” ಅವನ ನುಡಿ ನಡುಗಿತು.
“ಕನ್ನಡಿಗಳಿಗೆ ಕಣ್ಣು ಬಂದಿದೆಯಂತೆ. ಕಂಡದ್ದೆಲ್ಲ ತುಂಬಿಕೊಂಡು
ನೆನ್ನೆ, ಇಂದು, ನಾಳೆಯನ್ನು ಒಂದಕ್ಕೊಂದು ಗುಣಿಸುತ್ತವಂತೆ.
ಕನ್ನಡಿ ಕನ್ನಡಿಗೆ ಸುದ್ದಿ ಕಳಿಸುತ್ತಿವೆಯಂತೆ”.
ಮಂತ್ರಿ ಮೌನ. ಗೂಢಚಾರರ ನಾಯಕನಿಗೆ ಬೆವರು.
ರಾಜ ಸಲಹೆಗಾರ ಸ್ವಗತಿಸಿದ: “ಸತ್ಯಕ್ಕೆ ಕಿವಿ ಕಣ್ಣು ಬೇಕೆ?
ಅದು ಗಾಳಿಯಲ್ಲಿ ತೇಲಿ ಬೆಳಕಿನಲ್ಲಿ ಮಿನುಗುತ್ತದೆ.”
ರಾಜನ ಪ್ರಶ್ನೆ ಇನ್ನಷ್ಟು ಹರಿತವಾಯಿತು:
“ಕನ್ನಡಿ ಕಂಡ ಬೆಳಕಿನ ಕಿರಣಗಳು
ತಿರುಗಿ ಮುರುಗಿ ಸಾವಿರ ಮನೆಗಳಿಗೆ ಹಾರುವುದೇನು?
ಹಾಯುವುದೇನು?
ನನ್ನ ನಡೆ, ನಿನ್ನ ನಗು, ಅವನ ಕಣ್ಣೀರು, ನನ್ನ ತೀರ್ಮಾನ…
ಎಲ್ಲವನ್ನೂ ಕನ್ನಡಿ ನೋಡಿ ತಾಳೆ ಹಾಕುತ್ತದೆಯೇನು?”
ಗೋಡೆಗಳ ಕಿವಿ ಕತ್ತರಿಸಿಯಾಯ್ತು.
ಆದರೆ ಈಗ ಪ್ರತಿ ಕೈಯಲ್ಲಿ, ಪ್ರತಿ ಕಿಸೆಯಲ್ಲಿ
ಕಣ್ಣು-ಮಿದುಳಿರುವ ಕನ್ನಡಿಗಳು.
ನಾವೇ ನಮ್ಮ ಮೇಲೆ ಗೂಢಚಾರರನ್ನು ಹೊತ್ತುಕೊಂಡಂತೆ…
ಎಲ್ಲವನ್ನೂ ತೆರೆದಿಟ್ಟಂತೆ!
ಕಿವಿ ಕತ್ತರಿಸಿ ಶಬ್ದ ಕೊಂದಂತೆ,
ಈಗ ಕಣ್ಣು ಕತ್ತರಿಸಿ ಬೆಳಕನ್ನು ನಿಲ್ಲಿಸುವುದೇ?
ರಾಜ ಸಲಹೆಗಾರ ಅಂತೂ ಇಂತು ಧೈರ್ಯ ಮಾಡಿ ಎದ್ದು ನಿಂತು
ದೃಢವಾಗಿ ನುಡಿದ:
“ಬೇಡ ರಾಜ. ಮತ್ತೊಂದು ಕತ್ತರಿಸುವಾಜ್ಞೆ ಬೇಡ.
ಕತ್ತರಿಸಿದ ಪ್ರತಿ ಕಣ್ಣಿನ ಹನಿ ರಕ್ತವೂ ಕ್ಷಣಕ್ಷಣ ಸ್ಫೋಟಿಸೀತು.
ಗೋಡೆಗಳು ಕೇಳಲಿ. ಮಾತಾಡಲಿ.
ಕನ್ನಡಿಯ ಕಣ್ಣು ಪ್ರಖರವಾಗಲಿ.
ನೆನ್ನೆ-ಇಂದು-ನಾಳೆಗಳ ತುಲನೆ ನಡೆಯಲಿ.”
ಸಭೆ ನಿಶ್ಶಬ್ದ.
ಆಗಲೇ ಒಂದು ಮಗು ಕನ್ನಡಿಯಲ್ಲಿ ತನ್ನನ್ನೇ ನೋಡಿ ನಕ್ಕಿತು.
ಆ ನಗು ಸಾವಿರ ಕನ್ನಡಿಗಳಲ್ಲಿ ಪ್ರತಿಫಲಿಸಿ ರಾಜ್ಯವೆಲ್ಲ ತುಂಬಿತು.
*






0 Comments