ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೧೮
ಬೆಳಿಗ್ಗೆ ಎಂಟು ಗಂಟೆಗೆ ಈಶಾನ್ನ ಇಮೇಲ್ಗೆ ಧ್ವನಿಮುದ್ರಣದ ಕಡತ ಬಂತು. ಅದನ್ನು ಕಳುಹಿಸಿದ್ದವನು ಧಾರವಾಡದ ಹಳೆಯ ಗ್ರಂಥಪಾಲಕರ ಮೊಮ್ಮಗ. ಸಂದೇಶದಲ್ಲಿ ಹೆಚ್ಚು ವಿವರಣೆ ಇರಲಿಲ್ಲ.“ಅಜ್ಜನ ಹಳೆಯ ಪೆಟ್ಟಿಗೆಯಲ್ಲಿ ಸಿಕ್ಕ ಟೇಪ್ನ ಡಿಜಿಟಲ್ ಪ್ರತಿ ಇದು. ಮೂಲ ಟೇಪ್ ನನ್ನ ಬಳಿಯೇ ಇದೆ. ಧ್ವನಿ ಸ್ಪಷ್ಟವಾಗಿಲ್ಲ. ನೀವು ಕೇಳಿ ಏನಾದರೂ ಗುರುತಿಸಬಹುದೇ ತಿಳಿಸಿ.” ಎಂದಿತ್ತು. ಕಡತದ ಹೆಸರು ROOM_03_RECORDING.wav ಎಂದಿತ್ತು.
ಈಶಾನ್ ಅದನ್ನು ತಕ್ಷಣ ತೆರೆಯಲಿಲ್ಲ. ಹಿಂದಿನ ಅನುಭವಗಳು ಅವನಿಗೆ ಒಂದು ಪಾಠ ಕಲಿಸಿದ್ದವು. ಕುತೂಹಲದ ಕಾರಣಕ್ಕೆ ಯಾವುದೇ ಕಡತವನ್ನು ತೆರೆದುಬಿಡುವುದು ಸರಿಯಲ್ಲ. ಅವನು ಮೊದಲು ಕಡತದ ವಿವರಗಳನ್ನು ವಿನಯ್ಗೆ ಕಳುಹಿಸಿದ. ಧ್ವನಿಮುದ್ರಣದ ಮೂಲ, ದಿನಾಂಕ ಮತ್ತು ತಾಂತ್ರಿಕ ಮಾಹಿತಿಯನ್ನು ಪರಿಶೀಲಿಸಿದ ನಂತರವೇ ಅದನ್ನು ಕೇಳಬೇಕೆಂದು ತೀರ್ಮಾನಿಸಿದ.
ವಿನಯ್ ಅರ್ಧ ಗಂಟೆಯೊಳಗೆ ಉತ್ತರಿಸಿದ.“ಕಡತದಲ್ಲಿ ತಕ್ಷಣಕ್ಕೆ ಅಪಾಯಕಾರಿ ಎಂಬುದುಏನೂ ಕಾಣುತ್ತಿಲ್ಲ. ಆದರೆ ಇದರ ಮೂಲ ಟೇಪ್ನಿಂದ ಮಾಡಲಾದ ನಿಜವಾದ ಪ್ರತಿ ಎಂಬುದನ್ನು ಡಿಜಿಟಲ್ ವಿವರಗಳಿಂದ ಮಾತ್ರ ಖಚಿತಪಡಿಸಲಾಗುವುದಿಲ್ಲ. ಧ್ವನಿಮುದ್ರಣವನ್ನು ಕೇಳಬಹುದು. ಅದರಲ್ಲಿರುವ ಮಾತುಗಳನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು.”
ಈಶಾನ್ ಸಾರಾಳನ್ನು ಕರೆದ. ಇಬ್ಬರೂ ಕಂಪ್ಯೂಟರ್ನಲ್ಲಿ ಧ್ವನಿಮುದ್ರಣವನ್ನು ತೆರೆದರು.ಮೊದಲ ಹದಿನೈದು ಸೆಕೆಂಡುಗಳವರೆಗೆ ಕೇವಲ ಗರಗರ ಸದ್ದು ಕೇಳಿಸಿತು. ನಂತರ ಯಾವುದೋ ಯಂತ್ರದ ನಿರಂತರ ಶಬ್ದದ ನಡುವೆ ಒಬ್ಬ ವ್ಯಕ್ತಿಯ ಧ್ವನಿ ಕೇಳಿಸಿತು. ಮಾತುಗಳು ಸ್ಪಷ್ಟವಾಗಿರಲಿಲ್ಲ. ಮಧ್ಯೆ ಮಧ್ಯೆ ಕಾಗದಗಳನ್ನು ತಿರುಗಿಸುವ ಶಬ್ದ, ಕುರ್ಚಿ ಸರಿಸಿದ ಸದ್ದು ಮತ್ತು ದೂರದಲ್ಲಿ ಕೇಳಿಬರುವ ಬಾಗಿಲಿನ ಕಿರಿಚುವಿಕೆ ಕೇಳಿಸುತ್ತಿತ್ತು.
ನಂತರ ಒಂದು ವಾಕ್ಯ ಸ್ಪಷ್ಟವಾಗಿ ಕೇಳಿಸಿತು.“…ಮಕ್ಕಳಿಗೆ ಇದು ಪ್ರಯೋಗ ಎಂದು ಹೇಳಿಲ್ಲ.” ಎಂದಿತ್ತು. ಈಶಾನ್ ಮತ್ತು ಸಾರಾ ಪರಸ್ಪರ ನೋಡಿಕೊಂಡರು.ಧ್ವನಿ ಮುಂದುವರಿಯಿತು.“ಅವರು ಕಥೆ ಬರೆಯುತ್ತಿದ್ದಾರೆ ಎಂದುಕೊ೦ಡಿದ್ದಾರೆ. ಆದರೆ ಪ್ರತಿಯೊಂದು ಕಥೆಯೂ ಒಂದು ಪ್ರತಿಕ್ರಿಯೆಯನ್ನು ದಾಖಲಿಸುತ್ತಿದೆ. ಇದನ್ನು ನಿಲ್ಲಿಸದಿದ್ದರೆ, ಮುಂದೆ ನಾವು ಅವರ ನೆನಪುಗಳ ಬಗ್ಗೆ ಏನು ಹೇಳುತ್ತೇವೆಯೋ ಅದನ್ನೇ ಅವರು ನಂಬುವ ಅಪಾಯವಿದೆ.” ಎಂದಿತು ಧ್ವನಿ. ಆ ವ್ಯಕ್ತಿಯ ಧ್ವನಿಯಲ್ಲಿ ಆತಂಕವಿತ್ತು. ಆದರೆ ಧ್ವನಿಯ ಆಧಾರದ ಮೇಲೆ ಅವನನ್ನು ಗುರುತಿಸುವುದು ಸಾಧ್ಯವಾಗಲಿಲ್ಲ.
ಕೆಲವು ಕ್ಷಣಗಳ ನಂತರ ಮತ್ತೊಂದು ಧ್ವನಿ ಕೇಳಿಸಿತು.“ನೀವು ಇದಕ್ಕೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದೀರಿ. ಆರಂಭದಲ್ಲಿ ನೀವೂ ಒಪ್ಪಿಕೊಂಡಿದ್ದಿರಿ.”
ಮೊದಲ ವ್ಯಕ್ತಿ ಉತ್ತರಿಸಿದ.“ಆಗ ಇದು ಕೇವಲ ಬರವಣಿಗೆಯ ಮಾದರಿಗಳ ಅಧ್ಯಯನವಾಗಿತ್ತು. ಮಕ್ಕಳಿಗೆ ತಮ್ಮ ಕಲ್ಪನೆಯ ಕಥೆಗಳನ್ನು ಬರೆಯಲು ಅವಕಾಶ ಕೊಡುವುದಷ್ಟೇ ಎಂದು ಹೇಳಲಾಗಿತ್ತು. ಆದರೆ ಈಗ ಅವರ ವೈಯಕ್ತಿಕ ನೆನಪುಗಳನ್ನು ಬಳಸಲಾಗುತ್ತಿದೆ. ಅವರ ಒಪ್ಪಿಗೆ ಇಲ್ಲದೆ ಅವರ ಪ್ರತಿಕ್ರಿಯೆಗಳನ್ನು ದಾಖಲಿಸಲಾಗುತ್ತಿದೆ.”
ನಂತರ ಕೆಲವು ಕ್ಷಣ ಮೌನ.ಆಮೇಲೆ ಎರಡನೆಯ ವ್ಯಕ್ತಿಯ ಧ್ವನಿ ಮತ್ತೆ ಕೇಳಿಸಿತು.
“ಮಕ್ಕಳಿಗೆ ಸತ್ಯ ಹೇಳಿದರೆ ಅವರು ಪ್ರಯೋಗದಿಂದ ಹೊರಬರುತ್ತಾರೆ. ಆಗ ನಮಗೆ ಬೇಕಾದ ಫಲಿತಾಂಶ ಸಿಗುವುದಿಲ್ಲ.” ಧ್ವನಿಮುದ್ರಣ ಅಲ್ಲಿಗೆ ನಿಂತಿತ್ತು.
ಈಶಾನ್ ಕೆಲವು ಕ್ಷಣಗಳ ಕಾಲ ಪರದೆಯನ್ನೇ ನೋಡುತ್ತ ಕುಳಿತ. ಆ ಮಾತುಗಳು ಅವನಿಗೆ ಪರಿಚಿತವಾದ ಯಾವುದೋ ಸತ್ಯವನ್ನು ಸ್ಪರ್ಶಿಸಿದಂತೆ ಅನಿಸಿತು. ಆದರೆ ಪರಿಚಿತವೆನಿಸುವುದು ನೆನಪಿನ ಸಾಕ್ಷಿಯಲ್ಲ. ಅವನು ತನ್ನ ಮನಸ್ಸನ್ನು ನಿಯಂತ್ರಿಸಿಕೊ೦ಡ.
“ಇದನ್ನು ದಾಖಲಿಸಿದವರು ಯಾರು?” ಸಾರಾ ಕೇಳಿದಳು.
“ಗೊತ್ತಿಲ್ಲ. ಅಜ್ಜನ ಬಳಿ ಇದ್ದ ಟೇಪ್ ಇದಾಗಿದೆ ಅಷ್ಟೇ,” ಎಂದು ಈಶಾನ್ ಹೇಳಿದ. “ಇದು ಆ ಹಳೆಯ ವಾಚನಾಲಯ ಕೊಠಡಿಯಲ್ಲಿ ದಾಖಲಿಸಿದ್ದಾಗಿರಬಹುದು.” ಎಂದ.
“ಅಥವಾ ಬೇರೆಡೆ ದಾಖಲಿಸಿದ ಮಾತುಗಳನ್ನು ನಂತರ ಆ ಟೇಪ್ಗೆ ವರ್ಗಾಯಿಸಿರಬಹುದು. ದಿನಾಂಕದ ಮಾಹಿತಿ ಸಿಗುವವರೆಗೆ ನಾವು ತೀರ್ಮಾನಿಸಬಾರದು.” ಎಂದಳು ಸಾರಾ.
ಸಾರಾಳ ಮಾತು ಸರಿಯಾಗಿತ್ತು. ಈ ಧ್ವನಿಮುದ್ರಣವು ಮ್ಯೂಸ್ಗೆ ಸಂಬAಧಿಸಿದ ಹಳೆಯ ಯೋಜನೆಯಲ್ಲಿ ಮಕ್ಕಳ ಬರವಣಿಗೆ ಮತ್ತು ನೆನಪುಗಳ ಪ್ರತಿಕ್ರಿಯೆಗಳನ್ನು ದಾಖಲಿಸಲಾಗುತ್ತಿತ್ತೆಂಬ ಅನುಮಾನವನ್ನು ಬಲಪಡಿಸಿತ್ತು. ಆದರೆ ಈಶಾನ್ ಮತ್ತು ಅನಿರುದ್ಧ ನಿಜವಾಗಿಯೂ ಆ ಪ್ರಯೋಗದಲ್ಲಿ ಭಾಗವಹಿಸಿದ್ದರೇ ಎಂಬುದನ್ನು ಅದು ಸಾಬೀತುಪಡಿಸಲಿಲ್ಲ.
ವಿನಯ್ ಆ ಧ್ವನಿಮುದ್ರಣವನ್ನು ತನ್ನ ಬಳಿ ವಿಶ್ಲೇಷಿಸಲು ತೆಗೆದುಕೊಂಡ. ಮೂಲ ಟೇಪ್ನಿಂದ ಮಾಡಲಾದ ಡಿಜಿಟಲ್ ಪ್ರತಿ, ಧ್ವನಿಯ ಗುಣಮಟ್ಟ, ಸಂಪಾದನೆಯ ಗುರುತುಗಳು ಮತ್ತು ಲಭ್ಯವಿರುವ ದಿನಾಂಕದ ಮಾಹಿತಿಯನ್ನು ಪರಿಶೀಲಿಸುವುದಾಗಿ ತಿಳಿಸಿದ.
ಈಶಾನ್ ತನ್ನ ಬಾಲ್ಯದ ನೋಟ್ಬುಕ್ನ್ನು ಮತ್ತೆ ತೆರೆದ. ಅದರಲ್ಲಿ ಬರೆದಿದ್ದ “ಮೂರನೆಯವನಿಗೆ ಸತ್ಯ ತಿಳಿದಿದೆ” ಎಂಬ ವಾಕ್ಯ ಈಗ ಬೇರೆ ರೀತಿಯಲ್ಲಿ ಕಾಡುತ್ತಿತ್ತು.ಮೂರನೆಯವನು ಎಂದರೆ ಯಾರು?ಆ ಧ್ವನಿಮುದ್ರಣದಲ್ಲಿ ಮಾತನಾಡಿದ ಇಬ್ಬರಲ್ಲಿ ಒಬ್ಬನೇ?ಅಥವಾ ಅವರಿಬ್ಬರಿಗೂ ತಿಳಿದಿರದ ಇನ್ನೊಬ್ಬ ವ್ಯಕ್ತಿಯೇ?ಅವನು ಕಣ್ಣು ಮುಚ್ಚಿಕೊಂಡು ನೆನಪಿಸಿಕೊಳ್ಳಲು ಪ್ರಯತ್ನಿಸಿದ.
ಹಳೆಯ ವಾಚನಾಲಯ ಕೋಣೆ. ಕಿಟಕಿಯ ಹೊರಗೆ ಮಳೆ. ಮೇಜಿನ ಮೇಲೆ ಚದುರಿದ್ದ ಕಾಗದಗಳು. ಕಂಪ್ಯೂಟರ್ ಪರದೆಯ ನೀಲಿ ಬೆಳಕು. ಅನಿರುದ್ಧ ಅವನ ಎದುರು ಕುಳಿತಿದ್ದ. ಇಬ್ಬರೂ ಯಾವುದೋ ಕಥೆಯ ಬಗ್ಗೆ ಮಾತನಾಡುತ್ತಿದ್ದರು.ಅಷ್ಟರಲ್ಲಿ ಬಾಗಿಲು ತೆರೆದಿತ್ತು.ಒಬ್ಬ ಹುಡುಗ ಒಳಗೆ ಬಂದಿದ್ದ.ಅವನ ವಯಸ್ಸು ಈಶಾನ್ ಮತ್ತು ಅನಿರುದ್ಧರಷ್ಟೇ ಇರಬಹುದು. ಅವನ ಕೈಯಲ್ಲಿ ಒಂದು ಪುಸ್ತಕವಿತ್ತು. ಅವನು ಬಾಗಿಲಿನ ಬಳಿ ನಿಂತು ಏನೋ ಹೇಳಿದ್ದ. ಅನಿರುದ್ಧ ಎದ್ದು ಅವನತ್ತ ಹೋಗಿದ್ದ.
ಆದರೆ ಹುಡುಗನ ಮುಖ ನೆನಪಾಗಲಿಲ್ಲ.ಈಶಾನ್ ಕಣ್ಣು ತೆರೆದ. ಅವನ ಕೈಗಳು ಬೆವರಿನಿಂದ ತೇವವಾಗಿದ್ದವು.ಇದು ನಿಜವಾದ ನೆನಪೇ?ಅಥವಾ ಧ್ವನಿಮುದ್ರಣದ ಮಾತುಗಳು, ನಾಲ್ಕನೇ ಬಳಕೆದಾರನ ದಾಖಲೆ ಮತ್ತು ಬಾಲ್ಯದ ನೋಟ್ಬುಕ್ನಲ್ಲಿದ್ದ ಸಾಲುಗಳು ಸೇರಿ ಅವನ ಮನಸ್ಸಿನಲ್ಲಿ ಹೊಸ ದೃಶ್ಯವೊಂದನ್ನು ಸೃಷ್ಟಿಸಿದ್ದವೇ?ಅವನು ತಕ್ಷಣ ಆ ದೃಶ್ಯವನ್ನು ತನ್ನ ಟಿಪ್ಪಣಿಗಳಲ್ಲಿ ಬರೆದ. ಕೊನೆಯಲ್ಲಿ ಹೀಗೆ ಸೇರಿಸಿದ: “ಈ ದೃಶ್ಯ ನೆನಪಾಗಿ ಕಾಣುತ್ತದೆ. ಆದರೆ ಇದರ ನಿಖರತೆಯನ್ನು ದೃಢಪಡಿಸುವ ಸ್ವತಂತ್ರ ಸಾಕ್ಷ್ಯವಿಲ್ಲ.”
ಅವನಿಗೆ ಇದು ಮುಖ್ಯವಾಗಿತ್ತು. ತನ್ನ ಮನಸ್ಸಿನಲ್ಲಿ ಮೂಡುವ ಪ್ರತಿಯೊಂದು ದೃಶ್ಯವನ್ನೂ ಸತ್ಯವೆಂದು ಸ್ವೀಕರಿಸಿದರೆ, ಅವನು ಮತ್ತೆ ಅದೇ ಬಲೆಗೆ ಬೀಳಬಹುದಿತ್ತು.
ಮಧ್ಯಾಹ್ನ ಈಶಾನ್ನ ತಾಯಿಯಿಂದ ಕರೆ ಬಂತು.“ನಿನ್ನೆ ನೀನು ಕೇಳಿದ ವಿಷಯದ ಬಗ್ಗೆ ನಾನು ಮತ್ತೆ ಯೋಚಿಸಿದೆ,” ಎಂದಳು ಅವಳು. “ನಿನ್ನ ತಂದೆಯ ಹಳೆಯ ಕಡತಗಳನ್ನು ಹುಡುಕುವಾಗ ಒಂದು ವಿಷಯ ನೆನಪಾಯಿತು. ಅನಿರುದ್ಧನ ಕುಟುಂಬ ಊರು ಬದಲಾಯಿಸುವ ಕೆಲವು ದಿನಗಳ ಮೊದಲು, ಒಬ್ಬ ಹುಡುಗ ನಿಮ್ಮ ಮನೆಗೆ ಬಂದಿದ್ದ.” ಎಂದಳು.
ಈಶಾನ್ ತಕ್ಷಣ ಎಚ್ಚರಗೊಂಡ.“ಯಾವ ಹುಡುಗ?” ಎಂದ.
“ಅವನ ಹೆಸರು ನನಗೆ ನೆನಪಿಲ್ಲ. ಅವನು ನಿಮ್ಮ ವಯಸ್ಸಿನವನಾಗಿದ್ದ. ನಿನ್ನ ತಂದೆಯೊAದಿಗೆ ಬಹಳ ಹೊತ್ತು ಮಾತನಾಡಿದ. ನೀನು ಮನೆಯೊಳಗೆ ಇದ್ದೆ. ಆದರೆ ನಿನ್ನ ತಂದೆ ನಿನ್ನನ್ನು ಆ ಕೋಣೆಗೆ ಬರದಂತೆ ತಡೆದಿದ್ದರು.” ಎಂದಳು.
“ಅವನು ಹೇಗೆ ಕಾಣುತ್ತಿದ್ದ?” ಕೇಳಿದ.
“ಸ್ಪಷ್ಟವಾಗಿ ನೆನಪಿಲ್ಲ. ತೆಳ್ಳಗಿನ ಮೈಕಟ್ಟು. ಕೈಯಲ್ಲಿ ಒಂದು ಹಳೆಯ ಪುಸ್ತಕವಿತ್ತು. ಅವನು ಹೋದ ನಂತರ ನಿನ್ನ ತಂದೆ ತುಂಬಾ ಆತಂಕಗೊAಡಿದ್ದರು. ಆ ರಾತ್ರಿ ಅವರು ಯಾರಿಗೋ ಪತ್ರ ಬರೆದರು. ಮರುದಿನ ಅದನ್ನು ಅಂಚೆಗೆ ಹಾಕಲು ಹೊರಟಿದ್ದರು.” ಎಂದಳು ತಾಯಿ.
ಈಶಾನ್ನ ಮನಸ್ಸಿನಲ್ಲಿ ಬೆಳಿಗ್ಗೆ ನೆನಪಾದ ದೃಶ್ಯ ಮತ್ತೆ ಮೂಡಿತು. ಬಾಗಿಲಿನ ಬಳಿ ನಿಂತಿದ್ದ ಹುಡುಗ. ಕೈಯಲ್ಲಿ ಪುಸ್ತಕ. ಅನಿರುದ್ಧ ಅವನತ್ತ ಹೋಗುತ್ತಿರುವುದು.ಅವನ ತಾಯಿಯ ಮಾತು ಆ ನೆನಪಿಗೆ ಹೊಂದಿಕೆಯಾಗುತ್ತಿತ್ತು.ಆದರೆ ಹೊಂದಾಣಿಕೆಯೇ ಸಾಕ್ಷ್ಯವಲ್ಲ.
“ಅಮ್ಮ, ಆ ಹುಡುಗನ ಬಗ್ಗೆ ತಂದೆ ಏನಾದರೂ ಹೇಳಿದ್ದರಾ?” ಕೇಳಿದ.
“ಒಂದು ಬಾರಿ ಅವರು ‘ಅವನು ಮತ್ತೆ ಬಂದರೆ ನನಗೆ ತಿಳಿಸು’ ಎಂದಿದ್ದರು. ಯಾರ ಬಗ್ಗೆ ಹೇಳುತ್ತಿದ್ದಾರೆ ಎಂದು ನಾನು ಕೇಳಿದಾಗ ಉತ್ತರಿಸಲಿಲ್ಲ.” ಎಂದಳು.
“ಅವನು ಮತ್ತೆ ಬಂದಿದ್ದನಾ?” ಕೇಳಿದ ಈಶಾನ್.
“ನನಗೆ ನೆನಪಿಲ್ಲ.” ಎಂದಳು.
ಈಶಾನ್ ಕೆಲವು ಸಮಯಮೌನವಾಗಿದ್ದ. ನಂತರ ಮತ್ತೊಂದು ಪ್ರಶ್ನೆ ಕೇಳಿದ. “ಅಮ್ಮ, ಆ ದಿನಗಳ ನಂತರ ನನ್ನ ವರ್ತನೆಯಲ್ಲಿ ಏನಾದರೂ ಬದಲಾವಣೆ ಕಂಡಿದ್ದೀಯಾ?” ಕೇಳಿದ.
ಅವಳು ದೀರ್ಘ ನಿಟ್ಟುಸಿರು ಬಿಟ್ಟಳು. “ನೀನು ಕೆಲವು ವಾರಗಳವರೆಗೆ ರಾತ್ರಿ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಕೆಲವೊಮ್ಮೆ ನಿದ್ರೆಯಿಂದ ಎದ್ದು, ‘ಅವನು ಬಾಗಿಲು ತೆರೆಯಬಾರದು’ ಎಂದು ಹೇಳುತ್ತಿದ್ದೆ. ನಾನು ಯಾರ ಬಗ್ಗೆ ಎಂದು ಕೇಳಿದಾಗ ನೀನು ಅಳುತ್ತಿದ್ದೆ. ಆದರೆ ಬೆಳಿಗ್ಗೆ ಅದನ್ನು ನೆನಪಿಸಿಕೊಳ್ಳುತ್ತಿರಲಿಲ್ಲ.” ಎಂದಳು ತಾಯಿ.
ಈಶಾನ್ನ ಎದೆಯಲ್ಲಿ ಭಾರ ಹೆಚ್ಚಾಯಿತು. “ನಾನು ಯಾರ ಬಗ್ಗೆ ಹೇಳುತ್ತಿದ್ದೆ?” ಕೇಳಿದ.
“ನನಗೆ ಗೊತ್ತಿಲ್ಲ, ಮಗನೇ. ನಿನ್ನ ತಂದೆ ನಿನ್ನನ್ನು ವೈದ್ಯರ ಬಳಿಗೂ ಕರೆದುಕೊಂಡು ಹೋಗಿದ್ದರು. ಆದರೆ ಏನಾಯಿತು ಎಂದು ನನಗೆ ವಿವರಿಸಲಿಲ್ಲ. ಕೆಲವು ತಿಂಗಳುಗಳ ನಂತರ ನೀನು ಮತ್ತೆ ಸಹಜವಾಗಿದ್ದೆ.” ಎಂದಳು.
ಈ ಮಾತುಗಳನ್ನು ಕೇಳಿದ ನಂತರ ಈಶಾನ್ಗೆ ತನ್ನ ಬಾಲ್ಯದ ಘಟನೆಗಳು ಕೇವಲ ಮರೆತುಹೋದ ಕಥೆಯಲ್ಲ ಎಂಬ ಅನುಮಾನ ಮೂಡಿತು. ಆ ಅವಧಿಯಲ್ಲಿ ಅವನ ವರ್ತನೆಯಲ್ಲಿ ಬದಲಾವಣೆ ಕಂಡಿದ್ದರೆ, ಅದಕ್ಕೆ ಕಾರಣವಿರಬಹುದಿತ್ತು. ಆದರೆ ಆ ಕಾರಣವೇನು ಎಂಬುದನ್ನು ಊಹೆಯಿಂದ ನಿರ್ಧರಿಸಲು ಸಾಧ್ಯವಿರಲಿಲ್ಲ.
ಅವನು ತಾಯಿಗೆ ಧನ್ಯವಾದ ಹೇಳಿ ಕರೆ ಮುಗಿಸಿದ.ಆ ದಿನದ ಹೊಸ ಮಾಹಿತಿಯನ್ನು ತನ್ನ ಟಿಪ್ಪಣಿಗಳಲ್ಲಿ ಸೇರಿಸಿದ. ನಂತರ ಒಂದು ಪ್ರಶ್ನೆಯನ್ನು ಬರೆದ. “ನಾನು ಯಾವುದೋ ಘಟನೆಯನ್ನು ಮರೆತಿದ್ದೇನೆಯೇ, ಅಥವಾ ಆ ಘಟನೆಯ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದೇನೆಯೇ?”ಈ ಎರಡು ಸಂಗತಿಗಳು ಒಂದೇ ಆಗಿರಲಿಲ್ಲ.
ಸಂಜೆ ವಿನಯ್ ಮತ್ತೆ ಕರೆ ಮಾಡಿದ. ಧ್ವನಿಮುದ್ರಣದ ಪ್ರಾಥಮಿಕ ಪರಿಶೀಲನೆಯಲ್ಲಿ ಕೆಲವು ವಿಷಯಗಳು ತಿಳಿದಿದ್ದವು. ಕಡತವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿದಾಗ ಅದರೊಳಗೆ ಅನೇಕ ತಾಂತ್ರಿಕ ಬದಲಾವಣೆಗಳು ನಡೆದಿದ್ದರೂ, ಅವು ಸಾಮಾನ್ಯ ಆಡಿಯೊ ಪರಿವರ್ತನೆಯಿಂದಲೂ ಸಂಭವಿಸಬಹುದಾಗಿತ್ತು. ಧ್ವನಿಮುದ್ರಣವನ್ನು ಇತ್ತೀಚೆಗೆ ಸಂಪಾದಿಸಲಾಗಿದೆ ಎಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯ ಸಿಕ್ಕಿರಲಿಲ್ಲ. ಅದೇ ಸಮಯದಲ್ಲಿ, ಅದು ಮೂಲತಃ ಹನ್ನೆರಡು ವರ್ಷಗಳ ಹಿಂದಿನದ್ದೇ ಎಂಬುದನ್ನೂ ಖಚಿತಪಡಿಸಲು ಸಾಧ್ಯವಾಗಿರಲಿಲ್ಲ.
“ಹಾಗಾದರೆ ಅದು ನಿಜವಾದ ಹಳೆಯ ಟೇಪ್ ಆಗಿರಬಹುದು, ಆದರೆ ನಾವು ಅದನ್ನು ಸಾಬೀತುಪಡಿಸಲಾಗುವುದಿಲ್ಲ,” ಎಂದ ಈಶಾನ್.
“ಸರಿ. ಇನ್ನೊಂದು ವಿಷಯ. ಧ್ವನಿಯನ್ನು ಗುರುತಿಸುವ ಪ್ರಯತ್ನದಲ್ಲಿ ನಾನು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಹಳೆಯ ದಾಖಲೆಗಳಿಲ್ಲದೆ ಧ್ವನಿಯನ್ನು ಯಾರಿಗಾದರೂ ಸೇರಿಸುವುದು ಸರಿಯಾಗುವುದಿಲ್ಲ.” ಎಂದ ವಿನಯ್.
“ಆ ಮಾತುಗಳನ್ನು ಕೇಳಿದಾಗ ನನ್ನ ತಂದೆ ಅಥವಾ ರಾಘವೇಂದ್ರನ ಧ್ವನಿಯಂತೆ ಅನಿಸಿತು.” ಈಶಾನ್ ಹೇಳಿದ.
“ಅದು ನಿನ್ನ ವೈಯಕ್ತಿಕ ಅನುಭವ. ಅದನ್ನು ಟಿಪ್ಪಣಿಯಲ್ಲಿ ದಾಖಲಿಸಬಹುದು. ಆದರೆ ಗುರುತಿನ ಸಾಕ್ಷ್ಯವೆಂದು ಬಳಸಬಾರದು.”
ವಿನಯ್ ಸ್ವಲ್ಪ ಹೊತ್ತು ಮೌನವಾಗಿದ್ದ. “ನಿನ್ನ ತಾಯಿಯಿಂದ ಯಾವುದಾದರೂ ಹೊಸ ಮಾಹಿತಿ ಸಿಕ್ಕಿದೆಯೇ?” ಕೇಳಿದ.
ಈಶಾನ್ ಅವಳ ಮಾತುಗಳನ್ನು ವಿವರಿಸಿದ. ತನ್ನ ವಯಸ್ಸಿನ ಹುಡುಗನೊಬ್ಬ ತಂದೆಯನ್ನು ಭೇಟಿಯಾಗಿದ್ದ, ಕೈಯಲ್ಲಿ ಹಳೆಯ ಪುಸ್ತಕವಿತ್ತು ಎಂಬ ವಿವರವನ್ನು ಕೇಳಿ ವಿನಯ್ ಗಮನವಿಟ್ಟು ಆಲಿಸಿದ.
“ಇದು ನಾಲ್ಕನೇ ಬಳಕೆದಾರನ ಸುಳಿವಾಗಿರಬಹುದು. ಆದರೆ ಅದನ್ನು ಖಚಿತಪಡಿಸಲು ಆ ಹುಡುಗನ ಗುರುತು ಬೇಕು. ನಿನ್ನ ತಂದೆಯ ಪತ್ರಗಳಲ್ಲಿ ಆ ದಿನಾಂಕದ ಸುತ್ತಲಿನ ದಾಖಲೆಗಳಿವೆಯೇ ಎಂದು ನೋಡಬಹುದು.” ಎಂದ ವಿನಯ್.
“ಒಂದು ಪತ್ರ ಸಿಕ್ಕಿದೆ. ಅದರ ಹಿಂಭಾಗದಲ್ಲಿ ‘ನಾಲ್ಕನೇ ಬಳಕೆದಾರನಿಗೆ ಮಾಹಿತಿ ನೀಡಬಾರದು’ ಎಂದು ಬರೆಯಲಾಗಿದೆ.” ಈಶಾನ್ ಹೇಳಿದ.
“ಆ ವಾಕ್ಯ ಬಹಳ ಮುಖ್ಯ. ಆದರೆ ಪತ್ರವನ್ನು ಬರೆದವರು ಯಾರು, ಅದು ಯಾರಿಗೆ ಕಳುಹಿಸಲ್ಪಟ್ಟಿತು ಎಂಬುದನ್ನು ತಿಳಿಯಬೇಕು. ಕೈಬರಹದ ಹೋಲಿಕೆ ಸಹಾಯಕವಾಗಬಹುದು, ಆದರೆ ಅದೊಂದೇ ನಿರ್ಣಾಯಕ ಸಾಕ್ಷ್ಯವಲ್ಲ.” ಎಂದ ವಿನಯ್.
ಕರೆ ಮುಗಿದ ನಂತರ ಈಶಾನ್ ತನ್ನ ತಂದೆಯ ಪತ್ರಗಳ ಪೆಟ್ಟಿಗೆಯನ್ನು ಮತ್ತೆ ತೆಗೆದುಕೊಂಡ. ದಿನಾಂಕಗಳನ್ನು ಹೋಲಿಸಿದಾಗ, ಅವನು ಹುಡುಕುತ್ತಿದ್ದ ಅವಧಿಯ ಸುತ್ತ ಮೂರು ಪತ್ರಗಳು ಕಾಣೆಯಾಗಿದ್ದವು. ಅವುಗಳ ನಡುವೆ ಖಾಲಿ ಜಾಗವಿತ್ತು. ಅಂಚೆ ಕಚೇರಿಯ ಮುದ್ರೆಯಿರುವ ಎರಡು ಲಕೋಟೆಗಳು ಮಾತ್ರ ಉಳಿದಿದ್ದವು.
ಅವುಗಳಲ್ಲಿ ಒಂದರ ಮೇಲೆ ಕಳುಹಿಸಿದವರ ವಿಳಾಸದ ಭಾಗ ಮಾತ್ರ ಕಾಣಿಸುತ್ತಿತ್ತು.ಅ.ಒ.S.-ಆಊಂಖWAಆ. ಮತ್ತೊಂದು ಲಕೋಟೆಯಲ್ಲಿ ಯಾವುದೇ ವಿಳಾಸವಿರಲಿಲ್ಲ. ಅದರ ಮುಚ್ಚಿದ ಅಂಚಿನಲ್ಲಿ ಹಳೆಯ ಕಪ್ಪು ಮಸಿಯ ಗುರುತು ಇತ್ತು. ಲಕೋಟೆಯನ್ನು ಹಿಂದೆ ತೆರೆಯಲಾಗಿತ್ತು; ನಂತರ ಮತ್ತೆ ಅಂಟಿಸಿದAತೆ ಕಾಣುತ್ತಿತ್ತು.
ಈಶಾನ್ ಅದರೊಳಗೆ ನೋಡಿದ. ಪತ್ರವಿರಲಿಲ್ಲ. ಆದರೆ ಒಂದು ಸಣ್ಣ ಕಾಗದದ ತುಂಡು ಉಳಿದಿತ್ತು.ಅದರ ಮೇಲೆ ಒಂದೇ ಒಂದು ಸಾಲು ಬರೆಯಲಾಗಿತ್ತು. “ಸಾಕ್ಷಿಯನ್ನು ಬದಲಾಯಿಸಬಹುದು. ಘಟನೆಯನ್ನು ಅಲ್ಲ.”
ಈಶಾನ್ ಆ ಸಾಲನ್ನು ಓದಿ ಬಹಳ ಹೊತ್ತು ಕುಳಿತ.ಇದು ಅವನ ತಂದೆಯ ಕೈಬರಹವೇ ಎಂಬುದು ಅವನಿಗೆ ಖಚಿತವಾಗಿರಲಿಲ್ಲ. ಆದರೆ ಈ ವಾಕ್ಯದಲ್ಲಿ ಒಂದು ಎಚ್ಚರಿಕೆ ಇತ್ತು. ಯಾರಾದರೂ ಘಟನೆಯನ್ನು ತಪ್ಪಾಗಿ ನಿರೂಪಿಸಬಹುದು. ಸಾಕ್ಷಿಯ ನೆನಪನ್ನು ಪ್ರಭಾವಿಸಬಹುದು. ಆದರೆ ನಡೆದ ಘಟನೆ ಸ್ವತಃ ಬದಲಾಗುವುದಿಲ್ಲ.ಅವನಿಗೆ ಈ ವಿಚಾರವೇ ಮುಖ್ಯವೆನಿಸಿತು.
ಸತ್ಯವನ್ನು ತಿಳಿಯಲು ತನ್ನ ನೆನಪುಗಳನ್ನಷ್ಟೇ ಅವಲಂಬಿಸುವ ಅಗತ್ಯವಿರಲಿಲ್ಲ. ಹಳೆಯ ದಾಖಲೆಗಳು, ಸಾಕ್ಷಿಗಳು, ದಿನಾಂಕಗಳು, ಸ್ಥಳಗಳು ಮತ್ತು ಸ್ವತಂತ್ರವಾಗಿ ಪರಿಶೀಲಿಸಬಹುದಾದ ಸಂಗತಿಗಳನ್ನು ಒಂದೊ೦ದಾಗಿ ಹುಡುಕಬಹುದು.
ಆ ರಾತ್ರಿ ಈಶಾನ್ ತನ್ನ ತಾಯಿಯೊಂದಿಗೆ ಮತ್ತೆ ಮಾತನಾಡಬೇಕೆಂದು ಯೋಚಿಸಿದ. ಆದರೆ ಅದಕ್ಕೂ ಮೊದಲು ಅವನು ಧಾರವಾಡದ ಯುವಕನಿಗೆ ಸಂದೇಶ ಕಳುಹಿಸಿದ. “ನಿಮ್ಮ ಅಜ್ಜನ ದಾಖಲೆಗಳಲ್ಲಿ ಮಕ್ಕಳ ಹೆಸರುಗಳು ಅಥವಾ ಹಳೆಯ ಸಂಶೋಧನಾ ಸಿಬ್ಬಂದಿಯ ಪಟ್ಟಿಯಿದೆಯೇ? ವಿಶೇಷವಾಗಿ ಹನ್ನೆರಡು ವರ್ಷಗಳ ಹಿಂದಿನ ದಾಖಲೆಗಳು ಬೇಕು.”
ಸ್ವಲ್ಪ ಸಮಯದ ನಂತರ ಉತ್ತರ ಬಂತು. “ಒಂದು ಹಳೆಯ ಸಂದರ್ಶಕರ ಪುಸ್ತಕ ಸಿಕ್ಕಿದೆ. ಅದರಲ್ಲಿ ಹೆಸರುಗಳು ಮತ್ತು ಸಹಿಗಳಿವೆ. ಕೆಲವು ಪುಟಗಳು ಹರಿದಿವೆ. ನಾಳೆ ಅದರ ಚಿತ್ರಗಳನ್ನು ಕಳುಹಿಸುತ್ತೇನೆ.”
ಈಶಾನ್ ಧನ್ಯವಾದ ಹೇಳಿದ. ಸಂದರ್ಶಕರ ಪುಸ್ತಕವು ಆ ಹುಡುಗನ ಗುರುತನ್ನು ಪತ್ತೆಹಚ್ಚಲು ಸಹಾಯ ಮಾಡಬಹುದು. ಆದರೆ ಅದರಲ್ಲಿ ಹೆಸರು ಸಿಕ್ಕರೂ, ಅದೇ ವ್ಯಕ್ತಿ ನಾಲ್ಕನೇ ಬಳಕೆದಾರ ಎಂದು ತಕ್ಷಣ ತೀರ್ಮಾನಿಸಲಾಗುವುದಿಲ್ಲ. ಅವನು ಆ ಕಟ್ಟಡಕ್ಕೆ ಬಂದಿದ್ದನೆAಬುದಷ್ಟೇ ಸಾಬೀತಾಗಬಹುದು.
ಈಶಾನ್ ತನ್ನ ಟಿಪ್ಪಣಿಗಳಲ್ಲಿ ಈ ವ್ಯತ್ಯಾಸವನ್ನೂ ದಾಖಲಿಸಿದ.ಅವನಿಗೆ ಈಗ ಒಂದು ಹೊಸ ಅರಿವು ಮೂಡಿತ್ತು. ಇಷ್ಟು ದಿನ ಅವನು ನೆನಪುಗಳನ್ನು ಹುಡುಕುತ್ತಿದ್ದ. ಈಗ ಅವನು ಸಾಕ್ಷ್ಯಗಳನ್ನು ಹುಡುಕುತ್ತಿದ್ದ.ನೆನಪುಗಳು ಅವನಿಗೆ ದಾರಿಯನ್ನು ತೋರಿಸಬಹುದು. ಆದರೆ ಆ ದಾರಿಯಲ್ಲಿ ಏನು ನಿಜವಾಗಿಯೂ ನಡೆದಿತ್ತು ಎಂಬುದನ್ನು ಪರಿಶೀಲಿಸಬೇಕಾಗಿತ್ತು.
ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಈಶಾನ್ ಮಲಗಲು ಪ್ರಯತ್ನಿಸಿದ. ಆದರೆ ಕಣ್ಣು ಮುಚ್ಚಿದ ತಕ್ಷಣ ಬಾಲ್ಯದ ದೃಶ್ಯ ಮತ್ತೆ ಕಾಣಿಸಿಕೊಂಡಿತು. ಮಳೆಯ ಸದ್ದು. ಹಳೆಯ ಕೊಠಡಿ.ಕಂಪ್ಯೂಟರ್ ಪರದೆಯ ಮೇಲೆ ತೆರೆಯಲ್ಪಟ್ಟಿದ್ದ ಕಥೆ.ಅನಿರುದ್ಧ ಅವನ ಕೈ ಹಿಡಿದು ಏನೋ ಹೇಳುತ್ತಿದ್ದ. ಬಾಗಿಲಿನ ಬಳಿ ನಿಂತಿದ್ದ ಮೂರನೆಯ ಹುಡುಗ ತನ್ನ ಪುಸ್ತಕವನ್ನು ಮೇಜಿನ ಮೇಲೆ ಇಟ್ಟಿದ್ದ.ನಂತರ ಈಶಾನ್ನ ತಂದೆ ಒಳಗೆ ಬಂದಿದ್ದರು.ಅವರು ಕೋಪಗೊಂಡಿರಲಿಲ್ಲ. ಬದಲಿಗೆ ಭಯಗೊಂಡAತೆ ಕಾಣುತ್ತಿದ್ದರು. “ಇದನ್ನು ನಿಲ್ಲಿಸಬೇಕು,” ಎಂದು ಅವರು ಹೇಳಿದ್ದರು.ಯಾರೋ ಉತ್ತರಿಸಿದ್ದರು. “ಈಗ ನಿಲ್ಲಿಸಲು ಸಾಧ್ಯವಿಲ್ಲ.”ಆ ಮಾತು ಕೇಳಿದ ಕ್ಷಣದಲ್ಲಿ ಈಶಾನ್ ಕಣ್ಣು ತೆರೆದ.
ಅವನ ಹೃದಯ ವೇಗವಾಗಿ ಬಡಿದಾಡುತ್ತಿತ್ತು. ಅವನು ತಕ್ಷಣ ತನ್ನ ಪಕ್ಕದಲ್ಲಿದ್ದ ನೋಟ್ಬುಕ್ ತೆಗೆದುಕೊಂಡು ನೆನಪಾದ ದೃಶ್ಯವನ್ನು ಬರೆದ. ನಂತರ ದಿನಾಂಕ ಮತ್ತು ಸಮಯ ದಾಖಲಿಸಿದ. ಆದರೆ ಈ ಬಾರಿ ಅವನು ಒಂದು ಮುಖ್ಯವಾದ ಸಂಗತಿಯನ್ನು ಗಮನಿಸಿದ. ಈ ದೃಶ್ಯದಲ್ಲಿ ಅವನ ತಂದೆಯ ಮುಖ ಸ್ಪಷ್ಟವಾಗಿತ್ತು. ಮೂರನೆಯ ಹುಡುಗನ ಮುಖವೂ ಸ್ವಲ್ಪ ಕಾಣಿಸಿತು. ಆದರೆ ಹುಡುಗನನ್ನು ಗುರುತಿಸಲು ಸಾಧ್ಯವಾಗಲಿಲ್ಲ.ಇದು ನಿಜವಾದ ನೆನಪೇ? ಅಥವಾ ದಿನವಿಡೀ ನೋಡಿದ ದಾಖಲೆಗಳು, ಕೇಳಿದ ಧ್ವನಿಮುದ್ರಣ ಮತ್ತು ತಾಯಿಯ ಮಾತುಗಳು ಸೇರಿ ರೂಪಿಸಿದ ಮಾನಸಿಕ ಚಿತ್ರವೇ?ಈಶಾನ್ಗೆ ಉತ್ತರ ತಿಳಿಯಲಿಲ್ಲ.
ಅವನು ಆ ಪ್ರಶ್ನೆಯ ಕೆಳಗೆ ಹೀಗೆ ಬರೆದ. “ನೆನಪು ಸ್ಪಷ್ಟವಾಗಿರುವುದರಿಂದ ಅದು ನಿಖರವಾಗಿದೆ ಎಂದರ್ಥವಲ್ಲ.”ಅದನ್ನು ಬರೆದ ನಂತರ ಅವನು ಪುಸ್ತಕ ಮುಚ್ಚಿದ. ಮುಂಜಾನೆ ಮೂರು ಗಂಟೆಗೆ ಮೊಬೈಲ್ನಲ್ಲಿ ಸಂದೇಶ ಬಂತು. ಈ ಬಾರಿ ಸಂದೇಶವನ್ನು ಕಳುಹಿಸಿದ್ದವನು ಅದೇ ಅಪರಿಚಿತ ಸಂಖ್ಯೆ. ಈಶಾನ್ ಸಂದೇಶವನ್ನು ತೆರೆದ. “ನೀವು ಸಾಕ್ಷಿಯನ್ನು ಹುಡುಕುತ್ತಿದ್ದೀರಿ. ಆದರೆ ಸಾಕ್ಷಿಯು ತನ್ನ ನೆನಪನ್ನು ನಂಬುವುದಿಲ್ಲ. ಅವನು ಹೇಳಿದುದನ್ನು ನೀವು ನಂಬುವಿರಾ?”
ಈಶಾನ್ನ ಬೆರಳುಗಳು ಪರದೆಯ ಮೇಲೆ ನಿಂತವು. ಸಂದೇಶದ ಕೆಳಗೆ ಇನ್ನೊಂದು ಸಾಲಿತ್ತು. “ಅನಿರುದ್ಧನನ್ನು ಕೊನೆಯದಾಗಿ ನೋಡಿದ ವ್ಯಕ್ತಿ ಇನ್ನೂ ಬದುಕಿದ್ದಾನೆ.”ಈಶಾನ್ ತಕ್ಷಣ ಸಾರಾಳನ್ನು ಎಬ್ಬಿಸಿದ. ಅವಳು ಸಂದೇಶವನ್ನು ಓದಿ, ಅದನ್ನು ಉಳಿಸಿಕೊಂಡಳು.
“ಇದು ಸತ್ಯವಾಗಿರಬಹುದು. ಇಲ್ಲವೇ ನಿನ್ನನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕರೆದೊಯ್ಯುವ ಪ್ರಯತ್ನವಾಗಿರಬಹುದು,” ಎಂದಳು. “ನಾವು ಆ ವ್ಯಕ್ತಿಯನ್ನು ಹುಡುಕಬೇಕು. ಆದರೆ ಸಂದೇಶದಲ್ಲಿರುವ ಪ್ರತಿಯೊಂದು ಮಾತನ್ನೂ ನಂಬಬಾರದು.”
ಈಶಾನ್ ತಲೆಯಾಡಿಸಿದ.ಅವನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಉಳಿದಿತ್ತು.ಅನಿರುದ್ಧನನ್ನು ಕೊನೆಯದಾಗಿ ನೋಡಿದ ವ್ಯಕ್ತಿ ಯಾರು?ತನ್ನ ತಂದೆಯೇ?ರಾಘವೇ೦ದ್ರನೇ? ಅಥವಾ ಬಾಲ್ಯದ ನೆನಪಿನಲ್ಲಿ ಮುಖ ಕಾಣಿಸದ ಆ ಮೂರನೆಯ ಹುಡುಗನೇ? ಮೊಬೈಲ್ನ ಸ್ಕ್ರೀನ್ ಆಫ್ ಮಾಡಿದ ನಂತರವೂ ಆ ಪ್ರಶ್ನೆ ಅವನ ಮನಸ್ಸಿನಿಂದ ದೂರವಾಗಲಿಲ್ಲ.ತಾನುಹುಡುಕುತ್ತಿರುವಸಾಕ್ಷಿಯು ಕೇವಲ ಒಂದು ಘಟನೆಯನ್ನುನೋಡಿದವ್ಯಕ್ತಿಯಾಗಿರಲಿಲ್ಲ. ತನ್ನದೇ ನೆನಪಿನ ಮೇಲೆ ನಂಬಿಕೆ ಕಳೆದುಕೊಂಡ ವ್ಯಕ್ತಿಯಾಗಿರಬಹುದಿತ್ತು ಎಂದು ಈಗ ಅವನಿಗೆ ಅರ್ಥವಾಗಿತ್ತು. ಅವನನ್ನು ಹುಡುಕುವುದು ಒಂದು ಕೆಲಸ. ಅವನು ಹೇಳುವ ಸತ್ಯವನ್ನು ಪರಿಶೀಲಿಸುವುದು ಇನ್ನೊಂದು. ಮತ್ತು ಆ ಸತ್ಯದಲ್ಲಿ ಈಶಾನ್ನ ಪಾತ್ರವೇನು ಎಂಬುದನ್ನು ಒಪ್ಪಿಕೊಳ್ಳುವುದುಅದುಮೂರನೆಯದು.






0 Comments