ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಸ ಎನ್ನದಿರಯ್ಯ…

-ಗಂಗಾ ಚಕ್ರಸಾಲಿ

ʼಹಸಿ ಕಸ ಒಣ ಕಸ ಬೇರ್ಪಡಿಸಿʼ ಹೀಗೆ ಮುಂದುವರೆದಿದ್ದ ಹಾಡನ್ನು ಕೇಳಿದ ಮನೆಯೊಡತಿ ಅಡುಗೆ ಮನೆಯಿಂದಲೇ ʼರೀ ಸುಪ್ರಭಾತ ಕೇಳಸಾಕತ್ತೈತಲ್ರೀ… ಕಸದ ಡಬ್ಬಿಗಳನ್ನ ತಗೊಂಡೋಗ್ರೀʼ ಎಂದಾಗ ʼಹೂಂʼಗುಡುತ್ತಲೇ ನಿದ್ದೆಯ ಸವಿಯಲ್ಲಿಯೇ ತೇಲಿದನು ಪತಿ. ಮತ್ತೆ ಮನೆಯೊಡತಿ ಕೂಗಿ ಕಿರುಚಾಡಿದಾಗಲೇ ಪತಿರಾಯನಿಗೆ ಪೂರ್ತಿ ಎಚ್ಚರವಾಗಿದ್ದು ಮತ್ತು ಎದ್ದಿದ್ದು. ಇವಳ ಧ್ವನಿಗಿಂತಲೂ ಆ ಕಚಾರಿನಿಕಾ ಹಾಡೇ ಚೆಂದವಾಗಿರುತ್ತೆ ಎಂದುಕೊಂಡವನೇ ಅದೇ ಹಾಡಿನ ಬೆನ್ನತ್ತಿ ಕಸದ ಡಬ್ಬಿಗಳನ್ನು ಹಿಡಿದುಕೊಂಡು ತನ್ನ ಗಾಡಿಯನ್ನು ತಿರುಗಿಸಿದನು. ಅಷ್ಟರಲ್ಲಾಗಲೇ ಎರಡು ಮೂರು ರಸ್ತೆಗಳನ್ನು ದಾಟಿದ್ದ ಆ ಕಸದ ಗಾಡಿಯ ಹಾಡು, ಕೇಳಿ ಬರುತ್ತಿರವ ದಿಕ್ಕನ್ನು ಬೆನ್ನಟ್ಟಿ ಕಸವನ್ನು ಸುರುವಿ ಬಂದಾಗಲೇ ಅವನಿಗೂ ಸಮಾಧಾನ. ಮನೆಯಲ್ಲಿಯೂ ನೆಮ್ಮದಿ…ಅಲ್ವೇನ್ರೀ.

ಬೆಳಿಗ್ಗೆ ಬೆಳಿಗ್ಗೆಯೇ ಇದೇನಪ್ಪಾ ಕಸದ ಪುರಾಣ ಅಂತ ಗೊಂಯ್‌ ಗೊಂಯ್‌ ಅನ್ಕೊಳ್ಳೂದು ಬ್ಯಾಡ್ರೀ. ಯಾಕಂದ್ರ ಮುಂಜಾನಿ ಸುರುವಾಗೂದ.. ಕಸದಿಂದ. ಯಾರಿಗೂ ಕಾಣಿಸದ ಜಾಗದಲ್ಲಿ ಮಲಗಿಯೋ ಇಲ್ವೇ ನಿಂತೋ ವಿಶ್ರಾಂತಿ ಪಡೆಯುತ್ತಿದ್ದ ಕಸಬಾರಿಗೆ (ಪೊರಕೆ,ಬರ್ಲು ಇತ್ಯಾದಿ) ತಗೊಂಡು ಮನೀ ಒಳಗ.. ಹೊರಗ.. ಗುಡಸಲಿಲ್ಲ ಅಂದ್ರ..ಮನಿ ಮತ್ತ ಮನಿಯವರ ಮರ್ಯಾದಿ ಹೋದಂಗ ಆಗ್ತದ. ಅದಕ ಹೊಟ್ಟೀಗಿ ಕೂಳು ಕುದುಸು ಚಿಂತಿಗಿಂತ ಕಸದ ಚಿಂತಿ ಬಾಳ ಕಾಡ್ತೈತ್ರೀ.. ನಮ್ಮ ಹೆಣ್ಮಕ್ಕಳಿಗೆ. ಹೊರಗ ಕಸ ನುಗುಸೋ ನೆಪದಾಗ ಆಜೂಬಾಜೂ ಮನಿಗೊಳ ಸುದ್ದಿ ತಿಳ್ಕೊಂಡು ನಕ್ಕೋತ ಒಳಗ ಬಂದು ಅಡಿಗಿಕೆಲಸ ಮಾಡೋರು ಹಲವರಾಗಿರ್ತಾರ. ಆದ್ರ ಕೆಲವೊಮ್ಮಿ..  ʼನಿಮ್ಮನೀ ಕಸ ನಮ್ಮನೀ ಮುಂದ ಬಂದಾದʼ ಅಂತ ಒಬ್ಬಾಕಿ ಅಂದ್ರ ಇನ್ನೊಬ್ಬಾಕಿ ʼನಾನೇನು ನಿಮ್ಮನಿ ಮುಂದ ಮುದ್ದಾಂ ಕಸ ನುಗುಸಿಲ್ಲ, ಗಾಳೀಗಿ ಬಂದ್ರ ನಾನೇನು ಮಾಡೂದು ʼ ಅಂತ ಇನ್ನೊಬ್ಬಾಕಿ ಅನ್ನೂದು. ಹಿಂಗ ಎರಡೆರೆಡು ವಾಕ್ಯದೊಳಗ ಪ್ರಾರಂಭವಾಗಿದ್ದ ಮಾತು ಎರೆಡೆರಡು ಅಂಕದ ನಾಟಕ ರೂಪ ತಾಳ್ತೈತಿ. ಆ ಇಬ್ರು ಹೆಣ್ಮಕ್ಕಳ ಗಂಡ..ಮಕ್ಕಳು ಎಲ್ಲಾ ಪಾತ್ರಧಾರಿಗಳಾಗ್ತಾರ. ಹಿಂಗ ಕಸದ ನೆಪದಿಂದ ಶುರುವಾದ ಜಗಳ, ಅದ ಪೊರಕಿಯಿಂದ ಹೊಡೆದಾಡಿಕೊಳ್ಳುವ ಮಟ್ಟಿಗಿ ಹೋಗ್ತದ. ಕೊನೀಗಿ.. ಅವರು ಮಾತ ಬಿಡುವಂಗ ಮಾಡ್ತೈತಿ ಈ ಕಸ.  ʼಕಸಕ್ಕೆ ಹೋದ ಮಾನ ಕಾಸು ಕೊಟ್ಟರೂ ಬಾರದುʼ ಅಂತ ನಾಣ್ಣುಡಿಯನ್ನ ಬದಲಾಯಿಸಿದ್ರ …ಇಬ್ಬರ ಮನಿ ಕುಟುಂಬದ ಮಾನ ಈ ಕಸದಿಂದಾಗಿ ಓಣಿಯೊಳಗೆಲ್ಲಾ ಹರಾಜಾದಂಗ ಆಯ್ತು ನೋಡ್ರೀ. ಕಸದಿಂದ ವಿಷ (ರಸ ಬದಲಾಗಿ) ಬೆಳ್ಕೋತ ಹೋಯ್ತು ಅಂದಂಗಾಯ್ತು.

ನಮ್ಮನೀ ಮುಂದ ನಿಮ್ಮನೀ ಮುಂದ ಕಸ ಅಂತ ಯಾಕ್ರೀ ಜಗಳ… ನಾವ ಗಾಡಿ ತಗೊಂಡ ಬರ್ತೀವಿ ಅಂತ ನಮ್ಮ ಕಾರ್ಪೋರೇಷನ್‌ ನವರು ಪಂಚಾಯಿತಿಯವ್ರು ಬಂದ್ರ ಸುಮ್ಮನ.. ಹಾಕಬೇಕಲ್ರೀ ನಮ್ಮ ಹೆಣ್ಮಕ್ಕಳು..ಅದಕೂ ತಕರಾರು ತಗೀತಾರ. ಹಸಿ ಕಸ, ಒಣ ಕಸ ಮಾಡೂದು ಹೆಂಗ, ನಮ್ಮನೀ ಮುಂದ ಗಾಡಿ ಬಂದ್ರಷ್ಟ ಕಸ ಹಾಕ್ತೀನಿ, ಹಿಂಗ ನೂರೆಂಟು ತರ್ಲೀ ಮಾಡ್ಯಾನ ಕಸ ಹಾಕೂದು. ಆದ್ರ ಈ ಗಾಡಿ ಬರೂದ್ರಿಂದ ರಸ್ತೆ ಮ್ಯಾಲಿ ಬೀಳೋ ಕಸದ ರಾಶಿ ಮಾತ್ರ ಕಡಿಮಿ ಆಗೈತಿ ನೋಡ್ರೀ. ಆದ್ರ ಮತ್ತಷ್ಟು ಮತ್ತಷ್ಟು ಕಡಿಮಿ ಮಾಡಿ ,ʼನಿರ್ಮಲ ಗ್ರಾಮʼ,ʼಸ್ವಚ್ಛ ಗ್ರಾಮʼ,ʼಸ್ವಚ್ಛ ನಗರʼ ಹಿಂಗ ಬಿರುದು ಬಾವಲಿಗಳನ್ನು ಪಡಕೋರಿ ಅಂತ ನಮ್ಮ ಸರ್ಕಾರದವ್ರು ಕಸಕ್ಕ ಅದೆಷ್ಟು ರೊಕ್ಕಾ ಸುರ್ಯಾಕತ್ತಾರ. ಆದ್ರ ಜನರ ಮನಸ್ಸಿನೊಳಗ ಸ್ವಚ್ಛತಾ ಹೀ ಸೇವಾ ಭಾವನೆ ಬರಬೇಕಲ್ರೀ.ತಮ್ಮನಿಯಷ್ಟ ಸ್ವಚ್ಛ ಇಟ್ಕೊಂಡು ಹೊರಗೆಲ್ಲಾ ಬೇಕಾಬಿಟ್ಟಿ ಕಸ ಒಗದ್ರ ಯಾರು ಎಷ್ಟು.. ಹೇಳೂದು ಬಿಡ್ರೀ. 

ಕಸ ಕಸ ಅಂತ ಆಡಕೊಳ್ಳೋರಗಿ ನಾನು ರಸನೂ ಆಗ್ತೀನಿ ಅಂತೈತಿ ಕಸ. ಹೌದ್ರೀ ಹಸಿ ಕಸಾನೆಲ್ಲಾ ಬಳಸ್ಕೊಂಡ್ರ ವ್ಯವಸಾಯಕ್ಕ ಬೇಕಾದ ಗೊಬ್ರ ಅಷ್ಟ ಅಲ್ಲದ ಗ್ಯಾಸ ಸೈತ ತಯಾರಾಗ್ತದಂತ.ಇನ್ನ ಒಣ ಕಸ ಬಳಸ್ಕೊಂಡು ತಮ್ಮ ಸೃಜನಶೀಲತೆಯಿಂದ ಮನೀ ಮತ್ತ ಅಂಗಳವನ್ನ ಬಾಳ ಚಂದ ಮಾಡ್ತಾರ ನಮ್ಮ ಕೌಶಲ್ಯಶೀಲ ಕಲಾಕಾರರು. ಟೈರು,ಪ್ಲಾಸ್ಟಿಕ್‌ ಬಾಟಲಿ, ಮರದ ತುಂಡು, ಹಳೀ ಛಾವಿಗಳು ಇನ್ನೂ ಹಲವಾರು ತ್ಯಾಜ್ಯಗಳನ್ನ ಬಳಸಕೊಂಡು ನೋಡೋರ.. ಕಣ್ಣು ಕುಕ್ಕುವಂಗ ಮಸ್ತ ಮಸ್ತ ಅಲಂಕಾರಿಕ ವಸ್ತುಗಳನ್ನ ತಯಾರಿಸ್ತಾರ. ಆದ್ರ ಇದಕ್ಕೆಲ್ಲಾ ಬಾಳಷ್ಟು ತಾಳ್ಮೆ ಇರಬೇಕು ನೋಡ್ರಿ.  ʼಯಾವುದೇ ವಸ್ತುವನ್ನ ಕಸ ಎಂದು ತೆಗಳಬೇಡಿ..ಸಮಯ ಬಂದಾಗ ಅವುಗಳ .. ಮಹತ್ವ ಅರಿವಾಗುತ್ತದೆʼ. ಹೌದು ಬಿಡ್ರೀ ನೋಡೋರ ಕಣ್ಣು ಮನಸ್ಸು ಶುದ್ಧವಾಗಿದ್ರ ಕಸನೂ ರಸ ಆಗ್ತದ. ಹಿಂಗ ಹೇಳ್ಕೋತ ಹೋದಂಗ.. ಪದಗಳು ಕಸದ ಬುಟ್ಟಿ ಸೇರೂದು ಬ್ಯಾಡ ಏನಂತೀರಿ

‍ಲೇಖಕರು Admin

4 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading