–ರುಕ್ಮಿಣಿ ನಾಗಣ್ಣವರ
ಹೆಸರಿಡದ ಗಾಯ
ನನ್ನ ಗಾಯಗಳೆಲ್ಲ
ನಿನ್ನ ಮುಂದೆ
ತೆರೆದ ಕಿಟಕಿಗಳಾಗಿದ್ದವು
ಗಾಳಿಯೆಂದು ಒಳಬಂದ
ನಿನ್ನ ಮಾತುಗಳೇ
ಮುಳ್ಳಾಗಿ ಉಳಿದವು
ನನ್ನೊಳಗಿನ
ಕತ್ತಲೆಯ ಕೋಣೆಗಳಿಗೂ
ನಿನ್ನ ಹೆಜ್ಜೆಯ ಪರಿಚಯವಿತ್ತು
ನೀನು ಬಿಟ್ಟುಹೋದ
ಒಂದು ಶಬ್ದ
ಇನ್ನೂ ಹಿಂಬಾಲಿಸುತ್ತದೆ
ನಿನ್ನ ಕಣ್ಣ ಬಿಂಬದಲ್ಲಿ
ನನ್ನ ನೆರಳು ಹೇಗಿತ್ತೆಂದು
ಈಗ ಅಚ್ಚರಿಯಿಲ್ಲ
ನನ್ನ ಮೌನ ಓದಿದ
ಅದೇ ಕಣ್ಣುಗಳು
ನನ್ನ ನೆರಳಿಗೂ
ಅದೇ ಹೆಸರು ಕೊಟ್ಟಿದ್ದವು
ಆದರೂ ಕೇಳು
ನೀನು ಎಸೆದ ಕಲ್ಲೊಂದು
ನನ್ನೊಳಗಿನ ನಿಶ್ಚಲ ನೀರಿಗೆ ಬಿದ್ದು
ತಳ ಸೇರಿದ್ದ ಸ್ವಾಭಿಮಾನ
ನಿನ್ನದೇ ಅಲೆಯಿಂದ
ಎದ್ದು ನಿಂತಿದೆ
ಆ ಕಲ್ಲಿಗೂ
ಒಂದು ಋಣವಿದೆ
ನನ್ನೊಳಗೆ ನಾನು ಮರೆತಿದ್ದ
ನನ್ನನ್ನೇ ಮರಳಿ ಕೊಟ್ಟಿದೆ
ನನ್ನ ತಪ್ಪು ಇಷ್ಟೇ
ಒಂದು ಹೃದಯದಲ್ಲಿ
ಒಲವಿಗೆ ಜಾಗ ಕೊಟ್ಟೆ
ಮತ್ತೊಂದು ಬಾಗಿಲಲ್ಲಿ
ನಿನ್ನ ಸ್ನೇಹದ ದೀವಿಗೆ ಇಟ್ಟೆ
ಒಂದನ್ನು ಉಳಿಸಲು
ಇನ್ನೊಂದನ್ನು ಸುಡುವ
ಕಲೆ
ನನಗೆ ಬರಲಿಲ್ಲ
ಈಗ ಹೊರಡುವೆಯಾದರೆ ಹೋಗು
ನಿನ್ನ ಹೆಜ್ಜೆಗಳಿಗೆ
ಇನ್ನೆಂದೂ ನನ್ನ ನೆರಳನ್ನು ಹಾಸುವುದಿಲ್ಲ
ಹೋಗು
ಹಿಂತಿರುಗಿ ನೋಡಬೇಡ
ಒಡೆದ ಪಾತ್ರೆಯ
ಅಂಚುಗಳ ಮೇಲೆ
ಮತ್ತೆ ಬೆರಳು ಹರಿಸಿ
ರಕ್ತ ಹುಡುಕುವಷ್ಟು
ಹಳೆಯ ನೋವ ಕೆದಕಬೇಡ
ನನ್ನೊಳಗೆ
ಇನ್ನೂ ಒಂದು ಮೊಗ್ಗಿದೆ
ಅವನ ಒಲವಿನ ಮಣ್ಣಲ್ಲಿ
ಬೇರುಬಿಟ್ಟಿರುವ
ಅದು ಅರಳಲಿ
ಈ ಬಾರಿ
ನನ್ನೊಳಗೇ.






0 Comments