-ಆಶಾ ಜಗದೀಶ್
ನಕ್ಷತ್ರಿಕ
ಅವ ನಿತ್ಯ ಎಡಬಿಡದೆ ಕಾಡುವ
ಹಲ್ಲು ನೋವಿದ್ದಂತೆ
ತೂತು ಬಿದ್ದ ಜಾಗವನ್ನ ಕೆರೆದು
ಸಿಲ್ವರ್ ತುಂಬಿಸಿಕೊಂಡು ಬಂದರೂ
ಹಲ್ಲೇ ಕಿತ್ತು ಹೋದರೂ
ಬಿಡದ ದಂತಕುಳಿಯಂತೆ
ಹಾಗೆಯೇ ಅವ
ನಕ್ಷತ್ರಿಕ
ಆಲಸ್ಯ ಹೆಚ್ಚಾಗಿದೆ
ಮಾಂಸಖಂಡಗಳು ನೋಯುತ್ತಿವೆ
ಯಾವುದರಲ್ಲೂ ಆಸಕ್ತಿಇಲ್ಲ
B12 ಕಡಿಮೆಯಾಗಿದೆಯಾ ಗೊತ್ತಿಲ್ಲ
ನಾನೇ ಕಾಲೆಳೆದುಕೊಂಡು ಹೋಗಬೇಕು
ಪರೀಕ್ಷೆಗೆ
ಒಂಟಿಯಾಗಿ ಎಂದು ಬಿಡಿಸಿ ಹೇಳಬೇಕಿಲ್ಲ
ಅವ ಯಾವುದನ್ನೂ ತಲೆಗೇ
ಹಚ್ಚಿಕೊಳ್ಳುವವನಲ್ಲ
ಒಮ್ಮೊಮ್ಮೆ ಅನಿಸುವುದುಂಟು
ಸದ್ದಿಲ್ಲದೇ ಎದ್ದು ಹೋಗೇ ಬಿಟ್ಟರೂ
ಅವನಿಗೆ ತಿಳಿಯಲಿಕ್ಕಿಲ್ಲ ಅಂತ
ಆಗೆಲ್ಲ ನನ್ನ ಕಣ್ಣೀರಿಗಿಂತ ನಾನು ಅನುಭವಿಸುವ
ಅಸಹಾಯಕತೆಯ ಬಗ್ಗೆಯೇ ನನಗೆ
ಅಸಹ್ಯ ಹುಟ್ಟುತ್ತದೆ
ಯಾವ ಕಾರಣಕ್ಕೆ ನನ್ನ ಆತ್ಮವನ್ನ
ಪಣಕ್ಕಿಟ್ಟಿದ್ದೇನೆ ಗೊತ್ತಿಲ್ಲ
ಯಾವ ಉದ್ದೇಶಕ್ಕೆ ಇಷ್ಟೆಲ್ಲಾ ನನ್ನನ್ನು ನಾನೇ
ಹಿಂಸಿಸುತ್ತಿದ್ದೇನೆ ಗೊತ್ತಿಲ್ಲ
ನನಗಾದರೂ ನನ್ನನ್ನು ಹೀಗೆ ಶೋಷಿಸುವ
ಅಧಿಕಾರ ಕೊಟ್ಟದ್ದು ಯಾರು
ನಾನೀಗ ನನ್ನ ಆತ್ಮವನ್ನು
ಬಂಧನಗಳಿಂದ ಮುಕ್ತಗೊಳಿಸುತ್ತೇನೆ
ಸರಳುಗಳನ್ನು ಮುರಿದು ಹಾಕಿ
ಸ್ವತಂತ್ರವಾಗಿ ಹಾರಿಕೊಳ್ಳಲು ಬಿಟ್ಟುಬಿಡುತ್ತೇನೆ
ಮತ್ತೆ ಈ ಹಾಳು ಮನಸ್ಸನ್ನು ಉಜ್ಜುತ್ತಾ ಕೂರುತ್ತೇನೆ
ಕೊರೆದ ಹೆಸರು ಅಳಿಸಿ ಹೋಗುತ್ತದಾ
ನೋಡಬೇಕು






0 Comments