ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಲಾಟೀನು ಜನರು

-ಮಂಜುನಾಥ್ ಲತಾ

ಈ ಲಾಟೀನು_ಜನರು
ಇವರೆಲ್ಲ ಪರಸ್ಪರ ವಿದಾಯ ಹೇಳಿಕೊಳ್ಳುವಾಗ
ಪರಸ್ಪರ ಹೊಸ ಬದುಕನ್ನೂ
ಸ್ವಾಗತಿಸುತ್ತಾ ನಡೆದರು
ಬೆಂಕಿ ಮತ್ತು ಮಳೆ ಒಟ್ಟಿಗೇ ಉರಿಯುವಂತೆ, ಸುರಿಯುವಂತೆ.
ಅವರ ಕಂಕುಳ ಮಕ್ಕಳ ಕಣ್ಣುಗಳಲ್ಲಿ
ಬೆಂಕಿಯ ಬೆಳಕಿದ್ದರೆ
ಮುದುಕಿಯರ ಕಣ್ಣ ರೆಪ್ಪೆಗಳಲ್ಲಿ ಮಳೆ ಹನಿಯುತ್ತಿತ್ತು.

ಧಣಿಗಳು, ಬುದ್ಧಿ, ಸ್ವಾಮಿಯವರು,
ಸಾರು, ಸರದಾರರು
ಜನರನ್ನು ಎರಡು ಭಾಗಗಳಾಗಿ ಮಾಡುವಾಗ
ಜಾತಿ, ಧರ್ಮ, ಚರ್ಮ, ಮುಖ ವಿನ್ಯಾಸ, ವಯಸ್ಸುಗಳನ್ನು ತೂಗಿ ತೂಗಿ ಹಾಕಿದರು.
ಕಡುಗತ್ತಲನ್ನೂ ಕೂಡ ಸ್ಪಷ್ಟವಾಗಿ ಕುಯ್ಯಲು ಗೊತ್ತಿರುವ ಅವರಿಗೆ
ಜನಗಳನ್ನು ತೊಳೆ ಬಿಡಿಸಿದಂತೆ ವಿಂಗಡಿಸುವುದೇನೂ ಕಷ್ಟವಾಗಿರಲಿಕ್ಕಿಲ್ಲ!

ವಿರುದ್ಧ ದಿಕ್ಕುಗಳಿಗೆ ನಡೆದ ಜನ
ದುಃಖದ ತುಟಿಗಳನ್ನು ಸವರಿಕೊಳ್ಳುತ್ತಲೇ ಒತ್ತೊತ್ತಿಗೆ ಇದ್ದ ಗುಡಿಸಲುಗಳನ್ನು ನೆನೆದರು.
ಅವೆಲ್ಲ ಈಗ ಬಯಲು; ಸ್ವಚ್ಛಂದ ಗಾಳಿ.
ಅಲ್ಲಿ ಓಡಾಡುವ ಧಣಿ, ಫಣಿಗಳ,
ಹುಚ್ಚು ಕುದುರೆಗಳ ಕೆನೆತ.
ಅಲ್ಲಿನ ಏದುಸಿರು, ಕಟವಾಯಿಗಳ ಜೊಲ್ಲು
ಬೇಟೆ ನಾಯಿ ಪಂಜಗಳ ಕಲ್ಪಿಸಿ ಕನಲಿದರು.

ಲಾಟೀನುಗಳ ಹಿಡಿದು ಅವರು
ನಡೆಯುತ್ತಲೇ ಇದ್ದಾರೆ
ಕತ್ತಲೆಯಲ್ಲಿ ಗಾಳಿಯ ತಳ್ಳುತ್ತಾ.
ಕಾರೇಹಣ್ಣಿನ ಗಿಡಗಳ ಮೇಲೆ ಕುಳಿತ ಕಾಡುಗಿಣಿಗಳು
ಅವರ ನೋವಿನೆದೆಗೆ ಸೊಲ್ಲಾಗುತ್ತಿವೆ.
ಸೀಗೆ ಮುಳ್ಳಿನ ಮೆಳೆಗಳು
ಅವರ ಬಿರುಕು ಪಾದಗಳಿಗೆ ಬಗ್ಗಿ ಬಿಲ್ಲಾಗುತ್ತಿವೆ.

ಒಕ್ಕಲೆಬ್ಬಿಸಿದ ಮೇಲೆ ಹೊಕ್ಕಳು ಬಳ್ಳಿಗಳಿಗೆ ಇನ್ನೆಲ್ಲಿ ನ್ಯಾಯ?
ಕೂತವರ ಕುಲಾವಿಗಳ ಮೇಲೆ ಬೆಳೆಯುತ್ತಿದೆ ಅಧಿಕಾರದ ಅಮಲು ಕೂದಲು
ನೆಲೆ ಹುಡುಕುತ್ತಾ ನಡೆದವರಿಗೆ ಜಾಗವೆಲ್ಲಿದೆ ಕೂರಲು?

ಹಕ್ಕುಗಳ ಬಾಣಗಳನ್ನು ತಮ್ಮ ಹೆಗಲ ಬಿಲ್ಲುಗಳಿಂದ ಹೂಡಲು
ನಿಂತ ಜನ ನಿಂತಲ್ಲೇ ಉಸಿರುಗಟ್ಟಿದ್ದಾರೆ;
ನಂತರದ ತಮ್ಮ ಜನರ ಆಯುಧಗಳಿಂದಲೇ ಅವರು
ವೀರಗಲ್ಲುಗಳಾಗಿ ಕೆತ್ತಲ್ಪಟ್ಟಿದ್ದಾರೆ!

‍ಲೇಖಕರು Admin

25 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading