ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.
ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು
ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.
ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ
ಅಂಕಣ – 9
‘ವಿಐಪಿ’ ಸಂಸ್ಕೃತಿಯು ಭಾರತೀಯ ಪದ್ಧತಿಯ ಅವಿಭಾಜ್ಯ ಅಂಗವೇ ಆಗಿಹೋಗಿದೆ.
ಒಬ್ಬ ವ್ಯಕ್ತಿಯನ್ನು ಯಾರಾದರೂ ‘ಪ್ರಮುಖ ವ್ಯಕ್ತಿ’ ಎಂದು ಪರಿಗಣಿಸಿದರೆ ಸಾಕು, ಅವರು ‘ವಿಐಪಿ’ ಆಗಿಬಿಡುತ್ತಾರೆ. ಅದೇ ವ್ಯಕ್ತಿ ಮತ್ತೊಬ್ಬರ ಪಾಲಿಗೆ ಏನೇನೂ ಅಲ್ಲದವನಾಗಿ ‘ಸಾಮಾನ್ಯ’ನಾಗಿಯೂ ಇರಬಹುದು.
ಇಂತಹ ಪ್ರಮುಖ, ಸಾಮಾನ್ಯ ಎನ್ನುವ ವಿಚಿತ್ರ ಮತ್ತು ವಿಲಕ್ಷಣ ಬೆಳವಣಿಗೆ ನಮ್ಮ ದೇಶದ ಅದರಲ್ಲೂ ವಿಶೇಷವಾಗಿ ಹೇಳಬೇಕೆಂದರೆ ದೇವಸ್ಥಾನಗಳಲ್ಲಿ ಬಿಟ್ಟರೆ ಮತ್ತಿನ್ನೇಲ್ಲೂ ಈ ಮಟ್ಟಿಗೆ ಕಾಣಲು ಸಾಧ್ಯವಾಗುವುದಿಲ್ಲ.
ನಮ್ಮಲ್ಲಿನ ಬಹುತೇಕ ದೇವಸ್ಥಾನಗಳು ಮುಜರಾಯಿ ಇಲಾಖೆಗೆ ಸೇರಿರುತ್ತದೆ. ಆ ಪ್ರದೇಶದ ರಾಜಕೀಯ ಪ್ರತಿನಿಧಿಯು ತಮ್ಮ ಅನುಯಾಯಿಗಳನ್ನು ನಾಮನಿರ್ದೇಶಿತ ಟ್ರಸ್ಟಿಯನ್ನಾಗಿ ಮಾಡುತ್ತಾರೆ. ಕೆಲವು ಪ್ರಸಿದ್ಧ ದೇವಾಲಯಗಳು ಮತ್ತು ಅಲ್ಲಿನ ಆಡಳಿತ ಮಂಡಳಿಯು ದೇವರ ದರ್ಶನಕ್ಕೆ ಕಾಣಿಕೆಯ ಬದಲು ವ್ಯಾಪರವನ್ನೇ ಮಾಡುತ್ತಿರುತ್ತಾರೆ. ಈ ಎಲ್ಲಾ ಕಾರಣದಿಂದಾಗಿ ದೇವರ ಪ್ರಸಿದ್ಧಿಯ ಜತೆಗೆ ಈ ‘ವಿಐಪಿ’ ಕುಖ್ಯಾತಿಯೂ ತಳುಕುಹಾಕಿಕೊಂಡಿದೆ. ಇದು ಭಕ್ತರ ನಡುವಿನ ಸ್ಪಷ್ಟ ತಾರತಮ್ಯವಾಗಿಯೂ ‘ವಿಶೇಷ ದರ್ಶನ’ ಮತ್ತು ‘ವಿಐಪಿ ದರ್ಶನ’ ಎಂಬ ಸಾಲು ಹಾಗೂ ಪಾಸುಗಳ ಮೂಲಕ ಸಾಂಸ್ಥಿಕ ರೂಪ ಪಡೆದಿದೆ.
ಸಾಮಾನ್ಯ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದರೆ, ಈ ‘ವಿಶೇಷ ಪಾಸ್’ ಖರೀದಿಸಿದವರು ದೇವರು ತಮ್ಮನ್ನು ಗಮನಿಸಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಕ್ಷಣಾರ್ಧದಲ್ಲಿ ಗರ್ಭಗುಡಿಯ ಒಳಬಂದು, ಹೊರಹೋಗುತ್ತಾರೆ!
ಈ ಕ್ಷಣಕ್ಕೂ ಅಚ್ಚರಿಯಾಗಿ ಕಾಡುವುದು, ವಿಶೇಷವಾಗಿ ಅಲಂಕರಿಸಲ್ಪಟ್ಟು, ಚಿನ್ನ ಬೆಳ್ಳಿ ಆಭರಣಗಳನ್ನು ಹೊತ್ತ ದೇವರು ಇಂತಹ ವಿಐಪಿಗಳನ್ನು ಗಮನಿಸುತ್ತವೆಯೋ ಅಥವಾ ಆಶೀರ್ವದಿಸುತ್ತವೆಯೋ ನನಗೆ ಗೊತ್ತಿಲ್ಲ. ಆದರೆ, ಗಂಟೆಗಟ್ಟಲೆ ಇಂದ ತಮ್ಮ ಸರತಿಗಾಗಿ ಕಾಯುತ್ತಿರುವ ಸಾವಿರಾರು ಜನರು, ಸರತಿ ಮುರಿದವರನ್ನು ಶಪಿಸುವುದು ಮಾತ್ರ ನಮಗೆ ತಿಳಿದಿದೆ.
ಹಣ ಕೊಟ್ಟು ವಿಶೇಷ ಪಾಸ್ ತೆಗೆದುಕೊಳ್ಳುವ ವರ್ಗದ ಜತೆಯಲ್ಲೇ, ದೇವಸ್ಥಾನದಲ್ಲಿ ತಮ್ಮ ಅಧಿಕಾರ ಮತ್ತು ಸ್ಥಾನದ ದರ್ಪ ತೋರುವ ಇನ್ನೊಂದು ವರ್ಗವೂ ಇರುತ್ತದೆ.
ಇವರನ್ನು ಸೌಜನ್ಯವಾಗಿ ಅಧಿಕಾರಶಾಯಿಗಳು ಎಂದೂ; ವಿಲಕ್ಷಣವಾಗಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೆಯೂ ಇರುತ್ತಾರೆ.
ದೇವಸ್ಥಾನದ ಆಡಳಿತ ಮಂಡಳಿಗಳು ಅಂತಹವರಿಗೆ ಟಿಕೆಟ್, ಕೂಪನ್ ಅಥವಾ ಪಾಸ್ ಗಳನ್ನು ನೀಡದೆ ವಿಶೇಷ ಶಾರ್ಟ್-ಕಟ್ ದರ್ಶನಗಳ ಸೌಭಾಗ್ಯ ಒದಗಿಸಿ ಉಪಚರಿಸುತ್ತದೆ.
ಈಗ ನಾನು ಇದನ್ನೆಲ್ಲ ಯಾಕೆ ಹೇಳುತ್ತಿದ್ದೇನೆಂದು ನಿಮಗೆ ಗೊಂದಲವಾಗಬಹುದು. ಆದರೆ, ಈ ಮುಂದೆ ಹೇಳಲಿರುವ ಕತೆಗೆ ಇದೊಂದು ಸಣ್ಣ ಪೀಠಿಕೆ ಅಷ್ಟೇ.
ಒಮ್ಮೆ, ಬಾಂಬೆ ಹೈಕೋರ್ಟಿನ ಒಬ್ಬ ಕೋರ್ಟ್ ಆಫೀಸರ್ (ನ್ಯಾಯಾಲಯವೊಂದರ ಕಲಾಪ ನಿರ್ವಾಹಕ) ಮತ್ತು ಡೆಪ್ಯೂಟಿ ರಿಜಿಸ್ಟ್ರಾರ್ ತಮ್ಮ ಕುಟುಂಬದೊಂದಿಗೆ ಮುಂಬೈಯ ಪ್ರಸಿದ್ಧ ಪ್ರಭಾದೇವಿಯ ಸಿದ್ಧಿ ವಿನಾಯಕ ಗಣಪತಿಯ ದೇವಸ್ಥಸನಕ್ಕೆ ಮುಂಜಾನೆ ದರ್ಶನಕ್ಕೆ ಹೋಗಲು ನಿರ್ಧರಿಸಿದ್ದರು.
ಅಲ್ಲಿನ ಅತ್ಯಂತ ಮಹತ್ವದ ದೇವಸ್ಥಾನವಾಗಿಯೂ, ಭಾರಿ ಆದಾಯ ಸೃಷ್ಟಿಸುವ ಸ್ಥಳವೂ ಆಗಿತ್ತು. ಸಹಜವಾಗಿಯೇ ದೇವಸ್ಥಾನ ಸರ್ಕಾರದಿಂದ ನೇಮಕಗೊಂಡ ಆಡಳಿತ ಮಂಡಳಿಯ ನಿರ್ವಹಣೆಯಲ್ಲಿತ್ತು.
ಈ ಹೈಕೋರ್ಟಿನ ಅಧಿಕಾರಿಗಳು, ಆಡಳಿತ ಮಂಡಳಿಗೆ ಫೋನ್ ಮಾಡಿ ಉಚಿತವಾಗಿ ಶಾರ್ಟ್ ಕಟ್ ದರ್ಶನದ ಅವಕಾಶವನ್ನು ಗಿಟ್ಟಿಸಿಕೊಂಡರು. ಅಂದು ಸಂಕಷ್ಟ ಚತುರ್ಥಿಯ ಶುಭದಿನ. ಬೆಳಕು ಹರಿಯುವ ಮೊದಲೇ ದೇವಸ್ಥಾನವನ್ನೂ ದಾಟಿ ಗೇಟಿನ ಹೊರಗಿನವರೆಗೆ ಭಕ್ತರ ಸರತಿಯಿತ್ತು.
ಆದರೆ, ಈ ಪ್ರಭಾವಿಗಳು ಎಂದು ಹೇಳಿಕೊಳ್ಳುವವರಿಗೆ ಇದ್ಯಾವುದು ಲೆಕ್ಕಕ್ಕಿರಲಿಲ್ಲ. ದೇವಸ್ಥಾನಕ್ಕೆ ಬಂದರು, ರಾಜಗೌರವದೊಂದಿಗೆ ದೇವಸ್ಥಾನದೊಳಗೆ ಕರೆದುಕೊಂಡು ಹೋಗಿ, ದರ್ಶನ ಮುಗಿಸಿಕೊಂಡು ಬರುವಾಗ ಪ್ರಸಾದ ಮತ್ತು ಉಡುಗೊರೆಯನ್ನು ನೀಡಿ ಕಳುಹಿಸಿದರು.
ಇದೆಲ್ಲವೂ 30 ನಿಮಿಷಗಳ ಅಂತರದಲ್ಲಿ ಮುಗಿದೇ ಹೋಯಿತು. ಅಸಹಾಯಕ ಭಕ್ತರು ತಮ್ಮ ಸರತಿಗಾಗಿ ತಾಳ್ಮೆಯಿಂದ ಕಾಯುತ್ತಲೇ ಇರಬೇಕು. ಅವರ ಸರತಿ ಬಂದಾಗ ಅತ್ತಿತ್ತ ದೂಡಾಡಿ, ದೇವರನ್ನು ಒಂದೆರಡು ಕ್ಷಣ ನೋಡುವ ಹೊತ್ತಿಗೆ ಸಾಮಾನ್ಯ ಜನರನ್ನು ಮುಂದಕ್ಕೆ ತಳ್ಳಲಾಗಿರುತ್ತದೆ.
ಈ ಇಬ್ಬರು ಹೈಕೋರ್ಟ್ ‘ವಿಐಪಿ’ ಗಳು ದರ್ಶನ ಮುಗಿಸಿ ದೇವಾಲಯದಿಂದ ಹೊರಗೆ ಬರುತ್ತಿದ್ದಾಗ, ಆಕಸ್ಮಿಕವಾಗಿ ಅವರ ಕಣ್ಣಗಳು ಸರತಿ ಸಾಲಿನ ಮೇಲೆ ಹೋಯಿತು. ಅಲ್ಲಿ ನಿಂತಿದ್ದ ವೃದ್ಧರೊಬ್ಬರು ತೀರ ಹತ್ತಿರದ ಪರಿಚಯಸ್ಥ ಮುಖ ಎಂದುಕೊಂಡ ಡೆಪ್ಯೂಟಿ ರಿಜಿಸ್ಟ್ರಾರ್, ಕೋರ್ಟ್ ಆಫೀಸರ್ ಗೆ “ಆ ಎತ್ತರದ, ತೆಳ್ಳಗಿನ ಬೋಳು ತಲೆಯ ಕನ್ನಡಕ ಧರಿಸಿರುವ ವ್ಯಕ್ತಿಯನ್ನು ನೋಡಿ, ಅವರು ಪರಿಚಯಸ್ಥರಂತೆ ಕಾಣುವುದಿಲ್ಲವೇ?” ಎಂದರು.
ಕೋರ್ಟ್ ಆಫೀಸರ್ ನಗುತ್ತಾ, “ಅವರು ನೋಡಲು ನಮ್ಮ ಚೀಫ್ ಸಾಹೇಬರ ಅವಳಿ ಸಹೋದರನಂತೆ ಕಾಣುತ್ತಿದ್ದಾರೆ” ಎಂದರು. ಡೆಪ್ಯೂಟಿ ರಿಜಿಸ್ಟ್ರಾರ್ ತಲೆಯಾಡಿಸಿ, ಇರಬಹುದು ಎಂದರು.. ದೇವಸ್ಥಾನದ ಆವರಣದಿಂದ ಹೊರ ಬಂದು ಟ್ಯಾಕ್ಸಿ ಹುಡುಕುವ ಸಮಯಕ್ಕೆ ಮತ್ತೊಬ್ಬ ಪರಿಚಿತ ವ್ಯಕ್ತಿ ಸಿಕ್ಕರು.
ಅವರು ಚೀಫ್ ಜಸ್ಟೀಸ್ ಅವರ ವಾಹನ ಚಾಲಕ. ಸಾಮಾನ್ಯ ಉಡುಪಿನಲ್ಲಿದ್ದರು.
“ನೀವು ಇಲ್ಲಿ ಏನು ಮಾಡುತ್ತಿದ್ದೀರಿ?” ಎಂದು ವಿಚಾರಿಸಿದಾಗ “ನಾನು ಈ ಸರತಿ ಸಾಲು ಮುಂದೆ ಹೋಗುವುದನ್ನೇ ನೋಡುತ್ತಿದ್ದೇನೆ” ಎಂದರು.
“ಆದರೆ ನೀವು ಸಾಲಿನಲ್ಲೇ ಇಲ್ಲವಲ್ಲ, ನಿಮಗೆ ವಿಶೇಷ ದರ್ಶನದ ಅಗತ್ಯವಿದ್ದರೆ ಹೇಳಿ, ಟ್ರಸ್ಟಿ ಒಬ್ಬರಿಗೆ ಕರೆ ಮಾಡಿ ದರ್ಶನದ ಏರ್ಪಾಡು ಮಾಡುತ್ತೇನೆ. ನಾವು ಈಗಷ್ಟೇ ದರ್ಶನ ಮುಗಿಸಿ ಬಂದಿದ್ದೇವೆ” ಎಂದರು.
ಚಾಲಕ “ನಾನಲ್ಲ, ಚೀಫ್ ಸಾಹೇಬರೂ ಅವರ ಪತ್ನಿ ಬೆಳಗ್ಗೆ 4 ಗಂಟೆಯಿಂದಲೂ ಆ ಉದ್ದನೆಯ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದಾರೆ” ಎಂದರು.
ವಿಚಾರ ತಿಳಿದ ಕೂಡಲೇ ಆಶ್ವರ್ಯಚಕಿತರಾದರು. ಕೂಡಲೇ ದೇವಸ್ಥಾನದ ಒಳಗೆ ಓಡಿ ಹೋಗಿ ಟ್ರಸ್ಟಿಗಳನ್ನು ಭೇಟಿಯಾದರು.
ಹೈಕೋರ್ಟಿನ ಇಬ್ಬರೂ ಅಧಿಕಾರಿಗಳು ಏದುಸಿರು ಬಿಡುತ್ತಾ “ಬೇಗ ಬನ್ನಿ!! ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹೊರಗೆ ಸಾಮಾನ್ಯ ಸಾಲಿನಲ್ಲಿ ಕಾಯುತ್ತಿದ್ದಾರೆ.” ಎಂದಿದ್ದೇ ತಡ, ಈಗ ಟ್ರಸ್ಟಿಗೆ ಆಶ್ಚರ್ಯವಾಗುವ ಸಮಯ. “ನಮಗೆ ಶಿಷ್ಟಾಚಾರ ಇಲಾಖೆಯಿಂದ ಯಾವುದೇ ವಿವಿಐಪಿಯ ಭೇಟಿಯ ಬಗ್ಗೆ ಮಾಹಿತಿ ಇರಲಿಲ್ಲ.” ಎಂದರು.
ದೇವರಿಗೆಂದು ಇಟ್ಟಿದ್ದ ದೊಡ್ಡ ಹಾರವೊಂದನ್ನು ಹಿಡಿದುಕೊಂಡು, ಹೈಕೋರ್ಟಿನ ಅಧಿಕಾರಿಗಳು ಮತ್ತು ದೇವಸ್ಥಾನದ ಕೆಲ ಸಹಾಯಕರು ಓಡಿದರು.
ಹಿರಿ ವಯಸ್ಸಿನ, ತೆಳ್ಳಗಿನ, ಕನ್ನಡಕ ಧರಿಸಿದ್ದ ವ್ಯಕ್ತಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ತಮ್ಮ ಪತ್ನಿಯೊಂದಿಗೆ ನಿಂತದಿದ್ದ ವ್ಯಕ್ತಿಯನ್ನು ಇಡೀ ಗುಂಪು ಸುತ್ತವರಿತು.. ಮುಖ್ಯ ನ್ಯಾಯಾಧೀಶರಿಗೆ ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಅವರ ಕಾಲುಗಳಿಗೆ ನಮಸ್ಕರಿಸಲು ಮುಂದಾದರು. ಅವರಿಗೆ ಹಾರ ಹಾಕುವ ವಿಫಲ ಪ್ರಯತ್ನ ಮಾಡಿದರು. ಆದರೆ, ನ್ಯಾಯಾಧೀಶರು ಈ ಎಲ್ಲಾ ಪ್ರಸಂಗದಿಂದ ಅತ್ಯಂತ ಮುಜುಗರಕ್ಕೊಳಗಾದರು. ಹಾರವನ್ನು ನಿರಾಕರಿಸಿ, ಸರತಿಯಿಂದ ಹೊರಬರಲು ಒಪ್ಪಲಿಲ್ಲ.
“ಸರ್, ತಾವು ಮುಖ್ಯ ನ್ಯಾಯಾಧೀಶರು..” ಎಂದೆಲ್ಲಾ ಟ್ರಸ್ಟಿ ಹಾಗೂ ಅಧಿಕಾರಿಗಳು ಬೇಡಿಕೊಂಡರು.
ಮುಖ್ಯ ನ್ಯಾಯಾಧೀಶರು “ಇಲ್ಲಿ ನಾನೊಬ್ಬ ಸಾಮಾನ್ಯ ಭಕ್ತನಂತೆ ಬಂದಿದ್ದೇನೆ.” ಎಂದರು.
ಟ್ರಸ್ಟಿ “ಸರ್, ತಾವು ವಿವಿಐಪಿ. ನೀವು ನೇರವಾಗಿ ಗರ್ಭಗುಡಿಗೆ ಹೋಗಬಹುದು. ಪ್ರೊಟೊಕಾಲ್ ಪ್ರಕಾರ ಅದು ನಿಮ್ಮ ಹಕ್ಕು.” ಎಂದೆಲ್ಲ ಹೇಳುವ ಪ್ರಯತ್ನ ಮಾಡಿದರು.
ಮುಖ್ಯ ನ್ಯಾಯಾಧೀಶರು “ದಯವಿಟ್ಟು ಇಲ್ಲಿಂದ ಹೊರಡಿ. ನನ್ನ ಬಗ್ಗೆ ಚಿಂತಿಸಬೇಡಿ. ನಾನು ಒಬ್ಬ ಸಾಮಾನ್ಯ ಭಕ್ತನಂತೆಯೇ ದರ್ಶನ ಪಡೆಯುತ್ತೇನೆ. ಕಾನೂನಿನ ದೃಷ್ಟಿಯಲ್ಲೂ ಎಲ್ಲರೂ ಸಮಾನರಾಗಿರುವಂತೆಯೇ ದೇವರ ದೃಷ್ಟಿಯಲ್ಲೂ ಎಲ್ಲರೂ ಸಮಾನರೆಂದು ನಾನು ನಂಬುತ್ತೇನೆ. ಇಲ್ಲಿ ಯಾರೂ ವಿಶೇಷರಲ್ಲ.” ಎಂದರು.
ಹೈಕೋರ್ಟಿನ ಅಧಿಕಾರಿಗಳಿಗೂ, ದೇವಸ್ಥಾನದ ಆಡಳಿತ ಮಂಡಳಿಗೂ ವಿಧಿಯಿಲ್ಲದೆ ಅಲ್ಲಿಂದ ಹಿಂದಿರುಗಬೇಕಾಯಿತು.
ಸೋಜಿಗವೆನ್ನುವಂತೆ, ಸರತಿ ಸಾಲು ಇದ್ದಕ್ಕಿದ್ದಂತೆ ವೇಗ ಪಡೆದುಕೊಂಡಿತು. ಸುಮಾರು 45 ನಿಮಿಷಗಳ ಅಂತರದಲ್ಲಿ ಮುಖ್ಯ ನ್ಯಾಯಾಧೀಶರು ಮತ್ತು ಅವರ ಪತ್ನಿ ದೇವರ ದರ್ಶನ ಪಡೆದು, ಕಾಣಿಕೆ ಸಲ್ಲಿಸಿ ಹೊರಟರು.
ನಾನು ಈ ಘಟನೆಯನ್ನು ವಿವರಿಸಲು ಕಾರಣವೇನೆಂದರೆ, ಈ ಸನ್ನಿವೇಶ ತೀರ ಅಪರೂಪದ ನಿದರ್ಶನ. ನನ್ನ ಧೀರ್ಘ ವೃತ್ತಿಜೀವನದಲ್ಲಿ, ಬಾಂಬೆ ಹೈಕೋರ್ಟಿನ ಮತ್ಯಾವ ಮುಖ್ಯ ನ್ಯಾಯಾಧೀಶರ ಬಗ್ಗೆಯೂ ಇಂತಹ ಘಟನೆಯನ್ನು ನಾನು ಕೇಳಿಲ್ಲ.
ಈ ಮುಖ್ಯ ನ್ಯಾಯಾಧೀಶರು ಅತ್ಯಂತ ವಿದ್ವಾಂಸರೂ, ನೀತಿವಂತರು ಹಾಗೂ ದೇವರ ಪರಮ ಭಕ್ತರಾಗಿದ್ದರು. ಪಕ್ಕದ ರಾಜ್ಯದಿಂದ ಬಂದವರಾಗಿದ್ದರೂ ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಹೀಗೆ ಪ್ರಾಮಾಣಿಕವಾಗಿ ಕಾನೂನಿನ ಅನುಸಾರ ನ್ಯಾಯದ ಪರವಾಗಿ ನಿರಂತರವಾಗಿ ಶ್ರಮಿಸಿದರೂ, ಅವರ ವೃತ್ತಿ ಜೀವನದಲ್ಲಿ ಅವರಿಗೆ ಯಾವಾಗಲೂ ನ್ಯಾಯ ದೊರೆಯಲಿಲ್ಲ. ತಮ್ಮ ಕಿರಿಯ ಸಹೋದ್ಯೋಗಿಗಳು ತಮಗಿಂತ ಮೊದಲೇ ಸುಪ್ರೀಂ ಕೋರ್ಟಿಗೆ ಬಡ್ತಿ ಪಡೆಯುವುದನ್ನು ನೋಡಬೇಕಾಯಿತು. ಆದರೂ ಅವರು ಸ್ಥಿತಪ್ರಜ್ಞರಂತೆ ತಮ್ಮ ಕೆಲಸವನ್ನು ಮುಂದುವರೆಸಿದರು.
ಸರತಿ ಸಾಲಿನಿಂದ ಇತರರು ಜಿಗಿಯುವ ಅನುಭವವು ಸೇವೆಯಲ್ಲಿದ್ದಾಗಲೂ ಅವರನ್ನು ಬಾಧಿಸಿತ್ತು. ಆದರೂ, ಅಂತಿಮವಾಗಿ ಅವರಿಗೆ ಸಲ್ಲಬೇಕಾದ ನ್ಯಾಯ ಸಿಕ್ಕಿತು. ಅವರು ಸುಪ್ರೀಂ ಕೋರ್ಟಿಗೆ ಪದೋನ್ನತಿ ಪಡೆದರು.
ನಿವೃತ್ತಿಯ ನಂತರವೂ ಕಾನೂನು ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಕೆಲ ಪುಸ್ತಕಗಳನ್ನು ಸಂಪಾದಿಸಿದ್ದಾರೆ ಮತ್ತು ಈಗಲೂ ಅತ್ಯಂತ ಬೇಡಿಕೆಯ ಮಧ್ಯಸ್ಥಗಾರರಾಗಿದ್ದಾರೆ.
ಮುಖ್ಯ ನ್ಯಾಯಾಧೀಶರು ತಮಗೆ ಸಿಕ್ಕ ಪ್ರತಿ ಅವಕಾಶದಲ್ಲೂ ‘ಸಮಾನತೆ’ಯ ಬಗ್ಗೆ ಭಾಷಣಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ.
ಈ ಕ್ಷಣಕ್ಕೂ ಶ್ರೀಮಂತರು ಬಡವರನ್ನು ಹಿಂದಿಕ್ಕುವ ‘ಶಾರ್ಟ್-ಕಟ್ ದರ್ಶನಗಳು’ ಎಲ್ಲೆಡೆ ಹೆಚ್ಚುತ್ತಲೇ ಇದೆ.






0 Comments