-ನಿರಂಜನ ಕೆ ನಾಯಕ
ಅದು ಸರಿಸುಮಾರು ಮಧ್ಯರಾತ್ರಿ ಎರಡು ಗಂಟೆಯ ಸಮಯ. ಗಾಢ ನಿದ್ರೆಯಲ್ಲಿದ್ದ ನನಗೆ ದಿಢೀರನೆ ಮೊಬೈಲ್ ರಿಂಗ್ ಟೋನ್ ಸದ್ದು ಕೇಳಿ ಎಚ್ಚರವಾಯಿತು. ಈ ಅಕಾಲದಲ್ಲಿ ಕರೆ ಮಾಡುತ್ತಿರುವುದು ಯಾರಿರಬಹುದು ಎಂಬ ಆತಂಕದಲ್ಲೇ ಫೋನ್ ಎತ್ತಿ, “ಹಲೋ…” ಎಂದೆ.
ಮರುಕ್ಷಣವೇ ಫೋನ್‌ನ ಇನ್ನೊಂದು ತುದಿಯಿಂದ ಮಗುವಿನ ಜೋರಾದ ಬಿಕ್ಕಳಿಕೆ ಕೇಳಿಸಿತು. “ಸಾರ್… ಪ್ಲೀಸ್ ಸಾರ್… ಹೇಗಾದರೂ ಮಾಡಿ ನಮ್ಮ ಅಪ್ಪನನ್ನು ಉಳಿಸಿಕೊಡಿ ಸಾರ್!” ಎಂದು ಆತ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಸದ್ದು ಆ ನಿಶ್ಯಬ್ದ ರಾತ್ರಿಯಲ್ಲಿ ಎದೆ ನಡುಗಿಸುವಂತಿತ್ತು.
ನಾನು ತಕ್ಷಣವೇ ಅವನನ್ನು ಸಮಾಧಾನಪಡಿಸಲು ಯತ್ನಿಸುತ್ತಾ, “ಏನಾಯಿತು ಮಗನೇ? ಸಮಾಧಾನ ತಗೋ, ಯಾರು ನೀನು? ಏನಾಗಿದೆ ಹೇಳು?” ಎಂದೆ.
“ಸಾರ್, ನಾನು ನಿಮ್ಮ 8ನೇ ತರಗತಿಯ ವಿದ್ಯಾರ್ಥಿ ರಾಹುಲ್… ನಮ್ಮ ಅಪ್ಪನಿಗೆ ದಿಢೀರನೆ ಎದೆನೋವು ಬಂತು ಸಾರ್. ಆಸ್ಪತ್ರೆಗೆ ಕರೆದುಕೊಂಡು ಬಂದೆವು, ಆದರೆ ಡಾಕ್ಟರ್ ಅಪ್ಪ ತೀರಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ ಸಾರ್! ಪ್ಲೀಸ್ ಸಾರ್, ನೀವು ಆಸ್ಪತ್ರೆಗೆ ಬಂದು ಡಾಕ್ಟರ್‌ಗೆ ಹೇಳಿ… ನೀವು ಹೇಳಿದರೆ ಡಾಕ್ಟರ್ ಖಂಡಿತ ಕೇಳುತ್ತಾರೆ! ಏನಾದರೂ ಮಾಡಿ ನಮ್ಮ ಅಪ್ಪನನ್ನು ಎಬ್ಬಿಸಿ ಸಾರ್…” ಎಂದು ಆ ಮುಗ್ಧ ಬಾಲಕ ಹಟ ಹಿಡಿದು ಬೇಡಿಕೊಳ್ಳುತ್ತಿದ್ದ.
ಅವನ ಮಾತು ಕೇಳಿ ನನ್ನ ಎದೆ ಜಲ್ಲೆಂದಿತು. ದಿನವೂ ತರಗತಿಯಲ್ಲಿ ಶಿಕ್ಷಕರು ಏನೇ ಪ್ರಶ್ನೆ ಕೇಳಿದರೂ ಉತ್ತರ ನೀಡುತ್ತಾರೆ, ಯಾವುದೇ ತೊಂದರೆ ಬಂದರೂ ಬಗೆಹರಿಸುತ್ತಾರೆ ಎಂದು ನಂಬಿದ್ದ ಆ 13 ವರ್ಷದ ಮಗುವಿಗೆ, ತನ್ನ ಶಿಕ್ಷಕ ಸರ್ವಶಕ್ತ ಎಂದೇ ಭಾಸವಾಗಿತ್ತು. ವೈದ್ಯಲೋಕವೇ ಕೈಚೆಲ್ಲಿದ ಆ ಕ್ಷಣದಲ್ಲೂ, ತನ್ನ ನೆಚ್ಚಿನ ಗುರುಗಳು ಮನಸ್ಸು ಮಾಡಿದರೆ, ವೈದ್ಯರಿಗೆ ಆದೇಶಿಸಿ ಹೋದ ಪ್ರಾಣವನ್ನೇ ಮರಳಿ ತರಬಲ್ಲರು ಎಂಬ ಅಚಲ ನಂಬಿಕೆ ಆತನಲ್ಲಿತ್ತು.
ಅವನಿಗೆ ಹಣದ ನೆರವು ಬೇಕಿರಲಿಲ್ಲ; ಅವನಿಗೆ ಬೇಕಿದ್ದುದು ತನ್ನ ಶಿಕ್ಷಕನಿಂದ ಸಂಭವಿಸಬೇಕಾಗಿದ್ದ ಯಾವುದೋ ಒಂದು ಪವಾಡ! ದಿನವೂ ಪಾಠ ಹೇಳಿಕೊಡುವ ಶಿಕ್ಷಕ, ಆ ಎಂಟನೇ ತರಗತಿಯ ಮಗುವಿನ ಮುಗ್ಧ ಭರವಸೆಯ ಮುಂದೆ ಸಂಪೂರ್ಣ ಅಸಹಾಯಕನಾಗಿ ನಿಂತಿದ್ದ.
ನಾನು ಗಂಟಲು ಬಿಗಿಹಿಡಿದು, “ರಾಹುಲ್, ಧೈರ್ಯ ತಗೋ ಮಗನೇ… ನಾನು ಈಗಲೇ ಆಸ್ಪತ್ರೆಗೆ ಬರುತ್ತಿದ್ದೇನೆ, ನಿನ್ನ ಜೊತೆ ನಾನಿರುತ್ತೇನೆ” ಎಂದು ಹೇಳಿ ಫೋನ್ ಇಟ್ಟಾಗ ಕಣ್ಣಂಚಿನಲ್ಲಿ ನೀರು ಜಾರಿತ್ತು. ಸಾವಿನ ನಿಜವಾದ ಅರ್ಥವೂ ತಿಳಿಯದ ಆ ಚಿಕ್ಕ ಮಗುವಿಗೆ, ಜಗತ್ತಿನ ಅತ್ಯಂತ ಕ್ರೂರ ಸತ್ಯವನ್ನು ಹೇಗೆ ತಿಳಿಹೇಳಲಿ ಎಂಬ ಆತಂಕದಲ್ಲೇ ನಾನು ಆಸ್ಪತ್ರೆಯತ್ತ ಹೆಜ್ಜೆ ಹಾಕಿದೆ.
..






0 Comments