ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿ ಮನೆಯ ಸಾವಿನ ಸುದ್ದಿ

-ದೀಕ್ಷಿತ್ ನಾಯರ್

ರಮಣ ಪೋಶೆಟ್ಟಿಯ ಓಣಿಯಲ್ಲಿ ಮುದಿ ಕವಿಯೊಬ್ಬ ಸತ್ತಿದ್ದಾನೆಂಬ ಸುದ್ದಿ ;
‘ಏನು ಪುರಾವೆ’? ಎನ್ನುತ್ತಿದ್ದಾರೆ ಜನ
ಕವಿ ಮನೆಯ ಅಂಗಳದ ಪಾರಿಜಾತ ಒಣಗಿದೆ
ಕೃಷ್ಣ ತುಳಸಿಯ ಸೊಂಟ ಮುರಿದಿದೆ
ಹೊಳೆ ಪೂರಾ ಬತ್ತಿ ಹೋಗಿದೆ
ಊರಿನಲ್ಲಿ ಗಲಭೆ ಎದ್ದಿದೆ
ಕೊಲೆ ಸುಲಿಗೆಯ ಮಾತಾಡುತ್ತಿದ್ದಾರೆ
ಬೋರೇಗೌಡನ ಕೊಟ್ಟಿಗೆಯ ದನಗಳು ಗೂಟ ಕಿತ್ತುಕೊಂಡು ಪೇರಿಯೆದ್ದಿವೆ ;
ಅರೆ.. ಒಬ್ಬ ಕವಿಯ ಸಾವಿನಿಂದ ಇಷ್ಟೆಲ್ಲಾ?
ಅವನ ಕವಿತೆಯೂ ಸಾವನ್ನಪ್ಪಿರಬಹುದ?

ಅವನ್ಯಾರೋ ಹಾಳು ಮುದಿ ಕವಿ ಸತ್ತರೇನು ಎನ್ನುತ್ತಿದ್ದಾರೆ…
ಊರಿನ ಯಾವ ಮನೆಯ ಹಿತ್ತಲಿನಲ್ಲೂ ಇನ್ನು ಗರಿಕೆ ಚಿಗುರುವುದಿಲ್ಲ ;
ಹಳ್ಳಿಯ ಚಂದಿರನ ನಗು ಹರಾಜಿಗಿದೆ
ಹರಿಸೇವೆಗೆ ಸೂತಕ
ಹಸುವಿನ ಕೆಚ್ಚಲಿನ ಹಾಲು ಸ್ವರ ಬಿಡುತ್ತಿಲ್ಲ
ಹಕ್ಕಿಗಳು ಗೂಡು ಕಟ್ಟುತ್ತಿಲ್ಲ
ಕವಿ ಆತ್ಮ ತಣ್ಣಗಾಗುವವರೆಗೂ ಸ್ವಾತಿ ಮಳೆಯ ಹನಿ ಬೀಳುವುದಿಲ್ಲ!
ಕವಿ ಅರ್ಧಕ್ಕೆ ಬರೆದು ನಿಲ್ಲಿಸಿದ ಕವಿತೆಗಳಿಗೆ ಅದ್ಯಾವ ಪರಿಯ ಕೆಟ್ಟ ಹಸಿವವೋ?

ಕವಿ ಸತ್ತ ಸಂಜೆಯೇ ಅವನ ಮನೆಯಲ್ಲಿ ಬಿಕ್ಕಳಿಕೆಯ ಸದ್ದು
ಕವಿ ಹೆಂಡತಿಯ ದುಗುಡವೇ?
ನಲವತ್ತು ದಾಟಿದ ಮಕ್ಕಳ ಒಳಗುದಿಯೇ?
ಮನೆಮಾರು ಆಸ್ತಿಪಾಸ್ತಿ ಮಾಡದೆ ಸತ್ತ ಕವಿಗೆ ಹಿಡಿ ಶಾಪವೇ?
ಇಲ್ಲ ಅಳುತ್ತಿರುವುದು ಅವನದ್ದೇ ಖಾಸಾ ಕವಿತೆಗಳು ;

ಅವನ ಕವಿತೆಯ ಕಾಗದಗಳು ಹಂಡೆ ಒಲೆಯ ಉರಿಯಲ್ಲಿ ಭಸ್ಮ!ಹೆಂಡತಿ ಮಕ್ಕಳಿಗೆ ಸುಡು ಸುಡು ನೀರು ಮೈ ಮತ್ತು ಎದೆ ಭಾರ ಇಳಿಸಲು;ಮಣ್ಣು ಹೊದ್ದು ಮಲಗಿರುವ ಕವಿಯ ಎದೆಯಲ್ಲಿಯೂ ಸುಡು ಸುಡು ಕೆಂಡ ಪೂರ್ಣ ಕವಿತೆ ಬರೆಯದೆ ಹಾಗೆ ಎದ್ದು ಹೊರ ನಡೆದದ್ದಕ್ಕಾಗಿ!

‍ಲೇಖಕರು Admin

25 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading