ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮುದಾಯದ ಕೆಂಪು ತಾರೆ ಇನ್ನು ನೆನಪು

-ಗುಂಡಣ್ಣ ಚಿಕ್ಕಮಗಳೂರು

ಬೆಂಗಳೂರು ಸಮುದಾಯದ ಹಿರಿಯ ಒಡನಾಡಿ, ಕಲಾವಿದ ಸನತ್ ನಿನ್ನೆ ಸಂಜೆ ಸುಮಾರು 4.40 ರ ಸಮಯಕ್ಕೆ ನಮ್ಮನೆಲ್ಲಾ ಅಗಲಿದ….‌

ಸನತ್ ಗೆ 73 ವರುಷ….

ಸನತ್ , ತಾಯಿ ( ತಮಿಳು) ನಾಟಕದ ಸಮಯದಲ್ಲಿ ಬೆಂಗಳೂರು ಸಮುದಾಯಕ್ಕೆ ಪರಿಚಯವಾಗಿ, ನಂತರದಲ್ಲಿ ಕತ್ತಲೆ ದಾರಿದೂರ, ಕುರಿ, ಗೆಲಿಲಿಯೋ, ವಾಸಂತಿ ಮತ್ತು ಹುತ್ತವ ಬಡಿದರೆ ಮರು ಪ್ರದರ್ಶನಗಳಲ್ಲಿ ರಂಗದ ಮೇಲೆ ಅಭಿನಯಿಸಿದ ನಟ….

ಪ್ರಥಮ ಜಾತಾದಲ್ಲಿ ಬೀದರ್ ಕಡೆಯ ತಂಡದಲ್ಲಿ ಭಾಗವಹಿಸಿದ ಸಂಗಾತಿ. 1977 ರಲ್ಲಿ ಬೆಂಗಳೂರಿನ ಎನ್ ಎಮ್ ಎಚ್ ಹೋಟೆಲಿನಲ್ಲಿ ನಡೆದ
ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯ ಸ್ಥಾಪನಾ ಸಭೆಯಲಿ ಭಾಗವಹಿಸಿ, ಸಭೆಯ ನಡಾವಳಿಗಳನ್ನು ತನ್ನ ಮುದ್ದಾದ ಅಕ್ಷರಗಳಲ್ಲಿ ಬರೆದವನು…‌ ರಾಜ್ಯ ಸಮಿತಿ ಸದಸ್ಯನಾದವನು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯೋ ಎಕಾನಾಮಿಕ್ ಸಂಸ್ಥೆಯಲ್ಲಿ ಖಾಯಂ ಆಗುವ ತನಕ ಅಲ್ಲಿ ಗುತ್ತಿಗೆ ನೌಕರ, ಐ ಐ ಎಮ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ..‌‌‌… ಗಾಂಧೀ ಬಝಾರ್ ನ ಸಿಜಿಕೆ ರೂಮ್ ನಲ್ಲಿ ನಂತರ ಚಾಮರಾಜಪೇಟೆ ಸಮುದಾಯ ಕಛೇರಿಯಲ್ಲಿ ವಾಸ…. ರಘುಕುಮಾರ್, ಲೋಹಿ, ಗಂಗಾಧರಸ್ವಾಮಿ ಖಾಯಂ ವಾಸಿಗಳು…

ನಾಗರಭಾವಿಯಲ್ಲಿನ ಐಸೆಕ್ ಕ್ವಾರ್ಟರ್ಸ್ ಅನ್ನು ಆಗಷ್ಟೇ ಮದುವೆಯಾಗಿದ್ದ ಗಂಗಾಧರಸ್ವಾಮಿ- ಶೀಲಾಗೆ ಬಿಟ್ಟು, ಇವನು ಸಮುದಾಯ ಮನೆಯಲ್ಲೇ ಉಳಿದ..‌

ಸನತ್ ನ ಐಸೆಕ್ ನ ಮನೆಯ ಬಳಕೆ ನಾನಾ ರೀತಿಯಲ್ಲಿ… ಮೊದಲ ಬಾರಿಗೆ ಎಮ್ ಕೆ ಭಟ್, ಪಾಣಿ, ಹಳಕಟ್ಟಿ, ವೆಂಕಟನಾಥನ್, ಪ್ರಸನ್ನ,
ಸಿ ಆರ್ ಭಟ್ ಇವರುಗಳು ನಡೆಸಿದ ಎರಡು ಹಗಲು- ಮೂರು ರಾತ್ರಿಗಳ ” Brain storming study class” ನಡೆದದ್ದು ಅಲ್ಲೇ.‌‌… ಅದರ ನಂತರ ಸಾಮಾಜಿಕವಾಗಿ ನಮ್ಮ ಬದುಕು ಬದಲಾಯಿತು….

ರಾತ್ರಿಯಲ್ಲಾ ಸಮುದಾಯ ನಾಟಕದ ಪೋಸ್ಟರ್‌ಗಳನ್ನು ಊರ ತುಂಬಾ ಅಂಟಿಸುವ ಕಾರ್ಯ…‌ ಸಮುದಾಯ ರಾಜ್ಯ ಮಟ್ಟದ ಜಾತಾದ ಪ್ರಚಾರಕ್ಕೆ ಗೋಡೆ ಬರಹಗಳ ಕಾರ್ಯ…. ಸಿಐಟಿಯು ನೇತೃತ್ವದಲ್ಲಿ ನ ಮೈಕೋ ನೌಕರರ ಹೋರಾಟದ, 1981 ರ ರೈತ ಜಾತಾದ, ಬಂಡಾಯ ಸಂಘಟನೆಯ ಸ್ಥಾಪನಾ ಅಧಿವೇಶನದ, ಜನವಾದಿ ಮಹಿಳಾ ಸಂಘಟನೆಗಳ ಗೋಡೆ ಬರಹದಲ್ಲಿ ಪ್ರಸನ್ನ, ಶಿವರಾಂ,ಸನತ್…ಇವರುಗಳದ್ದೇ ವಿನ್ಯಾಸ ಮತ್ತು ಅಕ್ಷರಗಳು…. ಇವರುಗಳ ಗೋಡೆ ಮೇಲಿನ ಕಲಾವಿನ್ಯಾಸಕ್ಕೆ ರಘು ಕುಮಾರ್, ರಘುನಂದನ, ಟಿ ವಿ ಎಮ್ , ಸ್ವಾಮಿ, ನಾನು, ಎಮ್ ಜಿ, ನಂತರದಲ್ಲಿ ಸುರೇಂದ್ರ….ನಾವುಗಳೆಲ್ಲಾ ಬಣ್ಣದ ಡಬ್ಬ ಹೊರುವ , ಬ್ರಷ್ ‌ಗಳನ್ನು ಸ್ವಛ ಗೊಳಿಸುವ ಸಹಾಯಕರು….. ನಂತರದಲ್ಲಿ ನಮ್ಮ ಜೊತೆಗೆ ಲೋಹಿ ಮತ್ತು ನಿಜಗುಣ ಕೂಡಾ ಈ ಕೆಲಸಗಳಿಗೆ ಜೊತೆಯಾದರು….

ಬೆಂಗಳೂರು ಸಮುದಾಯದ ನಾಟಕ ಪ್ರದರ್ಶನದ ಒಂದೆರಡು ದಿನ‌ ಹಿಂದಕ್ಕೆ, ಜಯನಗರ ನಾಲ್ಕನೇ ಬ್ಲ್ಯಾಕ್ ನಿಂದ ಪ್ರಾರಂಭಿಸಿ, ಮಲ್ಲೇಶ್ವರ 18. ನೇ ಕ್ರಾಸ್ ಬಸ್ ಸ್ಟಾಂಡ್ ವರೆಗೆ ಪೋಸ್ಟರ್ ಅಂಟಿಸಿದರೆ…ನಾಟಕದ ಪ್ರಚಾರ ಮುಗಿಯಿತು ಅಂತ ಲೆಕ್ಕಾ….

ಬದುಕು ಮತ್ತು ಸಮಯ ಉರುಳಿದ್ದೇ ಗೊತ್ತಾಗಲಿಲ್ಲ…. ಯಾರಿಗೆ ತಿಂಗಳ ಸಂಬಳ ಮೊದಲು ಬರುತ್ತದೆಯೋ, ಅಂದು ಅವರು ರಾತ್ರಿ ಊಟ ಹಾಕಿಸಬೇಕು…‌

ಇತ್ತೀಚಿನ ವರುಷಗಳಲ್ಲಿ ಸನತ್ ಮತ್ತೆ ಸಮುದಾಯದಲ್ಲಿ ಸಕ್ರಿಯನಾಗಿದ್ದ….ಬೆಂಗಳೂರು ಸಮುದಾಯದ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದ…. ಕಷ್ಟದ ಸಮಯದಲ್ಲಿ ಸಲಹೆಗಳನ್ನು ನೀಡುತಿದ್ದ ಸನತ್, ಪ್ರತಿ ತಿಂಗಳೂ ಆರ್ಥಿಕವಾಗಿ ಸಹ ದೇಣಿಗೆ ನೀಡಿ, ಸಮುದಾಯ ಮನೆಯ ಬಾಡಿಗೆಗೆ ಆಸರೆಯಾಗಿದ್ದ…. ಜೊತೆಗೆ ” ರಾಗಿಕಣ” ಸಂಸ್ಥೆಯ ಜೊತೆಗೆ ಸಮುದಾಯಕ್ಕಿಂತಲೂ ಹೆಚ್ಚಿನ. ಮಟ್ಟಕ್ಕೆ ಗುರುತಿಸಿಕೊಂಡಿದ್ದ…. ಪ್ರತಿ ಭಾನುವಾರ ನಡೆಯುವ ಸಂತೆಯ ಪೂರ್ಣ ಜವಾಬ್ದಾರಿಯನ್ನು ಶ್ಯಾಮಲಾ – ಸನತ್ ಜೋಡಿ ಮಾಡುತಿತ್ತು…. ಸಂತೆಯ ಪ್ರಚಾರದ ಸಂಪೂರ್ಣ ಜವಾಬ್ದಾರಿ ಸನತ್‌ನದ್ದೇ….

ಸನತ್ ಅಭಿನಯಿಸಿದ ಕತ್ತಲೆ ದಾರಿ ದೂರದ ರಾಜಣ್ಣನ ಪಾತ್ರ…. ಕುರಿ ನಾಟಕದ “ನಟಿ” ಪಾತ್ರ… ನಾವು ಮರೆಯಲು ಸಾಧ್ಯವೇ?
ಈ ” ನಟಿ” ಪಾತ್ರವನ್ನು ಮಾಲತಿ ಶರ್ಮ, ಶಾರದ ರಾಮಸ್ವಾಮಿ ಮುಂತಾದವರು ಮಾಡಿದ ಪಾತ್ರಗಳು…. ” ನಟ” ನಾಗಿ ಎಮ್ ಜಿ…..

ಸಮುದಾಯ ಸಂಘಟನೆಯ ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯಲ್ಲಿ ಗುರುತಿಸಿಕೊಂಡಿದ್ದ, ಸಕ್ರಿಯ ಪೋಷಕರಾಗಿದ್ದ ಸಂಗಾತಿ ಸನತ್ , ತನ್ನ ಅಗಲುವಿಕೆಯಲ್ಲೂ ಸಾಮಾಜಿಕ ಕಳಕಳಿಯನ್ನು ಮೆರೆದ …. ತನ್ನ ದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಿಸಿದ….

ಸಮುದಾಯ ಸಂಘಟನೆಯಧೀರ್ಘ ಕಾಲದ ಒಡನಾಡಿ, ಸನತ್ ಕುಮಾರ್ ಗೆ ಭಾವಪೂರ್ಣ ನಮನಗಳು… ಕೆಂಪು ವಂದನೆಗಳು..‌

‍ಲೇಖಕರು Admin

25 June, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading