– ಸಿ ಬಿ ಐನಳ್ಳಿ
ಕವಿತೆಯ ನಾಲಗೆಗೆ ಸಿಹಿಜೇನು
ತುಟಿಗೆ ಸುಗಂಧದ್ರವ್ಯ ಬಳಿಯಲಾಗಿದೆ
ಕಣ್ಣಿಗೆ ತಂಪುಕನ್ನಡಕ
ಕಿವಿಗೆ ಕಲಾತ್ಮಕತೆಯ ಸೇಫ್ಟಿವಾಲ್ವ್
ಅಳವಡಿಸಲಾಗಿದೆ
ಸುಪ್ತಮನಕೆ ಬ್ರಹ್ಮ ಪರಬ್ರಹ್ಮಗಳ
ಅಣು ಹೊಕ್ಕಿವೆ
ಎದೆಭಾರ ಕೆಡವಲು ಹೊರಟರೆ
ಒಂದೋ ಶಾಹಿ ಹೆಪ್ಪುಗಟ್ಟುತ್ತದೆ
ಇಲ್ಲಾ ಬೇಕುಬೇಕಾದಂತೆ
ತಾನೇ ಬರೆದುಕೊಳ್ಳುತ್ತದೆ
ಪ್ರಾಮಾಣಿಕತೆ ಅತಿಭಾವುಕತನವಂತೆ
ಕಲಾತ್ಮಕತೆಯ ಚೌಕಟ್ಟುಗಳು
ಕಣ್ಣು ಕಿಸಿಯುತ್ತವೆ
ಹಸಿವು ಅವಮಾನಗಳ ದೊರೆಗಳಾದ ನಾವು
ಅನ್ಯಾಯದೊಂದಿಗಿನ ರಣಕಾಳಗದಲ್ಲಿ
ಹುತಾತ್ಮರಾಗಿದ್ದೇವೆ
ವೀರ ಮರಣವೂ ಒಂದು ವರ –
ಎಂದಾಗ ಬೆಂದವರ ಕಾವ್ಯ
ಅರಳುತ್ತದೆಯಂತೆ
ಕವಿಯಾಗುವುದೆಂದರೆ
ಸತ್ಯದ ಅಲಗುಗಳನ್ನು ಸವರಿ
ಸುಂದರಗೊಳಿಸುವುದು
ನೋವನ್ನೂ ತಾಳ ತಪ್ಪದಂತೆ ಹಾಡುವುದು
ಕ್ಷಮಿಸಿ ಕವಿಯಾಗಲಾರೆ ನಾನು
ಖಾಲಿ ತಟ್ಟೆಗಳಿಗೆ ತುತ್ತು ಅನ್ನ ಜೋಡಿಸುವುದಿದೆ
ಜಗದ ಗಾಯಗಳಿಗೆ ಮುಲಾಮು ಸವರುವುದಿದೆ






0 Comments